ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪ್ರೀತಿಯ ಸಿಂಹ…’ – ಟಿ ಎನ್ ಸೀತಾರಾಂ ಬರೀತಾರೆ

ಟಿ ಎನ್ ಸೀತಾರಾಂ

ಪ್ರೀತಿಯ ಸಿಂಹ,

ನನ್ನೊಳಗೆ ಇವತ್ತು ದಟ್ಟವಾದ ವಿಷಾದ ಮತ್ತು FRUSTRATION ಗಳು ತುಂಬಿ ನಿಂತಿದೆ… ಬದುಕನ್ನು ತೀವ್ರವಾಗಿ ಪ್ರೀತಿಸಿದ ನಿನಗೆ ಬದುಕು ಕಡೆಗೂ ವಂಚನೆ ಮಾಡೇಬಿಟ್ಟಿತಲ್ಲ …….. ಎಷ್ಟು ಜೀವನೋತ್ಸಾಹ ನಿನಗೆ !… ಅಂಥ ನೀನು ಇವತ್ತು ಬದುಕಿಗೆ ವಿಮುಖನಾಗಿ ನಿಶ್ಚಲನಾಗಿ ಮಲಗಿಬಿಟ್ಟಿದ್ದಾಗ ನನ್ನ ಕಣ್ಣು ಕೊಂಚ ತೇವವಾದದ್ದನ್ನು ಯಾರೂ ನೋಡಲಿಲ್ಲ… ಎಷ್ಟು ಜನದ ಕಣ್ಣು ತೇವವಾಗಿತ್ತು ಗೊತ್ತಾ ಅಲ್ಲಿ ?
ನನಗೆ ಅನೇಕ ರೀತಿಯ ಗುರು ನೀನು… ನಾನು ಮೊತ್ತ ಮೊದಲು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು ನಿನ್ನ ಜತೆ…. ತುಘಲಕ್ ನಾಟಕದಲ್ಲಿ… ನೀನು ಅಭಿನಯದಲ್ಲಿ ನನಗೆ ಮಹಾನ್ ಗುರುವಾಗಿ ಅಭಿನಯದ ಸಾವಿರ ಬಗೆಯ ಬಣ್ಣಗಳನ್ನೂ , ಸಾವಿರ ಬಗೆಯ ಪದರಗಳನ್ನೂ , ಸಾವಿರ ಬಗೆಯ ಮೌನದ ಶಕ್ತಿಯನ್ನೂ ಹೇಳಿಕೊಟ್ಟು ನನ್ನಲ್ಲಿ ಅಭಿನಯದ ಬಗ್ಗೆ ಪ್ರೀತಿ ಹುಟ್ಟಿಸಿದೆ… ನಾನು ಬದುಕಿನ ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತಲು ಆರಂಭಿಸಿದ್ದು ಆಗಲೇ… ನಿನಗೆ ಎಂದೂ ಬಾಯಿಬಿಟ್ಟು ನಾನು ಕೃತಜ್ಞತೆ ಹೇಳಲೇ ಇಲ್ಲ… ಈಗ ಹೇಳೋಣ ಎಂದರೆ ನಿಶ್ಚಲನಾಗಿ ಮಲಗಿ ಬಿಟ್ಟಿದ್ದೀಯ…. ನನ್ನ ಕಣ್ಣಂಚಿನ ತೇವಕ್ಕೆ ಅದೂ ಒಂದು ಕಾರಣವೇ ?
ಎಷ್ಟು ಸಹೃದಯ ನೀನು. ನನ್ನ ಬದುಕಿನ ಕಡು ಕಷ್ಟ ಹೇಳಿದಾಗೆಲ್ಲ ಧೈರ್ಯ ಕೊಟ್ಟಿದ್ದು ನಾನು ಮರೆಯುವುದಿಲ್ಲ… ಚಾಪ್ಲಿನ್ ಥರದ ತಮಾಷೆಯೊಂದಿಗೆ ದುಃಖವನ್ನು ಕೊಂಚ ಹಗುರಾಗಿ ಮಾಡಿದ್ದು ಅದೆಷ್ಟು ನೂರು ಬಾರಿ …. ಇದಕ್ಕೂ ನಾನು ಕೃತಜ್ಞತೆ ಹೇಳಿಲ್ಲ ಅಲ್ಲವಾ..?
ನಿನ್ನ ಜತೆ ಹರಟಲು ಕೂತಾಗ ಅದು ಬರೀ ಕಾಡು ಹರಟೆಯಾ ?!? ಸಾಹಿತ್ಯ , ಕಾವ್ಯ , ನಾಟಕ , ಅಧ್ಯಾತ್ಮ , ಗೇಲಿ , ಜೋಕುಗಳು…… ಅರ್ಧ ಗಂಟೆ ನಿನ್ನ ಜತೆ ಮಾತಾದೋಣವೆಂದು ಬಂದು ಇಡೀ ದಿನ ಕೂತು ಉಲ್ಲಸಿತನಾಗಿ ಬಂದದ್ದೆ ಹೆಚ್ಚು… ನಿನ್ನಷ್ಟು colour ಫುಲ್ ವ್ಯಕ್ತಿಗಳು ತೀರಾ ಕಮ್ಮಿ
ನಿನ್ನಂಥ ವ್ಯಕ್ತಿಗಳು ಇದೇ ಥರ ದೂರಹೋಗುತ್ತಿದ್ದರೆ ಬದುಕಿರುವವರ ಬದುಕಿನಲ್ಲಿ ಬಣ್ಣ ಹೇಗೆ ಉಳಿದೀತು…. ? ಈ ಉಲ್ಲಾಸಕ್ಕೆ ಕೂಡ ಎಂದೂ ನಾನು ಕೃತಜ್ಞತೆ ಹೇಳಿಲ್ಲ ಅಲ್ಲವಾ ?
ಈ ಎಲ್ಲಾ ಕೃತಜ್ನತೆಗಳನ್ನೂ ಒಮ್ಮೆಗೆ ಹೇಳೋಣ ಅನಿಸುತ್ತೆ…… ಆದರೆ ನೀನು ಎಲ್ಲಿ… ? ಅದಕ್ಕೇ ಇರಬಹುದಾ ನನ್ನ ಕಣ್ಣಂಚಿನಲ್ಲಿ ತೇವ ಇದ್ದದ್ದು ?.?
ಮತ್ತೊಮ್ಮೆ ನಿನಗೆ ನಮಸ್ಕಾರ ಸಿಂಹ
 

‍ಲೇಖಕರು G

4 March, 2014

2 Comments

  1. Anonymous

    nimma manadaalada mathu hrudaya sparashiyagide

  2. parashuram boner

    ಸಿ.ಆರ್‌.ಸಿಂಹ ಎಂದರೆ ನನಗೆ ತುಂಬಾ ಕಾಡುವ ಪಾತ್ರವೆಂದರೆ, ರಾಯರು ಬಂದರು ಮಾವನ ಮನೆಗೆ ಚಿತ್ರ. ವಿಷ್ನುವರ್ಧನ ಅವರ ಬಾಡಿಗೆ ಅಳಿಯನಾಗಿ ಅದರಲ್ಲಿ ಪಾತ್ರ ಮಾಡಿರುತ್ತಾರೆ. ಆದರೆ, ಸಿಂಹ ಅವರು, ಇವನು ನಿಜವಾಗಲೂ ನನ್ನ ಅಳಿಯ ಎಂದು ತಿಳಿದುಕೊಂಡಿರುತ್ತಾರೆ. ಅಷ್ಟೇ ಪ್ರೀತಿಯಿಂದ ಅಳಿಯನನ್ನು ನೋಡಿಕೊಳ್ಳುತ್ತಾರೆ. ಇನ್ನೆನ್ನೂ ಅಮೇರಿಕಾಕೆ ಸಿಂಹ ಅವರು ಹೊರಟು ನಿಲ್ಲುತ್ತಾರೆ. ಅದರ ಹಿಂದಿನ ದಿನ ಮನೆಯಲ್ಲಿ ಒಂದು ಸಂಗೀತ ಗೋಷ್ಠಿ ನಡೆಯುತ್ತದೆ. “ಅಪರಾಧಿ ನಾನಲ್ಲ ಅಪರಾಧ ಎನ್ನಗಿಲ್ಲ ಹಾಡನ್ನು ವಿಷ್ಟು ಭಾವಪರವಶರಾಗಿ ಹಾಡುತ್ತಾರೆ. ಅದನ್ನು ಅಷ್ಟೇ ಪ್ರೀತಿಯಿಂದ ಸಿಂಹ ಅವರು ಕೇಳಿಸಿಕೊಳ್ಳುತ್ತಾರೆ. ಅವರ ಮನಸ್ಸಿಗೆ ನೋವು ತರಬಾರದೆಂದು ಕೊನೆಯವರೆಗೂ ವಿಷ್ಟು ತಾನು ಹಣಕ್ಕಾಗಿ ಬಾಡಿಗೆ ಅಳಿಯನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುವುದಿಲ್ಲ. ಕೊನೆಯ ಬಾರಿಗೆ ಅವರನ್ನು ಪ್ರೀತಿಯಿಂದ ಅಮೆರಿಕಕ್ಕೆ ಬೀಳ್ಕೊಡುತ್ತಾರೆ. ಸಿಂಹ ಅವರ ಪಾತ್ರವನ್ನು ನಾನು ಅತಿಯಾಗಿ ಮೆಚ್ಚಿಕೊಂಡಿದ್ದೆ. ಸಿಂಹ ಅವರು ಹೋದರು ಎನ್ನುವ ವಿಷಯ ಕೇಳಿದಾಗ ಮನಸ್ಸಿಗೆ ತುಂಬಾ ಖೇದವಾಯಿತು.
    -ಪರಶುರಾಮ ಬೋನೇರ, ಪತ್ರಕರ್ತ, ಗಂಗಾವತಿ ಕೊಪ್ಪಳ ಜಿಲ್ಲೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading