ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮ ಮತ್ತು ಟೀ, ಎರಡೂ ಕಾಸ್ಟ್ ಲಿ ರೀ!

ಮಂಜು ನಾರಾಯಣ್


ಅಂದು ನನ್ನ ಅಜ್ಜಿತಾತಂದಿರು ನನಗಾಗಿ ಮನೆಗೆ ಬರುತ್ತಿದ್ದಾರೆಂಬ ವಿಷಯವು ನನ್ನ ತಂದೆ ತಾಯಂದಿರಿಂದ ತಿಳಿಯಲಾಗಿ ಅವರ ಅಲಿಖಿತ ಆಜ್ಞೆಯಂತೆ ಈ ಬೆಂಗಳೂರನ್ನು ಬಿಟ್ಟು ನನ್ನ ಮೂಲ ಬೇರುಗಳನ್ನೊಮ್ಮೆ ತಡಕಿಬರಲು ನಾನು ಊರಿಗೆ ಹೋಗಿದ್ದೆ. ಊರಿಗೆ ಹೋಗುಬರುವುದು ನಿಗದಿತ ಸಮಯದಲ್ಲಿ ಆಗಲಿಲ್ಲವಾದರೂ ವಿಧಿನಿಯಮದಂತೆ ತಲುಪಿದೆ. ಶಾಸ್ತ್ರೋಸ್ತ್ರವಾಗಿ ಅಡುಗೆ ಮನೆಯಿಂದ ಹೊರಬಂದ ತಿಂಡಿ-ಊಟಗಳ ಘಮಘಮ ಪರಿಮಳಗಳ ನಡುವೆಯೇ, ಹೊರಗೆ ಕ್ಷೇಮಗಳ ಕುಶಲೋಪಚಾರಿ ಸಾಂಗವಾಗಿ ನಡೆದಿತ್ತು, ಉತ್ತರಕೊಟ್ಟಷ್ಟೂ ಪ್ರಶ್ನೆಗಳ ಹಾವಳಿಗಳಿಂದಲೋ ಅಥವಾ ಪ್ರಯಾಣದ ಪ್ರಯಾಸದಿಂದಲೋ ಕಣ್ಣು ಮಂಪರುಮಂಪರಾಗಿ ಹಾಸಿಗೆಗೆ ಹೊರಳಿ ದೇಹ ಹೂವಾಗುವಷ್ಟೊತ್ತಿಗೆ ದಿನಕಳೆದಿತ್ತು.
ಎದ್ದಾಗ ಅದ್ಯಾವುದೋ ಹೊತ್ತಿನಲ್ಲಿ ಅಜ್ಜಿತಾತಂದಿರು ಬಂದು ಹೊರಟುಹೋದರೆಂದು ಮನೆಯಲ್ಲಿ ಕಥೆಹೇಳಿದರು, ಊರಿಗೋಗುವಾಗಲೂ ಬೆಂಗಳೂರನ್ನು ಬೆನ್ನಿಗೇ ಕಟ್ಟಿಕೊಂಡುಗೋವ ನಾನು ಮರುದಿನ ಬೆಳಿಗ್ಗೆ ಏಳು ಘಟೆಗೇ ಬೆಂಗಳೂರಿನಲ್ಲಿ ರಿಹರ್ಸಲ್ ಇದ್ದದ್ದರಿಂದ ಮುಂಜಾನೆ ನಾಲ್ಕುವರೆ ಗಂಟೆಗೇ ಎದ್ದು ನನ್ನ ಸಂಗಾತಿಯನ್ನೂ ಎಬ್ಬಿಸಿ ಹೊರಡಿಸಿಕೊಂಡು ಬೆಂಗಳೂರಿನತ್ತ ಕಾಲ್ಕಿತ್ತೆ. ಆಗಷ್ಟೇ ಮುನುಷ್ಯ ಪ್ರಾಣಿಗಳು ಕಂಬಳಿಯನ್ನೋ.., ರಗ್ಗುಗಳನ್ನೋ.. ಗುಬರಾಕಿಕೊಂಡು ನಡೆದಾಡುತ್ತಿದ್ದರೆ ಯಾರಿಗೇ ಆಗಲಿ ಮೊದಲು ಭಯದಿಂದ ವಿಚಲಿತರಾಗುತ್ತಿದ್ದರು. ಹತ್ತಿರ ಬಂದಾಗಷ್ಟೇ ಆಕೃತಿಯನ್ನೊಮ್ಮೆ ಸಂಪೂರ್ಣವಾಗಿ ಗಮನಿಸಿದಾಗಲೇ ಮನುಷ್ಯರ ಹೋಲಿಕೆ ಪಡೆಯುತ್ತಿತ್ತು. ಒಮ್ಮೊಮ್ಮೆ ಒಮ್ಮೆಗೆ ಮೂಡುತ್ತಿದ್ದ ಆಕೃತಿಗಳಿಂದ ನನ್ನ ಸಂಗಾತಿಯಂತೂ ಹೆದರಿ ಹೌಹಾರುತ್ತಿದ್ದಳು, ನಾನು ಸಮಾಧಾನಿಸಿ ದಾರಿಗೆತರುತ್ತಿದ್ದೆ.
ಇನ್ನುಕೆಲವೆಡೆ ಗುಂಪುಗುಂಪಾಗಿ ಕೂತು ಮಧ್ಯ ಬೆಂಕಿಯನ್ನು ಹಾಕಿಕೊಂಡು ಕಾವು ಕಾಸುತ್ತಿದ್ದರಾದರೂ, ಯಾರೊಬ್ಬರೂ ಯಾರೊಂದಿಗೂ ಮಾತನಾಡದೆ ಮೌನವಾಗಿ ಕೂರುತ್ತಲೂ ಹಾದಿಯಲ್ಲಿ ಬರುತ್ತಿದ್ದವರನ್ನು ಕೆಕ್ಕರಿಸಿ ನೋಡುತ್ತಿದ್ದರೆ…. ದಂಡುಪಾಳ್ಯ ಸಿನಿಮಾ ನೆನಪಾಗಿ ನಾನಂತೂ ನನ್ನಾಕೆಯನ್ನು ಬಿಗಿಯಾಗಿಡಿದುಕೊಂಡು ವೇಗವಾಗಿ ಹಾದಿಸವೆಸಿದೆ.
ನನ್ನ ಗ್ರಾಮವನ್ನು ಬಿಟ್ಟು ಹೆದ್ದಾರಿಯಲ್ಲಿ ಹಾದಿಸವೆಸುತ್ತಿದ್ದರೆ ಮುಂಜಾನೆಯ ಥಂಡಿಯ ಚಳಿಗೆ ಒಳಗೊಳಗೇ ನನ್ನ ಮೂಳೆಗಳೂ ಸವೆಯುತ್ತಿದ್ದವು. ಸುಮಾರು ಐದು ಗಂಟೆ ಇರಬಹುದು ಗಾಳಿ ಬೀಸಿದಷ್ಟೂ ಚಳಿಯ ಚಾಟಿಏಟು ಬಿರುಸಾಗಿಯೇ ಬೀಸುತ್ತಿತ್ತು. ಸಂಗಾತಿಯ ಕೈಗೆ, ಕಿವಿಗೆ ನನ್ನ ಕೈಸೋಕುತ್ತಲೇ ಮತ್ತೂ ಚಳಿ ಹೆಚ್ಚಾಗುತ್ತಿತ್ತಾದರೂ, ಅವಳೆದೆಗೂಡು ಬೆಚ್ಚಗಿದ್ದು ಅವಳ ದೇಹದಿಂದ ಬಿಸಿಗಾಳಿ ಹೊರಬರುತ್ತಿದ್ದರೆ ನನ್ನ ಮುಖವನ್ನಾದರೂ ಒಮ್ಮೆ ಅವಳ ಉಸಿರಾಟದೆಡೆಗೆ ತೆಗೆದುಕೊಂಡೋಗಲು ಮನಸ್ಸಾದರೂ.. ಅತಿ ನಾಚಿಕಿಯಿಂದ ಸುಮ್ಮನಾದೆ.
ಆಗತಾನೆ ಆಗಸದಲ್ಲಿ ಬೆಳಗಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿತ್ತಾದರೂ ನನ್ನ ದೇಹದ ನಡುಕ ಕಡಿಮೆಯಾಗುವ ಲಕ್ಷಣಗಳೇ ಇಲ್ಲವಾಗಿತ್ತು. ನಸುಕಿನಲ್ಲಿ ಬೆಟ್ಟಗುಡ್ಡಗಳನ್ನು ದಾಟಿಕೊಂಡೂ ಸೀಳಿಕೊಂಡೂ ದಾರಿ ಎಂದಿನಂತೆ ಸಾಗುತ್ತಿತ್ತು. ಸ್ವಲ್ಪ ದೂರದನಂತರ ರಸ್ತೆಯ ಎಡಬಲ ಬದಿಗಳಲ್ಲಿ ಅಷ್ಟೇನೂ ಪ್ರಕಾಶಮಾನಿಲ್ಲದ ಮಂದ ಬೆಳಕಿರುವ ಗುಡಿಸಲೆರಡು ಕಂಡವು. ಅದು ಚಹಾ ಅಂಗಡಿಯೆಂದು ಬಹುಬೇಗನೆ ಅಂದಾಜಿಸಬಹುದಾಗಿತ್ತು. ಹೊರಗಿಟ್ಟಿದ್ದ ಚಹಾ ಲೋಟಗಳು, ಟೀ ಹಬೆಯ ವಾಸನೆಗಳು ಸಾಕ್ಷಿಗಳಾಗಿದ್ದವು. ನನ್ನ ಸಂಗಾತಿ ತನಗೆ ಚಹಾ ಬೇಡ ಎಂದರೂ ಸಹ ಅವಳನ್ನು ಮುದ್ದಿಸಿ-ರಮಿಸಿ ಅಲ್ಲೇ ಬದಿಯಲ್ಲಿ ನಿಲ್ಲಿಸಿ ಚಹಕೊಳ್ಳಲು ಮುಂದಾದೆ. ಮನೆ ಕಮ್ ಅಂಗಡಿಯಂತಿದ್ದ ಅಂಗಡಿಯೊಳಹೊಕ್ಕೆ.
ಗಲ್ಲ ಪೆಟ್ಟಿಗೆಯಲ್ಲಿ ಹುಡುಗಿಯೊಬ್ಬಳು ನಿಂತಿದ್ದಳು, ನಾನು ನಡುಗುತ್ತಿದ್ದ ನನ್ನ ಕೈಗಳನ್ನು ಉರುಬಿಕೊಳ್ಳುತ್ತಲೂ… ಉಜ್ಜಕೊಳ್ಳುತ್ತಲೂ… ‘ಟೀ ಕೊಡಿಮ್ಮಾ….’ ಎಂದು, ಹೊರಗೆ ಕೂತುಕೊಳ್ಳಲು ಜಾಗವಿದೆಯೇ ತಡಕಾಡಿದೆ, ಜಾಗ ನನಗಷ್ಟು ಹಿಡಿಸದೆ ನಿಂತೇ ಹೀರೋಣ ಎಂದು ನಿರ್ಧರಿಸಿದೆ. ನಾನು ಟೀ ಕೇಳಿದ್ದಕ್ಕೆ ಗಲ್ಲದ ಬಳಿಯಿದ್ದ ದೇಹ ಮಿಸುಕಾಡಿದಂತೆ ಕಾಣಲಿಲ್ಲ. ಯಾಕೆ, ನಾನು ಕೇಳಿದ್ದು ಆಕೆಗೆ ಕೇಳಿಸಲಿಲ್ಲವೇ..? ಅಥವಾ ಓಹೋ.. ಸಾಮಾನ್ಯವಾಗಿ ಹಳ್ಳಿಯ ಹುಡುಗಿಯರಿಗೆ ‘ಅಮ್ಮಾ..’ ಎಂದು ಸಂಭೋಧಿಸಿದರೆ ಅವರಿಗದು ಅಷ್ಟು ಸರಿಕಾಣುವುದಿಲ್ಲ. ನಂತರ ನನ್ನತಪ್ಪು ತಿದ್ದುಕೊಳ್ಳುತ್ತಾ.. ‘ಮೇಡಂ.. ಒಂದು ಪಾರ್ಟ್ ಟೀ ಕೇಳಿದ್ದೆ…’ ಈಗಾಕೆ ಮುಗುಳ್ನಕ್ಕಳು. ಆದರೆ ಎರಡು ಮೂರುನಿಮಿಷಗಳಾಗುತ್ತಿದ್ದರೂ ಟೀ ಬರಲೇ ಇಲ್ಲ. ಸಂಗಾತಿಯೊಬ್ಬಳೇ ಸ್ವಲ್ಪದೂರದಲ್ಲಿ ನಿಂತು ನನ್ನನ್ನೇ ಗುರಾಯಿಸುತ್ತಿದ್ದಾಳೆ. ಸಮಯ ಜಾರಿಹೋಗುತ್ತಿದ್ದರಿಂದಲೋ.. ಒಂದೇ ಕಡೆ ನಿಂತಿದ್ದರಿಂದಲೋ… ನನಗೆ ಚಳಿಜಾಸ್ತಿಯಾಗುತ್ತಿದೆಂದೆನಿಸಿತು.
ಯಾಕ್ ಇಷ್ಟೊತ್ತಾದರೂ ಟೀ ಕೊಡುತ್ತಿಲ್ಲವಲ್ಲಾ.. ಏನು ಕಥೆಯೆಂದು ಒಮ್ಮೆ ಸೂಕ್ಷ್ಮವಾಗಿ ಆ ಹುಡುಗಿಯೆಡೆಗೆ ದೃಷ್ಟಿಹಾಯಿಸಿದೆ. ಆಗಷ್ಟೇ ಬಹುಶಃ ಹೈಸ್ಕೂಲಿಗೆ ಬಂದಿರುವ ಹುಡುಗಿಯದು, ದೇಹದಲ್ಲೆಲ್ಲಾ ಹುಡುಗಾಟಿಕೆ ತಾಂಡವವಾಡುತ್ತಿತ್ತು. ತದೇಕಚಿತ್ತದಿಂದ ಆಕೆಯ ಕಣ್ಣುಗಳು ಏನನ್ನೋ ನೋಡುತ್ತಾ.., ಆಗಾಗ ಮುಗುಳ್ನಗುತ್ತಾ… ಮುಂಗುರುಳೆನ್ನಲು ಕಷ್ಟಸಾಧ್ಯವೆನ್ನುವಹಾಗೆ ತನ್ನ ಕೂದಲುಗಳನ್ನು ಸುರುಳಿಸುರುಳಿಯಾಗಿ ಎಳೆದುಕೊಳ್ಳುತ್ತಾ.. ತನ್ನ ಕೈಬೆರಳಿನುಗುರನ್ನು ಆವಾಗಾವಾಗ ಹಲ್ಲಿಗೆ ಸಿಗಿಸಿಕೊಳ್ಳುತ್ತಾ… ನಾಚುತ್ತಿದ್ದುದು ಕಂಡುಬಂತು. ಇದ್ಯಾಕೆ ಈಕೆ ಹೀಗಾಡುತ್ತಿದ್ದಾಳಲ್ಲಾ… ಎಂದು ಆಕೆನೋಡುತ್ತಿದ್ದ ದೃಷ್ಟಿಯೆಡೆಗೆ ನಾನೂ ನೋಡಿದ ನಂತರವೇ ತಿಳಿದದ್ದು, ಆ ಅಂಗಡಿಯಲ್ಲಿ ಇನ್ನೊಂದು ಜೀವವಿತ್ತೆಂದು. ಸರಿಸುಮಾರು ದೈತ್ಯವೆನ್ನುವಷ್ಟು, ಮರಳುಲಾರಿಗೆ ಹೋಗುವವನೋ ಅಥವಾ ಕಷ್ಟವಾದ ಕೂಲಿ ಕೆಲಸಮಾಡುವ ಸರಿಸುಮಾರು ಇಪ್ಪತ್ತೈದರ ಆಸುಪಾಸಿನ ಕರಿ ಜೀವವೊಂದು, ಪೆಪ್ಸಿ ಬಾಟ್ಲಿಯ ಟ್ರೇಯನ್ನು ಬೋರಲು ಮಾಡಿಕೊಂಡು ಅಕೆಯ ಎದುರೂ ಮೂಲೆಯಲ್ಲಿ ಕುಳಿತು ಅವಳನ್ನೇ ನೋಡುತ್ತಿತ್ತು. ಅವನ ಪಕ್ಕದಲ್ಲಿ ಅದಾಗಲೇ ಹಬೆ ಹಾರಿಹೋಗಿದ್ದ ಟೀ ಕಪ್ಪಿನ ತುಂಬಾ ಟೀ ತುಂಬಿತ್ತು. ಹೊರಗೆ ಢಾಳ ಕತ್ತಲಿದ್ದರಿಂದಲೋ ಏನೋ ಅಂಗಡಿಯೊಳಗೆ ಸೀಮೇಎಣ್ಣೆ ಬುಡ್ಡಿಯ ಬೆಳಕಿನಲ್ಲಿಯೂ ಸಹ ಅದು ಪ್ರೀತಿಯೋ. ಪ್ರೇಮವೂ ಅದೇನು ಸುಡುಗಾಡೋ, ಒಟ್ಟಿನಲ್ಲಿ ಸ್ಪಷ್ಟವಾಗಿ ಎಲ್ಲವೂ ಗೋಚರಿಸುತ್ತಿತ್ತು.
ಇಹಲೋಕ, ಭೂಲೋಕವನ್ನೇ ತ್ಯೇಜಿಸಿರುವವರಿಗೆ ನನ್ನ ಜುಜುಬಿ ಟೀ ಆರ್ಡರ್ ಕೇಳಿಸುವುದೇ…? ಇವರ ವ್ರತಕ್ಕೆ ಭಂಗತರುವುದೆಂತು, ಬೇರೆ ಅಂಗಡಿಗೋಗೋಣ ಎಂದುಕೊಂಡೆನಾದರೂ ನನ್ನ ಸಂಗಾತಿಗೆ ಸೋಲಿನ ಮುಖತೋರಿಸಲು ಕಸಿವಿಸಿಯಾಗಿ, ಕೊನೆಬಾರಿಯ ಪ್ರಯತ್ನಕ್ಕೆ, ನನ್ನ ಮುಖಕ್ಕೆ ಕಟ್ಟಿದ್ದ ಕರ್ಚೀಫ್ ನ್ನು ಬಿಚ್ಚಿ ‘ ಹಲೋ ಎಕ್ಸ್ ಕ್ಯೂಸ್..ಮಿ… ಒಂದು ಟೀ ಕೊಡಕಾಗುತ್ತಾ…. ಆಗ್ಲಿಂದಾ ಕೇಳ್ತಾ ಇದ್ದೀನಿ….’ ಎಂದೆ. ಈ ಬಾರಿ ನನಗೆ ಸೋಲುಂಟಾಗಲಿಲ್ಲ. ನನ್ನ ಈ ಡೈಲಾಗ್ ಗೆ ಎರಡೂ ಜೀವಗಳು ಮಿಸುಕಾಡಿದವು. ಆ ಹುಡುಗಿಯಂತೂ ನಗುವಿನೊಂದಿಗೆ ಓಟಕಿತ್ತಳು, ಆ ದೈತ್ಯ ತಲೆತಗ್ಗಿಸಿಕೊಂಡು ಕೈಯಲ್ಲಿಡಿದಿದ್ದ ಬನ್ ತಿನ್ನಲು ಪ್ರಾರಂಭಿಸಿತು. ಮರುಕ್ಷಣವೇ ಟೀ ಕಪ್ ಗಲ್ಲದಮೇಲೆ ಹಾಜರ್, ನಾನೇನು ಕಡಿಮೆಎಂಬಂತೆ ಪಾಕೆಟ್ನಿಂದ ಕೈಗೆಸಿಕ್ಕಿದ ನೋಟೊಂದನ್ನು ಒಗೆದೆ. ಟೀ ಕಪ್ ತೆಗೆದುಕೊಂಡು ಅಲ್ಲಿಯವೆರೆಗೂ ಒಂಟಿಯಾಗಿದ್ದ ನನ್ನ ಸಂಗಾತಿಯಬಳಿಬಂದು, ವಾರೆಗಣ್ಣಿನಿಂದಲೇ ಆ ರೋಮಿಯೋ ಜ್ಯೂಲಿಯೇಟ್ಟನ್ನು ಗಮನಿಸುತ್ತಾ… ಟೀ ಹೀರುತ್ತಿದ್ದೆ.
ಇಂತಹ ದೃಶ್ಯವನ್ನು ನಾನಾವ ಸಿನಿಮಾದಲ್ಲೂ ನೋಡಿರಲಿಲ್ಲ. ಇದ್ದಕಿದ್ದಹಾಗೆ ಚೊಂಬಿಡಿದು ದೃಶ್ಯ ಪ್ರವೇಶಿಸಿದ ಹೆಂಗಸು ಅದೇನೋ ಗೊಣಗುತ್ತಲೇ ಅಂಗಡಿ ಪ್ರವೇಶಿಸಿದರೆ, ಗಲ್ಲದಬಳಿ ಕೂತಿದ್ದ ಹುಡುಗಿ ಚಕ್ಕನೆ ಮನೆಜಗತ್ತಿಗೆ ಸೇರಿಕೊಂಡರೆ, ಕರಿಪ್ರಾಣಿ ಹೊರಜಗತ್ತಿಗೆ ಸೇರಲು ಅನುವಾಗುತ್ತಿತ್ತ. ಬಂಡಾಯ ಮತ್ತು ಪ್ರೇಮ ಒಟ್ಟೊಟ್ಟಿಗೇ ಇರುವುದೆಂದು ಎಲ್ಲೋ ಕೇಳಿದ್ದ ನೆನಪು ನನಗೆ. ಭೂತಕಾಲದಲ್ಲೊಮ್ಮೆ ಬಿಸಿಯಾಗಿದ್ದ ಟೀಯೊಂದು ಆ ಕರಿಪ್ರಾಣಿಯ ಕೈಯೊಳಗೆ ತುಂಬಾ ಬಿಸಿಬಿಸಿ ಇದೆಯೇನೋ… ಎಂಬಂತೆ ನಿಧಾನವಾಗಿ ಕುಡಿಯುತ್ತಿದ್ದರೆ, ಅದ್ಯಾಕೋ ನನ್ನ ಕೈಲಿದ್ದ ಬಿಸಿ ಟೀಯೂ ಸಹ ತಣ್ಣಗಾಗಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಸಣ್ಣಗೆ ಗೊಣಗುತ್ತಿದ್ದ ಹೆಂಗಸು ಈಗ ಜೋರುಜೋರಾಗಿ ಕರಿಜೀವಿಯೆಡೆಗೆ ಏನನ್ನೋ ತೂರುತ್ತಾ…. ಮಾತುಗಳು ಬಿರುಸುಗೊಂಡವು. ಆ ಮಾತುಗಳು ನನಗೇ ಬೈದಂತೆ ಕಾಣುತ್ತಾ.. ನನಗ್ಯಾಕೋ ಭಯವಾಗಿ ಇನ್ಯಾಕೋ ಅಲ್ಲಿರುವುದು ಸರಿಯಲ್ಲವೆನಿಸಿ ಕಪ್ ನ್ನು ಬಿಸಾಕಿ ನಾನೂ ಸಂಗಾತಿಯೊಡನೆ ಪುರ್ರನೆ ಹೊಂಟುಬಿಟ್ಟೆ. ಎಲ್ಲವನ್ನೂ ಕಣ್ಣಿನಲ್ಲಿ ಮತ್ತೆ ಮತ್ತೆ ತುಂಬಿಕೊಳ್ಳುತ್ತಾ ಒಂದಷ್ಟು ದೂರ ಸಾಗಿದಮೇಲೆ, ಆಕಾಶದಲ್ಲಿ ತಿಳಿನೀಲಿ ಬಾನು ಗೋಚರಿಸಲು, ಸಂಗಾತಿಯೇಕೋ ಸುಸ್ತಾದವಳಂತೆ ಕಂಡಳು. ಒಡನೆಯೇ ಸಿಕ್ಕ ಪೆಟ್ರೋಲ್ ಬಂಕಿನಲ್ಲಿ ನನ್ನ ಸಂಗಾತಿಯೊಡಲಿಗೆ ಪೆಟ್ರೋಲ್ ತುಂಬಿಸಿ ಹಣ ಕೊಡಲು ನನ್ನ ಪರ್ಸ ತೆಗೆದಾಗಲೇ ನನಗೆ ತಿಳಿದದ್ದು, ನಾನು ಆ ಗಲ್ಲದಬಳಿ ಇಟ್ಟದ್ದು ಐವತ್ತು ರೂಪಾಯಿ ಎಂದು. ಒಂದು ಟೀಗೆ ಐವತ್ತು ರೂಪಾಯೇ…? ನನ್ನಬಗ್ಗೆಯೇ ಸಿಟ್ಟು ಬಂತು.
ಇರಲಿಬಿಡಿ ಅವರ ಪ್ರೇಮಕ್ಕೆ ಇದು ನನ್ನ ಪ್ರೇಮದ ಕಾಣಿಕೆ. ಅಲ್ಲವೇ….?
 

‍ಲೇಖಕರು G

12 November, 2013

1 Comment

  1. sudha.b.o.

    ಅವರ ಪ್ರೇಮಕ್ಕೆ ನಿಮ್ಮದೊಂದು ಕಾಣಿಕೆ.
    ನಿಮಗೆ ಇಂತಹ ಅನುಭವಗಳು ಸಿಗಲಿ ಎಂದು
    ದೇವರಲ್ಲಿ ನನ್ನದೊಂದು ಕೋರಿಕೆ.
    ಸರ್ ಚೆನ್ನಾಗಿದೆ.ಖುಷಿಯಾಯ್ತು ಓದಿ. ನಿಮ್ಮ ಖರ್ಚಿನಿಂದ ನಿಮಗೆ ಸಿಟ್ಟು ಬಂದಿದೆ. ನಂಗೆ ಖುಷಿಯಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading