ಫೋನ್ ಸಿನೆಮಾ ಈ 'ದಿ ಗಿಲ್ಟಿ'

ದಿ ಗಿಲ್ಟಿ: ವೀಕ್ಷಕರನ್ನು ಹುಡುಕಾಟದಲ್ಲಿ ತೊಡಗಿಸುವ ಸಿನಿಮಾ
ಸುಭಾಷ್ ರಾಜಮಾನೆ
ಡೆನ್ಮಾರ್ಕ್ ದೇಶದ ಗುಸ್ತಾವ್ ಮೊಲ್ಲೆರ್ ನಿರ್ದೇಶನದ ಚೊಚ್ಚಲ ಚಲನಚಿತ್ರವಾದ ‘ದಿ ಗಿಲ್ಟಿ’ (೨೦೧೮) ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಸಿನಿಮಾ ರಸಿಕರ ಗಮನ ಸೆಳೆದಿದೆ.
ಇದು ‘ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ’ ವಿಭಾಗದಲ್ಲಿ ಆಸ್ಕರ್‌ಗಾಗಿ ನಾಮನಿರ್ದೇಶನಗೊಂಡಿತ್ತು. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಹನ್ನೊಂದನೆಯ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಪ್ರದರ್ಶನಗೊಂಡಿತ್ತು. ಇದು ಅತಿ ಹೆಚ್ಚು ಪ್ರೇಕ್ಷಕರ ಪ್ರಶಸ್ತಿಗೆ (ಆಡಿಯನ್ಸ್ ಅವಾರ್ಡ್) ಪಾತ್ರವಾಗಿರುವ ಚಲನಚಿತ್ರ.
ಮೊಲ್ಲೆರ್ ‘ಡ್ಯಾನಿಶ್ ಫಿಲ್ಮ್ ಸ್ಕೂಲ್’ನಿಂದ ೨೦೧೫ರಲ್ಲಿ ಪದವಿಧರನಾಗಿ ಹೊರಬಂದವನು. ಡೆನ್ಮಾರ್ಕ್ ನ  ಹೊಸ ತಲೆಮಾರಿನ ನಿರ್ದೇಶಕನಾಗಿ ತನ್ನ ಮೊದಲ ಸಿನಿಮಾದಲ್ಲಿಯೇ ಪ್ರೆಪ್ರೇಕ್ಷಕರು ಉಸಿರು ಬಿಗಿಹಿಡಿದುಕೊಂಡು ಸಿನಿಮಾವನ್ನು ವೀಕ್ಷಿಸುವಂತೆ ಮಾಡುವುದರಲ್ಲಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾನೆ.
ಇಡೀ ಚಲನಚಿತ್ರವು ಟೆಲಿಫೋನ್ ಮೂಲಕ ತುರ್ತು ಸೇವೆಗಳನ್ನು ಒದಗಿಸುವ ಎರಡು ಕೋಣೆಗಳಲ್ಲಿ ಜರುಗುತ್ತದೆ. ಅಲ್ಲಿ ಅಸ್ಗರ್ ಹೋಮ್ (ಜೊಕೋಬ್ ಸೆಡೆರ್‌ಗ್ರೆನ್) ಎಂಬ ಪೊಲೀಸ್ ಅಧಿಕಾರಿಯನ್ನು ಯಾವುದೋ ಒಂದು ಘಟನೆಯ ಕಾರಣದಿಂದ ಹಿಂಬಡ್ತಿಯನ್ನು ನೀಡಲಾಗಿರುತ್ತದೆ. ಟೆಲಿಫೋನ್ ಮೂಲಕ ಜನರಿಗೆ ತುರ್ತು ಸೇವೆಗಳನ್ನು ನೀಡಲು ನಿಯೋಜಿಸಲಾಗಿರುತ್ತದೆ.
ಯಾವುದೋ ವಿಪತ್ತಿನಲ್ಲಿ ಸಿಲುಕಿಕೊಂಡಿರುವ ಇಬೆನ್ ಎಂಬ ಮಹಿಳೆಯೊಬ್ಬಳಿಂದ ಕರೆಯೊಂದು ಆತನಿಗೆ ಬರುತ್ತದೆ. ಆಕೆಯ ಗದ್ಗದಿತ ಧ್ವನಿಯಿಂದ ಗೋಗರೆದು ಅಳುತ್ತಿರುವ ಪರಿಸ್ಥಿತಿಯಿಂದಲೇ ಅಸ್ಗರ್ ಆ ಮಹಿಳೆಯನ್ನು ಅಪಹರಣ ಮಾಡಲಾಗಿದೆ ಎಂಬುದನ್ನು ಗ್ರಹಿಸುತ್ತಾನೆ. ಇಬೆನ್‌ಳ ಮಾಜಿ ಗಂಡನೇ ಆಕೆಯನ್ನು ಅಪಹರಣ ಮಾಡಿದ್ದು ತಿಳಿಯುತ್ತದೆ. ಅಸ್ಗರ್ ಹೆಚ್ಚಿನ ಮಾಹಿತಿಯನ್ನು ಕೇಳಿ ಪಡೆಯುವಷ್ಟರಲ್ಲಿಯೇ ಇಬೆನ್‌ಳ ಕರೆ ಕಡಿತಗೊಳ್ಳುತ್ತದೆ. ಇಬೆನ್ ಮತ್ತೊಮ್ಮೆ ಕರೆ ಮಾಡುವವರೆಗೆ ಆತ ಕಾಯಬೇಕಾಗುತ್ತದೆ. ತಕ್ಷಣಕ್ಕೆ ಆತ ಅದೇ ನಂಬರಿಗೆ ಕರೆ ಮಾಡಿದರೆ ಸ್ವಿಚ್‌ಆಫ್ ಎಂದು ತಿಳಿಯುತ್ತದೆ.
ಈಗ ಆಕೆಯನ್ನು ಪಾರು ಮಾಡಲು ಅಸ್ಗರ್‌ಗೆ ಇರುವ ಏಕೈಕ ಸಾಧನವೆಂದರೆ ಟೆಲಿಫೋನ್ ಮಾತ್ರ. ಇಬೆನ್‌ಳ ಶೋಧ ಕಾರ್ಯಕ್ಕೆ ಆಕೆಯಿಂದ ಬಂದ ಕರೆಯೊಂದೇ ಆಧಾರವಾಗಿದೆ. ಅಸ್ಗರ್ ಆ ಕರೆಯ ಜಾಡನ್ನು ಹಿಡಿದು ಇಬೆನ್ ಇರುವ ಜಾಗವನ್ನು ಹುಡಕಿ ರಕ್ಷಿಸಲು ಕಾರ್ಯ ಪ್ರವೃತ್ತನಾಗುತ್ತಾನೆ. ಇಬೆನ್ ಬದುಕಿ ಉಳಿಯಲು ಆತ ಯಾವ ರೀತಿಯಲ್ಲಿ ಸಹಾಯ ಮಾಡುತ್ತಾನೆ ಎಂಬುದೇ ಚಿತ್ರದ ಮುಖ್ಯ ಕತೆಯಾಗಿದೆ.
ಈ ಡ್ಯಾನಿಶ್ ಸೈಕೋಲಾಜಿಕಲ್ ಥ್ರಿಲ್ಲರ್ ಚಲನಚಿತ್ರದಲ್ಲಿ ನಾವು ತೆರೆಯ ಮೇಲೆ ಅಸ್ಗರ್‌ನನ್ನು ಮಾತ್ರವೇ ಕಾಣುತ್ತೆತ್ತೇವೆ. ಇಬೆನ್‌ಳನ್ನು ಅಪಹರಿಸಿದಾತ ಆಕೆಯ ಜೊತೆಯಲ್ಲಿಯೇ ಇರುವುದರಿಂದ ಆಕೆ ಪೊಲೀಸರಿಗೆ ಕರೆ ಮಾಡುತ್ತಿರುವುದು ಗೊತ್ತಾಗದಂತೆ ನಾಟಕ ಆಡಬೇಕಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಅದನ್ನೆಲ್ಲ ಗ್ರಹಿಸಿಕೊಂಡು ಅಸ್ಗರ್ ಕೂಡ ತನ್ನ ಮಾತಿನ ವರಸೆಯನ್ನು ಬದಲಿಸಬೇಕಾಗುತ್ತದೆ. ಟೆಲಿಫೋನಿನ ಮತ್ತೊಂದು ತುದಿಯಲ್ಲಿರುವ ಇಬೆನ್‌ಳ ಸಂಕಟ, ನೋವು, ತಳಮಳ ಪ್ರತಿಯೊಂದು ಕೂಡ ನಮಗೆ ಅಸ್ಗರ್‌ನೊಂದಿಗೆ ನಡೆಯುವ ಸಂಭಾಷಣೆಯಿಂದ ತಿಳಿಯುತ್ತದೆ. ಎಲ್ಲೋ ದೂರದಲ್ಲಿರುವ ಇಬೆನ್‌ಳ ಸ್ಥಿತಿಗತಿಗಳು ಅಸ್ಗರ್‌ನ ಮುಖದ ಮೇಲಿನ ಭಾವನೆಗಳ ಮೂಲಕ ಪ್ರೇಕ್ಷಕರಿಗೆ ರವಾನೆಯಾಗುತ್ತದೆ. ಅಷ್ಟರ ಮಟ್ಟಿಗೆ ಅಸ್ಗರ್ ಸಿನಿಮಾದ ಕೇಂದ್ರ ಪಾತ್ರವಾಗಿದ್ದಾನೆ.
ಇಡೀ ಸಿನಿಮಾದ ಕತೆಯನ್ನು ಅಸ್ಗರ್ ಮತ್ತು ಇಬೆನ್ ಇವರ ನಡುವಿನ ಸಂವಹನದ ಮೂಲಕವೇ ಪ್ರೇಕ್ಷಕರು ಗ್ರಹಿಸಬೇಕಾಗುತ್ತದೆ. ಹಾಗಾಗಿ ವೀಕ್ಷಕರು ಈ ಸಿನಿಮಾದ ಕಥಾನಕದಲ್ಲಿ ಸಕ್ರಿಯವಾಗಿ ತನ್ಮಯರಾಗುವುದು ಅನಿವಾರ್ಯವೇ ಆಗುತ್ತದೆ. ಆದ್ದರಿಂದ ಇದು ನೋಡುವ ಸಿನಿಮಾವಾಗಿ ಉಳಿಯದೇ ಆಲಿಸುವ ಚಲನಚಿತ್ರವೆಂದು ಮನವರಿಕೆಯಾಗುತ್ತದೆ.
ಸಿನಿಮಾದ ಕತೆ ಹೊಸ ತಿರುವುಗಳನ್ನು ಪಡೆದುಕೊಂಡ ಹಾಗೆಲ್ಲ ಪ್ರೇಕ್ಷಕರ ಕುತೂಹಲದ ಕಂಪನಗಳು ತೀವ್ರವಾಗುತ್ತ ಹೋಗುತ್ತವೆ. ಇಬೆನ್‌ಳಿಗೆ ಆರು ವರುಷದ ಹೆಣ್ಣು ಮಗು ಹಾಗೂ ಅದಕ್ಕೊಂದು ತಮ್ಮನಿರುವುದು ಅಸ್ಗರ್‌ಗೆ ಗೊತ್ತಾಗುತ್ತದೆ. ಆತ ಟೆಲಿಫೋನ್ ಮುಖಾಂತರವೇ ಆ ಮಕ್ಕಳನ್ನು ಮತ್ತು ಇಬೆನ್‌ಳನ್ನು ಕಾಪಾಡುವುದರಲ್ಲಿ ಸಫಲನಾಗುತ್ತಾನೆಯೋ ಇಲ್ಲವೋ ಎನ್ನುವ ಹಲವು ಪ್ರಶ್ನೆಗಳು ಪ್ರೇಕ್ಷಕರ ಮನದಾಳದಲ್ಲಿ ಉದ್ಭವಿಸುತ್ತವೆ.
‘ದಿ ಗಿಲ್ಟಿ’ ಚಲನಚಿತ್ರವು ಮುಖ್ಯವಾಗಿ ಮೂರು ಕಾರಣಗಳಿಂದ ಸಾಮಾಜಿಕವಾಗಿ ಪರಿಣಾಮಕಾರಿ ಸಿನಿಮಾವೆಂದು ಗುರುತಿಸಬಹುದು. ಮೊದಲನೆಯದಾಗಿ, ಇದೊಂದು ಮಾಮೂಲಿಯಾದ ಕ್ರೈಮ್ ಥ್ರಿಲ್ಲರ್ ಸಿನಿಮಾನೇ ಆಗಿದ್ದರೂ ಬಿಗಿಯಾದ ನಿರೂಪಣೆಯನ್ನು ಹೊಂದಿದೆ. ಕತೆಯು ಹೆಜ್ಜೆ ಹೆಜ್ಜೆಗೂ ಅನಿರೀಕ್ಷಿತ ತಿರುವುಗಳನ್ನು ಪಡೆದಾಗಲೆಲ್ಲ ಅವು ಅಥೆಂಟಿಕ್ ಅನಿಸುವಂತಿವೆ.
ಎರಡನೆಯದಾಗಿ, ಚಿತ್ರದಲ್ಲಿ ಟೆಲಿಫೋನ್ ಮೂಲಕ ನಡೆಯುವ ಸಂಭಾಷಣೆಗಳು ಎಲ್ಲಿಯೂ ಸಹ ಅಸಹಜ ಅನಿಸುವುದಿಲ್ಲ. ಆಯಾ ಪಾತ್ರಗಳ ಅಗತ್ಯಕ್ಕೆ ಅನುಗುಣವಾಗಿ ಹಲವು ಬಗೆಯ ಧ್ವನಿ ವಿನ್ಯಾಸಗಳನ್ನು(ಸೌಂಡ್ ಡಿಸೈನ್) ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗಿದೆ. ಚಿತ್ರಕತೆ ಮತ್ತು ಧ್ವನಿ ವಿನ್ಯಾಸಗಳ ಸಂಕಲನವು ಅದ್ಭುತವಾಗಿದೆ.
ಮೂರನೆಯದಾಗಿ, ಪೊಲೀಸ್ ಅಧಿಕಾರಿ ಅಸ್ಗರ್ ಹೋಮ್‌ನ ಪಾತ್ರವೇ ಆಗಿರುವ ಜಾಕೋಬ್ ಸಿಡೆರ್‌ಗ್ರೆನ್‌ನ ಅಭಿನಯವೇ ಸಿನಿಮಾದ ಜೀವಾಳವಾಗಿದೆ. ಕ್ಯಾಮೆರಾ ಆತನ ಮೇಲೆಯೇ ಫೋಕಸ್ ಆಗಿದೆ. ಆದ್ದರಿಂದ ಪ್ರೇಕ್ಷಕರ ನೋಟವು ಆತನ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಪ್ರೇಕ್ಷಕರಿಗೂ ಬೇರೆ ಆಯ್ಕೆಗಳು ಇಲ್ಲದಿದ್ದರೂ ಅವರು ಆಚೀಚೆ ಕದಲದಂತೆ ಆತನ ದೇಹಭಾಷೆ ಇದೆ. ಆದ್ದರಿಂದ ಇದನ್ನು ಜಾಕೋಬ್ ಸಿಡೆರ್‌ಗ್ರೆನ್‌ನ ಸಿನಿಮಾ ಎಂದೇ ಹೇಳಬಹುದಾಗಿದೆ.
ಎಲ್ಲೋ ಸಂಕಷ್ಟದಲ್ಲಿ ಸಿಲುಕಿದವರ ಬಗ್ಗೆ ಒಬ್ಬ ವ್ಯಕ್ತಿಯ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಜೊತೆಯಲ್ಲಿ ಆತನ ಸಂವೇದನಾಶೀಲತೆಯ ಸ್ವರೂಪವನ್ನು ಕೂಡ ಈ ಚಲನಚಿತ್ರದಲ್ಲಿ ನೋಡುತ್ತೇವೆ. ಆತನಿಗೆ ಆ ಕರ್ತವ್ಯದ ಆರಂಭದಲ್ಲಿ ಅಷ್ಟೊಂದು ಆಸಕ್ತಿ ಇದ್ದಂತೆ ಕಾಣುವುದಿಲ್ಲ. ಆದರೆ ಆಕಸ್ಮಿಕವಾಗಿ ಕರೆ ಬಂದಾಗ ಆತನ ಆಸಕ್ತಿ ಕೆರಳಿ ಕರ್ತವ್ಯ ಪ್ರಜ್ಞೆ ಜಾಗೃತವಾಗುತ್ತದೆ.
ಈ ಲೋಕದಲ್ಲಿ ತನ್ನ ಅಗತ್ಯಕ್ಕಾಗಿ ಮತ್ತು ಸಹಾಯಕ್ಕಾಗಿ ಹಾತೊರೆಯುವ ಜೀವಗಳಿವೆ ಎಂಬುದನ್ನು ಅರಿಯುತ್ತಾನೆ. ಆತನ ಎಲ್ಲ ಕ್ರಿಯೆಯು ಊಹಾತ್ಮಕವಾಗಿಯೇ ಸಾಗುತ್ತದೆ. ಆ ಕ್ರಿಯೆಯಲ್ಲಿ ಆತನ ಗ್ರಹಿಕೆ, ಕಲ್ಪನೆ, ಪೂರ್ವಾಗ್ರಹಗಳನ್ನೂ ಕಾಣುತ್ತೇವೆ. ಯಾವುದೇ ವ್ಯಕ್ತಿಯು ತನ್ನದೇಯಾದ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ತೊಡಗಿದಾಗ ಅದರಲ್ಲಿ ತಪ್ಪುಗಳಾಗುವ ಸಾಧ್ಯತೆಗಳೂ ಇರುತ್ತವೆ. ‘ದಿ ಗಿಲ್ಟಿ’ ಚಿತ್ರದಲ್ಲಿ ಅಸ್ಗರ್ ತನ್ನ ಊಹಾತ್ಮಕ ನಿಲುವುಗಳಿಂದ ಎದುರಿಸುವ ಬಿಕ್ಕಟ್ಟುಗಳನ್ನು ಕೂಡ ನೋಡುತ್ತೇವೆ.
‘ದಿ ಗಿಲ್ಟಿ’ ಸಿನಿಮಾದಲ್ಲಿ ಕತೆಯ ಮುನ್ನಡೆಗೆ ಟೆಲಿಫೋನ್ ಒಂದು ಪ್ರಧಾನ ಕೊಂಡಿಯಾಗುತ್ತದೆ. ಇಂತಹದೇ ಸಾಮ್ಯತೆಗಳಿರುವ ಕೆಲವು ಸಿನಿಮಾಗಳು ಈ ಮೊದಲು ಬಂದಿವೆ. ಜೋಯೆಲ್ ಶ್ಯೂಮಾಚರ್ ನಿರ್ದೇಶನದ ‘ಫೋನ್ ಬೂತ್’(೨೦೦೩) ಎಂಬ ಸಿನಿಮಾದಲ್ಲಿ ಪಾತ್ರವೊಂದು ಸಾರ್ವಜನಿಕ ಟೆಲಿಫೋನ್ ಬೂತ್‌ನಿಂದ ತನ್ನ ಹೆಂಡತಿಗೆ ಕರೆ ಮಾಡಿದಾಗ ಆಕೆ ಅಪಾಯದಲ್ಲಿರುವುದು ತಿಳಿಯುತ್ತದೆ. ಅಲ್ಲಿಂದ ಈ ಚಿತ್ರದ ಕತೆಯು ಹಲವು ಬಗೆಯ ಕುತೂಹಲ, ಬೆರಗು, ತಿರುವುಗಳನ್ನು ಪಡೆಯುತ್ತ ಹೋಗುತ್ತದೆ.
ಸ್ಟಿವೆನ್ ನೈಟ್ ನಿರ್ದೇಶನದ ‘ಲಾಕೆ’ (೨೦೧೩) ಚಿತ್ರದಲ್ಲಿ ಏಕೈಕ ಪಾತ್ರವಾದ ಐವಾನ್ ಲಾಕೆ ಎರಡು ಗಂಟೆಗಳ ಕಾಲ ಲಾರಿ ಚಾಲಕನಾಗಿರುವಾಗ ಸುಮಾರು ಮೂವತ್ತಾರು ಫೋನ್ ಕರೆಗಳನ್ನು ಸ್ವೀಕರಿಸುತ್ತಾನೆ. ಈ ಎರಡೂ ಚಲನಚಿತ್ರಗಳ ಕತೆಯಲ್ಲಿ ಟೆಲಿಫೋನ್ ಪ್ರಮುಖ ಪಾತ್ರವಹಿಸಿದೆ. ಆಲ್‌ಫ್ರೆಡ್ ಹಿಚಕಾಕ್‌ನ ಅನೇಕ ಪತ್ತೇದಾರಿ ಕ್ರೈಮ್ ಥ್ರಿಲ್ಲರ್ ಸಿನಿಮಾಗಳಲ್ಲಿ ಟೆಲಿಫೋನ್ ಬಳಕೆಯನ್ನು ಗಮನಿಸಬಹುದಾಗಿದೆ.
ವಿಜಯ್ ಲಾಲ್ವಾನಿ ನಿರ್ದೇಶನದ ‘ಕಾರ್ತಿಕ್ ಕಾಲಿಂಗ್ ಕಾರ್ತಿಕ್’(೨೦೧೦) ಎಂಬ ಹಿಂದಿ ಚಿತ್ರದಲ್ಲಿ ಅತಿಯಾದ ಮಾನಸಿಕ ಖಿನ್ನತೆಗಳಿಂದ ಬಳಲುವ ಪ್ರಧಾನ ಪಾತ್ರವಾದ ಕಾರ್ತಿಕ್ ತನಗೆ ತಾನು ಆತ್ಮವಿಶ್ವಾಸವನ್ನು ಪಡೆಯಲು ಪ್ರತಿದಿನ ಅನಾಮಧೇಯ ಕರೆಯೊಂದನ್ನು ಟೆಲಿಫೋನ್ ಮೂಲಕ ಪಡೆಯುತ್ತಿರುತ್ತಾನೆ.
ಟೆಲಿಫೋನ್ ಕಂಡುಹಿಡಿದ ಸ್ಕಾಟ್ಲೆಂಡ್ ದೇಶದ ಅಲೆಗ್ಸಾಂಡರ್ ಗ್ರಹಾಂ ಬೆಲ್‌ಗೆ ಸಿನಿಮಾ ಜಗತ್ತು ಸಾಕಷ್ಟು ಋಣಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿಯೇ ಸಿನಿಮಾ ಎಂಬ ಮಾಯಾ ಲೋಕವು ಜನ್ಮತಾಳಿತು. ಹಾಗೆಯೇ ವಿಜ್ಞಾನ ಹಾಗೂ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳು ನಡೆದಂತೆಲ್ಲ ಸಿನಿಮಾಗಳ ಕತೆ ಮತ್ತು ನಿರೂಪಣೆಗಳು ಕೂಡ ಬದಲಾಗುತ್ತಿರುತ್ತವೆ. ಈ ನಿಟ್ಟಿನಲ್ಲಿ ‘ದಿ ಗಿಲ್ಟಿ’ ಒಂದು ಪ್ರಯೋಗಶೀಲ ಚಿತ್ರವಾಗಿ ಗಮನಾರ್ಹವಾಗಿದೆ.
ಸಿನಿಮಾ ಎಂಬುದು ದೃಶ್ಯ ಮಾಧ್ಯಮವೇ ಹೌದು. ತೆರೆಯ ಮೇಲೆ ಕತೆಯನ್ನು ಹೇಳಲು ದೃಶ್ಯ ಹಾಗೂ ಚಿತ್ರಿಕೆಗಳು ಅನಿವಾರ್ಯವೇ ಆಗಿರುತ್ತವೆ. ಆದರೆ ಕೆಲವು ನಿರ್ದೇಶಕರು ತೆರೆಯ ಮೇಲೆ ಕತೆಗೆ ಅನಗತ್ಯವಾದ ಮತ್ತು ಪೂರಕವಲ್ಲದ ಸಂಗತಿಗಳನ್ನು ತೋರಿಸುತ್ತ ಪ್ರೇಕ್ಷಕರನ್ನು ಜಡವಾಗಿಸುತ್ತಾರೆ. ಮೊಲ್ಲೆರ್ ಪ್ರಕಾರ ತೆರೆಯ ಮೇಲೆ ತೋರಿಸುವುದೆಲ್ಲ ಸಿನಿಮಾವಲ್ಲ; ನಿಜವಾಗಿಯೂ ಸಿನಿಮಾವೆಂದರೆ ಪ್ರೇಕ್ಷಕರ ಮನದಾಳದಲ್ಲಿ ಅದು ಪುನರ್ ಸೃಷ್ಟಿಯಾಗಬೇಕು; ಆಲೋಚನೆಯ ಅಲೆಗಳನ್ನು ಪ್ರಚೋದಿಸುವುದರ ಮೂಲಕ ಕಥಾನಕದ ಎಳೆಗಳನ್ನು ಪರಸ್ಪರ ಕನೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.

‍ಲೇಖಕರು avadhi

April 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Noor Shamed A S

    ಭಿನ್ನ ಶೈಲಿಯ ಕತೆಗೆ ಹೊಸತನದ ಸ್ಪರ್ಶದೊಂದಿಗೆ ಚಿತ್ರರಸಿಕರಲ್ಲಿ ಈ ಸಿನಿಮಾ ನೋಡುವ ತೀವ್ರತೆ ಹೆಚ್ಚುವಂತೆ ಬರೆದಿದ್ದೀರ ಸುಭಾಷ್ ರಾಜಮಾನೆಯವರೇ, ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: