ಬಕುಲದ ಹೂಗಳನ್ನೆತ್ತಿ..

ಹೂಗಳನ್ನೆತ್ತಿ…. 
(ಓದಿನ ಟಿಪ್ಪಣಿ)

ಡಾ. ಪಲ್ಲವಿ ಹೆಗಡೆ

ಪುಸ್ತಕ: ‘ಬಕುಲದ ಬಾಗಿಲಿನಿಂದ’
ಲೇಖಕಿ: ಸುಧಾ ಆಡುಕಳ
ಪ್ರಕಾಶನ: ಬಹುರೂಪಿ 

ಸುಗಂಧವನ್ನು ಬೀರುವ, ಸೆಳೆಯುವ ಬಕುಳದ ಹೂಗಳನ್ನು ಆಯ್ದಂತೆ ಈ ಸಂಕಲನ.  ಇಪ್ಪತ್ತೊಂದು ‘ಸ್ತ್ರೀ’ಪಾತ್ರಗಳ ಗಂಧನವನ್ನು ಅಕ್ಷರಗಳಲ್ಲಿ ಚಿತ್ರಿಸಿ ‘ಅವಧಿ’ಯಲ್ಲಿ ಹಿಂದೆ ಅಂಕಣವಾಗಿ ಮೂಡಿಬರುತ್ತಿದ್ದ ಲೇಖನಗಳ ಸಂಕಲಿತ ಪುಸ್ತಕವಿದು.

ಪುರಾಣದ ಪಾತ್ರಗಳು ಕಾಲಕ್ಕೆ ಹೊಂದಿಕೊಂಡು ನವೀನತೆ ಪಡೆದು ಹೊಸ ಭಾಷೆ, ಶೈಲಿಯಲ್ಲಿ ಚಿತ್ರಿತಗೊಳ್ಳುತ್ತಲೇ ಸಮಕಾಲೀನ ಹೆಣ್ಣಿನ ಅಂತರಂಗಕ್ಕೂ ಸಮನ್ವಯವಾಗಿರುವುದು ಹೊಸತಲ್ಲ. ಈ ಪ್ರಕ್ರಿಯೆಯಲ್ಲಿ ಅವುಗಳ ಸತ್ಯಾಸತ್ಯತೆಯ ಬಗೆದು ನೋಡುವ ಹಲವು ವಿಮರ್ಶೆಗಳೂ ದೊರೆಯುತ್ತವೆ. ಜೊತೆಗೆ ಈ ಶತಮಾನದ ಹೆಣ್ಣುಮಕ್ಕಳ ಹೋರಾಟಗಳೂ ಹಲವರ ಬರೆಹಗಳಲ್ಲಿ ಚಿತ್ರಿತವಾಗಿವೆ.

ಇವೆಲ್ಲವೂ ಸ್ತ್ರೀವಾದಿ, ಸ್ತ್ರೀಪರ ಸಾಹಿತ್ಯ, ಅಬಲೆಯರ ದನಿಯೆಂಬಂತೆಯೋ ಗುರುತಿಸಲ್ಪಡುವುದೂ ಹೊಸತಲ್ಲ. ಶೋಷಿಸಲ್ಪಡುವುದು ಮತ್ತು ಶೋಕ, ಸ್ತ್ರೀ ಕುಲದ ಸಹಜಸ್ಥಿತಿ ಎಂಬಂತೆಯೂ ಸಮಾಜದಲ್ಲಿ ಅಚ್ಚೊತ್ತಿ, ಬಂಡೆದ್ದ ಹೆಣ್ಣುಮಕ್ಕಳೆ ಸುಧಾರಣೆಗೆ ಕಾರಣವೆಂದೂ ಕಾಣಿಸಿಕೊಳ್ಳುವುದು ನಮಗೆಲ್ಲಾ ಹೊಸತಲ್ಲ. ಸ್ತ್ರೀಮನದ ಚಿಂತನೆಗಳು ಪುರುಷಪ್ರಧಾನ ಸಮಾಜದ ವಿರುದ್ಧವೆಂಬಂತೆಯೂ ಕೆಲವೊಮ್ಮೆ ಘೋಷಣೆಯಾಗುವುದೂ ಹೊಸತಲ್ಲ.

ಸಾಹಿತ್ಯಕ್ಕೂ ಲಿಂಗಭೇದವೆನ್ನುವುದು ತಗಲಿಕೊಂಡು ಇತಿಹಾಸವೇ ಆಗಿದೆ. ಹಾಗಾಗಿ ಇಂತಹ ಪುಸ್ತಕ, ಓದು, ಬರೆಹ, ಚರ್ಚೆಗಳೆಲ್ಲಾ ಸಾಹಿತ್ಯದ ಯಾವುದೋ ಒಂದು ಪ್ರಕಾರದ ಹಣೆಪಟ್ಟಿಹಚ್ಚಿಕೊಂಡು ಸದಾ ಪ್ರಚಲಿತದಲ್ಲಿವೆ. ಹಾಗಾಗಿ ಇವು ಮಾತ್ರ ಈ ಕೃತಿಯಲ್ಲಿ ಕಂಡುಬಂದಿದ್ದರೆ ಹೊಸತನ ಕಾಣಿಸುತ್ತಿರಲಿಲ್ಲ. ಆದರೆ, ಇವೆಲ್ಲವನ್ನೂ ಒಳಗೊಂಡು ‘ಬಕುಲದ ಬಾಗಿಲಿನಿಂದ’ ನವೀನವಾಗಿದೆ, ವಿಶೇಷವಾಗಿದೆ.

ಹೊಸತು ಯಾವುದು?

ಈ ಸಂಕಲನವನ್ನು ಓದದಿದ್ದರೆ ಓದುಗ ಏನನ್ನು ಕಳೆದುಕೊಳ್ಳಲಿದ್ದಾನೆ?

ಇದು ಈ ಪುಸ್ತಕದ ವಿಷಯದಲ್ಲಿ ಪ್ರಸ್ತುತ.

ಬಕುಲದ ಬಾಗಿಲಿನಿಂದ ನಮ್ಮ ಮನಕ್ಕೆ ಲಗ್ಗೆ ಇಡುವ ಈ ಸ್ತ್ರೀಯರನ್ನು ಯಾವುದೋ ಕಾಲದ ಪಾತ್ರಗಳನ್ನಾಗಿ ಓದದೆ ನಮ್ಮ ಅಮ್ಮ, ಅಜ್ಜಿ, ಸಹೋದರಿ, ಹೆಂಡತಿ, ಮಗಳು, ಸ್ನೇಹಿತೆಯಾಗಿ ಓದಿಕೊಳ್ಳಬಹುದು. ಸಂಕಲನದ ಪ್ರತೀ ಹೆಣ್ಣಿನ ಅಂತರಂಗ, ಬಹಿರಂಗ ತಿಳಿಯುತ್ತಾ ಎಲ್ಲರೂ ನಮ್ಮ ದೈನಂದಿನ ಜೀವನದ ಭಾಗವೇ ಎಂಬುದು ತೆರೆಯುವುದು ಬರೆಹಗಳ ಹೊಸತನ. ಹಾಗಾಗಿ ನಮ್ಮೊಡನೆ ಬದುಕುವ ಹೆಣ್ಣು ಹೃದಯವೊಂದರ ಅಳಲು ಆಳವಾಗಿ, ಸುಗಮವಾಗಿ, ಹೃದ್ಯವಾಗಿ, ರುಚ್ಯವಾಗಿ ಈ ಬರೆಹಗಳು ಎದೆಯ ಬಾಗಿಲಿಗೆ ರವಾನಿಸಿಬಿಡುತ್ತವೆ. ಅಷ್ಟರ ಮಟ್ಟಿಗೆ ಇವು ಶೈಲಿಯಲ್ಲಿ, ವಸ್ತುನಿರೂಪಣೆಯ ಓಘದಲ್ಲಿ ಪಾದರಸ. ಕೆಲವೊಮ್ಮೆ ಭಾವುಕ, ಕೆಲವೊಮ್ಮೆ ವೈಚಾರಿಕ, ಮತ್ತೊಮ್ಮೆ ಬೌದ್ಧಿಕ ಇಲ್ಲಿನ ಪಾತ್ರಗಳು.

ಓದದೆ ಇದ್ದರೆ –  ರಾಧೆಯಂತಹ ಹುಡುಗಿಯ ಕಾಯುವಿಕೆ, ಸಹನೆ, ಸಂಯಮವು ಹೇಗಿರುತ್ತದೆ ಎಂಬುದನ್ನು ಉತ್ಕಟವಾಗಿ ಕಳೆದುಕೊಳ್ಳುತ್ತೇವೆ. ಚಿತ್ರಾಳಂತಹ ಗಂಡುಬೀರಿಯರ ಸಹಜಸೌಂದರ್ಯದ ಅನಾವರಣವು ಕೈತಪ್ಪುವುದು. ಸೀತೆಯಂತಹ ಏಕಾಂಗಿ ಹೆಣ್ಣುಮಕ್ಕಳ, ಗಂಡನಿಂದಲೇ ಸಂಶಯಕ್ಕೆ, ಪರೀಕ್ಷೆಗೆ ಒಳಪಡುವ, ಮಕ್ಕಳಿಗೆ ಅಮ್ಮ ಮಾತ್ರವಾಗಿ ಬದುಕುವ ಹೆಂಡತಿಯರ ಅಳು ಕೇಳಿಸದಿರಬಹುದು. ಗಂಡಸಿನ‌ ಏಕಮುಖದ ಲೆಕ್ಕಾಚಾರಕ್ಕೆ ಮತ್ತೆ ಮತ್ತೆ ಕನ್ಯೆಯಾಗುವ ಮಾಧವಿಯಂತವರ ಕನಲಿಕೆ, ವೈರಾಗ್ಯ ತಿಳಿಯದೇ ಇರಬಹುದು.

ಕೌಟುಂಬಿಕ ಭದ್ರತೆಗೆ ಸದಾ ಹಪಹಪಿಸುವ ಗಂಡಿನ ವ್ಯಾವಹಾರಿಕ ವ್ಯವಸ್ಥೆಯೊಳಗೆ ಅವಜ್ಞೆಗೆ ಒಳಗಾಗುವ ಮೃದುಮನದ ಊರ್ಮಿಳೆಯರ ಕೊರಗು ಕಾಣದೇ ಇರಬಹದು. ಮದುವೆಯೆಂಬ ವ್ಯವಸ್ಥೆಯಲ್ಲಿ ಬಂಧಿಯಾಗಿ‌ ತಮ್ಮ ಪ್ರತಿಭೆಯನ್ನು ಕಲ್ಲಾಗಿ ಹೂತು ಬಿಡುವ ಶಾಂತಲೆಯಂತವರ ತ್ಯಾಗ ತಿಳಿಯದಿರಬಹುದು.

ಕಾಮಕ್ಕೆಂದೆ ಹೆಣ್ಣಿನ ದೇಹಾರಾಧನೆ ಮಾಡುವವರ ಮಧ್ಯೆ, ಆಧ್ಯಾತ್ಮಿಕವಾಗಿ ಉನ್ನತದಲ್ಲಿರುವ ಅಕ್ಕಮಹಾದೇವಿಯಂತಹವರ ಗುರುತು ಸಿಗದಿರಬಹುದು. ಸಂಸಾರದ ಜವಾಬ್ದಾರಿಯನ್ನು ಏಕಾಂಗಿಯಾಗಿ ಹೊತ್ತು ತಮ್ಮ ಸುಖ, ಇಚ್ಛೆಗಳನ್ನು ಬದಿಗಿಡುತ್ತಾ ಜಗತ್ತಿಗೆ ಪ್ರಶ್ನೆಯಾಗುತ್ತಾ ಬದುಕುವ ಪುರುಕುತ್ಸಾನಿಯು ಅರ್ಥವಾಗದೆ ಹೋಗಬಹುದು.

ಪ್ರೇಮದ ಸ್ಪರ್ಶವಿಲ್ಲದೆ ಕಲ್ಲಾದ ಅಹಲ್ಯೆಯಂತಹ ಹೆಣ್ಣುಗಳ ಪರಿವೆ ಮರೆಯಬಹುದು. ಯಶಸ್ಸಿಗಾಗಿ ತ್ಯಜಿಸಿದ ಯಶೋಧರೆಯಂತವಳ ತ್ಯಾಗ ನೆನಪಾಗದಿರಬಹುದು. ನಂಗೇಲಿಯಂತಹ ಹೆಣ್ಣಿನ ಬಲಿದಾನ ಕಾಡದೇ ಇರಬಹದು.  ರವೀಂದ್ರನಾಥ ಠಾಗೋರ್ ಅವರ ಚಂದ್ರ, ನಂದಿನಿ, ಮೃಣಾಲ್, ಬಿಂದು ಇವರ ವೈಚಾರಿಕ,  ಸಾಂಸ್ಕೃತಿಕ ಪ್ರಜ್ಞೆಯನ್ನು ಕಳೆದುಕೊಳ್ಳಬಹುದು. ಅಮೃತಾ ಪ್ರೀತಮ್ ಅವರ ದಿಟ್ಟ ಬದುಕು, ವಾರಿಸ್ ಡೇರಿಸ್ ಆಯ್ದುಕೊಂಡ ಜೀವನಮಾರ್ಗ ನಮಗೆ ಸಂಶಯವಾಗಿಯೇ ಉಳಿಯಬಹುದು. ಗಾಂಧಾರಿಯ ಕತ್ತಲೆ, ಶಕುಂತಲೆ ಕಲಿಸುವ ಸ್ವೀಕಾರ, ನಿರಾಕರಣೆಯ ಮುದ್ರೆ ನಮಗೆ ದಕ್ಕದೆ ಜಾರಿಹೋಗಬಹುದು.

ಹಾಗಾಗಿ ಈ ಸಂಕಲನ ಎಲ್ಲರಿಗೂ ಸ್ತ್ರೀ-ಪುರುಷ ಸಂಬಂಧದ ಲಿಖಿತ ಮಾದರಿಯಾಗಿ, ಇತಿಹಾಸವಾಗಿ, ಕಥನವಾಗಿ, ಪ್ರಬಂಧವಾಗಿ, ಲಹರಿಯಾಗಿ ಸಿಕ್ಕುತ್ತದೆ.

ಓದಿನ ಪರಿಣಾಮವೇನೆಂದರೆ ಬಕುಲದ ಹೂಗಳ ಪರಿಮಳ ಮತ್ತು ಮುಲುಕಾಟ ನಮ್ಮೆದೆಗೂ ದಾಟುವುದು.
ಧನ್ಯವಾದ ಸುಧಾ ಆಡುಕಳ ಮೇಡಂ ಮತ್ತು ‘ಬಹುರೂಪಿ’.

‍ಲೇಖಕರು avadhi

July 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: