ಬಟನ್ ಛತ್ರಿ

 ಅಂಜನಾ ಗಾಂವ್ಕರ್. ದಬ್ಬೆಸಾಲ್

‘ಅದೆಷ್ಟು ಹಿತ ಮಲೆನಾಡಿನ ಮಳೆ, ಧೋ ಎಂದು ಸುರಿಯುವ ಧಾರೆಯಲ್ಲಿ ಕೈಯ್ಯಲ್ಲೊಂದು ಕೊಡೆ ಹಿಡಿದು ಇನ್ನೊಂದು ಕೈಯಲ್ಲಿ ಕಾಲಿಗೆ ಹತ್ತುವ ಇಂಬಳ ತೆಗೆಯಲು ಪಡುವ ಸಾಹಸ. ಹಳ್ಳದ ಸಲುವಾಗಿ ಶಾಲೆಗೆ ಚಕ್ಕರ್ ಹಾಕಿ ಬೈಯ್ಯಿಸಿಕೊಳ್ಳುವ ಫಜೀತಿ. ಮರುದಿನ ಪ್ರಾರ್ಥನೆ ಮುಗಿಸಿ ಅರ್ಧ ದಿನ ಹೊರಗೆ ನಿಲ್ಲುವ ಅಥವಾ ಶಾಲೆ ಸುತ್ತು ಹಾಕುವ ಶಿಕ್ಷೆ, ಶನಿವಾರ ಬಂತೆಂದರೆ ಕೊಡೆಯ ಬಿಟ್ಟು ಮಳೆಯಲ್ಲಿ ನೆನೆಯುವ ಖುಷಿ. ಸಿಂಗಲ್ ಕಡ್ಡಿಯ ಕಮಲದ ಕೊಡೆ ಹೋಗಿ ಬಟನ್ ಛತ್ರಿ, ಅದೂ ಹಳೆಯದಾಗಿ ಡಬ್ಬಲ್ ಫೋಲ್ಡಿಂಗ್ ಛತ್ರಿ ಎಲ್ಲಾ ನನ್ನ ಕಣ್ಣಲ್ಲಿ ಆಸೆ ಹುಟ್ಟಿಸಿದ್ದವು. ಮೂರು, ನಾಲ್ಕು ಮೈಲಿ ನಡೆಯುವಾಗ ಬೀಸುವ ಗಾಳಿಗೆ ಬಿಡಿಸಿದ ಕೊಡೆ ತಿರುಗಿ ಹೋಗಿ ಕಡ್ಡಿ ಮುರಿದಲ್ಲೆಲ್ಲ ಅಪ್ಪ ಪುಟ್ಟ ತಂತಿಯ ಸಿಕ್ಕಿಸಿ ರಿಪೇರಿ ಮಾಡುವಾಗ ಎಲ್ಲಿ ಹೊಸದು ಬರುವುದೋ ಎಂಬ ಆಸೆಗಣ್ಣ ಅರಳಿಸಿ ನೋಡುತ್ತಿದ್ದೆ. ಆದರೆ ಈಗ ಅಷ್ಟೆಲ್ಲಾ ತೊಂದರೆಗಳಿಲ್ಲ. ಪಾಲಕರ ಬಳಿ ವಾಹನಗಳಿವೆ. ರೇನ್ಕೋಟ್ ಧರಿಸಿ ಭರ್ರನೆ ಬೈಕಿನ ಹಿಂದೆ ಕುಳಿತು ಹೊರಡುವ ಮಕ್ಕಳಿಗೆ ಸ್ವಲ್ಪ ನೀರು ತಾಕಿದರೂ ಜ್ವರ, ಥಂಡಿ ಎಂದು ಯೋಚಿಸುತ್ತಲೇ ಕೈಯ್ಯಲ್ಲಿದ್ದ ಲಗೇಜಿನೊಂದಿಗೆ ಉದ್ದನೆಯ ಅಂಬ್ರೆಲ್ಲಾ ಎನ್ನುವ ಕೊಡೆಯ ಕಂಕುಳಲ್ಲಿ ಹಿಡಿದು ರಿಕ್ಷಾದ ಬಾಡಿಗೆ ಕೊಟ್ಟು ಅಮ್ಮನ ಮನೆಯ ಗೇಟ್ ಬಳಿ ಬಂದೆ.

‘ಅಪ್ಪಾ, ನೋಡು ಈ ಮಳೆಗಾಲಕ್ಕೆ ಎಷ್ಟು ದೊಡ್ಡ ಕೊಡೆ ತಂದಿದ್ದೇನೆ. ಡಿ ಮಾರ್ಟಲ್ಲಿ ಸಿಗದ್ದು ಏನೂ ಇಲ್ಲೆ. ನೀನು, ಅಮ್ಮ ಎಲ್ಲಾ ಹೊಕ್ಕಂಬ್ಲಾಗ್ತು, ಅದೇ ನಿನ್ನ ಆ ವುಲ್ಫ್ ಬಟನ್ ಛತ್ರಿಗೆ ನಾನೂರ ಐವತ್ತು ರೂಪಾಯಿ. ಇದಾದ್ರೆ ಊರುಗೋಲು ಆತು, ಕೊಡೆನೂ ಆತು’ ಎಂದಾಗ ಕಂಡೂ ಕಾಣದ ಮಳೆಯ ಬಿಂದುವೊಂದು ಅಪ್ಪನ ಕಣ್ಣಲ್ಲಿ.

‘ತಡಿ ಮಗಳೇ ದುಡ್ಡು ಈಗೇ ಕೊಡ್ತೇ, ನೀ ಹೋಗುವಾಗ ಮರೆತು ಹೋದರೆ?’

‘ಅದೆಲ್ಲಾ ಏನೂ ಬೇಡ, ನಾ ಅಷ್ಟೂ ಮಾಡದಿದ್ದರೆ ಏನಕ್ಕಾತು? ಬಿಡು’ ಎಂದು ನಕ್ಕೆ. ಆದರೂ ಸಾವಿರ ಮುಳ್ಳು ಮನದಿ ಚುಚ್ಚಿದ ಅನುಭವ.  ಈಗ ನನ್ನ ಮನೆಯಲ್ಲಿ ಅದೆಷ್ಟು ಬಣ್ಣ ಬಣ್ಣದ ಕೊಡೆಗಳಿಲ್ಲ. ಪುಟ್ಟ ಗೊಂಬೆಯ ಕೊಡೆಯಿಂದ ಹಿಡಿದು ಟೆಂಟಿನಷ್ಟು ದೊಡ್ಡವು. ಇವರು ಬೈದಿದ್ದೂ ಇದೆ. ಎಲ್ಲಾ ಹೆಂಗಸರಿಗೆ ಸೀರೆ, ಒಡವೆ, ಮೇಕಪ್, ಚಪ್ಪಲಿ ಕೂಡಿಸುವ ಹವ್ಯಾಸವಿದ್ದರೆ ನಿನ್ನದು ಮಾತ್ರ ವಿಚಿತ್ರ. ಛತ್ರಿ ಕೂಡಿಸಿಡುವ ಹವ್ಯಾಸ.

ತುಂಬಾ ಸಲ ಈ ಗೀಳಿನಿಂದ ಹೊರಬರುವ ಪ್ರಯತ್ನ ಪಟ್ಟೆ. ಆದರೂ ಯಾಕೋ ಮನ ತಡೆಯುವುದೇ ಇಲ್ಲ. ಮುಖಪುಸ್ತಕದಲ್ಲಿ ಅದೆಷ್ಟು ಬಣ್ಣ ಬಣ್ಣದ ಕೊಡೆಗಳ ಜೊತೆಗೆ ನನ್ನ ಫೋಟೋಗಳಿಲ್ಲಾ..? ಆದರೂ ಈ ಕೊಡೆ ಖರೀದಿಯ ಹಿಂದಿನ ಗುಟ್ಟು ಮಾತ್ರ ತಿಳಿದವಳು ನಾನೊಬ್ಬಳೇ. ಬಹುಶಃ ಈ ದಿನ ಅಪ್ಪನ ಕಣ್ಣೀರಿನ ಹಿಂದೆ ಎಲ್ಲೋ ಮಂಜಾಗಿ ಹಳೆಯ ಕಥೆ ನೆನಪಾಗಿರಬೇಕು. ಮತ್ತೆ ಅದೇ ಹಿಂದಿನ ಕಥೆಯ ಅವರಿಗೆ ನೆನಪಿಸುವ ಇರಾದೆಯಿರಲಿಲ್ಲ. ಆದರೂ ಮನವ್ಯಾಕೋ ತಡೆಯದು. ಬಾಲ್ಯದ  ಗಾಯ ಇನ್ನೂ ಸಹ ಮಾಗಿಲ್ಲ. ಮುರಿದ ಕಾಲಿಗೆ ಒಳಗಿನಿಂದ ಕೂರಿಸಿದ ಕಬ್ಬಿಣದ ಪಟ್ಟಿಯಂತೆ ಆಗಾಗ್ಗೆ ನೆನಪು ಭರಿಸುತ್ತಲೇ ಇರುವುದು.

ಬಣ್ಣಬಣ್ಣದ ಪಾಟಿಚೀಲದ ಆಸೆಯಿದ್ದರೂ ಅದೇ ಅಪ್ಪ ಹೋಲಿಸಿದ್ದ ಕೈ ಚೀಲವೊಂದರಲ್ಲಿ ಪಾಟಿ ಕಡ್ಡಿ ಜೊತೆಗೆ ಒಂದು ಪುಸ್ತಕ ಹಾಕಿ ಹೊರಟು ಶಾಲೆ ತಲುಪಿದಾಗ ‘ಅದೇ ಅಲ್ನೋಡ್ರೋ ಮೇಣದ ಕೊಪ್ಪೆ ಹಾಕಿ ಬಂದಿದ್ದಾಳೆ’ ಎಂದು ದೊಡ್ಡ ಕ್ಲಾಸಿನವರು ನಕ್ಕಾಗ ಅಳುತ್ತಲೇ ಮನೆಗೆ ಬಂದೆ. ಆಗ ತಾನೇ ಎತ್ತಿನ ಗಳಿಯ ಬಿಟ್ಟು ಗದ್ದೆ ಕೆಲಸದಿಂದ ಮನೆಗೆ ಬಂದಿದ್ದ ಅಪ್ಪ ಕಂಬಳಿಯ ಕೊಪ್ಪೆ ಅಬ್ಬಿ ಒಲೆಯ ಬಳಿ ಇಡುತ್ತ ‘ಏನೇ ಪೂರ್ಣಿ ಎಲ್ಲೋತು ನಿನ್ನ ಪ್ಲಾಸ್ಟಿಕ್ ಕೊಪ್ಪೆ?’ ಎಲ್ಲಿಲ್ಲದ ಕೋಪದೊಂದಿಗೆ ‘ದಾರಿಯಲ್ಲೇ ಬಿಟ್ಟಿಕ್ಬಂದೆ’ ಎಂದು ಗತ್ತಿನಿಂದಲೇ ನುಡಿದೆ. ಅದೆಲ್ಲಿತ್ತೋ ಅಪ್ಪನ ಸಿಟ್ಟು. ಕೆನ್ನೆಯ ಮೇಲೆ ಮೂಡಿದ ಬೆರಳಿನ ಗುರುತಿನೊಂದಿಗೆ ಊಟ ಬಿಟ್ಟು ನೆನೆಯುತ್ತಾ ಮತ್ತೆ ಶಾಲೆಗೆ ಹೊರಟಿದ್ದೆ. ಅದೇ ಕೊಪ್ಪೆಯ ಮತ್ತೆ ಮಡಚಿ ಕೈಯಲ್ಲಿ ಹಿಡಿದು ವಾಪಸ್ಸು ಮನೆಗೆ ಬಂದೆ. ಅದರಲ್ಲಿಯೇ ಮಳೆಗಾಲ ಕಳೆದು ಹೋಗಿತ್ತು. ಇನ್ನು ಎರಡನೆಯ ತರಗತಿಗೆ ಸೇರಲು ಕೊಡೆಯ ಕೊಳ್ಳಲು ಹಣ ಮಾಡಬೇಕಿತ್ತು. ಬಿದ್ದ ಗೇರುಬೀಜ, ಹೆಕ್ಕಿದರೂ ದುಡ್ಡು ಸಾಲಲೇ ಇಲ್ಲ..

ಮುಂದಿನ ಮನೆಯ ಶಿರಿ ತನ್ನ ಡಬ್ಬಲ್ ಕಡ್ಡಿಯ ಕೊಡೆ ಬಿಡಿಸಿ ಕಮಲದ ಹೂವಿನಂತೆ ಬಿಡಿಸಿದಾಗ ಆಸೆಯಿಂದಲೇ ಕಣ್ಣು ಬಿಟ್ಟೆ. ಅದೇ ಕೊಡೆಯ ಗಾಳಿಗೆ ರಭಸವಾಗಿ ಹಿಡಿದರೆ ಕಮಲದ ಹೂವಿನಂತೆಯೇ ಥೇಟು. ಎಲ್ಲರಿಗೂ ಅವನು ತನ್ನ ಕೊಡೆಯ ತೋರಿಸುತ್ತಿರಬೇಕಾದರೆ ನಾನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದೆ. ಅವತ್ತು ರಾತ್ರಿಯ ಕನಸಲ್ಲಿ ನನ್ನ ಬಳಿಯೂ ಅಂತಹುದೇ ಕೆಂಪು ದಂಡಿಗೆಯ ಕೊಡೆ ಬಂದು ಬಿದ್ದಿತ್ತು. ಬೆಳಗಿನ ತಿಂಡಿ, ಊಟ, ಶಾಲೆ ಎಲ್ಲಾ ಬಿಟ್ಟು ಮುಷ್ಕರ ಹೂಡಲು ಕೊನೆಯಲ್ಲಿ ಮನೆಗೆ ಬಂದದ್ದು ಕಾಟನ್ನಿನ ನೀಲಿ ದಂಡಿಗೆಯ ಕೊಡೆ. ಅದು ಸಿಂಗಲ್ ಕಡ್ಡಿಯದು. ಯಾವುದೂ ಇಲ್ಲದ ಕಾಲಕ್ಕೆ ಮಠದ ಭಡ್ತಿ ಎಂಬ ಗಾದೆಯಂತೆ ಆ ಪ್ಲಾಸ್ಟಿಕ್ ಕೊಪ್ಪೆಯ ಬದಲು ಈ ಕೊಡೆ ಎಂದು ಸಂತಸ ಪಟ್ಟೆ. ಅಲ್ಲಿಗೇ ಮುಗಿದಿರಲಿಲ್ಲ ನನ್ನ ಕನಸಿನ ಪಯಣ…

ಅದೊಂದು ಸಂಜೆ ಮನೆಗೆ ಹಿಂದಿರುಗ ಬೇಕಾದರೆ ಯಾರೋ ಬಸ್ ನಿಲ್ದಾಣದಲ್ಲಿ ಬಟನ್ ಛತ್ರಿಯೊಂದನ್ನು ಬಿಟ್ಟಿದ್ದರು. ನಿಧಾನವಾಗಿ ಬರುತ್ತಿದ್ದ ನನ್ನ ಕಣ್ಣಿಗೆ ಬಿದ್ದಿತ್ತು ಅದು. ಯಾರಿಗೂ ಕಾಣದಂತೆ ಪಾಟಿಚೀಲದ ಹಿಂದೆ ಅಡಗಿಸಿಕೊಂಡು ನನ್ನ ಕೊಡೆ ಬಿಡಿಸಿಕೊಂಡು ಹೊರಟೆ. ಅಂತೂ ಮನೆ ತಲುಪಿ ಅದರ ಬಿಡಿಸಿ ನೋಡಿದೆ. ಕೆಂಪು ಪೇಂಟಿನಲ್ಲಿ ಸುಬ್ಬುಮಾವನ ಹೆಸರಿತ್ತು. ಒಂದಿಷ್ಟು ಸೀಮೆ ಎಣ್ಣೆ ಹಾಕಿ ಆದಷ್ಟು ಹೆಸರು ಒರೆಸಿ ಮೂಲೆಯೊಂದರಲ್ಲಿ ಇಟ್ಟು ಸ್ವಲ್ಪ ದಿನ ಕಳೆಯಲೆಂದು ಸುಮ್ಮನಿದ್ದೆ. ಆದರೆ ಅವೊತ್ತೊಂದು ದಿನ ಅಮ್ಮ ತಲೆಯ ಮೇಲೆ ಸರಿಯಾಗಿ ಕುಟ್ಟಿದಳು. ಅಪ್ಪನೂ ರುದ್ರಾವತಾರ ತಾಳಿದ್ದ. ‘ಕದಿಯುವ ಚಟ ಬೇರೆ ಶುರು ಆಯಿತಾ ನಿಂದು? ಇವತ್ತು ಅದೇ ಸುಬ್ಬಣ್ಣನ ಮನೆ ಶ್ರಾದ್ಧಕ್ಕೆ ಹೋಗಿ ಅದೆಷ್ಟು ಅವಮಾನ ಆಯ್ತು ಗೊತ್ತಾ? ನನ್ನ ನೋಡುತ್ತಿದ್ದಂತೆ ಆ ಸುಬುಣ್ಣಂಗೆ ಛತ್ರಿ ಹಿಡಿಕೆಯ ಮೇಲೆ ಕಣ್ಣು ಬಿತ್ತು. ʼಇದೆಲ್ಲಿ ಸಿಕ್ತು?ʼ ಅಂದ. ನಮ್ಮನೆಲಿ ಯಾರೋ ಇಟ್ಟಿದ್ದೋ ಹೇಳಿದರೂ ಬಿಡದೆ ಹಿಡಿಕೆ ಎಲ್ಲಾ ನೋಡಿ ಕೊನೆಗೆ ಅರ್ಧಂಬರ್ಧ ಅಳಿಸಿದ ಪೈಂಟ್ ನೋಡಿ ಅವನಿಗೆ ಪಕ್ಕಾ ಆತು. ಮನೆಗೆ ಬರುವಾಗ ಅದೆಷ್ಟು ಅವಮಾನ ಆಯಿತು’ ಎನ್ನುತ್ತಿದ್ದ ಅಮ್ಮನ ಗುಸುಗುಸು ಅಳುವಿಗೆ ಬೆಪ್ಪಳಂತೆ ನಿಂತಿದ್ದೆ.

ಅದೇ ನಾಲ್ಕನೇ ತರಗತಿಗೆ ಸೇರಿದಾಗ ಅಪ್ಪ ನನ್ನ ಹಳೆಯ ಕೊಡೆಯ ತಮ್ಮನಿಗೆ ಕೊಟ್ಟು ನನಗೆ ಹೊಸಾ ಬಟನ್ ಛತ್ರಿ ಕೊಡಿಸಬಹುದೆಂಬ ಹೊಸ ಕಿರಣ ಮನದಿ ಮೂಡಿತ್ತು. ಆದರೆ ಕಿರಣನ ಅದೃಷ್ಟ ಚೆನ್ನಾಗಿತ್ತು. ಹೊಸ ಪಾಟಿಚೀಲದ ಜೊತೆಗೆ ಬಟನ್ ಛತ್ರಿ ಬಂದಿತ್ತು. ‘ತಮಾ ಅಕ್ಕಾ ದೊಡ್ಡಾಯಿದು. ನಿಂಗಾದ್ರೆ ಕೊಡೆ ಬಿಡಿಸುಡು ಕಷ್ಟ. ಇದೆ ಹಿಂಗ್ ಬಟನ್ ಒತ್ತಿರೆ ಛತ್ರಿ ಬಿಡಿಸು. ಅಕ್ಕನ ಹತ್ರ ಬಂದು ಮಾಡ್ಕೊದುಲೇ ಹೇಳು’ ಎನ್ನುತ್ತಿದ್ದರೆ ನನ್ನೊಳಗಿನ ದುಃಖ ನನಗೆ ಗೊತ್ತು. ಅದೇ ಸಿಂಗಲ್ ಕಡ್ಡಿ ಕೊಡೆಯ ಬೇಕೆಂದೇ ಕಡಿ ರಸ್ತೆಯಲ್ಲಿ ಗಾಡಿ ಮಾಡಿ ಡುರ್ ಎನ್ನುತ್ತಾ ಹೋದೆ. ಅರ್ಧ ಹಿಡಿಕೆ ಸವೆಸಿದ್ದೆ. ಅಪ್ಪನ ಹೊಡೆತ ಮಾತ್ರ ಚೆನ್ನಾಗಿಯೇ ಆಗಿತ್ತು. ಹಿಡಿಕೆಯಿಲ್ಲದೆ ಮತ್ತೂ ಅಸಹ್ಯವಾಗಿ ಕಾಣಿಸುತ್ತಿತ್ತು ಆ ನೀಲಿ ಕೊಡೆ.

ಈಗೀಗ ಬುದ್ಧಿ ಬೆಳೆಯುತ್ತಿತ್ತು. ನನ್ನ ಆಸೆಗಳೆಲ್ಲವ ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಇದ್ದೆ. ಬೇಕೆಂದೇ ಕೊಡೆಯ ಮರೆತು ಮಳೆಯಲ್ಲಿ ನೆನೆಯುತ್ತಾ ಮನೆಗೆ ಬರುತ್ತಿದ್ದೆ.
ಏಳನೆಯ ತರಗತಿಯಲ್ಲಿ ಅವತ್ತು ಕೋಲಾಹಲವೆ ಎದ್ದಿತ್ತು. ನಾನೋ ಮುದುರಿದ ಮಳ್ಳಿಯಂತೆ ಕುಳಿತು ಎಲ್ಲವನ್ನೂ ವೀಕ್ಷಿಸುತ್ತಿದ್ದೆ. ಅವಳು  ಸವಿತ ಆಕಾಶವೇ ತಲೆ ಮೇಲೆ ಬಿದ್ದಂತೆ ಅಳುತ್ತಿದ್ದಳು. ಎಲ್ಲರ ಬ್ಯಾಗೂ ಚೆಕ್ ಮಾಡಲಾಯಿತು. ಎಲ್ಲಿಯೂ ಅವಳ ಬಣ್ಣದ ಗೊಂಬೆಗಳಿದ್ದ ಛತ್ರಿ ಸಿಗಲೇ ಇಲ್ಲ. ಶಾಲೆ ಬಿಟ್ಟರೆ ಸಾಕೆಂದು ಕಾಯುತ್ತಿದ್ದೆ. ಮರುದಿನ ಹೇಗಾದರೂ ರಜಾ ಹಾಕಬೇಕೆಂದು. ಮನದಲ್ಲಿ ಸಂತಸವಾದರೂ ಎಲ್ಲೋ ಅವ್ಯಕ್ತ ಭಯ. ದಾರಿಯ ಮಧ್ಯೆ ಕಿರಣ  ತನ್ನ ಬ್ಯಾಗ್ ತೆಗೆದಾಗ ಅದೇ ಬಣ್ಣದ ಛತ್ರಿ ಕೆಳಗೆ ಬಿತ್ತು. ಅದು ಶಿರಿ ಹಾಗೆ ನಮ್ಮ ಶಾಲೆಗೆ ನಮ್ಮ ದಾರಿಯಲ್ಲಿ ಬರುತ್ತಿದ್ದ ಮಕ್ಕಳ ಕಣ್ಣಿಗೆ ಬಿದ್ದಿತ್ತು.

ಮರುದಿನ ಶಾಲೆಯ ಮೆಟ್ಟಿಲು ಹತ್ತಲೇ ಇಲ್ಲ. ಆದರೆ ಹೆಡ್ಮಾಸ್ಟರರು ಅಪ್ಪನಿಗೆ ಮರುದಿನ ಶಾಲೆಗೆ ಬರಲು ನಮ್ಮ ಪಕ್ಕದ ಮನೆಯ ಶಿವುಗೆ ಹೇಳಿ ಕಳುಹಿಸಿದ್ದರು. ’ನಿಮ್ಮ ಮಗಳು ಅವಳ ತರಗತಿಯ ಹುಡುಗಿಯ ಹೊಸ ಛತ್ರಿ ಕದ್ದಿದ್ದಾಳೆ.‘ ಎನ್ನುತ್ತಿದ್ದಂತೆ ಕಳ್ಳಿಯ ಪಟ್ಟ ಹೊತ್ತ ಮಗಳ ಮೇಲೆ ಎಲ್ಲಿಲ್ಲದ ಕೋಪ ಅಪ್ಪನಿಗೆ. ಮನೆಗೆ ಬಂದು ಬೆತ್ತದ ಏಟು ಸರಿಯಾಗಿಯೇ ಬಿತ್ತು. ಅಲ್ಲಿಂದ ಛತ್ರಿಯ ಮೇಲಿನ ವ್ಯಾಮೋಹ ಬಿಟ್ಟೆ.

ಪ್ರೌಢಶಾಲೆಗೆ ಹೋಗುವಾಗ ಬಂದ ಬಟನ್ ಛತ್ರಿ ನೋಡಿ ನನ್ನ ಮನ ನಗಲಿಲ್ಲ. ಪದವಿ ಪೂರ್ವ ಶಿಕ್ಷಣ ಮುಗಿಸಿ ಮುಂದೆ ಓದುವ ಕನಸಿಗೆ ತೀಲಾಂಜಲಿ ಇಟ್ಟಾಗ ನನ್ನ ಮನ ಮೌನವಾಗಿ ರೋಧಿಸಿತ್ತು.

‘ಪೂರ್ಣಿ ನಮ್ಮ ಕಿರಣನ ಫೋನ್ ಬಂದಿತ್ತು. ಅಲ್ಲೆಲ್ಲೋ ಟ್ರೇನಿಂಗ್ ಇದ್ದಡಾ. ರಜೆ ಸಿಕ್ಕುದು ಖರೆಯಿಲ್ಲೆ. ಇನ್ನು ಊರಿಗೆ ಬಪ್ಪುದು ದೀಪಾವಳಿಗೆ. ನೀನಾದರೂ ನಾಲ್ಕು ದಿನ ಉಳಿಯೇ’ ಎನ್ನುವ ಅಮ್ಮನ ಮಾತಿಗೆ ‘ಹೌದಾ. ನನಗೂ ರಜೆಯಿಲ್ಲೆ. ಅದ್ಯಾರೋ ರಿಸೋರ್ಸ್ ಪರ್ಸನ್ ಬತ್ತಾ. ಅದಕ್ಕೆ ಬೇಗ ಹೋಗೆ. ಮಕ್ಕಳಿಗೆ ರಜೆ ಇದ್ರೂ ನಮಗೆ ಇಲ್ಲೆ’ ಎಂದಷ್ಟೇ ಉತ್ತರ.

ಬಂದ ಎರಡು ದಿನದಲ್ಲೇ ಮಹಾನಗರಿಗೆ ತಿರುಗಿ ಹೊರಟೆ. ’ತಮ್ಮನ ಅದೇ ಹುಬ್ಬಳ್ಳಿಯ ಹಾಸ್ಟೆಲ್ನಲ್ಲಿ ಇಟ್ಟು ಓದಿಸುವಾಗ ಇದ್ದ ಹಣ ನನ್ನ ಓದಿಸುವಾಗ ಮಾತ್ರ ಯಾಕೆ ಇರಲಿಲ್ಲ? ಆಗಾಗ ಹೋಗುವ ಅಪ್ಪ ಅದೆಷ್ಟು ಕಷ್ಟವಾದರೂ ಸೊಸೈಟಿಯಿಂದ ಹಣ ತೆಗೆದು ತಮ್ಮಗೆ ಕೊಟ್ಟಿದ್ದು ನೆನಪಿದೆ. ನನ್ನ ಮದುವೆಗೂ ಅಷ್ಟೇ. ಪುಟ್ಟ ಕರಿಮಣಿ ಬಿಟ್ಟರೆ ಮತ್ತೇನೂ ಇರಲಿಲ್ಲ. ಕೊನೆಗೂ ನನ್ನ ಹಠ ಸಾಧಿಸಿ ಮುಂದಿನ ಓದು ಮುಗಿಸಿ ಮಾಸ್ಟರ್ ಡಿಗ್ರಿ ಪಡೆದಿದ್ದೆ. ಮಗಳ ಶಾಲೆಯಲ್ಲೇ ಕೆಲಸವೂ ಸಿಕ್ಕಿತು.’ ಬಸ್ಸಿನ ವೇಗಕ್ಕಿಂತ ಮನಸ್ಸಿನ ಆಲೋಚನೆಯೇ ಬೇಗ ಬೆಂಗಳೂರು ತಲುಪಿತ್ತು. ಅಂತೂ ಮನೆ ಸೇರಿದಾಗಲೇ  ನೆಮ್ಮದಿ.

‘ಹಲೋ ಮೇಡಂ ಯಾಕೆ ಮಳೆಯಲ್ಲಿ ನೇನಿತಿರಾ? ಇಲ್ಲೇ ಅಂಗಡಿ ಮುಂದೆ ನಿಂತುಕೊಳ್ಳಿ, ಮೇಡಂ ಇನ್ನೂರು ರೂಪಾಯಿ ಛತ್ರಿ, ನಿಮಗೆ ಬೇಕಾದರೆ ನೂರೈವತ್ತು’ ಎನ್ನುವ ಕಡೆ ತಿರುಗಿ ನೋಡಿದರೂ ಯಾಕೋ ಆ ಬಿಳಿ ಕೂದಲ ಡಿಸ್ನಿ ಚಲುವೆಯ ಛತ್ರಿ ಕೊಂಡು ಬಿಡಿಸದೇ ಮನೆಗೆ ಬಂದೆ.

‘ಇದೇನು ಪೂರ್ಣಿ ಮನೆಯಲ್ಲಿ ಕೊಡೆಯ ಅಂಗಡಿನೇ ಇಟ್ಟರೂ ದಿನವೂ ಬರಿಗೈಯಲ್ಲಿ ಹೋಗುತ್ತಿಯಾ?’ ಎನ್ನುವ ಇವರ ಕಾಳಜಿಗೆ  ದಿನವೂ ಕಾತರಿಸುತ್ತೇನೆ.

ಒಣಗಿದ ಬಟ್ಟೆಯ ಧರಿಸಿ ಬೆಚ್ಚಗಿನ ಕಾಫಿ ಹೀರಿ ಮೊಬೈಲ್ ಹಿಡಿದು ಕುಳಿತವಳು. ಅದೊಂದು ಹೆಸರ ಹುಡುಕಿದೆ. ಕೊನೆಗೂ ಸಿಕ್ಕಳು ಅವಳು. ʼಆವತ್ತು ನಿನ್ನ ಬಣ್ಣದ ಛತ್ರಿ ಕದ್ದು ನನ್ನ ತಮ್ಮನ ಬ್ಯಾಗಲ್ಲಿರಿಸಿದ್ದೆ. ದಯವಿಟ್ಟು ಕ್ಷಮಿಸು, ಆವತ್ತಿನ ತಪ್ಪಿಗೆ’ ಎಂದು ಮೆಸೇಜ್ ಕಳುಹಿಸಿ ಕಾದೆ.

ಇಲ್ಲಿಂದ ಇಷ್ಟು ದಿನ ಮನದೊಳಗೆ ಸಾಕಿದ್ದ  ಕೊಡೆಗಳ ಮೋಹವ ಬಿಡಲು ನಿರ್ಧರಿಸಿದ್ದೆ. ಬಾಲ್ಯದಲ್ಲಿ ನಡೆದ ಸಂಗತಿಗಳ ನೆನೆದು ಮನಕ್ಕೆ ಏನೋ ಖೇದ. ಅಪ್ಪ ಅಮ್ಮನ ಮೇಲೆ ವಿನಾ ಕಾರಣ ಸಿಟ್ಟು. ಬಹುಶಃ ಆಗಿನ ಕಾಲದಲ್ಲಿ ಎಲ್ಲರ ಮನಸ್ಥಿತಿ ಹೆಚ್ಚು ಕಡಿಮೆ ಹಾಗೆಯೇ ಇರಬೇಕು. ಅತಿ ಬಡತನ ಇರದಿದ್ದರೂ ಹೆಣ್ಣೆಂದರೆ ಸ್ವಲ್ಪ ತಾತ್ಸಾರ. ನನ್ನ ಆಸೆಗಳ ನಾನೆಂದೂ ಅವರ ಬಳಿ ಬಾಯ್ಬಿಟ್ಟು ಹೇಳಲೂ ಇಲ್ಲ. ಆಗಿ ಹೋಗಿದ್ದರ ಯೋಚಿಸಿ ಈಗ ಆ ಎರಡು ಜೀವಗಳ ಮೇಲೆ ದ್ವೇಷ ಸಾಧಿಸುವ ಛಲ ಬಿಡಬೇಕೆಂದು ಯೋಚಿಸತೊಡಗಿದ್ದೆ.

ಸಂಜೆಯ ಬಸ್ ಇಳಿದ ತಕ್ಷಣ ಇನ್ನೇನು ಭಾರವಾದ ಮೋಡ ಹಗುರವಾಗಲು ದಪ್ಪ ದಪ್ಪ ಬಿಂದುಗಳ ಉದುರಿಸುತ್ತಿದ್ದಂತೆ ‘ಮೇಡಂ ದೋ ಸೋ ಪಚಾಸ್ ಆಪ್ ಕೆ ಲಿಯೆ ದೊ ಸೋ’ ಎನ್ನುತ್ತಿದ್ದ ರಸ್ತೆಯ ಬದಿಯ ಹುಡುಗನಿಗೆ ‘ಬೇಡಾ’ ಎಂದು ಉತ್ತರಿಸಿ ಬ್ಯಾಗಲ್ಲಿದ್ದ ಡಬ್ಬಲ್ ಫೋಲ್ಡಿಂಗ್ ಛತ್ರಿ ಬಿಡಿಸಿ ಮನೆಯತ್ತ ಹೆಜ್ಜೆ ಹಾಕಿದೆ.

‍ಲೇಖಕರು nalike

August 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Prajna Mattihalli

    Anjana very good writing You make the reader to read between the lines.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: