ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮಲತ ಬರೆದ ಸಣ್ಣ ಕಥೆಗಳು

ಡಾ. ಪ್ರೇಮಲತ ಬಿ.

ಸಮಸ್ಯೆ

ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರವಾದದ್ದೇ ಆಗಿತ್ತು. ಸಮಸ್ಯೆಯ ಜಾಡು ಹಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದ ಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು. ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೆ ಮಸಿ ಬಳಿಯುವಂತಹ ಪರಿಹಾರ ಹೇಳಿದ ಪಾಪ ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು.

ಈ ಸಂದಿಗ್ಧದಲ್ಲಿ ದಿನಕ್ಕೊಂದು ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ವೆಂಕಣ್ಣಯ್ಯ ಯೋಚಿಸುತ್ತಿದ್ದರಾದರೂ ಅದನ್ನು ನಿಜವಾಗಿ ಕಾರ್ಯರೂಪಕ್ಕೆ ಇಳಿಸಲು ಅವರಲ್ಲಿ ಧೈರ್ಯ ಸಾಲುತ್ತಿರಲಿಲ್ಲ. ಬದುಕೇ ಹೀಗಲ್ಲವೇ? ಅದೇನು ಪರಿಹಾರವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಶುರುವಾಗುತ್ತದೇನು? ಬದುಕನ್ನು ಕಟ್ಟುತ್ತ ಕಟ್ಟುತ್ತ ದಾರಿ ಕಂಡುಕೊಳ್ಳುತ್ತ ಸಾಗಬೇಕು. ʼಒಳ್ಳೆ ಪೇಚಿನಲ್ಲಿ ಸಿಕ್ಕಿಬಿಟ್ಟೆನಲ್ಲʼ ಎಂದುಕೊಂಡರು. ಹಾಗಂತ ಅಂತ್ಯದಲ್ಲಾದರೂ ಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ ಇಲ್ಲದಿದ್ದರೆ ಏನು ಚೆನ್ನ?
ವೆಂಕಣ್ಣಯ್ಯ ಐವತ್ತನೇ ವಯಸ್ಸಿನಲ್ಲಿ ಹೊಸದಾಗಿ ಕಥೆ ಬರೆಯಲು ಶುರುಮಾಡಿದ್ದು ತಾನೇ? ಅದೂ ಮೊದಲ ಕಥೆ!

ನಾಸ್ಟಾಲ್ಜಿಯಾ

“ಮಳೆ ಬಂದು ಬಿಟ್ಟ ಸಂಜೆ. ತಂಪಾದ ಗಾಳೀಲಿ ಸುಟ್ಟ ಮುಸುಕಿನ ಜೋಳದ ವಾಸನೆ… ಸ್ಟೇಡಿಯಂ ಮೆಟ್ಟಿಲ ಮೇಲೆ ಕೂತು, ಬೆಚ್ಚಗಿನ ಉಪ್ಪು-ಖಾರ, ಮಸಾಲೆ ಹಚ್ಚಿದ ಮುಸುಕಿನ ಜೋಳನ ಕಚ್ಚಿ, ಕಚ್ಚಿ ಜಗಿದು ತಿನ್ನುತ್ತಾ ಅದರ ಹಾಲನ್ನು ಚಪ್ಪರಿಸೋದು ಎಂಥ ಮಜಾ…“

“ಅದಕ್ಕಿನ್ನ ಮಜಾ ಅಂದ್ರೆ, ಸ್ಕೂಲ್ ಮುಂದೆ ತಳ್ಳೋಗಾಡಿ ರಾಮಕ್ಕ ಅದೆಲ್ಲಿಂದನೋ ತರ್ತಿದ್ದ ಹಸಿರು ಕಿರು ಕಿತ್ತಳೆ ಹಣ್ಣುಗಳು. ಅದನ್ನು ಮಧ್ಯಕ್ಕೆ ಹೋಳು ಮಾಡಿ, ಚೆನ್ನಾಗಿ ಉಪ್ಪು-ಖಾರ ಹಚ್ಚಿ ಕೊಡೋಳು. ಬಾಯಿಗಿಡೋಕೆ ಮುನ್ನವೇ ಚುಳ್ಳಂತ ನಾಲ್ಗೇ ಕೆಳಗೆ ನೀರು ತುಂಬ್ಕೊಳ್ಳೋದು. ಮೊದಲು ಅದನ್ನು ನೆಕ್ಕೋದು. ಆಮೇಲೆ ಅದರ ಹುಳೀ ಸಮೇತ ನಾಲ್ಗೇ ಮೇಲೆ ಹಿಂಡಿಕೊಳ್ಳೋದು. ಆಮೇಲೆ ಅದರ ತೊಳೆಗಳನ್ನು ಕಚ್ಚಿ, ಕಚ್ಚಿ ತಿನ್ನೋದು. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಂಗಿರೋದು. ಈಗ ಅವನ್ನು ನೆನಸ್ಕೊಂಡ್ರೆ ಬಾಯಲ್ಲಿ ನೀರು ಬರುತ್ತೆ ಆದ್ರೆ ಉಳಿದಿರೋ ಹಲ್ಲೆಲ್ಲ ಚುಳ್ಳಂತ ನಡುಗಿಬಿಡ್ತವೆ ಬಿಡು ಮಾರಾಯ್ತಿ..“ ಎಂದ ಶಾಮಣ್ಣ. ಕಟ್ಟಿಸಿಕೊಂಡ ಹಲ್ಲು ಸೆಟ್ಟನ್ನು ಕಟ-ಕಟನೆಂದು ಆಡಿಸಿ ಪಕ-ಪಕನೆ ನಕ್ಕಳು ಪಂಕಜಮ್ಮ.

‍ಲೇಖಕರು Avadhi

29 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading