ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಗೋಪಾಲ ವಾಜಪೇಯಿ..

n-s-seturam2

ಎನ್ ಎಸ್ ಸೇತುರಾಂ 

ಪ್ರೀತಿಯ ಗೋಪಾಲ ವಾಜಪೇಯಿ,

ನೀವು ಹೀಗೆ ಅಚಾನಕ್ಕಾಗಿ ಹೊರಟಿದ್ದರ ಬಗ್ಗೆ ದ್ವೇಷವಿದೆ, ವಿಷಾದವಿದೆ. ಇತ್ತೀಚೆಗೆ ಬಹಳ ಹತ್ತಿರವಾಗಿದ್ರಿ. ಆತ್ಮೀಯರನ್ನು ಕಳೆದುಕೊಂಡ ದುಃಖವಿದೆ.

ಹವ್ಯಾಸಿ ರಂಗಭೂಮಿಯಲ್ಲಿ ನಟ ಅಂತ ಗುರುತಿಸಿಕೊಂಡ ಮನುಷ್ಯ ನಾನು. ನಾನು ಒಬ್ಬ ನಟನಾಗಿ ಗುರುತಾದದ್ದೇ ನಿಮ್ಮ ‘ದೊಡ್ಡಪ್ಪ’ ನಾಟಕದ ಅಜ್ಜನ ಪಾತ್ರದಿಂದ. ಹಾಗಾಗಿ ನನ್ನಲ್ಲಿನ ನಟನ ಸೃಷ್ಟಿ ನಿಮ್ಮಿಂದ.

ಆಗೊಮ್ಮೆ ಈಗೊಮ್ಮೆ ಬರಹದ ಪ್ರವೃತ್ತಿಯೂ ಇದೆ. ಕೇಳಿ ಗುರುತಿಸಿ ಭಾಷೆಯ ಪ್ರಯೋಗ ಛಂದ ಇದೆ ಅಂತಂದು, ನನ್ನಲ್ಲಿನ ಸಣ್ಣ ಪುಟ್ಟ ಬರಹದ ತುಡಿತಕ್ಕೆ ಜೀವ ಕೊಟ್ಟವರು ನೀವೇ ! ಅದರ ಸೃಷ್ಟಿಯು ನಿಮ್ಮದೆ !

ನಿಮ್ಮ ಸಾಹಿತ್ಯ ಓದಿದ್ದೀನಿ, ಕೇಳಿದ್ದೀನಿ, ಅನುಭವಿಸಿದ್ದೀನಿ, ಸಂತೋಷ ಪಟ್ಟಿದ್ದೀನಿ. ನೀವಿದ್ದಾಗಲೇ ಈ ಮಾತುಗಳನ್ನು ಹೇಳಬೇಕಿತ್ತು. ಹೇಳುವ ಅವಕಾಶವಾಗಲಿಲ್ಲ. ನಿಮ್ಮ ಅವಸರದ ಅರಿವಿರಲಿಲ್ಲ. ಕ್ಷಮೆ ಇರಲಿ.

ನೀವು ಹೊರಟ ನಂತರ ಎಲ್ಲ ಕಡೆ ನಿಮ್ಮದೇ ಗುಣಗಾನದ ಹುಯಲೆದ್ದಿದೆ. ನೀವಿದ್ದಾಗಲೇ ನಿಮ್ಮ ಪ್ರತಿಭೆಯನ್ನ ತಕ್ಕಂತೆ ಗುರುತಿಸಿ ಪುರಸ್ಕರಿಸಿ ನಿಮ್ಮ ಸಮಕಾಲೀನರು, ಸಹವ್ಯವಸಾಯಿಗಳು ಸಂಭ್ರಮಿಸಿದ್ದಿದ್ದಾದರೆ, ಪ್ರಾಯಶಃ ನಿಮ್ಮ ಕೊನೆಯ ವರ್ಷಗಳಲ್ಲಿ ನಿಮ್ಮನ್ನು ಆಮ್ಲಜನಕದ ಕೊರತೆ ಕಾಡುತ್ತಿರಲಿಲ್ಲ. ಹೊರಗಿನ ಆಮ್ಲಜನಕದ ಅವಶ್ಯಕತೆ ಇಷ್ಟಿರುತ್ತಿರಲಿಲ್ಲ.

ಕ್ಷಮಿಸಿ, ನಾವು ನಾಗರೀಕರು! ಸೂತಕದಲ್ಲಿ ಸಭ್ಯರು! ಸೂತಕದಲ್ಲಷ್ಟೇ ಸಭ್ಯರು! ಪುರಸ್ಕಾರ, ಪ್ರತಿಬೆಗೆ ಮಾಪನವಲ್ಲ. ಅದು ಪುರಸ್ಕರಿಸೋ ಸಮಾಜದ ಸ್ವಾಸ್ಥ್ಯಕ್ಕೆ ಮಾಪನ.

ನಿಮ್ಮ ಸೃಷ್ಟಿಯ ಚೈತನ್ಯ ಅಪಾರ! ನಿಮ್ಮ ಎಷ್ಟೋ ಕೂಸುಗಳನ್ನ ತಮ್ಮವೇ ಅನ್ನೋ ಹಾಗೇ ಬಿಂಬಿಸಿ, ಬಿರುದು ಬಾವಲಿಗಳನ್ನು ಪಡೆದವರಿದ್ದಾರೆ. ಅವು ಅವರದ್ದಲ್ಲ, ನಿಮ್ಮವು ಎಂದು ಜಗಜ್ಜಾಹೀರಾದ ಮೇಲೆ, ನಾವು ಅವಕಾಶ ಕೊಟ್ವಿ ಹಾಗಾಗಿ ಗೋಪಾಲವಾಜಪೇಯಿ ಅಂಬೋರಿದ್ದಾರೆ. ಕ್ಷಮೆ ಇರಲಿ, ಪ್ರತಿಭೆ ತನ್ನ ಅವಕಾಶಗಳನ್ನು ತಾನೇ ಸೃಷ್ಟಿಸಿಕೊಳ್ಳತ್ತೆ, ಹುಡುಕಿಕೊಳ್ಳತ್ತೆ. ಅದರ ಲಾಭ ಪಡೆದವರು ನಮ್ಮಿಂದ ಅವ್ರು ಅಂತ ಢೋಲು ಬಡಿತಾರೆ. ಸುಳ್ಳು, ನಿಮ್ಮಿಂದ ಅವ್ರು.

ಶ್ರೀಪತಿ ಅಂದ್ರು, ನಿಮ್ಮ ಕೊನೆಯ ಕ್ಷಣಗಳಲ್ಲಿ ದೇಹದಲ್ಲಿ ಸೋಡಿಯಂ ಹೆಚ್ಚಿತ್ತು. ಭಾವುಕರು ನೀವು! ಸಭ್ಯರು! ನಿಮ್ಮ ಸುತ್ತಲಿನ ಮತ್ತು ಆಪ್ತವಲಯದ ಕೆಮೆಸ್ಟ್ರಿಗೆ ಹೊ0ದಿಕೊಳ್ಳಲು ಕಷ್ಟವಾಯ್ತು, ಹೊರಟುಬಿಟ್ರಿ. ಸ್ವಲ್ಪ ಬೇಗ ಹೊರಟುಬಿಟ್ರಿ. ಸತ್ಯ! ನಿಮ್ಮ ಸುತ್ತ ಸೋಡಿಯಂ ಹೆಚ್ಚಿತ್ತು.

ಕೊನೆಯ ವರ್ಷಗಳಲ್ಲಿ ನಿಮಗೆ ಹೊರಗಿನ ಆಮ್ಲಜನಕದ ಅವಶ್ಯಕತೆ ಹೆಚ್ಚಿತ್ತು. ಸ್ವಾಭಾವಿಕ! ತಮ್ಮ ಪ್ರತಿಭೆಯ ಪ್ರಖರತೆಗೆ ಸುತ್ತೆಲ್ಲರ ಕರುಳಲ್ಲಿ ಆಮ್ಲ ಹೆಚ್ಚಿತ್ತು. ಹಾಗಾಗಿ ವಾತಾವರಣದ ತುಂಬೆಲ್ಲ ಇಂಗಾಲ! ಸಭ್ಯರು ನೀವು! ಉಸಿರಾಟ ಕಷ್ಟವಾಗಿ ಆಮ್ಲಜನಕದ ಮೊರೆ ಹೊಕ್ರಿ. ನಿಮ್ಮ ಉಸಿರು ಹೋದದ್ದಾ? ಇಲ್ಲ ನಾವು ಉಸಿರು ಕಟ್ಟಿದ್ದಾ! ತುಸು ಮೊದಲೇ ನಿಲ್ಲಿಸಿಬಿಟ್ರಾ? ಕಾಣೆ.
ದೂರದ ಪಯಣದಲ್ಲಿದ್ದೀರಿ! ಸಾಕಿಷ್ಟು! ನಿಮ್ಮ ಸಭ್ಯತೆ, ಸೌಜನ್ಯದ ರೂಡಿಯ ಚೈತನ್ಯವಿಲ್ಲ! ಅನುಕರಿಸುವ ಪ್ರಯತ್ನವಂತೂ ಇರತ್ತೆ.

ನಿಮ್ಮ ಆತ್ಮಕ್ಕೆ ಶಾಂತಿ ಕೋರುವ ಅಹಂಕಾರವಿಲ್ಲ. ಅದು ಯಾವತ್ತೂ ಅಶಾಂತವಾಗಿರಲಿಲ್ಲ.

ನೆನಪಿರಲಿ!

ಎನ್ ಎಸ್ ಸೇತುರಾಂ 

‍ಲೇಖಕರು Admin

1 October, 2016

3 Comments

  1. Anonymous

    …ACHANAK AAGI HORATIDDARA BAGGE DWESHAVIDE, VISHADAVIDE….sakalika aapta baraha

  2. Guruprasad M D

    True words from S N Sethuram Sir

  3. Narayan Raichur

    olleya santhaap nudi baraha ; sethuram gopal vyaktitva haagoo nammavara yedabadangitanagalannu maarmikavaagi chitrisiddare ; Loka eega saaguttiruva kramavadu ! ! ; kaalaya tasmai namaha ! ! – Narayan Raichur

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading