
ಸಹಜ ಸಾಗುವಳಿಯ ಹೊಸ ಸಂಚಿಕೆ ಮಾರುಕಟ್ಟೆಯಲ್ಲಿ.
ಸಂಚಿಕೆಯ ಒಂದು ಲೇಖನ ’ಅವಧಿ’ಓದುಗರಿಗಾಗಿ :
ಎರೆಹುಳು ಕೀಟನಾಶಕ ವಿಷವನ್ನು ತೊಡೆದು ಹಾಕುತ್ತದೆ
ಫ್ರೆಂಚ್ ಮತ್ತು ಡ್ಯಾನಿಷ್ ಸಂಶೋಧಕರ ಪ್ರಕಾರ, ಮಾಲಿನ್ಯಮಯ ಮಣ್ಣಿನಲ್ಲಿ ಮನೆಮಾಡುವ ಎರೆಹುಳುಗಳು ಗಮನಾರ್ಹ ರೀತಿಯಲ್ಲಿ ತಮ್ಮಿಂದ ಕೀಟನಾಶಕ ವಿಷವನ್ನು ತೊಡೆದುಹಾಕುತ್ತವೆ. ಅವರು ನಡೆಸಿದ ಅಧ್ಯಯನದ ಪ್ರಕಾರ, ರಾಸಾಯನಿಕ ಹೊಲಗಳಲ್ಲಿ ಶಿಲೀಂಧ್ರನಾಶಕಗಳಿಗೆ ತುತ್ತಾದ ಎರೆಹುಳುಗಳು ಸಾವಯವ ಜಮೀನುಗಳಲ್ಲಿ ಇರುವ ಎರೆಹುಳುಗಳಿಗಿಂತ ಹೆಚ್ಚು ಕಷ್ಟ ಅನುಭವಿಸುತ್ತವೆ. ಓಪುಸ್ ಎನ್ನುವ ಶಿಲೀಂದ್ರನಾಶಕದಲ್ಲಿರುವ ಇಪೊಕ್ಸಿಕೊನಜೋಲ್ ಎನ್ನುವ ಪದಾರ್ಥಕ್ಕೆ ಒಡ್ಡಲ್ಪಟ್ಟ ಎರೆಹುಳುಗಳು, ಆ ರಾಸಾಯನಿಕದಲ್ಲಿನ ವಿಷವನ್ನು ತೊಡೆದು ಹಾಕಲು ಸಮರ್ಥವಾಗಿದ್ದವು, ಆದರೆ ಅವುಗಳ ಗಾತ್ರ ಸಾವಯವ ಹೊಲಗಳಲ್ಲಿ ಇರುವ ಎರೆಹುಳುಗಳಿಗಿಂತ ಅರ್ಧದಷ್ಟಿತ್ತು. ಸಾವಯವ ಹೊಲದಲ್ಲಿ ಅವುಗಳ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಿತ್ತು.
ಎರೆಹುಳುಗಳು ಅನೇಕ ಮಹತ್ವದ ಪರಿಸರ ಸೇವೆಗಳನ್ನು ಒದಗಿಸುತ್ತವೆ. ಮಣ್ಣಿನ ಸರಂದ್ರತೆಯನ್ನು ಹೆಚ್ಚಿಸುವುದರಿಂದ ಹಿಡಿದು ಮಣ್ಣಿನ ಒಳಗಡೆ ಬೇರುಗಳ ಬೆಳವಣಿಗೆಗೆ ಕಾಲುವೆಗಳನ್ನು ನಿರ್ಮಿಸುವವರೆಗೆ ಇದರ ಹರಹು ಇದೆ.
ಇಪ್ಪತ್ತು ವರ್ಷಗಳಿಂದ ರಾಸಾಯನಿಕ ಕೃಷಿ ಮಾಡುತ್ತಿರುವ ಹೊಲಗಳು ಮತ್ತು ಮತ್ತು ಕಳೆದ 20 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಹೊಲಗಳನ್ನು ತೆಗೆದುಕೊಂಡು ಇವುಗಳಿಗೆ ಎರೆಹುಳುಗಳು ಹೇಗೆ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಅಧ್ಯಯನದಲ್ಲಿ ಹೋಲಿಕೆ ಮಾಡಲಾಯಿತು. ಇಪೊಕ್ಸಿಕೊನಜೋಲ್ನ ಪ್ರಭಾವಕ್ಕೆ ಒಳಗಾದ ಎರೆಹುಳುವಿನ ಪಚನ ಕ್ರಿಯೆಯಲ್ಲಿ ಆಗುವ ವ್ಯತ್ಯಾಸಗಳನ್ನು ಸಂಶೋಧಕರು ಸೂಕ್ಷ್ಮವಾಗಿ ಅಧ್ಯಸಿಸಿದರು.
ಸಂಶೋಧಕರಿಗೆ ಕಂಡುಬಂದ ಪ್ರಕಾರ, ಶಿಲೀಂಧ್ರನಾಶಕವು ಎರೆಹುಳುಗಳ ಪಚನಕ್ರಿಯೆಯನ್ನು ವೇಗಗೊಳಿಸಿತು. ಹೊಂದಾಣಿಕೆ ಮಾಡಿಕೊಂಡ ಮತ್ತು ಹೊಂದಾಣಿಕೆ ಮಾಡಿಕೊಂಡಿಲ್ಲದ ಎರಡೂ ಎರೆಹುಳುಗಳಲ್ಲೂ ಇದು ಕಂಡು ಬಂತು. ಹೊಂದಾಣಿಕೆ ಮಾಡಿಕೊಂಡಿಲ್ಲದ ಎರೆಹುಳುಗಳಲ್ಲಿ ಅವುಗಳ ಶಕ್ತಿ ಸಂಗ್ರಹವಾದ ಗ್ಲೈಕೊಜಿನ್ ಬಹುಬೇಗ ಬಳಕೆಯಾಗಿ ಖಾಲಿಯಾಗಿದ್ದು ಕಂಡುಬಂತು. ಇದಕ್ಕೆ ವಿರುದ್ಧವಾಗಿ ಹೊಂದಾಣಿಕೆ ಮಾಡಿಕೊಂಡ ಎರೆಹುಳುಗಳಲ್ಲಿ ಅಮೈನೊ ಆಸಿಡ್ಗಳು ಮತ್ತು ಪ್ರೋಟಿನ್ ಅಂಶಗಳು ಹೆಚ್ಚಾದ್ದನ್ನು ನಾವು ನೋಡಿದೆವು ಎಂದು ಅವರು ಹೇಳುತ್ತಾರೆ. ಅಂದರೆ ಇವುಗಳಲ್ಲಿ ವಿಷ ತೊಡೆದು ಹಾಕುವ ಪ್ರಕ್ರಿಯೆ ನಡೆಯುತ್ತಿದ್ದುದ್ದು ಕಂಡು ಬಂತು. ಶಕ್ತಿಯ ಬೇಡಿಕೆಯನ್ನು ಪೂರೈಸಲು ಇವು ತಿನ್ನುವ ಚಟುವಟಿಕೆಯನ್ನು ಹೆಚ್ಚು ಮಾಡಿದ್ದು ಕಂಡು ಬಂತು. ಶಕ್ತಿಯನ್ನು ಅತಿಯಾಗಿ ಬಳಕೆ ಮಾಡುವುದರಿಂದ ಒಟ್ಟಾರೆಯಲ್ಲಿ ಇಡೀ ಎರೆಹುಳು ಸಂತತಿಯ ಮೇಲೆ ಗಂಭೀರವಾದ ಪರಿಣಾಮ ಉಂಟಾಗಿದ್ದು ಕಂಡು ಬಂತು.
‘ಶಿಲೀಂಧ್ರ ನಾಶಕ ಹೊಡೆದ ಮಣ್ಣಿನಲ್ಲಿ ಬದುಕುಳಿಯಲು ಹವಣಿಸುವ ಎರೆಹುಳುಗಳು ತಮ್ಮನ್ನು ತಾವು ವಿಷ ಮುಕ್ತಗೊಳಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಂಡಿವೆ. ತಮ್ಮಲ್ಲಿನ ವಿಷವನ್ನು ತೊಡೆದುಹಾಕಲು ಅವು ತುಂಬಾ ಶಕ್ತಿ ಬಳಸುತ್ತವೆ. ಇದಕ್ಕಾಗಿ ಅವು ದೊಡ್ಡ ಬೆಲೆ ತೆರುತ್ತವೆ. ಈ ಎರೆಹುಳುಗಳು ಮಾಮೂಲಿ ಎರೆಹುಳುಗಳ ಸಾಮಾನ್ಯ ಗಾತ್ರ ತಲುಪಲು ಸಾಧ್ಯವಾಗುವುದಿಲ್ಲ. ಅಲ್ಲದೆ ಶಿಲೀಂದ್ರ ನಾಶ ಹೊಡೆದ ಮಣ್ಣಿನಲ್ಲಿ ಇವುಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ. ಇದಕ್ಕೆ ಕಾರಣವೇನೆಂದು ನೋಡಿದಾಗ, ಅವು ಸಂತಾನೋತ್ಪತ್ತಿ ಮಾಡುವಲ್ಲಿ ಸೋತಿರುವುದು ಕಂಡುಬರುತ್ತದೆ. ಏಕೆಂದರೆ ಅವು ತಮ್ಮನ್ನು ಶಿಲೀಂಧ್ರನಾಶಕ ವಿಷದಿಂದ ಮುಕ್ತಗೊಳಿಸಿಕೊಳ್ಳಲೇ ಎಲ್ಲಾ ಶಕ್ತಿಯನ್ನೂ ಬಳಸಿ ಬಿಡುತ್ತವೆ’ ಎಂದು ಸಂಶೋಧಕರು ಹೇಳುತ್ತಾರೆ.
ಸಾವಯವ ಜಮೀನಿನಲ್ಲಿರುವ ಎರೆಹುಳುಗಳು ಸರಾಸರಿ .6ಗ್ರಾಂ ತೂಕವಿದ್ದರೆ, ರಾಸಾಯನಿಕ ಹೊಲದಲ್ಲಿ ಇರುವ ಎರೆಹುಳುಗಳಿ ಸರಾಸರಿ .3 ಗ್ರಾಂ ತೂಕವಿರುವುದು ಕಂಡು ಬಂದಿದೆ.
ಸಂಶೋಧಕರಿಗೆ ಕಂಡು ಬಂದಿರುವ ಪ್ರಕಾರ, ಹಿಂದಿನ ಅಧ್ಯಯನಗಳ ಪ್ರಕಾರ, ಬೆಳೆಗಳಿಗೆ ಸಿಂಪಡಿಸಿದ 70% ಶಿಲೀಂಧ್ರ ನಾಶಕಗಳು ಆ ಬೆಳೆಗಳಿಗೆ ತಲುಪುವುದಿಲ್ಲ. ಅಂತಿಮವಾಗಿ ಮಣ್ಣಿನಲ್ಲಿ ಸೇರಿಕೊಳ್ಳುತ್ತವೆ. ಈ ರಾಸಾಯನಿಕ ವಿಷಗಳನ್ನು ‘ಸಲಹಿಸಿದಂತೆ ಬಳಸಿದಾಗಲೂ’ ರಾಸಾಯನಿಕ ಪದ್ಧತಿಯ ಕೃಷಿಯಲ್ಲಿ ನಿಸರ್ಗ ಸಹಜವಾದ ಪದ್ಧತಿಗಳ ಮರುಚೇತರಿಕೆಯ ಸಾಮರ್ಥ್ಯ ಹೇಗೆ ದುರ್ಬಲವಾಗುತ್ತಾ ಹೋಗುತ್ತದೆ ಎಂಬುದು ಇಪೊಕ್ಸಿಕೊನಜೋಲ್ ಉದಾಹರಣೆಯಿಂದ ಸಾಬೀತಾಗಿದೆ ಎಂಬುದನ್ನು ಈ ಅಧ್ಯಯನ ತೋರಿಸಿಕೊಡುತ್ತದೆ.
ಎರೆಹುಳುಗಳು ಬಹು ಮಹತ್ವದ ಪರಿಸರ ಸೇವೆಗಳನ್ನು ಒದಗಿಸುತ್ತವೆ. ಮಣ್ಣಿನ ಸರಂದ್ರತೆ ಹೆಚ್ಚು ಮಾಡುವುದು, ಮಣ್ಣನ್ನು ಸಡಿಲ ಮಾಡುವುದು, ಬೇರಿನ ಬೆಳವಣಿಗೆಗೆ ಮಣ್ಣಿನಲ್ಲಿ ಸುರಂಗ ತೋಡಿ ಅನುವು ಮಾಡಿಕೊಡುವುದು, ತಮ್ಮ ಕರುಳಿನ ಮೂಲಕ ಪಚನಗೊಂಡ ಸಾವಯವ ಪದಾರ್ಥ ಹಾದು ಹೋಗುವಾಗ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಉದ್ದೀಪಿಸುವುದು ಇವು ಅನೇಕಾನೇಕ ಉಪಯೋಗಗಳಲ್ಲಿ ಕೆಲವು. ಇತ್ತೀಚಿನ ಕೆಲ ಅಧ್ಯಯನಗಳ ಪ್ರಕಾರ, ಎರೆಹುಳುಗಳು ಮಣ್ಣಿನಲ್ಲಿ ಇಂಗಾಲದ ಡೈ-ಆಕ್ಸೈಡ್ನ್ನು ಹಿಡಿದಿಡುವಲ್ಲಿ ಸಹಾಯ ಮಾಡುತ್ತವೆ.
ಸಾವಯವದ ‘ಮಣ್ಣಿಗೆ ಉಣಿಸು’ ಧೋರಣೆಯು ಮಣ್ಣಿನ ಪರಿಸರ ವ್ಯವಸ್ಥೆಯನ್ನು/ಇಕೋಲಜಿಯನ್ನು ಬಲಗೊಳಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಒತ್ತು ಕೊಡುತ್ತದೆ. ಅಂತರ ರಾಷ್ಟ್ರೀಯ ಸಾವಯವ ಆಹಾರ ಉತ್ಪಾದನಾ ಕಾಯಿದೆ ಪ್ರಕಾರ, ಒಂದು ಸಾವಯವ ಜಮೀನು ಮಣ್ಣಿನ ಫಲವತ್ತತೆ ಹೆಚ್ಚಿಸುವ ರೀತಿಯಲ್ಲಿ ವಿನ್ಯಾಸಗೊಂಡಿರಬೇಕು. ಮಣ್ಣಿಗೆ ಹಾನಿಕಾರಕವಾದ ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ದೂರಮಾಡುವ ಮೂಲಕ, ಸಾವಯವ ಕೃಷಿಯು ಒಂದು ಮಣ್ಣಿನ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಇದು ರೋಗ ಮತ್ತು ಕೀಟ ಬಾಧೆಯಿಂದ ಮತ್ತೆ ಮತ್ತೆ ಪುನಶ್ಚೇತನಗೊಳ್ಳುವ ಮೂಲಕ ಸಸ್ಯಗಳಿಗೆ ಅಪಾರ ಕೊಡುಗೆ ಕೊಡುತ್ತದೆ. ಇದುವರೆಗೆ ನಡೆದಿರುವ ಅಧ್ಯಯನಗಳು ಇದನ್ನು ತೋರಿಸುತ್ತವೆ. ಉದಾಹರಣೆಗೆ, ಸಾವಯವವಾಗಿ ಬೆಳೆದ ಸ್ಟ್ರಾಬೆರ್ರಿ ಹಣ್ಣುಗಳು ಮತ್ತು ಮಣ್ಣು ಆರೋಗ್ಯಪೂರ್ಣವಾಗಿರುತ್ತವೆ. ಪರಿಣಾಮವಾಗಿ ಪರಾಗಸ್ಪರ್ಶ ಪರಿಣಾಮಕಾರಿ ನಡೆಯುತ್ತದೆ. ರೈತರು ಬೆಳೆಗಳ ಇಳುವರಿ ಕಾಪಾಡಿಕೊಳ್ಳಲು ಮಣ್ಣಿಗೆ ಹಾನಿಕಾರಕವಾದ ಕೀಟನಾಶಕಗಳನ್ನು ಹೊಡೆಯಬೇಕಾಗಿಲ್ಲ. 2011ರಲ್ಲಿ ಹೊರಬಂದ ಅಂತರರಾಷ್ಟ್ರೀಯ ಅಧ್ಯಯನವೊಂದು, ರಾಸಾಯನಿಕ ಜಮೀನಿಗಿಂತ ಸಾವಯವ ಜಮೀನು ಎಕರೆಗೆ 200 ಡಾಲರ್ ಹೆಚ್ಚು ಆದಾಯ ತಂದು ಕೊಟ್ಟದ್ದನ್ನು ತೋರಿಸುತ್ತದೆ. ಜೊತೆಗೆ ಮಣ್ಣಿನ ಆರೋಗ್ಯವೂ ಕಾಪಾಡಲ್ಪಟ್ಟಿದೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ.
ಇಕೋವಾಚ್
ಎರೆಹುಳು ಪ್ರಪಂಚದಲ್ಲಿ ವಿಹರಿಸುವ ಜನಪರ ವಿಜ್ಞಾನಿ ಸುಲ್ತಾನ್ ಇಸ್ಮಾಯಿಲ್ ಹೇಳಿದ್ದು :
ಸುಭಾಷ್ ಪಾಳೇಕರ್ ಅವರು ಎರೆಹುಳು ಗೊಬ್ಬರದಲ್ಲಿ ಸೀಸ(ಲೆಡ್) ಇರುತ್ತದೆ, ಯಾರೂ ಎರೆಹುಳು ಗೊಬ್ಬರ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಿರುತ್ತಾರೆ. ಇದು ತಪ್ಪು ಮಾಹಿತಿ. ನೀವು ನೇರಳೆ ಹಣ್ಣು ತಿನ್ನುತ್ತೀರಿ. ಮಾರನೆಯ ದಿವಸ ನಿಮ್ಮ ಮಲ ಕೂಡ ನೇರಳೆ ಬಣ್ಣಕ್ಕೆ ಇರುತ್ತದೆ. ಹಾಗೆಯೇ ನೀವು ಸೀಸ ಇರುವ ಪದಾರ್ಥವನ್ನು ಎರೆಹುಳುವಿಗೆ ತಿನ್ನಿಸಿದರೆ ಅದರೆ ಹಿಕ್ಕೆಯಲ್ಲೂ ಸೀಸದ ಉಳಿಕೆ ಬರಬಹುದು. ಮುದ್ರಣ ಮಾಡುವ ಇಂಕಿನಲ್ಲಿ ಸೀಸ ಇರುತ್ತದೆ. ಮುದ್ರಣ ಮಾಡಿದ ಪತ್ರಿಕೆಯನ್ನು ನೀವು ಎರೆಹುಳುವಿಗೆ ತಿನ್ನಿಸಿದರೆ ಎರೆಗೊಬ್ಬರದಲ್ಲಿ ಸೀಸ ಬರಬಹುದು. ಬ್ಯಾಟರಿ ವೇಸ್ಟ್ ತಿಂದರೆ ಬರಬಹುದು. ಮಾತ್ರವಲ್ಲ, ನೀವು ಕಂಪೋಸ್ಟಿಗೆ ವಿಪರೀತ ವೇಸ್ಟ್ ಪೇಪರ್ ಹಾಕಿದರೆ ಅದರಲ್ಲೂ ಸೀಸದ ಅಂಶ ಬರುತ್ತದೆ. ಪಾಳೇಕರ್ ಜೀವಾಮೃತದ ಬಗ್ಗೆ ಹೇಳುತ್ತಾರೆ. ಅದಕ್ಕೆ ಹಾಕುವ ಬೆಲ್ಲದಲ್ಲಿ ಭಾರದ ಲೋಹಗಳು ಸೇರಿದ್ದರೆ ಜೀವಾಮೃತದಲ್ಲೂ ಅದರ ಶೇಷ ಇರುತ್ತದೆ. ಯಾವುದರ ತಯಾರಿಕೆಯಲ್ಲಿ ಏನು ಪದಾರ್ಥ ಹಾಕಿದ್ದೇವೆ ಎನ್ನುವುದು ಇಲ್ಲಿ ಮುಖ್ಯ. ಎರೆಹುಳುವಿಗೆ ಲೆಡ್ ಆಗಲಿ, ಮೆಲೆಬ್ಡಿಯಂ ಆಗಲಿ ತನ್ನ ದೇಹದಲ್ಲಿ ಉತ್ಪತ್ತಿ ಮಾಡುವ ಸಾಮರ್ಥ್ಯ ಇಲ್ಲ.






0 Comments