ಪ್ರೀತಿ ಎಂದರೆ ಅಷ್ಟೇ ಸಾಕೆ..??


ಅದೊಂದು ದಿನ ಮೈಸೂರಿನ ದಸರಾ ಕವಿಗೋಷ್ಟಿಯ ಸಂಭ್ರಮ. ಹೊರಗೆಲ್ಲೋ ಹೋಗಿದ್ದ ನನಗೆ ಪಕ್ಕದಲ್ಲಿ ಗಡಿಬಿಡಿಯಿಂದ ಬರುತ್ತಿದ್ದ ಹಿರಿಯರೊಬ್ಬರು ಕಾಣಿಸಿದರು. “ಕವಿಗೋಷ್ಟಿ ನಡಿತಿದೆಯಾ?’ ನನ್ನನ್ನೇ ಕೇಳಿದರು. “ಹೌದು ಸರ್ ಈಗಷ್ಟೇ ಪ್ರಾರಂಭವಾಗಿದೆ” ಎಂದೆ.

ಪಟಪಟನೆ ಸ್ಟೇಜ್ ಗೆ ಹೊರಟವರನ್ನು ನಾನೇ ನಿಲ್ಲಿಸಿದೆ. “ಸರ್ ಕವಿಗೋಷ್ಟಿಯಲ್ಲಿ ನಲವತ್ತು ಕವಿಗಳ ಹೆಸರಿದೆ. ಏಳು ಎಂಟು ಕವಿಗಳನ್ನಷ್ಟೇ ಒಮ್ಮೆ ವೇದಿಕೆಗೆ ಕರೆಯುತ್ತಿದ್ದಾರೆ. ನಿಮ್ಮ ಹೆಸರು ಈಗಲೇ ಬಂದಿದೆಯೋ ನೋಡಿಕೊಳ್ಳಿ” ಎಂದೆ. “ನನ್ನ ಹೆಸರು ಕೊನೆಗಿದೆ ಹಾಗಾದರೆ….” ಎನ್ನುತ್ತ ಸಮಾಧಾನದಿಂದ ನಿಂತರು.

ಮಾತು ಪರಿಚಯಕ್ಕೆ ತಿರುಗಿದಾಗಲೇ ಗೊತ್ತಾಗಿದ್ದು ನನ್ನ ವ್ಯಾಟ್ಸ್ ಆಪ್ ನಲ್ಲಿ ಬುದ್ಧನ ಪ್ರೊಪೈಲ್ ಒಂದು ಯಾವತ್ತೂ ಗಮನ ಸೆಳೆಯುತ್ತಿತ್ತು. ಅವರ  ಹೆಸರಿಗಿಂತ ಆ ಬುದ್ಧನ ಫೋಟೋವೇ ನನಗೆ ಯಾವತ್ತೂ ನೆನಪಿರುತ್ತಿತ್ತು. ಹೀಗಾಗಿಯೇ ಅವರು ತಾನು ರಮೇಶ ಗಬ್ಬೂರ್ ಎಂದಾಗ ನನ್ನ ಬಾಯಿಂದ ಬಂದ ಮೊದಲ ಮಾತೇ ಬುದ್ಧ. ಅವರಿಗದು ಕೇಳಿಸಿತೋ ಇಲ್ಲವೋ. ಆದರೆ ಜೊತೆಗಿದ್ದ ಸ್ನೇಹಿತ ರಮೇಶ ಹೀರೆಜಂಬೂರ ಮಾತ್ರ ಯಾರಿಗೆ ನೀನು ಬುದ್ಧ ಎಂದಿದ್ದು ಎಂದು ಪ್ರಶ್ನಿಸಿದ್ದ. ನಾನು ಸುಮ್ಮನೇ ನಕ್ಕಿದ್ದೆ.

ಬುದ್ಧನಾಗಿಯೇ ನನಗೆ ಪರಿಚಿತರಾದ ರಮೇಶ ಗಬ್ಬೂರ್ ಎಂದಾಗ ಮತ್ತೆ ನೆನಪಾಗುವುದು ಹೋರಾಟದ ಹಾಡುಗಳಿಗಾಗಿ. ಹೋರಾಟದ ಹಾಡುಗಳನ್ನು ತುಂಬಾ ಸ್ಪುಟವಾಗಿ ಹಾಡುವ ಇವರಿಗೆ ಕ್ರಾಂತಿ ಗೀತೆಗಳೆಂದರೆ ಪಂಚಪ್ರಾಣ ಎಂಬುದು ನನಗೆ ಗೊತ್ತಿತ್ತು. ಆದರೆ ಅವರ ಗಜಲ್ ಗಳ ಸುಳಿಯಲ್ಲಿ ಹೋರಾಟದ ಹಾಡುಗಳು ಒಂದಿಷ್ಟು ಹಿಂದೆ ಸರಿಯೆನ್ನಬಹುದಾದರೂ ಗಜಲ್ ಪ್ರಕಾರದಲ್ಲೊಂದು ಹೊಸ ಸಂಚಲನಕ್ಕೆ ಕಾರಣವಾಗಿದ್ದಂತೂ ಸುಳ್ಳಲ್ಲ.

ಕೆಲವು ವರ್ಷಗಳ ಹಿಂದೆ ನಾನು ಅಮಲಿನ ಸಾಲುಗಳು ಎಂದು ಗೀಚುತ್ತಿದ್ದಾಗ “ನಿನ್ನ ಸಾಲುಗಳನ್ನು ನೋಡಿದರೆ ಗಜಲ್ ಬರೆಯಬಹುದು ನೀನು. ಪ್ರಯತ್ನಿಸು.” ಎಂದು ಸದಾ ಒತ್ತಾಯಿಸುತ್ತಿದ್ದವರು ಗೆಳೆಯ ಚಿದಾನಂದ ಸಾಲಿ.

ಯಥಾಪ್ರಕಾರ ಹೊಸದೊಂದಕ್ಕೆ ತೆರೆದು ಕೊಳ್ಳಲು ನಾನು ಯಾವತ್ತೂ ಹಿಂದೆಯೇ. ಹೊಸ ವೈದ್ಯನಿಗಿಂತ ಹಳೇ ರೋಗಿಯೇ ಉತ್ತಮ ಸಲಹೆ ಕೊಡಬಲ್ಲ ಎಂಬ ಮನಸ್ಥಿತಿ ಮತ್ತು ಧೈರ್ಯ ಅದು ಹೇಗೆ ನನ್ನೊಳಗೆ ಗಟ್ಟಿಯಾಗಿದೆಯೋ ನನಗೇ ಗೊತ್ತಿಲ್ಲ. ಬಹುಶಃ ಹೊಸತನ್ನು ಮಾಡಹೊರಟಾಗಲೆಲ್ಲ ಕೈ ಸುಟ್ಟುಕೊಂಡ ಅನುಭವಗಳೇ ಹೆಚ್ಚಿರುವುದರಿಂದ ಗಜಲ್ ಕೂಡ ನನಗೆ ಒಗ್ಗುವ ಪ್ರಕಾರ ಅಲ್ಲವೇ ಅಲ್ಲ ಎಂದು ತೆಪ್ಪಗಾಗಿದ್ದೆ.

ಆದರೆ ಚಿದಾನಂದ ಸಾಲಿಯವರ ಒತ್ತಡ ದಿನೇ ದಿನೇ ಹೆಚ್ಚುತ್ತಿತ್ತು. “ಒಂದಾದರೂ ಗಜಲ್ ಬರಿ. ನಂತರ ಬೇಡ ಎನ್ನಿಸಿದರೆ ಬಿಟ್ಟು ಬಿಡು….” ಇಷ್ಟಾಗಿಯೂ ನಾನು ಗಜಲ್ ಬರೆಯಲು ಮನಸ್ಸು ಮಾಡಿದ್ದು ಅದಾದ ವರ್ಷಗಳ ನಂತರವೇ. ಅಷ್ಟರಲ್ಲಾಗಲೇ ನನ್ನ ಅತಿ ಆಲಸ್ಯ ಕಂಡ ಸಾಲಿ ಬರೆ ಎನ್ನುವುದನ್ನೇ ನಿಲ್ಲಿಸಿ ಅದಾವುದೋ ಕಾಲವಾಗಿತ್ತು. ಬರೆದಿದ್ದೀನಿ ಅಂದರೂ “ಹೋಗೆ ಸುಮ್ಮನೆ. ನೀನು ಬರೆದರೂ ನನಗೆ ತೋರಿಸಬೇಡ.” ಎಂದು ಸಿಟ್ಟನ್ನು ಪ್ರದರ್ಶಿಸುವ ಮಟ್ಟಿಗೆ ನನ್ನ ಮೈಗಳ್ಳತನದಿಂದ ಅವರು ರೋಸಿ ಹೋಗಿದ್ದರು.

ಯಾವುದೋ ಛಾಲೆಂಜ್ ಗೆ ಬಿದ್ದು ಒಂದೇ ಒಂದು ಎಂದು ಬರೆದ ಗಜಲ್ ಗಳು ಹತ್ತಾಯ್ತು, ಐವತ್ತಾಯಿತು ಕೊನೆಗೆ ನೂರಾಯಿತು. ಈ ಮಧ್ಯೆ ಗಜಲ್ ನ್ನು ಹೇಗೆ ಹೇಗೋ ಬರೆದುಬಿಡುವ ನನ್ನ ಅಸಡ್ಡಾಳತನದಿಂದ ರೋಸಿ ಹೋಗಿ ಗಿರೀಶ ಜಕಾಪುರೆ ಮತ್ತು ಸಿದ್ದರಾಮ ಹಿರೇಮಠ ಕೂಡ್ಲಗಿಯವರು ಗಜಲ್ ನ ಮೂಲ ಛಂದಸ್ಸಿನ ಒಂದಿಷ್ಟು ಪಾಠ ಮಾಡಿದರು. ಒಳಗುಟ್ಟನ್ನು ತಿಳಿಸಿದರು. ನನ್ನ ಗಜಲ್ ಗಳನ್ನು ತಿದ್ದಿ ತೀಡಿ ಒಂದು ರೂಪಕ್ಕೆ ಬರುವಲ್ಲಿ ಸಹಕರಿಸಿದರು.

ಅದರಲ್ಲಿ ಗಜಲ್ ಲೋಕದ ಹಿರಿಯ ಎಂದೇ ಖ್ಯಾತರಾದ ಅಲ್ಲಾಗಿರಿ ರಾಜ್ ರ ಪಾತ್ರ ಕೂಡ ದೊಡ್ಡದು. ನನ್ನ ಗಜಲ್ ಬರೆಹದ ಆರಂಭಿಕ ದಿನಗಳಲ್ಲಿ ಗಜಲ್ ಎಂದು ಗೀಚಿದ  ಆದರೆ ಗಜಲ್ ಎನ್ನಿಸಿಕೊಳ್ಳದ ಹತ್ತಾರನ್ನು ಮುಲಾಜಿಲ್ಲದೇ ಕಿತ್ತೆಸೆದರು. ಕೆಲವೊಂದಕ್ಕೆ ತಿದ್ದುಪಡಿ ಸೂಚಿಸಿದರು. ಅಂತೂ ನನ್ನ ಗಜಲ್ ಕೂಡ ಒಂದು ಹಂತಕ್ಕೆ ಬಂತು ಒಂದಿಷ್ಟು ಗಜಲ್ ಗಳು ಪ್ರಕಟವೂ ಆಗಿ ಗಜಲ್ ಬರೆಯುವವರು ಹೊರಳಿ ನೋಡುವಂತೆಯೂ ಆಯ್ತು. ಹೀಗಾಗಿಯೇ ನನಗೆ ರಮೇಶ ಗಬ್ಬೂರ ಪರಿಚಯವಾಗಿದ್ದು.

ಗಜಲ್ ಅಂದರೇನೆ ಅದೊಂದು ನಶೆ. ಆ ನಶೆ ಏರಿಸಿಕೊಳ್ಳಲು ಮೈಖಾನಾವೇ ಬೇಕಿಲ್ಲ. ಕೇಳಿದಾಗ ಥಾಲಿಯೊಳಗೆ ಮದಿರೆ ಸುರಿಯಲು ಸಾಕಿಯೂ ಜೊತೆಗಿರಬೇಕಿಲ್ಲ. ಒಂದಿಷ್ಟು ಸಾಂಪ್ರದಾಯಿಕ ಗಜಲ್ ಗಳನ್ನು ಓದುತ್ತಿದ್ದರೆ ಸಾಕು. ಮೈ ಬಿಸಿಯೇರಿ ನಶೆ ಆವರಿಸಿಕೊಳ್ಳುತ್ತದೆ.

ಅದಕ್ಕೆ ಪಬ್ ಬೇಡ, ಬ್ಲೆಂಡರ್ಸ್ ಪ್ರೈಡ್ ಕೂಡ ಬೇಡ. ಗಜಲ್ ಗಳ ಶೇರ್ ನ್ನು ಆಸ್ವಾದಿಸುವಷ್ಟು ರಸಿಕತೆಯಿದ್ದರೆ ಸಾಕು. ಪ್ರೇಮ ತನ್ನಿಂದ ತಾನೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಹೃದಯ ಹೂವಾಗುತ್ತದೆ. ರಿಖ್ತಿಗಳಂತೂ ಪ್ರೇಮಿಗಳ ಬಾಯಲ್ಲಿನ ಗುನುಗುನಿಸುವಿಕೆ. ಇನ್ನು ವಿರಹದ ಗಜಲ್ ಗಳಂತೂ ಎದೆ ಭಾರವಾಗುವಂತೆ ಮಾಡುತ್ತದೆ. ಒಂದು ಭಾವ ಜೀವಿಗೆ ಅಷ್ಟು ಸಾಕು. ಮದಿರಾಲಯದ ಸಂಗದಲ್ಲಿ ನಶೆಯ ತುತ್ತ ತುದಿಗೇರಲು ಈ ಪ್ರೀತಿ ವಿರಹಗಳು ಬೇಕಾದಷ್ಟಾಯಿತು.

ಆದರೆ ಹೋರಾಟದ ಹಿನ್ನಲೆಯಲ್ಲಿ ಬಂದವರಿಗೆ ಈ ಪ್ರೀತಿಯ ಅಮಲೂ ಬೇಡ. ಪ್ರೇಮದ ಗುಂಗೂ ಬೇಡ. ಅವರಿಗೆ ಬೇಕಾದದ್ದು ಸಮಾಜದ ಬದಲಾವಣೆ. ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟ ಮತ್ತು ಅದಕ್ಕಾಗಿ ಜನರನ್ನು ಎಚ್ಚರಗೊಳಿಸಬೇಕಾದ ಖಂಡ ತುಂಡ ಶಬ್ಧಗಳು ಬೇಕು.

ಅದು ಗಜಲ್ ಪ್ರಕಾರಕ್ಕೆ ಒಗ್ಗುತ್ತದೆಯೇ ಎಂಬ ಕಿಂಚಿತ್ ಅನುಮಾನವೂ ಇಲ್ಲದೇ ಸಾಮಾಜಿಕ ಅಸಮಾನತೆಯನ್ನು, ದೌರ್ಜನ್ಯವನ್ನು ಗಜಲ್ ನಲ್ಲಿ ಕಟ್ಟಿಕೊಟ್ಟ ರಮೇಶ ಗಬ್ಬೂರ, ಹಾಗೂ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಮುಂತಾದವರ ಗಜಲ್ ಗಳು ಹೊಸತೇ ಆದ ಇತಿಹಾಸವನ್ನು ಸೃಷ್ಟಿಸುವಂತಿದೆ.

ಅದರಲ್ಲಿಯೂ ರಮೇಶ ಗಬ್ಬೂರರ ಹೋರಾಟದ ಹಿನ್ನೆಲೆಯ ಗಬ್ಬೂರ್ ಗಜಲ್ ಗಳು ಖಂಡಿತವಾಗಿಯೂ ಗಮನ ಸೆಳೆಯುತ್ತದೆ. ಹಾಗೆಂದೇ ಈ ವಾರ ನಾನು ನಿಮಗೆ ಓದಲು ರೆಕಮೆಂಡ್ ಮಾಡುತ್ತಿರುವ ಪುಸ್ತಕ ಗಬ್ಬೂರ್ ಗಜಲ್.

 

ರಮೇಶ ಗಬ್ಬೂರರ ಗಜಲ್ ಗಳನ್ನು ಓದುವುದೆಂದರೆ ಹೊಸತೊಂದು ಲೋಕಕ್ಕೆ ತೆರೆದುಕೊಂಡಂತೆ. ಯಾಕೆಂದರೆ ಈ ಸೂರ್ಯನ ಕೆಳಗೆ ಬರುವ ಎಲ್ಲಾ ವಿಷಯಗಳೂ ಈ ಗಜಲ್ ಗಳಿಗೆ ವಸ್ತುಗಳಾಗಿವೆ. ಮಾಮೂಲಿ ಪ್ರೀತಿ ಪ್ರೇಮದ ಗಜಲ್ ಗಳಿಗಂತೂ ಇಲ್ಲಿ ಬರವಿಲ್ಲ. ಅಂತೆಯೇ ಮುಕ್ತ ಕಾಮ ಕೂಡ  ಇಲ್ಲಿ ಅಸ್ಪ್ರಶ್ಯವಲ್ಲ.

ರಿಕ್ತಿ ಗಜಲ್ ಗಳು ಕಾಣ ಸಿಗುವೆಡೆಯಲ್ಲಿಯೇ ಪ್ರೇಮದ ಉತ್ತುಂಗವನ್ನೂ ಹೇಳಿ ಬಿಡುತ್ತಾರಾದ್ದರಿಂದ ಕಾಮದ ಉತ್ತುಂಗದಲ್ಲೂ ಪ್ರೇಮವು ತನ್ನ ನವಿರುತನವನ್ನು ಕಳೆದುಕೊಳ್ಳದೇ ಉಚ್ಚ್ರಾಯ ಸ್ಥಿತಿಯಲ್ಲಿಯೇ ಇರುವುದನ್ನು ಗಮನಿಸುವುದೇ ಮೈಖಾನಾದಲ್ಲಿ ಸುತ್ತು ಹಾಕಿ, ಮದಿರೆಯ ನಶೆಯನ್ನು, ಸಾಕಿಯ ಸಖ್ಯವನ್ನೂ ಹಾಗೂ ದೊರೆಸಾನಿಯರ ನೃತ್ಯವನ್ನು ಏಕಕಾಲದಲ್ಲಿ ಅನುಭವಿಸ ಬಹುದಾಗಿದೆ.

ಅಂಬೇಡ್ಕರರನ್ನು ದೇವರು ಎಂದುಕೊಂಡ ಗಬ್ಬೂರರಿಗೆ ಕೆಳವರ್ಗದ ಸಂಕಷ್ಟಗಳು ಪರಿಹಾರವಾಗಿದ್ದೇ ಅಂಬೇಡ್ಕರರಿಂದ ಎಂಬ ಕೃತಜ್ಞತೆಯಿದೆ. ಹೀಗಾಗಿಯೇ ಮೊದಲ ಗಜಲ್ ನಲ್ಲಿಯೇ ಅಂಬೇಡ್ಕರರನ್ನು ‘ಶತಮಾನದ ಹಸಿವು ತೀರಿಸುವ ದೇವದೂತನಾಗಿ, ಅರಿವಿನ ಪಾಟಿ ಚೀಲವಾಗಿ ಅಷ್ಟೇಕೆ ಏನೂ ಇಲ್ಲದಿರುವಾಗ ಎಲ್ಲವೂ ಆಗಿ ಬಂದವನ’ ರೂಪದಲ್ಲಿ ನೆನೆಯುವುದರಲ್ಲಿ ಧನ್ಯತೆಯನ್ನು ಕಾಣುತ್ತಾರೆ.

ಗಬ್ಬೂರ ಗಜಲ್ ಸಂಕಲನದ ಹೆಚ್ಚಿನ ಗಜಲ್ ಗಳು ಸಾಮಾಜಿಕ ತಾರತಮ್ಯದ ವಿರುದ್ಧ ಮಾತನಾಡುತ್ತವೆ. ಧರ್ಮ ಧರ್ಮಗಳ ನಡುವಣ ಕಿತ್ತಾಟವನ್ನು ಮಾರ್ಮಿಕವಾಗಿ ವಿವರಿಸುತ್ತಾರೆ. ಧರ್ಮಗಳು ಗಿಡದಿಂದ ಉದುರುವ ಒಣಗಿದ ಎಲೆಯಂತೆ ಸದ್ದು ಮಾಡುತ್ತ ಮಾತನಾಡುತ್ತದೆ ಎಂಬಲ್ಲಿ ಕಾಣುವ ರೂಪಕಗಳನ್ನು ಗಮನಿಸಬೇಕು.

ತೀರಾ ಸೂಕ್ಷ್ಮವಾಗಿ ಧರ್ಮ ಎನ್ನುವುದು ಒಣಗಿದ ಎಲೆಗಿಂತ ಹೆಚ್ಚು ಪ್ರಯೋಜನವಿಲ್ಲ ಎಂಬುದನ್ನು ಮನದಟ್ಟು ಮಾಡಿಸುತ್ತಾರೆ. ಹೀಗಾಗಿಯೇ ಅಡ್ಡ ಪಲ್ಲಕಿಯನ್ನು ವಿರೋಧಿಸುವಷ್ಟೇ  ಪೂಜೆ, ನಮಾಜುಗಳಿಗೆ ರೋಗದ ಸೋಂಕು ತಗಲಿರುವುದನ್ನು ವಿವರಿಸುವಾಗ ಕಾಶ್ಮೀರದಲ್ಲಿ ದೇವಸ್ಥಾನದಲ್ಲಿ ಅತ್ಯಾಚಾರಕ್ಕೀಡಾದ ಮುಗ್ಧತೆಯೇ ಮೇವೆತ್ತಂತೆ ಇರುವ ಬಾಲಕಿ ಆಸೀಫಾ ನೆನಪಾಗುತ್ತಲೇ ಇರುವಾಗ ಧರ್ಮದ ಹೆಸರಿನಲ್ಲಿ ನಲುಗಿಹೋದ ಏಳರ ಪುಟಾಣಿ.. ಕೂಡ ಕಣ್ಣೆದುರು ಬರುತ್ತಾಳೆ.

ಅಷ್ಟೇಕೆ ರಾತ್ರಿ ಮನೆಯಲ್ಲಿ ಮಲಗಿದ ವಿವಾಹಿತೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ನಂತರ ಬೆಳ್ಳಂಬೆಳಿಗ್ಗೆ ಹಾದಿ ಬೀದಿಯಲ್ಲಿ ದರದರನೆ ಎಳೆದುಕೊಂಡು ಹೋಗಿ ಉರಿಯುತ್ತಿರುವ ದೇವಸ್ಥಾನದ ಅಗ್ನಿ ಕುಂಡಕ್ಕೆ ಎಸೆದು ಸಜೀವ ದಹನ ಮಾಡಿದ ಘಟನೆ ಕಣ್ಣೆದುರು ರುದ್ರ ನರ್ತನ ಮಾಡಿ ಮೈನಡುಗುವಂತೆ ಮಾಡುತ್ತದೆ. ಹಾಗಾದರೆ ಧರ್ಮ ಎಲ್ಲಿದೆ?

ಧಾರ್ಮಿಕ ಕೇಂದ್ರಗಳೇ ಅನಾಚಾರದ  ಕೂಪಗಳಾಗಿರುವಾಗ ರಮೇಶ ಗಬ್ಬೂರರಂತಹ ಸೂಕ್ಷ್ಮ ಸಂವೇದನೆಯ ಕವಿಗಳು “ ಧರ್ಮಗಳು ಗೆದ್ದಲು ತಿಂದ ಹಾಳೆಯ ಮಾತ ನಂಬಿ ಮಾನವಿಯತೆಯ ಬಿಕರಿ ಮಾಡುವ ಪಾಪಕೂಪಗಳೆನ್ನದೆ ಇನ್ನೇನು ಬರೆಯಲು ಸಾಧ್ಯ ನೀವೆ ಹೇಳಿ.

ಯುದ್ಧದ ಭೀಕರತೆಯ ಅರಿವು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಜಗತ್ತಿನ ಅತಿ ಅಮಾನುಷ ಎಂದರೆ ಎರಡು ಪ್ರಬುದ್ಧ ರಾಷ್ಟ್ರಗಳು ಯುದ್ಧದ ಹೆಸರಿನಲ್ಲಿ ಕಚ್ಚಾಡುತ್ತ ಏನೂ ಅರಿಯದ ತನ್ನ ದೇಶವಾಸಿಗಳಲ್ಲಿ ಅನಾಥ ಪ್ರಜ್ಞೆಯನ್ನು  ಹುಟ್ಟು ಹಾಕುವುದಿದೆಯಲ್ಲ, ಅದು ಬಾಯಿ ಮಾತಲ್ಲಿ ಹೇಳಲಾಗದಷ್ಟು ಭೀಷಣ. ಯುದ್ಧದ ಹೆಸರಿನಲ್ಲಿ ಒಂದಿಡೀ ತಲೆಮಾರು ನಾಶವಾಗಿ ಅದರ ಮುಂದಿನ ತಲೆಮಾರು ಅನಾಥವಾಗಿ ಬೆಳೆಯುವುದಿದೆಯಲ್ಲ ಅದಕ್ಕಿಂತ ಘೋರವಾದದ್ದು ಯಾವುದೂ ಇಲ್ಲ ಹೀಗಾಗಿಯೇ ಕೋವಿಯ ನಳಿಕೆಯೊಳಗೆ ಗೂಡು ಕಟ್ಟುವ ಆಶಯವನ್ನು ಎರಡು ಗಜಲ್ ಗಳಲ್ಲಿ  ವ್ಯಕ್ತಪಡಿಸುತ್ತಾರೆ

ಜೀವ ತೆಗೆವ ಬಂದೂಕಿಗೆ ಹಸಿದವನ ಹಸಿವ ತಿಳಿಸುವ ಕಾರ್ಯಾಗಾರ

ಸಾಯಿಸುವುದಲ್ಲ ಬದುಕಿಸುವುದ ಕಲಿಯಲಿ ಕರೆದು ತಾ ನಿನ್ನ ಕೋವಿಯ

ಎನ್ನುವ ಸಾಲುಗಳು ಅದೆಷ್ಟು ಸಶಕ್ತವಾಗಿ ಬಂದಿದೆಯೆಂದರೆ ಸಾಯಿಸುವುದನ್ನೇ ಧರ್ಮ ಎಂದುಕೊಂಡವರಿಗೆ ಚಪ್ಪಲಿಯನ್ನು ಮಕಮಲ್ಲು ಬಟ್ಟೆಯಲ್ಲಿ ಸುತ್ತಿ ಹೊಡೆದಂತಿದೆ. ಗಜಲ್ ನ ಎಲ್ಲಾ ಛಂದಸ್ಸುಗಳು  ಸರಿಯಾಗಿ ಬಳಕೆಯಾದ ಇಪ್ಪತ್ತೊಂದನೆಯ ಗಜಲ್ ನ್ನು ಆಸ್ವಾದಿಸಲೆಂದಾದರೂ ನೀವು ಗಬ್ಬೂರ್ ಗಜಲ್ ನ್ನು ಒಮ್ಮೆ ಓದಲೇ ಬೇಕು.


ಸಮಾಜದಲ್ಲಿ ದೇವದಾಸಿ ಪದ್ದತಿ ಮತ್ತು ವೇಶ್ಯಾವಾಟಿಕೆಯ ಕುರಿತು ತೀವ್ರ ಅಸಹನೆ ಇರುವಂತಿದೆ. ಒಂದೆಡೆ

“ಇಟ್ಟುಕೊಂಡವಳ ಹಿಂದೆ ಬಿದ್ದ ನಿಮ್ಮಪ್ಪನ ಅಕ್ರಮ ಸಂತಾನಕೆ ಸುತ್ತಿಕೊಂಡವನು ನಾನಂತೆ”
ಎನ್ನುತ್ತಾರೆ

ಸೂಳೆ, ದೇವದಾಸಿಯಾಗಿಸಿ ಸಂಭೋಗಿಸಲು ಪಾಳಿ ಕಾಯುತ್ತಾರೆ ನನ್ನ ಬಿಸಿಯಲಿ

ಎನ್ನುತ್ತ ಇಡೀ ಸಮಾಜವನ್ನೇ ಒಂದೇ ಸಾಲಲ್ಲಿ ಅನಾವರಣಗೊಳಿಸುವುದಿದೆಯಲ್ಲ, ಅದು ಕೇವಲ ನವಿರು ಭಾವನೆಗಳನ್ನು ಬರೆಯುತ್ತ ಕಂಫರ್ಟ ಝೋನ್ ನಲ್ಲಿ ಕುಳಿತು, ಎಲ್ಲಾ ಕಡೆಯೂ ಒಳ್ಳೆಯವನೆನ್ನಿಸಿಕೊಳ್ಳುತ್ತ, ಮುಗ್ಧತೆಯ ಮುಖವಾಡ ಹಾಕಿ ಸುಬಗತನದ ಮಾತನಾಡುವವರಿಂದ ಆಗದ ಕೆಲಸ. ಇಂತಹ ಸಾಲುಗಳನ್ನು ಬರೆಯಲು ಗುಂಡಿಗೆ ಬೇಕು. ಗಟ್ಟಿ ಕಸುವಿರಬೇಕು. ಬಿಸಿಲು ನಾಡಿನ ಗಬ್ಬೂರ್ ತಮ್ಮ ಬರವಣಿಗೆಗೆ ಅಂತ ಕಸುವಿರುವುದನ್ನು ತೋರಿಸಿಕೊಟ್ಟಿದ್ದಾರೆ.

ಇಷ್ಟೆಲ್ಲ ಹೇಳಿದ ಮೇಲೆ ರಮೇಶ ಗಬ್ಬೂರರ ಗಜಲ್ ಗಳು ಬರೀ ಸಾಮಾಜಿಕ ಸಮಸ್ಯೆಗಳಿಗೆ ಮಾತ್ರ ಸ್ಪಂದಿಸಿವೆ ಎಂಬ ಅನುಮಾನ ಬೇಡ. ಗಾಲಿಬ್ ನನ್ನು ಅನುಕರಿಸಿ ಗಜಲ್ ಬರೆದ ಮೇಲೆ ಪ್ರೇಮದ ಪರಾಕಾಷ್ಟತೆಯ ಕುರಿತು ಬರೆಯದೇ ಇದ್ದಾರೆಯೇ? ಹೀಗಾಗಿಯೇ “ಪ್ರೇಮ ಪಾಠದ ತರಗತಿಗೆ ಹಾಜರಾಗದೇ ನಿನ್ನ ನಜರಿಗೆ ಸೋತವನೆನಬೇಡ” ಎನ್ನುತ್ತ ಪ್ರೇಮಲೋಕದಲ್ಲೊಂದು ಸುತ್ತು ಹೊಡೆಸುತ್ತಾರೆ.

ಸಾಗರದ ಒಳಗಿನ ಉಪ್ಪು ಅಳತೆಗೆ ನಿಲುಕದೇ ಇರಬಹುದು

ನಿನ್ನ ಕಣ್ಣೊಳಗಿನ ಉಪ್ಪಿನ ರುಚಿಗೆ ಸಮವಿದೆಯೇ ಸಾಕಿ

ಎನ್ನುತ್ತ ಪರವಶರಾಗುತ್ತಾರೆ. ಪ್ರೇಮಿಗೆ ತನ್ನ ಪ್ರಿಯತಮೆಯ ಕಣ್ಣಿಂದ ಜಾರುವ ಕಣ್ಣೀರೂ ಬಹು ಸಿಹಿ ಎಂಬ ಲೋಕ ಒಪ್ಪಿತ ಕವಿ ಸಮಯವನ್ನು ಬಳಸುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ.

ಇಷ್ಟೆಲ್ಲ ಪ್ರೇಮಿಸಿದ ಮೇಲೇ ವಿರಹ ಇಲ್ಲದಿದ್ದರೆ ನಡೆದೀತೆ? ವಿರಹ ಎಂಬುದೇ ಗಜಲ್ ನ ಸ್ಥಾಯಿ ಭಾವವಾಗಿರುವಾಗ ವಿರಹವನ್ನು ಬರೆಯದವನು ಗಜಲ್ ಕಾರನಾಗಲು ಸಾಧ್ಯವೇ?  ಹೀಗಾಗಿಯೇ

“ಕತ್ತಲಲ್ಲಿ ರಾತ್ರಿಯ ನೆನಪಿಸಬೇಡ ಅಲ್ಲಿ ಸದಾ ಸುಖದ ಬರಗಾಲವೂ ಇದೆ

ಕತ್ತಲೆಯಲ್ಲಿ ಲೋಕ ಮಲಗುತ್ತದೆನಬೇಡ ಅಲ್ಲಲ್ಲಿ ಸುಖದ ಮಳೆಯೂ ಇದೆ”

ಎಂದು ಸಲೀಸಾಗಿ ಹೇಳಿ ತಣ್ಣಗೆ ಕುಳಿತುಬಿಡುತ್ತಾರೆ. ವಿರಹದ ಕಾವಿಗೆ ದೇಹ ಹಾಗು ಮನಸ್ಸು ಮತ್ತೇನನ್ನೋ ಬಯಸುತ್ತದೆಯಂತೆ.  ನನ್ನ ಸ್ನೇಹಿತನೊಬ್ಬನಿಗೆ ಹೆಂಡತಿಯನ್ನು ಬಿಟ್ಟಿರುವುದು ಈ ಜಗತ್ತನ್ನೇ ಬಿಟ್ಟಿದ್ದಂತೆ ಎಂಬ ಭಾವವಿದೆ. ಎರಡು ದಿನ ಹೆಂಡತಿ ತವರಿಗೆ ಹೋದರೂ “ಆಕಿ ತನ್ನ ಹಾಸಗೀನೂ ತನ್ನ್ ಜೋಡಿ ಕೊಂಡೊಯ್ಯಬೇಕಿತ್ತು ಬಿಡ್ರಿ, ಆಗ್ಲಾರ ಆಕಿ ನೆನಪು ಕಾಡಾದು ತಪತಿತ್ತು”  ಎಂದು ಸಣ್ಣ ಮುಖ ಮಾಡುವಾಗಲೆಲ್ಲ ನನಗೆ ಈ ವಿರಹದ ಬಗ್ಗೆ ಹೊಟ್ಟೆಕಿಚ್ಚು.

ಹೀಗಾಗಿಯೇ ರಮೇಶ  ಗಬ್ಬೂರರ

“ಹುಸಿ ನಂಬಿಕೆ ಇಡಬೇಡ ನೀನು ಗೆಲ್ಲಿಸುವವಳು, ನಾ ಸೋತ ರಾತ್ರಿಯೂ ಇದೆ” ಎನ್ನುವ ಸಾಲು ಉತ್ಕಂಟತೆಯ ಪ್ರತೀಕವಾಗಿ ನಿಲ್ಲುತ್ತದೆ.

ಕೃತಕ ತೋಟದ ಹೂವಿನ ದಳವ ಮುಟ್ಟಿ ನೋಯಬೇಡ

ಚಿತ್ರದ ಹಣ್ಣಿನ ಬೀಜವ ಬಿತ್ತಿ ಹೂ ಬಿಡದೆಂದು ಯಾರಿಗೂ ಹೇಳಬೇಡ

ಎನ್ನುತ್ತ ಪ್ರೀತಿಯಲ್ಲಿರುವ  ಕೃತ್ರಿಮತೆಗೆ ಕನ್ನಡಿ ಹಿಡಿಯುತ್ತಾರೆ.

ಬಹುಶಃ ನಾನು  ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದೆನೇನೋ.  ಅಂಬಾರಕೊಡ್ಲದಲ್ಲಿ ಹಿರಿಯ ಕವಿ ವಿಷ್ಣು ನಾಯ್ಕರು ಒಂದು ಕಾವ್ಯ ಕಮ್ಮಟವನ್ನು ಹಮ್ಮಿಕೊಂಡಿದ್ದರು. ಆ ಸಮಯದಲ್ಲಿ ಈಗ ನಾನು ಪ್ರತಿ ದಿನವೂ ನೋಡ ಬಯಸುವ ನನ್ನ ಕಾಳಿಂದಿಯ ಕುರಿತಾಗಿ ಒಂದು ಕಥೆ ಹೇಳಿದ್ದರು.  ಅದೇಕೋ ನನಗೆ ಅದನ್ನು ಮರೆಯಲೇ ಆಗುತ್ತಿಲ್ಲ.

ಪ್ರೇಮಿಗಳಿಬ್ಬರು ಕಾಳಿ ಸಮುದ್ರಕ್ಕೆ ಸೇರುವಲ್ಲಿ ನಿರ್ಮಿಸಿದ ಬ್ರಿಜ್ ಮೇಲೆ ನಿಂತಿದ್ದರು. ನನ್ನ ಕಾಳಿಂದಿ ನನ್ನಂತಹುದ್ದೇ ಸೊಕ್ಕಿನವಳು. ಉಕ್ಕುಕ್ಕಿ ಹರಿಯುವವಳು. ಯೌವ್ವನದಲ್ಲಿ ಕಲ್ಲು ಬಂಡೆಗಳನ್ನೆಲ್ಲ ಲೆಕ್ಕಿಸದೆ ರಭಸವಾಗಿ ಮುನ್ನುಗ್ಗುವ ಧೈರ್ಯವಂತೆ. ಹೀಗಾಗಿಯೇ ಅವಳ ಒಡಲಿನಲ್ಲಿ ರಾಪ್ಟಿಂಗ್ ವ್ಯವಸ್ಥೆ ಮಾಡಲಾಗಿರುವುದು.

ಆದರೆ ವಯಸ್ಸಾಗಿ ಕಡಲನ್ನು ಸೇರಲು ಬಂದಾಗ ಮಾತ್ರ ಮೇಲ್ಮೈಯ್ಯಲ್ಲಿ ತೀರಾ ಗಂಭೀರವಾಗಿ ಕಾಣಿಸಿಕೊಳ್ಳುತ್ತಾಳೆ. ಆದರೆ ಒಳಸುಳಿಗಳ ಲೆಕ್ಕ ಹೇಳಲು ಇನ್ನೂ ಆ ಬ್ರಹ್ಮದೇವನಿಗೇ ಸಾಧ್ಯವಾಗಿರಲಿಕ್ಕಿಲ್ಲ.

ಇತ್ತೀಚೆಗೆ ಕಾಳಿ ಬ್ರಿಜ್ ಮೇಲೆ ವಾಹನಗಳ ಸಂಖ್ಯೆ ಜಾಸ್ತಿಯಾಗಿದೆ. ಪ್ರೇಮಿಗಳ ಎಕಾಂತಕ್ಕೆ ಹತ್ತಾರು ಜಾಗಗಳ ಸೃಷ್ಟಿಯೂ ಆಗಿದೆ. ಆದರೆ ಆಗ ಹಾಗಿರಲಿಲ್ಲ. ವಾಹನ ಸಂಚಾರವೂ ಕಡಿಮೆ ಇದ್ದ ಕಾಲ ಅದು. ಇಡೀ ಕಾರವಾರದಲ್ಲಿ ಪ್ರೇಮಿಗಳು ಕುಳಿತು ಮಾತನಾಡಲು ಇರುವ ಸ್ಥಳ ಬೇರೊಂದಿರಲಿಲ್ಲ.

ಮಾತನಾಡುತ್ತ ಅವರಿಬ್ಬರ ಮಾತು ಯಾರು ಹೆಚ್ಚು ಪ್ರೀತಿಸುತ್ತಾರೆ ಎಂಬ ಹುಸಿ ಪ್ರತಿಷ್ಟೆಗೆ ತಿರುಗಿದೆ. “ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದರೆ ನೀನು ಹೇಳಿದರೆ ಈ ಕ್ಷಣ ಬ್ರಿಜ್ ನಿಂದ ಹಾರಲೂ ನಾನು ಸಿದ್ಧ”  ಎಂದು ಆಕೆ ತನ್ನ ಪ್ರೇಮದ ಶ್ರೇಷ್ಟತೆಯನ್ನು ಮೆರೆಯಲು ಹೇಳಿದ್ದಾಳೆ. ಆತನೋ ಎಲ್ಲ ಗಂಡಸರಂತೆ ಸ್ವಾಭಾವಿಕ ಹುಡುಗಾಟದಲ್ಲಿ “ಹಾರು ನೋಡೋಣ. ಆಗ ಒಪ್ಪಿಕೊಳ್ಳುತ್ತೇನೆ” ಎಂದು ಬಿಟ್ಟಿದ್ದಾನೆ. .

“ನನ್ನ ಆಮ್ಮನಿಗೆ ನಾನೊಬ್ಬಳೇ ಮಗಳು. ನನ್ನ ನಂತರ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಮಾತು ಕೊಡು” ಎಂದು ಅವನ ಕೈಯ್ಯನ್ನು ತನ್ನ ಹಸ್ತದ ಮೇಲಿಟ್ಟು ಭಾಷೆ ತೆಗೆದು ಕೊಂಡವಳೇ ಆಕೆ ತಡ ಮಾಡಲಿಲ್ಲ. ಬ್ರಿಜ್ ನ ರೋಲಿಂಗ್ ಹತ್ತಿ ಬೇರೆ ಮಾತಿಗೆ ಅವಕಾಶವಿರದಂತೆ ಹಾರಿಯೇ ಬಿಟ್ಟಿದ್ದಾಳೆ. ಸಮುದ್ರವನ್ನು ಸೇರುವ ಆತುರದಲ್ಲಿರುವ ಕಾಳಿಂದಿಗೆ  ಈ ಸುಕೋಮಲ ಹೆಣ್ಣು ತನ್ನೊಡಲಿಗೆ ಬಿದ್ದಿದ್ದು ಗೊತ್ತೇ ಆಗಲಿಲ್ಲ ತನ್ನ ವಿರಹವನ್ನು ನೀಗಿಸಿಕೊಳ್ಳುವ ಉದ್ವೇಗದಲ್ಲಿ ಅವಳನ್ನೂ ಜೊತೆಗಿಟ್ಟುಕೊಂಡು ಸಮುದ್ರ ಸೇರಿ ಬಿಟ್ಟಿದ್ದಾಳೆ.

ಅಲ್ಲಿಗೆ ಎಲ್ಲವೂ ಮುಗಿದಿದೆ. ಹಾರು ನೋಡೋಣ ಎಂದು ತಮಾಷೆ ಮಾಡಿದ ಆತ ಕಂಗಾಲಾಗಿದ್ದಾನೆ. ಈ ಕ್ಷಣದವರೆಗೂ ತನ್ನ ಕೈಯ್ಯಲ್ಲಿ ಕೈ ಹಾಕಿ ಕುಳಿತವಳು ಏಕಾಏಕಿ ಎದ್ದು ಹೊರಟು ಬಿಡುತ್ತಾಳೆ ಎಂಬುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಸಂಜೆಗತ್ತಲಾಗುತ್ತಲೇ ವಾಹನ ಸಂಚಾರವೂ ವಿರಳವಾಗಿ ಏಕಾಂಗಿಯಾಗಿ ಬಿಡುವುದರಿಂದ ಆತನ ಸಹಾಯಕ್ಕೂ ಯಾರೂ ಇರಲಿಲ್ಲ. ಹುಡುಗಿ ಪ್ರೀತಿಯನ್ನು ದೃಢಿಕರಿಸುವ ಉಮ್ಮೇದಿಯಲ್ಲಿ ಜೀವವನ್ನೇ ಕಳೆದುಕೊಂಡಿರುವುದು ರಮೇಶರ ಸಾಲುಗಳನ್ನು ಓದಿದ ಮೇಲೆ ಬೇಡವೆಂದರೂ ಮತ್ತೆ ಮತ್ತೆ ನೆನಪಾಗುತ್ತಿದೆ.

ಸತ್ತರೆ ಸುಖದ ಸ್ವರ್ಗವಿದೆ ಜೊತೆ ಸಾಯೋಣ ಎಂದು ನೀ ಹೇಳಿದ್ದೂ ನೆನಪಿದೆ

ಇದ್ದಾಗ ಸಿಗಲಾರದ್ದು ಸತ್ತ ಮೇಲೆ ಸಾಯಲಿ ಎಂದು ನಾ ಬೈಯ್ದದ್ದೂ ನೆನಪಿದೆ

ಎನ್ನುತ್ತ ರಮೇಶ ಗಬ್ಬೂರರವರು ಎದೆಗೇ ನೇರವಾಗಿ ಬಾಣ ಹೊಡೆಯುತ್ತಾರೆ.

ಕೆಲವೆಡೆ ಹೆಣ್ಣಿನ ಕುರಿತಾದ ಲೋಕನಿಂದಕ ಮಾತುಗಳು, ಆಡು ಮಾತುಗಳು, ಜನ ಸಾಮಾನ್ಯರಲ್ಲಿರುವ ರೂಢಿಗತ ನಂಬಿಕೆಗಳು ಹಾಗೆಯೇ ಉಳಿದು ಬಿಟ್ಟಿವೆ. ಅವುಗಳನ್ನು ಪ್ರಯತ್ನ ಪೂರ್ವಕವಾಗಿಯಾದರೂ ನಿಯಂತ್ರಿಸಬೇಕು ಎನ್ನುವುದು ನನ್ನ ಆಶಯ. ಒಂದಿಷ್ಟು ಸ್ತ್ರೀಪರ ನಿಲುವು ಮತ್ತು ಉಪಯೋಗಿಸುವ ಪದಗಳಲ್ಲಿ ಹೆಣ್ಣಿನ ಕುರಿತಾಗಿ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಅತ್ಯುತ್ತಮ ಗಜಲ್ ಗಳು ಇವರಿಂದ ಹೊರಬರಲು ಕಾತರಿಸುತ್ತಿವೆ ಎನ್ನಲು ಯಾವ ಅಡ್ಡಿಯೂ ಇಲ್ಲ.

ವರ್ಷದ ಹಿಂದೆ ರಮೇಶ ಗಬ್ಬೂರವರು  “ಒಂದಿಷ್ಟು ಗಜಲ್ ಕಳಿಸುವೆ. ಅದರ ಬಗ್ಗೆ ಏನಾದರೂ ನಾಲ್ಕು ಮಾತು ಬರೆಯಿರಿ” ಎಂದಿದ್ದರು. ನಾನೋ ನನ್ನ ಯಥಾ ಪ್ರಕಾರದ ಆಲಸ್ಯದಲ್ಲಿ ಅದನ್ನು ಮರೆತೇ ಬಿಟ್ಟಿದ್ದೆ. ಮತ್ತೆ ನಾಲ್ಕಾರು ಸಲ ನೆನಪು ಮಾಡಿ ನನ್ನಿಂದ ಎಂಟು ಹತ್ತು ಸಾಲಿನ ಅಭಿಪ್ರಾಯ ಬರೆಯಿಸಿಕೊಳ್ಳುವಲ್ಲಿ ಬಹುಶಃ ಅವರು ಸುಸ್ತಾಗಿ ಹೋಗಿರಬೇಕು. ಆದರೆ ಪುಸ್ತಕ ಕೈಗೆ ಬಂದಾಗ ಮಾತ್ರ ಇಂತಹುದ್ದೊಂದು ಪುಸ್ತಕದ ಬಗ್ಗೆ ಮತ್ತೂ ಚೆನ್ನಾಗಿ ಬರೆಯಬಹುದಿತ್ತು ಎನ್ನಿಸಿತ್ತು. ಈಗ ಇಲ್ಲಿ ಬರೆದಿರುವುದರಿಂದ ಏನೋ ಒಂದಿಷ್ಟು ಬೇಸರ ಕಡಿಮೆಯಾಗಿದೆ ಎನ್ನಿಸುತ್ತಿದೆ.

ರಮೇಶ ಗಬ್ಬೂರರ ಗಜಲ್ ಗಳ ಬಗ್ಗೆ ಹೇಳುತ್ತ ಹೊರಟರೆ ಅದು ಮುಗಿಯುವುದೇ ಇಲ್ಲ ಮುಗಿದಲ್ಲಿಂದಲೇ ಮತ್ತೆ ಮತ್ತೆ ಹುಟ್ಟಿ ಬರುವ ಫಿನಿಕ್ಸ್ ನಂತೆ ಈ ಸಾಲುಗಳು. ಅವರದ್ದೇ ಸಾಲುಗಳೇ ಅವರ ಗಜಲ್ ಗೆ ರೂಪಕವಾಗಿ ನಿಲ್ಲುವ ಪರಿಯೇ ಅನನ್ಯ.

ಮಾತು ಮುಗಿದವು ಎಂದುಕೊಂಡೆ ಮುಗಿದಂತೆ ಕಂಡವು ಮುಗಿಯಲಿಲ್ಲ

ಸೋತು ಹೋದೆನು ಎಂದುಕೊಂಡೆ ಸೋತಂತೆ ಕಂಡರೂ ಸೋಲಲಿಲ್ಲ.

ಹೀಗಾಗಿಯೇ ಒಂದು ಸಲವಾದರೂ ನೀವು ಗಬ್ಬೂರ ಗಜಲ್ ನ್ನು ಒಮ್ಮೆಯಾದರೂ ನೀವು ಓದಲೇಬೇಕೆಂದು ರೆಕಮಂಡ್ ಮಾಡುತ್ತಿದ್ದೇನೆ.

‍ಲೇಖಕರು Avadhi

July 22, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

18 ಪ್ರತಿಕ್ರಿಯೆಗಳು

  1. ಎಸ್ಸೆಸ್.ಅಲಿ

    ಇಷ್ಟವಾಯಿತು ಮೇಡಂ, ಶೋಷಿತ ಸಮೂದಾಯದ ತಲ್ಲಣಗಳೇ ಇವರ ಗಜಲ್ ಗಳಲ್ಲಿ ಕಂಡೆ ನೊಂದ ನುಡಿಗಳು, ಗಬ್ಬೂರ್ ಜೀ ಯವರದ್ದು ಮೇರು ವ್ಯಕ್ತಿತ್ವ.

    ಪ್ರತಿಕ್ರಿಯೆ
  2. ಮುರ್ತುಜಾಬೇಗಂ

    ಭಾಳ ಚಂದ ಬರದೀರಿ ಶ್ರೀ. ಗಬ್ಬೂರರ ಗಜಲ್ ಓದಾಕ ನಂಗೂ ಆಸೆ ಆತು

    ಪ್ರತಿಕ್ರಿಯೆ
  3. Dr.Jaji Devendrappa

    ಜನಕವಿ ರಮೇಶ್ ಗಬ್ಬೂರರ ಗಜಲ್ ತುಂಬಾ ಚೆನ್ನಾಗಿ ವೆ.ವರ್ತಮಾನದ ತಲ್ಲಣಗಳನ್ನು ಅಭಿವ್ಯಕ್ತಿ ಸುವ ಹೊಸ ಪರಿಭಾಷೆಯಲ್ಲಿ ವೆ.

    ಪ್ರತಿಕ್ರಿಯೆ
  4. ರಾಜು ಪಾಲನಕರ ಕಾರವಾರ (ಉತ್ತರ ಕನ್ನಡ)

    ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಅಂಕಣ ಬರಹ ತುಂಬಾ ಚೆನ್ನಾಗಿದೆ… ರಮೇಶ ಗಬ್ಬೂರ ಅವರ…ಗಬ್ಬೂರ ಗಜಲ್ ಪುಸ್ತಕದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ.. ಖಂಡಿತ ನಾನು ಈ ಪುಸ್ತಕ ಖರೀದಿಸಿ ಓದುತ್ತೇನೆ.. ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  5. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ

    ರಮೇಶ್ ಅವರ ಗಜಲ್ ಗಳಷ್ಟೇ ತಮ್ಮ ಬರಹವೂ ಆಪ್ತವಾಗಿದೆ.

    ಪ್ರತಿಕ್ರಿಯೆ
  6. ಋತಊಷ್ಮ

    ಮಾತು ಮುಗಿದವು ಎಂದುಕೊಂಡೆ ಮುಗಿದಂತೆ ಕಂಡವು ಮುಗಿಯಲಿಲ್ಲ
    ಸೋತು ಹೋದೆನು ಎಂದುಕೊಂಡೆ ಸೋತಂತೆ ಕಂಡರೂ ಸೋಲಲಿಲ್ಲ.

    ಈ ಸಾಲುಗಳು ಎಷ್ಟು ಹಿತ ಎಂದರೆ ಮತ್ತೆ ಮತ್ತೆ ಬದುಕಿನ ಆಶಯಕ್ಕೆ ನಮ್ಮನ್ನು ನೂಕುತ್ತದೆ.
    ಖಂಡಿತ ಓದುತ್ತೇನೆ ಮ್ಯಾಮ್ , ಥ್ಯಾಂಕ್ಯೂ.

    ಪ್ರತಿಕ್ರಿಯೆ
  7. Chalam

    “ಇಟ್ಟುಕೊಂಡವಳ ಹಿಂದೆ ಬಿದ್ದ ನಿಮ್ಮಪ್ಪನ ಅಕ್ರಮ ಸಂತಾನಕೆ ಸುತ್ತಿಕೊಂಡವನು ನಾನಂತೆ”
    ಎನ್ನುತ್ತಾರೆ

    ಸೂಳೆ, ದೇವದಾಸಿಯಾಗಿಸಿ ಸಂಭೋಗಿಸಲು ಪಾಳಿ ಕಾಯುತ್ತಾರೆ ನನ್ನ ಬಿಸಿಯಲಿ

    ಎನ್ನುತ್ತ ಇಡೀ ಸಮಾಜವನ್ನೇ ಒಂದೇ ಸಾಲಲ್ಲಿ ಅನಾವರಣಗೊಳಿಸುವುದಿದೆಯಲ್ಲ, ಅದು ಕೇವಲ ನವಿರು ಭಾವನೆಗಳನ್ನು ಬರೆಯುತ್ತ ಕಂಫರ್ಟ ಝೋನ್ ನಲ್ಲಿ ಕುಳಿತು, ಎಲ್ಲಾ ಕಡೆಯೂ ಒಳ್ಳೆಯವನೆನ್ನಿಸಿಕೊಳ್ಳುತ್ತ, ಮುಗ್ಧತೆಯ ಮುಖವಾಡ ಹಾಕಿ ಸುಬಗತನದ ಮಾತನಾಡುವವರಿಂದ ಆಗದ ಕೆಲಸ. ಇಂತಹ ಸಾಲುಗಳನ್ನು ಬರೆಯಲು ಗುಂಡಿಗೆ ಬೇಕು. ಗಟ್ಟಿ ಕಸುವಿರಬೇಕು.

    ನಾ ಹೇಳಬೇಕಿದ್ದ ಮಾತುಗಳು..ಥ್ಯಾಂಕ್ಸ್ ಶ್ರೀದೇವಿ ಕೆರೆಮನೆ..ಪ್ರಶಸ್ತಿಗಳು, ಸಾಹಿತ್ಯಿಕ ವಲಯದ ಸ್ಥಾನಮಾನ, ಗೌರವಗಳು ಇಂತಹವರಿಗೆ ದಕ್ಕಬೇಕು ಎಂಬುದೇ ಪ್ರಶಸ್ತಿ ವಿವಾದ ಹಿನ್ನೆಲೆಯಲ್ಲಿ ನಾ ತಳೆದಿರುವ ನಿಲುವು..ರಮೇಶ್ ಗಬ್ಬೂರು ಅವರಿಗೆ ಧನ್ಯವಾದಗಳು

    ಪ್ರತಿಕ್ರಿಯೆ
  8. M.Mallesh machanur

    ನಾನು ಕಂಡಂಗೆ,
    ಸಮ ಸಮಾಜದ ಹಿತವನ್ನು ಬಯಸುವ ಬರಹಗಾರರಲ್ಲಿ ನನ್ನ ಮೆಚ್ಚಿನ ಗುರುಗಳು ಹಾಗೆ ಸಮಾಜದ ಅಂಕು ಡೊಂಕುಗಳನ್ನು ತನ್ನ ಬರಹ ಮತ್ತು ಕ್ರಾಂತಿ ಗೀತೆಯ ಮೂಲಕ ತಿದ್ದಿ ತೀಡುವ ಸಾಹಸಿಗಳು ಇವರು…
    ಅಭಿನಂದನೆಗಳು ಗಬ್ಬೂರ್ ಗಜಲ್ ಸರ್ ಗೆ

    ಪ್ರತಿಕ್ರಿಯೆ
  9. ಬಸಪ್ಪ ನಾಗೋಲಿ ಗಂಗಾವತಿ

    ಉತ್ತಮ ಲೇಖನ ಮನಸಿಗೆ ಹಿಡಿಸಿತು.

    ಪ್ರತಿಕ್ರಿಯೆ
  10. ಧನಪಾಲ ನಾಗರಾಜಪ್ಪ, ನೆಲವಾಗಿಲು

    ಗಬ್ಬೂರ್ ಗಜಲ್ ಕೃತಿಯ ಕುರಿತ ನಿಮ್ಮ ವಿಶ್ಲೇಷಣೆ ಆಪ್ತವಾಗಿದೆ. ಇಷ್ಟವಾಯಿತು.

    ಪ್ರತಿಕ್ರಿಯೆ
  11. Amaresh Singry

    Novundu naliyuva, kahiyolage badavanige badukina sihi paata kalisuva Ramesh Sir avara Gajal spootidhayakavagive madam

    ಪ್ರತಿಕ್ರಿಯೆ
  12. Sangeeta Kalmane

    ಗಜಲ್ ಬರೆಯಲು ಪ್ರೋತ್ಸಾಹ ಸಿಕ್ಕ ನೀವು ಅದೃಷ್ಟವಂತರು.

    ಹಾಗೆಯೇ ಗಜಲ್ ಬೇರೆ ಬೇರೆ ವಿಷಯವಾಗಿಯೂ ಬರೆಯಬಹುದು ಎಂಬ ಮಾಹಿತಿ ಗಬ್ಬೂರವರ ಗಜಲ್ ನಿಂದ ತೋರಿಸಿಕೊಟ್ಟಿರಿ. ಧನ್ಯವಾದಗಳು.

    ಪ್ರತಿಕ್ರಿಯೆ
  13. ಸುಜಾತ ಲಕ್ಷೀಪುರ

    ಗಜಲ್ಗಳು ಪ್ರೇಮ,ವಿರಹಗಳನ್ನಷ್ಟೇ ಅಲ್ದೆ,ಸಮಾಜದ ವಾಸ್ತವ ಚಿತ್ರಣವನ್ನೂ ಕಟ್ಟಿಕೊಡಬಲ್ಲವು ಎಂಬುದೇ ಅವುಗಳ ಸಾಧ್ಯತೆಯನ್ನು ತಿಳಿಸುತ್ತವೆ. ಗಜಲ್ ಆಗಲಿ ಕಥೆ,ಕವನ,,ಕಾದಂಬರಿ ಯಾವ ಬರಹವಾದರೂ ಸರಿ ಅದು ವಯಕ್ತಿಕತೆಯನ್ನು ಮೀರಿ ಯೂನಿವರ್ಸಲ್ ಆದಾಗಲೇ ಅದರ ತೂಕ ಹೆಚ್ಚುವುದು.ಸಾಮಾಜಿಕ ಅಸಮಾನತೆ,ಕಟ್ಟುಪಾಡು,ಅನ್ಯಾಯದ ವಿರುದ್ದ ಗಜಲ್ ದನಿಯಾಗುವುದೆಂದರೆ ಅದು ತೀವ್ರವಾಗಿಯೇ ನಡೆಯುವ ಸಂಚಲನೆ.ಆಂತಹ ಗಜಲ್ಗಳ ಪರಿಚಯ ಎಂದಿನಂತೆ ಶ್ರೀ ಅವರ ಶೈಲಿಯಲ್ಲಿ ಸೊಗಸಾಗಿ ಮೂಡಿದೆ. ಆಪ್ತವಾದ ಬರಹ ಒಂದೇ ಉಸಿರಿಗೆ ಓದಿಸಿಕೊಂಡು,ಲೇಖನ ಮುಗಿದುಹೋದ ಬೆರಗು,ನಿರಾಶೆ…ನಡುವೆಯೂ ರಮೇಶ್ ಗಜಲ್ ಓದಬೇಕು ಅನ್ನಿಸುತ್ತದೆ. ಥ್ಯಾಂಕ್ಸ್ ಶ್ರೀದೇವಿಯವರೆ.

    ಪ್ರತಿಕ್ರಿಯೆ
  14. ಕರಿಸಿಧ್ಧನಗೌಡ ಮಾಲಿಪಾಟೀಲ

    ಶ್ರೀದೇವಿಯವರಿಗೆ ಧನ್ಯವಾದಗಳು,ಆಲಸ್ಯವನ್ನ ಮರೆತು ಸ್ವಾರಸ್ಯವಾಗಿ ಗಜಲಿನೊಳಗೆ ಮರೆಯುವಂತೆ ಮಾಡಿದ್ದೀರಿ.ಕ್ರಾಂತಿಬೀಜವನ್ನ ಪ್ರೇಮ ಗಜಲ್ ಭೂಮಿಯೊಳಗೆ ಬಿತ್ತಿ ಬೆಳೆದ, ಕಸುವಿನ ಕವಿ ರಮೇಶ ಗಬ್ಬೂರ

    ಪ್ರತಿಕ್ರಿಯೆ
  15. Pushpa naik

    ಈ ಅಂಕಣವೂ ಇಷ್ಟವಾಯಿತು ನಿಮ್ಮ ಬರಹದ ಪರಿ ಹಲವಾರು ಮಜಲುಗಳನ್ನ ಹೊಂದಿದೆ

    ಪ್ರತಿಕ್ರಿಯೆ
  16. ವಿನು ವಿಪಿಎಸ್

    ತುಂಬಾ ಸರಳವಾಗಿ ಓದಿಸಿಕೊಳ್ಳುವ ಲೇಖನ ಮೇಡಮ್

    ಪ್ರತಿಕ್ರಿಯೆ
  17. Ramesh gabbur

    ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಅನಂತ ನಮನಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: