ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪ್ರೀತಿ ಎಂದರೆ…’ – ಸೂರಿ ಬರೀತಾರೆ

ಸೂರಿ

ಪ್ರೀತಿ ಎಂದರೆ…

ಪ್ರೀತಿ ಹಕ್ಕಿಯ ಪುಕ್ಕದ ಹಾಗೆ. ಪ್ರೀತಿ ಬಿಡಿಸಿಟ್ಟ ಹತ್ತಿಯ ಹಾಗೆ. ಪ್ರೀತಿ ಒದ್ದೆ ಮರಳ ಮೇಲಿನ ಹೆಜ್ಜೆ ಗುರುತಿನ ಹಾಗೆ. ಪ್ರೀತಿ ಹಸಿರು ಹುಲ್ಲಿನ ಮೇಲೆ ಮೆಲ್ಲಗೆ ಒರಗಿದ ಮಲ್ಲಿಗೆ ಹೂವಿನ ಹಾಗೆ. ಪ್ರೀತಿ ಬೊಗಸೆ ತುಂಬಿಕೊಂಡ ನೀರಿನ ಹಾಗೆ. ಪ್ರೀತಿ ಕೊಳಲಿನಿಂದ ಚಾರಿ ನೆಲಕ್ಕೆ ಬಿದ್ದ ಒಂದು ಸ್ವರದ ಹಾಗೆ. ಪ್ರೀತಿ ಕಣ್ಣಂಚಿನಲ್ಲಿ ನಿಂತ ಒಂದು ಹನಿಯ ಹಾಗೆ. ಪ್ರೀತಿ ಗಂಟಲಲ್ಲಿ ನಿಂತ ಬೆಚ್ಚನೆಯ ಉಸಿರಿನ ಹಾಗೆ. ಪ್ರೀತಿ ಇವೆಲ್ಲವೂ ಹೌದು, ಇವ್ಯಾವುವೂ ಅಲ್ಲ. ಪ್ರೀತಿಯನ್ನು ವಿವರಿಸುವುದು ದೇವರಿದ್ದಾನೆ ಅಥವಾ ದೇವರಿಲ್ಲ ಎಂದು ವಾದಿಸುವಷ್ಟೇ ಮೂರ್ಖತನದ ಕೆಲಸ. ಅದನ್ನು ಅನುಭವಿಸಬೇಕೇ ಹೊರತು ವಿವರಿಸ ಹೋಗಬಾರದು. ಪ್ರೀತಿ ಮಾತಿಗೆ ಸಿಕ್ಕ ಕೂಡಲೇ ಮಾಯವಾಗಿಬಿಡತ್ತೆ. ಅದಕ್ಕೇ ಮಾತನಾಡುವವರು ಪ್ರೀತಿಯ ಗೋಜಿಗೆ ಹೋಗುವುದಿಲ್ಲ ಅಂತ ಕಾಣತ್ತೆ. ಮಾತನಾಡದವರನ್ನು ಕೇಳಿ ಪ್ರೀತಿ ಎಂದರೇನು ಅಂತ, ಒಮ್ಮೆ ಮೈ ಎತ್ತಿ ಹಾಕಿ ರೋಮಾಂಚನವನ್ನು ಅನುಭವಿಸುತ್ತಾರೆ. ಕೆನ್ನೆಗೆ ಬಣ್ಣ ತಂದುಕೊಂಡು ನೆಲ ಉಜ್ಜುತ್ತಾರೆ. ತಮ್ಮನ್ನು ತಾವೇ ಮರೆತುಬಿಡುತ್ತಾರೆ.
ಪ್ರೀತಿಯಲ್ಲಿ ಸಿಕ್ಕವರು ಮೊದಲು ಕಳಕೊಳ್ಳುವುದು ಹೃದಯ ಅಂತ ಹೇಳಿದವನು ಮೂರ್ಖ. ಪ್ರೇಮಿಗಳು ಮೊದಲು ಕಳಕೊಳ್ಳುವುದು ಮಾತು. ಎದುರು-ಬದುರು ಅಥವಾ ಅಕ್ಕ-ಪಕ್ಕ ಕೂತ ಪ್ರೇಮಿಗಳು ಮಾತನಾಡುತ್ತಾ ಕಾಲ ಕಳೆದದ್ದನ್ನು ನಾನು ನೋಡಿಲ್ಲ. ಸುಮ್ಮನೇ ಕೈಲಿ ಕೈಹಿಡಿದು, ಆಕಾಶ ನೋಡುತ್ತಾ, ಒಬ್ಬರಿಗೊಬ್ಬರು ಒರಗಿ ಕೂತಿದ್ದನ್ನೇ ನಾನು ನೋಡಿದ್ದು. ಕೂತ ಇಬ್ಬರಿಗೂ ಗೊತ್ತು ಮಾತಿಗೆ ಇಲ್ಲಿ ಅವಕಾಶವಿಲ್ಲ. ಆದರೆ ಇಬ್ಬರೂ ಸುಮ್ಮನಿದ್ದೂ ಮಾತನಾಡುತ್ತಿರುತ್ತಾರೆ, ಒಬ್ಬರಿಗೊಬ್ಬರು, ಒಬ್ಬರ ಜೊತೆಗೊಬ್ಬರು, ಒಳಗಿಂದೊಳಗೇ, ತಮ್ಮೊಳಗೇ. ಮಾತು ಮರೆತವರೇ ಪ್ರೇಮಿಗಳು. ಪ್ರೀತಿಗೆ ಮಾತು ಯಾಕೆ ಬೇಕು ಹೇಳಿ…
ಇಂದು
ನಿನಗೇನು ಹೇಳಬೇಕೆಂದು
ಕೊಂಡಿದ್ದೆನೋ ಏನೋ.
 
ನಿನ್ನ ನೋಡಿದೇಟಿಗೇ ಎಲ್ಲ ಮರೆತೆ
ನಾನು ಹೇಳಿದ್ದು
ನಾನು ಹೇಳಬೇಕೆಂದುಕೊಂಡಿದ್ದು.
ಆದರೂ ನಿನ್ನ ನೋಡಿದಾಗ
ಎಲ್ಲವನ್ನೂ ನಿನಗೆ ಹೇಳಿದ್ದೇನೆ
ಅನಿಸುತ್ತದಲ್ಲೇ ಹುಡುಗಿ.
 
ಕೆಲವನ್ನು ನಾನು ನಿನಗೆ ಹೇಳೇ ಇಲ್ಲ.
ಆದರೂ ನಿನಗೆ
ಹೇಳಿರಬೇಕದನ್ನು ಅನಿಸಿಬಿಡತ್ತೆ, ಯಾಕೋ…
 
ನಾನು ಮರೆತಿಲ್ಲ.
ಏನೋ, ನಿನ್ನ ಪ್ರೀತಿಯಲ್ಲಿ
ಒಂದಿಷ್ಟು ನೆನಪು ಕಳಕೊಂಡಿದ್ದೇನೆ ಅಷ್ಟೆ.1
 
ಪ್ರೇಮಿಗಳಿಬ್ಬರಲ್ಲೂ ಮಾತಿಗೆ ಯಾವತ್ತೂ ಬರ. ಪ್ರೇಮಿಗಳ ನಿಘಂಟಿನಲ್ಲಿ ಕೆಲವೇ ಕೆಲವು ಪದಗಳು. ಭಾಷೆ ಯಾವುದಾದರೂ ಇರಬಹುದು. ವಿವರಿಸಿ ಹೇಳುತ್ತೇನೆ
ದೃಶ್ಯ ಒಂದು
ಒಂದು ಪಾರ್ಕ್ ಅಥವಾ ಒಂದು ಕೆರೆ ಏರಿ ಅಥವಾ ಜನವೇ ಇಲ್ಲದ ಒಂದು ಕತ್ತಲೆ ಸಿನೆಮಾ ಹಾಲ್.
ಹುಡುಗ ಹುಡುಗಿ ಕೂತಿದ್ದಾರೆ. ಯಥಾಪ್ರಕಾರ ಕೈಲಿ ಕೈಹಿಡಿದು ಕೂತಿದ್ದಾರೆ. ಹುಡುಗಿಯ ತಲೆ ಹುಡುಗನ ಭುಜದ ಮೇಲಿದೆ. (ಅದು ಯಾವತ್ತೂ ಹೀಗೆ. ಹುಡುಗನ ತಲೆ ಹುಡುಗಿಯ ಭುಜದ ಮೇಲೆ ಒರಗಿದ್ದನ್ನು ನಾನು ನೋಡಿಲ್ಲ.) ಸುಮಾರು ಐದು ನಿಮಿಷಗಳಾಗಿವೆ ಇಬ್ಬರೂ ಹೀಗೆ ಕೂತು.
ಹುಡುಗ ಮತ್ತೇ?
ಹುಡುಗಿ ಏನಿಲ್ಲ.
ಹುಡುಗ ಹೂಂ.
ಮತ್ತೆ ಮೌನ.
ಮತ್ತೆ ಎರಡು ನಿಮಿಷಗಳು.
ಹುಡುಗಿ ಏನಾದ್ರೂ ಹೇಳು.
ಹುಡುಗ ಏನು ಹೇಳ್ಲಿ?
ಹುಡುಗಿ ಏನಾದ್ರೂ-
ಹುಡುಗ ಐ ಲವ್ ಯೂ.
ಮತ್ತೆ ಮೌನ.
ಮತ್ತೆ ಎರಡು ನಿಮಿಷಗಳು.
ಹುಡುಗಿ ಆಮೇಲೇ?
ಹುಡುಗ ಏನಿಲ್ಲ.
ಹುಡುಗಿ ಹೂಂ.
ಹುಡುಗ ಏನಾದ್ರೂ ಮಾತಾಡಲ್ಲ-
ಹುಡುಗಿ ಏನು ಮಾತಾಡಲಿ?
ಹುಡುಗ ಏನಾದ್ರೂ-
ಹುಡುಗಿ (ಪಿಸುಗುಟ್ಟುತ್ತಾ, ನಾಚುತ್ತಾ, ಆಟಟ್ಟಡಡಿ ಅವನ ಕಿವಿಯಲ್ಲಿ) ಐ ಲವ್ ಯೂ…
ಹುಡುಗ ಅವಳನ್ನು ಇನ್ನೂ ಗಟ್ಟಿಯಾಗಿ ತಬ್ಬುತ್ತಾನೆ.
ಅವಳೂ ಅವನಿಗೆ ಒತ್ತಿ ಕೂಡುತ್ತಾಳೆ.
ಮತ್ತೆ ಎರಡು ನಿಮಿಷ.
ಹುಡುಗಿ ಮತ್ತೇ?
ಹುಡುಗ ಏನಿಲ್ಲಪ್ಪಾ-
 
(ನಿಮಗೆ ಕಂಪ್ಯೂಟರ್ ಗೊತ್ತಿದ್ದಲ್ಲಿ, ಮೇಲಿನದನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತಾ ಹೋಗಿ. ಪ್ರೇಮಿಗಳ ನಡುವೆ ನಡೆಯುವ ಸಂಭಾಷಣೆ ಇಷ್ಟು ಮಾತ್ರ.)
 
ಇದೇ ಸ್ಥಿತಿಯಲ್ಲಿ, ಇದೇ ಮತ್ತಿನಲ್ಲಿ, ಇದೇ ಗುಂಗಿನಲ್ಲಿ ಇಷ್ಟೇ ಮಾತನಾಡುತ್ತಾ ಸುಮಾರು ಒಂದೂವರೆ ತಾಸು ಕೂಡಬಲ್ಲರೂ ಈ ಪ್ರೇಮಿಗಳು.

ಪ್ರೀತಿಗೆ ವಯಸ್ಸೂ ಇಲ್ಲ, ಪ್ರೀತಿ ಸವೆಯುವಂಥಾದ್ದೂ ಅಲ್ಲ. ಯುವಕರಾಗಿದ್ದಾಗ ಪ್ರೀತಿ ಬೆಂಕಿಯಂತಿದ್ದರೂ, ವಯಸ್ಸಾದಾಗ ಪ್ರೀತಿ ಕಾವು ಕಳೆದುಕೊಳ್ಳುವುದಿಲ್ಲ. ಅದು ಬೆಚ್ಚಗೇ ಇರತ್ತೆ. ಪ್ರೀತಿಗೆ ಹಲ್ಲು ಬೇಕಿಲ್ಲ, ಬಚ್ಚ ಬಾಯಿಯ ನಗುವಲ್ಲೇ ಜಗತ್ತನ್ನು ಸೂರೆಗೊಳ್ಳಬಹುದು, ಥೇಟ್ ಮಗುವಿನ ಹಾಗೆ. ಕಬ್ಬನ್ನು ನುರಿದು ಸವಿಯುಣ್ಣಲು ಹಲ್ಲು ಬೇಕಿಲ್ಲ, ಗಟ್ಟಿ ವಸುಡುಗಳಿದ್ದರೆ ಸಾಕು.
ದೃಶ್ಯ ಎರಡು
ಒಂದು ಊರಲ್ಲಿ ಒಂದು ಯುವತಿ ಇದ್ದಳು. ಈ ಯುವತಿ ಈ ಊರಿಗೆ ಬಂದು ಕೆಲವು ತಿಂಗಳುಗಳಾಗಿವೆ ಅಷ್ಟೇ. ಆಕೆ ತನ್ನ ಕೆಲಸಕ್ಕೆ ಹೋಗಲು ಒಂದು ಬಸ್ ಹತ್ತಿ ಕೆಲವು ಕಿಲೋಮೀಟರು ಪ್ರಯಾಣ ಮಾಡಬೇಕು. ಆಕೆಗೆ ಪ್ರತಿ ಮಂಗಳವಾರ ಈ ಬಸ್ಸಿನಲ್ಲಿ ಒಂದು ಆಶ್ಚರ್ಯ ಕಾದಿರತ್ತೆ. ಅದೊಂದು ನಿಯಮ ಎನ್ನುವಂತೆ ಪ್ರತಿ ಮಂಗಳವಾರ ಒಬ್ಬ ಮುದುಕ ಅವಳು ಬಸ್ಸು ಹತ್ತಿದ ಕೆಲವು ಸ್ಟಾಪ್ಗಳ ನಂತರ ಬಸ್ ಹತ್ತುತ್ತಾನೆ. ಕೈಲಿ ಈಗಷ್ಟೇ ಗಿಡದಿಂದ ಬಿಡಿಸಿ ತಂದಂತೆ ಕಾಣುವ ನಳನಳಿಸುವ ಬೆಚ್ಚನೆಯ ಬಣ್ಣದ ಹೂವಿನ ಗೊಂಚಲು. ಮಾತಿಲ್ಲದೇ ಯಾವುದೋ ಒಂದು ಸೀಟಿನಲ್ಲಿ ಕೂಡುತ್ತಾನೆ. ಮುಖದಲ್ಲಿ ಒಂದು ಲಾಸ್ಯವಿದೆ. ಒಂದು ತೆಳ್ಳನೆಯ ನಗುವಿದೆ. ಸುಮಾರು ಏಳೆಂಟು ಸ್ಟಾಪ್ಗಳ ನಂತರ ಆತ ಇಳಿದು ಹೋಗುತ್ತಾನೆ. ಬಸ್ಸು ಮುಂದೆ ಹೋಗುತ್ತದೆ. ಯುವತಿಗೆ ಆಶ್ಚರ್ಯ: ಈ ವಯಸ್ಸಿನಲ್ಲಿ ಈತನ ಉಲ್ಲಾಸಕ್ಕೆ ಕಾರಣವೇನು? ಯಾವ ಪ್ರೇಮಿಯನ್ನು ಈತ ಭೇಟಿಯಾಗಲು ಹೋಗುತ್ತಾನೆ? ಆಕೆಗೆ ಎಷ್ಟು ವಯಸ್ಸಾಗಿರಬಹುದು? ಆಕೆ ಎಂದಾದರೂ ಈ ಬಸ್ಸು ಹತ್ತುತ್ತಾಳಾ? ಹೀಗೇ ಹುಚ್ಚುಚ್ಚು ಆಲೋಚನೆಗಳು. ಸುಮಾರು ತಿಂಗಳುಗಳು ಕಳೆಯುತ್ತವೆ. ಮಂಗಳವಾರದ ದಿನಚರಿ ಬದಲಾಗುವುದಿಲ್ಲ. ಯುವತಿಯ ಅಚ್ಚರಿ ಕೊನೆಯಾಗುವುದಿಲ್ಲ.
ಅವತ್ತು ಆಕಸ್ಮಿಕ ಎನ್ನುವಂತೆ ಆ ಮುದುಕನಿಗೆ ಈಕೆಯ ಪಕ್ಕವೇ ಜಾಗ ಸಿಕ್ಕಿತು. ಆತ ನಗುತ್ತಾ, ಆಕೆಯ ಅನುಮತಿ ಕೇಳಿ ಅಲ್ಲಿ ಕೂತ. ಕೈಲಿ ಯಥಾಪ್ರಕಾರ ಹೂವಿನ ಗೊಂಚಲು. ಮೊದಲ ಸಾರಿ ಆಕೆಯ ಮೂಗಿಗೆ ಆತ ನವಿರಾಗಿ ಹಚ್ಚಿದ ಆಫ್ಟರ್ಶೇವ್ ಲೋಷನ್ನಿನ ಕಂಪು ತಾಕಿತು. ನೋಡಿದಳು. ಈಗಷ್ಟೇ ಶೇವ್ ಮಾಡಿದ ಮುದ್ದು ಮುಖ, ಒಂದೆರಡು ಮುಪ್ಪಿನ ಗೆರೆಗಳು ಇವೆ, ಪರವಾಗಿಲ್ಲ. ಒಂದು ಹಾಡನ್ನು ಸಣ್ಣದಾಗಿ ಗುಣುಗುತ್ತಿದ್ದಾನೆ. ಈಕೆಗೆ ತಡೆಯಲಾಗಲಿಲ್ಲ. ಹೇಳೇಬಿಟ್ಟಳು.
‘ನಿಮ್ಮ ಹುಡುಗಿ ಬಗ್ಗೆ ನಂಗೆ ಹೊಟ್ಟೇಕಿಚ್ಚಾಗತ್ತೆ.’
ಮುದುಕ ಇವಳತ್ತ ತಿರುಗಿ ನೋಡಿದ.
‘ಏನು’ ಎನ್ನುವಂತೆ ಹುಬ್ಬೇರಿಸಿದ.
ಆಕೆ ಹೂ ಗೊಂಚಲು ತೋರಿಸಿದಳು.
ಮುದುಕ ಅದನ್ನೊಮ್ಮೆ ನೋಡಿ, ‘ನನ್ನ ಹೆಂಡತಿಗೆ’ ಅಂದ.
‘ಆಕೆ ಪುಣ್ಯವಂತೆ’ ಅಂದಳು.
ಮುದುಕ ನಕ್ಕು ತಲೆಯಾಡಿಸಿದ.
‘ಆವಳು ಬದುಕಿದ್ದಾಗ ನಾನು ಪುಣ್ಯವಂತ ಆಗಿದ್ದೆ.’
‘ಅಂದ್ರೇ?’
‘ಅವಳಿಲ್ಲ. ಹೋಗಿ ಮೂವತ್ತು ವರ್ಷ ಆದ್ವು. ನಾಲ್ಕು ವರ್ಷ ಯಾವುದೋ ಖಾಯಿಲೆಯಿಂದ ಒದ್ದಾಡಿ ಹೋದ್ಲು.’
ಅಷ್ಟರಲ್ಲಿ ಆ ಮುದುಕ ಇಳಿಯಬೇಕಾದ ಸ್ಟಾಪ್ ಬಂತು. ಮುದುಕ ಎದ್ದ. ಹೊರಟವನು ನಿಂತು, ಯುವತಿಯ ಭುಜ ತಟ್ಟಿ ಇನ್ನೊಂದು ಬದಿಯ ಕಿಟಿಕಿಯಾಚೆ ಕೈ ತೋರಿಸುತ್ತಾ ‘ಅವಳು ಅಲ್ಲಿ ಮಲಗಿದ್ದಾಳೆ. ಅವಳಿಗೆ ಪ್ರತಿ ವಾರ ಹೂ ಕೊಟ್ಟು ನೋಡಿಕೊಂಡು ಬರ್ತೀನಿ. ಅದು ನನ್ನ ಪ್ರಾಮಿಸ್. ನನ್ನ ಕರ್ತವ್ಯ ಅಷ್ಟೇ. ಮೂವತ್ತು ವರ್ಷ ಆದ್ವು. ಅವಳನ್ನು ನೋಡದೇ ಇರೋಕ್ಕಾಗಲ್ಲ.’
ಅದೇ ಹಗುರ ಹೆಜ್ಜೆ ಹಾಕುತ್ತಾ ಆತ ಇಳಿದು ಹೋದ. ಯುವತಿ ಕಿಟಿಕಿಯಾಚೆ ನೋಡಿದಳು, ದೂರದಲ್ಲಿ ಒಂದಿಷ್ಟು ಸಮಾಧಿಗಳು ಬೆಳಗಿನ ಬಿಸಿಲಲ್ಲಿ ಹೊಳೆಯುತ್ತಿದ್ದವು. (2)
ಅದಕ್ಕೇ ಹೇಳಿದ್ದು ಪ್ರೀತಿ ಪ್ರೀತೀನೇ ಅಂತ. ಪ್ರೀತಿಯಲ್ಲಿ ಮಾನವ ಪ್ರೇಮಿಗಳು ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ದೇವರಾಗಿ ಬಿಡುತ್ತಾರಂತೆ. ಆತ ಅವಳ ಪಾಲಿನ ರಾಮನೋ, ಕೃಷ್ಣನೋ, ದೇವೇಂದ್ರನೋ ಆದಲ್ಲಿ ಆಕೆ ಅವನ ಪಾಲಿಗೆ ಸೀತೆ, ರಾಧೆ, ರುಕ್ಮಿಣಿ, ಲಕ್ಷ್ಮಿ…ವಿಚಿತ್ರ ನೋಡಿ ದೇವರುಗಳು ಪ್ರೀತಿಯಲ್ಲಿ ಸಿಲುಕಿದೊಡನೇ ಮನುಷ್ಯರಂತಾಗಿ ಬಿಡುತ್ತಾರೆ. ಕೃಷ್ಣ ನಮಗೆಲ್ಲಾ ದೇವರು, ರಾಧೆಗೆ ಮಾತ್ರ ಆತ ಸಾಧಾರಣ, ಮಾನವ ಸಮಾನನಾದ ಪ್ರೇಮಿ. ಆಕೆ ಆತನೊಂದಿಗೆ ಮುನಿಸಿಕೊಳ್ಳಬಲ್ಲಳು, ಜಗಳವಾಡಬಲ್ಲಳು. ರಾಧೆ ಪ್ರೇಮಿ ಆಕೆಗೆ ಇವೆಲ್ಲಾ ಹಕ್ಕುಗಳಿವೆ. ಕೃಷ್ಣನನ್ನು ‘ಏಯ್ ಕೃಷ್ಣಾ’ ಅನ್ನಬಲ್ಲಳು. ಬಾರೋ ಹೋಗೋ ಅನ್ನಬಲ್ಲಳು. ಆದರೆ ಸತ್ಯಭಾಮಾ, ರುಕ್ಮಿಣಿಯರು ಮಾತ್ರ ‘ಸ್ವಾಮೀ’ ಅನ್ನಬೇಕು. ಯಾಕೆಂದರೆ ಅವರು ಹೆಂಡತಿಯರು. ಸಲುಗೆಗೆ ಅವಕಾಶವಿಲ್ಲ ಅಲ್ಲಿ. ಪ್ರೇಯಸಿಯಾದಲ್ಲಿ ಪ್ರಿಯಕರನೊಂದಿಗೆ ಅಥವಾ ಭಕ್ತನಾದಲ್ಲಿ ದೇವರೊಂದಿಗೆ ಸಲುಗೆ ಚಾಸ್ತಿ. ಅದಕ್ಕೇ ಇರಬೇಕು, ಸೂಫಿ ಸಂತರು ಪ್ರೀತಿಯ ಬಗ್ಗೆ ಹಾಡಿದಾಗ ಅದು ಪ್ರೀತಿಯಿರಬೇಕು ಅಥವಾ ಭಕ್ತಿಯೇ ಇರಬೇಕು; ಅದು ಭಗವಂತನನ್ನು ಕುರಿತು ಹಾಡಿದ್ದಿರಬೇಕು ಅಥವಾ ಪ್ರೇಯಸಿಯನ್ನು ಕುರಿತು ಹಾಡಿದ್ದೂ ಇರಬೇಕು ಅನಿಸಿಬಿಡತ್ತೆ.
 
ಇಲ್ಲೇ ಇರು ಎಂದಳು
ಹೆಗಲ ಮೇಲಿನ ಹೊರೆ
ಹೊಸ್ತಿಲ ಬಳಿ ಇಳಿಸುವಷ್ಟರಲ್ಲಿ
ಮನಸ್ಸು ಬದಲಿಸಿ
ಇಲ್ಲ ಹೊರಡು ಅಂದಳು. (3)
 
ಇನ್ನೊಂದು ಪದ್ಯ ನೋಡಿ.
ನೀನಿತ್ತ ಭಾಷೆ
ನೀನು ಉಳಿಸಿಕೊಂಡಿದ್ದಲ್ಲಿ
ನೆಮ್ಮದಿಯಿಂದ ಸತ್ತು ಹೋಗುತ್ತಿರಲಿಲ್ಲವೇನು ನಾನು?
ನೀನಿತ್ತ ಭಾಷೆ
ಇನ್ನೂ ಹಾಗೇ ಇದೆ, ಪೂರ್ಣಗೊಳ್ಳದೇ.
ಅದಕ್ಕೇ ಸತ್ತಿಲ್ಲ ನಾನು,
ಇನ್ನೂ ಬದುಕಿದ್ದೇನೆ.
ಜೀವಂತವಿದ್ದೇನೆ. (3)
 
ಕೊನೆ ಪದ್ಯ.
ಅವನು ಅವಳ ಬಾಗಿಲನ್ನು ತಟ್ಟಿದ.
ಅವಳು: ಯಾರದು?
ಅವನು: ನಾನು
ಅವಳು: ದಯವಿಟ್ಟು ಹೋಗು, ಹಸಿ ಮಾಂಸಕ್ಕೆ ಇಲ್ಲಿ ಜಾಗವಿಲ್ಲ.
 
ಅಹಂಕಾರವನ್ನು ವಿರಹದ ಬೇಗೆ
ಸುಟ್ಟಂತೆ ಮತ್ತಾವುದೂ ಸುಡದು.
 
ಒಂದಷ್ಟು ವರ್ಷಗಳು ಅವನು
ತಿರುಗಿದ, ಗೊತ್ತು ಗುರಿಯಿಲ್ಲದೆ.
ಈ ಬಾರಿ ಹಗುರಾಗಿ ಬಾಗಿಲು ತಟ್ಟಿದ.
ಮೃದುವಾಗಿದ್ದ. ಬೆಂದಿದ್ದ. ಹಣ್ಣಾಗಿದ್ದ.
 
ಅವಳು: ಯಾರದು?
ಅವನು: ನೀನು.
ಅವಳು ಒಳಗೆ ಬಾ ನನ್ನತನವೇ
ಇಬ್ಬರಿಗೆ ಇಲ್ಲಿ ಜಾಗವಿಲ್ಲ.
 
ನೆನಪಿರಲಿ.
ಎರಡು ಚುಂಗಿನ ದಾರದ ತುದಿ
ಒಂದು ಸೂಜಿ ಕಣ್ಣಲ್ಲಿ ಹೋಗದು.
ಹೋಗುವುದಾದರೆ
ಚೂಪಾದ, ಹುರಿಗಟ್ಟಿದ ತುದಿ ಮಾತ್ರ.
ಅಹಂನಿಂದ ಕೊಬ್ಬಿದ, ಉಬ್ಬಿದ
ತುದಿಯಲ್ಲ. (4)
 
ಪ್ರೀತಿ ದೊರಕುವುದು ಹಣ್ಣಾದಾಗ ಮಾತ್ರ. ಪಕ್ವವಾದಾಗ ಮಾತ್ರ. ದೇವರು ದೊರಕುವುದು, ಯಾವುದೇ ಸಾಕ್ಷಾತ್ಕಾರವಾಗುವುದು ಹಣ್ಣಾದಾಗ ಮಾತ್ರ. ತನ್ನನ್ನೇ ತಾನು ಒಪ್ಪಿಸಿಕೊಂಡಾಗ ಮಾತ್ರ. ತ್ರಿಶೂರಿನ ವಡಕುನಾಥನ್ ದೇವಸ್ಥಾನದಲ್ಲಿ ನೆಟ್ಟಗೆ ನಿಂತರೆ ದೇವರು ಕಣ್ಣಿಗೆ ಕಾಣುವುದಿಲ್ಲ. ಸಾಷ್ಟಾಂಗ ನಮಸ್ಕಾರ ಹಾಕಿದಲ್ಲಿ ಮಾತ್ರ ದೇವರು ಕಣ್ಣಿಗೆ ಬೀಳುತ್ತಾನೆ. ಹೃದಯ ತೇದು ಕೊಟ್ಟರೆ ಮಾತ್ರ ಪ್ರೀತಿ. ತುದಿಗಾಲಲ್ಲಿ ನಿಂತರೂ ಸಿಕ್ಕದು ಆಕಾಶ ಮಲ್ಲಿಗೆ; ಮರದ ಕೆಳಗೆ ಬೊಗಸೆ ಹಿಡಿದು, ಪ್ರಾರ್ಥಿಸಿ ನೋಡಿ, ಎಷ್ಟೊಂದು ಬೀಳುತ್ತವೆ ಬೊಗಸೆಗೆ.
 
(ಕಡ ತೆಗೆದುಕೊಂಡ ವಿವರಗಳು: 1: ಗುಲ್ಜಾರ್ ಸಾಬ್, 2: ಜಪಾನ್ ಕಥೆ, 3: ಗಾಲಿಬ್, 4: ರೂಮಿ.)
 
 
 

‍ಲೇಖಕರು G

14 February, 2014

7 Comments

  1. Swarna

    ಹೃದಯ ತೇದು ಕೊಟ್ಟರೆ ಮಾತ್ರ ಪ್ರೀತಿ. ತುದಿಗಾಲಲ್ಲಿ ನಿಂತರೂ ಸಿಕ್ಕದು ಆಕಾಶ ಮಲ್ಲಿಗೆ; ಮರದ ಕೆಳಗೆ ಬೊಗಸೆ ಹಿಡಿದು, ಪ್ರಾರ್ಥಿಸಿ ನೋಡಿ, ಎಷ್ಟೊಂದು ಬೀಳುತ್ತವೆ ಬೊಗಸೆಗೆ….nice

  2. Anonymous

    ಪ್ರೀತಿ ದೊರಕುವುದು ಹಣ್ಣಾದಾಗ ಮಾತ್ರ ….. ಇಷ್ಟ ಆಯ್ತು

  3. ಸುಮ ಮುದ್ದಾಪುರ್

    ಪ್ರೀತಿ ದೊರಕುವುದು ಹಣ್ಣಾದಾಗ ಮಾತ್ರ…. ಇಷ್ಟ ಆಯ್ತು

  4. bharathi b v

    Kurudi naanu … Preethi enantha kaanisle illa …

  5. gundanna chickmagalur

    Tumbaa chennagide. Vaastavakke hattiravaagide.

  6. Veeru

    ದೇಹ ಮುಪ್ಪಾದರೂ, ಪ್ರೀತಿ ಮುಪ್ಪಾಗದು.
    ದೃಶ್ಯ ಎರಡು ಬೇಗನೆ ಮನ ಮುಟ್ಟಿತ್ತು. ಚೆನ್ನಾಗಿದೆ.

  7. Anonymous

    ITS TRUE PREETHI HENDIGU SHASHWATHA NISHKALMASHA……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading