ಪ್ರೀತಿಯ ಆನಂದ ಕುಂಚನೂರ..

ಪದ್ಯದ ಡಿಸೈನುಗಾರಿಕೆ

%e0%b2%a8%e0%b2%be%e0%b2%97%e0%b2%b0%e0%b2%be%e0%b2%9c-%e0%b2%b5%e0%b2%b8%e0%b3%8d%e0%b2%a4%e0%b2%be%e0%b2%b0%e0%b3%86

ನಾಗರಾಜ ವಸ್ತಾರೆ

ಪ್ರೀತಿಯ ಆನಂದ ಕುಂಚನೂರ,

ರಭಸ, ರಾದ್ಧಾಂತ, ಧಾವಂತಗಳ ಸದ್ಯದ ಅತ್ಯುಗ್ರ ಸ್ಥಿತಿಯಲ್ಲಿರುವ ನನ್ನ ಈಗ್ಗಿನ ಆರ್ಕಿಟೆಕ್ಟಿಕೆಯ ನಡುವೆ ನಿಮ್ಮ ಪದ್ಯಗಳನ್ನು ಓದಲು ಹೇಳಿದಿರಿ.ಈ ಕುರಿತೊಂದಿಷ್ಟು ಬರೆಯಲೂ ಹೇಳಿದಿರಿ. ನೂರೆಂಟು ಜಂಜಟಗಳ ನಡುವೆ ಬರೆಯುತ್ತಿದ್ದೇನೆ. ಹೌದು. ನಾನೂ ಬಹಳಷ್ಟು ಸತಾಯಿಸಿದ್ದೇನೆ. ಮೊದಮೊದಲು ಓದಲು, ಓದಿದರೂ ಬರೆಯಲು, ಬರೆದರೂ ಮುಗಿಸಲು- ಬಹಳ ಸಮಯ ತಕ್ಕೊಂಡಿದ್ದೇನೆ. ಇವೊತ್ತು, ನಾಳೆ, ananda-kunchanur-covaerನಾಳಿದ್ದೆಂದು ಬಲು ದಿವಸ ದೂಡಿದ್ದೇನೆ. ಎಂತಲೇ ವಿಷಯಕ್ಕಿಳಿಯುವ ಮೊದಲು, ಯಾತಕ್ಕು ಕ್ಷಮೆ ಯಾಚಿಸಿಬಿಡುತ್ತೇನೆ. ಸ್ಸಾರಿರೀ.ನನ್ನ ಸಬೂಬು ಸತಾವಣೆಗಳೇನೇ ಇರಲಿ, ನಿಮ್ಮ ಪ್ರೀತಿ ಮತ್ತದರ ಹಕ್ಕೊತ್ತಾಯವಷ್ಟೇ ನನ್ನ ಮಟ್ಟಿಗೆ ಮುಖ್ಯವೆಂದು ಮನಸಾ ನಂಬಿದ್ದೇನೆ. ತೋಚಿದ್ದು ಬರೆಯುತ್ತಿದ್ದೇನೆ.

ಇರಲಿ. ಪದ್ಯಗಳ ಬಗ್ಗೆ ಆಡಬಾರದೆಂದು ನನ್ನದೇ ಒಂದು ನಿಯತಿಯಿದೆ. ಹೆಚ್ಚೇನೂ ಓದದೆ, ಓದುವುದಕ್ಕಿಂತ ಹೆಚ್ಚು ಹೆಚ್ಚು (ನನ್ನ ನೇರಕ್ಕೇ) ಬರೆಯುವುದನ್ನೇ ರೂಢಿಸಿಕೊಂಡಿರುವ ನನ್ನ ಹುಂಬ ನಂಬಿಕೆಯೇ ಇದಿದ್ದಿರಬಹುದು. ಅಲ್ಲದೆ, ದಿನಂಪ್ರತಿ ಸಂತೆಯಂತಿರುವ ಈ ಊರು ಮತ್ತು ಅದರ ‘ಕಟ್ಟಡ’ಗಾರಿಕೆಯಲ್ಲಿ ತೊಡಗಿರುವ ನನ್ನಂತಹವನಿಗೆ, ಈ ಊರಿನ ವೇಗ-ಧಾವಂತಗಳ ನಡುವೆ ಒಂದಿಷ್ಟು ಧ್ಯಾನಸದೃಶ ಹೊತ್ತು ತಾನೇ ಎಲ್ಲಿದೆ? ಇವಿವೇ ವೇಗ-ಧಾವಂತಗಳ ನಡುವೆ ಉಬ್ಬಸಪಡುತ್ತಲೇ ಧೊಸಧೊಸ ಉಸಿರು ಹೊಂಚಿಕೊಳ್ಳುವ ನನ್ನ ಪುಪ್ಪಸಗಳಿಗೂ, ತಾವು ಅವಿರತ ತಂತಾವೇ ಉಸುರೂಡಿಕೊಂಡು- ನನ್ನನ್ನು ಸ-ಜೀವಂತ ಮೆರೆಸುತ್ತಿವೆಯೆಂತಲೂ ಗೊತ್ತಿದೆ ಎಲ್ಲಿ?!  ಯಾವುದೇ ಧ್ಯಾನಪದ್ಧತಿಯಲ್ಲಿ, ಎಲ್ಲಕ್ಕು ಮೊದಲು ಉಸಿರು ಗಮನಿಸುವುದೆಂಬ ‘ಮೂಲಭೂತ’ ಸೂಚ್ಯವನ್ನು ಹೇಳುವುದು ನಿಮಗೆ ಗೊತ್ತೇ ಇದೆ. ಉಸಿರು ಗಮನಿಸತೊಡಗಿದ ಮೇಲೆ ಮನಸ್ಸು ಹಿಡಿದಿಟ್ಟುಕೊಳ್ಳುವ ಬಗೆಗೂ ಆಡಲಾಗುತ್ತದೆ.

ಐದು ನಿಮಿಷ ಒಂದೆಡೆ ಕುಳಿತು, ಏನೂ ಮಾಡದೆ ಸುಮ್ಮಗೆ ಕೂರುವ ಸ್ಥಿತಿಯನ್ನೇ ಮರೆಯಿಸಿಬಿಟ್ಟಿರುವ ನನ್ನ ಹೊಟ್ಟೆಪಾಡಿನ ಕಸುಬಿನ ನಡುವೆ- ಓಡಾಡುತ್ತಲೇ, ಈ ಊರೊಳಗೆ ಅಲ್ಲಿಂದಿಲ್ಲಿಗಂತ ಲಾಳಿ ಹೊಡೆಯುತ್ತಲೇ, ಎರಡು ಮೀಟಿಂಗುಗಗಳ ನಡುವೆ, ಊಟದ ನಡುವಿನ ಅಲ್ಪಸ್ವಲ್ಪ ವಿರಾಮಗಳಲ್ಲಿ… ಹೀಗೆ ನಿಮ್ಮ ಪದ್ಯಗಳನ್ನು ಓದಿದ್ದೇನೆ. ಕೆಲವನ್ನು ಮತ್ತೆ ಮತ್ತೆ ಓದಿದ್ದೇನೆ.ಕೆ ಲವನ್ನು ಮೆಲುಮೆಲುಕಿ ಆಸ್ವಾದಿಸಿದ್ದೇನೆ.

ಪದ್ಯಗಳನ್ನು ಓದುವುದಲ್ಲದೆ, ಕುರಿತಾಡುವಾಗ ಅವುಗಳ ಅರ್ಥ-ಸ್ವಾರ್ಥಗಳನ್ನು ಕೆಣಕಿ ಇನ್ನೊಂದಾಗಿಸುತ್ತೇವೆಯೋ ಎಂಬ ಅಂಕೆಶಂಕೆಗಳೊಟ್ಟಿಗೇ- ಈ ಕೆಲವನ್ನು ಆಡಬಯಸುತ್ತಿರುವೆ. ನಾನು ನೆಚ್ಚಿರುವ ಡಿಸೈನುಗಾರಿಕೆಯಲ್ಲಿ ಆಗಾಗ ಬಳಸುವ ಮಾತೊಂದಿದೆ. `Design-deed is like doing sex; we do it again and again, though it’s been done a million times before.’ -ಎಂಬ ಮಾತು! ನನಗೆ ಗೊತ್ತಿರುವ ಹಾಗೆ, ಜಗತ್ತಿನ ವಿನ್ಯಾಸಗಾರಿಕೆಯಷ್ಟೂ ಹೀಗೆಯೇ. ಪ್ರಣಯವಿದ್ದ ಹಾಗೆ ಅದು. ಮನದನ್ನೆಗೆ ಪ್ರತಿಸರ್ತಿ ಮುದ್ದು ಹೊಂದಿಸುವಾಗಲೂ, ಹಿಂದೆಂದೂ ಮುದ್ದಿಸಿಯೇ ಇಲ್ಲವೆಂಬಷ್ಟು ಉಮೇದಿರುತ್ತದಲ್ಲ, ಥೇಟು ಹಾಗೆಯೇ! ಪ್ರೀತಿಯಲ್ಲಿ ಪದೇಪದೇ ಮಾಡಿದ್ದನ್ನೇ ಮಾಡಲಾಗುತ್ತದೆ.ಹಳೆಯ ಮುದ್ದನ್ನೇ ಹೊಸತಾಗಿ ಕೊಡುವುದಾಗುತ್ತದೆ.

ಪದ್ಯಗಾರಿಕೆಯೂ ಇಂಥದೇ ಒಂದೆನಿಸುತ್ತದೆ.

ಇನ್ನೂ ಒಂದು ಮಾತಿದೆ. ಇದನ್ನು ನಾವು ವಿನ್ಯಾಸಗಾರರು, ಆಗಾಗ, ನಮಗೆ ನಾವೇ ಹೇಳಿಕೊಳ್ಳುವುದಿದೆ: `Design is like doing teenage sex; we do it till we get it right!’ ಜಗತ್ತಿನ ಪದ್ಯಗಾರಿಕೆಯಷ್ಟೂ ಇಂಥದ್ದೇ ಎಂದು ನಾನಂದುಕೊಂಡಿದ್ದೇನೆ. ಪದ್ಯದ್ದೊಂದು ಹೊಳಹನ್ನು ಸರಿಯೆನಿಸುವವರೆಗೂ, ಅಥವಾ ಸರಿಯೆಟುಕುವವರೆಗೂ ಬೆನ್ನಟ್ಟುತ್ತೇವೆ. ಸರಿಯೆನಿಸುವವರೆಗೂ ಅದನ್ನು ಮಾಡುತ್ತೇವೆ. ಹೀಗೆ ಸರಿಯೆನಿಸುವವರೆಗಿನ ‘ಸರಿ-ತಪ್ಪು’ಗಳ ಹೊಣೆ ವಿನ್ಯಾಸಕನದ್ದಲ್ಲ. ಅವನದಾಗಿರುವುದಿಲ್ಲ. ಹಾಗೆಯೇ ಪದ್ಯವೊಂದರಲ್ಲಿ ಸರಿಯೆಂಬುದರ ಜಿಮ್ಮೇದಾರಿಯೂ ಪದ್ಯಕಾರನದಲ್ಲ; ಖುದ್ದು ಪದ್ಯದ್ದೇ ಆಗಿರುತ್ತದೆ. ಯಾಕೆಂದರೆ ಪದ್ಯವು ಆ ಮಟ್ಟಿಗೆ ಸ್ವಯಂಭುವಾಗಿರುತ್ತದೆ. ಮತ್ತು ತಂತಾನೇ ಘಟಿಸುಂಟಾಗಿರುತ್ತದೆ!

ananda-kunchanurಮನುಷ್ಯ-ಸಲುವಿರುವ ಮನುಷ್ಯಕೃತ ವಿನ್ಯಾಸದಲ್ಲಿ ವಿನ್ಯಾಸಕನ ಹೊಣೆಯೇನೆಂಬುದು ನನ್ನನ್ನು ಆಗಾಗ ಕಾಡುವ ಪ್ರಶ್ನೆ. ನಿಜ ಹೇಳುತ್ತೇನೆ- ನಾನು ಕಟ್ಟುವ ಆರ್ಕಿಟೆಕ್ಟಿಕೆಯಲ್ಲಿ ನನ್ನ ರೋಲು ಒಂದು ನಿಮಿತ್ತವಾಗಿರುವುದರ ಹೊರತು ಇನ್ನೇನೂ ಆಗಿರುವುದಿಲ್ಲ. ವಿನ್ಯಾಸದ ಸ್ಫುರಣೆಯಷ್ಟೂ ನನ್ನ ಮೇಜಿನ ಬದಿಗಿರುವ ಆಕಾಶವು ದಕ್ಕಿಸುತ್ತದೆ ಮತ್ತು ನನ್ನನ್ನೊಂದು ಮಾಧ್ಯಮವನ್ನಾಗಿಸಿ ಹಾಳೆಯ ಮೇಲೆ ತಾಳಿಕೊಳ್ಳುತ್ತದೆ. ಗೆರೆಗಳಲ್ಲಿ ಮೂಡಿಬರುತ್ತದೆ. ಬಿಡಿಸಿಬರುತ್ತದೆ. ಪದ್ಯವೂ ಇಂಥದೇ ಇನ್ನೊಂದು ಆಕಾಶದತ್ತ ವಸ್ತುವೆಂದುಕೊಂಡಿದ್ದೇನೆ. ಪ

ದ್ಯವನ್ನಾಗಿಸುವುದರಲ್ಲಿನ ನನ್ನ-ನಿಮ್ಮ ಪಾತ್ರ-ಗಾತ್ರವಾದರೂ ಅಷ್ಟೆ, ‘ಮೂಲಕ’ವಾಗುವುದರ ಹೊರತು ಬೇರೇನೂ ಇರಲಿಕ್ಕಿಲ್ಲ. ಹೀಗೆ ‘ಮೂಲಕ’ವಾಗಿರುವುದರ ಮಾತ್ರದಿಂದಲೇ, ನಿಮ್ಮಿಂದ- ‘ಅ ಎಂದರೆ ಅನ್ನ ಎಂದೋದಿಸುವ ಶಾಲೆ ಮಾಸ್ತರರು; ಆ ಎನಲು ಬಾಯ್ದೆರೆವ ಹುಡುಗರು’ -ಎಂದೊಂದು ಸಾರ್ಥಕ ಸಾಲು ಸಾಧ್ಯವಾಗುವುದು. ‘ಅಕ್ಕಿಗೂ ಮೊದಲು ಅಥವಾ ಬೇರೆ ಅನ್ನ ಇದ್ದಿರಬಹುದು; ತರ್ಕಕ್ಕು ದೊಡ್ಡದು ಕಾಯಕ’ -ಎಂದಿನ್ನೊಂದು ಆಗಿಬರುವುದು! ‘ಕೊನೆಯ ವಿರಾಮವೂ ಒಂದು ಮರಣ; ಮರಣದ ವಿರಾಮವೂ ಒಂದು ಜನನ’ -ಅಂತೆಂಬ ಹಳತನ್ನೇ ಹೊಸತೇ ಸತ್ಯವೆಂಬಂತೆ ಮರಳಿ ಹೇಳಿಸುವುದು!

ದೀಪದ ಕೆಳಗಿನ ಕತ್ತಲು ತೆಗೆಯಲಿಕ್ಕೆಂದು (ದೀಪದ) ಕೆಳಗೊಂದು ದೀಪ ಹಚ್ಚುವುದು, ಈ ದೀಪದ ಕೆಳಗಿನ್ನೊಂದು ಹೊತ್ತಿಸುವುದು, ಹೀಗೆ ಸರಣಿಯಲ್ಲಿ ಒಂದರ ಕೆಳಗಿನ್ನೊಂದಿನ್ನೊಂದಿನ್ನೊಂದೆಂದು ಉರಿಸಿ- ‘ಲಕ್ಷದೀಪ’ದ ಪ್ರತಿಮೆಯನ್ನು ಕಟ್ಟುವುದು ಚಮತ್ಕಾರವೆನಿಸುತ್ತದೆ. ನಿಮ್ಮದೊಂದು ಪದ್ಯವಿದೆ; ‘ವಿನಾ-ಕಾರಣಗಳಿವೆ’ ಎಂಬ ಹೆಸರು ಅದಕ್ಕೆ.ಚೆನ್ನಾಗಿ ಓದಿಸಿಕೊಳ್ಳುತ್ತದೆ. ಪುಟ್ಟ ಪುಟ್ಟ ‘ಆನೆಕ್ಡೋಟು’ಗಳನ್ನಿಟ್ಟು, ಕೊಟ್ಟು ಕಟ್ಟಲ್ಪಟ್ಟಿರುವ ಈ ಪದ್ಯವನ್ನು ಈ ಸಂಕಲನದಲ್ಲಿರುವ ‘ನಿಮ್ಮತನ’ಕ್ಕೆ ಪ್ರಾತಿನಿಧಿಕವಾಗಿ ನೋಡಬಹುದೇನೋ ಅನಿಸುತ್ತದೆ. ‘ಪ್ರಳಯ ಯಾಕಾಗುತ್ತಿಲ್ಲ?’ವೆನ್ನುವ ಮೊಮ್ಮಗನ ಪ್ರಶ್ನೆಗೆ, ‘(ಆದರೆ) ದೇವರೆಲ್ಲ ಅನಾಥರಾಗುತ್ತಾರಲಪ್ಪ?!’ ಅಂತೆಂಬ ಅಜ್ಜನ ಉತ್ತರ- ನನ್ನ ಕಿವಿಗಳನ್ನು ನವಿರಾಗಿ ಕಲಕಿದ್ದಿದೆ.

‘ಸೂರ್ಯನಿಗೆ ಬೆಳಕು ಸಾಕಾಗಿ ಭೂಮಿಗೆ ಕೊಟ್ಟ/ಚಂದ್ರನಿಗೆ ಕಾಂತಿ ಬೇಡವಾಗಿ ಇಲ್ಲಿಗೇ ಬಿಟ್ಟ/ ತನ್ನ ನೆಟ್ಟಗೆ ನೋಡಬಾರದೆಂದ ಸೂರ್ಯ/ ತಾನಿರುವಾಗ ಸಿಟ್ಟಾಗಬಾರದೆಂದ ಚಂದ್ರ/ ಬಕೀಟು ನೀರಲಿ ಸೂರ್ಯನ ಸೆರೆಹಿಡಿದರು/ ಸ್ಟೀಲು ಗಂಗಾಳದಲ್ಲಿ ಚಂದ್ರನ ಎಳೆತಂದರು/ ನಭದ ಚಕ್ರವರ್ತಿಗಳಿಗಿಲ್ಲಿ ನಾಕಾಬಂಧಿ/ ಮುಗುಳ್ನಕ್ಕವು ಚಿಕ್ಕೆ.’– ಈ ಇಡೀ ‘ಇನ್ನೊಂದು’ ಕಟ್ಟುವಿಕೆಯೂ ಅಷ್ಟೆ, ಗೊತ್ತಿರುವುದನ್ನೇ ಪುನಃ ಹೇಳಿ, ಹೇಳುವುದನ್ನು ಹೊಸತಾಗಿ ತೋರಿಸಿ ಹೇಳಿ, ಕಚಗುಳಿಯಿಡುತ್ತದೆ. ಚಿಕ್ಕೆಗಳು ಮುಗುಳ್ನಗುವುದೇನು, ‘ವಿನಾ-ಕಾರಣಗಳಿವೆ’ಯನ್ನು ಓದಿ ಮುಗಿದು ಮಿಗುವುದಾದರೂ- ಹೀಗೊಂದು ಮಂದಹಾಸ ಮಾತ್ರ!

ಸಂಕಲನಕ್ಕೆ ಶೀರ್ಷಿಕೆಯಾಗಿರುವ ‘ವ್ಯೋಮತಂಬೂರಿ ನಾದ’ವು ಮಹತ್ತಿನದನ್ನೇನೋ ಹೇಳಹವಣಿ, ಪೂರ್ತಿ ಹೇಳದೆಯೆ ಸೋತಿದೆಯೋ ಅನ್ನಿಸಿದ್ದು ಹೌದು. ಆದರೆ, ‘ಅಂತರಿಕ್ಷದಾಶೆ ಬಲಗೊಳ್ಳಲು/ ಶರೀಫಸ್ವಾಮಿ ಸಿಟ್ಟಿನಲ್ಲಿ ಬಿಟ್ಟುಹೋದ/ ವ್ಯೋಮರೂಪಿ ತಂಬೂರಿ/ ಭರಿಸಲಾಗದು/ ಅಯ್ಯೋ, ಬಾರಿಸಲಾಗದು’ -ಎಂಬ ಸಾಲಿನಲ್ಲಿ ಅರೆಬರೆಯೆನಿಸಿದರೂ ಪೂರೈಸದ ಮಹತ್ವಾಕಾಂಕ್ಷೆಯನ್ನು ಮಿಗಿಸುತ್ತದೆ. ಹೀಗೆ ಮಿಕ್ಕುಕೊಳ್ಳುವುದರಲ್ಲೇ ಪದ್ಯವಿದೆಯೋ ಅಂತಲೂ ಅನ್ನಿಸಿದೆ.

ಸಾಂಪ್ರತು’ ಬಲು ಚೆನ್ನಾದ ಪದ್ಯ. ‘ಒಂದು ವೀರ್ಯದ ಋಣ’ ಕಾಡಿ ಕೆಣಕುವಂಥದ್ದು.‘ಜನ್ಮ ಕೊಟ್ಟವನಾಗಿ ಅಪ್ಪನಾಗದ ನಿನ್ನನ್ನು ದ್ವೇಷಿಸುತ್ತೇನೆ/ ಸಾಲದ ಒಂದು ವೀರ್ಯದ ಋಣಕ್ಕೆ ಕ್ಷಮಿಸಿಬಿಡುತ್ತೇನೆ/ ನಾನೂ ಮಗನಲ್ಲ ಬಿಡು’ -ಹೀಗೆ ಸುರುಗೊಳ್ಳುವ ಈ ಪದ್ಯ, ತನ್ನ ಮೊದಲ ಮಂಡನೆಯಲ್ಲಿಯೇ ನನ್ನನ್ನು ಗಕ್ಕನೆ ನಿಲ್ಲಿಸಿ ಅವಾಕ್ಕಾಗಿಸಿದೆ. ‘ನಾ ನಿಂತರೂ ನೀ ಚಲಿಸುವೆ/ ನೀ ನಿಲ್ಲಲು ನಾನು ನಿಚ್ಚಲ ನಾರಾಯಣ/ ಯದುಕುಲದಾಯಣ ಇಕ್ಷ್ವಾಕು ವಂಶಾಯಣ/ ಕಲಿಯುಗದ ತಾರಣದಲಿ ಬಳಲಿದ ಬಕುಳ/ ಅದು ನಿನಗೆ ಬೇಕು/ ಇದು ನನಗೆ ಬೇಡ’ -ಎಂದು ಮತ್ತೊಮ್ಮೆ ಬೆರಗಿಸಿ, ‘ತಾನು ತಾನಾಗಿ ತೊನೆದು ನಿನ್ಹೆಸರ ಉಳಿಸಿದಲ್ಲದೆ ನಾನು ನಿನ್ನ ಮಗನೇ ಅಲ್ಲ’ ಎಂಬಲ್ಲೊಂದು ದಿಟ್ಟ ನಿಬ್ಬೆರಗು ಮಿಕ್ಕಿಬಿಡುತ್ತದೆ. ಹೇಳಿದೆನಲ್ಲ, ಈ ಹೀಗೊಂದು ಹಾಗೊಂದು ‘ಮಿಗುವಿಕೆ’ಯಲ್ಲಿಯೇ ಇಲ್ಲಿನ ಪದ್ಯಗಳು ನಿಜಕ್ಕು ಸಂಭವಿಸುತ್ತವೆ.

ಇತಿಹಾಸ, ಪುರಾಣಗಳಲ್ಲದೆ ನಿಮ್ಮ ವೃತ್ತಿಸಹಜ ವಸ್ತುವಿಷಯ-ವೈವಿಧ್ಯ-ವೈಖರಿಯೊಟ್ಟಿಗೆ, ನನ್ನಂಥವನೆದುರು ವಿಪುಲವೆನಿಸುವ ನಿಮ್ಮ ಓದೂ ಕೂಡ- ನಿಮ್ಮೀ ಪದ್ಯಗಳಲ್ಲಿ ಮೇಳಯಿಸಿದೆ. ಯಾವಾಗ ಸದ್ಯ-ಪ್ರಸ್ತುತದಿಂದ ಪುರಾಣೇತಿಹಾಸಕ್ಕೆ, ಅಥವಾ ಅವೊತ್ತುಗಳಿಂದ ಇವೊತ್ತಿನ ತತ್-ಕ್ಷಣಕ್ಕೆ ಪದ್ಯವಸ್ತು ಲಂಘಿಸುತ್ತದೋ- ತಿಳಿಯಗೊಡದ ಪವಾಡಗಳು ಜರುತ್ತವೆಯಾಗಿಯೂ ಅನಿಸುತ್ತದೆ.ನನ್ನದೊಂದು ಪ್ರಾಮಾಣಿಕ ಅನಿಸಿಕೆಯೆಂದರೆ, ನೀವು ಬಳಸುವ ಕನ್ನಡ- ಈ ಎರಡೂ ಹೊತ್ತುಗಳು ಏಕತ್ರಗೊಳ್ಳುವ ಉಭಯಸಂದರ್ಭವನ್ನು ಹಿಡಿದಿಡಲು ಕೊಂಚ ಅಶಕ್ತವೆನಿಸುತ್ತದೆ.ankola poem cloud

ಹಾಗಂತ ಇದು ಪದ್ಯದ ಸೋಲಿರಲಿಕ್ಕಿಲ್ಲ. ಇದನ್ನು ನಾನು, ನನ್ನ ಸುತ್ತಲಿನ ಸದ್ಯವನ್ನಷ್ಟೇ ಹಿಡಿಯಲೆಣಿಸುವ ನನ್ನ ಸೃಜನಮತ್ತೆಯ ಇತಿಮಿತಿಯಿರಬಹುದೆಂದೇ ಶಂಕಿಸಿ ಹೇಳುತ್ತಿದ್ದೇನೆ. ‘ಎಮ್.ಜೆ.ಮನೆಗೆ ಬಂದಿದ್ದ’ ಅಂತೆಂಬ ಪದ್ಯವನ್ನು ತೆಗೆದುಕೊಳ್ಳಿ. ಚೆನ್ನಾದ ಪದ್ಯ ಇದು. ಆದರೆ, ಮೈಕೆಲ್ ಜ್ಯಾಕ್ಸನ್ ಅಂತೆಂಬ ನಮ್ಮ ಕಾಲದ ‘ಸ್ಪ್ರಿಂಗು’ಮೈ ಸೋಜಿಗವನ್ನು ಹಿಡಿಯುವಾಗಲೂ, ‘ಕಂಗಳಲಿ ಆನಂದಾಶ್ರು ಜೀವ ಸಾರ್ಥಕ್ಯದ ಉತ್ತುಂಗ’ ಅಂತೆಲ್ಲ ನಾನು ಬಹು ಸರ್ತಿ ಕೇಳಿರುವ ‘ಕನ್ನಡ’ದಲ್ಲಿ ಆಡುತ್ತದೆ. ‘ಎಮ್ ಜೆ ಮುಗುಳ್ನಗುತ್ತಲೇ ಇದ್ದ/ ಎಲ್ಲರ ಕಣ್ಣುಗಳನ್ನೊಮ್ಮೆ ದಿಟ್ಟಿಸಿ/ ತನ್ನ ಬಿಂಬ ಕಂಡು/ ನಾನಿನ್ನೂ ಬದುಕಿದ್ದು ಖಾತ್ರಿಯಾಯಿತು/ ಎಂದು ಮರೆಯಾದ/ ಅರ್ಥವಾಗದ ಅವನ ಸಾವಿನಂತೆ’ –ಎನ್ನುವಲ್ಲಿ, ನನ್ನೆಲ್ಲ ತಗಾದೆಯನ್ನೂ ಬಗ್ಗುಬಡಿಯತಕ್ಕ ಪದ್ಯವುಂಟಾಗುತ್ತದೆ.

ಅಲ್ಲದೆ, ಆನಂದ, ನಿಮ್ಮೊಡನೆ ಇಲ್ಲಿನ ಕೆಲವು ಪದ್ಯಗಳನ್ನು ಕುರಿತು ಮಾತನಾಡುವಾಗ- ನೀವು ಹೇಳಿದ್ದು ಚೆನ್ನಿನನಿಸಿತು. ಭಾಷೆಯನ್ನು ಬಳಸುವ ಬಗೆಗೆ ನೀವು ಹೇಳಿದ್ದು ಒಪ್ಪವೆನಿಸಿತು. ನಿಮ್ಮಂತಹ ಯುವಸ್ಥಿತಿಗಳು ನಿಮ್ಮಂತೆಯೇ ಕನ್ನಡದ ಬಗ್ಗೆ, ಅದರ ನುಡಿದುಡಿ-ಗಾರಿಕೆಯ ಬಗ್ಗೆ ಯೋಚಿಸಿದರೆ ಎಷ್ಟು ಒಳಿತೆಂದುಕೊಂಡು, ನಿಮ್ಮ ಮಾತುಗಳನ್ನು ಮನನ ಮಾಡಿಕೊಂಡಿದ್ದೇನೆ.

ನಿಮ್ಮ ಅಭಿಮತವನ್ನೇ ’ಮಿಲೆನಿಯಮ್ ಮಂದಿಯ ಕನ್ನಡ ದೇಶದೊಳ್’ ಎಂಬ ಪದ್ಯವು ಬಲು ನೇರ್ಪಾಗಿ ಗ್ರಹಿಸುತ್ತಿದೆ ಅಂತಂದುಕೊಂಡಿದ್ದೇನೆ. ‘ನನ್ನ ಕರ್ನಾಟಕವನ್ನು ನಾನೇ ಅರಸಬೇಕು ಖುದ್ದಾಗಿ’ ಅನ್ನುವಲ್ಲಿಯೂ ಇದೇ ಆಶಯವಿದೆ ಅನಿಸುತ್ತಿದೆ. ವಾಸ್ತವಿಕವಾಗಿ, ನಾವೆಲ್ಲರೂ ಅಂದರೆ ಬರೆಯುವವರು ನಮ್ಮ ಕನ್ನಡವನ್ನು ಮತ್ತು ಕರ್ನಾಟಕವನ್ನು ನಾವು ನಾವೇ ಹುಡುಕಿಕೊಳ್ಳಬೇಕೆಂಬುದು ಎಷ್ಟು ಚೆನ್ನು!

ಇಷ್ಟಿದ್ದೂ ನಿಮ್ಮ ನುಡಿಗಾರಿಕೆಯ ಬಗ್ಗೆ ನನ್ನ ಕೆಲವು ತಗಾದೆಗಳಿದ್ದೇ ಇವೆ. ಇವೇನಿದ್ದರೂ ನನ್ನೊಳಗಿನ ಗೊಣಗು ಮಾತ್ರ. ಈ ಮೊದಲೇ ಹೇಳಿದಂತೆ, ನಾನು ಪದ್ಯಗಳನ್ನು ಮಾಡುವ ಪದ್ಯಕಾರನ ಹೊಣೆಯನ್ನು ಪ್ರಶ್ನಿಸುವವನಲ್ಲವಾದ್ದರಿಂದ- ನನ್ನೀ ಮಾತುಗಳನ್ನು ಕೇವಲವಾಗಿ ಪರಿಗಣಿಸಬಹುದೆಂದೂ ಅರಿಕೆಯಿಡುತ್ತೇನೆ. ಚೆನ್ನಾಗಿ ಬರೆಯುತ್ತೀರಿ. ಬರೆಯುತ್ತಿರಿ.

ಒಳಿತಾಗಲಿ. ಹೊಸ ಹೊಸ ವಸ್ತು-ವಿಷಯ-ವೈವಿಧ್ಯ-ವೈಖರಿಯು ನನ್ನಂಥವರಿಗೆ ದಕ್ಕಲಿ.

-ನಾಗರಾಜ ವಸ್ತಾರೆ 

‍ಲೇಖಕರು Admin

November 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. D S Ramaswamy

    ವಸ್ತಾರೆ, ನಿಜಕ್ಕೂ ಮುನ್ನುಡಿಯಲ್ಲೂ ಹೊಸತನವನ್ನು ತಂದಿದ್ದೀರಿ. ಈವತ್ತಿನವರೆಗೂ ಕಾವ್ಯವನ್ನು ಪರಿಗಣಿಸುತ್ತಿದ್ದ ಮತ್ತದೇ ಹಳೆಯ ಹಳವಂಡಗಳಿಂದ ಒಂದು ಪರಿಜು ಮುಂದಕ್ಕೆ ತಂದು ಡಿಸೈನಿನ ಲಕ್ಷಣಕ್ಕೆ ಹೊಂದಿಸಿದ್ದೀರಿ. ಧನ್ಯವಾದ ಮತ್ತು ಅಭಿನಂದನೆ ನಿಮಗೂ ಮತ್ತು ಕವಿ ಆನಂದರಿಗೂ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: