ವಾಸುದೇವ ಶರ್ಮ
ಗೆಳೆಯ ಎ.ಎಂ. ಶಿವಸ್ವಾಮಿ ಮೈಸೂರಿನಿಂದ ದಡುಗುಟ್ಟಿಕೊಂಡು ಬಂದಿದ್ದ. ನಮ್ಮ ಕಛೇರಿಯ ಆರೂ ಮಹಡಿಯನ್ನು ಹತ್ತಿ ಬಂದಿದ್ದ. ಕೈಯಲ್ಲೊಂದು ಚೀಲ. ಅದರಲ್ಲಿ ಪುಸ್ತಕಗಳ ಒಂದು ಕಂತೆ. ಎಲ್ಲೋ ಹೊಸ ಪುಸ್ತಕಗಳನ್ನು ಕೊಂಡಿರಬೇಕು ಎಂದುಕೊಂಡೆ. ಎಷ್ಟೇ ಹೇಳಿದರೂ, ಕೋರಿದರೂ ಮನುಷ್ಯ, ತಾನು ಮಾತ್ರ ಬರೆಯುವುದಿಲ್ಲ. ಬೇರೆಯವರಿಗೆ ಬರೆಯಲು ಸಹಾಯ ಮಾಡುವುದು, ವಿಚಾರ ತಿಳಿಸುವುದು, ಬರೆದುದನ್ನು ಸೊಗಸಾಗಿ ಪರಿಚಯಿಸುವುದು ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಿಯ ಕನ್ನಡ ಶಿಕ್ಷಕ.
‘ಸರ್, ನನ್ನ ವಿದ್ಯಾರ್ಥಿ ಒಬ್ಬಳು ನಂಜನಗೂಡು ಅನ್ನಪೂರ್ಣ ಕವನಗಳನ್ನು ಬರೆದಿದ್ದಾಳೆ. ಇದು ಅವುಗಳ ಮೊದಲ ಪುಸ್ತಕ ರೂಪ. ಇನ್ನೂ ವಿದ್ಯಾರ್ಥಿ, ನಿಮ್ಮಂಥವರು ಓದಿ ನೋಡಿ, ಅವಳಿಗೇ ಫೋನ್ ಮಾಡಿ ನಿಮ್ಮ ಅಭಿಪ್ರಾಯ ಹೇಳಬೇಕು ಸರ್’ ಎಂದು ನಿಜವಾದ ವಿದ್ಯಾರ್ಥಿಯಂತೆ ನಿಂತು ಪುಸ್ತಕ ನೀಡಿದ.
ಕವನ ಓದುವ ಭರವಸೆ ನೀಡಿದೆ. ಅದಕ್ಕಿಂತಲೂ ಹೆಚ್ಚಾಗಿ, ಈ ಮೇಷ್ಟ್ರು ಜೀವ ಅದೆಷ್ಟು ಬಾರಿ ತನ್ನ ವಿದ್ಯಾರ್ಥಿಗಳಿಗಾಗಿ ಶ್ರಮಿಸಿರುವ ಹಿಂದಿನ ನೆನಪುಗಳು ಬಂದಿತು. ‘ಅದೆಲ್ಲಾ ಈಗ್ಯಾಕೆ ಸರ್? ಈ ವಿದ್ಯಾರ್ಥಿಯ ಈಗಿನ ಬೆಳವಣಿಗೆಗೆ ನೆರವಾಗುವುದು ನನ್ನ ಈಗಿನ ಕನಸು’ ಎಂದವನು, ಮೈಸೂರಿನ ತನ್ನ ಮನೆಗೆ ಬಂದಿದ್ದ ಎಲ್ಲ ಗೆಳೆಯರ ಕತೆ ಹೇಳತೊಡಗಿದ. ‘ಊಟ ಮಾಡಿದೆಯೇನೋ?’ ‘ಹೂ ಸರ್. ಮದ್ದೂರಿನಲ್ಲಿ ಬಸ್ ನಿಂತಿತ್ತಲ್ಲ ಆಗಲೇ ಉಂಡೆ. ಸ್ವಲ್ಪ ಜಾಸ್ತಿಯಾಗಿದೆ’. ಕೆಲವು ವರ್ಷಗಳಿಂದ ಸಕ್ಕರೆ ಖಾಯಿಲೆ ಎಂದು ಬಹಳ ನೊಂದಿದ್ದ. ಬಹಳ ಗಾಬರಿಯಾಗಿದ್ದ ಕೂಡಾ. ‘ಹೆದರ ಬೇಡವೋ ನಾನು ಇದ್ದೀನಲ್ಲ. ಸುಮಾರು ವರ್ಷಗಳಿಂದ ಎಂದು ಧೈರ್ಯ ಹೇಳಿದ್ದೆ’. ಹೌದಾ ಸರ್. ನನಗೆ ಗೊತ್ತೆ ಇಲ್ಲ ಎಂದಿದ್ದ. ಹೀಗಾಗಿ ಊಟದ ಪ್ರಸ್ತಾಪ ಬಂದಿತ್ತು.
ಸರ್ ಈಗ ನಮ್ಮ ಗೆಳೆಯರು ಯಾರ್ಯಾರು ಪತ್ರಿಕೆಗಳಲ್ಲಿ ಇದ್ದಾರೆ ಅವರದೆಲ್ಲಾ ನಂಬರ್ ಬೇಕು. ನನ್ನ ಮೊಬೈಲ್ ಕಳೆದು ಹೋಗಿದೆ. ಇವತ್ತು ಏನಿಲ್ಲವೆಂದರೂ ಐದಾರು ಪತ್ರಿಕೆಗಳಿಗೆ ಕವನ ಸಂಕಲನ ತಲುಪಿಸಿ ರಾತ್ರಿ ಮೈಸೂರು ಸೇರಬೇಕು ಸರ್. ಈಗ ಮೊದಲಿನಂತಲ್ಲ. ಇಲ್ಲೇ ಯಾರ್ದಾದ್ರೂ ಅಟ್ಟೀಲಿ ಹೊಕ್ಕೋ ಹಾಗಿಲ್ಲ… ಊರಲ್ಲಿ ತಂಗಿ ಒಬ್ಬಳೇ ಇರ್ತಾಳೆ ಅಂತ ಹೊರಟೇ ಬಿಟ್ಟ.
ಇದ್ದ ಸುಮಾರು 30 ನಿಮಿಷದಲ್ಲಿ ಕಾಲೇಜು, ನಮ್ಮ ನೆಬೆ-ನೆಳಲು ಬೆಳಕಿನ ನೆನಪು, ಶತಮಾನೋತ್ಸವ ಭವನದ ಎದುರು ಇತ್ತೀಚೆಗೆ ತಾನೊಬ್ಬನೇ ಕುಳಿತು ಬಂದಿದ್ದು, ಪುಣೆಯಿಂದ ಕಮಲಾಕರ ಭಟ್ಟ ಬಂದದ್ದು ತನ್ನ ಮನೆಯಲ್ಲಿ ಔತಣ ಕೂಟ ನಡೆಸಿದ್ದು ಎಲ್ಲ ಹೇಳಿದ್ದ. ಮಧ್ಯ ಮಧ್ಯ ತನ್ನ ವಿದ್ಯಾರ್ಥಿಗಳು ಬರೆಯುತ್ತಿರುವ ಕತೆ, ಕವನ ಅವರ ಕಾಲೇಜಿನ ಸಂಚಿಕೆ, ಅದಕ್ಕೆ ನಾನು ಕಳಿಸಿದ್ದ ಅಭಿಪ್ರಾಯ ಎಲ್ಲ ಚಾಚೂ ತಪ್ಪದೆ ಒಪ್ಪಿಸಿದ.
ನಾವು ಬೆಂಗಳೂರಿಗರು ಬಹಳ ಸ್ವಾರ್ಥಿಗಳು. ಅಥವಾ ಸಂಬಂಧಗಳ್ಳರು. ಅಷ್ಟು ದೂರದಿಂದ ಬಂದವನಿಗೆ ಬರ್ತೀನಿ ನಡೆಯೋ ಎಲ್ಲೆಲ್ಲಿ ಹೋಗಬೇಕು ನೋಡೋಣ ಎನ್ನುವಷ್ಟು ಸಮಯವಿಲ್ಲ. ಮೈಸೂರಿಗೆ ನಾನು ಬರ್ತೀನಿ ಅಂತ ಗೊತ್ತಾದರೂ, ಕಾಲೇಜಿಗೆ ರಜೆ ಹಾಕಿ ಬಂದು ಜೊತೆಯಲ್ಲಿ ಸುತ್ತುವ, ಹರಟುವ ಶಿವಸ್ವಾಮಿಯನ್ನು ನಾನು ರಸ್ತೆಗೆ ತಂದು ಆಟೋ ಹತ್ತಿಸಿ ಕಳಿಸಿದೆ ಅಷ್ಟೆ!
ಆಟೋ ಮುಂದೆ ಹೋಗುತ್ತಿದ್ದಂತೆ ಹೊರಗೆ ತಲೆ ಹಾಕಿ “ನೀವು ಮೈಸೂರಿಗೆ ಬಂದಾಗ ಫೋನ್ ಮಾಡಿ ಸರ್” ಅಂತ ಹೇಳೋದು ಮಾತ್ರ ಮರೆಯಲಿಲ್ಲ.







such teachers are required now.
ಮಾನ್ಯರೆ
ಬಹಳ ಅರ್ಥಪೂರ್ಣ ಬರಹವಿದೆ ಇಂತಹ ಶಿಕ್ಷಕ ಸಿಕ್ಕರೆ ಮಕ್ಕಳ ಬಾಳು ಬಂಗಾರವಾಗುತ್ತದೆ