ಪ್ರೇಮ..ಮಳ್ಳು ಮನದೊಳಗೊಂದು ಸುಳ್ಳು ಸ್ವಗತ…

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ..

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ನಿನ್ನನ್ನು ಹೀಗೆ ಒಳಬಿಟ್ಟುಕೊಳ್ಳುವುದಕ್ಕೆ ಕೆಲವೇ ಕೆಲವು ಕಾಲ ಮೊದಲು ಯಾರಿಗೂ ಲೆಕ್ಕ ಕೊಡಬೇಕಿಲ್ಲದ  ನನ್ನದೇ ಆದ ಸ್ವಂತ ವೇಳೆಯಲ್ಲಿ ದಿನವೂ ಸಂಜೆ ಬಿಡುಬೀಸಾಗಿ ಕಾಲು ಸೋತು ಬರುವ ತನಕವೂ ಊರುಕೇರಿ, ಸಮುದ್ರ ಬೇಲೆ, ಜಟಗನ ಕಟ್ಟೆ, ಗುಡ್ಡಬೇಣವನ್ನೆಲ್ಲ ಸುತ್ತಿ, ಕೊನೆಗೊಮ್ಮೆ ಮನೆಗೆ ಬರುವ ಹಾದಿಯಲ್ಲಿ ಒಂದೆರಡು ದಣಪೆದಾಟಿ, ಮೀನು ಮಾಡಲು ಸಜ್ಜಾದ ಕುಸುಮಕ್ಕನನ್ನು ಸುತ್ತುವರಿದ ನಾಲ್ಕಾರು ಬೆಕ್ಕುಗಳನ್ನು ಸಣ್ಣ ಬರಲಿನಿಂದ ಅಟ್ಟುವ ಕೆಲಸವನ್ನು ಅನೂಚಾನವಾಗಿ ಕುಕ್ಕರುಗಾಲಲ್ಲಿ ಕುಳಿತು ನಡೆಸಿಕೊಂಡುಬರುತ್ತಿದ್ದೆ ನಾನು.

ನನಗಾಗಿ ಅಂಟಿನುಂಡೆಯೋ.. ಚುರುಮುರಿ ಲಾಡೋ.. ಏನಾದರೂ ಒಂದನ್ನು ಇಟ್ಟಿರುತ್ತಿದ್ದ ಅವಳ ಕುರಿತು ಎಷ್ಟೋ ಬಾರಿ ಹೇಳಿದ್ದೆನಲ್ಲ ನಿನಗೆ. ಅದೆಷ್ಟು ಬಾರಿ ಹೇಳುತ್ತೀ ಎಂದು ಒಮ್ಮೆಯೂ ನೀನು ಸಿಡುಕದಿದ್ದರೂ ಹೇಳಿಯಾದ ಮೇಲೆ ನನಗೇ ನನ್ನ ಮೇಲೆ ನೀನೇನು ಅಂದುಕೊಂಡಿರಲಿಕ್ಕಿಲ್ಲ ಎಂದು ಬೇಜಾರಾದದ್ದಿದೆ.. ಮತ್ತು ಹೀಗೆಲ್ಲ ಆಗೋವಾಗ ಅಪ್ಪ ಯಾವಾಗಲೂ ಮುದ್ದಿನಿಂದ ಹೇಳುವ ಹಾಗೆ ನಾನು ಬರೋಬ್ಬರಿ ಹದಿನಾರೋ ಹದಿನೇಳೋ ವಯಸ್ಸಿನ ಪುಂಡಿ, ದುರದುಂಡಿ ಅಂತಲೂ ಹೇಳಿದ್ದೆ ನಿನಗೆ. ಅಲ್ಲಿಯವರೆಗೆ ಯಾಕೆ ಏನು ಎಂದೂ ಯಾರೂ ಕೇಳುವವರಿಲ್ಲದ ನನ್ನ ದೈನಂದಿನ ಈ ಕ್ರಿಯೆಮತ್ತೆ ಮುಸ್ಸಂಜೆಗೆ ಮನೆಗೆ ಮರಳಿ ಲಾಟೀನು ಬೆಳಕಿನಲ್ಲಿ ಓದಿ, ಸತ್ತುಹೋಗಿ ಬಹಳೇ ಕಾಲವಾದ ಅಜ್ಜಿಯ ಹೆಸರಿನಲ್ಲಿ ಉಂಬೋವಾಗ ಮರೆಯದೇ ಮುಷ್ಟಿ ಕುಚಲಕ್ಕಿ ಅನ್ನ ಮೀನುಪಳದಿ ಕಲೆಸಿ ಮುದ್ದೆಕಟ್ಟಿ ತಾಟಿನ ಬದಿಗಿಟ್ಟು ಉಂಡು ಮುಗಿಸಿ ಅವ್ವ ಬರುವವರೆಗೆ ಹೊರಗಿನ ಕೆಂಪು ತೆಣೆಯ ಮೇಲೆ ಮಲಗಿ ನಕ್ಷತ್ರ ಎಣಿಸುವ ತನಕ ನಿರಾತಂಕವಾಗಿ ಮುಂದುವರಿದಿರುತ್ತಿತ್ತು.

ತುಸುವೇ ಮುಗುಳ್ನಕ್ಕು ಪವಡಿಸಿರೋ ಅಂಗಳವನ್ನು ತಿಂಗಳ ಬೆಳಕಿನ ನೀರವದಲ್ಲಿ ನೋಡುತ್ತ ಅದರೊಂದಿಗೆ ಮಾತನಾಡುತ್ತ ಅವ್ವನ ಸೆರಗಿನ ಘಮದಲ್ಲಿ ನಿದ್ದೆ ಹೋಗಿ ಕನಸಲ್ಲಿ ಆಲೆಮನೆಯ ಬೆಲ್ಲ, ಅಂಕೋಲೆ ತೇರಿನ ಕಾಜಿಮಿಜಿಯ ಬುಟ್ಟಿಗಳು, ಸೇವಂತಿ ಹೂವಿನ ಚಂಡುಗಳೆಲ್ಲ ಬಂದು ಹುಬೇಹೂಬು ನನ್ನ ಪಕ್ಕವೇ ಓಡಾಡಿ ‘ತಂಗೀ ಬಾರೇ’ ಎಂದೆಲ್ಲ ಕರೆದಂತಾಗಿ ಖುಷಿಖುಷಿಯಾಗಿ ಆರಾಮಿದ್ದೆ ನಾನು.

 ಹೀಗಿರುವಾಗ ಎಲ್ಲಿಂದಲೋ ಹಾರಿ ಬಂದ ಒಂದು ಕಮ್ಮನೆಯ ಪರವಶದ ಸುರಗಿ ಮೊಗ್ಗೊಂದು ಈ ಪುಟ್ಟ ಎದೆಯೊಳಗೆ ಗೊತ್ತೇ ಆಗದೇ ಅರಳಿ ಎಸಳುದುರಿಸಿ ಕುಸುರುಗಳನ್ನು ಅಲ್ಲೇ ಸಾರಿಸಿ ಪಟ್ಟಾಗಿ ಬಿಟ್ಟುಹೋಗೆನೆಂದು ಕುಳಿತುಬಿಟ್ಟಿತು. ಆ ಸಮಯದಲ್ಲಿ ಘಮವನ್ನು ಉಸಿರೊಳಗೆ ಹಾಯಿಸಿಕೊಂಡು ಅದರ ಏರಿಳಿತವನ್ನು ಅನುಭವಿಸುವುದೊಂದನ್ನು ಬಿಟ್ಟು ಬೇರೇನೂ ಹಾದಿಯಿರಲಿಲ್ಲ ನನಗೆ. ಕೊನೆಗದು ಬೇರೇನೂ ಸೇರುವುದಿಲ್ಲ ಎಂಬಷ್ಟರಮಟ್ಟಿಗೆ ನನ್ನನ್ನೊಳಗೊಂಡು ಬಿಟ್ಟದ್ದೂ ಹೌದು ಎನ್ನು. ಅದುವರೆಗೆ ಕನಸಲ್ಲಿ ಬರುತ್ತಿದ್ದ ಜಾತ್ರೆ, ಹಬ್ಬ ಹುಣ್ಣಿವೆಗಳೆಲ್ಲ ಹೇಳಹೆಸರಿಲ್ಲದೇ ನಾಪತ್ತೆಯಾಗಿ ಆ ಜಾಗದಲ್ಲಿ ಇನ್ನಷ್ಟೇ ಕಣ್ಣಿಗೆ ಸರಿಯಾಗಿ ನಿಲುಕಬೇಕಿದ್ದ ನಿನ್ನ ರೂಹು, ಹೇಳಿಕೊಳ್ಳಲಾಗದ ಹಿತದ ಭಾವ ನಿಧಾನವಾಗಿ ಆಕ್ರಮಿಸಿಕೊಂಡು ಆ ನಂತರದಲ್ಲಿ ನಾನು ಅಪ್ಪೂಟು ಬದಲಾಗಿಬಿಟ್ಟೆ.

‘ಅಂಗಳ ಗುಡಿಸುವ ಕೆಲಸ ಮುಗಿಸಿಯೇ ಕಾಲೇಜಿಗೆ ಹೋಗಬೇಕು ನೀನು’ ಎಂಬ ಅವ್ವನ ತಾಕೀತನ್ನು ದಿನವೂ ಮರೆತುಬಿಡುವಂತಾದೆ.. ನಾಲ್ಕಾರು ಗದ್ದೆ ಬಯಲು ದಾಟಿ ಬಾವಿಯಿಂದ ನೀರು ತರುವ ಕ್ರಿಯೆ ಮುಗಿವಾಗ ಹಗ್ಗ ಬಿಟ್ಟು ಬಂದು ಬಯ್ಸಿಕೊಂಡೆ.. ಸಂಜೆ ತದಡಿ ತೀರದಲ್ಲಿ ಒದ್ದೆ ಹೊಯಿಗೆಯೊಳಗೆ ಕಾಲು ಹುದುಗಿಸಿ ತಾಸುಗಟ್ಟಲೆ ಮೌನವಾದೆ..

ರಸ್ತೆಯಂಚಿಗೆ ತಲೆಬಗ್ಗಿಸಿ ಕಾಲೇಜಿಗೆ ಹೋಗಿಬರುವಾಗ ಅಕಾರಣವಾಗಿ ಮುಗುಳ್ನಗುತ್ತ ‘ಗೊತ್ತಾಯ್ತು ಬಿಡು’ಎಂದು ಕಂಡವರಿಗೆಲ್ಲ ಸಾಬೀತಾದೆ… ಇದ್ಯಾಕೋ ಸರಿ ಇಲ್ಲ ಎನ್ನಿಸಿ ನನ್ನಷ್ಟದ ನಾನು ಅನೂಹ್ಯತೆಯ, ಅನಿವರ್ಚನೀಯ, ಅಮಲೇರುವಂತಹ, ತಳಮಳವೂ ಮಿಕ್ಸ್ ಆದ ಯಾವುದೋ ಒಂದು ವಿಂಗಡಿಸಲಾಗದ  ಭಾವದೊಂದಿಗೆ ಚಡಪಡಿಸುವ ಹೊತ್ತಿಗೆ ಗಂಗಾವಳಿಯ ಆಚೆ ದಡದಿಂದ ಯಾವ ಹಾಯಿದೋಣಿಯ ನೆರವಿಲ್ಲದೆಯೂ ತೇಲಿಬಂದ ಆ ಸುರಗಿ ಮೊಗ್ಗು ನಿಮ್ಮನೆಯ ಅಂಗಳದ್ದೆಂದು ನನಗೆ ತಿಳಿದುಹೋಗಿತ್ತು. ಮತ್ತಲ್ಲಿ ಆ ಕಡೆಯ ಕಿರುಮೀಸೆಯ ಮೊಗದಲ್ಲೊಂದು ‘ಬಾ ಇಲ್ಲಿ ಸಂಭವಿಸು’ ಎಂಬ ಇಷಾರೆ ಕೂಡ ಇದೆ ಎಂಬುದನ್ನೂ ಯಾರೋ ಒಬ್ಬರು ಬಂದು ನನ್ನ ಕಿವಿಯಲ್ಲಿ ಹೇಳಿದ ಹಾಗೆ ಪದೇ ಪದೇ ಅನ್ನಿಸತೊಡಗಿತು.

ಮೆದುಳಿಗೂ ತರ್ಕಕ್ಕೂ ಜಾಗವಿಲ್ಲದೇ ಸುಮ್ಮನೆ ಹೃದಯದಲ್ಲಿ ಆಗಿಬಿಡುವ ಪ್ರೇಮವನ್ನು ಕುರಿತು ಕೇಳಬೇಕೆಂದರೆ ಯಾರೂ ಸಿಗಲಿಲ್ಲ.ವಿವರಿಸಬೇಕೆಂದರೆ ವ್ಯಾಖ್ಯಾನಗಳು ಸಿಗಲಿಲ್ಲ.ಬರೆಯಬೇಕೆಂದರೆ ಸುಲಭವಾಗಲಿಲ್ಲ. ಅನಾಯಾಸ ಆ ಎಲ್ಲ ಭಾವಗಳನ್ನು, ಆಯಾ ಕ್ಷಣಗಳನ್ನು ಅಷ್ಟಷ್ಟು ತೀವ್ರವಾಗಿ ಅನುಭವಿಸುವುದೊಂದೇ ಉಳಿದ ದಾರಿ ಅಲ್ಲವಾ…?

ಪ್ರೇಮವೆಂದರೇನು..? ಹೀಗೊಂದು ಹುಡುಗಾಟ ಎಲ್ಲ ಕಡೆಗಳಲ್ಲಿ.. ಹಿಂದಿನ ಬಾಗಿಲು ತೆರೆದರೆ ಹಸಿರು ಕಣ್ಣುಕುಕ್ಕುವ ಹಾಗಿರುವ ಬಸಲೆ ಬಳ್ಳಿಯಲ್ಲಿ,ಅದರ ಸುಪುಷ್ಟ ಎಲೆಯ ಚಪ್ಪರದಲ್ಲಿ ನಿನ್ನ ಹೆಸರು, ಉಸಿರು, ನಗು,ಸ್ಪರ್ಶ.. ಎಲ್ಲವನ್ನೂ ಕಾಣುವುದೇ..? ನಿನ್ನ ಮೇಲಿನ ನೆನಪು, ಪ್ರೇಮ, ಮುನಿಸು, ಎಲ್ಲವೂ ಹೆಚ್ಚೆಚ್ಚಾದಾಗಲೆಲ್ಲ.. ಹಿತ್ತಲ ಹಸಿರು ಬಳ್ಳಿಯ ಸೋರೆ,ಹೀರೆಗಳನ್ನೆಲ್ಲ ಇನ್ನೊಮ್ಮೆ ತಿರುಗಿ ನೋಡಿಕೊಂಡು ಬರುವ ಹಾಗೆ ಬಯಕೆಯಾಗುವುದು ಯಾಕಂತ ನಿನಗೇನಾದರೂ ಗೊತ್ತುಂಟೇ..? ನಿನ್ನೆ ನೋಡಿದ ಕಾಯಿ/ಬಳ್ಳಿ .. ಇವತ್ತಿನ್ನೆಷ್ಟು ದೊಡ್ಡದಾಗಿರಬಹುದು ಹುಚ್ಚೀ ಅಂತ ನೀನೇ ಅಂದಂತಾಗುತ್ತದೆ ಅಲ್ಲಿ ಹೋಗಿ ನಿಂತರೆ.. ಆದರೆ ನಿನ್ನಾಣೆ ಹೇಳುತ್ತೇನೆ ಕೇಳು ನಿಜವಾಗಿಯೂ ಹಸಿರು ಇನ್ನಷ್ಟು ಹರಡಿ, ಕಾಯಿ ಇನ್ನಷ್ಟು ಸುಪುಷ್ಟವಾಗಿರುತ್ತದೆ.. ರಾತ್ರಿ ಬೆಳಗಾಗುವುದರೊಳಗೆ..

ಮತ್ತೆ ಆಗಿನ ದಿನಕ್ಕೆ ಮರಳುವುದಾದರೆ…ಸುತ್ತಲಿನ ಹತ್ತೂರುಗಳು ನನ್ನ ಕುಸುರು ,ಉಸಿರು ಎರಡರೊಳಗೂ ಇರುವ ಈ ಅಸ್ಪಷ್ಟ ಹೆಸರು ನಿನ್ನದೇ  ಎಂದು ಸಾರಿ ಸಾರಿ ಹೇಳಿದವೇ ಹೊರತು ಅದ್ಯಾವುದೆಂದು ಒಮ್ಮೆಯೂ ಸುಳಿವುಕೊಡದೇ ಸತಾಯಿಸಿದ್ದವು.

ನೋಟುಬುಕ್ಕಿನ ಕೊನೆಯ ಪೇಜಲ್ಲಾದರೂ ಕಾಡುವ ನಿನ್ನನ್ನು ತರಹೇವಾರಿಯಾಗಿ ಬರೆದೂ ಬರೆದೂ ಒಳಗಿಳಿಸಿಕೊಳ್ಳೋಣವೆಂದರೆ ಸುಮಾರು ಕಷ್ಟಪಡಬೇಕಾಯ್ತು ನಾನು.ನಿನ್ನೂರಿನ ಹುಡುಗಿಯರ ದೋಸ್ತಿ ಮಾಡಿ ಸುತ್ತೂಬಳಸಿ ನಿನ್ನ ಹೆಸರು ತಿಳಿದುಕೊಂಡು ಮೊದಲಬಾರಿ  ಕೋಣೆಯ ಕದವಿಕ್ಕಿಕೊಂಡು ನಡುಗುವ ಕೈ ಮೇಲೆ ಬರೆದು ಮುಷ್ಟಿ ಎದೆಗಿಟ್ಟುಕೊಂಡು ವಾರದವರೆಗೆ ಹಿತದ ಆಲಾಪವನ್ನನುಭವಿಸುತ್ತ ಕಳೆದ ದಿನಗಳನ್ನು ಇದುವರೆಗೂ ನನ್ನೊಳಗೆ ಬಚ್ಚಿಟ್ಟುಕೊಂಡು ನಿನಗೆ ಹೇಳಿಲ್ಲವೆಂದರೆ ಅಂಥದ್ದೇನೂ ಆಗಿಯೇ ಇಲ್ಲ ಎಂದು ತಿಳಿದುಕೊಳ್ಳಬಾರದು ನೋಡು ನೀನು.

ಬೇಲೆಯಂಚಿಗೆ ಸುರಗಿ ಮರ ಕಂಡಲ್ಲೆಲ್ಲ ಸುತ್ತುಹಾಕಿ ಅಲ್ಲೆಲ್ಲಾದರೂ ಒಣಗಿದ ಹೂಗಳ ಮೇಲೆ ಆ ಹೆಸರಿನೊಡೆಯನ ಹೆಜ್ಜೆಗುರುತೇನಾದರೂ ಕಂಡಿತೇನೋ ಎಂದು ಅರಸುತ್ತ..ಕಾಲುಹಾದಿಯಲ್ಲಿ ಕಂಡ ಸೈಕಲ್ಲುಗಳ ಸೀಟಿನ ಮೇಲೆ ನೀನೂ,ನಿನ್ನ ತೋಳಿನೊಳಗಿನ ದಂಡಿನ ಮೇಲೆ ನಾನೂ ಕುಳಿತ ಅನುಭವವಾಗುತ್ತ…

ಕನಸು ವಿಸ್ತಾರವಾಗುತ್ತಿರುವ ಹೊತ್ತಿನ ಸುಮಹೂರ್ತದಲ್ಲೇ  ಅಲ್ಲವೇ ಗಂಗೆಕೊಳ್ಳದ ಗಂಗೆ ಹಬ್ಬ ಬಂದದ್ದು; ಶಿವನ ಮದುವೆ ದಿಬ್ಬಣದ ಬೆನ್ನ ಹಿಂದೆ ಹೊರಟ ನಿನ್ನ ಕಣ್ಣು ನನ್ನ ಸೋದರತ್ತೆಯ ಮನೆಯ ದಣಪೆ ಮೇಲೆ ದಿಬ್ಬಣ ನೋಡುತ್ತ ಕುಳಿತ ನನ್ನ ಮೇಲೆ  ಬಿದ್ದದ್ದು.. ನಾನಲ್ಲಿ ನಿನ್ನ ಊಹಿಸಿರದ ಕಾರಣಕ್ಕೆ ನನ್ನೊಳಗಿನ ಎಲ್ಲ ನರನಾಡಿಯ ರಕ್ತವೂ ಕೆನ್ನೆಗೆ ನುಗ್ಗಿ ಕೆಂಪಾಗಿ, ಬೆವರ ಸೆಲೆಯೊಡೆದು, ಕೈ ಕಾಲು ಸಣ್ಣಗೆ ನಡುಗುವುದೆಲ್ಲ ನಡೆಯುತ್ತಿರುವಾಗ.. ಮೆರವಣಿಗೆಯ ಹಿಂದೆ ಹಿಂದೆ ಸರಿದುಕೊಳ್ಳುತ್ತಲೇ ನನ್ನನ್ನು ತಿರುತಿರುಗಿ ನೋಡುತ್ತಿದ್ದೆ ನೀನು..ಸಂಜೆ ಅತ್ತೆ ಮನೆಗೆ ಒಂದು ಅಳ್ಳ ಹಾಲು ಇಸಿದು ಕೊಳ್ಳುವ ನೆವ ಮಾಡಿ ಬಂದು..

‘ಯಾರಿದು ಈ ಜೋಡು ಜಡೆಯ ಹುಡುಗಿ’ ಎಂದೆಲ್ಲ ಕೇಳುತ್ತ ಅಲ್ಲೆಲ್ಲೋ ಒಳಕೋಣೆಯಲ್ಲಿ ಅಡಗಿಕೊಂಡ ನನ್ನ ಬಗ್ಗೆ ಅತ್ತೆಯ ಹತ್ತಿರ ತಿಳಿದುಕೊಂಡದ್ದು.. ಶತಪ್ರಯತ್ನ ಮಾಡಿದರೂ ಕೆಂಪುಗೊಂಡು ಹೊರಬರದ ನನ್ನನ್ನು ನನ್ನಷ್ಟಕ್ಕೇ ಬಿಟ್ಟು ಮರುದಿನ ನಾನು ನನ್ನೂರಿಗೆ ಮರಳುವ ಬಸ್ಸು ಹತ್ತುವ ಜಾಗದ ಅನತಿದೂರದಲ್ಲಿ ನಿಂತು ಎವೆಯಿಕ್ಕದೇ ಮತ್ತದೇ ಸುರಗಿಹೂವಿನ ಗೊಂಚಲು ಕೈಲಿ ಹಿಡ್ಕೊಂಡು ನೋಡುತ್ತ ನಿಂತದ್ದು..

ಎಲ್ಲ ನಿನ್ನೆ ಮೊನ್ನೆ ನಡೆದಂತಿದೆ/ಅಥವಾ ನಡೆಯದೇ ಹೋದ ಒಂದು ಕಥೆಯನ್ನು ಹೀಗೆ ಸುಳ್ಳುಸುಳ್ಳೇ ಬರೆದು ಬದುಕುತ್ತಿರುವೆನೇ ನಾನು.. ನಂಬಿಸಬೇಕು ಮನಕ್ಕೆ.. ಪ್ರೀತಿ ಸುಳ್ಳು ಸುಳ್ಳೇ ಆದರೂ ಹರಿದು ಉಕ್ಕಬೇಕು..ಹಾಗಿದ್ದರೆ ಮಾತ್ರ ಜಗದ ದುಃಖವನ್ನೆಲ್ಲ ತಾಯಿಕರುಳಲ್ಲಿ ನೋಡಿ ಸಂತೈಸಲು ಶಕ್ತಿ ಬರುವುದು ಅಲ್ಲವಾ..? ಕೆನ್ನೆ ಮತ್ತೆ ಮತ್ತೆ ರಂಗೇರಿಸಿಕೊಳ್ಳಲುಎದೆಗೆ ಮಲ್ಲಿಗೆ ಮಾಲೆ ಹಗೂರಕ್ಕೆ ಬಡಿಸಿಕೊಳ್ಳಲು ಅದೇ ಅದೇ ಈ ತರಹದ್ದೇ ಒಂದು ಸುಳ್ಳು ಸುಳ್ಳಾದರೂ ಪ್ರೇಮದ ಕಥೆಯೊಂದು ಹೀಗೆ ಸಾಗುತ್ತಿದ್ದರೆ ಅದೆಷ್ಟು ಚಂದ ಅಲ್ಲವಾ..?

ಮುಂದೆ ಕಾಲೇಜಿನ ಕಾರಿಡಾರಿನಲ್ಲಿ ಪ್ರಥಮವರ್ಷದ ನಾನೂ ಅಂತಿಮವರ್ಷದ ನೀನೂ ಮೊದಲಬಾರಿ ಎದುರುಬದುರಾದ ಹಾಗೆ ಕಥೆ ಬೆಳೆದು ನನ್ನ ತಲೆ ತಗ್ಗಿ, ನಿನ್ನ ಕಣ್ಣು ನಕ್ಷತ್ರವಾಗಿ ಮಿನುಗಿ ಪ್ರತಿದಿನ ನನ್ನ ಒಂದು ವಾರೆನೋಟಕ್ಕಾಗಿ ನೀನೂ.. ನಿನ್ನ ಒಂದು ಕಾಳಜಿ ಪ್ರೀತಿ ಮುದ್ದು ಎಲ್ಲ ತುಂಬಿದ ನಗುವಿಗಾಗಿ ನಾನೂ.. ಕಾಯುತ್ತ, ಅಷ್ಟಕ್ಕೇ ತೃಪ್ತಿಗೊಳ್ಳುತ್ತ ನೆಮ್ಮದಿ ಹೊಂದತೊಡಗಿದ ಹಾಗೆ.. ಅಷ್ಟೆಂದರೆ ಅಷ್ಟೇ.. ಇನ್ನೇನೂ ನಡೆಯಲು ಪದ,ಭಾವಗಳ ತಕರಾರು.. ವರ್ಷಾನುವರ್ಷ. ಹೆಚ್ಚೆಂದರೆ ಒಂದೆರಡು ಬಾರಿ ಹತ್ತಿರದಿಂದ ಹಾಯುವಾಗ ಮೆಲ್ಲಗೆ ನನ್ನ ಹೆಸರು ಕೂಗಿ ಕರೆದಿರಬಹುದು ನೀನು..

ಪ್ರತಿದಿನವೂ ನೀನು ಕಾಲೇಜಿಗೆ ಹತ್ತಿ ಬರುತ್ತಿದ್ದ ಬಾಡಿಗೆ ಸೈಕಲ್ಲನ್ನು ಸೈಕಲ್ ಸ್ಟ್ಯಾಂಡಿನ ಸಾವಿರ ಸೈಕಲ್ಲುಗಳ ಮಧ್ಯೆಯೂ ಗುರುತಿಸಿ ಯಾರೂ ಕಾಣದ ಸಮಯದಲ್ಲಿ ಮೆಲ್ಲಗೆ ಸವರುತ್ತಿದ್ದೆ ನಾನು.ನಿನಗದು ಹೇಗೊ ಗೊತ್ತಾದ ನಂತರ ದಿನಂಪ್ರತಿ ಅದರ ಹ್ಯಾಂಡಲ್ಲಿಗೊಂದು ಸುರಗಿಮಾಲೆ ತೂಗತೊಡಗಿತು.. ಅದಿಲ್ಲದಾಗ ಕಾಡುಮಲ್ಲಿಗೆಯೋ, ಚಂಡುಹೂವೋ ಏನಾದರೊಂದು.. ಅದು ನನ್ನ ಜಡೆಗಾಗಿಯೇ ಎಂದು ಯಾರೂ ಹೇಳಿಕೊಡಬೇಕಾಗಿರಲಿಲ್ಲ ನನಗೆ.. ವರ್ಷಾನುವರ್ಷ ಎಷ್ಟೊಂದು ಹೂಗಳು ಓಡಾಡಿದವು ನಮ್ಮಿಬ್ಬರ ಮಧ್ಯೆ.. ಜೊತೆಗೆ ಪುಟ್ಟ ಪುಟ್ಟ ಕವಿತೆಗಳು. ಎಷ್ಟೊಂದು ಸುಂದರ ಅಲ್ಲವಾ ಈ ಕಾಲಾವಧಿಯ ಕಥೆ ಹೀಗೆ ಬೆಳೆಯುತ್ತ ಹೋಗುವುದು… ನಿಜವಾಗಲೂ ನೀನು ಇದ್ದದ್ದು ಹೌದಾ ಹುಡುಗಾ..?ನನಗಾಗಿ ಸುರಗಿ ಮಾಲೆ ಕಟ್ಟಿ ತಂದು ಸೈಕಲ್ಲಿಗೆ ಸಿಕ್ಕಿಸಿ ಹೋಗಿಬಿಡುವವನು.

ಯಾವುದೋ ಒಂದು ಜಾತ್ರೆ,ಯಕ್ಷಗಾನ,ಮದುವೆಯಲ್ಲಿ ಅಕಸ್ಮಾತ್ತಾಗಿನನ್ನ ಗೆಳತಿಯರೊಂದಿಗೆ ನಾನೂ.. ನಿನ್ನ ಗೆಳೆಯರೊಂದಿಗೆ ನೀನೂ ಸಿಕ್ಕಿ ಅವರ ಕಣ್ಣಳತೆಯಲ್ಲೇ ಒಂದೆರಡು ಮಾತು, ಕ್ಷಣವೂ ಬಿಡದ ರಾಶಿ ಪ್ರೀತಿಯ ನೋಟ ಬಿಟ್ಟರೆ ಇನ್ನೇನು ಇತ್ತು ಹೇಳು ನಮ್ಮ ನಡುವೆ.. ಅದೆಷ್ಟೊಂದು ಸುರಕ್ಷತೆ,ನೆಮ್ಮದಿ.. ಹೇಳಿದರೆ ಈ ಅಸುರಕ್ಷಿತ ದಿನಮಾನದಲ್ಲಿ ಇಂದೆಂತ ಮಳ್ಳು ಪ್ರೀತಿ ಎಂದು ತಾಸುಗಟ್ಟಲೆ ಮುಸಿಮುಸಿ ನಕ್ಕಾರು ಈಗಿನ ಪ್ರಾಕ್ಟಿಕಲ್ ಜನ ಅಲ್ಲವಾ.. ಅಲ್ಲಿಂದ ಇಲ್ಲಿಯವರೆಗೆ ನೋಡೇ ಇಲ್ಲದ ನಿನ್ನೆದೆಯ ಬೆಚ್ಚಗಿನ ತಾವಿನಲ್ಲಿ ನಾನೂ… ಮುಟ್ಟೇ ಇಲ್ಲದ ನನ್ನ ತೋಳುಬಳಸಿ ಹಣೆಗೆ ಮುತ್ತಿಕ್ಕಿ ನೀನೂ ಆಕಾಶದಷ್ಟು ಅನಂತವೂ.. ಸಮುದ್ರದಷ್ಟು ಆಳವೂ ಎಂದೆಲ್ಲ ಲೋಕ ವಿವರಿಸುವ, ನನ್ನ ಲೆಕ್ಕದಲ್ಲಿ ಹೇಳಬೇಕೆಂದರೆ ಹೋಲಿಕೆಯನ್ನೇ ಕೊಡಲಾಗದ ಪ್ರೀತಿಯ ನಿತ್ಯಹರಿದ್ವರ್ಣದ ಕಾಡಿನಲ್ಲಿ ಸಂಪನ್ನವಾಗುತ್ತಿದ್ದರೂ.. ಅಂದಿನ ಅವೆಲ್ಲವನ್ನೂ ಈಗಲೂ ನೆನಪಿಸಿಕೊಂಡು ನಿನ್ನ ಕುರುಹುಗಳನ್ನು ಆಗಾಗ ನೋಡುತ್ತೇನೆ ನಾನು…

ನಿನ್ನೊಂದಿಗೆ ಮುನಿಸಾದಾಗ ಈ ಕಾಲ್ಪನಿಕ ಕುರುಹುಗಳು ಕಾಯುತ್ತವೆ ನನ್ನನ್ನು.. ನಿನಗಿವೆಲ್ಲ ಗೊತ್ತಿಲ್ಲ.. ಅಥವಾ ಗೊತ್ತಿದ್ದ ಕಾರಣಕ್ಕೇ ಆದಷ್ಟು ಬೇಗ ಮುನಿಸು ಮುಗಿಸಿ ನನ್ನ ಹಿಂದೆ ಮುಂದೆ ಅದೇ ಆಗಲೇ ಹೇಳಿದೆನಲ್ಲ ಹಸಿರು ಚಪ್ಪರದ ಬಳಿ ದಿನದಿನಕ್ಕೂ ಬೆಳೆವ ನಾನೇ ನೆಟ್ಟು ಹಬ್ಬಿಸಿದ ಹಿತ್ತಲ ಬಳಿ ಅನೂಹ್ಯವಾಗಿ,ವ್ಯಾಮೋಹವಾಗಿ ಹೀಗೆಸುತ್ತುತ್ತ ಎದೆಗೆಳೆದುಕೊಂಡು ಮತ್ತೆ ಮತ್ತೆ ಪ್ರೀತಿ ಮಾಡುತ್ತೀಯೋ ಏನೋ..

ಪ್ರೀತಿಯ ಕಾರಣಕ್ಕಾಗಿ ಹಲವಾರು ಸಂಗತಿಗಳನ್ನು ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುತ್ತಲೇ.ತನ್ಮೂಲಕ ಇನ್ನಷ್ಟು ಗಾಢವಾಗಿ ಅಂಟಿಕೊಳ್ಳುತ್ತಲೇ ಸುಳ್ಳು ಸುಳ್ಳಾದರೂ ಬದುಕಿಬಿಡುವುದು ಎಷ್ಟು ಚಂದ ಅಲ್ಲವಾ…

February 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಅಶೋಕ್

    ಅದ್ಭುತ ಅಕ್ಷರಗಳ ಜೋಡಣೆ ಜೊತೆಗೆ ಚೊಕ್ಕ ಬರವಣಿಗೆ. ಹಳೆಯ ಭಾವನೆ ಹೊಸ ಲಂಗ ತೊಟ್ಟು ಹೊಸ ನನಸಿನ ಮುನ್ನುಡಿಗೆ ಮನದ ಮಾತುಗಳ ಸಾಲು ಹೊಸೆದ ಹಾಗಿದೆ ಕಥೆ. ಮರೆಯಾದ ಮನದ ಅಭೀಪ್ಸೆ ಅಕ್ಷರ ರೂಪ ತಳೆದು ಹೊಸ ಕನಸಿಗೆ ನಾಂದಿ ಹಾಡಿದ ನವ ವಿನೂತನ ಭಾವದ ಸಮರ್ಪಣೆ. ಇದು ನವಯವ್ವನದ ಎಲ್ಲ ಮನಸಿನ ಹುಡುಗ ಹುಡುಗಿಯ ಕಲ್ಪನೆಯ ಕೂಸು. ನನಸಾಗದ ಆದರೆ ಅದೇ ನನಸು ಹೊಸ ಕಲ್ಪನೆ ಹುಟ್ಟಿಸುವ ಆಸೆಯ ಮೂಟೆ

    ಪ್ರತಿಕ್ರಿಯೆ
  2. ಸುಧಾರಾಣಿ ನಾಯ್ಕ

    ನವಿರಾದ ಪ್ರೇಮ ಲಹರಿ….ಸುಂದರವಾಗಿದೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Kiran BhatCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: