ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರೇಮಿಗಳ ದಿನಾಚರಣಿ ಹಳ್ಳಿಗುಳಾಗ ಹೆಂಗ ನಡಿತೈತಂದ್ರ…'

ಶಿವು ಮೋರಿಗೇರಿ

ಪ್ರೇಮಿಗಳ ದಿನಾಚರಣೆ ಅನ್ನುವಂತ ದಿನವೊಂದನ್ನ ನಾನು ನೋಡಿದಾಗೆಲ್ಲಾ ನನಗೊಂದು ಪ್ರಶ್ನಿ ಕಾಡತಾನ ಇತ್ತು. ನನ್ನ ಮಟ್ಟಿಗೆ ಪ್ರೇಮ ಅನ್ನೋದಾ ಒಂದು ಹಬ್ಬ, ಅದಕ್ಕ ಸಪ್ರೇಟಾಗಿ ಒಂದಾ ದಿನದ ಕಾನಿಯೊಳಗ ತಂದು ಕುಂದ್ರಸಾದು ನನಿಗ್ಯಾಕಾ ಹಿಡಿಸದ ಮಾತು. ಇನ್ನೊಂಚೂರು ಮುಂದುವರದು ಹೇಳಬೇಕಪ್ಪಾ ಅಂದ್ರ, ಇತ್ತಿತ್ಲಾಗ ಈ ಪ್ರೇಮಿಗಳ ದಿನಾಚರಣಿ ಅನ್ನೋದು ಕೂಡಾ ಕಾರ್ಪೊರೇಟ್ ಪ್ಯವಹಾರದ ದಿನ ಆಗಕತೈತಿ ಅನ್ನೋ ಡೌಟೈತಿ ನನಿಗ್ಯ. ಯಾಕಂದ್ರ, ಪ್ರೇಮಿಗಳ ದಿನಾಚರಣಿ ಅಂತಂದ್ರ ಅದು ಕಾಲೇಜು, ಪಾರ್ಕು, ಥೇಟ್ರು, ಜಾಲಿ ರೈಡು, ನಿರ್ಜನ ಮನೆ, ಪಬ್ಬು, ಕ್ಲಬ್ಬುಗಳೊಳಗ ನಡದಂಗನಾ ಕಬ್ಬಿನ ಗದ್ದಿಯೊಳಗನೂ ನಡಿತೈತಿ. ಕಣದ ಸಾಲು, ತಿಪ್ಪಿಸಾಲು, ನೀರಿನ ಸರ್ತಿ, ಹೊಲಗಳ ಬದುವು, ಹಳ್ಳಗಳ ಸರ, ಕಳ್ಳಿ ಕಂಟಿ ಮರೆವು, ಹಳೇ ಬಿದ್ದೋದ ಹಾಳುಗ್ವಾಡಿ ಮನಿಗುಳು, ಸಂಜಿಮುಂದ ಸಾಲಿಗುಡಿಹಿಂದ, ಆಸ್ಪತ್ರಿ ಹಿಂದೆ, ಹನ್ಮಪ್ಪನ ಗುಡಿ ಬೈಲಾಗ, ರಾತ್ರಿ ಹೊಲಕ್ಕ ನೀರ ಹಾಯಿಸಾಕ ಹೋದಾಗ, ಕಳೆ ತೆಗಿಬೇಕಾರ, ಪೈರು ಕೊಯ್ಯಬೇಕಾರ, ಕಣದಾಗ ಒಕ್ಕಲಿ ಮಾಡೋ ಟೈಂದೊಳಗ, ಹಿಂಗ ಪ್ರೇಮಿಗಳ ದಿನಾಚರಣಿ ನಡಿದೇ ಇರೋ ಜಾಗಾನಾ ನಮ್ಮ ಹಳ್ಳಿಗುಳಾಗ ಇಲ್ಲ ಅಂದ್ಕೊಂಬಿಡ್ರಿ. ಯಾಕಂದ್ರ ಪ್ರೇಮಿಗಳ ದಿನಾಚರಣಿ ಅನ್ನೋ ಒಂದು ಹಬ್ಬ ಐತಿ ಅನ್ನೋದಾ ಇನ್ನೂ ಏಸೊಕಂದು ಮಂದಿಗ್ಯ ನಮ್ಮ ಕಡಿ ಗೊತ್ತಾ ಇಲ್ಲ. ಆದ್ರ ಅಂಥಾ ಜನಾ ಬದುಕ ರೀತಿ ಮಾತ್ರ ಎಂಥಾ ನುರತ ಪ್ರೇಮಿಗಳಿಗೂ ಒಂದು ಲೆಸೆನ್ ಆಗಿಬುಡ್ತೈತಿ. ಯಾಕಂದ್ರ  ಜೌರಿಗೆ ಜೀವನ ಪರ್ಯಂತ ಪ್ರೇಮಿಗಳ ದಿನಾಚರಣಿ ಇದ್ದಂಗ್ಹಾ.

ಆದ್ರ ತಿಳದಂತೋರ ಪ್ರೇಮಿಗಳ ದಿನಾಚರಣೆಗೂ ನಮ್ಮಂಥಾ ಹಳ್ಳಿ ಮಂದಿಗೂ ವ್ಯತ್ಯಾಸ ಏನಪಾ ಅಂದ್ರ, ನಮ್ಮ ಹಳ್ಳಿ ಮಂದಿಗೆ  ಪ್ರೇಮ ಅಥವಾ ಈ ಪ್ರೇಮಿಗಳ ದಿನಾಚರಣೆ ಅನ್ನೋದು ಒಂದು ಬ್ರಾಂಡ್ ಆಗೈತಿ ಅನ್ನೋ ವಿಚಾರ ಇನ್ನೂ ಎಷ್ಟೋ ಜನಕ್ಕ ಗೊತ್ತಾ ಆಗಿಲ್ಲ. ನಾನು ಈಗೊಂದು ನಾಕೈದು ದಿನದಿಂದಾನೂ ಬಜಾರದ ಹಾದಿಗುಂಟ ಅಂಗಡಿಗುಳನ್ನ ನೋಡಿಕಂತ ಹೋದಂಗೆಲ್ಲ ಈ ಪ್ರೇಮಿಗಳ ದಿನಾಚರಣಿಗೆ ಅಂತನಾ ಸ್ಪೆಷಲ್ ಗಿಪ್ಟ್ ಗಳು ಬಂದಿರೋದನ್ನ, ಖರೀದಿ ಮಾಡೋರನ್ನ ನೋಡಿದಾಗೆಲ್ಲ ಮನಸಿನ್ಯಾಗೇ ನಕ್ಕಿದಿನಿ. ಮನಿಮಂದಿಗೆ ನೂರಾಒಂದು ಸುಳ್ಳೇಳಿ, ಇಲ್ಲಾವಲ್ಲದ ಸರ್ಕಸ್ ಮಾಡಿ ಪಗಾರದಾಗ ಉಳಿತಾಯ ಮಾಡಿ, ನಮ್ಮ ಹುಡ್ಗಿಗೆ ನಾ ಕೊಡಾ ಗಿಪ್ಟ್ ಅಕಿ ನಾಕು ಗೆಳತ್ಯಾರು ಮೆಚ್ಚಂಗಿರಬೇಕು ಅಂತ ಹಾಳು ಬಾವಿಗೆ ರ್ವಕ್ಕ ಸುರದಾಂಗ್ಹ ಅಂಗಡಿಗುಳಿಗೆ ಕೊಟ್ಟು ಸಾಮಾನು ತಗೋತೀರಲ್ಲ. ಈ ಪದ್ಧತಿ ನಮ್ಮ ಹಳ್ಳಿಯೊಳಗೂ ಐತಿ, ಆದ್ರ ವ್ಯತ್ಯಸ ಎಷ್ಟಪಾ ಅಂದ್ರ, ನಮ್ಮ ಕಡೀಗೆ ಇಷ್ಟಪಟ್ಟ ಹುಡ್ಗಿಗೆ ಒಂದು ಮಳ ಹೂ ಕೊಡಿಸಿದ್ರ ಪೂರಾ ಅವತ್ತು. ‘ಯಾಕಾ ನನಿಗ್ಯ ಇವತ್ತು ಹಸಿವಾಗಿಲ್ಲಪ್ಪ’ ಅಂತ ಹಗಲಲ್ಲ ತಮ್ಮ ಮುಡಿನ ಮುಟ್ಟಿನೋಡಿಕೊಳ್ಳೋ ಹುಡಿಗ್ಯಾರೂ ಅದಾರ.

ಇನ್ನು  ‘ನಾಳೆ ಸ್ಪೆಷಲ್ ಡೇ ಕಣೆ, ಅವನಿಗೆ ಕೊನೀಪಕ್ಷ ಒಂದು ನಾರ್ಮಲ್ ಗಿಪ್ಟ್ ಆದ್ರೂ ಕೊಡಬ್ಯಾಡ್ವಾ?’ ಅಂತೇಳಿ ಅಂಗಡಿಗುಳಿಗೆ ಹೋಗಿ ತಿಳದಂಥಾ ಹುಡುಗೀರು ಚಾಯ್ಸ್ ಮಾಡಿದ್ರ, ನಮ್ಮ ಹಳ್ಳಿಗುಳ ಮುಗ್ಧ ಹೆಣ್ಮಕ್ಳು, ಒಂದು ಕರೀ ದಾರ ತಗೊಂಡ್ರೂ ಅದ್ರ ತೂಕ ಕೈಗೆ ಕಟ್ಟಿಕೊಂಡೋನಿಗೇ ಗೊತ್ತು.  ಇನ್ನು ಪ್ಯಾಟಿಗುಳೊಳಗ ಯೆಸ್ ಐ ಲವ್ ಹಿಮ್/ಹರ್ ಅಂತ ಹೆಮ್ಮೆಯಿಂದ ಹೇಳ್ಕೋತೀರಲ್ಲ ? ಅಷ್ಟು ಧೈರ್ಯ ಅಥವಾ ಅದನ್ನ ಸ್ವಾತಂತ್ರ ಅಂತ ಬೇಕಾದ್ರೂ ಅಂದ್ಕಳ್ಳಿ. ಅಂಥಾ ಒಂದು ವಾತಾವರಣ ಇನ್ನೂ ಹಳ್ಳಿ ಹೆಣ್ಮಕ್ಕಳಿಗೂ ಸಿಕ್ಕಿಲ್ಲ, ಬಾಳವಷ್ಟು ಹುಡ್ರುದೂ ಅದಾ ಹಣೇಬರಾನ.  ಹಂಗಾಗಿ, ಬೇಕಾರ ನೀವು ನಮ್ಮಕಡೀ ಹುಡ್ರನ್ನ ಕೇಳಿ ನೋಡ್ರಿ ‘ಲೇ ಆ ಹುಡ್ಗಿನ್ನ ನೀನು ಪ್ರೇಮಿಸ್ತಿಯೇನು ?’ ಅಂತ ಕೇಳಿದ್ರ ‘ಹೇ ಇಲ್ಲಪಾ ನಮಿಗ್ಯ ಈ ಪ್ರೇಮ ಗೀಮ ಅಂಥವೆಲ್ಲ ನಮಿಗ್ಯ ಗೊತ್ತಿಲ್ಲ ಬುಡು, ಸುಳ್ಯಾಕ ಹೇಳಬೇಕು ಇಬ್ರೂ ಒಬ್ರಿಗೊಬ್ರು ಮನಸು ಮಾಡಿವಿ ಅಷ್ಟ’ ಅಂತಾರ. ನಮ್ಮಿಬ್ರ ನಡುಕು ಪ್ರೇಮ ಐತಿ ಅಂತಾನೂ ಹೇಳಿಕೊಳ್ಲಾಕ ಕಸಿವಿಸಿ ಮಾಡಿಕೊಳಾಂತ ಹುಡ್ರುನ್ನ ಈಗಲೂ ನಾನು ನೋಡಾಕತ್ತೀನಿ. ಅಕಿ ಮ್ಯಾಗ ನನಗ ಮನಸಾಗೈತಿ, ಇಷ್ಟಪಡ್ತಿನಿ ಅಂತಾನೂ ಅಥವಾ ಆತಂದ್ರ ನನಗ ಬಾಳ ಜೀವ ಅಂತ ಎದಿಯುಬ್ಬಿಸಿ, ತಲಿಯೆತ್ತಿ ಹೇಳೋ ಹುಡ್ರನ್ನೂ, ನಾಚಿಕೋತ ತನ್ನ ಗೆಣತಿಯೆದ್ರಿಗೆ ತಲಿ ತಗ್ಗಸಿ ಹೇಳಿಕೊಂಡಿರಾ ಹುಡುಗ್ಯಾರನ್ನೂ ನಾನು ಕಂಡಾಗ ಅಳಿಯ ಅಲ್ಲ ಮಗಳ ಗಂಡ ಅನ್ನ ಗಾದಿ  ನಾನವಾಗ ಸುಖಾ ಸುಮ್ಮನ ನೆನಪಾಕೈತಿ.

ಆದ್ರ  ಜೊತಿಗ್ಯ ಇವತ್ತು  ನನ್ನ ಕಣ್ಣ ಮುಂದೆ ನಾ ಕಂಡುಂಡ ನೂರಾರು ಘಟನೆಗಳು, ನೆನಪಾಗುತಾವು. ನಮ್ಮೂರೊಳಗ, ನಾನು ಪ್ರೇಮ ಅಂದ್ರ ಏನು ಅನ್ನೋದಾ ಗೊತ್ತಿಲ್ಲದ ಅನ್ಯೋನ್ಯವಾಗಿರೋ ಯಶಸ್ವೀ ಪ್ರೇಮಿಗಳನ್ನ ನೋಡೀನಿ. ಮಾರ್ಡನ್ ಪ್ರೇಮಿಗಳು ಅನ್ನೋ ಫೋಜ್ ಕೊಟ್ಕಂಡು ಸರಿಯಾಗಿ ನಡ್ಡೋ ನೀರಾಗ ಕೈ ಕೊಟ್ಟು ಹುಡುಗ ಕಣದ ಸಾಲಾಗ ಅತ್ತಗೋಂತ ಕುಂದ್ರೋದು, ಹುಡುಗಿ ಕತ್ತಲ ಮನ್ಯಾಗ ಅತ್ತುಗೋಂತ ಮಕ್ಕೋಳ್ಳಾದನ್ನ ಕಣ್ಣಾರೆ ಕಂಡೀನಿ. ಇನ್ನೊಂದು ಬಾಳ ವಿಚಿತ್ರವಾದ ಊಸರವಳ್ಳಿಯಂಥಾ ಪ್ರೇಮಿಗಳನ್ನೂ ಕಂಡಿನಿ, ಅವಕಾಶವಾದಿ ಪ್ರೇಮಗಳನ್ನೂ ಕಂಡೀನಿ. ಬರೀ ಎರಡು ವರ್ಷದ ತೆಳಗಿನಿಂದ ನಮ್ಮೂರಾಗೂ ಲವ್ ಮ್ಯಾರೇಜ್ ಗಳು ಜಾಸ್ತಿ ಆಗಾಕತ್ಯಾವು. ಇಂಥಾ ಮದುವಿನಾ ನಮ್ಮೂರಾಗ ‘ಓಡಿ ಹೋಗ್ಯಾರ, ಕದ್ದು ಮದ್ವಿ ಆಗ್ಯಾರ, ಕುಲಗೆಟ್ಟ ಮದ್ವಿಯಾಗ್ಯಾರ, ಹಾದಿಬಿಟ್ಟ ಸಂಬಂಧ, ಹಿಂದಕ್ಕ ಹಿಂಗೆಲ್ಲಾ ಕರಿಯೋರು. ಈಗ ಕಾಲ ಸುಧಾರಿಸೈತೋ ಏನು ಚೂರು ತಿಳುವಳಿಕಿ ಜಾಸ್ತಿ ಆಗೈತೋ ಅಂತೂ ಈಗ ರಿಜಿಸ್ಟ್ರು ಮದ್ವಿ ಆಗ್ಯಾರೇಳು ಅಂತಾರ. ಈ ಹುಡುಗ್ಯಾರು ಹುಟ್ಟಿರದಾ ಹುಡ್ರು ಕೈಯ್ಯಾಕ ಮೂರು ಕಣ್ಣಿನ ಚಿಪ್ಪು ಕೊಡಾಕ ನೋಡಲೇ ಅಂತ ಹೇಳಿರಾರಿಗೂ ಕಮ್ಮಿಯಿಲ್ಲ, ನಂದೇನು ತಪೈತಿ ನೀನಾ ಹೇಳಪ್ಪಾ ನೋಡಾನು, ಆತ ಹ್ಞೂಂ ಅಂದ್ರ ಇವತ್ತಾ ಎಣ್ಣಿಗಿಣ್ಣಿ ಕುಡಿಲೇನು ನೀನಾ ಹೇಳಿಬುಡು ಅನ್ನುವಂಥಾ ಹೆಣ್ಮಕ್ಕಳೂ ಕಮ್ಮಿಯಿಲ್ಲ.

ಯಾರನ್ನೋ ಇಷ್ಟಪಟ್ಟು ಇನ್ಯಾರೋ ಕಟ್ಟೋ ತಾಳಿಗೆ ಕೊರಳು ಕೊಟ್ಟ ಹುಡುಗಿ ಅಂದ್ರದೊಳಗ ಕಣ್ಣೀರು ಹಾಕಿರೋದನ್ನೂ ಕಂಡೀನಿ. ನೆಚ್ಚಿಕೊಂಡ ಹುಡುಗಿಗೆ ಬ್ಯಾರೆ ಮದ್ವಿ ಮಾಡಿದ್ರು ಅಂತ ಹದಿನಾರು ವರ್ಷ ಮದ್ವಿನಾ ದಿಕ್ಕರಿಸಿದ ಪುಣ್ಯಾತ್ಮನ್ನೂ ಕಂಡೀನಿ. ನೀನೇನು ಕಡೇಲಲ್ಲೇಳು ಯಾಕ ಹೆದ್ರತೀ? ಲಗ್ನ ಆಗೋನಂತ ಅಂತ ಹೇಳಿನೇ ಪ್ರೇಮಿಗಳಾದೋರನ್ನೂ ಕಂಡೀನಿ. ಅಂಥ ಎಲ್ಲರಿಗೂ ಮತ್ಯ ಈಗಲೂ ನಮ್ಮೂರಾಗಿನ ನನ್ನ ಬ್ಯಾಚಿಗೂ ಹೇಳೋದೇನಂದ್ರ, ಸಾಯೋವರಿಗೂ ಅಕಿಜೊತಿಗಿರತೀನಿ ಅನ್ನಂಗಿದ್ರ ಅಕಿ ಕಣ್ಣಾಕ ಕಣ್ಣಿಟ್ಟು ನೋಡ್ರಿ, ಅದಾಗಲ್ಲ ನಿಮ್ಮ ಕೈಯಾಗ ಅನ್ನಂಗಿದ್ರ ಔರ ಮನಿ ಅಂಗಳದ ಕಡಿಗೂ ಹೊಳ್ಳಿ ನೋಡಬ್ಯಾಡ್ರಿ’ ಅಂತೇಳತೀನಿ. ಇದ್ರ ಜೊತಿಗೆ ‘ನೋಡ್ರಪ್ಪಾ, ನೀವೇನರಾ ಇಲ್ಲವಲ್ಲದ ಆಟ ಆಡಿ ಯಾವಾಕಿಗನ್ನ ಮೋಸ ಮಾಡಿ ಕೈ ಕೊಟ್ರ, ನಾಳೆ ನೀವು ಕೈ ಹಿಡಿಯಾಕಿ ದೇವ್ರಣಿ ಒಬ್ಬನ ಕೈ ಬಿಟ್ಟಾ ಬಂದಿರ್ತಾಳ ಯೋಚ್ನಿ ಮಾಡ್ರಿ’ ಅಂತಾನೂ ಹೆದ್ರಸ್ತೀನಿ. ಕೊನೇಮಾತು ನಾನು ಏನು ಹೇಳಬಹುದು ಅಂದ್ರ, ಪ್ರೀತಿ ಅನ್ನೋದು ಒಂದು ಹೊಸ ಜೀವನಕ್ಕ, ಮಾದರಿಗೆ, ಸಾಧನಿಗೆ, ಸೃಷ್ಟಿಗೆ ಮೂಲ ಆಗಿರಬೇಕ ಹೊರತು ಒಂದು ಜೀವಾನ ಕಳೆಗುಂದಿಸಾಕ ಇರಬಾರದು. ಅಂತ ಹೇಳತಿದ್ದಾಂಗ್ಹನ ಯಾವುದೋ ಕೆಟ್ಟ ಘಳಗಿಯೊಳಗಾ ತನ್ನ ಹುಡುಗನ್ನ ನಂಬಿ ಮೈ ಮರತ ಮರ್ಯಾದಸ್ತ್ರ ಹುಡ್ಗಿಯೊಬ್ಬಳು ಮರ್ಯಾದಿಗಂಜಿ ಪ್ರಾಣ ಕಳಕೊಂಡ ಘಟನಿ ನೆನಪಾಗತೈತಿ…. ಯಾವುದಕ್ಕೂ ತಿಳದಂತೋರು ಯೋಚನಿಮಾಡ್ರಿ… ಪ್ರೀತಿ ಪ್ರೇಮದ ಹೆಸರು ಕೆಡಲಾರದಂಗ ಜತನದಿಂದ ಜೀವನ ಮಾಡ್ರಿ, ಪ್ರೇಮ ಗೆದ್ದಾ ಗೆಲ್ಲತೈತಿ… ನಾಕು ಮಂದಿಗೆ ಮಾದರಿ ಅಕೈತಿ…

 

 

‍ಲೇಖಕರು avadhi

14 February, 2014

2 Comments

  1. ಸುಮ ಮುದ್ದಾಪುರ್

    ಮಸ್ತ ಏತಿ …. ಇಷ್ಟ ಆತು ನಿಮ್ ಬರವಣಿಗೆ

  2. lalithasiddabasavaiah

    ವ್ಯಾಲಂಟೇನ್ ಡೇ ಎಂಬ ಅಪಸವ್ಯಕ್ಕೆ ಸರಿಯಾದ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading