ಹೌದು ಸ್ವಾಮೀ…

s c dinesh kumar

 

ದಿನೇಶ್ ಕುಮಾರ್

 

ಸ್ವಾಮೀ ಜಾತಿಯೆಂಬುದೇ ಇಲ್ಲ, ಇರಲಿಲ್ಲ

ಎಂಬ ನಿಮ್ಮ ವಾದವೇ ದಿಟ

 

ನಮಗೆ ಹುಚ್ಚು ನಾಯಿ ಕಚ್ಚಿತ್ತು

ಊರಿಂದ ಹೊರಗೆ ಜೋಪಡಿಗಳಲ್ಲಿ ಬದುಕಿದೆವು

ನಿಮ್ಮ ಮನೆಯಂಗಣದ ತಿಪ್ಪೆ ತೆಗೆದೆವು

ನೀವು ಮಾಡಿದ ಕಕ್ಕ ಬಾಚಿದೆವು

ನೀವು ಹಚ್ಯಾ ಅಂದಾಗ ನಾಯಿಗಳಂತೆ ಬಾಲ ಮುದುರಿಕೊಂಡೆವು

 

ನಿಮ್ಮ ಮನೆಗಳಲ್ಲಿ, ಹೋಟೇಲುಗಳಲ್ಲಿ

ಕೇಳಿದ್ದರೆ ನಮಗೆ ಬೆಳ್ಳಿಯ ಲೋಟವನ್ನೇ ಕೊಡುತ್ತಿದ್ದರು

ಹುಚ್ಚುನಾಯಿ ಕಚ್ಚಿತ್ತು ನೋಡಿ, ಪ್ಲಾಸ್ಟಿಕ್ ಲೋಟದಲ್ಲಿ ಕಾಫಿ ಕುಡಿದೆವು

ಕೆಲವೆಡೆ ಅದೂ ಇಲ್ಲದಂತೆ ವಾಪಾಸು ಬಂದೆವು

we

ನಮ್ಮನ್ನು ಯಾರೂ ಜೀತಕ್ಕೆ ಇಟ್ಟುಕೊಂಡಿರಲಿಲ್ಲ

ನಾವೇ ನಮ್ಮ ಖುಷಿಗಾಗಿ ಜೀತ ಮಾಡಿದೆವು

ಆಹಾ ಜೀತವಲ್ಲ ಅದು, ಪರಿಚಾರಿಕೆ.. ನಾವೇ ಧನ್ಯರು

ನಿಮ್ಮ ಬಾರುಕೋಲುಗಳ ಏಟು ನಮಗೆ ಮಲ್ಲಿಗೆ ಸುರಿದಂತೆ

ಭಾರತದ ಅಧ್ಯಾತ್ಮದಲ್ಲಿ ಯೋಗದೃಷ್ಟಿ ಅಂತ ಒಂದಿದೆ ನೋಡಿ

ಹಾಗಾಗಿ ನಾವು ಮಾಡಿದ್ದು ಜೀತ ಎಂದೆನಿಸಲೇ ಇಲ್ಲ

 

ವಿದ್ಯೆ ನಾವು ಕಲಿತರಲ್ಲವೇ?

ಪಾಪ ಗುರುಕುಲಗಳು ಬೋರ್ಡು ತಗುಲಿಸಿಕೊಂಡು

ಅನೌನ್ಸ್ ಮೆಂಟು ಕೊಟ್ಟು ನಮ್ಮನ್ನು ಸೇರಿಸಿಕೊಳ್ಳಲು ಯತ್ನಿಸಿದವು

ಕೈಹಿಡಿದು ಅ ಆ ಇ ಈ ಕಲಿಸಲು ಬಂದರೂ ನಾವು ವಿದ್ಯೆ ಕಲಿಯಲಿಲ್ಲ

ಹಾಳಾದ್ದು ದಡ್ಡಮುಂಡೇವು ನೋಡಿ ವಿದ್ಯೆ ಹತ್ತಲಿಲ್ಲ

 

ಜಾತಿ ಕಾರಣಕ್ಕೆ ಲಕ್ಷಲಕ್ಷ ಜನರನ್ನು ಕೊಚ್ಚಿ ಕೊಲ್ಲಲಾಯಿತು

ಕ್ಷಮಿಸಿ, ಕೊಲ್ಲಲಾಯಿತು ಎಂದರೆ ಅದು ವಸಾಹತುಶಾಹಿ ಭಾಷೆ

ನಮ್ಮ ಅಧ್ಯಾತ್ಮದ ಭಾಷೆಯಲ್ಲಿ ಹೇಳುವುದಾದರೆ

ನಮಗೆ ಮುಕ್ತಿ, ಪೂರ್ಣ ಸಾಯುಜ್ಯ ದೊರಕಿಸಿಕೊಡಲಾಯಿತು

ಕೊಂದವರೇ ನಮ್ಮ ಪಾಲಿನ ದೇವರು

 

ಖೈರ್‍ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ಬೆತ್ತಲಾದವರು, ಸುಟ್ಟು ಹೋದವರು

ಅವರ ಬಗ್ಗೆ ಮಾತನಾಡುವುದೇ ವೇಸ್ಟು ಬಿಡಿ

ಬೆಂಡಿಗೇರಿಯಲ್ಲಿ ನಮಗೆ ತಿನ್ನಿಸಲಾಗಿದ್ದು ಮಲವಲ್ಲ, ಮೈಸೂರು ಪಾಕು

ವಸಾಹತುಶಾಹಿ ದೃಷ್ಟಿಕೋನ ನೋಡಿ

ಹಳದಿಯೆಲ್ಲ ಮಲದಂತೇ ಕಾಣುತ್ತದೆ

 

ನಾವು ಮುಟ್ಟಿಸಿಕೊಳ್ಳಲಾರದವರು, ನೋಡಿದರೂ ಅಪಶುಕನವಾದವರು

ಹಾಗಂತ ದೂರುತ್ತ ಕುಳಿತುಕೊಳ್ಳಬಾರದು ನೋಡಿ

ಅದನ್ನೂ ಪರಂಪರೆಯ ಕಣ್ಣಲ್ಲಿ ನೋಡಬೇಕು, ಅದಕ್ಕೆ ಅಧ್ಯಾತ್ಮಸಿದ್ಧಿ ಬೇಕು

 

ಬಸವಣ್ಣನೂ ಸುಳ್ಳು, ಅವನ ವಚನಗಳೂ ಸುಳ್ಳು

ಅವನು ಇಂಟರ್ ಕ್ಯಾಸ್ಟ್ ಮದುವೆ ಮಾಡಿದ್ದೂ ಮಹಾಸುಳ್ಳು

ಕ್ಯಾಸ್ಟೇ ಇಲ್ಲ, ಇನ್ನು ಇಂಟರ್ ಕ್ಯಾಸ್ಟ್ ಎಲ್ಲಿಂದ ಬರುತ್ತದೆ

ಮುಠ್ಠಾಳ ವಸಾಹತುಶಾಹಿಗಳು ಏನೇನೋ ಸೃಷ್ಟಿಸಿಬಿಟ್ಟರು ನೋಡಿ

 

ಕರ್ಮ ಮಾಡು ಫಲಕ್ಕೆ ನಿರೀಕ್ಷೆ ಮಾಡಬೇಡ ಎಂದ ಭಗವದ್ಗೀತೆ ಬರೆದವನು

ಎಂಥ ಅದ್ಭುತ ಮಾತು, ಇದಲ್ಲವೇ ಯೋಗದೃಷ್ಟಿ

ಅವಮಾನವಾದವನಿಗೇ ಅವಮಾನ ಎನಿಸದಿದ್ದರೆ ಅವಮಾನವೇ ಅಲ್ಲ ಎನ್ನುತ್ತಾರೆ

ಫಾರಿನ್ ಫಂಡು ತಿನ್ನುವ ಆಧುನಿಕ ಮನುಗಳು

ನಿಜ ಕಣ್ರೀ ನಮ್ಮ ಕಣ್ಣಿಗೆ ಈ ಯೋಗದೃಷ್ಟಿಯನ್ನು ಹಾಕಿಸಿಕೊಳ್ಳಬೇಕು

ಹೇಗೂ ಉಚಿತವಾಗಿ ಹಾಕಿಕೊಡಲು ಸಂಸ್ಕೃತಿ ರಕ್ಷಕರ, ಶೋಧಕರ ದಂಡೇ ಇದೆ

ಸಂಸ್ಖೃತಿ ಅಧ್ಯಯನಕಾರರ ಆಸ್ಪತ್ರೆಯಲ್ಲಿ ಆಪರೇಷನ್ ಖರ್ಚೂ ಫ್ರೀ ಕಣ್ರೀ

 

ಹೌದೂ ಸ್ವಾಮಿ

ಅಗ್ರಹಾರಗಳು, ಹೊಲಗೇರಿಗಳೇ ಸುಳ್ಳು

ಮುಟ್ಟು, ಮಡಿ, ಮೈಲಿಗೆಯೇ ಸುಳ್ಳು

ಇಲ್ಲಿ ಜಾತಿ ಎಂಬುದೇ ಇರಲಿಲ್ಲ, ಇಲ್ಲ

ಎಲ್ಲ ಸೃಷ್ಟಿಸಿದ್ದು ಆ ಬಿಳಿತೊಗಲಿನ ಜನರು

ಅಲ್ಲಿಯವರೆಗೆ ಈ ಇಂಡಿಯಾ ಫಳಫಳಾಂತ ಹೊಳೆಯುತ್ತಿತ್ತು

ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಲೋಹಿಯಾ ಎಲ್ಲ ಸುಳ್ಳು

ಎಲ್ಲರ ಕಣ್ಣಿಗೂ ವಸಾಹತುಶಾಹಿಯ ಕನ್ನಡಕವಿತ್ತು

ಅವರಾಡಿದ ಮಾತುಗಳೆಲ್ಲ ಸುಳ್ಳು

 

ಹೌದು ಸ್ವಾಮೀ

ಅದೇನೋ ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ

ಯೋಗದೃಷ್ಟಿ ಅಂತ ಒಂದಿದೆಯಲ್ಲ..

ಅದೊಂದೇ ನಿಜ ಕಣ್ರೀ

 

‍ಲೇಖಕರು g

April 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Somashekhar

    ಮಾನ್ಯ ದಿನೇಶ್ ಕುಮಾರ್ , ನಿಮ್ಮ ಕವಿತೆ ಚೆನ್ನಾಗಿದೆ. ಆದರೆ ಒಂದು ಪ್ರಾಬ್ಲಮ್. ಬಾಲು ಟೀಂ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ಜಾತಿ ಇರಲಿಲ್ಲ ಅನ್ನುವುದಕ್ಕೆ ನಿಮ್ಮ ಕವನವನ್ನೇ ಉದಾಹರಣೆಗೆ ಕೊಡುವ ಚಾನ್ಸ್ ಇದೆ. ಸ್ವಲ್ಪ ಜೊಪಾನವಿರಲಿ !!.

    ಪ್ರತಿಕ್ರಿಯೆ
    • ಸಹನಾ

      ಸೋಮಶೇಖರ್ ರವರೇ ಬಾಲು ಟೀಂ ಯಾವಾಗ ಎಲ್ಲಿ ಜಾತಿ ಇರಲಿಲ್ಲ ಇಲ್ಲ ಎಂದು ಹೇಳಿತ್ತು? ತಾವಾದರೂ ದಯವಿಟ್ಟು ಬಾಲು ಟೀಂ ಜಾತಿ ಇರಲಿಲ್ಲ ಅಥವಾ ಇಲ್ಲ ಎಂದು ಎಲ್ಲಿ ಯಾವ ಲೇಖನ/ಪುಸ್ತಕದಲ್ಲಿ ಹೇಳಿದೆ ಎಂದು ದಯವಿಟ್ಟು ತೋರಿಸುತ್ತೀರಾ?

      ಪ್ರತಿಕ್ರಿಯೆ
  2. Shivshanker Cheral

    ಇದರ ಪರಿಹಾರಕ್ಕಾಗಿ ಬಸವಣ್ಣನವರು ೧೨ನೇ ಶತಮಾನದಲ್ಲಿ ಮಾನವರ ಮೇಲು ಕೀಳೆಂಬ ಅಸಮಾನತೆಯನ್ನು ಹೊಡಿದೋಡಿಸಿ ಕ್ರಾಂತಿಕಾರಕವಾಗಿ ಸಮಾನತೆಯನ್ನು ಸಾರಿದರು. ಮೇಲು ವರ್ಗದವರ ತುಳಿತಕ್ಕೊಳಗಾದ ದೀನ ದಲಿತರನ್ನು, ಹೊಲೆಯ ಮಾದಿಗರನ್ನು ತನ್ನವರೆಂದು ಅಪ್ಪಿಕೊಂಡು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಂದ ಉತ್ತಮ ಸಾಹಿತ್ಯ ಸೃಷ್ಟಿಗೆ ಕಾರಣರಾದರು.

    ನೆಲನೊಂದೆ; ಹೊಲಗೇರಿ ಶಿವಾಲಾಯಕ್ಕೆ,
    ಜಲವೊಂದೆ; ಶೌಚಾಚಮನಕ್ಕೆ,
    ಕುಲವೊಂದೆ ತನ್ನ ತಾನರಿದವಂಗೆ,

    — ಸ.ವ ಸಂ. ವಚನ ಸಂಖ್ಯೆ:೮೭೯

    ಹುಟ್ಟಿನಿಂದ ಎಲ್ಲ ಮಾನವರು ಸಮಾನರು ಎಂದು ಸಾರಿ, ಎಲ್ಲರೂ ಜನಿಸಿದುದು ಯೋನಿಯಿಂದಲೇ “ಕರ್ಣದಲ್ಲಿ ಜನಿಸಿದವರುಂಟೆ”? ಎಂದು ಪ್ರಶ್ನಿಸಿ ನಾವು ಉತ್ತಮರು ಎಂದು ಬೀಗುವವರಿಗೆ ಈ ಪ್ರಶ್ನೆಯಿಂದ ಉತ್ತರವನ್ನು ಕೊಡುತ್ತಾರೆ.

    ಹೊಲೆಯೋಳಗೆ ಹುಟ್ಟಿ ಕುಲವನರಸುವ
    ಎಲವೋ ಮಾತಂಗಿ ಮಗ ನೀನು

    ಎಂದು ಹೇಳಿ ಎಲ್ಲರೂ ಹುಟ್ಟಿದ್ದು ಹೊಲೆಯಲ್ಲಿಯೇ, ಪುನ: ಕುಲವನರಸುವುದು ಕೀಳು ಪ್ರವೃತ್ತಿ ಎಂದು ಸಾರಿ ಹೇಳಿ. ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು ಎಂದು ಸ್ಪಷ್ಟವಾಗಿ ತಿಳಿಸುತ್ತಾರೆ.

    ನಾವು ಒಳ್ಳೆಯ ಕೆಲಸ ಮಾಡುತ್ತೇವೆ ಆದ್ದರಿಂದ ನಾವೇ ಶ್ರೇಷ್ಠ ಕುಲವೆಂದು ಬೀಗುವವರಿಗೆ ಬಸವಣ್ಣನವರು
    ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ
    ಹಾಸನಿಕ್ಕಿ ಸಾಲಿಗನಾದ ವೇದವನೋದಿ ಹಾರುವನಾದ ಎಂದು ತಿಳಿಸಿ ಹುಟ್ಟಿಗೂ-ಉದ್ಯೂಗಕ್ಕೂ ಸಂಬಧವಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಕಮ್ಮಾರನಾದವನು ಕಾಯಿಸಲೇಬೇಕು, ಮಡಿವಾಳನಾದವನು ಬಟ್ಟೆಯನ್ನು ತೊಳೆಯಲೇ ಬೇಕು, ನೇಕಾರ ಜಾತಿಯಲ್ಲಿ ಹುಟ್ಟಿದವನು ಬಟ್ಟೆಯನ್ನು ನೇಯಲೇ ಬೇಕು ಎಂಬುದು ತಪ್ಪು. ಕಾಸುವವ ಕಮ್ಮಾರ; ಬಟ್ಟೆ ತೊಳೆಯುವವ ಮಡಿವಾಳ, ಬಟ್ಟೆ ನೇಯುವವ ನೇಕಾರ, ಓದು ಬರೆದವನು ಜ್ಞಾನಿ; ಅವರವರ ಆಸಕ್ತಿ, ಅವಕಾಶ, ಪ್ರತಿಭೆಗೆ ಅನುಗುಣವಾಗಿ ಯಾರು ಯಾವುದೇ ಉದ್ಯೋಗಗಳನ್ನು ಮಾಡಬಹುದು.

    ಶೆಟ್ಟಿ ಎಂಬೆನೆ ಸಿರಿಯಾಳನ?
    ಮಾದಾರನೆಂಬೆನೆ ಚೆನ್ನಯನ?
    ಡೋಹಾರನೆಂಬೆನೆ ಕಕ್ಕಯ್ಯನ?
    ಮಡಿವಾಳನೆಂಬೆನೆ ಮಾಚಯ್ಯನ?
    ಆನು ಹಾರುವನೆಂದಡೆ ಕೂಡಲಸಂಗಮದೇವ ನಗುವನಯ್ಯ.

    ಸತ್ತುದನೆಳೆವನೆತ್ತೆಣ ಹೊಲೆಯ?
    ಹೊತ್ತು ತಂದು ನೀವು ಕೊಲುವಿರಿ
    ಹೀಗೆ ಕಾಯಕ ಜೀವಿಗಳಲ್ಲಿ ಯಾವುದೇ ಭೇದ ಮಾಡಬಾರದು, ಯಾರು ಲಿಂಗಸ್ಥಲವನ್ನು, ದಿವ್ಯ ಜ್ಞಾನವನ್ನು ಪಡೆಯುವನೋ ಅವನೇ ಕುಲಜನು.

    ೧) ಹೊಲಸು ತಿಂಬುವವನೇ ಹೊಲೆಯ
    ೨) ಲಿಂಗವಿಲ್ಲದವನೇ ಹೊಲೆಯ
    ೩) ದೇವ ನಿಮ್ಮ ನಂಬದವ ಹೊಲೆಯ
    ೪) ಹುಸಿವನೆ ಹೊಲೆಯ

    ಬಸವಣ್ಣನವರು ಭವಿ ಮತ್ತು ಭಕ್ತ ಎಂಬ ಎರಡೇ ವರ್ಗಗಳನ್ನಾಗಿ ಇಡಿ ಮಾನವ ಸಮುದಾಯವನ್ನು ವಿಂಗಡಿಸುತ್ತಾರೆ.
    ೧) ವಿಪ್ರ ಮೊದಲು ಆಂತ್ಯಜ ಕಡೆಯಾಗಿ
    ಶಿವಭಕ್ತರಾದವರನೆಲ್ಲರನೊಂದೇ ಎಂಬೆ
    ೨) ಹಾರುವ ಮೊದಲು ಶ್ವಪಚ ಕಡೆಯಾಗಿ
    ಭವಿಯಾದವರನೊಂದೇ ಎಂಬೆ

    ಪ್ರತಿಕ್ರಿಯೆ
  3. Kiran

    People who dwell in the past can never perfect their present. Through-out the world, 90% of the population has suffered to keep the elite 10% happy. It has been a fact, not only in India, but in every country that one can think of. Those who could rub off the past for the sake of present and better tomorrow are progressed today. Paradoxically, the economic prosperity also brings the equality. However, the intellectuals of this country have strived extremely hard to keep all the past evergreen. the results are obvious. we have entered an era where economic stability is the only mantra for equality. The opportunities today are the best in history. The vote-bank tactics have already killed the country enough. Please stop living in past. “Today is a gift; that is why it is called present”

    ಪ್ರತಿಕ್ರಿಯೆ
  4. Somashekhar

    ಸಹನಾರವರೆ , ದಯವಿಟ್ಟು confuse ಮಾಡಿಕೊಳ್ಳಬೇಡಿ. ನಿಮ್ಮ ಟೀಮ್ ವಚನಗಳ ಅರ್ಥ ವಿವರಿಸುವ ರೀತಿ ನೋಡಿ ಹೆದರಿಕೆಯಾಗಿ ಈ ರೀತಿ ಹೇಳಬೇಕಾಯ್ತು . ಇನ್ನು ನಿಮ್ಮ ಗುಂಪಿನ ಕಾಮೆಂಟ್ಗಳನ್ನು ನೋಡಿದರೆ ನಿಮ್ಮನ್ನು ಯಾರೂ ಸೀರಿಯಸ್ ತೆಗೆದುಕೊಳ್ಳದೆ ಇರುವುದರ ಬಗ್ಗೆ frustrate ಆಗಿರುವಂತೆ ಕಾಣುತ್ತದೆ . ನಿಮ್ಮ ಕಾಮೆಂಟ್ಗಳನ್ನು ನೋಡಿದ ಮೇಲೆ ಬಾಲು ಅವರ ಪುಸ್ತಕ ಅಥವಾ ಲೇಖನವನ್ನಾಗಲಿ ಓದುವ ಆಸಕ್ತಿ ಕಿಂಚಿತ್ತೂ ಇಲ್ಲ.

    ಪ್ರತಿಕ್ರಿಯೆ
    • ಸಹನಾ

      Haudu… Haudu… Nimma comentgalannu elru bahala serious aagi tagondu jaatigalennella bitbittu nirjaatigalaagi bitrante!! Shahabbas kandri. 🙂

      ಪ್ರತಿಕ್ರಿಯೆ
  5. Mohan Talakalukoppa

    ಆ ಕಾಲದಲ್ಲಿ ಬಸವಣ್ಣ ಕ್ರಾಂತಿಕಾರಿ ಸಮಾನತೆಯನ್ನು ಪ್ರತಿಪಾದಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಆಗಿದ್ದಿರಬಹುದು. ಆದರೆ ಆ ಸಮಾನ ಕುಲದ ಇಂದಿನ ಜಾತಿ ಸ್ವರೂಪವನ್ನು ನೋಡಿದರೆ, ನಿರಾಶೆ ಕಟ್ಟಿಟ್ಟ ಬುತ್ತಿ ! ಸುಮ್ಮನೆ ಬಸವಣ್ಣನ ಹೆಸರು ಹೇಳಿಕೊಂಡು ಜಾತ್ಯತೀತ ಸೋಗನ್ನು ಹಾಕುವುದರಿಂದ ಯಾವ ಪ್ರಯೋಜನವೂ ಇಲ್ಲ. ಮೇಲು-ಕೀಳು ಇವು ಮನುಷ್ಯರಿರುವವರೆಗೂ ಇರುವವೇ! ವಿದ್ಯೆಯೊಂದೇ ಶೋಷಣೆಯಿಂದ ಹೊರಬರಲು ದಾರಿ.

    ಪ್ರತಿಕ್ರಿಯೆ
  6. Neela

    Dinesh
    vadala kidi jwalisida reetige yogadrushti(!) bhasmavaagabeku…
    karulige kannu (drushti) koduva kavana…

    neela

    ಪ್ರತಿಕ್ರಿಯೆ
  7. vasanth

    Shanaa Madam

    Now you are occupying the job of Kiran Gajanuru. Balu has not proposed any theory. All are bogus. He says that earning job/money hiding caste is simple. What kind of hypothesis is this? Balu should award noble for this kind of discovery. Is book is full of lies and bogus. It must be out rightly rejected.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: