ಬಡವರ 'ಬಾಪು'

ಸಣ್ಣ ಸಾಲದ ಪರಿಕಲ್ಪನೆಯನ್ನು ಕೊಟ್ಟ, ನೊಬೆಲ್ ಪ್ರಶಸ್ತಿ ವಿಜೇತ, ಬಾಂಗ್ಲಾದೇಶದ ಮಹಮದ್ ಯೂನಸ್ ಅವರ ಆತ್ಮಚರಿತ್ರೆ ಕನ್ನಡಕ್ಕೆ ಬಂದಿದೆ.
ಏನ್ ಜಗದೀಶ ಕೊಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಅಭಿರುಚಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಮಹಮದ್ ಯೂನಸ್ 
ಕನ್ನಡಕ್ಕೆ: ಎನ್ ಜಗದೀಶ್ ಕೊಪ್ಪ 
ನನಗೆ ಬ್ಯಾಂಕಿನ ಸಾಲದ ನಿಯಾಮಾವಳಿಗಳನ್ನು ಪರಾಮರ್ಶಿಸಿದಾಗ ಒಂದು ಸಂಗತಿ ಮನದಟ್ಟಾಯಿತು. ಬ್ಯಾಂಕುಗಳ ಸಾಲದ ತತ್ವ ಏನೆಂದರೆ, “ ನಿಮ್ಮ ಬಳಿ ಹೆಚ್ಚು ಸಂಪತ್ತು ಇದ್ದರೆ ಹೆಚ್ಚಿನ ಸಾಲಪಡೆಯುತ್ತೀರಿ, ಕಡಿಮೆ ಇದ್ದರೆ ಕಡಿಮೆ ಪಡೆಯುತ್ತೀರಿ” ಎಂಬಂತಿತ್ತು. ಸಾಲದ ಭದ್ರತೆಗಾಗಿ ಆಚರಣೆಗೆ ತಂದ ಜಾಮೀನು ಪದ್ಧತಿ ಒಂದು ರೀತಿಯಲ್ಲಿ ಮನುಷ್ಯರ ವಿಶ್ವಾಸ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದ್ದರೂ ಸಹ ಅದು ತಲೆಮಾರಿನಿಂದ ತಲೆಮಾರಿಗೆ ಈ ಪದ್ಧತಿಯು ಯಾವ ಪ್ರಶ್ನೆಯೂ ಇಲ್ಲದೆ ದಾಟಿ ಬಂದಿತ್ತು.
ಬ್ಯಾಂಕಿಂಗ್ ವ್ಯವಸ್ಥೆಕೂಡ ಬಡವರು ಸಾಲಕ್ಕೆ ಅರ್ಹರಲ್ಲ ಎಂಬ ಅಲಿಖಿತ ನಿಯಮವೊಂದನ್ನು ತನ್ನ ಕಾರ್ಯವೈಖರಿಯಲ್ಲಿ ಅಳವಡಿಸಿಕೊಂಡಿತ್ತು. ಇದರರ್ಥ “ನಾವು ನಿಮ್ಮನ್ನು ಮುಟ್ಟುವುದಿಲ್ಲ” ಎಂಬುದಾಗಿತ್ತು. ಬ್ಯಾಂಕಿನವರು ಏಕೆ ಸಾಲಕ್ಕೆ ಭದ್ರತೆಯನ್ನು ಬಯಸುತ್ತಾರೆ? ಜನತೆಯ ಪ್ರಾಮಾಣಿಕತೆಯ ಕುರಿತು ಅವರಿಗೆ ಅಪನಂಬಿಕೆಯಾ? ಏಕೆ ಇಂತಹ ಅನಿವಾರ್ಯತೆ? ಇಂತಹ ವರ್ಗಬೇಧ ನೀತಿ? ಇಂತಹ ನಿರಾಶಾದಾಯಕ ಬ್ಯಾಂಕಿಂಗ್ ವಾತಾವರಣ ನನಗೆ ಮತ್ತು ನನ್ನ ತಂಡಕ್ಕೆ ಗ್ರಾಮೀಣ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು. ಯಾವುದೇ ಭದ್ರತೆಯಿಲ್ಲದೆ ಮನುಷ್ಯರ ವೃತ್ತಿಪರತೆ ಮತ್ತು ಅವರ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿಟ್ಟು ಸಾಲವನ್ನು ನೀಡಬೇಕೆಂಬುದು ನನ್ನ ಧ್ಯೇಯವಾಗಿತ್ತು. ಆರಂಭದಲ್ಲಿ ಇದು ಸರಿ ಅಥವಾ ತಪ್ಪು ಎಂಬುದರ ಕುರಿತು ನಾನು ಚಿಂತಿಸಲಿಲ್ಲ. ಈ ವಿಷಯದಲ್ಲಿ ನಾನು ಯಾವ ಪಥದಲ್ಲಿ ಸಾಗುತ್ತಿದ್ದೇನೆ ಎಂಬ ಪರಿಕಲ್ಪನೆಯೂ ನನಗಿರಲಿಲ್ಲ. ಅನುಭವಗಳಿಂದ ಪಾಠ ಕಲಿಯುವುದು ನನ್ನ ಗುರಿಯಾಗಿತ್ತು. ಸಾಲಕ್ಕೆ ಅನರ್ಹರು ಎಂದು ಈ ಜಗತ್ತು ಪರಿಗಣಿಸಿದ್ದ ಬಡವರನ್ನು ಮತ್ತು ದೀನ ದಲಿತರನ್ನು ಯೋಗ್ಯರು ಮತ್ತು ಪ್ರಾಮಣಿಕರು ಎಂದು ತೋರಿಸುವುದು ನಮ್ಮ ಹೋರಾಟದ ಗುರಿಯಾಗಿತ್ತು.
ನನಗೆ ಆಶ್ಚರ್ಯವಾದ ಸಂಗತಿಯೆಂದರೆ, ನಮ್ಮಿಂದ ಯಾವುದೇ ಭದ್ರತೆಯಿಲ್ಲದೆ ಸಾಲ ಪಡೆದ ನಿರ್ಗತಿಕ ಬಡವರಲ್ಲಿ ಶೇಕಡ 98 ರಷ್ಟು ಮಂದಿ ಸಾಲ ಮರುಪಾವತಿ ಮಾಡಿದ್ದರು. ಏಕೆಂದರೆ, ಅಲ್ಲಿನ ಪ್ರತಿಯೊಬ್ಬ ಬಡವನಿಗೂ “ ಇದು ನಮ್ಮ ಜೀವನದಲ್ಲಿ ಸಿಕ್ಕಿರುವ ಅಪೂರ್ವವಾದ ಕಟ್ಟ ಕಡೆಯ ಅವಕಾಶವೆಂಬುದು ಗೊತ್ತಿತ್ತು. ಬಡತನವನ್ನು ಮೀರಿ ನಿಲ್ಲಲು ದೊರೆತ ಸುವರ್ಣ ಅವಕಾಶ ಇದಾಗಿತ್ತು. ಮತ್ತೊಂದು ಕಡೆಯಲ್ಲಿ ಸಾಲಕ್ಕೆ ಭದ್ರತೆ ನೀಡಿದ ಉಳ್ಳವರ ಸಾಲ ಮರುಪಾವತಿಯ ಪ್ರಮಾಣ ಕಡಿಯಿತ್ತು. ಜೊತೆಗೆ ಅವರಿಗೆ ಕಾನೂನು ಹೋರಾಟ ಮತ್ತು ವ್ಯವಸ್ಥೆಯನ್ನು ಭ್ರಷ್ಟಗೊಳಿಸುವ ವಿಧಾನದ ಅರಿವಿತ್ತು. ಇವೆಲ್ಲವನ್ನು ಪರಾಮರ್ಶಿಸಿದಾಗ ಬಡತನ ಎಂಬುದು ನಮ್ಮ ಮುಂದೆ ಈ ಸಮಾಜವು ತೋರ್ಪಡಿಸುತ್ತಿರುವ ಒಂದು ಮೆರವಣಿಗೆ ಎನಿಸಿತು. ಬಡತನವೆಂಬುದು ಬಡವರನ್ನು ಒಂದೆಡೆ ಕೊಳೆ ಹಾಕಿ ಸಾಯಿಸುವುದಕ್ಕೆ ಅದು ನಾಜಿಗಳ ಯಾತನಾಮಯ ಶಿಬಿರವಲ್ಲ ಎಂಬುದು ನನಗೆ ಮನವರಿಕೆಯಾಯಿತು. ಬಡತನವೆಂಬುದು ವ್ಯಕ್ತಿಯೊಬ್ಬನ ಸುತ್ತ ಎದ್ದು ನಿಂತಿರುವ ಬೃಹತ್ತಾದ ಗೋಡೆ. ಇದನ್ನು ತೊಡೆದು ಹಾಕುವುದು ಗ್ರಾಮಿಣ ಬ್ಯಾಂಕಿನ ಗುರಿಯಾಗಿತ್ತು. ಬಡತನ ಶಾಪವಲ್ಲ, ಜೀವನದ ಒಂದು ಭಾಗ ಅದನ್ನು ಶಪಿಸದೆ, ಅದನ್ನು ಮೀರುವುದೇ ಮನುಷ್ಯನ ಧರ್ಮವಾಗಬೇಕೆಂಬುದು ಗ್ರಾಮೀಣ ಬ್ಯಾಂಕಿನ ಮೂಲ ಉದ್ದೇಶವಾಗಿತ್ತು. ಬಡತನ ಒಂದು ರೀತಿಯಲ್ಲಿ ಕಾಯಿಲೆ ಅದು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ತಿಂದು ಹಾಕಬಲ್ಲದು ಎಂಬುದರ ಬಗ್ಗೆ ನಮಗೆ ಅರಿವಿತ್ತು. ಇಂತಹ ಜ್ಞಾನ ಗ್ರಾಮೀಣ ಬ್ಯಾಂಕ್ ಉದಯಕ್ಕೆ ಸ್ಪೂರ್ತಿಯಾಯಿತು.
ಅಮ್ಮಾಜಾನ್ ಅಮೀನಾ ಎಂಬ ಬಡವಿಧವೆಯ ಯಶೋಗಾಥೆ ಕಿರುಸಾಲ ಯೋಜನೆಯ ಯಶಸ್ವಿನ ಮೈಲಿಗಲ್ಲುಗಳಲ್ಲಿ ಒಂದು. ಅಮ್ಮಾಜಾನ್ ಅಮೀನಾ ನಮ್ಮಿಂದ ಸಾಲ ಪಡೆದ ಪ್ರಥಮ ಮಹಿಳೆ. ಅವಳ ¨ಡತನ ಮತ್ತು ಪ್ರಾಮಾಣಿಕತೆ ನಿಜಕ್ಕೂ ಮಾದರಿಯಾಗುವಂತಹದ್ದು. ಅಮೀನಾ ಆರು ಮಕ್ಕಳ ತಾಯಿ. ನಾಲ್ಕು ಮಕ್ಕಳು ಹಸಿವು ಮತ್ತು ಅಪೌಷ್ಟಿಕತೆಯಿಂದ ಅಸುನೀಗಿದ್ದವು. ಆಕೆಯ ಪತಿ ವಾಸಿಯಾಗದ ಕಾಯಿಲೆಯಿಂದ ಹಲವು ವರ್ಷಗಳ ಕಾಲ ಬಳಲಿ ನಂತರ ನಿಧನ ಹೊಂದಿದನು. ಇರುವ ಎರಡು ಮಕ್ಕಳ ಜೊತೆ ಅಮೀನಾ ಬದುಕು ದೂಡಬೇಕಿತ್ತು. ಆಕೆಗೆ ನಲವತ್ತಮೂರು ವರ್ಷ ವಯಸ್ಸು. ಅವಳ ಪಾಲಿಗೆ ಪತಿಯ ಕಡೆಯಿಂದ ತಗಡಿನ ಚಾವಣಿ ಹೊದಿಸಿದ್ದ ಪುಟ್ಟ ಮನೆ ಮಾತ್ರ ಬಂದಿತ್ತು. ಪತಿಯ ಮನೆಯವರು ಆಕೆಯನ್ನು ಹೊರಹಾಕಿ ಮನೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೂ ಸಹ ಅಮೀನಾ ಅದೇ ಮನೆಯಲ್ಲಿ ವಾಸಿಸುತ್ತಾ. ಒಂದಿಷ್ಟು ಸಿಹಿ ತಿಂಡಿ, ಮಿಠಾಯಿಗಳನ್ನು ತಯಾರಿಸಿ, ಮನೆ ಮನೆಗೆ ಮಾರಿ ಜೀವನ ನಡೆಸುತ್ತಿದ್ದಳು. ಒಂದು ದಿನ ಅವಳು ಮಾರಾಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೈದುನ ಬೇರೊಬ್ಬರಿಗೆ ಮನೆಯ ತಗಡಿನ ಹೊದಿಕೆಗಳನ್ನು ಮಾರಾಟ ಮಾಡಿದ್ದ. ಅವಳು ಮನೆಗೆ ಬರುವಷ್ಟರಲ್ಲಿ ಅವುಗಳನ್ನು ತೆಗೆದುಕೊಂಡು ಹೋಗಿದ್ದರು. ಮಳೆ ಮತ್ತು ಚಳಿಯಲ್ಲಿ ಪ್ಲಾಸ್ಟಿಕ್ ಹೊದಿಕೆಯ ನಡುವೆ ಅದೇ ಮನೆಯಲ್ಲಿ ಅಮೀನಾ ವಾಸಿಸುತ್ತಿದ್ದಳು. ಮಳೆಗಾಲದ ಒಂದು ದಿನ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಇದ್ದ ಇಬ್ಬರು ಮಕ್ಕಳಲ್ಲಿ ಒಂದು ಮಗುವನ್ನು ಕಳೆದುಕೊಂಡಳು. ಸಿಹಿ ತಿಂಡಿ ತಯಾರಿಸಿ ಮಾರಾಟ ಮಾಡಲಾರದ ದುಸ್ಥಿತಿಗೆ ಬಂದ ಅಮಿನಾ ಇದ್ದ ಒಂದು ಮಗುವನ್ನು ಕಂಕುಳಲ್ಲಿ ಹಾಕಿಕೊಂಡು ಪರಿಚಿತರ ಮನೆಯಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಳು. ಈಕೆಯ ದುರಂತ ಕಥೆ ಸಹೋದ್ಯೋಗಿ ನೂರ್ ಜಹಾನ್ಳ ಮೂಲಕ ನನಗೆ ತಿಳಿಯಿತು.
1976 ರಲ್ಲಿ ನಾನು ಆಕೆಯನ್ನು ಭೇಟಿ ಮಾಡಿ ಬುಟ್ಟಿ ಹೆಣೆಯುವ ಉದ್ದೇಶದಿಂದ ಸಾಲ ಒದಗಿಸಿದೆ. ಆಶ್ಚರ್ಯಕರ ಸಂಗತಿ ಎಂದರೆ, ಕೆಲವೇ ದಿನಗಳಲ್ಲಿ ಆಕೆ ಹಸಿವು ಮತ್ತು ಬಡತನದ ಸಂಕೋಲೆಯಿಂದ ಹೊರಬಂದಳು. ಇದ್ದ ಏಕೈಕ ಪುತ್ರಿಯನ್ನು ಜೋಪಾನದಿಂದ ಬೆಳಸಿದಳು. ಇದೀಗ ಅಮೀನಾಳ ಆ ಹೆಣ್ಣು ಮಗಳು ನಮ್ಮ ಗ್ರಾಮೀಣ ಬ್ಯಾಂಕಿನ ಹೆಮ್ಮೆಯ ಸದಸ್ಯೆಯಾಗಿದ್ದಾಳೆ. ನನ್ನ ಗ್ರಾಮೀಣ ಬ್ಯಾಂಕ್ ಸ್ಥಾಪನೆಯ ಹಿಂದೆ ಒಂದಲ್ಲ, ಎರಡಲ್ಲ, ಇಂತಹ ಇಪ್ಪತ್ತು ಲಕ್ಷ ಹೆಣ್ಣು ಮಕ್ಕಳ ಯಶೋಗಾಥೆಯನ್ನು ನಾನು ನಿಮಗೆ ನೀಡಬಲ್ಲವನಾಗಿದ್ದೀನಿ.
( ಮಹಮ್ಮದ್ ಯೂನಸ್ ರವರ ಜೀವನ ಚರಿತ್ರೆ “ ಬಡವರ ಬಾಪು” ಕೃತಿಯಿಂದ ಆಯ್ದ ಭಾಗ)

‍ಲೇಖಕರು avadhi

March 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: