
ಸಂಚಿಕೆಯ ಒಂದು ಲೇಖನ ಅವಧಿ ಓದುಗರಿಗಾಗಿ :
ಸತ್ವಹೀನ ಜಂಕ್ ಆಹಾರದ ಬಗ್ಗೆ ನಮಗೆಷ್ಟು ತಿಳಿದಿದೆ?
ಅನಿಲ್ ಕಪೂರ್
‘ಕೃಷಿಯಂತೆ ಆಹಾರ, ಆಹಾರದಂತೆ ಆರೋಗ್ಯ’ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಆಧುನಿಕ’ ರಾಸಾಯನಿಕ ಕೃಷಿಯ ಹೈಬ್ರಿಡ್ /ಅಧಿಕ ಇಳುವರಿ(ಇತ್ತೀಚೆಗೆ ಕುಲಾಂತರಿ) ಬೀಜಗಳ ಪ್ಯಾಕೆಜ್ ಕೃಷಿ ಭೂಮಿಯಂತೆಯೇ ಜನರ ಆರೋಗ್ಯವನ್ನೂ ಹದಗೆಡಿಸಿದ್ದು, ಅಪಾಯದ ಗಂಟೆ ಜೋರಾಗಿ ಹೊಡೆದುಕೊಳ್ಳ್ಳುತ್ತಿದೆ. ಜೊತೆಗೆ ಇಂದು ಹಳ್ಳಿಗಳಲ್ಲೂ ತಲೆ ಎತ್ತುತ್ತಿರುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು, ಬೇಕರಿ ತಿಂಡಿಗಳು ಈ ಅಪಾಯದ ಬೆಂಕಿಗೆ ತುಪ್ಪ ಸುರಿಯುವಂತಿದೆ. ಪತ್ರಿಕೆಯಲ್ಲಿ ಈ ಕುರಿತು ಸಾಕಷ್ಟು ಚರ್ಚಿಸುತ್ತಾ ಬಂದಿದ್ದೇವೆ. ಅನಿಲ್ ಕಪೂರ್ ಅವರ ಈ ಲೇಖನ ಅದಕ್ಕೊಂದು ಸೇರ್ಪಡೆ. ಇದು ಮುಂದಿನ ಸಂಚಿಕೆಗಳಿಗೂ ಮುಂದುವರೆಯುತ್ತದೆ.
ಮೊದಲ ದರ್ಶನ
ನಾನು 24 ವರ್ಷದವನಾಗಿದ್ದಾಗ, ನನಗೆ ತುಂಬಾ ಅಸಿಡಿಟಿ ಆಗಿ ಹೊಟ್ಟೆ ಭಯಂಕರ ಉರಿಯುತ್ತಿತ್ತು. ನಿದ್ದೆ ಮಾಡಲು ಆಗುತ್ತಿರಲಿಲ್ಲ. ನಮ್ಮನೆ ಪಕ್ಕದಲ್ಲೇ ಇದ್ದ ಫ್ಯಾಮಿಲಿ ಡಾಕ್ಟರ್ರನ್ನು ಹೋಗಿ ಕಂಡೆ. ಡಾ|(ಕ್ಯಾಪ್ಟನ್) ಶ್ರೀನಿವಾಸನ್ ಅನ್ನುವ ಆ ಸಜ್ಜನ ನನ್ನನ್ನು ಕೇಳಿದ ಮೊದಲ ಪ್ರಶ್ನೆ, ‘ತುಂಬಾ ಬೇಕರಿ ತಿಂಡಿ ತಿನ್ನುತ್ತೀರೇನು?’. ನನ್ನನ್ನು ಪರೀಕ್ಷಿಸಿದ ಅವರಿಗೆ, ನಾನು ತುಂಬಾ ಬೇಕರಿ ಪದಾರ್ಥ ತಿನ್ನುವ ಬಗ್ಗೆ ಅನುಮಾನವೇ ಇರಲಿಲ್ಲ. ನಾನು ಉತ್ತರಿಸುವ ಮೊದಲೇ, ‘ಮೊದಲು ಬೇಕರಿ ಪದಾರ್ಥ ತಿನ್ನುವುದನ್ನು ಬಿಡಿ’ ಎಂದರು ಎಚ್ಚರಿಸುವಂತೆ. ನಾನು ಪಫ್ಸ್, ಬಿಳಿ ಬ್ರೆಡ್, ಮಫಿನ್ಸ್(ಕಪ್ಪಿನಲ್ಲಿ ಬರುವ ಕೇಕು)ಗಳನ್ನು ತುಂಬಾ ತಿನ್ನುತ್ತಿದ್ದೆ. ಆದರೆ ಬೇಕರಿ ಪದಾರ್ಥಗಳನ್ನು ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದು ಎಂದು ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. ಡಾಕ್ಟರು ಹೇಳಿದಂತೆ ನಾನು ಬೇಕರಿ ತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿದೆ. ಕೆಲ ದಿನಗಳಲ್ಲೇ ನನ್ನನ್ನು ಕಾಡುತ್ತಿದ್ದ ಅಸಿಡಿಟಿ ಮಾಯವಾಯಿತು. ಜಂಕ್ ಆಹಾರದ ಅಪಾಯದ ಮೊದಲ ದರ್ಶನ ನನಗಾದದ್ದು ಹೀಗೆ.
ಜಂಕ್ ಆಹಾರ ಎಂದರೇನು?
ಜಂಕ್ ಅನ್ನುವುದಕ್ಕೆ ‘ಚರಟ, ಕಚಡ, ಸತ್ವಹೀನ, ಅಗ್ಗ, ಬಿಸಾಕುವಂಥದ್ದು’ ಎಂದೆಲ್ಲಾ ಅರ್ಥ ಇದೆ. ಹಾಗಾದರೆ ತಿನ್ನುವ ಆಹಾರವನ್ನು ‘ಜಂಕ್’ ಎಂದು ಕರೆಯುವುದಾದರೂ ಉಂಟೇ? ಕರೆಯುತ್ತಿದ್ದರೆ ಅದು ಬಿಸಾಡುವಂಥದ್ದಾಗಿರುತ್ತದೆಯೇ ಹೊರತು ತಿನ್ನುವಂಥದ್ದಂತೂ ಅಲ್ಲ ಅಲ್ಲವೇ?. ಹೌದು, ಮನುಷ್ಯ ಮಾತ್ರ ಅಲ್ಲ, ಪ್ರಾಣಿಗಳು ಕೂಡ ತಿನ್ನಬಾರದು ಅದನ್ನು.
ಬಹುತೇಕ ಜಂಕ್ ಆಹಾರಗಳು ಪಾಶ್ಚಾತ್ಯ ನಾಗರೀಕತೆಯ ಬಳುವಳಿ. ಫಾಸ್ಟ್ ಫುಡ್ ರೆಸ್ಟೋರೆಂಟ್ಗಳ ಮೂಲಕ ಜನಪ್ರಿಯವಾದಂತವು. ಆದರೆ ಮನೆಯಲ್ಲಿ ಮಾಡಿದ ಕೆಲ ಅಡುಗೆ ಕೂಡ ‘ಜಂಕ್’ ಆಗಬಹುದು. ರಿಫೈನ್ಡ್ ಮಾಡಿದ ಆಹಾರ, ಕಾದ ಎಣ್ಣೆಯಲ್ಲಿ ಆಳವಾಗಿ ಕರಿದ, ಸಂಸ್ಕರಣೆ ಮಾಡಿದ ಆಹಾರಗಳು ಮತ್ತು ಸಂಕಲಕ ರಾಸಾಯನಿಕಗಳನ್ನು(ಬಣ್ಣ, ಸಂರಕ್ಷಕಗಳು, ನಯಸ್ಸು ಮಾಡುವಂಥವು ಇತ್ಯಾದಿ) ಬಳಸಿದ ಆಹಾರಗಳನ್ನು ‘ಜಂಕ್’ ಆಹಾರ ಎನ್ನಬಹುದು. ಬಹುತೇಕ ಸಮಯಗಳಲ್ಲಿ ಮೇಲೆ ಹೇಳಿದ ಮೂರು- ನಾಲ್ಕು ಅಂಶಗಳು ಒಂದೇ ಪದಾರ್ಥಕ್ಕೆ ಅನ್ವಯವಾಗುತ್ತವೆ. ಇದು ಸರ್ವೇ ಸಾಮಾನ್ಯ. ಇವುಗಳನ್ನು ಇನ್ನಷ್ಟು ವಿವರವಾಗಿ ನೋಡೋಣ.

ಆರೋಗ್ಯಪೂರ್ಣ ಆಹಾರವೂ.. ಜಂಕ್ ಆಹಾರವೂ…
‘ಜಂಕ್ ಆಹಾರ’ವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ಮೊದಲು ಆರೋಗ್ಯಪೂರ್ಣ ಆಹಾರ ಯಾವುದು ಎಂದು ಗೊತ್ತಿರಬೇಕಾಗುತ್ತದೆ. ಯಾವ ಆಹಾರವನ್ನು ನಾವು ಹೆಚ್ಚು ಬದಲಾವಣೆ ಮಾಡಲು ಹೋಗದೆ ಅದರ ಸಹಜ ಸ್ಥಿತಿಯಲ್ಲೇ ತಿನ್ನುತ್ತೇವೆಯೋ ಅದು ಆರೋಗ್ಯಪೂರ್ಣ ಆಹಾರ. ಉದಾಹರಣೆಗೆ, ಧಾನ್ಯಗಳ ಹೊರಮೈಯಲ್ಲಿ ಇರುವ ಕವಚ/ಲೇಪನದಲ್ಲಿ ಖನಿಜಗಳು, ವಿಟಮಿನ್ಗಳು ಇರುತ್ತವೆ. ಬಯೋಟಿನ್. ರೈಬೋಫ್ಲೇವಿನ್ ಮತ್ತು ನಿಕೊಟಿನಿಕ್ ಆಸಿಡ್ಗಳಲ್ಲದೆ ನಮ್ಮ ದೇಹವನ್ನು ಒಳಗಿನಿಂದ ಶುದ್ಧಗೊಳಿಸಲು ಸಹಾಯವಾಗುವ ನಾರಿನ ಪದಾರ್ಥಗಳಿರುತ್ತವೆ. ಇದು ದೇಹಾರೋಗ್ಯ ಕಾಪಾಡಲು ಅತ್ಯಗತ್ಯ. ಧಾನ್ಯಗಳನ್ನು ಪಾಲಿಶ್ ಮಾಡದೆ, ಸಂಸ್ಕರಣೆ ಮಾಡದೆ ಅಡುಗೆಗೆ ಬಳಸಿದಾಗ ಅದು ಸತ್ವಯುತವಾಗಿರುತ್ತದೆ. ಇದು ಆರೋಗ್ಯಪೂರ್ಣ ಆಹಾರ.
ರಿಫೈನ್ಡ್ ಆಹಾರಗಳಲ್ಲಿ ಈ ಸತ್ವಗಳನ್ನೆಲ್ಲಾ ತೆಗೆದುಬಿಟ್ಟಿರುತ್ತಾರೆ. ಹೆಚ್ಚಿನ ಪೌಷ್ಟಿಕಾಂಶವೇನೂ ಉಳಿದಿರುವುದಿಲ್ಲ. ಈಗ ಎಲ್ಲೆಲ್ಲೂ ಜನಪ್ರಿಯವಾಗಿರುವ ಬಿಳಿ ಬ್ರೆಡ್ಡನ್ನು 19ನೇ ಶತಮಾನದ ಕೊನೆಯಲ್ಲಿ ಹಂಗರಿಯಲ್ಲಿ ಮೊದಲ ಬಾರಿಗೆ ಬಳಕೆಗೆ ತರಲಾಯಿತು. 1845ರಲ್ಲಿಯೇ ಅಬೆಲ್ ಹೇವುಡ್ ಅನ್ನುವವರು ಒಂದು ಕರಪತ್ರ ಹೊರಡಿಸಿ ಬಿಳಿ ಬ್ರೆಡ್ಡನ್ನು, ‘ಸಾವಿಗೆ ರಹದಾರಿ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಬಿಳಿ ಬ್ರೆಡ್ಡಿಗೆ ಬಳಸುವ ಪದಾರ್ಥಗಳು ಸತ್ವಹೀನವಾಗಿದ್ದು ದೇಹದ ಕಸುವನ್ನು ಕುಗ್ಗಿಸುತ್ತದೆ.
ನಮ್ಮ ಹಿಂದಿನವರು ಸಂಸ್ಕರಣೆ ಮಾಡದ ಪರಿಪೂರ್ಣ ಆಹಾರ ತಿನ್ನುತ್ತಿದ್ದರು. ಈಗ ಸಾಮಾನ್ಯವಾಗಿ ಕಂಡುಬರುತ್ತಿರುವ ಯಾವ ಕಾಯಿಲೆಗಳೂ ಅವರಿಗೆ ಇರಲಿಲ್ಲ. ಇಂಥ ಕಾಯಿಲೆಗಳ ಬಗ್ಗೆ ಅವರು ಕೇಳೇ ಇರಲಿಲ್ಲ. ಇಂದು ಹೊಟೆಲ್ಗಳಲ್ಲಿ, ಬೇಕರಿಗಳಲ್ಲಿ, ಅಂಗಡಿಗಳಲ್ಲಿ ಅತಿಯಾಗಿ ಮಾರಾಟವಾಗುವ (ಮೈದಾ)ರೋಟಿಗಳು, ಬ್ರೆಡ್ಡುಗಳು, ಬನ್ನುಗಳು ಮತ್ತು ಇತರ ಸ್ಟಾರ್ಚ್ ಯುಕ್ತ ಆಹಾರ ಪದಾರ್ಥಗಳೆಲ್ಲಾ ಸತ್ವ ತೆಗೆದ ಬಿಳಿ ಹಿಟ್ಟಿನಿಂದ ಮಾಡಿರುವಂಥವೇ. ಸಾಮಾನ್ಯವಾಗಿ ಜನ ಇವನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇವುಗಳಲ್ಲಿ ಯಾವುದೇ ಪೌಷ್ಟಿಕಾಂಶವಾಗಲೀ, ದೇಹಕ್ಕೆ ಕಸುವು ಕೊಡುವಂಥ ಅಂಶಗಳಾಗಲೀ ಇರುವುದಿಲ್ಲ. ಖನಿಜಗಳು, ವಿಟಮಿನ್ಗಳು ಇಲ್ಲದ ಇಂಥ ಆಹಾರ ಪದಾರ್ಥಗಳನ್ನು ತಿಂದಾಗ ನಮ್ಮ ದೇಹಕ್ಕೆ ಬೇಕಾದ ಕಸುವು ಸಿಗದೆ ತೀವ್ರ ಅಪೌಷ್ಟಿಕತೆ ಉಂಟಾಗುತ್ತದೆ. ಮಲಬದ್ಧತೆ, ಕೀಲು ನೋವು, ಉಸಿರಾಟದ ತೊಂದರೆ, ನ್ಯುಮೊನಿಯ, ಸೈನಸೈಟಿಸ್, ಹೃದಯದ ತೊಂದರೆ, ರಕ್ತ ಹೀನತೆ, ಕ್ಯಾನ್ಸರ್, ಕಾಲು ಊತ, ರಕ್ತದ ಕ್ಯಾನ್ಸರ್, ಮಲ್ಟಿಪಲ್ ಸ್ಲಿರೊಸಿಸ್ ಮತ್ತು ಪಾರ್ಶ್ವವಾಯು ಇವೆಲ್ಲಾ ಜಂಕ್ ಆಹಾರದ ಕಾರಣಕ್ಕೆ ಬರುವಂಥವು.
ಕರಿದ ತಿಂಡಿ ರೋಗಕ್ಕೆ ದಾರಿ
ಆಳವಾಗಿ ಕರಿದ ತಿಂಡಿಳನ್ನು ತಿನ್ನುವುದರಿಂದ ನಾವು ಬಹಳ ಬೇಗ ರೋಗಿಗಳಾಗುತ್ತೇವೆ. ‘ಎಮಲ್ಸಿಫಿಕೇಶನ್’ ಎನ್ನುವ ಪ್ರಕ್ರಿಯೆಯ ಮೂಲಕ ಕೊಬ್ಬಿನ ಪದಾರ್ಥಗಳು(ಎಣ್ಣೆ ಇತ್ಯಾದಿ) ಸಣ್ಣ ಸಣ್ಣ ಚೂರುಗಳಾಗಿ ಒಡೆದು ನೀರಿನಲ್ಲಿ ಕರಗುವ ಸ್ಥಿತಿಗೆ ಬರುತ್ತವೆ. ಇವು ಸುಲಭವಾಗಿ ಜೀರ್ಣವಾಗುತ್ತವೆ. ಆದರೆ ಕೊಬ್ಬಿನ ಪದಾರ್ಥ(ಎಣ್ಣೆ)ವನ್ನು ಕಾಯಿಸಿದಾಗ ಅದು ಎಮಲ್ಸಿಫಿಕೇಶನ್ ಆಗುವ ಸಾಮರ್ಥ್ಯ ಕಳೆದುಕೊಂಡು ಜೀರ್ಣವಾಗದ ಸ್ಥಿತಿಗೆ ಬರುತ್ತದೆ. ಮಾಂಸ ಅಥವಾ ಇನ್ಯಾವುದೇ ಪದಾರ್ಥಗಳನ್ನು ಎಣ್ಣೆಯಲ್ಲಿ ಆಳವಾಗಿ ಕರಿದಾಗ ಅವು ಕೂಡ ಸಂಪೂರ್ಣ ಜೀರ್ಣವಾಗದ ಸ್ಥಿತಿಗೆ ಬರುತ್ತವೆ. ಕರಿದ ಪದಾರ್ಥಗಳನ್ನು ತಿಂದಾಗ ದೇಹಕ್ಕೆ ಯಾವುದೇ ಕಸುವು ದೊರೆಯುವುದಿಲ್ಲ. ಅಲ್ಲದೆ ಕರಿದ ಪದಾರ್ಥಗಳು ನಮ್ಮ ದೇಹದ ಸಹಜ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವುದರಿಂದ ದೇಹ ಕಸುವು ಕಳೆದುಕೊಂಡು ಕ್ರಮೇಣ ರೋಗಗ್ರಸ್ತವಾಗುತ್ತದೆ.
ನಮ್ಮ ಅಡುಗೆ ಮನೆಗಳ ಕಾವಲಿಗಳ ತಳದಲ್ಲಿ, ಸ್ಟವ್ಗಳ ಮೇಲೆ, ಗೋಡೆ, ಎಕ್ಸಾಸ್ಟ್ ಫ್ಯಾನ್ ಹೀಗೆ ಎಲ್ಲೆಂದರಲ್ಲಿ ಗ್ರೀಸ್ ಥರ ಎಣ್ಣೆ ಗಮಟು ಹತ್ತಿಕೊಂಡಿರುತ್ತದೆ. ಅದನ್ನು ಸ್ವಚ್ಚ ಮಾಡಲು ನಾವೆಷ್ಟು ಕಷ್ಟಪಡುತ್ತೇವೆ. ಈಗ ಯೋಚನೆ ಮಾಡಿ, ಕರಿದ ಪದಾರ್ಥಗಳಲ್ಲಿ ಇರುವ ಈ ಎಣ್ಣೆ ಗಮಟು ನಮ್ಮ ದೇಹದೊಳಗಿನ ಸೂಕ್ಷ್ಮ ಅಂಗಗಳ ಮೇಲೆ ಎಂಥ ಪರಿಣಾಮ ಮಾಡಬಹುದು? ಜಿಗುಟಾದ ಎಣ್ಣೆ ಗಮಟನ್ನು ಹೊರಹಾಕುವುದು ದೇಹಕ್ಕೆ ತುಂಬಾ ಕಷ್ಟ.
ಸಂಸ್ಕರಣೆ, ಸಂರಕ್ಷಕ-ಸಂಕಲಕಗಳು
ನಾವು ಯಾವುದೇ ಆಹಾರವನ್ನು ಬಹಳ ದಿನ ಇಡಬೇಕಾದರೆ ಅದನ್ನು ಸರಿಯಾಗಿ ಸಂಸ್ಕರಣೆ ಮಾಡಿರಬೇಕು. ಸಂಸ್ಕರಣೆ ಮಾಡುವಾಗ ಸಂಕಲಕ(ಅಡಿಟಿವ್ಸ್) ಎನ್ನುವ ರಾಸಾಯನಿಕಗಳನ್ನು ಈ ಆಹಾರ ಪದಾರ್ಥಗಳಿಗೆ ಸೇರಿಸುತ್ತಾರೆ. ಆಹಾರ ಪದಾರ್ಥದ ವಾಸನೆ ಉಳಿಸಿಕೊಳ್ಳಲು ಅಥವಾ ಅದರ ರುಚಿ ಹೆಚ್ಚು ಮಾಡಲು ಮತ್ತು ಅದರ ಅಂದವನ್ನು ಹೆಚ್ಚಿಸಲು ಈ ರಾಸಾಯನಿಕಗಳನ್ನು ಬಳಸುತ್ತಾರೆ.
ಇವತ್ತಿನ ದಿನಗಳಲ್ಲಿ ಜನರು ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ರೆಡಿಮೇಡ್ ಆಹಾರಗಳ ಕಡೆಗೆ ಆಕಷರ್ಿತರಾಗುತ್ತಿದ್ದಾರೆ. ರೆಡಿಮೇಡ್ ಆಹಾರ ಪದಾರ್ಥಗಳನ್ನು ಕೆಡದೆ ಇಡಲು, ಅವುಗಳ ವಾಸನೆ ಹಾಳಾಗದಂತೆ ಇಡಲು, ಬೂಸ್ಟು ಹತ್ತದೆ ಇರುವಂತೆ ಇಡಲು ಸಂರಕ್ಷಕ(ಪ್ರಿಸವರ್ೆಟಿವ್ಸ್)ಗಳನ್ನು ಹಾಕುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಇಂಥ 3000 ಸಂರಕ್ಷಕಗಳು ಮತ್ತು ಸಂಕಲಕಗಳು ಲಭ್ಯವಿವೆ.
ಈ ಸಂಕಲಕಗಳನ್ನು ಆ್ಯಂಟಿ ಮೈಕ್ರೋಬಿಯಲ್ ಏಜೆಂಟ್, ಆ್ಯಂಟಿ ಆಕ್ಸಿಡೆಂಟ್ಸ್, ಕೃತಕ ಬಣ್ಣಗಳು, ಕೃತಕ ವಾಸನೆಗಳು, ಚಿಲೇಟಿಂಗ್ ಏಜೆಂಟ್ಗಳು ಮತ್ತು ನಯಸ್ಸಾಗಿ ಮಾಡುವ, ಮಂದ ಮಾಡುವ ರಾಸಾಯನಿಕಗಳು ಹೀಗೆಲ್ಲಾ ವಿಭಾಗಿಸಬಹುದು. ಆ್ಯಂಟಿ ಮೈಕ್ರೋಬಿಯಲ್ ಏಜೆಂಟ್ಗಳಾದ ಉಪ್ಪು, ವಿನೇಗರ್, ಸೋಬರ್ಿಕ್ ಆಸಿಡ್ ಮತ್ತು ಕ್ಯಾಲ್ಸಿಯಂ ಪ್ರೊಪಿಯೊನೇಟ್ ಮುಂತಾದವನ್ನು ಸಾಲಡ್ಗಳಲ್ಲಿ, ಬೇಕರಿ ಪದಾರ್ಥಗಳಲ್ಲಿ, ಚೀಸ್ಗಳಲ್ಲಿ ಮತ್ತು ಬಾಟಲಿ ಉಪ್ಪಿನಕಾಯಿಗಳಲ್ಲಿ ಬಳಸಿರುತ್ತಾರೆ.
ಅಡ್ಡ ಪರಿಣಾಮಗಳು ಮತ್ತು ಅಪಾಯಗಳು
ಈ ಸಂಕಲಕ ರಾಸಾಯನಿಕಗಳು ಆಹಾರ ಪದಾರ್ಥವನ್ನು ಸಂಗ್ರಹಿಸಿಡಲು ಅವಶ್ಯ, ಆದರೆ ಇವು ನಮ್ಮ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮ ಮಾತ್ರ ಗಂಭೀರ. ಮೊಟ್ಟ ಮೊದಲನೆಯದ್ದು ಅಲರ್ಜಿ. ಈ ರಾಸಾಯನಿಕಗಳು ವಿವಿಧ ಥರದ ಅಲರ್ಜಿಗಳನ್ನು ಉಂಟುಮಾಡುತ್ತವೆ. ಕೆಲ ನಿರ್ದಿಷ್ಟ ರಾಸಾಯನಿಕಗಳು ಕೆಲವರ ಮೇಲೆ ತೀವ್ರ ಮತ್ತು ತೀಕ್ಷ್ಣ ಪರಿಣಾಮ ಉಂಟು ಮಾಡುವುದುಂಟು. ಹೈಪರ್ ಆ್ಯಕ್ಟಿವಿಟಿ ಮತ್ತು ಸ್ಪಂದಿಸುವ ಶಕ್ತಿ ಕುಗ್ಗುವುದು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸಂಕಲಕ ರಾಸಾಯನಿಕಗಳಿಂದ ಆಸ್ತಮಾ, ಹೇಜ್ವರಗಳಲ್ಲದೆ ಮೈಮೇಲೆ ಗಂಧೆಗಳು, ವಾಂತಿ, ತಲೆನೋವು, ಎದೆಯಲ್ಲಿ ಬಿಗಿತ, ಕಜ್ಜಿ ಇವೆಲ್ಲಾ ಸಾಮಾನ್ಯವಾಗಿ ತಲೆದೋರುತ್ತವೆ. ರಾಸಾಯನಿಕಗಳು ನಮ್ಮ ದೇಹದಿಂದ ಅಷ್ಟು ಸುಲಭವಾಗಿ ಹೊರಬರುವುದಿಲ್ಲ. ಅವು ಮಾಂಸಖಂಡಗಳಿಗೆ ಕಚ್ಚಿಕೊಂಡು ಅವನ್ನು ನಿಧಾನಕ್ಕೆ ತಿಂದು ಹಾಕುತ್ತವೆ.
ನೀವು ನಿಮ್ಮ ಆರೋಗ್ಯ ಹದಗೆಡಿಸಿಕೊಳ್ಳಲು ಇಷ್ಟಪಡುವುದಿಲ್ಲವಾದರೆ ಸಂಕಲಕ ಮತ್ತು ಸಂರಕ್ಷಕ ರಾಸಾಯನಿಕಗಳನ್ನು ಬಳಕೆ ಮಾಡಿರುವ ಆಹಾರ ಪದಾರ್ಥಗಳನ್ನು ದೂರವಿಡಿ. ಒಂದು ಪ್ಯಾಕ್ ಮಾಡಿದ ಆಹಾರ ಪದಾರ್ಥವನ್ನು ಖರೀದಿಸುವ ಮೊದಲು ನೀವು ಅದರಲ್ಲಿ ಏನೆಲ್ಲಾ ಸೇರಿಸಲಾಗಿದೆ(ಇನ್ಗ್ರೀಡಿಯೆಂಟ್ಸ್) ಎಂದು ನೋಡಬೇಕು. ಕೃತಕ ರಾಸಾಯನಿಕಗಳನ್ನು ಉಪಯೋಗ ಮಾಡಿಲ್ಲದ ಸಾವಯವ ಆಹಾರ ಪದಾರ್ಥಗಳನ್ನು ಮಾತ್ರ ಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಂಸ್ಕರಣೆ ಮಾಡಿದ, ಡಬ್ಬಗಳಲ್ಲಿ ತುಂಬಿಟ್ಟ ಆಹಾರ ಪದಾರ್ಥಗಳಿಗೆ ಮಾರುಹೋಗದೆ ತಾಜಾ ಆಗಿ ತಯಾರಿಸಿದ ಆಹಾರ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಇವು ಸಾಂಬಾರು ಪದಾರ್ಥಗಳಲ್ಲ್, ರಾಸಾಯನಿಕಗಳು
‘ಪ್ರಪಂಚದ ಎಲ್ಲಾ ಕಡೆ ಫಾಸ್ಟ್ಫುಡ್ ಜಾಲವನ್ನು ಹೊಂದಿರುವ ಬಹುರಾಷ್ಟ್ರೀಯ ಕಂಪನಿಗಳ ಆಹಾರ ಪದಾರ್ಥಗಳು ಪ್ರಪಂಚದ ಎಲ್ಲ ಕಡೆಯೂ ಒಂದೇ ರುಚಿ ಮತ್ತು ವಾಸನೆ ಹೊಂದಿರುತ್ತವಲ್ಲ, ಅದು ಹೇಗೆ? ಸಾಂಬಾರು ಪದಾರ್ಥಗಳು ಮತ್ತು ಇತರ ಆಹಾರ ಪದಾರ್ಥಗಳ ವಾಸನೆ ಮತ್ತು ರುಚಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುವುದಿಲ್ಲವೇ?’ ಎಂದು ನನಗೆ ಯಾವಾಗಲೂ ಆಶ್ಚರ್ಯವಾಗುತ್ತಿತ್ತು. ಕೆಲ ಸಮಯದ ಹಿಂದೆ ನಾನು ‘ಫಾಸ್ಟ್ ಫುಡ್ ನೇಷನ್’ ಎನ್ನುವ ಸಿನೆಮಾ ನೋಡಿದೆ. ಕಂಪನಿಗಳು ನಿಜವಾದ ಸಾಂಬಾರು ಪದಾರ್ಥಗಳಿಗೆ ಬದಲಾಗಿ ಅದರದ್ದೇ ರುಚಿ ವಾಸನೆ ಇರುವ ಒಂದು ಕೃತಕ ರಾಸಾಯನಿಕವನ್ನು ಹೇಗೆ ಬಳಸುವುತ್ತವೆ ಎಂದು ಅದರಲ್ಲಿ ತೋರಿಸಿದ್ದರು. ಈ ಕೃತಕ ರಾಸಾಯನಿಕಗಳು ಸಾಂಬಾರು ಪದಾರ್ಥಗಳಿಗಿಂತ ತುಂಬಾ ಅಗ್ಗ, ಬೇಕೆಂದಾಗ ಸಿಗುತ್ತದೆ, ಯಾವ ದೇಶದಲ್ಲಿ ತಿಂದರೂ ಒಂದೇ ವಾಸನೆ ರುಚಿ ಕೊಡುತ್ತದೆಯಾಗಿ ಕಂಪನಿಗಳಿಗೆ ಇದರಿಂದ ತುಂಬಾ ಲಾಭವಿದೆ.
ಜಂಕ್ ಆಹಾರಗಳನ್ನು ಗುರುತಿಸಿಕೊಳ್ಳಿ
ಜಂಕ್ ಆಹಾರಗಳನ್ನೆಲ್ಲಾ ಪಟ್ಟಿ ಮಾಡಲು ಅನೇಕ ಪುಟಗಳು ಬೇಕಾಗುತ್ತವೆ. ತಕ್ಷಣಕ್ಕೆ ಗುರುತಿಸಿಕೊಳ್ಳಬಹುದಾದ ಕೆಲವೆಂದರೆ: ಚಿಪ್ಸ್, ಮಿಕ್ಚರ್, ಬೇಕರಿ ತಿಂಡಿಗಳು, ಸ್ವೀಟ್ಸ್ಗಳು, ಐಸ್ ಕ್ರೀಮ್ಗಳು, ಬಾಟಲಿ ತಂಪು ಪಾನೀಯಗಳು, ಚಾಕೊಲೆಟ್ಗಳು, ಬಿಸ್ಕೆಟ್ಗಳು, ಸಾಸ್ಗಳು, ನಾನ್ಗಳು, ಬಿಳಿ ಅಕ್ಕಿ, ಫ್ರೈಡ್ ರೈಸ್, ವಡೆ, ಬೋಂಡ, ಸಮೋಸ, ಚಾಟ್ಸ್, ಅಂಗಡಿ ಉಪ್ಪಿನಕಾಯಿ ಇತ್ಯಾದಿ. ಸಂಸ್ಕರಿಸಿದ ಮಾಂಸಾಹಾರಗಳಂತೂ ಆರೋಗ್ಯಕ್ಕೆ ಇನ್ನೂ ಹಾನಿಕರ.
ಬಳಸಿದ ಪದಾರ್ಥಗಳೇ ಮಾಯ
ಆರೋಗ್ಯಕರ ರೀತಿಯಲ್ಲಿ ಮಾಡಿದ ಅಡುಗೆಯಲ್ಲಿ ಬಳಸಿದ ಪದಾರ್ಥಗಳು ಕಾಣುವಂತಿರುತ್ತದೆ. ಉದಾಹರಣೆಗೆ, ಇದು ಬದನೆ ಕಾಯಿ ಸಾಂಬಾರು ಎಂದು ನೋಡಿದ ತಕ್ಷಣ ಹೇಳಿಬಿಡಬಹುದು. ನಾನು ಫಾಸ್ಟ್ ಫುಡ್ ಹೋಟೆಲುಗಳಲ್ಲಿ ಹಾಕಿರುವ ಜಾಹಿರಾತಿನ ಚಿತ್ರ ನೋಡಿದಾಗಲೆಲ್ಲಾ ಸ್ನೇಹಿತರಿಗೆ ಹೇಳುತ್ತಿರುತ್ತೇನೆ, ‘ಪಕ್ಕದಲ್ಲಿ ಒಂದು ಮೆಣಸಿನ ಕಾಯಿ ಇಟ್ಟಿರುವುದನ್ನು ಬಿಟ್ಟರೆ ಆ ತಿಂಡಿಗಳಿಗೆ ಹಾಕಿ ಮಾಡಿದ ಬೇರೆ ಯಾವ ಪದಾರ್ಥಗಳು ಅದರಲ್ಲಿ ಕಾಣಿಸುವುದಿಲ್ಲ, ನೋಡಿ’.
ಇಂಥ ಆಹಾರವನ್ನು ಜಂಕ್ ಆಹಾರ ಅನ್ನುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
[ಈ ಡಬ್ಬ ನೋಡಿ. ಮಾವಿನ ಹಣ್ಣಿನ ಹೋಳುಗಳನ್ನು ‘ತಾಜಾ’ ಆಗಿ ಪ್ಯಾಕ್ ಮಾಡಿದ ಡಬ್ಬ. ಡಬ್ಬದ ಮೇಲೆ ‘ಮಾವಿನ ಹಣ್ಣಿನಲ್ಲಿ ‘ವಿಟಮಿನ್ ಎ’ ಅನ್ನು ಸ್ವಾಭಾವಿಕವಾಗಿ ಇರುತ್ತದೆ’ ಎಂದು ಹಾಕಿದೆ. ಇದೇ ಡಬ್ಬದ ಹಿಂಭಾಗದಲ್ಲಿ ಇದರಲ್ಲಿ ಇರುವ ಪದಾರ್ಥಗಳ ಪಟ್ಟಿ ನೋಡಿ. ಇದರಲ್ಲಿ ಇರುವ ವಿಟಮಿನ್ ಎ ಪ್ರಮಾಣ ‘ಸೊನ್ನೆ’ ಎಂದಿದೆ! ಕಂಪನಿಗಳು ಜನರನ್ನು ಆಕರ್ಷಿಸಿ ವಂಚಿಸುವ ರೀತಿ ಹೀಗಿದೆ.- ಚಿತ್ರ ].
(ಹೆಸರಾಂತ ನ್ಯುಟ್ರಿಷನಿಸ್ಟ್ ಡಾ| ಎನ್. ಡಬ್ಲ್ಯು. ವಾಕರ್ ಅವರ ಸ್ಪೂರ್ತಿ)
ಚಂದಾದಾರರಾಗಲು ಇಲ್ಲಿ ಸಂಪರ್ಕಿಸಿ :
ಸಹಜ ಸಾಗುವಳಿ ದ್ವೈಮಾಸಿಕ
ಸಂಪಾದಕಿ: ವಿ. ಗಾಯತ್ರಿ
ವಿನ್ಯಾಸ: ಎಂ.ಆರ್. ಗುರುಪ್ರಸಾದ್
ವಾರ್ಷಿಕ ಚಂದಾ: ಅರವತ್ತು ರೂಪಾಯಿಗಳು
ಇ ಮೇಲ್- icrablr@gmail.com
ದೂರವಾಣಿ- 080- 25283370, 25213104






0 Comments