ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಫೇಸ್ ಬುಕ್ ಎಂದರೆ ಯಾರಿಗೆ ಗೊತ್ತಿಲ್ಲ..

ದೀಪ್ತಿ ಭದ್ರಾವತಿ

ನಡೆದಾಡುವ ಪೋರಪೋರಿಯರಿಂದ ಹಿಡಿದು ನಡುವಯಸ್ಸಿನವರು ಇಂದಿನ ದಿನಗಳಲ್ಲಿ ತೀರಾ ಹಚ್ಚಿಕೊಂಡಿರುವ ಸಂಬಂಧವೆಂದರೆ ಬಹುಶ: ಇದೊಂದೆ ಇರಬೇಕು. ಎಳೆನೀರು, ಸೌತೆಕಾಯಿ, ಟೂತ್ ಪೇಸ್ಟು ಹೀಗೇ ಬಾಯಿ ಪಾಠವಾಗಿ ಹೋಗಿರುವ ಹೆಸರುಗಳ ಜೊತೆ ಇದೂ ಒಂದು ಎಂಬುದು ನನ್ನ ಖಾಸಗಿ ಹೇಳಿಕೆ.(ಬೇರೆ ಬೇರೆಯವರಿಗೆ ಅದು ಏನೆಲ್ಲವೂ ಆಗಿರಬಹುದು) ಇಷ್ಟಾದರೂ ನನಗೆ ಫೇಸ್ ಬುಕ್ ಎಂದರೆ ದಿಗಿಲು ಹುಟ್ಟಿಸುವ ಶಬ್ಧ. ಅದ್ಯಾಕೆ ಹಾಗೆ ಎಂದು ಹೇಳುವ ಮೊದಲು. ಇದರ ನನ್ನ ಜೊತೆಗಿನ ನಂಟನ್ನೊಮ್ಮೆ ನಿಮಗೆ ಹೇಳಿಬಿಡುವುದೇ ಲೇಸೇನೋ.

ಈಗ್ಗೆ ಎರಡೋ ಮೂರೋ ವರ್ಷದ ಹಿಂದೆ. (ಸರಿಯಾಗಿ ನೆನಪಿಲ್ಲ) ನನ್ನ ಫೇಸ್ ಬುಕ್ ಅಕೌಂಟ್ ತೆರೆದದ್ದು ದೇವರಾಣೆ ನಾನಲ್ಲ. ನನಗದರ ಗಂಧಗಾಳಿ ಇಂದಿಗೂ ಸರಿಯಾಗಿ ತಿಳಿದಿಲ್ಲ ತಿಳಿಯುವ ಆಸಕ್ತಿಯೂ ಇಲ್ಲ. ಆದರೆ ಈಗ್ಗೆ ಕೆಲವು ವರ್ಷದ ಹಿಂದೆ. ನನ್ನ ಒಂದಿಷ್ಟು ಸ್ನೇಹಿತೆಯರು ಅಯ್ಯೋ ನಿನ್ನ ಫೇಸ್ ಬುಕ್ ಅಕೌಂಟ್ ಇಲ್ಲವಾ ಎನ್ನುತ್ತ ಕನಿಕರಿಸಿ ಕೇಳಿದಾಗ ಮಾತ್ರ facebook eyeನಾನು ಏನೊಂದನ್ನು ಮಾಡಲಾಗದ ರಣಹೇಡಿಯಂತೆ ಅನ್ನಿಸಿತ್ತು. ಅದೇ ಕಾರಣಕ್ಕೆ ನನ್ನ ತಮ್ಮನಿಗೆ ದುಂಬಾಲು ಬಿದ್ದು ಖಾತೆ ತೆರೆದಿದ್ದೆ. ಕಂಪ್ಯೂಟರ್ ನ ಕುರಿತಾದ ನನ್ನ ತಿಳಿಗೇಡಿತನವನ್ನು ಈಗಾಗಲೇ ಅರಿತಿದ್ದ ಅವ. ಅದೆಲ್ಲ ನಿಂಗ್ಯಾಕೆ ಎಂದಿದ್ದ.

ಆದರೂ ಅದು ನನ್ನ ಆತ್ಮಗೌರವದ ಪ್ರಶ್ನೆಯಾದ್ದರಿಂದ ನೋಡೋ ನಿಂಗೆ ಮಾಡಲಿಕ್ಕಾದರೆ ಮಾಡು ಇಲ್ಲದೆ ಇದ್ದರೆ ಯಾರ ಬಳಿಯಲ್ಲಾದರೂ ಖಾತೆ ತೆರೆಸುವ ಎನ್ನುತ್ತ ಥೇಟ್ ದೊಡ್ಡಕ್ಕನ ಪೋಸ್ ಕೊಟ್ಟಿದ್ದೆ. ನನ್ನ ಹಠ ಮತ್ತು ಮೊಂಡತನ ಈ ಎಲ್ಲದರ ಪ್ರತ್ಯಕ್ಷ ಸಾಕ್ಷಿಯಾದ ಅವ ಇನ್ನು ಯಾರ ಬಳಿಯಲ್ಲಾದರೂ ಈಕೆ ದುಂಬಾಲು ಬಿದ್ದು ಖಾತೆ ತೆರೆದು ಆ ನಂತರ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ತಾನೇ ಈ ಕಾರ್ಯ ಮಾಡುವುದು ವಾಸಿ ಎನ್ನಿಸಿಯೋ ಏನೋ ಅವನೇ ಸರಿ ಯಾವ ಹೆಸರಲ್ಲಿ ಇರಬೇಕು ಎನ್ನುತ್ತ ಸ್ವಲ್ಪ ಗದರಿ, ನಾಳೆ ಪ್ರಾಬ್ಲಂ ಆದರೆ ನಂಗೊತ್ತಿಲ್ಲ ಎನ್ನುತ್ತ ಅಂತೂ ಇಂತೂ ನನ್ನನ್ನು ಮುಖ ಪುಸ್ತಕೆಯಲ್ಲಿ ನಮೂದಿಸಿಯೇ ಬಿಟ್ಟ. ಆ ನಂತರ ಸ್ವಲ್ಪ ದಿನ ನಾನು ತೀರಾ ಜಂಭದಿಂದ ಇನ್ನಿತರೆ ಖಾತೆ ತೆರೆಯದ ನನ್ನ ಪಾಪದ ಸ್ನೇಹಿತೆಯರಲ್ಲಿ ನಿಮ್ಮ ಅಕೌಂಟಿಲ್ಲವಾ ಎಂದು ಗತ್ತು ಹಾರಿಸಿದ್ದೆ.

ಇದೆಲ್ಲ ಆಗಿ ಸುಮಾರು ದಿನ ಕಳೆದ ಮೇಲೆಯೂ ನನಗೂ ಆ ನಾಲ್ಕಕ್ಷರದ ಪುಸ್ತಕಕ್ಕೂ ಸಂಬಂಧ ಕೂಡಿ ಬರಲಿಲ್ಲ. ನನ್ನ ತಮ್ಮ ಹೇಳಿದ ಸ್ಟೈಲಿನಲ್ಲೇ ತೆರೆದು ಹಾಗೆ ಒಂದಿಷ್ಟು ಪೋಟೋ ನೋಡಿ ಸುಮ್ಮನಾಗುತ್ತಿದ್ದೆ. ಅದಕ್ಕೆ ಅಪ್ ಲೋಡ್ ಮಾಡುವುದಾಗಲಿ… ಕಮೆಂಟ್ ಹಾಕುವುದಾಗಲಿ ನನ್ನಿಂದ ದೂರವೇ ಉಳಿದ ಸಂಗತಿಯಾಗಿತ್ತು. ಸರಿ ಇನ್ನು ನನ್ನ ಅದೇ ಹಳೆ ಸ್ನೇಹಿತೆಯರು. ಅಯ್ಯೋ ನಿನ್ನ ಅಕೌಂಟ್ ಖಾಲಿನೇ ಇದೆಯಲ್ಲೇ ಎಂದು ಕಿಚಾಯಿಸಿದರು ಅಯ್ಯೋ ಅದ್ಯಾಕೋ ನನಗದರಲ್ಲಿ ಆಸಕ್ತಿ ಬರಲಿಲ್ಲಪ್ಪ ಎನ್ನುತ್ತ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ.

ಆದರೆ ಸತ್ಯದ ಸಣ್ಣ ವಾಸನೆ ಹಿಡಿದ ಅವರುಗಳು ಪೋಟೋ ಸ್ಕ್ಯಾನ್ ಮಾಡಿ ಹಾಕೋದು ಹೇಗೆ, ಪ್ರೋಫೈಲ್ ಪೋಟೋ ಬದಲಾಯಿಸೋದು ಹೇಗೆ ಹೀಗೆ ನೂರೆಂಟು ನನ್ನ ಮುಂದೆಯೇ ಚರ್ಚಿಸಿ ನನ್ನ ತಲೆಗೂ ಅದು ಹೋಗಲಿ ಎಂದೇ ಬಯಸಿದರು. ಆದರೆ ಅದ್ಯಾವುದೂ ಈ ಮೊದ್ದು ತಲೆಗೆ ಹೋಗುವ ವಿಷಯವೇ ಅಲ್ಲ ಎಂಬುದು ಅವರಿಗೆ ತಿಳಿಯಲೇ ಇಲ್ಲ (ಕ್ಷಮಿಸಿ ನನಗೆ ಈಗಲೂ ಅವೆಲ್ಲ ಬರುವುದಿಲ್ಲ) ಸರಿ ನನ್ನ ತಮ್ಮನಿಗೆ ಗಂಟು ಬೀಳುವುದು ಸಾಮಾನ್ಯವಾಯಿತು. ಕೆಲವಷ್ಟು ದಿನ ಅವನೇ ನನ್ನ ಅಕೌಂಟನ್ನು ನೋಡಿಕೊಳ್ಳುತ್ತಿದ್ದ.

ಈ ನಡುವೆ ನಾನು ಏನೇನೋ ಮಾಡಲು ಹೋಗಿ ಗುರುತು ಪರಿಚಯ ಇಲ್ಲದ ಫ್ರೆಂಡ್ ರಿಕ್ವೆಸ್ಟುಗಳಿಗೆಲ್ಲ ಓಕೆ ಕೊಟ್ಟು ಯಾವ ಯಾವುದೋ ಮೆಸೇಜುಗಳು ಬಂದು ಬೀಳಲು ಶುರುವಾದವು. ನನಗೋ ದಿಗಿಲೇ ಬಿದ್ದು ಹೋಯಿತು. ನನ್ನ ತಮ್ಮನೋ ಯಾರ್ಯರನ್ನೋ ಫ್ರೆಂಡ್ ಮಾಡ್ಕೋಬೇಡ, ಹೆಂಗಸರ ಹೆಸರಲ್ಲಿ ಗಂಡಸರು ಪೂಲ್ ಮಾಡ್ತಾರೆ ಎಂದು ಎಚ್ಚರಿಸುತ್ತಲೇ ಇದ್ದ ಆದರೆ ನನ್ನ ಪ್ರಾಥಮಿಕ ತಪ್ಪುಗಳಿಂದಾಗಿ ಒಂದು ದಿನ ನಾನು ನನ್ನ ಅಕೌಂಟಿಗೆ ದಾಖಲಾಗುತ್ತಿದ್ದ ಹಾಗೆಯೇ ಬೆಚ್ಚಿಬೀಳುವಂತೆ ಪೋಟೋ ಒಂದು ಎದುರು ನಿಂತು ಹೆದರಿಸಿಯೇ ಬಿಟ್ಟಿತ್ತು. ಏನೇ ಮಾಡಿದರೂ ಅದನ್ನು ಅಳಿಸಿ ಹಾಕುವುದು ನನ್ನಿಂದ ಸಾಧ್ಯವಾಗಲೇ ಇಲ್ಲ ಈ ನಡುವೆ ನಾನು ಏನೇನೋ ಸರ್ಕಸ್ ಮಾಡಿ ಅದು ನನ್ನ ಇನ್ನುಳಿದ ಸಜ್ಜನರ ಖಾತೆಗೆ ಹೋಗಿಬಿಟ್ಟರೆ ಎಂಬ ಭಯ ಹುಟ್ಟಿಬಿಟ್ಟಿತ್ತು.

facebookನಂಬಿದ್ರೆ ನಂಬಿ ಬಿಟ್ಟರೆ ಬಿಡಿ ನಾನಂತೂ ಅವತ್ತು ನಿಜಕ್ಕೂ ಬೆವೆತು ಹೋಗಿದ್ದೆ. ಥತ್ ಈ ಹಾಳಾದ ಸಹವಾಸ ನನಗ್ಯಾಕೆ ಬೇಕಿತ್ತು ಎಂದು ಹಳಹಳಿಸಿದ್ದೆ. ಮತ್ತೆ ಸತ್ಯನಾರಾಯಣನ ಪಾದವೇ ಗತಿ ಎನ್ನುವ ಹಾಗೆ ಮತ್ತೆ ನನ್ನ ತಮ್ಮನ ಎದುರು ತಪ್ಪು ಮಾಡಿದ ಮಗುವಿನಂತೆ ಗೋಗರೆದಿದ್ದೆ. ಕೊನೆಗೆ ಅವ ಒಂದಿಷ್ಟು ಅದಕ್ಕೇ ಹೇಳಿದ್ದು ಕಲಿಯದೇ ಏನನ್ನು ಮಾಡಬಾರದು ಅಂತ ಎಂದು ಮೃದುವಾಗಿ ರೇಗಿ ಗುರುತು ಪರಿಚಯ ಇಲ್ಲದವರನ್ನು ತಡೆ ಹಿಡಿದು ನನ್ನ ಖಾಸಗಿತನವನ್ನು ಕಾಪಿಟ್ಟುಕೊಳ್ಳುವ ಆಪ್ಷನ್ ಹೇಳಿಕೊಟ್ಟ ಅಲ್ಲಿಗೆ ಬಿದ್ದ ಮೇಲೆ ಎದ್ದು ನಿಲ್ಲುವ ಹಾಗೆ ನಾನು ಹುಷಾರಾದೆ.

ಇದೀಗ ಸುಲಭವಾಗಿ ಅದರೊಡನೆ ಸ್ವಲ್ಪ ಮಟ್ಟಿಗೆ ವರ್ತಿಸಬಲ್ಲೆನಾದರೂ ಅದರ ಆಂತರಿಕ ವಲಯ ಇಂದಿಗೂ ದೂರವೇ ಬಹುಶ: ನನಗದರ ಬಗ್ಗೆ ಹೆಚ್ಚೇನು ಆಸಕ್ತಿ ಇಲ್ಲದೇ ಇರುವುದೇ ಆಗಿರಬೇಕು. ಈಗಲೂ ನನಗದರಲ್ಲಿ ಯಾವುದೇ ಲೇಖನ, ಕವಿತೆ, ಅನಿಸಿಕೆ ಈ ಯಾವುದನ್ನೂ ಹಾಕುವುದಕ್ಕೆ ಬರುವುದಿಲ್ಲ.

ಇಷ್ಟು ಪ್ರಾರಂಭದ ದಿನಗಳ ಆತಂಕಗಳಾದರೆ ಆ ನಂತರ ಅದು ನನ್ನನ್ನು ಮತ್ತಷ್ಟು ಹೆದರಿಸಿ ಇಟ್ಟಿದ್ದು ಬೇರೆಯದೇ ಕಾರಣಕ್ಕೆ. ನೂರೆಂಟು ಕಾರಣಗಳ ನೆವವೊಡ್ಡುತ್ತ ತೀರ ತಡವಾಗಿ ಅಂದರೆ ನನ್ನ ಮೂವತ್ತನೇ ವಯಸ್ಸಿನಲ್ಲಿ ಅಧಿಕೃತವಾಗಿ ಬರವಣಿಗೆಯನ್ನು ಆರಂಬಿಸುವ ಹೊತ್ತಿಗೆ ನನ್ನ ವಯಸ್ಸಿನವರೆಲ್ಲ ಅದೆಷ್ಟೋ ದೂರ ಸಾಗಿ ಏನೆಲ್ಲವನ್ನು ಸಾಧಿಸಿಯಾಗಿತ್ತು. ಅದು ಸಹಜವಾಗಿಯೇ ನನ್ನೊಳಗೆ ಒಂದು ರೀತಿಯಾದಂತಹ ಹಿಂಜರಿಕೆಯನ್ನು ಕೀಳಿರಿಮೆಯನ್ನು ಹುಟ್ಟು ಹಾಕಿತ್ತು ಎಂಬುದು ಸುಳ್ಳಲ್ಲ.

ಅದು ಈಗಲೂ ಒಮ್ಮೊಮ್ಮೆ ನೆರಳಿನಂತೆ ಕಾಡುತ್ತದೆ. ಎಷ್ಟೆಲ್ಲ ಸಮಯ ವ್ಯರ್ಥ ಮಾಡಿದೆನಲ್ಲ ಎನ್ನುವ ಸಣ್ಣ ಸಂಕಟವೂ ಆಕ್ರೋಶವೂ ನನ್ನೊಳಗೆ ಇದ್ದೇ ಇದೆ. ಅದೇ ಕಾರಣವೋ ಏನೋ ಫೇಸ್ ಬುಕ್ ಕವಿತೆಗಳ ಯುಗ ಯಾವಾಗ ಶುರುವಾಯಿತೋ ನನ್ನಲ್ಲಿ ಸಣ್ಣ ಆತಂಕವೊಂದು ಸೃಷ್ಟಿಯಾಗತೊಡಗಿತು. ರಾಶಿ ರಾಶಿ ಬಂದು ಬೀಳುವ ಕವಿತೆಗಳು, ಲೇಖನಗಳು, ಅದರ ಕುರಿತಾಗಿ ನಡೆಯುವ ಚರ್ಚೆಗಳು, ಯಾವುದೋ ಕವಿಗೋಷ್ಟಿಯ, ಕಥಾಕಮ್ಮಟಗಳ ಪೋಟೋಗಳು, ಭಾಷಣಗಳು ಹೀಗೆ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ನೋಡುವಾಗಲೆಲ್ಲ ನಾನು ಅಧೀರಳಾಗತೊಡಗಿದೆ.

ಮನೆ, ಸಂಸಾರ, ಮಗಳು, ಅವಳ ವಿದ್ಯಾಭ್ಯಾಸ, ಆಸ್ಪತ್ರೆ ಎಂಬ 24*7 ಸರ್ಕಾರಿ ಕೆಲಸ ಈ ಎಲ್ಲದರ ನಡುವೆ ಬರೆಯಬೇಕೆಂದುಕೊಂಡಾಗ ವಿಶ್ರಾಂತಿ ಬಯಸುವ ದಣಿದ ದೇಹ ನನ್ನನ್ನು ಒಂದು ರೀತಿಯಾದಂತಹ ಹತಾಶೆಯೆಡೆಗೆ ಕರೆದೊಯ್ಯತೊಡಗಿತು. ಫೇಸ್ ಬುಕ್ ನೋಡಿದ ದಿನವೆಲ್ಲ ನಾನು ಅಶಾಂತಿಯಿಂದ ಚಡಪಡಿಸತೊಡಗಿದೆ. ನಾನೇನು ಬರೆಯುತ್ತಿಲ್ಲವೆಂಬ ಭಾವ ನನ್ನನ್ನು ಇನ್ನಿಲ್ಲದಂತೆ ಹಿಂಸಿಸತೊಡಗಿತು. ಅದು ನನ್ನನ್ನು ತೀವ್ರವಾಗಿ ಹಿಂಸಿಸತೊಡಗಿದ, ಆಪ್ತರಾದ ಹಿರಿಯರೊಬ್ಬರಲ್ಲಿ ವಿಷಯ ಪ್ರಸ್ತಾಪಿಸಿದೆ. ಅವರು ಏನೊಂದು ಹೇಳದೆ ನಿನ್ನನ್ನು ಅಸ್ಥಿರತೆ ಕಡೆಗೆ ಎಳೆದೊಯ್ಯುವ ಇಂತಹ ವಿಷಯಗಳ ಕುರಿತಾದ ಹಂಬಲ ಯಾಕೆ ಬೇಕು ಬಿಟ್ಟುಬಿಡು ಎಂದು ಬಿಟ್ಟರು.

ನನಗೋ ಬೇಡವೆಂದದ್ದು ಮಾಡುವ ಹಠ. ಅಲ್ಲದೆ ಎಷ್ಟೋ ಸ್ನೇಹಗಳನ್ನು ಉಳಿಸಿಕೊಳ್ಳಲು ಇರುವ ಬಹುಮುಖಿ ಸಂವಹನ ಕ್ಷೇತ್ರವೆಂದರೆ ಆಫ್ಕೋರ್ಸ್ ಅದು ಫೇಸ್ ಬುಕ್ ಹೌದೇ ಹೌದು. ಆ ಹಿರಿಯರು ಹಾಗಂದ ಮೇಲೆಯೂ ನಾನು ತೂಗುಯ್ಯಾಲೆಯಲ್ಲಿಯೇ ಇದ್ದೆ. ಕೊನೆ ಕೊನೆಗೆ ಅದು ನನ್ನನ್ನು ಮಾಯಾವಿಯಂತೆ ಇಡಿಯಾಗಿ ಸೆಳೆದೊಯ್ಯಲು ಪಾಶ ಹಾಕಿದ ಮೇಲೆ ನನಗದರಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವಾಯಿತು.

ಒಂದಿಷ್ಟು ದಿನ ಬಹಳ ದೂರವೇ ಉಳಿದೆ. ಆಗೀಗ ಸ್ನೇಹಿತೆಯರು ಏನೇ ನೀನು ಒಂದಕ್ಕೂ ರಿಪ್ಲೈ ಮಾಡಲ್ಲ ಎಂದು ದೂರಿದರಾದರೂ ಯಾರೊಬ್ಬರಿಗೂ ನಿಜ ಕಾರಣ ಹೇಳದೆ ಇಲ್ಲ ಸ್ವಲ್ಪ ಬ್ಯುಸಿ ಇದ್ದೆ ಎಂದು ಭೂಕಾಳಿ ಬಿಡತೊಡಗಿದೆ. ಕೊನೆ ಕೊನೆಗೆ ಅವರಿಗೂ ಏನನ್ನಿಸಿತೋ ಏನೋ ಸುಮ್ಮನಾದರು. ಆ ನಂತರ ಎಲ್ಲರ ಚಿತ್ತಗಳು ವಾಟ್ಸ್ ಅಪ್ ನತ್ತ ಹರಿದ ಮೇಲೆ ನನ್ನನ್ನು ಪೀಡಿಸುವುದು ಸ್ವಲ್ಪ ಕಡಿಮೆಯಾಯಿತೆಂದೇ ಹೇಳಬೇಕು. ಆದರೆ ನನ್ನ ಈ ಮಾನಸಿಕ ರಗಳೆಯ ಕಾರಣದಿಂದಾಗಿ ಅದೆಷ್ಟೋ ಒಳ್ಳೋಳ್ಳೆ ವಿಷಯಗಳನ್ನು ಓದದೆ ಕಳೆದುಕೊಂಡಿದ್ದೇನೆ.

ಸ್ನೇಹಿತರು ಮಾಡಿರುವ ಮೆಸೇಜ್ ಗಳನ್ನು ತಿಂಗಳುಗಟ್ಟಲೆ ಓದದೆಯೇ ಅವರುಗಳನ್ನು ಕಳೆದುಕೊಂಡಿದ್ದೇನೆ. ಈಗ ಆ ಮನಸ್ಥಿತಿಯಿಂದ ಸ್ವಲ್ಪ ಹೊರಬಂದಿದ್ದೇನೆಯಾದರೂ ಜಾಲತಾಣಗಳ ಕುರಿತಾಗಿನ ನನ್ನ ಮೋಹ ಎಂದೋ ಕಳೆದು ಹೋಗಿದೆ. ನಿನ್ನೆಯಷ್ಟೇ ಹೊಸ ಹುಡುಗನೊಬ್ಬ ಅಕ್ಕ ಫೇಸ್ ಬುಕ್ಕಿನಲ್ಲಿ ನನ್ನ ಕವಿತೆ ಹಾಕಿದ್ದೇನೆ ನೋಡಿ ಎಂದ. ಆ ಕಾರಣಕ್ಕಾಗಿ ಇಷ್ಟೆಲ್ಲ ಬರೆಯುವ ಹಾಗಾಯಿತು ಸ್ಸಾರಿ ನಾನು ಫೇಸ್ ಬುಕ್ ನೋಡೋದು ಕಡಿಮೆ ಪತ್ರಿಕೆಯಲ್ಲಿ ಬಂದರೆ ಓದುವೆ ಎಂದೆ. ಆತ ತೀರಾ ಪೆಚ್ಚು ದನಿಯಲ್ಲಿ ನಮ್ಮ ಕವಿತೆಯಲ್ಲ ಪತ್ರಿಕೆಲಿ ಬರಲ್ಲ ಅಕ್ಕ ನನಗೆ ಏನು ಹೇಳಬೇಕೋ ತೋಚಲಿಲ್ಲ.

‍ಲೇಖಕರು admin

5 December, 2016

2 Comments

  1. ಶಮ, ನಂದಿಬೆಟ್ಟ

    Same pinch. I feel the same. Am away from FB too.

  2. lakshmikanth itnal

    the compex thing FB creates in ones mind is truely well written. now a days, so many ways are opening before us to express our ideas, but we fail to converse when the same person is in front. we are collapsing at pseudo world, deeepti ji nice depiction of feelings.-lakshmikanth itnal

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading