ಫೋಟೊ

 

ಬುತ್ತಿ ಕಟ್ಟಿಕೊಟ್ಟಿದ್ದ ಹೆಂಡತಿ ಅಷ್ಟೇನು ಕೋಪದವಳಾಗಿರಲಿಲ್ಲ, ಇಪ್ಪತ್ತು ವರ್ಷಗಳ ದಾಂಪತ್ಯದ ಬದುಕು ಅಷ್ಟೇನು ನೆಮ್ಮದಿಯದಾಗಿಲ್ಲದಿದ್ದರೂ ತೀರಾ ನೋವುಗಳನ್ನುಂಡಂತೂ ಬದುಕು ನಡೆಸಿರಲಿಲ್ಲ. ಮದುವೆಯಾದ ಹೊಸತರಲ್ಲಿ ಒಂದಷ್ಟು ಸಿಡುಕು, ಮುನಿಸು ಇದ್ದರೂ… ಬರು ಬರುತ್ತಾ ಎಲ್ಲವೂ ಮಂಜಿನಂತೆ ಕರಗಿ ತಿಳಿಯಾಗಿಬಿಟ್ಟಿತ್ತು. ದೂರದ ಊರು ತೊರೆದು ಹೆಂಡತಿಯೊಟ್ಟಿಗೆ ಮಹಾನಗರ ಸೇರಿ ಏನೆಲ್ಲಾ ಕೆಲಸಗಳ ಪ್ರಯತ್ನಿಸಿ ಕೊನೆಗೆ ಲಾಲ್ ಬಾಗಿನಲ್ಲಿ ಫೋಟೊಗ್ರಾಫರ್ ಆಗಿ ಮಾಡುತ್ತಿದ್ದ ಕೆಲಸ, ಹೊಟ್ಟೆಯನ್ನು ಹಸಿಯಲು ಬಿಟ್ಟಿರುಲಿಲ್ಲ.

ಕಂಠ ಒಡೆದಿದ್ದ ಸ್ಟೀಲ್ ಬಾಕ್ಸಿನೊಳಗೆ ಮೊಸರನ್ನ ಬಿಸಿಲಿಗೆ ಫಳಗುಡುತ್ತಿತ್ತು. ಕರಿಬೇವು ಮತ್ತು ಒಣ ಮೆಣಸಿನಕಾಯಿ ತಿನ್ನುವವರ ಗಮನ ಸೆಳೆಯುವಂತಿದ್ದವು, ಅಲ್ಲಲ್ಲಿ ಸಾಸಿವೆ ಕಾಳುಗಳು. “ಮಧ್ಯಾನ ಜನ ಕಮ್ಮಿ ಇರೋಹಂಗದ. ಯಾಳ್ಡ್ ಗಂಟಿ ಆಗೂದ್ರಾಗ ಲಘೂನ ತಿಂದು ಬರ್ಬೇಕು” ಬ್ಯಾಗಿನೊಳಗಿಟ್ಟಿದ್ದ ಚಮಚವನ್ನು ಬಟ್ಟೆಯಲ್ಲಿ ಒರೆಸಿಕೊಂಡು ಮೊಸರನ್ನ ಗಂಟಲಿಗಿಳಿಸತೊಡಗಿದ. “ಯಾರೋ ಫಾರಿನ್ನೋರು ಇದ್ದಂಗಿದರಾ” ಬಾಕ್ಸಿನ ಮೇಲೆ ಬಟ್ಟೆ ಹೊಚ್ಚಿ ಕ್ಯಾಮೆರಾ ಹಿಡಿದು ಪ್ರವಾಸಿಗರ ಬಳಿ ಬಂದ ನಾಗಣ್ಣನ ಮುಖದಲ್ಲಿ ಇದ್ದಕ್ಕಿದ್ದಂತೆ ಒಂದಷ್ಟು ಮುಗುಳು ನಗು ಗಾಳಿಯಂತೆ ತೇಲಿ ಬಂದುಬಿಟ್ಟಿತು. ಪ್ರವಾಸಿಗರು ತನ್ನ ಪಾಲಿಗೆ ಅನ್ನ ಕೊಡುವ ದೇವರುಗಳು ಅವರ ಮುಂದೆ ಹಳಸಲು ಮುಖ ಮಾಡಿಕೊಂಡು ಹೋಗಿ ಹೇಗೆ ನಿಲ್ಲುವುದು. ಫೋಟೊಗೆ ನಿಲ್ಲುವಾಗ ನಗಲಿಕ್ಕೆ ಹೇಳುವ ಮುಂಚೆ ತನ್ನ ಮುಖದಲ್ಲೂ ನಗು ಇರುವುದು ಒಳ್ಳೆಯದು. ಗಂಟಿಕ್ಕಿಕೊಂಡವರ ಕಡೆ ಜನ ಅಷ್ಟಾಗಿ ತಿರುಗುವುದಿಲ್ಲ.

“ಹೆಲೋ ಸಾರ್, ಒನ್ ಫೋಟೊ ಓನ್ಲಿ ಫಿಫ್ಟಿ ರೂಪೀಸ್, ಬ್ಯೂಟಿಫುಲ್ ಫೋಟೊ ಜಸ್ಟ್ ಫಿಫ್ಟಿ ರೂಪೀಸ್, ಟೇಕ್ ಒನ್ ಫೋಟೊ ಪ್ಲೀಸ್”

ಆ ವಿದೇಶಿಗಳಿಗೆ ಇದೆಲ್ಲವನ್ನು ನೋಡಿ ಸಾಕಾದಂತೆ, ನೋ ನೋ ಎಂದುಕೊಂಡು ಜೋರಾಗಿ ನಡೆದುಕೊಂಡು ಹೋದರು. ಅಲ್ಲೇ ಇದ್ದ ಇನ್ನೊಬ್ಬ ಫೋಟೊಗ್ರಫರ್ ನಜೀರ್ ಅವರ ಹಿಂದೆ ಹಿಂದೆ ಫೋಟೊ ತೆಗೆಸಿಕೊಳ್ಳುವಂತೆ ದುಂಬಾಲು ಬಿದ್ದದ್ದಕ್ಕೆ ಅವರುಗಳಿಗೆ ಏನನ್ನಿಸಿತೋ ಜೋರು ನಡೆದು ಅಲ್ಲೆಲ್ಲಾ ಮರಗಳ ನಡುವೆ ಕಳೆದು ಹೋದರು.

ಬೆಂಗಳೂರು ನೋಡಲು ಕುಟುಂಬ ಸಮೇತರಾಗಿ ಬರುತ್ತಿದ್ದ ಜನ ಕಡಿಮೆಯೆಂದರೂ ಎರಡು ಮೂರು ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಮರವನ್ನು ಅಂಗೈ ಮೇಲೆ ಹಿಡಿದಂತೆ, ಗೋಪುರ ತಲೆ ಮೇಲೆ ಹೊತ್ತಂತೆ. ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡ ಅಪ್ಪಂದಿರು, ಗೊಣ್ಣೆ ಸುರಿಸಿಕೊಂಡು ಅಳುತ್ತಿದ್ದರೂ ಕೂಸಿನ ಕೆನ್ನೆಗೆ ಮುತ್ತಿಕ್ಕಿಕೊಂಡು ಅಮ್ಮಂದಿರು. ಒಮ್ಮೊಮ್ಮೆ ಕುಟುಂಬ ಸದಸ್ಯರು ಜಾಸ್ತಿ ಇದ್ದಾಗ ಅವರುಗಳನ್ನು ಸರಿಯಾಗಿ ನಿಲ್ಲಿಸಿ ನಗಲು ಹೇಳಿ ನಿಲ್ಲಿಸಿ ಫೋಟೊ ತೆಗೆಯುವುದರೊಳಗೆ ಮೈಯೆಲ್ಲಾ ಬೆವೆತು ಅಂಗಿ ತಣ್ಣಗಾಗಿಬಿಡುತ್ತಿತ್ತು. ಒಂದು ಫೋಟೊಗೆ ಇಪ್ಪತ್ತುರೂಪಾಯಿ, ಜನ ಚೌಕಾಸಿ ಮಾಡಿ ಒಮ್ಮೊಮ್ಮೆ ಹದಿನೈದು ರೂಪಾಯಿ ಜೇಬು ಸೇರುತ್ತಿತ್ತು, ಒಂದು ಕ್ಯಾಮೆರಾ ರೀಲಿಗೆ ಎಪ್ಪತ್ತು ಚಿಲ್ಲರೆ ಕೊಟ್ಟು, ಮತ್ತದನ್ನು ತೊಳೆಯುವಲ್ಲಿನ ಖರ್ಚು. ಕೊನೆಗೆ ಮಿಕ್ಕದ್ದು ಅಂದಿನ ಲಾಭ.

ಜನಗಳು ಫೋಟೊ ತೆಗೆಸಿಕೊಂಡು ಮುಂಗಡವಾಗಿ ದುಡ್ಡು ಕೊಡುವಾಗ ‘ಇವನೇನು ದುಡ್ಡು ಇಸ್ಕೊಂಡ್ ಫೋಟೊ ಕೊಡ್ತಾನೊ ಇಲ್ವೊ ಎಂದು ಅನುಮಾನದಿಂದ ನೋಡುತ್ತಿರುವಾಗ, ಗೊತ್ತಾಗಿ “ಸಾರ್, ನಾ ಎಲ್ಲೂ ಹೋಗೂದಿಲ್ರಿ, ಪಕ್ಕದಾಗ ನಮ್ಮನೀ ಐತಿ. ದಿನಾ ಮುಂಜ್ಯಾಲೆದ್ರ ಇಲ್ಲೇ ಕೆಲಸ ಮಾಡುತೀನಿ, ಮೋಸ ಮಾಡಿ ಅನ್ನ ತಿನ್ನಲಿಕ್ಕಾಗ್ತದ”. ಫೋಟೊ ಕೊಟ್ಟ ಮೇಲೆ ದುಡ್ಡು ಕೊಡುತ್ತೀವಂತ ಹೋದ ಎಷ್ಟೋ ಜನಗಳ ಫೋಟೊಗಳ ತನ್ನ ಬಳಿಯೇ ಉಳಿದುಬಿಟ್ಟಿದ್ದವು. ಅವರನ್ನೆಲ್ಲಾ ಹುಡುಕಾಡಿ ಕೊನೆಗೆ ಹರಿದಾಕಲು ಮನಸ್ಸು ಬರದೇ ಇದ್ದಾಗ ಆಲ್ಬಂನಲ್ಲಿ ಸೇರಿಸಿ ಬಂದವರಿಗೆ ತೋರಿಸಲು ಇಟ್ಟಿದ್ದಾಗಿತ್ತು.

ಲಾಲ್ಬಾಗಿನ ಮೇನ್ ಗೇಟಿಂದ ಎಡಕ್ಕೆ ಐನೂರು ಮೀಟರಷ್ಟು ನಡೆದರೆ ಮನೆ. ಸುಮಾರು ವರ್ಷಗಳಿಂದ ಅಲ್ಲೇ ಬಾಡಿಗೆ ಇದ್ದದ್ದು. ಲಾಲ್ಬಾಗಿನ ಸುತ್ತ ಮುತ್ತ ಎಲ್ಲೂ ಇಷ್ಟೊಂದು ಕಡಿಮೆ ದುಡ್ಡಿಗೆ ಮನೆಗಳು ಬಾಡಿಗೆ ಸಿಗಲಿಕ್ಕಿಲ್ಲ. ಓನರ್ರು ಕಿರಾಣಿ ಅಂಗಡಿ ವ್ಯಾಪಾರಿ, ಸುಮ್ಮನೆ  ಖಾಲಿ ಬಿಟ್ಟು ಹಾಳು ಮಾಡುವುದ್ಯಾಕೆಂದು ಬಾಡಿಗೆ ಕೊಟ್ಟಿದ್ದರು ಅದು ಕೇವಲ ಎರಡು ಸಾವಿರಕ್ಕೆ. ಮದುವೆಯಾದ ಎರಡನೆ ವರ್ಷದಲ್ಲಿ ಗರ್ಭ ಧರಿಸಿದ್ದ ಹೆಂಡತಿ ಮಂಜುಳ ಆರೋಗ್ಯದಲ್ಲಿ ತೀರಾ ಏರುಪೇರಾಗಿ ಗರ್ಭಕೋಶವನ್ನೇ ತೆಗೆಸಿಬಿಟ್ಟಿದ್ದರಿಂದ ಮಕ್ಕಳ ಯೋಚನೆ ಕೈಬಿಟ್ಟಿದ್ದರು. ತಮ್ಮೂರಿನ ಪರಿಚಯದವರ ಏಳು ವರ್ಷದ ಮಗುವನ್ನು ಸಾಕಲೆಂದು ತಂದಿಟ್ಟುಕೊಂಡು ಅದು ಹಗಲು ರಾತ್ರಿಯೆನ್ನದೆ ಅಪ್ಪ ಅಮ್ಮಂದಿರನ್ನು ನೆನೆದು ಅಳುತ್ತದೆಂದು ವಾಪಾಸ್ಸು ಬಿಟ್ಟು ಬಂದಾಗಿತ್ತು. “ಬರೋ ರೊಕ್ಕದಾಗ ನಮ್ ಹೊಟ್ಟಿ ತುಂಬಿದ್ರ ಸಾಕಾಗ್ಯಾತಿ ಬುಡ್ರಿ ಹೋಗ್ಲಿ, ಮಕ್ಳು ಹೊಟ್ಟೀಗೆ ಬಟ್ಟೀಗೆ ಓದ್ಸಾಕ ತುಸಾ ರೊಕ್ಕ ಬೇಕಾಕತೇನ. ಅಂಥಾ ಕಾಲಕ್ಕ ಏನಾರೊಂದು ಮಾಡಿದ್ರಾತು.” ಇಂಥಾ ಮಾತುಗಳಲ್ಲೇ ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಂಡಿದ್ದರು.

“ಎಲ್ಲಾರ್ ಫೋಟೊ ತೆಗೀತೀರಿ ನಮ್ ಫೋಟೊ ಒಂದೂ ಗ್ಯಾಡಿ ಮ್ಯಾಲಿಲ್ಲ, ಒಂದ್ ಫೋಟೊ ತೆಗ್ಸಿ ಹಳ್ಳು ಕಟ್ಸಿ ಹಾಕನ. ಮದುವ್ಯಾಗಂತು ತೆಗಿಸ್ಕೊಳಿಲ್ಲ” ಅಂತ ಎಷ್ಟೋ ಸಲ ರೇಗಿಸಿದ್ದುಂಟು. ಹೌದಲ್ಲಾ ಮನೆಯಲ್ಲಿ ಇಬ್ಬರದೂ ಒಂದು ಫೋಟೊ ಯಾಕಿರಬಾರದು, ಇಷ್ಟು ವರ್ಷಗಳಾದರೂ ತನ್ನ ತಲೆಯಲ್ಲಿ ಇಂಥವೆಲ್ಲಾ ಹೊಳೆಯಲಿಲ್ಲವಲ್ಲ ಹಾಳಾದ್ದು. ಕೈ ಕಾಲು ಹರಡಿದರೆ ತುಂಬಿಬಿಡುತ್ತಿದ್ದ ಕೋಣೆಗೆ ಮೊಳೆ ಹೊಡೆದು ಫೋಟೊ ನೇತು ಹಾಕುವುದು ತುಸು ಕಷ್ಟದ ಕೆಲಸವೇ. “ಮಂಜಿ, ಹೊಟ್ಯಾಗ ಹೆಗ್ಣ ಬುಟ್ಟಂಗಾಗ್ಯಾದ ಲಘೂನ ಉಂಬಾಕ್ ನೀಡು, ನಾ ಮಾರಿ ತೊಕ್ಕೊಂಡ್ ಬರ್ತೇನಿ” ನಾಗಣ್ಣ ಬಚ್ಚಲು ಮನೆಗೆ ಹೋಗಲು ಟವಲ್ಲು ಹೆಗಲಿಗೆ ಹಾಕಿಕೊಂಡ, ಒಲೆ ಮೇಲೆ ಕಾಯುತ್ತಿದ್ದ ಹೆಂಚಿಗೆ ರೊಟ್ಟಿ ಬಡಿದು ಹಾಕಲು ಶುರುವಿಟ್ಟಳು ಮಂಜಮ್ಮ.

ಮಂಜು ಇನ್ನೂ ಕರಗಿರಲಿಲ್ಲ, ತೆಳ್ಳಗೆ ಇಡೀ ಲಾಲ್ಬಾಗಿನ ತುಂಬೆಲ್ಲಾ ಹೊದಿಕೆಯಂತೆ ಕಾಣುತ್ತಿತ್ತು. “ನಾಗು ಭಾಯ್, ಹೊಸ ಕ್ಯಾಮೆರಾಗೆ ತಕ್ಕೊಂಡೆ, ಮಸ್ತ್ ಕೆಲ್ಸ ಮಾಡುತ್ತೆ ಭಾಯ್, ಡಿಜಿಟಲ್ ಕ್ಯಾಮೆರಾ ಇದು, ಫೋಟೊ ತೆಗ್ದು ಅಲ್ಲೇ ತೋರಿಸ್ಬೋದು, ಥೋಡ ದುಡ್ಡುಗೆ ಜಾಸ್ತಿ ಅನ್ನಿಸ್ತದೆ” ಜಮೀರ್ ತನ್ನ ಹೊಸ ಕ್ಯಾಮೆರಾದ ಡೆಮೋ ತೋರಿಸಲು ಖುಷಿಯಿಂದ ಹತ್ತಿರ ಬಂದ. ಫೋಟೊ ತೊಳಿಯೋ ಮುಂಚೆನೇ ಹೆಂಗೆ ಬಂದಿದೆ ಅಂತಾನೂ ಕ್ಯಾಮೆರಾ ಪರದೆಯ ಮೇಲೆ ತೋರಿಸುತಿತ್ತು, ಮತ್ತೊಂದು ವಿಶೇಷ ಅಂದರೆ ಇದಕ್ಕೆ ಪದೇ ಪದೇ ಖರ್ಚು ಮಾಡಿ ರೀಲು ಹಾಕುವ ಅವಶ್ಯಕತೆ ಇರಲಿಲ್ಲ. ಅವರಿಗೆ ಬೇಕಾದ ರೀತಿಯಲ್ಲಿ ಫೋಟೊ ತೆಗೆದು ಹತ್ತು ಐದತ್ತು ನಿಮಿಷಗಳಲ್ಲೇ ಫೋಟೊದ ಪ್ರಿಂಟು ತೆಗೆಸಿಕೊಡಬಹುದಿತ್ತೆಂದು ಕೇಳಿದ ಮೇಲಂತು ನಾಗಣ್ಣ ಎದೆಯಲ್ಲಿ ದುಗುಡ ಶುರುವಾಯ್ತು. ತಾನು ರೀಲು ಕ್ಯಾಮೆರಾದಲ್ಲಿ ಫೋಟೊ ತೆಗೆದು ಗಂಟೆಗಳಾದ ಮೇಲೆ ಅದನ್ನು ತೊಳೆಸಿ ಕೊಡುವವರೆಗೂ ಪ್ರವಾಸಿಗರು ನಿಜವಾಗಿಯೂ ಕಾಯುತ್ತಾರ! ಖಂಡಿತಾ ಇಲ್ಲ.

“ಕೇವಲ್ ಪಾಂಚ್ ಮಿನಿಟ್ ಮೇ ಫೋಟೊ, ಹಿಂಗ್ ಹೋಗಿ ಹಂಗ್ ಬರೋದ್ರಾಗ ಫೋಟೊ, ಓನ್ಲಿ ಫೈವ್ ಮಿನಿಟ್ಸ್” ದೊಡ್ಡದನಿಯಲ್ಲಿ ನಜೀರ್ ಪ್ರವಾಸಿಗರನ್ನು ಆಕರ್ಷಕ ರೀತಿಯಲ್ಲಿ ಕರೆಯತೊಡಗಿದ. ಅಲ್ಲೆಲ್ಲೋ ನಿಂತಿದ್ದ ಜನ ಬಂದು ಗ್ಲಾಸ್ ಹೌಸಿನ ಮುಂದೆ ವಿಧವಿಧವಾಗಿ ಫೋಟೊ ತೆಗೆಸಿಕೊಂಡು, ಕ್ಯಾಮೆರಾದಲ್ಲಿ ತಾವು ಹೇಗೆ ಕಾಣಿಸಿದ್ದೇವೆಂದು ನೋಡಿಕೊಂದು ಖುಷಿಪಟ್ಟು ಅದರ ಕಾಪಿಯನ್ನು ಪಡೆಯುತ್ತಿದ್ದರು. ನಜೀರ್ ನ ಹೊಸ ಡಿಜಿಟಲ್ ಕ್ಯಾಮೆರಾದ ಮುಂದೆ ತನ್ನ ರೀಲು ಕ್ಯಾಮೆರಾ ಹಳತಾಗಿಬಿಟ್ಟಿತ್ತು. ಇಲ್ಲಿದ್ದರೆ ಜನಗಳು ತನ್ನ ಬಳಿ ಬರಲಾರರೆಂದು ಗ್ಲಾಸ್ ಹೌಸಿನ ಇನ್ನೊಂದು ಬದಿಯಲ್ಲಿ ಪ್ರವಾಸಿಗರನ್ನು ಫೋಟೊ ತೆಗೆಸಿಕೊಳ್ಳುವಂತೆ ಕರೆಯತೊಡಗಿದ.

ವಾರವಿಡಿ ಲಾಲ್ಬಾಗಿನ ತುಂಬಾ ಅಲೆದರೂ ವ್ಯಾಪಾರವಾಗುತ್ತಿರಲಿಲ್ಲ. ಫೋಟೊ ತೆಗೆಸಿಕೊಳ್ಳಲು ಜನ ತನ್ನ ಬಳಿ ಬರದೇ ಹೋಗುತ್ತಿದ್ದರು. ಕ್ಯಾಮೆರಾದ ಮೇಲೆ ಸಿಟ್ಟು ಬಂದು, ನೆಲಕ್ಕೆ ಕುಕ್ಕುಬಿಡಲು ಹೋಗುತ್ತಲೆ ಇಪ್ಪತ್ತು ವರ್ಷಗಳ ಕಾಲ ತನ್ನ ಹೊಟ್ಟೆಯನ್ನು ತುಂಬಿಸಿದ ತಾಯಿಯಂಥಾ ಕ್ಯಾಮೆರವಿದು, ಕೋಪ ಅಸಹನೆಗೆ ಬುದ್ದಿಯನ್ನು ಕೊಟ್ಟು ಮೂರ್ಖನಾಗುತ್ತಿದ್ದೇನೆ ಎಂದೆನಿಸಿ. ಸಂಜೆಯಾಗುವುದರೊಳಗೆ ಮನೆಸೇರಿಬಿಟ್ಟ ನಾಗಣ್ಣನ ಕಣ್ಣುಗಳಲ್ಲಿ ಹತಾಶೆ ಎದ್ದು ಕಾಣುತ್ತಿತ್ತು.

“ಯಾಕ್ರಿ, ಈಟು ಬೇಗ ಬಂದೀರಿ, ಏನಾಗ್ಯಾತಿ ಮಕದಾಗ ಕಳಾ ಇಲ್ಲ” ಎನ್ನುತ್ತಾ ಗಂಡನ ಹಣೆ ಮೇಲಿದ್ದ ಬೆವರನ್ನು ಸೆರಗಿಂದ ಒರೆಸಿ ಪಕ್ಕದಲ್ಲಿ ಕೂತ ಮಂಜಮ್ಮನಿಗೆ ಗಂಡನ ಒಳ ದುಗುಡ ಅಷ್ಟಾಗಿ ಅರ್ಥವಾಗಲಿಲ್ಲ.

“ಸಣ್ಣ್ ಮಕಾ ಮಾಡಿಕೊಂಡು ಕುಂದ್ರುಬ್ಯಾಡ್ರಿ, ಭಾಳ ಹಿಂಸೆ ಆಗ್ತದ, ಏನಾಗ್ಯಾತಂತನಾದ್ರು ಬಾಯಿ ಬಿಟ್ಟು ಹೇಳ್ರುಲಾ” ಭುಜಕ್ಕೆ ಮೆಲ್ಲಗೆ ತಿವಿಯುತ್ತಾ ಕೇಳಿದಳು.

“ಮಂಜಿ, ವಾರಿಡೀ ತಿರುಗಿದ್ರು ಸಾವ್ರುಪಾಯ್ ರೊಕ್ಕ ದುಡಿಯಕ್ಕಾಗುವಲ್ಲುದು, ಕೂಗಿ ಕೂಗಿ ಗಂಟ್ಲಾಗ ನೋವು ಬಂದಾತಿ. ಹೊಸಾ ಕ್ಯಾಮ್ರದ್ ಮುಂದ ನಮ್ ರೀಲ್ ಕ್ಯಾಮ್ರ ದುಡಿಮಿಲ್ಲದಂಗಾಗ್ಯಾತಿ, ಏನ್ ಮಾಡಾಕಂತ ತಿಳಿವಲ್ದು” ಕಣ್ಣಲ್ಲಿ ನೀರು ಇಣುಕಿತು.

ಗಂಡನನ್ನು ಎದೆಗೆ ಒತ್ತಿಕೊಂಡವಳೇ ”ಥೂ, ಗಂಡ್ಸು ಅಳುಬಾರ್ದು ಸುಮ್ಮಿರ, ಚಿಕ್ ಮಕ್ಳು ಥರ ಅಳುತಿಯಲ್ಲ. ಥೆಲಿ ಕೆಡಿಸ್ಕೊಬ್ಯಾಡ, ಹೊಸ ಕ್ಯಾಮ್ರ ಯ್ಯೋಟಾಕ್ಕತ್ತಿ?” ತಲೆಗೂದಲೊಳಕ್ಕೆ ಕೈಹಾಕಿ ಸವರುತ್ತ ಕಿಡಕಿಯೊಳಗೆ ಇಣುಕುತ್ತಿದ್ದ ಬೆಳಕಿನೆಡೆ ಮುಖ ಕಣ್ಣು ಹೊರಳಿಸಿದಳು.

“ನಲವತ್ತು ಸಾವ್ರಗುತಾವಂತ ಮಂಜಿ, ಎಲ್ಲಿ ತರ್ಲಿ ಹೇಳು ಆಟು ರೊಕ್ಕ, ಹಳೇದು ಐನೂರ್ ರೂಪಾಯಿಗೆ ಹೋಗೋದ್ ಕಷ್ಟ ಐತಿ” ಅಳು ಮತ್ತಷ್ಟು ಹೆಚ್ಚಾಯಿತು. ನೋವುಗಳು ಎಲ್ಲರಿಗೂ ಒಂದೇ ಗಂಡಸು ಹೆಂಗಸನ್ನದೆ ಅಳಿಸಿಬಿಡುತ್ತವೆ.

ಗಂಡನನ್ನು ಗೋಡೆಗೊರಗಿಸಿ ಒಳಗೆ ಹೋದ ಮಂಜಿ, ಏನನ್ನೋ ಕೈಯಲ್ಲಿ ಹಿಡಿದು ತಂದಳು.

“ಏನ್ ಮಾಡಾಕತ್ತಿ ನೀ? ಸತ್ರು ಮುಟ್ಟಲ್ಲ, ಯಾವ್ ನರಕಕ್ಕ ಕಳುಸ್ಬೇಕಂತ ಅನುಕೊಂಡಿ” ಬೆಚ್ಚಿಬಿದ್ದವನಂತೆ ಬೆಬ್ಬಳಿಸತೊಡಗಿದ.

“ಕೊಳ್ಳಾಗ ನೋಡ್ರಿ, ಖಾಲಿ ಬಿಟ್ಟಿನೇನ, ಅರಿಶ್ಣದ್ ಕೊಂಬು ದಾರ ಐತಿ ಸಾಕು, ಚಿನ್ನಾನ ಆಗ್ಬೇಕಂತೆ ಯಾರಾನ ಹೇಳ್ಯಾರೇನ, ಸುಮ್ನ ತಗೊಂಡ್ ಹೋಗಿ ಆ ಪಕ್ಕದ್ ಬೀದ್ಯಾಗ ಸೇಟು ಅಂಗಡ್ಯಾಗಿಕ್ಕಿ ನಿಮ್ ಕ್ಯಾಮ್ರ ತರ್ರಿ” ಕೊಸರಾಡುತ್ತಿದ್ದ ಗಂಡನ ಕೈ ಹಿಡಿದು ಧೈರ್ಯ ತುಂಬಿದಳು.

“ಎರಡ್ ದಿನದಿಂದ ಯಾಕ್ ಕಾಣ್ಲಿಲ್ಲ ನಾಗಣ್ಣ ಎಲ್ಲಿಗೋಗಿದ್ದೆ?” ನಾಗಣ್ಣ ಹತ್ತಿರಾಗುತ್ತಲೇ ಕೇಳಿದ ನಜೀರ್. ನಾಗಣ್ಣನ ಹೆಗಲಿಗೆ ನೇತುಹಾಕಿಕೊಂಡಿದ್ದ ಹೊಸ ಬ್ಯಾಗು ಕ್ಯಾಮರಾದ್ದೆ ಎಂದು ಗುರುತಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. “ ಕ್ಯಾಮ್ರ ಪ್ರಿಂಟ್ರು ಯಾಳ್ಡು ಸೇರಿ ನಲವತ್ತಾತು” ನಾಗಣ್ಣನ ಮುಖದಲ್ಲಿ ಒಂದಷ್ಟು ಆತ್ಮವಿಶ್ವಾಸ ಮೊಳಕೆಯೊಡೆದಂತೆ ಕಾಣುತಿತ್ತು. ತಾನೂ ನಜೀರನಂತೆ ಐದತ್ತು ನಿಮಿಷಗಳಲ್ಲಿ ಫೋಟೊ ತೆಗೆದುಕೊಡಬಹುದು, ಹೆಚ್ಚು ಜನರ ಮುಖದಲ್ಲಿ ಮಂದಹಾಸ ಮೂಡಿಸಬಹುದು, ಕರ್ರಗಿರುವವರನ್ನು ಬೆಳ್ಳಗೆ, ಬೆಳ್ಳರಿರುವವರನ್ನು ಇನ್ನಷ್ಟು ಬೆಳ್ಳಗೆ ಕಾಣುವಂತೆ ಮಾಡಬಹುದು, ಚೆಂದದ ಬದುಕು ನೋಡಬಹುದು ಇನ್ನಾದರೂ. ಸುತ್ತಲಿನ ಹೂಗಳು ಇನ್ನಷ್ಟು ಚೆಂದ ಅನ್ನಿಸತೊಡಗಿದವು, ಎತ್ತರದ ಮರಗಳ ಇನ್ನಷ್ಟು ಎತ್ತರಕ್ಕೆ, ಛತ್ರಿಗಳಂಥಾ ಮರಗಳು ಇನ್ನಷ್ಟೂ ಅಗಲಕ್ಕೆ ಹರಡಿಕೊಂಡಂತೆ ಅನ್ನಿಸತೊಡಗಿದವು.

“ಆಯ್ಯೋ, ಆ ಕೂಸಿನ್ ಚಡ್ಡಿ ಸರೀಗ್ ಹಾಕ್ರ್ಯವ್ವ, ಬಲ್ಲಮರಿ ಕಾಣಿಸ್ತಾದ, ಯಾರಾನ ನೋಡಿ ಯಾವನ್ ಬಾಡ್ಕೊ ತೆಗ್ದಾ ಫೋಟ ಅಂದ ಬೈಕೊಂಡ್ರ ಏನ್ ಮಾಡ್ಲಿ, ಅದ್ರ ತ್ಯಲಿ ಸರಿ ಮಾಡ್ರವೊ, ಚೆಂದ ಕಾಣ್ತಾನ ರಾಜ್ಕುಮಾರ” ಈತ ಏನು ಮಾತಾಡಿದನೆಂದು ಮಂಗಳೂರಿನ ಕಡೆಯಿಂದ ಬಂದಿದ್ದ ಕುಟುಂಬಕ್ಕೆ ಅರ್ಥವಾಗಲಿಲ್ಲವಾದರೂ ಎಲ್ಲರೂ ನಗುತ್ತಲೇ ಪೋಸು ಕೊಟ್ಟರು.

ಎರಡೆರಡು ಕೂಸುಗಳನ್ನು ಭುಜದ ಮೇಲೆ ಕೂಡಿಸಿಕೊಂಡು ಬರುತ್ತಿದ್ದ ಮನುಷ್ಯನನ್ನು ದೂರದಿಂದಲೇ ನೋಡಿ “ಯಾರೊ ನಮ್ಮೂರ ಕಡ್ಯೋನೆ ಇರ್ಬೇಕು ”

“ಬರ್ರಿ ಬರ್ರಿ ಇಲ್ಲಿ, ಯಾವೂರು. ಯಕ್ಕಡಿಂದ ಬಂದೀರಿ? ಗ್ಲಾಸ್ ಹೌಸ್ ಮುಂದ ಫೋಟೊ ತೆಗಿಸ್ಕೋರಿ? ಬ್ರಿಟೀಷ್ರ ಕಾಲ್ದಾಗ ಮಾಡಿದ್ದು. ದೊಡ್ ದೊಡ್ ಮಂದಿ ಇಲ್ಲಿ ಫೋಟೊ ತೆಗಿಸ್ಕೊಂಡ್ ಹೋಗ್ಯಾರ” ಕೊರಳಲ್ಲಿ ಕ್ಯಾಮೆರ ಹಾಕಿಕೊಂಡು ಅವರನ್ನು ಪ್ರೀತಿಯಿಂದಲೇ ಕರೆದ.

ಫೋಟೊ ತೆಗಿಸ್ಕೋತಿಯೇನಾ? ಬಂದಿದ್ದೊಬ್ಬಾತ ತನ್ನ ಹೆಂಡತಿಯತ್ತ ಕೇಳಿದ

ಫೋಟ-ಗೀಟ ಭಾಳ ದುಬಾರಿಯಾದ್ರ ಬ್ಯಾಡ, ಕೇಳ್ರಿ ಎಷ್ಟಾಕತಂತ

“ಯವ್ವಾ ಭಾಳ ಕೊಡುಬ್ಯಾಡ್ರಿ ಬರಿ ಇಪ್ಪರ್ತುಪಾಯಿ ಕೊಡ್ರಿ ಸಾಕು, ಛೊಲೊ ಫೋಟೊ ತೆಕ್ಕೊಡ್ತೇನ. ಯಾವೂರ್ ನಿಮ್ದು?”

“ಗದಗದ ಸನೇವ್ ವಂದ್ ಹಳ್ಳೀಲಿಂದ ಬಂದೇವ್ಪಾ”

“ಎಲ್ಲಾ ನಮ್ ಕಡ್ಯೋರ್ ಅದೀರಿ ಬರ್ರಿ, ನಿಂತ್ಕೋರಿ. ಚೋಲೊ ಕಾಣೊಹಂಗ ಫೋಟ ತೆಗಿತೇನಿ” ಇಡೀ ಹತ್ತು ಹನ್ನೆರಡು ಜನರಿದ್ದ ಕುಟುಂಬವನ್ನು ನಿಲ್ಲಿಸಲು ಶುರುವಿಟ್ಟ

“ಬೇ ಯವ್ವಾ ನಾಚ್ಕೋಬ್ಯಾಡ ನಿನ್ ಗಂಡನ್ ಪಕ್ಕ ಹತ್ರ ನಿಲ್ಬದೆ…. ಆ…. ಎಲ್ಲಾ ರವ್ವೋಟ್ ನಗ್ರಿ… ರೆಡಿ ಒನ್ ಟೂ ತ್ರೀ…”

********

ಮಧ್ಯಾನ್ಹದಿಂದ ಜೋರು ಮಳೆ, ತಲೆ ಚಿಟ್ಟು ಹಿಡಿದು ಹೋಗುವಷ್ಟು ಸದ್ದು, ತಗಡಿನ ಮನೆಯಾದ್ದರಿಂದ ದುಪ್ಪಟ್ಟು ಸದ್ದು ಕಿವಿಯೊಳಕ್ಕೆ ನುಗ್ಗುತಿತ್ತು. ಚಹಾ ಒಲೆ ಮೇಲೆ ಕುದಿಯುವಾಗ, ನಾಗಣ್ಣ ಕಿಡಕಿಯ ಸರಳುಗಳ ನಡುವಿಂದ ಟಾರು ರೋಡನ್ನೇ ನೋಡುತ್ತಾ ನಿಂತಿದ್ದ. ಅಬ್ಬಾ ಎಷ್ಟು ಧೀರ್ಘ ಸಮಯವಾಯ್ತು ಈ ಮಹಾನಗರಿಗೆ ಬಂದು, ಬರ್ರೋಬ್ಬರಿ ಇಪ್ಪತ್ತೇಳು ವರ್ಷಗಳು, ನೋವು-ಕಷ್ಟಗಳಲ್ಲಿ ಒಂದೇ ಥರ ಕಾಣಿಸುತ್ತಿದ್ದ ಮಹಾನಗರದ ಬದುಕು ಅನಿವಾರ್ಯದ ಬದಲು ಸಹಜವೆಂದು ಅನಿಸಿಬಿಟ್ಟಿತ್ತು. ಇಷ್ಟೊಂದು ವರ್ಷಗಳಿದ್ದರೂ ಅಪರಿಚಿತ ಜನಗಳೇ ತುಂಬಿಹೋಗಿದ್ದರು. ಪರಿಚಯ ಮಾಡಿಕೊಳ್ಳುವಷ್ಟು ಸಮಯ, ಸಹನೆ ಯಾರ್ಗೂ ಇಲ್ಲ. ಅವಳಿಗೆ ಜ್ವರ ಬಂದರೆ ತಾನು, ತನಗೆ ಜ್ವರ ಬಂದಾಗ ಆಕೆ ಪರಸ್ಪರ ಉಪಚರಿಸಿಕೊಂಡು. ನೋವುಗಳ ಉಪಸಂಹರಿಸಿಕೊಳ್ಳುತ್ತಾ ಇಬ್ಬರಿಗೂ ಎಷ್ಟು ಬೇಗ ವಯಸ್ಸಾಗಿಬಿಟ್ಟಿತು. ದೂರದ ಊರಿನ್ ದಾರಿ ಯಾಕೊ ಕೊಂಚ ಮೊಬ್ಬು ಕಾಣುತ್ತಿದೆ. ಸಂಬಂಧಿಕರ ದನಿಗಳು ಕಿವಿಯ ಬಳಿ ಸುಳಿಯುತ್ತಿಲ್ಲ. ಅನ್ನ ಬಟ್ಟೆ ಹೊಂದಿಸಿಕೊಳ್ಳುವ ಹೆಣಗಾಟದಲ್ಲಿ ಮಾಮೂಲಿಗಿಂತಾ ಹೆಚ್ಚೇ ವಯಸ್ಸಾಗಿಬಿಡ್ತು.

ಯಾರೋ ಭುಜ ತಿವಿದ ಹಾಗಾಯ್ತು, ತಾನು ವಾಸ್ತವದಿಂದ ಆಚೆ ಎಲ್ಲೋ ದೂರ ನಿಂತುಬಿಟ್ಟಿದ್ದೆಂದು ನಾಗಣ್ಣಗೆ ಅರಿವಾಯ್ತು

“ರೀ ಚಾ ತಗೋರಿ, ಅಂತೂ ಮಳಿ ಕಮ್ಮಿ ಆತು. ಈ ಬೆಂಗ್ಳೂರು ಮಳಿ ಒಮ್ಮಿ ಶುರಾತು ಅಂದ್ರ ಲಘೂನ ಬಿಡೂದ ಇಲ್ಲ. ಬಟ್ಟಿ ಒಗ್ದಾಕೆ ನಾಕ್ ದಿನ ಆತು, ಇನ್ನಾ ಒಣಗುವಲ್ಲುದು, ಈ ಮಳಿ ಕಾಲ್ದಾಗ ನಂಗಂತೂ ಸಾಕ್ ಸಾಕಾಗ್ಯಾತಿ” ಎಂದು ಕಟ್ಟಿಕೊಂಡಿದ್ದ ಸೆರಗನ್ನು ಕೊಡವಿದಳು.

ಮೋಡಗಳು ಚದುರಿ ಆಕಾಶ ಶುಭ್ರವಾಗಿತ್ತು, ಇವತ್ತು ರಜೆಯ ಕಾರಣ ಲಾಲ್ಬಾಗಿನಲ್ಲಿ ಎಂದಿಗಿಂತಲು ತುಸು ಹೆಚ್ಚು ಜನ ಬರತೊಡಗಿದರು. ಮಳೆಯಲ್ಲಿ ಮಿಂದಿದ್ದ ಮರ-ಗಿಡಗಳು ಹೂ ಬಳ್ಳಿಗಳ ನಡುವೆ ಚೆಂದದ ಜೋಡಿಗಳು, ಎಷ್ಟೊಂದು ಒನಪು. ಪ್ರಫುಲ್ಲತೆಯ ವಾತಾವರಣ ಸೃಷ್ಟಿಯಾದಂತಿತ್ತು. ತಾನೊಬ್ಬ ಫೋಟೊಗ್ರಫರ್ ಮಾತ್ರವೇ, ಇಷ್ಟೆಲ್ಲಾ ಸೌಂದರ್ಯ ಸವೆದು ಕಾಲಹರಣ ಮಾಡುತ್ತಾ ಕುಳಿತರೆ ಹೇಗೆ?

“ಬನ್ನಿ ಮೇಡಮ್, ಬನ್ನಿ ಸರ್…. ಗ್ಲಾಸ್ ಹೌಸ್ ಮುಂದೆ ವಂಡರ್ ಫುಲ್ ಫೋಟೊ ತೆಗಿಸ್ಕೊಳ್ಳಿ, ಕಲರ್ ಫುಲ್ ಫೋಟೊನ ಜೊತೆ ಇಟ್ಕೊಳ್ಳಿ, ಒಂದು ನಿಮಿಷ ಮಾತ್ರ ಪ್ರಿಂಟು ತೆಕ್ಕೊಡೋಕೆ, ಬರೀ ನಲ್ವತ್ರೂಪಾಯಿ ಸಾರ್… ” ಕೈಯಲ್ಲಿಟ್ಟುಕೊಂಡಿದ್ದ ಸಾಂಪಲ್ಲು ಫೋಟೊಗಳನ್ನು ತೋರಿಸುತಿದ್ದ ನಾಗಣ್ಣನ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು, ಫೋಟೊಗಳೂ ಮಾಸಲಾಗಿದ್ದವು.

ತನ್ನನ್ನೇ ನೋಡುತ್ತಾ ಯುವ ಜೋಡಿಯೊಂದು ಇತ್ತಲೇ ಹತ್ತಿರ ಬರುತ್ತಿದ್ದಂತೆ, ಅವರು ಫೋಟೊ ತೆಗಿಸಿಕೊಳ್ಳಬಹುದು ಇನ್ನೇನು ಟೈಂ ವೇಸ್ಟು ಮಾಡುವಂತಿಲ್ಲ ಮೊದಲೇ ಬ್ಯಾಗಿಂದ ಕ್ಯಾಮೆರಾ ಹೊರ ತೆಗೆದಿಟ್ಟುಕೊಳ್ಳಬೇಕೆನ್ನುವಷ್ಟರಲ್ಲೇ ನಗು ಮೊಗದ ಜೋಡಿ ಮೊಬೈಲನ್ನು ಕೈಗಿತ್ತು

“ಅಂಕಲ್ ಇದ್ರಲ್ಲಿ ಒಂದ್ ಫೋಟೊ ತೆಕ್ಕೊಡಿ, ಪ್ಲೀಸ್”

ಖುಷಿಯಿಂದಲೇ ಮೊಬೈಲಿಂದ ಫೋಟೊ ತೆಗೆಯಲು ಮುಂದಾದ, “ಈ ಕಡೆ ಬಾರಮ್ಮ, ಹತ್ರ ನಿಂತ್ಕೊ…. ಸ್ವಲ್ಪ ನಗು.. ಹೇ ಹುಡುಗ ಹೆಗಲ ಮೇಲೆ ಕೈ ಹಾಕಿ ನಿಂತ್ಕೊ”.

“ಹಾಂ ಎಷ್ಟ್ ಚೆಂದ ಕಾಣ್ತಿದ್ದೀರಿ ನೋಡಿ” ಎಂದು ಮೊಬೈಲ್ ಕೈಗಿತ್ತು, ಕ್ಯಾಮೆರಾ ಹಿಡಿಯುತ್ತಿದ್ದಂತೆ, ಧನ್ಯವಾದ ಹೇಳಿ ಹೊರಟುಬಿಟ್ಟರು

‍ಲೇಖಕರು avadhi

November 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Chalam

    ಚೆನ್ನಾಗಿದೆ ಪ್ರವರ..ಚಿಕ್ಕ ಕತೆಯಂತಿದ್ದರೂ ಇಪ್ಪತ್ತು ವರ್ಷಗಳ ಕತೆ ಬೇಗ ಮುಗೀತು.
    ಈ ಕಾಲದಲ್ಲಿ ಎಲ್ಲಾ ಮುಗಿಯುವಂತೆ

    ಪ್ರತಿಕ್ರಿಯೆ
  2. Maithri

    ಬಹಳ ಸೊಗಸಾಗಿ ಮೂಡಿ ಬಂದಿದೆ ಪ್ರವರ.. ಆದ್ರ ಈಗ ನಲವತ್ ರೂಪಾಯಿ ಅಲ್ಲ ಐವತ್ತು ರೂಪಾಯಿ ಆಗೈತಿ 🙂

    ಪ್ರತಿಕ್ರಿಯೆ
  3. Vidyashankar H

    ತಮ್ಮಾ, ಚೋಲೋ ಕತಿ ಬರ್ದೀ…ಸೇಲ್ಫೀ ಜಮಾನಕ್ಕೆ ಈ ಕತಿ ಸರಿಯಾಗಿ ಮೂಡೈತಿ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: