ಫಕೀರನ ‘ಬಿತ್ತಿದ ಬೆಂಕಿ’ ಸುಟ್ಟೂ ಸುಡದ ಕಾವ್ಯ!

ಪ್ರೊ.‌ ಶಿವರಾಮಯ್ಯ

ನನ್ನವನ ದೇಹವನು ಚಟ್ಟದಲ್ಲಿ ಹೊತ್ತು ಹೋಗುತ್ತಿದ್ದರು
ನಮ್ಮಿಬ್ಬರ ಮಾತುಕತೆ ಹಾಗೆಯೇ ಸಾಗುತ್ತಿತ್ತು
ಆತ ಮಾತನಾಡುತ್ತಲೇ ಇದ್ದ ಇರುವಾಗ ಹೇಳದ ಗುಟ್ಟನು
ಆಡದ ಮಾತುಗಳನು ಮಸಣದವರೆಗೂ ಬಸಿಯುತ್ತಲೇ ಇದ್ದ

ಆಡಬೇಕಾದ ಮಾತು ಅವನಲ್ಲೇ ಉಳಿಯಿತು
ಇಟ್ಟ ಕೊಳ್ಳಿಗೆ ಚಿತೆಯು ಧಗಧಗನೆ ಉರಿಯತೊಡಗಿತು
ಉರಿಯುವ ಬೆಂಕಿಯಲಿ ನನ್ನನ್ನು
ನೋಡುತ್ತಲೇ ಮರೆಯಾದ

ಕರುಳು ಕತ್ತರಿಸುವ ಮೇಲಿನ ಸಾಲುಗಳು ‘ಫಕೀರ’ ಎಂಬ ಅಂಕಿತ ನಾಮದಲ್ಲಿ ಕವಿತೆ ಕಟ್ಟುವ ಶ್ರೀಧರ ಬನವಾಸಿ ಅವರ ‘ಬಿತ್ತಿದ ಬೆಂಕಿ’ ಸಂಕಲನದ ‘ಸಾವೆಂಬುದು ನಿರಾಳ ಮೌನ’ ಎಂಬ ಕವಿತೆಯವು. ಅಗಲಿದ ಗೆಳೆಯನ ಸಂಸ್ಕಾರಕ್ಕೆ ಹೋದ ಕವಿ ಹೃದಯ ಸತ್ತವನ ಜೊತೆ ನಡೆಸುವ ಜೀವಾನಾನು ಸಂಧಾನ ಶೋಕಗೀತೆ ಇದು. ನಾಲ್ಕು ಭಾಗ ಇರುವ ಈ ಕವಿತೆ ಐದು ಪುಟದಷ್ಟಿದೆ. ಸಂಬಂಧ ಎನ್ನುವುದು ದೊಡ್ಡದು. ಇಲ್ಲಿ ಎಲ್ಲ ತಿರುವು ಮುರುವು. ಸತ್ತವನೊಡನೆ ಬದುಕಿದವನ ಸಂವಾದ ಅಲ್ಲ ಇದು. ಬದುಕಿದವನು ಭಯಂಕರ ಮೌನಿ. ಸತ್ತವನೆ ಸಂವಾದ ಮಾಡುತ್ತಾನೆ. ಗೆಳೆಯನ ತೊರೆದು ಹೋಗಲಾರದ ಇರಲಾರದ ಭಾವ ಆ ಶವ ಮುಖದಲ್ಲಿ. ಕವಿ ಅದಕ್ಕೆ ಭಾಷ್ಯ ಬರೆಯುತ್ತಾನೆ.

ಗೆಳೆಯನ ಸಾವಿನ ಸುದ್ಧಿ ಕೇಳಿ ಪಯಣಿಸುವ ಕವಿ ಮನದಲ್ಲಿ ಅವನ ನೆನಪು ಸುಳಿವ ಶಾಸನವಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಆ ಗುಂಗಿನಲ್ಲೇ ಸಾವಿನ ಮನೆಯ ತಲುಪಿದ. ಶವಪರೀಕ್ಷೆಯಲ್ಲಿ ತಲೆಯೋಡು ಬಿಚ್ಚಿ ಕೂಡಿಸಿದ ಬಟ್ಟೆಯಲಿ ರಕ್ತ ಇನ್ನೂ ಜಿನುಗುತ್ತಿದೆ. ಎಳೆಯ ದಿನಗಳಲ್ಲಿ ಆಟ ಆಡುವಾಗ ಬಿದ್ದು ತರಚಿದ ತನ್ನ ಗಾಯಕ್ಕೆ ಅವನು ಉಚ್ಚೆ ಹೊಯ್ದದ್ದು ನೆನಪಾಗುತ್ತದೆ. ಈಗ ಮುಟ್ಟಿ ಅವನ ರಕ್ತ ಮೆತ್ತಿದ ತನ್ನ ಕೈಯ ಮುಖಕ್ಕೆ ಮೆತ್ತಿಕೊಳ್ಳಬೇಕೆನಿಸುತ್ತದೆ. ರಕ್ತಮಯ ಜೀವನ ಅವನದ್ದು ಏಕಾಯಿತೊ? ಎಂಬ ಪ್ರಶ್ನೆ ಹುಟ್ಟುತ್ತದೆ. ಹೋಗುವಾಗ ಇವನಿಗೆ ನೋವು ಕೊಡುವ ಉದ್ದೇಶವಿಲ್ಲವಾದರೂ ಅವನೊಂದಿಗೆ ಮಾತಾಡ ಬಯಸುತ್ತಾನೆ ಅಗಲಿದವನು.

ಸಂಗಾತದ ಕ್ಷಣಗಳನು ಅವನು ಇನ್ನಾರೊಂದಿಗೆ ಹಂಚಿಕೊಳ್ಳುವುದು, ಬೇಡ ಅನ್ನುವುದುಂಟೆ? ಸತ್ತ ಆತ್ಮಕೆ ನೋವುಂಟು ಮಾಡುವುದು ಸರಿಯೆ? ಆದರೆ ಇವನ ಮಾತುಗಳು ಪಯಣದಲ್ಲೇ ಸತ್ತು ಹೋಗಿದ್ದವು. ಇತ್ತ, ಸತ್ತವನ ಕಳ್ಳಬಳ್ಳಿಯ ಮಾತುಗಳು, ಕೊಡುವ-ಬಿಡುವ ಗುಸು ಗುಸು ಗುಟ್ಟುಗಳು ಕೇಳಿ ಬರುತ್ತಿವೆ. ಕಾರ್ಯದ ಮಾತು ನಿಗದಿ ಆಗುತ್ತದೆ-ಚಿತೆಯ ಸಿದ್ಧತೆ ವಿವರಗಳೊಂದಿಗೆ. ಅತ್ತ ಅವನ ಚಟ್ಟ ಚಿತೆ ಏರುತ್ತದೆ. ಕಳ್ಳುಬಳ್ಳಿಯ ಆಕ್ರಂದನ ಮುಗಿಲು ಮುಟ್ಟುತ್ತದೆ. ಬೆಂಕಿ ಹಚ್ಚೊ ಮುನ್ನ ಕೊನೆಯ ಬಾರಿ ಗೆಳೆಯ ಕಣ್ಣರಳಿಸಿ ನೋಡಿದ ಇವನ. ಚಿತೆ ಉರಿಯಿತು. ಹತ್ತಿದ ಬೆಂಕಿಯಲ್ಲಿ ಅವನ ಕೊನೆಯ ನೋಟ ಇವನ ಕಾಡುತ್ತಲೇ ಇದೆ ‘ಸಾವೆಂಬುದು ನಿರಾಳ ಮೌನ’ ಎಂಬ ಸತ್ಯ ಬೋಧೆಯಾಗುತ್ತದೆ.

ಅಗಲಿದ ಗೆಳೆಯನ ಹೀಗೆ ಸಾಕ್ಷಾತ್ಕರಿಸಿಕೊಂಡು ಕಣ್ಣು ಒದ್ದೆಯಾಗುವಂತೆ ಅನುಸಂಧಾನ ಮಾಡುವ ಆಧುನಿಕ ಕನ್ನಡ ಕವಿತೆ ಬೇರೊಂದಿಲ್ಲ. ರನ್ನ ಕವಿಯ ‘ದುರ್ಯೋಧನನ ವಿಲಾಪ’ದಲ್ಲಿ ದುಯೋಧನ ಕರ್ಣನನ್ನು ನೆನೆನೆನೆದು ‘ಈಗ ನೀನುಂ ಮಗುಳ್ದೆತ್ತ ಪೋದೆ ಅಂಗಾಧಿಪತಿ’ ಎಂದು ಗೋಗರೆಯುವ ದನಿ ಕುರು ರಣಭೂಮಿಯಲ್ಲಿ ಅನುರಣಿಸುತ್ತದೆ. ಕರುಣರಸ ಕೋಡಿವರಿದು ವೈಶಂಪಾಯನ ಸರೋವರ ತುಂಬಿ ಉಕ್ಕೇರುತ್ತದೆ. ಪ್ರಸ್ತುತ ಶ್ರೀಧರ ಬನವಾಸಿಯ ಗೆಳೆಯನ ಕುರಿತ ಪ್ರಲಾಪದಲ್ಲೂ ಕರುಣರಸ ಕೋಡಿವರಿದು ಸಹೃದಯನ ಹೃದಯ ಸಮುದ್ರ ಉಕ್ಕೇರುತ್ತದೆ. ‘ಸುರತರು ನಂದನಂಗಳಿರಾ ನೀವು ಕಾಣಿರಾ’ ಎಂಬ ಪಂಪನ ಪದ್ಯ ನೆನಪಾಗುತ್ತದೆ. ಬನವಾಸಿಯ ನೆಲದ ಗುಣವೇ ಅಂತಹುದೇನೋ! ಕವಿ ಶ್ರೀಧರ ಬನವಾಸಿ ಹುಟ್ಟಿದ ಮನೆಗೆ ಹೂವ ತರುವನಲ್ಲದೆ ಹುಲ್ಲು ತಾರನು’ ಎಂಬ ಭರವಸೆ ಮೂಡುತ್ತದೆ.

ಶ್ರೀಧರರ ಇನ್ನೊಂದು ಪದ್ಯ ‘ಯೌವ್ವನದ ಸಂಧ್ಯೆಯಲಿ’ ಎಂಬುದು. ಒಂದು ಜೋಡಿ ಗಂಡು ಹೆಣ್ಣಿನ ಬಾಳಿನ ಕಥನವನ್ನು ಕಟ್ಟಿಕೊಡುತ್ತದೆ ಇದು. ಆಶ್ಚರ್ಯವೆಂದರೆ, ಈ ಒಂದು ಪುಟ್ಟ ಕವಿತೆ ಒಂದು ಕಾದಂಬರಿಗಾಗುವಷ್ಟು ಕಥನವನ್ನು ಇಟ್ಟುಕೊಂಡಿದೆ. ಸಂಸಾರ ಎಂಬುದು ದಾರಿ ಹೋಕರ ನಡಿಗೆ ಇದ್ದಂತೆ. ಗಂಡು ಹೆಣ್ಣುಗಳು ಎಲ್ಲಿಯೋ ಕೂಡುತ್ತವೆ, ಇನ್ನೆಲ್ಲಿಯೋ ಅಗಲುತ್ತವೆ-ದಾರಿಗರಂತೆ. ಇದು ಅನಿವಾರ್ಯ. ಆದರೆ ಇಷ್ಟು ಹೇಳಿದರೆ ಸಾಕೆ! ಅದಕ್ಕೊಂದು ಪರಿಸರ ಬೇಕಲ್ಲ! ಈ ಪಥಿಕರು ಯೌವ್ವನದಲಿ ಕಟ್ಟುವ ಕನಸುಗಳಿಗೆ, ಆಡುವ ಮಾತುಗಳಿಗೆ, ನೋಡುವ ಕಂಗಳಿಗೆ ದಣಿವಿಲ್ಲ-ಮುಪ್ಪಿನವರೆಗೂ :
ದಾರಿಯುದ್ದಕ್ಕೂ ಅವರಿಬ್ಬರದ್ದೆ ಮಾತುಕತೆ
ಕಂಡ ಕನಸುಗಳ ಬಗೆಗೆ
ಆ ದಿನದ ಸಂಧ್ಯಾಕಾಲ ಮುಗಿಯುವವರೆಗೂ
ಮಾತುಮಾತಿಗೂ ನಗು ಸಂತಸ ಕೀಟಲೆ
ಹಿಂದೆದೂ ಕಾಣದ ಒಲವು
ಅವರಿಬ್ಬರಲ್ಲೂ
ಅವಳ ದಾರಿ ಎತ್ತಲೋ
ಇವನ ಪಯಣವೂ ಇನ್ನೆತ್ತಲೋ
ಈಗ ಇಬ್ಬರ ದಾರಿ ಒಂದೆಯಾಗಿ
ಬಂಧಿಯಾಗಿಸಿದೆ ಎರಡು ದೇಹಗಳನು
ಇನ್ನಷ್ಟು ದೂರ ಸಾಗುವ ಒಮ್ಮತದ
ಆತುರ ಇಬ್ಬರಲ್ಲೂ
ಹೀಗೆ ಮೈಲಿಗೆಯಿಲ್ಲದ ಬದುಕಿನ ಬಂಡಿಯ ದಾರಿ ಸಾಗಿಯೇ ಸಾಗುತ್ತದೆ.

‘ಅವರಿಬ್ಬರ ಪ್ರೀತಿ ಸ್ನೇಹದ ಮುಂದೆ ಕಾಮ ಗೌಣ. ಆದರೆ ‘Time and Tide waits No Man’. ಹುಟ್ಟಿದ ಸೂರ್ಯ ಸಂಜೆಗೆ
ಮುಳುಗಲೇಬೇಕು. ಹಾಗೇ ಇವರ ಯೌವ್ವನದ ಸಂಸಾರಕ್ಕೂ ಸಂಧ್ಯೆ ಕವಿಯಿತ್ತದೆ. ಆದರೂ ಪಯಣ ಸಾಗಿಯೇ ಸಾಗುತ್ತದೆ. ಬಿಟ್ಟ ಬಾಣದಂತೆ ಅವಳು ನಡುವೆ ಕಣ್ಮರೆಯಾದಳು!
ಇಬ್ಬರ ದಾರಿಯೂ ಈಗ ಒಂದೊಂದು ಕಡೆ
ಯೌವ್ವನದ ಸಂಧ್ಯೆಯಲಿ ಅವರಿಬ್ಬರೂ
ಇಬ್ಬನಿಯನು ಚುಂಬಿಸುವ
ಬೆಳಕಿನಂತೆ ಕಂಡು ಮಿಂಚಿ
ಮಾಯವಾದರು …
ಗಂಡು ಹೆಣ್ಣಿನ ಸಾಂಸರ ಎಂಬುದು ದಾರಿಹೋಕರ ಪಯಣ ಇದ್ದಂತೆ; ಅದು ಸಂಸಾರ ಸಾಗರ. ವೇದಾಂತದ ಬೇಕಾದಷ್ಟು ಉಪಮೆ ರೂಪಕಗಳಿವೆ. ಅಪಾರ ಲೋಕ ಸಂಸಾರವನ್ನು ಕುರಿತು ಕಾವ್ಯದಲ್ಲಿ ಕಟ್ಟುವ ಬಗೆ ಮಾತ್ರ ಒಬ್ಬೊಬ್ಬರದೂ ಒಂದೊಂದು ತೆರ; ಅವರವರ ಅನುಭವ ದ್ರವ್ಯ ಇದ್ದಷ್ಟು. ಅದು ಪರಿಪಾಕಗೊಂಡು ಅಭಿವ್ಯಕ್ತಿ ಪಡೆಯುತ್ತದೆ.

ಒಟ್ಟಾರೆಯಾಗಿ ಫಕೀರನ ಬಿತ್ತಿದ ಬೆಂಕಿ ಯಲ್ಲಿ ಸುಟ್ಟು ಬಂಗಾರದ ಹೂವಾಗಿ ಅರಳುವ ಅನೇಕ ಪದ್ಯಗಳಿವೆ. ಕೆಲವು ಇನ್ನೂ ಗದ್ಯ ಪದ್ಯದ ನೆಲೆಯಲ್ಲಿಯೆ ಚಿಗುರಲೆತ್ನಿಸುತ್ತಿವೆ. ಇರಲಿ. ಇಂದಿನ ಹಲವಾರು ಯುವ ಕವಿಗಳ ನಡುವೆ ಶ್ರೀಧರ ಬನವಾಸಿ ಹೆಸರಿಗಷ್ಟೇ ಅಲ್ಲ, ಪಂಪನ ‘ತೆಂಕಣ ಗಾಳಿ ಸೋಂಕಿದಂತೆ’ ನಮ್ಮ ಮನಸ್ಸಿಗೆ ಮುದನೀಡುವ ಕವಿ ಇವರೆಂದು ಎದೆ ತುಂಬಿ ಹೇಳಬಯಸುತ್ತೇನೆ.
‘ಇಬ್ಬನಿಯನು ಚುಂಬಿಸುವ ಬೆಳಕಿನಂತೆ, ಈ ಸಂಸಾರ. ಇದು ಇನ್ನೂ ನವಿರಾದ ಉಪಮೆ. ‘ಬಿತ್ತಿದ ಬೆಂಕಿ’ ಸಂಕಲನ ಇಂಥ ನವಿರಾದ ಉಪಮೆ, ರೂಪಕ, ಸಂಕೇತ ಮುಂತಾದ ಅಲಂಕಾರಗಳ ಗಣಿ. ಜೊತೆಗೆ ‘ಕನ್ನಡ ಕುಮಾರ ಮತ್ತು ತಮಿಳು ಸೆಲ್ವಿಯ ಕತೆಯು ‘ನಗುವಿನ ಬೀಜಗಳು ಮಾರಾಟಕ್ಕಿವೆ’ ‘ಮುಳ್ಳಿನ ಬೇಲಿ’ ಮುಂತಾದ ಕಥನಾತ್ಮಕ ವಿಡಂಬನ ಪದ್ಯಗಳು ಇದ್ದು ರಸಿಕ ಜನವನ್ನು ಕೈ ಬೀಸಿ ಕರೆಯುತ್ತವೆ.

‍ಲೇಖಕರು avadhi

March 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Lakshmi H Kurki

    ಮುದವೆನಿಸಿತು ಓದಿ,ಬೆಂಗಳೂರಿನ ವಾಸದ ಮೊದಲ ಅನುಭವದಲ್ಲಿ ಹೊಸತೇನನಾದರು ತಡಕಾಡುವಾಗ ಸಿಕ್ಕ ಬರಹ,ಧನ್ಯವಾದಗಳು,
    ಅನಘ ಕುರ್ಕಿ.ದಾವಣಗೆರೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: