ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪ್ರೇಮದಲ್ಲಿನ ಸ್ನೇಹ ಮತ್ತು ಸ್ನೇಹದಲ್ಲಿನ ಪ್ರೇಮ’ – ಹೇಮಲತಾ

ಹೇಮಲತಾ

ಒಂದೇ ಬದಿಗೆ ಕೂತು ಅಭ್ಯಾಸವಿರದ ನಾನು ಆಯತಪ್ಪುವ ದಿಗಿಲಿಗೆ “ಭುಜದಮೇಲೆ ಕೈ ಇಟ್ಟುಕೊಳ್ಳಲೇನೋ?” ಸಂಕೋಚಿಸುತ್ತ ಕೇಳಿದೆ.ಎಂದಿನಂತೆ ಒಂದು ಕೈ ಗಾಡಿಯ ಬೆನ್ನುಮೂಳೆ ಹಿಡಿದಿತ್ತು .ಸರಕ್ ಎಂದು ಬೀಳುವ ಬ್ರೇಕ್ ಗಳಲ್ಲಿ ಹೊಡೆಯುವ ಡಿಕ್ಕಿ ತಪ್ಪಿಸಲು ಮೊದಲಿನಿಂದಲೂ ಮಾಡಿಕೊಂಡಿದ್ದ ರೂಢಿ.ಅಪ್ಪನು ಗಂಡಸೇ.ಯಾರಿಗೂ ಮುಜುಗರವಾಗಬಾರದಿತ್ತಲ್ಲ!
ನಾವಿಬ್ಬರು ಪ್ರೇಮಿಗಳಿರಬೇಕು ಎನ್ನುವ ಗುಮಾನಿಯ ಕಿಡಿಗಣ್ಣಲ್ಲೇ ಅಸೂಯೆ ಸುರಿಸುತ್ತ ಪಕ್ಕದ ಗಾಡಿಯವನು ನೋಡುತ್ತಿದ್ದ.ಸಿಗ್ನಲ್ನಲ್ಲಿ ನಿಂತಿದ್ದ ಮತ್ತೊಬ್ಬ ಬೈಕ್ ನವನು ಮಾತ್ರ ನಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಅಂತದ್ದೇನು ಕಂಡುಬರುತ್ತಿಲ್ಲ ಎನ್ನುವ ಖಾತ್ರಿಯಿಂದಲೋ,ಪ್ರೇಮಿಗಳು activaಲಿ ತಿರುಗಲ್ಲ ಎನ್ನುವ ಸುಪ್ತಪ್ರಜ್ಞೆಯ ತಿಳುವಳಿಕೆಯಲ್ಲೋ ಒಂದೆರಡು ಬಾರಿ ಹೆಲ್ಮೆಟ್ ತೆಗೆದು ಮುಖದರ್ಶನ ಮಾಡಿಸಿ,ಲೈಟ್ ಆಗಿ ಶಿಳ್ಳೆಹಾಕುತ್ತ ಲೈನ್ ಹೊಡೆಯುತ್ತಿದ್ದ.
ಭುಜದ ಎತ್ತರಕ್ಕೆ ಕೈನೋಯತೊಡಗುತ್ತಿದ್ದಂತೆ ಹೊಟ್ಟೆಹಿಡಿದು ಕೂರಲ? ಕೇಳೋದು ಹೇಗೆ,ಕೇಳದೆ ಹಾಗೆ ಹಿಡಿಯೋದು ಹೇಗೆ ಚಿಂತಿಸುತ್ತಲೇ ಹೇಗೋ ಒಂದು ಕೇಳಿದೆ.”ಅದ್ಯಾಕೆ ಅಷ್ಟು ತಲೆಕೆಡಿಸಿಕೊಳ್ಳುತ್ತೀಯ, ನಿನಗೆ ಹೇಗೆ ಆರಮಾನೋ ಹಾಗೆ ಕೂತ್ಕೋ” ಅಂದ .ಕೈಯೇನೋ ಹೊಟ್ಟೆಯನ್ನು ಬಳಸಿತು.ಒಂದೇ ಕ್ಷಣ,ಅದ್ಯಾವ ಸಹಿಸದ ಭಯವೋ ಸರ್ರ್ ಅಂತ ಹಿಂತೆಗೆದುಕೊಂಡೆ.ಜೊಂಪೆಜೊಂಪೆಯಾಗಿ ಒಬ್ಬಳೇ ನಗತೊಡಗಿದೆ.ಯಾಕೆ ಅಂತ ಅವನು ಕೇಳಲಿಲ್ಲ.”ಏನ್ಗೊತ್ತಾ,ನಾನು ಚಿಕ್ಕವಳಾಗಿದ್ದಾಗ ತೂಕಡಿಸುತ್ತಿದ್ದೆ ಅಂತ ಯಾವನೋ ಸನ್ನೆ ಮಾಡಿ ತೋರಿಸಿದನಂತೆ.ಬೆಳೆದೆ ಅಂತ ನನಗೆ ಎಷ್ಟೇ ಅನಿಸಿದರು,ನಮ್ಮಪ್ಪ ಮಗು ಬಿದ್ದೋದ್ರೆ ಅನ್ನೋ ಭಯಕ್ಕೆ ಎಷ್ಟೋವರ್ಷ ಮುಂದುಗಡೆ ನಿಲ್ಲಿಸಿಕೊಂಡೇ ಗಾಡಿ ಓಡಿಸುತ್ತಿದ್ರು.ಆಮೇಲೆ ಒಂದಿನ ನಾನೇ ಗಲಾಟೆಮಾಡಿ ಹಿಂದೆ ಕೂರೋಕೆ ಶುರುಮಾಡಿದೆ.ಡುಮ್ಮಂತ ಬೆಳೆದುಕೊಂಡಿದ್ದ ಹೊಟ್ಟೆಯನ್ನ ಪುಟ್ಟಪುಟ್ಟ ಕೈಗಗಳಲ್ಲಿ ಸುತ್ತಿ, ಗಟ್ಟಿತಬ್ಬಿ ಬೆಲ್ಟ್ ಮಾಡುತ್ತಿದ್ದೆ “.ಅಪ್ಪನ ನೆನಪು
ನನ್ನ ಹಸ್ತದಮೇಲೆಹಸ್ತ ಇರಿಸಿ ಒಂದೆರಡುಬಾರಿ ಒತ್ತಡಹಾಕಿ ಕೆಳಗೆಜಾರಿಸಿ ” ನಮ್ಮ ಅಮ್ಮನು ಹೀಗೆ ಕಣೆ,ಹಿಂದಕ್ಕೆ ಹಿಡಿದಿಡಿದು ಜಗ್ಗುತ್ತಿರುತ್ತಾರೆ”. ಸ್ಪೀಡ್ ಜಾಸ್ತಿಯಾದಾಗ,ಪಕ್ಕದವನು ಗುದ್ದೇಬಿಟ್ಟ ಅನಿಸುವಾಗೆಲ್ಲ, ಅರಿವಿಗೆಬಾರದೆ ಹಿಡಿಕೆ ಗಟ್ಟಿಯಾಗುತ್ತಿದ್ದಾಗ “ನಿನಗೂ ಭಯಾನೇ” ಅಂತ ನಗುತ್ತಿದ್ದ ಅವನು.
ಪಾರ್ಕಿಂಗ್ ಲಾಟ್ ನಲ್ಲಿ ಗಂಟೆಗಂಟೆಗೆ ಏರುವ ಫೀಸ್ ತೆತ್ತಲು ಬಿಲ್ಲ್ಕುಲ್ ಮನಸಿರದೆ ರಸ್ತೆಬದಿಯಲ್ಲೇ ಗಾಡಿ ಒಗೆದುಬರುವ ನಾನು,ರಮ್ಯ ಸುಮ್ಮನೆ ಯಾಕೆಬೇಕು ರಿಸ್ಕ್ ,ಹೋದ್ರೆಹೋಯ್ತು ಗಾಡಿಗಿಂತ ಹೆಚ್ಚಾ ಅಂತ ಉಪದೇಶಿಸುವ ಇವನು, ರಾಗಿಮುದ್ದೆ ಜೊತೆ ಬಿಸ್ಲರಿಬಾಟಲ್ ಬಂದಂಗೆ!ಸೀಟ್ ಒಳಗೆ ಬಿಟ್ಟಿದ್ದ ವಾಲೆಟ್ ಜ್ಞಾಪಿಸುತ್ತ, ಹಿಂಗೆ ಬರೇ ಕೇರ್ ಲೆಸ್ಸುನಿಂದು, ಹಿಂಗೆ ಮಾಡಿಕೊಂಡೆ ಎಲ್ಲಾ ಆಗಿದ್ದು ಅಂತೇನೋ ಬೈದ…ಇವನು ಬೈಯೋದು, ಹೊಗಳೋದು ಯಾವುದೂ ವ್ಯತ್ಯಾಸವೆನಿಸದೆ ಒಂದೇಸಮನೆ ಸ್ವೀಕರಿಸಿ,ಹಿತವೆನಿಸಿ,ಮತ್ತೆ ಪೆಪೆಪೆ ನಗತೊಡಗಿದೆ.
“ಅಷ್ಟೊಂದು ಕೆಟ್ಟದಾಗಿತ್ತೇನೆ ಅಲ್ಲಿ, ಎಲ್ಲಾ ಸರಿ ಇರಂಗೆ ಕಾಣಿಸುತ್ತಿತ್ತಲ್ಲ ರಮ್ಯಾ?”
ರೇಶಿಮೆ ಗೂಡಿದ್ದಂಗೆ ಕಣೋ ಹೆಣ್ಣುಮಕ್ಕಳ ಬಾಳು.ಒಳಗೆ ಸೇರಿಕೊಂಡ ಹುಳಕ್ಕೆ ಚಿಟ್ಟೆಯಾಗೋ ಕನಸು,ತವಕ.ಸೊಪ್ಪುಹಾಕುವವರಿಗೆ ಹಣ್ಣಾದ ಹುಳವನ್ನ ಗೂಡುಸಮೇತ ಬೇಯಿಸಿ ನೂಲುಸುತ್ತಿಕೊಳ್ಳುವ ಆಸೆ-ಆತುರ.ನೋಡೋರಿಗೆ ಜರತಾರಿ ರೇಶಿಮೆಯ ಗೂಡೊಳಗೆ ಬೆಚ್ಚಗೆ ಮುದುಡಿ ಮಲಗಿದ ಸುಖಚಿತ್ರಣ.ಒಳಗೊಳಗೇ ಸತ್ತಿದ್ದು, ಬೆಂದು, ಕರಗಿ, ಕೊಳೆತದ್ದು ಆಚೆ ಯಾರಿಗೂ ಕಾಣೋದೆ ಇಲ್ಲ…ಹುಟ್ಟಿದ್ದೇ ಸತ್ತುಸಾಧಿಸಿ ಮೋಕ್ಷಗಳಿಸೋಕೆ ಅಂತ ಚಿಟ್ಟೆಜೀವನಚಕ್ರವನ್ನೇ ತಿರುಚಿ ವಾದಿಸೋ ಮನುಬಳಗ ಇನ್ನೊಂದು ಕಡೆ.extortion ….. ಇನ್ನು ಏನೇನೋ comparisionಗಳು ಮನದಲ್ಲಿ ಮೂಡಿದರು,ಅವೆಲ್ಲ ಇವನಿಗೆ ಹೇಳಿದರೆ ಅರ್ಥವಾಗದೇ ಕಾವ್ಯವಾಗುತ್ತೆ,ಆಮೇಲೆ ತಲೆಕೆಟ್ಟ ಇವನ ಮುಖವನ್ನ ಅನುಕಂಪದಿಂದ ನಾನೇ ನೋಡಬೇಕಾಗುತ್ತದೆ ಎನಿಸಿ, “ಊ ಮಗ,ಬೇಜಾನ್ ಟಾರ್ಚರ್ ಇತ್ತು” ಅಂತಂದು ಸುಮ್ಮನಾದೆ.
ಸಾಕುಸಾಕೆನಿಸುವಷ್ಟು ನಿರ್ವಾತದಲ್ಲಿ ಮನುಷ್ಯರ ಗುರುತು ಮರೆತೇಹೋಗಿ, ಜಿಗುಪ್ಸೆಗೆ ಸತ್ತೆಹೋಗುತ್ತೀನೇನೋ ಅನಿಸೋಕೆ ಶುರುವಾದಾಗಲೆಲ್ಲ ಮೀಟ್ ಮಾಡೋಣ ಅಂತ ಎಲ್ಲರನ್ನು ಕರೆಯುತ್ತಿದ್ದೆ.ಕಡೆಗೆ ಬರುತ್ತಿದ್ದವನು ಮಾತ್ರ ಇವನೊಬ್ಬನೇ.
“ನೋಡೋ ಈ ಕುರ್ತಾ,ಚೆನ್ನಾಗಿದ್ಯ ?”
“ಊ ಕಣೆ ಚೆನ್ನಾಗಿದೆ,ಅರಿಸಿನ ನಿನಗೆ ಒಪ್ಪುತ್ತೆ .. ”
” ಮಾಲ್ ಗು ಫ್ಹಾರ್ಮಲ್ ಶರ್ಟ್ ಹಾಕೊಂಡು ಬರ್ತಿಯಲ್ಲೋ,ಒಂದೆರಡು ಟಿ -ಶರ್ಟ್ ಆದರು ತಗೋ..”
“ನನ್ಹತ್ರ ಸಾಕಷ್ಟು ಇದೇ ಕಣೆ, ಆದರೆ ಬಟ್ಟೆ ಬಗ್ಗೆ ಅಂತ ಇಂಟರೆಸ್ಟ್ ಇಲ್ಲ.ಅದೇನೋ ಹೇಳ್ತಾರಲ್ಲ ಡ್ರೆಸ್ಸಿಂಗ್ ಸೆನ್ಸ್ ಅದು ನನಗೆ ಇಲ್ಲ ಮೊದಲ್ಲಿಂದಾನು …”
“ಅಂತಾ ಡ್ರೆಸ್ಸಿಂಗ್ ಸೆನ್ಸ್ ನಂಗೂ ಇಲ್ಲ, ಆದರೆ ಇಂಟರೆಸ್ಟ್? ಇತ್ತು … ಅವಾಗ …

ಒಂದಿನ ಮನೆಗೆ ಬಂದವರೇ -ಇಂತಾ ಬಟ್ಟೆನೆಲ್ಲ ಹಾಕೊಂಡೋಗೋಕೆ ಬಿಟ್ಟಿದ್ದೀಯಲ್ಲ ತಾಯಿಯಾದ ನಿನಗೆ ಬುದ್ದಿಬೇಡ್ವಾ ಅಂತೆಲ್ಲ ರಂಪಮಾಡಿ ಬೈದರು ಅಪ್ಪ ….ಬ್ಲಾಕ್ ಪ್ಯಾಂಟ್ ಮೇಲೆ,ಫುಲ್ ಸ್ಲೀವ್ಸ್ , ಕಾಲರ್ ನೆಕ್ ಇದ್ದ ಟಾಪ್ ಕಣೋ ಅದು… ಅದರಲ್ಲೇನಿತ್ತು ಅಂತ ತಪ್ಪು? ಕಾಲೇಜ್ ನಲ್ಲಿ ಒಳ್ಳೆ compliments ಕೂಡ ಬಿದ್ದಿತ್ತು ಗೊತ್ತಾ…ಅರಿಸಿನ ಬಣ್ಣ, ಬ್ರೈಟ್ ಅಂತೆ! ಅದು ತಪ್ಪು!! ಹಂಗಾದ್ಮೇಲಂತು ಇದ್ದ ಇಂಟರೆಸ್ಟ್ ಕೂಡ ಹೊರಟೋಯ್ತೇನೋ… ಕಾರ್ ತಗೋಳೋವಾಗ ಡಾರ್ಕ್ ಕಪ್ಪು, ಬ್ರೈಟ್ ರೆಡ್ ಅಂದೇ.. ಹೆಣ್ಣುಮಕ್ಕಳು ಇಷ್ಟೊಂದು ಫಾಸ್ಟ್ ಇರಬಾರದು ಅಂತ ಬೈದ್ರು.. ಕಲರ್ ಗು ಫಾಸ್ಟ್ ಸ್ಲೋ ಅಂತ ಸ್ಪೀಡ್ ಇರುತ್ತಾ?ಇವಾಗ ನೋಡು ನನ್ನಿಷ್ಟ,ನನ್ನ ಖುಷಿ ಅಷ್ಟೇ! ಯಾರು ಕೇಳೋರು ಇಲ್ಲ! ಯಾರಿಗೂ ಕೇರ್ ಮಾಡಲ್ಲ….afterall its mylife you know ? ”
ಗೇಣುದ್ದದ ಗಿಡ್ಡ ಬರ್ಮುಡ ಚಡ್ಡಿಹಿಡಿದು ನೋಡಿಕೊಳ್ಳುತ್ತಿದ್ದೆ …
“ಲೇ ಒದೆ ತಿಂತೀಯ, ಮರ್ಯಾದೆಗೆ ಅಲ್ಲೇ ಇಟ್ಟು ಬಾ…”
ಪ್ರತಿಭಟನೆ ಇರಲಿ,ಪ್ರತ್ಯುತ್ತರವು ಇರದೇ ರಾಕ್ ಗೆ ವಾಪಸು ತೂರಿಸಿದೆ.
ಅಯ್ಯೋ ಅನಿಸಿರಬೇಕು,”ಇಂತವೆಲ್ಲ ಎಲ್ಲಿಗೆ ಹಾಕೊಂಡು ಹೋಗ್ತಿಯಾ,ಹೋಗ್ಲಿ ತಗೋ , ಹಾಕೊಂಡ್ ಬಾ ಹೆಂಗೆಕಾಣ್ತೀಯ ನೋಡಿಹೇಳ್ತೀನಿ” ಅಂತ ಜೋಕ್ ಮಾಡೋಕೆ ಟ್ರೈ ಮಾಡಿದ.
ಕುತೂಹಲಕ್ಕೂ ಏನನ್ನು ನೋಡದೆ ಅಷ್ಟು ಅಂಗಡಿ ಸುತ್ತಿದರು ಸುಮ್ಮನೆ ಬರುತ್ತಿದ್ದವನಲ್ಲಿ ಚೂರು ಅಸಮಾಧಾನವಿಲ್ಲಾ.ಪಾಪ ಅನಿಸಿ “ಏನು ಇಲ್ವೇನೋ ತಗೋಳೋದು,ಏನಾದರು ನೋಡೋ” ಅಂದೇ .
“ಎಲ್ಲಾ ಅಮ್ಮಾನೆ ತಂದುಕೊಡ್ತಾರೆ ಕಣೆ, ಯಾವತ್ತು ಒಬ್ಬನೇ ಏನು ತಗೊಂಡಿಲ್ಲ” ಅಂದ.
ನನಗ್ಯಾಕೆ ಕೋಪ ಬರಬೇಕು ಗ಼ೊತ್ತಿಲ್ಲ “ಚಡ್ಡಿನು ಅಮ್ಮನೇ ಕೊಡ್ಸ್ತಾರೆ ಅಲ್ವಾ?” ಕೊಂಕಾಯಿತು, ಅನಗತ್ಯ ಬಿರುಸಾಯಿತು ನನ್ನ ಮಾತು ..
“ಮೊದಲಿಂದಾನು ಹಂಗೆ ಕಣೇ” ಓಲೈಸುವಂತೆ ನುಡಿದ …
ಮೂರು ವರ್ಷದ ಕೆಳಗೆ , ಅದೇನೋ truth and dare ಅಂತೆ .ನನ್ನಕಡೆ ಬಾಟಲ್ ಬೊಟ್ಟು ಮಾಡಿನಿಂತ್ತಿದ್ದೆ, ನಿನ್ನ ಕ್ರುಶ್ ಯಾರು ಅಂತ ಹಿಡಿದುಕೊಂಡರು. ಅಲ್ಲಿರೋರಲ್ಲಿ ಅಂತಹವರು ಯಾರು ಇರಲಿಲ್ಲ.ಸುಳ್ಳಾದರೂ ಸುಮ್ಮಸುಮ್ಮನೆ ಯಾರ ಹೆಸರಾದರು ಹೇಳಲೇಬೇಕಿತ್ತು.
ಮೂಲೆಯಲ್ಲಿ ಇವನು ತನ್ನಪಾಡಿಗೆ ತಾನು ಕೂತ್ತಿದ್ದ . . ಬ್ರಾಹ್ಮಣರ ಹುಡುಗನ ತರಹ ಬೆಳ್ಳಗೆ ಚೆನ್ನಾಗೇನೋ ಇದ್ದ, ಆದರೆ ಬರೋದು, ಹೋಗೋದು, ಮಾತಿಲ್ಲಕತೆಯಿಲ್ಲ,ಗುಮ್ಮನಗುಸ್ಕ. ಹೇಳುದ್ರೆ ಶತ್ರುಕೂಡ ನಂಬಲ್ಲ ಅನಿಸಿ ಇವನ ಹೆಸರ ಹೇಳಿ ನಕ್ಕಿದ್ದೆ .. ಕೋಪಾನೋ, ಗಾಬರಿನೋ ಮುಖ ಕೆಂಪಗೆಮಾಡಿಕೊಂಡ. ನನಗೆ ಒಳ್ಳೆ ಮಜಾ ಅನಿಸಿತ್ತು.
ಜನರಮಧ್ಯ ಬುದ್ಧಿವಂತಿಕೆ ಪ್ರದರ್ಶಿಸಿ ಗಮನ ಸೆಳೆಯಬೇಕೆಂಬ ತರಾತುರಿ ಇಲ್ಲ, ತಾನು ಹೇಳೋದೆಲ್ಲ ಒಪ್ಪುವಂತದ್ದೆ ಎನ್ನುವ ಗರ್ವ,ಒಪ್ಪಿಸಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಹಪಾಹಪಿ ಎರಡು ಇಲ್ಲ.ಬಹುವೇಳೆ ಮಾತ್ತಿಲ್ಲ.ಮುಖವಾಡ ಇಟ್ಟುಕೊಳ್ಳದೆ ಮೌನದ ತೆಳುಪರದೆಯನ್ನಷ್ಟೇ ಮುಂದೆ ಒಡ್ಡಿ, ತಣ್ಣನೆ ಬದುಕನ್ನ ಸುಮ್ಮನೆ ಬದುಕುತ್ತೇನೆ ಎಂಬ ಅಮಾಯಕತೆ.ಮೂಡಿ,ಸ್ವಲ್ಪ ಸೈಕೋ ಅಂತಲೇ ಎಲ್ಲರು ಇವನ ಬಗ್ಗೆ ಹೇಳುತ್ತಿದ್ದದ್ದು… ಯಾರು ಅಷ್ಟಾಗಿ ಗಮನಿಸುತ್ತಿರಲಿಲ್ಲ.
ಯತ್ತಕಡೆ ತಿರುಗಿಸಿನೋಡಿದರೂ ಅಪ್ಪಅಮ್ಮನ ಒಳ್ಳೆಯ ಮಗ.ಹೆಚ್ಚಗಿನ ಸಂಶೋದನೆ, ಸಾಹಸ ಮಾಡುವವನಂತೆ ಎಂದು ಕಾಣಲಿಲ್ಲ .ಒಳ್ಳೆ ಹುಡುಗರನ್ನ ಮಾತ್ರ ಹತ್ತಿರಕ್ಕೆ ಸೇರಿಸಿಕೊಳ್ಳಬೇಕು ಹೇಳಿಹೇಳಿಯೇ ಕಳಿಸುತ್ತಿದ್ದರು ಮನೆಯಲ್ಲಿ. ಇದ್ದ ಒಂದಿಬ್ಬರು ಸ್ನೇಹಿತರಲ್ಲೇ ಇವನು ಒಬ್ಬ.ಲಿಫ್ಟ್ ನಲ್ಲಿ ಹೋಗೋವಾಗ ಒಂದಿನ ಫೈವ್ ಸ್ಟಾರ್ ಚಾಕಾಲೇಟ್ ಹಿಡಿದು ವಿಶ್ ಮಾಡಿದ್ದ,ಟೀ ಬ್ರೇಕ್ ನಲ್ಲಿ ಗೆಳತಿ ಕಾಡಿಬೇಡಿ ಗೋಗರೆದರು ಕೊಡದೆ, ಪ್ಯಾರಿಸ್ ಪೆರ್ಫ್ಯೂಮ್ ನ ನನಗೆ ಮಾತ್ರ ಕೊಟ್ಟಿದ್ದ.
ನನಗೆ ಗೊತ್ತಾಗಬೇಕಿದ್ದ ಹುಡುಗ ಇವನ ಏರಿಯದಲ್ಲೇ ಇದ್ದಿದ್ದಕ್ಕೆ ಮಗ ನೋಡೋ ,ಸ್ವಲ್ಪ ವಿಚಾರಿಸೋಕೆ ಆಗುತ್ತೇನೋ ಅಂತ ಇವನನ್ನೇ ಕೇಳಿದ್ದೆ .. ಮತ್ತದೇ ಮಾತ್ತಿಲ್ಲದ ಕೆಂಪು ಮೌನ.ಕಾರ್ಡ್ ಹಿಡಿದು ಕೂತಾಗ ಏನು ಟೆನ್ಶನ್ ಇತ್ತೋ ಏನೋ,ನಾನೇ ಉಮ್ಮ್ ಅಂತ್ತಿದ್ದೆ.ಎಲ್ಲಾ ಮುಗಿತ್ತಲ್ಲ,ಈಗ್ಯಾಕೆ ಹೀಗಿದ್ಯ,ಏನು ಪ್ರಯೋಜನ ಬಿಡು ಅಂತೇನೋ ಅಂದ … ಅವನ ಮಾತನ್ನ ಗಮನಿಸುವಷ್ಟು ಪುರುಸೋತ್ತು ನನಗಿರಲಿಲ್ಲ.
ಈಚೀಚೆಗೆ ಇಷ್ಟು ಮಾತು.
“ನನಗೆ ಒಂಟಿಯಾಗಿರೋದೆ ಹೆಚ್ಚು ಇಷ್ಟ ಕಣೆ, ಒಂಟಿ ಪಿಶಾಚಿ ಅಂತಾನೆ ಎಲ್ರು ಅನ್ನೋದು .. ನಿನ್ನ ತರಹ ಫ್ರೆಂಡ್ಸ್ ಫ್ರೆಂಡ್ಸ್ ಅನ್ನಲ್ಲ ನಾನು ..”
“ನನಗೂ ಅಷ್ಟೇ ಕಣೋ , ಒಂಟಿತನ ರೂಢಿಯಷ್ಟೇ ಅಲ್ಲ ಹೆಚ್ಚೆಚ್ಚು ಇಷ್ಟ ಕೂಡ ಆಗೋಕೆ ಶುರುವಾಗಿದೆ”
ಆದರೆ ಅದು ನಿನ್ನ ಆಯ್ಕೆ, ಇದು ನನ್ನ ಅವಸ್ತೆ !
ನಾವಾಡುವ ಮಾತುಗಳಿಗೆ ಯಾವುದೇ ಹಿನ್ನಲೆ,ಚೌಕಟ್ಟು ಇರೋಲ್ಲ,ಹೆಚ್ಚಿನವೇಳೆ ಅರ್ಥ ಕೂಡಾ .. ಅಷ್ಟಕ್ಕೂ ಎಲ್ಲಾ ಅರ್ಥಆಗಲೇಬೇಕೆಂದೇನು ಇರೋಲ್ಲ,ಹೇಳಿಕೊಳ್ಳೋದು ಮಾತ್ರ ಮುಖ್ಯ ಮತ್ತು ಪರಮಸುಖ ಕೆಲವೊಮ್ಮೆ.
ತನ್ನworkoholic ಮ್ಯಾನೇಜರ್ ನಿಂದಾಗುವ frustration,ಸೀನಿಯರ್ ಗಳ ತಲೆ ಖಾಲಿತನಗಳಂತದ್ದರಿಂದ ಹಿಡಿದು,ವಿಪರೀತ ವಯಸಿನ ಅಂತರವಿದ್ದ ಅಪ್ಪ, ಆಸ್ತಿಗೋಸ್ಕರ ಅಮ್ಮನನ್ನು ಕಾಡಿಸಿಪೀಡಿಸಿ,ಕಾಲದಿಂದ ಹಿಂಸಿಸಿದ್ದು,complaintವರೆಗೂ ಹೋಗಿ, ಚಿಕ್ಕಪ್ಪ ಬೆದರಿಸಿ ಸಂಸಾರ ಮಾಡಿಸಿದ್ದು , bigshot ಚಿಕ್ಕಪ್ಪನಮಗ ದುಡ್ಡಿನ ಮದದಲ್ಲಿ accident ಮಾಡಿ ಬಚಾವ್ಆಗಿದು,ಅತ್ತೆಯನ್ನ ಅನುಮಾನಿಸುತ್ತಿದ್ದ ಮಾವ ಕಿಟಕಿಗೆ ಪೇಪರ್ ಅಂಟಿಸಿ,ಬಾಗಿಲಿಗೆ ಬೀಗಹಾಕಿಕೊಂಡು ಹೋಗುತ್ತಿದ್ದದ್ದು,ಇವನ ತದ್ವಿರುದ್ದದಂತಿರುವ ತಮ್ಮ ವಿಪರೀತ ಫ್ಯಾಶನಬಲ್ ಆಗಿರೋದು ಇಂತವೆಲ್ಲ ಹೇಳುತ್ತಿರುತ್ತಾನೆ . ಅಮ್ಮ ಮ್ಯಾಗಿ ಮಾಡುತ್ತಿರುವ ಫೋಟೋತೋರಿಸಿ,ಗಂಡಸರು ಯಾಕೆ ತಮ್ಮನ್ನು ನಂಬಿಬರೋ ಹೆಣ್ಣುಮಕ್ಕಳನ್ನು ಸರಿಯಾಗಿ ನೋಡಿಕೊಳ್ಳೋಲ್ಲ ಅಂತ ಮರಗುತ್ತಾನೆ.,ಇನ್ಯಾರ ಮೇಲು ನನಗೆ ಅಟ್ಯಾಚ್ಮೆಂಟ್ ಇಲ್ಲ, ಅಮ್ಮನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತಾನೆ.ನಾನು ಸಹ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಸರಾಗವಾಗಿ ಬದುಕಿನ ಏರುಪೇರುಗಳನ್ನು, ಗೋಳುಗಳನ್ನೂ ಹೇಳುತ್ತಿರುತ್ತೇನೆ. .. ಸಿಂಪತಿ ಸಂಪಾದಿಸಿಕೊಳ್ಳಬೇಕೆಂಬ ಪ್ರಯಾಸವಿಲ್ಲ,ಸಂತೈಸಿಕೊಳ್ಳಬೇಕೆಂಬ ಅರಿವು ಮತ್ತು ಜರೂರತ್ತು ಇಬ್ಬರಲ್ಲೂ ಇಲ್ಲ.
ಅನಿಸುತ್ತದೆ ಒಮ್ಮೊಮ್ಮೆ ಎಲ್ಲರಿದ್ದು ನಾವೆಷ್ಟು ಒಂಟಿ . ಯಾರು ಇಲ್ಲ ಅಂದಾಗಲು ನಮ್ಮ ಆಯ್ಕೆ ಮಾಡಲಾಗದ ನಾವೆಷ್ಟು ಬಂಧಿ.
ಕಿರಣ ಬಂದ film ಗೆ ಹೋಗೋಣ ಅಂದಿದ್ದಕ್ಕೆ ಟೈಮ್ ಇಲ್ಲ ಅಂತ ಎಗರಾಡಿದ , ಬರ್ಗರ್ ಗೆ ಎರಡನೆ ಕೆಚಪ್ ಅಗತ್ಯಬಿದ್ದಾಗ ನೀನೆ ಹೋಗಿತಗೊಳ್ಳೇ ಅಂದ, ಮತ್ತೊಂದು fries order ಮಾಡುವಾಗ ಹೀಗೆ ತಿಂದರೆ ತೂಕಎಲ್ಲಿ ಇಳಿಯುತ್ತೆ ಅನ್ನೋ ಕಟುಸತ್ಯವನ್ನ ಒಮ್ಮಲೆ ರಾಚಿದ , ಹುಡುಗಿಯರೊಂದಿಗೆ ಶಾಪಿಂಗ್ ಮಾಡಲು ತನ್ನಲ್ಲಿ ತಾಳ್ಮೆಯಿಲ್ಲ ಅಂತ ಗುಡುಗಿದ, ಕನಸುಸುರಿದು ಕಣ್ಣುತುಂಬಿಸಿಕೊಂಡು ಹೇಳಿದ ನನ್ನ tour trip ಪ್ಲಾನ್ ಗಳನ್ನ ಕಡೆಗಣ್ನಿಂದ ನೋಡಿ ನಿರ್ಧಾಕ್ಷಿಣ್ಯವಾಗಿ ತೆಗೆದು ಬಿಸಾಕಿದ , ಗೋಳು ಹೆಚ್ಚಾಯ್ತು ಎನಿಸಿದಾಗ ಟಾಪಿಕ್ ಚೇಂಜ್ ಮಾಡೆಲೇ ಅಂತ ಮುಖಸಿಂಡರಿಸಿಕೊಂಡ …
ಇವನ ಜೊತೆ ಎಷ್ಟು comfortzone ಇತ್ತು ಅನ್ನೋದು ಅಲ್ಲಿನವರೆಗು ಗೊತ್ತಾಗಿರಲಿಲ್ಲ.
kfc chicken ಕಡೆಗೆ ಪೆಟ್ರೋಲ್ ವರೆಗೂ,ಮನೆಯವನೇನೋ ಅನ್ನೋಂಗೆ ಕೇಳೋದಕೆ ಮುಂಚೆ ಜೇಬಿಂದ ತೆಗೆದುಕೊಡುತ್ತಿದ್ದ.ಎಲಿವೇಟರ್ ಹತ್ತೋವಾಗ ಇಳಿಯೋವಾಗ ಮುಟ್ಟದೇ ಹಿಂದೆಯಿಂದ ಒಂದು ಕೈಅಡ್ಡ ಇಟ್ಟುಕೊಳ್ಳುತ್ತಿದ್ದ,ಸಿನಿಮಾದ ಉದ್ದಕ್ಕೂ popcorn coke ಸಪ್ಲೈ ಮಾಡಿ ಇನ್ನು ಏನಾದರು ಬೇಕಾ ಅಂತ ಕೇಳುತ್ತಿದ್ದ,ನಾನೇ ಸಾಕಾಗಿ ಮನೆಗೆ ಹೋಗೋಣ ಅನ್ನುವವರೆಗೂ ಕೂತು ಮೊಳೆಹೊಡೆಸಿಕೊಳ್ಳುತ್ತಿದ್ದ,ತಪ್ಪದೆ ಹಬ್ಬಕ್ಕೆ ದೇವರು ಒಳ್ಳೇದು ಮಾಡಲಿ ಅಂತ ಹಾರೈಸುತ್ತಿದ್ದ. ಎಂದಿನಂತೆ ನಾನು ಇವನನ್ನು ಗಮನಿಸಿಯೇ ಇರಲಿಲ್ಲ ..
ಹೀಗೆ ಇರಬೇಡವೇ ಮದುವೆ ಆಗೇ ಅಂತ ಫರ್ಮಾನುಹೊರಡಿಸಿ,ಘನಘೋರವಾಗಿ ಕಿರಣನ ಜೊತೆ ಚರ್ಚಿಸಿ ನಾವೇ ಒಂದು ಹುಡುಗನ್ನನ್ನುನೋಡಿ ಮದುವೆ ಮಾಡೋಣ ಅನ್ನೋವರೆಗೂ ನಿರ್ಣಯ ತೆಗೆದುಕೊಂಡು ಜವಾಬ್ದಾರಿ ಹೊತ್ತಿಕೊಂಡ … ಕಿರಣನ ಪ್ರತಿಕ್ರಿಯೆಗಳಿಗೆ ನಾನು ತಲೇನೆ ಕೆಡಿಸಿಕೊಂಡಿಲ್ಲದ್ದಿದ್ರು,ಬೇಜಾರಾಯ್ತೇನೋ ಅನ್ನುವ ಕಳಕಳಿಯಲ್ಲಿ ಫಿಲಂರಿವ್ಯೂ ಚೆನ್ನಾಗಿರಲಿಲ್ಲ ಕಣೆ , ಇನ್ನೊಂದು ದಿನ ಬೇರೆ ಪಿಕ್ಚರ್ ಗೆ ಹೋಗೋಣ, tripಗೆ ಕಿರಣನ್ನನ್ನ ಒಪ್ಪಿಸುತ್ತೇನೆ ಅಂತೆಲ್ಲ ಸಮಾಧಾನ ಮಾಡುತ್ತಾ ಬರುತ್ತಿದ್ದವನು ರಸ್ತೆ ದಾಟುವಾಗ ಅಷ್ಟು ಸುಲಲಿತವಾಗಿ ಕೈ ತೆಗೆದುಕೊಂಡು ಭದ್ರವಾಗಿ ಅಮುಕಿ ಹಿಡಿದಾಗಲೇ ಪ್ರೀತಿಯಲ್ಲಿ ಸ್ನೇಹವಿರಬೇಕೆಂದು ಪ್ರತಿಪಾದಿಸುತ್ತ ಉಳಿದ್ದಿದ್ದವಳಿಗೆ,ಇಷ್ಟು ದಿನ ಗಮನಿಸದೆ ಉಳಿದ್ದಿದ್ದ ಸ್ನೇಹದಲ್ಲಿನ ಪ್ರೀತಿ ಮೊದಲಬಾರಿ ವಿಶೇಷವಾಗಿ ಅನುಭವಕ್ಕೆ ಬಂತು.
 

‍ಲೇಖಕರು G

17 January, 2015

5 Comments

  1. Prasad

    Touching story! Loved it…

  2. Shashank Giregol

    Snehadallina prema 🙂

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ

  4. N Krishnamurthy

    ಪ್ರೀತಿಸ್ಪರ್ಶಿ….

  5. hema

    Thanks Prasad,Manjunath and Shashank

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading