ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಪ್ರಿನ್ಸ್ ಮಿಖಾಯ್ಲೊವಿಚ್ ವರಾನ್ತಸೋವ್‌….

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇಂದಿನಿಂದ ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

3

ಕೋಟೆಯೊಳಗಿದ್ದ ಸೈನಿಕರ ಸಾಲು ಮನೆಗಳ ದೀಪಗಳೆಲ್ಲ ಆರಿ ಬಹಳ ಹೊತ್ತಾಗಿತ್ತು. ಬ್ಯಾರಕ್ಕಿನಲ್ಲೂ ಬೆಳಕಿರಲಿಲ್ಲ. ಆದರೂ ಅಲ್ಲಿದ್ದ ಅತ್ಯುತ್ತಮ ಮನೆಯ ಕಿಟಕಿಗಳಲ್ಲಿ ಬೆಳಕು ಕಾಣುತ್ತಿತ್ತು.

ಅದು ಪ್ರಿನ್ಸ್ ಮಿಖಾಯ್ಲೊವಿಚ್ ವರಾನ್ತಸೋವ್‌ನ ನಿವಾಸ. ಅವನು ಕುರಿನ್ ರೆಜಿಮೆಂಟಿನ ಕಮಾಂಡರ್, ಚಕ್ರವರ್ತಿಯ ಏಡ್ ಡಿ ಕ್ಯಾಂಪ್ ಆಗಿದ್ದವನು, ಕಮಾಂಡರ್-ಇನ್-ಛೀಫ್‌ನ ಮಗ. ವರಾನ್ತಸೋವ್‌ನ ಹೆಂಡತಿ ಮೇರಿ ವಾಸಿಲೇವ್ನಾ. ಆಕೆ ಪೀಟರ್ಸ್‌ಬರ್ಗಿನ ಪ್ರಖ್ಯಾತ ಚೆಲುವೆ. ಈ ಗಂಡ ಹೆಂಡತಿ ಈ ಪುಟ್ಟ ಕಕೇಶಿಯನ್ ಕೋಟೆಯ ನಿವಾಸದಲ್ಲಿ ಮೊದಲು ವಾಸವಾಗಿದ್ದ ಎಲ್ಲರಿಗಿಂತ ವೈಭೋಗದ ಬದುಕು ಸಾಗಿಸುತಿದ್ದರು. ವರಾನ್ತಸೋವ್‌ಗೆ, ಅವನಿಗಿಂತ ಮಿಗಿಲಾಗಿ ಅವನ ಹೆಂಡತಿಗೆ, ನಾವು ಬಹಳ ಸಾಮಾನ್ಯವಾದ ರೀತಿಯಲ್ಲಿ ಬಡತನದ ಬಾಳು ಬದುಕುತ್ತಿದ್ದೇವೆ ಅನಿಸುತ್ತಿತ್ತು. ಅರಮನೆಯಲ್ಲಿದ್ದ ಮಿಕ್ಕ ಜನಕ್ಕೆ ಅವರ ಬದುಕಿನ ರೀತಿ ಬೆರಗು ಹುಟ್ಟಿಸುವ ವಿಶೇಷ ವೈಭೋಗವಾಗಿ ಕಾಣುತ್ತಿತ್ತು. 

ನೆಲಕ್ಕೆಲ್ಲ ರತ್ನಗಂಬಳಿ ಹಾಸಿ, ಕಿಟಕಿಗಳಿಗೆ ಭಾರವಾದ ಪರದೆ ಎಳೆದಿದ್ದ ವಿಶಾಲವಾದ ದಿವಾನಖಾನೆಯಲ್ಲಿ, ಈಗ, ಮಧ್ಯ ರಾತ್ರಿಯ ಹೊತ್ತಿನಲ್ಲಿ ನಾಲ್ಕು ಮೇಣದ ಬತ್ತಿಗಳು ಉರಿಯುತಿದ್ದ ಮೇಜಿನ ಸುತ್ತ ಕೂತು ಮನೆಯ ಒಡೆಯ, ಒಡತಿ, ಅತಿಥಿಗಳು ಇಸ್ಪೀಟು ಆಟದಲ್ಲಿ ಮುಳುಗಿದ್ದರು. ಅವರಲ್ಲಿ ಒಬ್ಬ ಸ್ವತಃ ವರಾಸ್ತಸೋವ್, ಉದ್ದ ಮುಖದ, ಚೆಲುವಾದ ಕೂದಲಿನ ಕರ್ನಲ್. ತನ್ನ ಹೆಸರಿನ ಮೊದಲ ಅಕ್ಷರಗಳ ಪದಕವನ್ನೂ ಏಡ್ ಡಿ ಕ್ಯಾಂಪ್ ತೊಡುವಂಥ ಬಂಗಾರದ ಎಳೆಗಳ ಭುಜಾಲಂಕಾರವನ್ನೂ ಹೊತ್ತು ಕೂತಿದ್ದ. ಆಟದಲ್ಲಿ ಅವನ ಜೊತೆಗಾರನಾಗಿದ್ದವನು ಪೀಟರ್ಸ್‌ಬರ್ಗಿನ ವಿಶ್ವವಿದ್ಯಾಲಯದ ಪದವೀಧರ, ಒರಟು ಕೂದಲಿನ, ಮಂಕು ಮುಖದ ಯುವಕ. ಮನೆಯ ಒಡತಿ ಪ್ರಿನ್ಸೆಸ್ ಮೇರಿ ವಾಸಿಲೇವ್ನಾ ತನ್ನ ಮೊದಲ ಮದುವೆಯಿಂದ ಹುಟ್ಟಿದ್ದ ಮಗನಿಗೆ ಪಾಠ ಹೇಳಲು ಅವನನ್ನು ಕರೆಸಿದ್ದಳು. ಅವರಿಗೆ ಆಟದ ಎದುರಾಳಿಗಳಾಗಿದ್ದವರು ಇಬ್ಬರು ಸೈನ್ಯಾಧಿಕಾರಿಗಳು: ಒಬ್ಬಾತ ವಿಶಾಲವಾದ ಕೆಂಪು ಮುಖದ ಪೋಲ್ಟರಾಟ್ಸ್‌ಕಿ; ಅವನು ಕಂಪನಿಯ ಕಮಾಂಡರ್, ಗಾರ್ಡ್ಸ್‌ನಿಂದ ವರ್ಗವಾಗಿ ಬಂದಿದ್ದ. ಇನ್ನೊಬ್ಬನು ರೆಜಿಮೆಂಟಿನ ಅಡ್ಜುಟೆಂಟ್; ಅವನು ಚೆಲುವಾದ ಮುಖದಲ್ಲಿ ಯಾವ ಭಾವವನ್ನೂ ತೋರದೆ ನೇರವಾಗಿ ಕೂತಿದ್ದ. 

ಸ್ವತಃ ಮೇರಿ ವಾಸಿಲೆವ್ನಾ ದೊಡ್ದ ಮೈಕಟ್ಟಿನವಳು,  ದೊಡ್ಡ ಕಪ್ಪು ಕಣ್ಣಿದ್ದವು, ಪೋಲ್ಟರಾಟ್ಸ್‌ಕಿ ಪಕ್ಕದಲ್ಲಿ ಕೂತಿದ್ದಳು. ಅವಳು ತೊಟ್ಟಿದ್ದ ಉಬ್ಬುಪಟ್ಟೆಯ ಕ್ರಿನೊಲೈನ್ ಲಂಗ ಅವನ ಕಾಲಿಗೆ ತಾಗುತ್ತಿತ್ತು. ಅವನ ಕೈಯಲ್ಲಿದ್ದ ಇಸ್ಪೀಟಿನ ಎಲೆಗಳನ್ನು ನೋಡುತಿದ್ದಳು. ಅವಳ ಮಾತಿನಲ್ಲಿ, ಅವಳ ನೋಟದಲ್ಲಿ, ನಗುವಿನಲ್ಲಿ, ಅವಳು ಲೇಪಿಸಿಕೊಂಡಿದ್ದ ಪರಿಮಳದಲ್ಲಿ, ಅವಳ ದೇಹದ ಚಲನೆಯಲ್ಲಿ ಇದ್ದ ಯಾವುದೋ ವಿಶೇಷ ಸಂಗತಿ ಪೋಲ್ಟರಾಟ್ಸ್‌ಕಿಯನ್ನು ಮೈಮರೆವಿನಲ್ಲಿ ಅದ್ದಿತ್ತು. ಆಕೆ ಹತ್ತಿರದಲ್ಲೇ ಇದ್ದಾಳೆ ಅನ್ನುವ ಭಾವನೆಯನ್ನು ಬಿಟ್ಟು ಉಳಿದ ಯಾವ ಸಂಗತಿಯೂ ಗಮನದಲ್ಲಿ ಉಳಿಯದೆ ತಪ್ಪಿನ ಮೇಲೆ ತಪ್ಪು ಮಾಡುತ್ತ ತನ್ನ ಜೊತೆಗಾರನ ಸಿಟ್ಟು ಕೆರಳುವಂತೆ ಮಾಡುತಿದ್ದ. 

’ತಪ್ಪು!…ಮತ್ತೆ ಎಕ್ಕಾ ಬಿಟ್ಟು ಆಟ ಹಾಳುಮಾಡಿದೆ!’ ರೆಜಿಮೆಂಟಿನ ಅಡ್ಜುಟೆಂಟು ಮುಖ ಕೆಂಪು ಮಾಡಿಕೊಂಡು ಪೋಲ್ಟರಾಟ್ಸ್‌ಕಿಯ ಮೇಲೆ ಸಿಡುಕಿದ. 

ಪೋಲ್ಟರಾಟ್ಸ್‌ಕಿಗೆ ತಾನು ಎಕ್ಕಾ ಎಸೆದದ್ದು ಅರಿವಿನಲ್ಲೇ ಇರದೆ, ಅದೇ ಆ ಕ್ಷಣ ಎದ್ದವನ ಹಾಗೆ ತನ್ನ ಅಗಲ ಕಣ್ಣು ಇನ್ನೂ ದೊಡ್ಡದಾಗಿ ಅರಳಿಸಿ ಅಡ್ಜುಟೆಂಟನನ್ನು ನೋಡಿದ. 

ಮೇರಿ ವಾಸಿಲೇವ್ನಾ ನಗುತ್ತಾ, ’ಹೋಗಲಿ ಬಿಡಿ!’ ಅಂದಳು. ಪೋಲ್ಟರಾಟ್ಸ್‌ಕಿಯತ್ತ ತಿರುಗಿ, ’ನೋಡಿದೆಯಾ? ನಾನು ಹೇಳಲಿಲ್ಲವಾ ನಿನಗೆ?’ ಅಂದಳು. 

’ನೀವು ಹೇಳಿದ್ದು ಬೇರೆ ಇನ್ನೇನೋ!’ ಪೋಲ್ಟರಾಟ್ಸ್‌ಕಿ ನಗುತ್ತಾ ಅಂದ. 

’ಹೇಳಲಿಲ್ಲವಾ?’ ಅವಳೂ ನಗುತ್ತ ಅಂದಳು. ಅವಳ ನಗು ಕಂಡು ಸಂತೋಷಪಟ್ಟ ಪೋಲ್ಟರಾಟ್ಸ್‌ಕಿ ಮುಖ ಕೆಂಪಾಗಿಸಿಕೊಂಡು ಎಲೆಗಳನ್ನು ಜೋಡಿಸಿ ಕಲೆಸುವುದಕ್ಕೆ ಶುರುಮಾಡಿದ. 

’ಎಲೆ ಕಲೆಸುವ ಸರದಿ ನಿನ್ನದಲ್ಲ,’ ನಿಖರವಾಗಿ ಹೇಳಿದ ಅಡ್ಜುಟೆಂಟ್ ಉಂಗುರವಿದ್ದ ಬಿಳಿಯ ಕೈಯಲ್ಲಿ ತಾನೇ ಎಲೆ ಕಲೆಸುವುದಕ್ಕೆ ಶರುಮಾಡಿದ. ಆದಷ್ಟು ಬೇಗ ಈ ಎಲೆ ಹಾಕಿದರೆ ಸಾಕು ಅನ್ನುವ ಹಾಗಿತ್ತು. 

ಪ್ರಿನ್ಸ್‌ನ ಖಾಸಾ ಸೇವಕ ಬಂದು, ’ಡ್ಯೂಟಿ ಆಫೀಸರು ಪ್ರಿನ್ಸ್ ಅವರನ್ನು ನೋಡಲು ಬಂದಿದಾರೆ,’ ಎಂದು ಹೇಳಿದ

’ಕ್ಷಮಿಸಿ, ಒಂದು ನಿಮಿಷ ಬಂದುಬಿಡುತ್ತೇನೆ. ಪ್ಲೀಸ್, ನನ್ನ ಆಟ ಆಡುತೀಯಾ ಮೇರೀ?’ ಎಂದು ರಶಿಯನ್‍ನಲ್ಲಿ ಕೇಳಿದ್ದು ಇಂಗ್ಲಿಶಿನ ಹಾಗೆ ಕೇಳಿಸಿತು.  

’ಆಗಬಹುದಾ? ಒಪ್ಪುತೀರಾ?’ ರೇಶಿಮೆಯ ಉಡುಪು ಸರಬರ ಸದ್ದು ಮಾಡುವ ಹಾಗೆ ತಟ್ಟನೆ ಎದ್ದು ನಿಲ್ಲುತ್ತಾ ಸಂತೋಷವಾಗಿರುವ ಮಹಿಳೆಯ ಹಾಗೆ ನಗುನಗುತ್ತ ಕೇಳಿದಳು. 

’ನಾನಂತೂ ಯಾವಾಗಲೂ ಎಲ್ಲಕ್ಕೂ ಒಪ್ಪಿಗೆ ಅನ್ನುವವನು,’ ಅಂದ ಅಡ್ಜುಟೆಂಟ್. ಆಟವೇ ಬರದ ಪ್ರಿನ್ಸೆಸ್ ಈಗ ತನ್ನ ಎದುರಾಳಿ ಎಂದು ಅವನಿಗೆ ಬಹಳ ಸಂತೋಷವಾಗಿತ್ತು.

ಪೋಲ್ಟರಾಟ್ಸ್‌ಕಿ ಸುಮ್ಮನೆ ಕೈ ಚೆಲ್ಲಿ ನಕ್ಕ.

ಪ್ರಿನ್ಸ್ ವಾಪಸು ಬರುವ ಹೊತ್ತಿಗೆ ದಿವಾನ್ ಖಾನೆಯಲ್ಲಿ ಆಟ ಮುಗಿಯುತ್ತ ಬಂದಿತ್ತು. ಖುಷಿ, ಉತ್ಸಾಹಗಳನ್ನು ಹೊತ್ತು ಬಂದ ಪ್ರಿನ್ಸ್.

’ಈಗ ಏನು ಹೇಳತೇನೆ ಅಂದರೆ…’

’ಏನು?’

’ಎಲ್ಲಾರೂ ಶಾಂಪೇನ್ ಕುಡಿಯೋಣ!’

’ಅದಕ್ಕೆ ನಾನಂತೂ ಯಾವಾಗಲೂ ಸಿದ್ಧ,’ ಅಂದ ಪೊಲ್ಟೊರಾಟ್ಸ್‌ಕಿ.

’ವಾಹ್, ಖುಷಿ! ಯಾಕಾಗಬಾರದು!’ ಅಂದ ಅಡ್ಜುಟೆಂಟ್.

’ವ್ಯಾಸಿಲೀ! ಶಾಂಪೇನ್ ತೆಗೆದುಕೊಂಡು ಬಾ!’ ಅಂದ ಪ್ರಿನ್ಸ್.

’ನಿಮನ್ನ ಅವರು ಕರೆದದ್ದು ಯಾಕೆ?’ ಮೇರಿ ವಾಸಿಲೇವ್ನಾ ಕೇಳಿದಳು.

’ಡ್ಯೂಟಿ ಆಫೀಸರು, ಜೊತೆಗೆ ಇನ್ನೊಬ್ಬ ಯಾರೋ ಬಂದಿದ್ದರು.’

’ಯಾರು? ಯಾಕೆ?’ ಮೇರಿ ವಾಸಿಲೇವ್ನಾ ತಟ್ಟನೆ ಕೇಳಿದಳು. 

’ಹೇಳಬಾರದು ಅದನ್ನ,’ ಅನ್ನುತ್ತಾ ವರಾನ್ತಸೋವ್ ಭುಜ ಕೊಡವಿದ. 

’ಹೇಳಬಾರದು! ನೋಡಣ!’ ಅಂದಳು ಮೇರಿ ವಾಸಿಲೇವ್ನಾ.

ಶಾಂಪೇನು ಬಂದಿತು. ಅತಿಥಿಗಳೆಲ್ಲ ಒಂದೊಂದು ಗ್ಲಾಸು ಕುಡಿದರು. ಆಟ ಮುಗಿಸಿ, ಲೆಕ್ಕಾಚಾರ ಚುಕ್ತಾ ಮಾಡಿ ಹೊರಟರು. 

’ನಾಳೆ ಕಾಡಿಗೆ ಹೋಗಬೇಕಾದದ್ದು ನಿಮ್ಮ ಕಂಪೆನಿ ಅಲ್ಲವಾ?’ ಪೋಲ್ಟರಾಟ್ಸ್‌ಕಿಯನ್ನು ಪ್ರಿನ್ಸ್ ಕೇಳಿದ. 

’ಹೌದು, ನನ್ನ ಕಂಪನಿ. ಯಾಕೆ?’

’ಓಹ್, ಸರಿ, ನಾಳೆ ಭೇಟಿಯಾಗೋಣ!’ ಸ್ವಲ್ಪ ನಗುತ್ತ ಪ್ರಿನ್ಸ್ ಹೇಳಿದ. 

’ಬಹಳ ಸಂತೋಷ,’ ಅಂದ ಪೋಲ್ಟರಾಟ್ಸ್‌ಕಿ. ವರಾನ್ತಸೋವ್ ಹೇಳಿದ್ದು ಅವನಿಗೆ ಅರ್ಥವಾಗಿರಲಿಲ್ಲ. ಇನ್ನೊಂದು ನಿಮಿಷದಲ್ಲಿ ಮೇರಿ ವಾಸಿಲೇವ್ನಾ ತನ್ನ ಕೈ ಹಿಡಿದು ಶೇಕ್ ಹ್ಯಾಂಡ್ ಕೊಡುತ್ತಾಳೆ ಅನ್ನುವ ಯೋಚನೆಯೇ ಅವನ ಮನಸಿನ ತುಂಬ ಇತ್ತು. 

ಮೇರಿ ವಾಸಿಲೇವ್ನಾ ತನ್ನ ಅಭ್ಯಾಸದ ಹಾಗೆ ಅವನ ಕೈಯನ್ನು ಒತ್ತಿ ಹಿಡಿದು ಬಲವಾಗಿ ಶೇಕ್ ಹ್ಯಾಂಡ್ ನೀಡಿದಳು. ಡೈಮಂಡ್ ಎಲೆ ಎಸೆಯುವಾಗ ಮಾಡಿದ ತಪ್ಪನ್ನು ನೆನಪಿಸಿದಳು. ಅವಳು ತನ್ನನ್ನು ನೋಡಿ ನಕ್ಕ ನಗುವಿನಲ್ಲಿ ಪ್ರೀತಿ ಇದೆ, ಏನೇನೋ ಅರ್ಥ ತುಂಬಿದೆ ಅನ್ನಿಸಿತು ಪೋಲ್ಟರಾಟ್ಸ್‌ಕಿಗೆ. 

ಪೋಲ್ಟರಾಟ್ಸ್‌ಕಿ ಮನೆಗೆ ಹೋಗುವಾಗ ಅವನಿದ್ದ ಉನ್ಮತ್ತ ಸ್ಥಿತಿ ಅವನಂಥ ಜನರಿಗೆ ಮಾತ್ರ ಗೊತ್ತಿರುತ್ತದೆ. ಅಂದರೆ ಉನ್ನತ ವರ್ಗದ ಸಮಾಜದಲ್ಲಿ ಶಿಕ್ಷಣ ಪಡೆದು, ಮಿಲಿಟರಿ ಸೇವೆಯಲ್ಲಿರುತ್ತಾ ಅನೇಕ ತಿಂಗಳು ಕಳೆದ ನಂತರ ಉನ್ನತ ವರ್ಗಕ್ಕೇ ಸೇರಿದ ಮಹಿಳೆಯನ್ನು ಕಂಡಾಗ, ಅದರಲ್ಲೂ ಪ್ರಿನ್ಸೆಸ್ ವಾರನ್ತಸೋವ್‌ಳಂಥವಳನ್ನು ಕಂಡಾಗ ಹೇಗನ್ನಿಸುತ್ತದೆ ಅನ್ನುವುದು ತಿಳಿದವರಿಗೆ ಮಾತ್ರ  ಅದು ಗೊತ್ತಿರುತ್ತದೆ. 

ಅವನು ಇನ್ನೊಬ್ಬ ಆಫೀಸರನ ಜೊತೆಗೆ ಹಂಚಿಕೊಂಡಿದ್ದ ವಸತಿಗೆ ತಲುಪಿ, ಬಾಗಿಲನ್ನು ದೂಡಿದರೆ ಒಳಗಿನಿಂದ ಚಿಲುಕ ಹಾಕಿತ್ತು. ಬಾಗಿಲು ದಬ್ಬಿದ, ತೆರೆಯಲಿಲ್ಲ. ಬಾಗಿಲು ತಟ್ಟಿದ, ತೆರೆಯಲಿಲ್ಲ. ತಲೆ ಕೆಟ್ಟು ಬೂಟುಗಾಲಲ್ಲಿ ಬಾಗಿಲು ಒದೆಯುತ್ತ ಕತ್ತಿಯ ಹಿಡಿಯಿಂದ ಬಾಗಿಲು ಬಡಿದ. ಹೆಜ್ಜೆಯ ಸದ್ದು ಕೇಳಿಸಿತು. ಅವನ ಸ್ವಂತದ ಆಳು ವವಿಲೋ ಬಂದು ಚಿಲುಕ ತೆಗೆದ. 

’ಅಯ್ಯೋ ಪೆದ್ದಾ ಯಾಕೆ ಒಳಗಿನಿಂದ ಚಿಲುಕ ಹಾಕಿಕೊಂಡಿದ್ದೆ?’

’ಮತ್ತೇನು ಮಾಡಬೇಕಾಗಿತ್ತು, ಸಾರ್?’

’ಮತ್ತೆ ಕುಡಿದಿದ್ದೀಯಾ! ಏನು ಮಾಡಬೇಕಾಗಿತ್ತಂತೆ! ತೋರಿಸತೇನೆ!’ ಪೋಲ್ಟರಾಟ್ಸ್‌ಕಿ ಅವನನ್ನು ಹೊಡೆಯುವುದರಲ್ಲಿದ್ದ. ಮನಸು ಬದಲಾಯಿಸಿದ. 

’ಎಲ್ಲಾದರೂ ಹಾಳಾಗಿ ಹೋಗು! ಮೊದಲು ಕ್ಯಾಂಡಲು ಹಚ್ಚು,’ ಅಂದ. 

’ಒಂದೇ ನಿಮಿಷ, ಸಾರ್.’

ವಾವಿಲೋ ನಿಜವಾಗಲೂ ಕುಡಿದಿದ್ದ. ಆರ್ಡಿನೆನ್ಸ್ ಸಾಜೆಂಟನ ಹೆಸರು-ದಿನದ* [ಟಿಪ್ಪಣಿ ನೋಡಿ] ಪಾರ್ಟಿಗೆ ಹೋಗಿದ್ದಾಗ ಕುಡಿದಿದ್ದ. ಮನೆಗೆ ಬಂದವನು ತನ್ನ ಬದುಕನ್ನೂ ಸಾರ್ಜೆಂಟ್ ಇವಾನ್ ಪೆಟ್ರೊವಿಚ್‌ನ ಬದುಕನ್ನೂ ಹೋಲಿಸಿ ನೋಡುವುದಕ್ಕೆ ಶುರು ಮಾಡಿದ್ದ. ಇವಾನ್ ಪೆಟ್ರೊವಿಚ್‌ಗೆ ಸಂಬಳ ಬರುತ್ತಿತ್ತು, ಮದುವೆಯಾಗಿತ್ತು, ಇನ್ನೊಂದು ವರ್ಷ ಸೈನ್ಯದ ಕೆಲಸ ಮಾಡಿ ಮನೆಗೆ ಮರಳಬಹುದಾಗಿತ್ತು. ವಾವಿಲೋನನ್ನು ಅವನಿನ್ನೂ ಚಿಕ್ಕವನಾಗಿದ್ದಾಗಲೇ ದೊಡ್ಡವರು ಕೈ ಹಿಡಿದು ಎತ್ತಿ ಮನೆಯ ಆಳುಮಗನನ್ನಾಗಿ ಮಾಡಿಕೊಂಡಿದ್ದರು. ಈಗ ಅವನಿಗೆ ನಲವತ್ತು ವರ್ಷ. ಮದುವೆಯಾಗಿರಲಿಲ್ಲ.  ದುಡುಕು ಬುದ್ಧಿಯ ತಿಕ್ಕಲ ಅನಿಸುವಂಥ ಧಣಿಯ ಸೇವೆಯಲ್ಲೇ ಅವನ ಬದುಕು ಕಳೆಯುತ್ತಿತ್ತು. ಅವನೇನೋ ಒಳ್ಳೆಯ ಧಣಿ, ಎಂದೂ ಕೈಯೆತ್ತಿ ಹೊಡೆದವನಲ್ಲ. ಆದರೂ ಇದು ಎಂಥ ಬದುಕು? ’ಕಾಕಸಸ್‌ನಿಂದ ವಾಪಸು ಹೋದಮೇಲೆ ನಿನಗೆ ಬಿಡುಗಡೆಯ ಸರ್ಟಿಫಿಕೇಟು ಕೊಡುತ್ತೇನೆ,’ ಅನ್ನುತ್ತಾನೆ. ಸ್ವಾತಂತ್ರ್ಯ ತಗೊಂಡು ನಾನೆಲ್ಲಿಗೆ ಹೋಗಲಿ, ಏನು ಮಾಡಲಿ, ನಾಯಿ ಬಾಳು ನನ್ನದು!’ ಅಂದುಕೊಂಡ ವಾವಿಲೋ. ಅವನಿಗೆ ನಿದ್ದೆ ತೂಗುತ್ತಿತ್ತು. ಯಾರಾದರೂ ಕಳ್ಳರು ಬಂದಾರೆಂದು ಬಾಗಿಲು ಭದ್ರಮಾಡಿ ನಿದ್ರೆಗೆ ಜಾರಿದ್ದ. 

ಪೋಲ್ಟರಾಟ್ಸ್‌ಕಿ ಮಲಗುವ ಕೋಣೆಗೆ ಹೋದ. ಅವನು ಆ ಕೋಣೆಯನ್ನು ತಿಖನೋವ್ ಜೊತೆಯಲ್ಲಿ ಹಂಚಿಕೊಂಡಿದ್ದ. 

’ಕಾಸು ಎಷ್ಟು ಕಳೆದೆ? ತಿಖನೋವ್ ಎಚ್ಚರವಾಗುತ್ತ ಕೇಳಿದ.

’ಉಹ್ಞೂ, ಕಳೀಲಿಲ್ಲ, ಹದಿನೇಳು ರೂಬಲ್ ಗೆದ್ದೆ, ಆಮೇಲೆ ಎಲ್ಲಾರೂ ಒಂದು ಬಾಟಲು ಶಾಂಪೇನ್ ಕುಡಿದೆವು.’

’ಮೇರಿ ವಾಸಿಲೇವ್ನಾನ ನೋಡಿದೆಯಾ?’

’ಹ್ಞೂಂ, ಮೇರಿ ವಾಸಿಲೇವ್ನಾನ ನೋಡಿದೆ,’ ಅಂದ ಪೋಲ್ಟೊರಾಟ್ಸ್ಕಿ.

’ಇನ್ನೇನು ಎದ್ದೇಳುವ ಹೊತ್ತಾಯಿತು. ಬೆಳಿಗ್ಗೆ ಆರು ಗಂಟೆಗೆ ಹೊರಡಬೇಕು.’

’ವಾವಿಲೋ! ನನ್ನ ಸರಿಯಾಗಿ ಐದು ಗಂಟೆಗೆ ಎಬ್ಬಿಸು!’ ಪೋಲ್ಟರಾಟ್ಸ್ಕಿ ಕಿರುಚಿದ.

’ಎಬ್ಬಿಸಿದರೆ ಹೊಡೆಯುತ್ತೀರಿ, ಹ್ಯಾಗೆ ಎಬ್ಬಿಸಲಿ ನಿಮ್ಮನ್ನ?’

’ಎಬ್ಬಿಸು ಅಂದೆ! ಕೇಳಿಸಿತಾ?’

’ಸರಿ!’ ಅನ್ನುತ್ತ ವಾವಿಲೋ ಧಣಿಯ ಬೂಟು, ಬಟ್ಟೆಗಳನ್ನು ತೆಗೆದುಕೊಂಡು ಹೋದ. ಪೋಲ್ಟರಾಟ್ಸ್‌ಕಿ ನಗುನಗುತ್ತ ಹಾಸಿಗೆಯ ಮೇಲೊರಗಿ ಸಿಗರೇಟು ಸೇದಿದ. ಕ್ಯಾಂಡಲು ಆರಿಸಿದ. ಕತ್ತಲಿನಲ್ಲಿ ಮೇರಿ ವಾಸಿಲೇವ್ನಾಳ ನಗುಮುಖ ಅವನ ಕಣ್ಣೆದುರು ತೇಲಿ ಬಂದಿತ್ತು. 

**

ವಾರನ್ತಸೋವ್ ದಂಪತಿ ನೇರವಾಗಿ ಮಲಗಲು ಹೋಗಲಿಲ್ಲ. ಅತಿಥಿಗಳೆಲ್ಲ ಹೋದ ಮೇಲೆ ಮೇರಿ ಗಂಡನ ಹತ್ತಿರಕ್ಕೆ ಹೋಗಿ, ಅವನೆದುರು ನಿಂತು, ನಿಷ್ಠುರವಾಗಿ ಮಾತಾಡಿದಳು. ಅವರ ಮಾತು ಫ್ರೆಂಚ್ ಭಾಷೆಯಲ್ಲಿ ನಡೆದಿತ್ತು.

’ಸರಿ! ಈಗ ಹೇಳು, ಏನು ಸಮಾಚಾರ?’

’ಅಲ್ಲಾ, ಡಿಯರ್, ಅದು…’

’ಡಿಯರು ಗಿಯರು ಬೇಡ! ಬಂದಿದ್ದವನು ದೂತ ಅಲ್ಲವಾ?’

’ಇರಬಹುದು. ನಾನು ನಿನಗೆ ಹೇಳಬಾರದು.’

’ನೀನು ಹೇಳಬಾರದಾ? ಸರಿ, ಹಾಗಾದರೆ ನಾನೇ ಹೇಳತೇನೆ…’

’ನೀನು?’

’ಬಂದಿದ್ದು ಹಾಜಿ ಮುರಾದ್, ಅಲ್ಲವಾ?’ ಮೇರಿ ವಾಸಿಲೇವ್ನಾ ಕೇಳಿದಳು. ಸಂಧಾನದ ಸಮಾಲೋಚನೆ ನಡೆಯುತ್ತಿದೆ ಅನ್ನುವ ವಿಚಾರ ಕೆಲವು ದಿನಗಳಿಂದ ಅವಳ ಕಿವಿಗೆ ಬೀಳುತ್ತಿತ್ತು. ಈಗ ತನ್ನ ಗಂಡನನ್ನು ನೋಡಲು ಸ್ವತಃ ಹಾಜಿ ಮುರಾದ್ ಬಂದಿದ್ದಾನೆ ಎಂದು ಅಂದುಕೊಂಡಿದ್ದಳು. ವಾರನ್ತಸೋವ್ ಅವಳ ಮಾತನ್ನು ಪೂರಾ ಅಲ್ಲಗಳೆಯದಿದ್ದರೂ ಬಂದಿದ್ದವನು ಅವನಲ್ಲ, ಅವನು ನಾಳೆ ಬರುತ್ತಾನೆ, ನಮ್ಮವರು ಸೌದೆ ತರಲು ಹೋಗುತ್ತಾರಲ್ಲ ಅಲ್ಲಿ ಭೇಟಿಯಾಗುತ್ತಾನೆ  ಅನ್ನುವ ಸುದ್ದಿಯನ್ನು ದೂತ ತಂದಿದ್ದ ಎಂದು ಹೇಳಿ ಅವಳಿಗೆ ನಿರಾಶೆ ಮಾಡಿದ್ದ. [ಮುಂದಿನದು, ನಾಲ್ಕನೆಯ ಅಧ್ಯಾಯದಲ್ಲಿ] 

ಕೋಟೆಯೊಳಗಿನ ಏಕತಾನದ ಬದುಕಿನಲ್ಲಿ ಈ ಯುವ ದಂಪತಿಗಳಿಗೆ ಮರು ದಿನ ನಡೆಯಲಿರುವ ಘಟನೆ ಸಂತೊಷ ತಂದಿತ್ತು. ಈ ಸುದ್ದಿ ಕೇಳಿ ಅಪ್ಪನಿಗೆ ಎಷ್ಟು ಸಂತೋಷವಾಗುತ್ತದೆ ಎಂದು ಮಾತನಾಡಿಕೊಂಡು ಅವರು ಮಲಗುವ ಹೊತ್ತಿಗೆ ರಾತ್ರಿ ಎರಡು ಗಂಟೆ ದಾಟಿತ್ತು.

[ಹೆಸರು-ದಿನ: ಕ್ರಿಶ್ಚಿಯನ್ ಮಗುವಿಗೆ ದೀಕ್ಷಾಸ್ನಾನವಾದ ದಿನ ಯಾವ ಧಾರ್ಮಿಕ ಕ್ಯಾಲೆಂಡರಿನ ಪ್ರಕಾರ ಯಾವ ಸಂತನ ಆಚರಣೆ ಬರುತ್ತದೋ ಅದೇ ದಿನ ಪ್ರತಿವರ್ಷವೂ ನೇಮ್-ಡೇ ಎಂದು ಆಚರಿಸುವ ಪದ್ಧತಿ ರಶಿಯಾ, ಯೂರೋಪು, ಅಮೆರಿಕಗಳಲ್ಲಿದೆ. ಇದು ನಾಮಕರಣಕ್ಕಿಂತ ಭಿನ್ನವಾದ ಆಚರಣೆ.]


| ಮುಂದುವರೆಯುವುದು |

‍ಲೇಖಕರು Admin

October 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: