ಮೊನ್ನೆ ಬಿಡುಗಡೆಯಾದ “ಜಾನಕಿ ಕಾಲಂ” ಪುಸ್ತಕದಿಂದ ಒಂದು ಬರಹ. ಅವಧಿಯ ಓದುಗರು ಸ್ವಾರಸ್ಯ ಸವಿಯಲಿ ಎಂದು.
———————
ನಮ್ಮದು ನಂಬಿಕೆಗಳ ಜಗತ್ತು. ನಂಬಿ ಕೆಟ್ಟವರು ಉಂಟೇ? ರಂಗಯ್ಯ ನಿನ್ನ ನಂಬಲಾರದೆ ಕೆಟ್ಟರು ಅನ್ನೋದು ನಮ್ಮ ಫೇವರಿಟ್ ಹಾಡು. ಎಂಥ ಅಪನಂಬಿಕೆಯ ಮನುಷ್ಯ ಕೂಡ ಒಂದಲ್ಲ ಒಂದು ಸುಳ್ಳನ್ನು ನಂಬುತ್ತಾನೆ. ಒಂದಲ್ಲ ಒಂದು ಅನೂಹ್ಯವನ್ನು ನೆಚ್ಚಿಕೊಳ್ಳುತ್ತಾನೆ. ಯಾವುದೋ ಒಂದು ನಿಗೂಢವನ್ನು ಒಪ್ಪಿಕೊಳ್ಳುತ್ತಾನೆ.
ಹಾಗೆ ನಂಬುವುದರಲ್ಲಿ ನಮ್ಮ ಜಾಣತನವೂ ಅಡಗಿದೆ. ನಾವು ಕೇವಲ ನಂಬಿಕೆಗೋಸ್ಕರ ನಂಬುವುದಿಲ್ಲ. ಪರಮ ನಾಸ್ತಿಕ ಕೂಡ ಶುಕ್ರವಾರ ಲಕ್ಷ್ಮಿ ಮನೆಯಿಂದ ಹೋಗಬಾರದು ಅಂತ ನಂಬುತ್ತಾನೆ. ಅಲ್ಲಿಗೆ ಶುಕ್ರವಾರ ದುಡ್ಡು ಕೊಡುವುದು ಬಂದ್. ಎಂಥಾ ಮೆಟೀರಿಯಲಿಸ್ಟಿಕ್ ವ್ಯಾಪಾರಿ ಕೂಡ ಬೋಣಿ ಮಾಡುವವನು ಸಾಲ ಕೇಳಬಾರದು ಅಂತ ನಿರೀಕ್ಷಿಸುತ್ತಾನೆ. ನಂಬಿಕೆಗಿಂತ ಹೆಚ್ಚಾಗಿ ಇರಿಟೇಶನ್ನಿನ ಪ್ರಶ್ನೆ ಅದು.
ಜಗತ್ತಿನಲ್ಲಿ ಅತ್ಯಂತ ಅಪನಂಬಿಕೆಗೆ ಪಾತ್ರವಾಗಿರುವ ಸಂಗತಿಯೆಂದರೆ ದೇವರು ಅನ್ನುವುದು ಸುಳ್ಳು. ದೇವರು ಇದ್ದಾರೊ ಇಲ್ಲವೊ ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಿರಬಹುದು. ಆದರೆ ಅದು ಅಷ್ಟಾಗಿ ಕಾಡುವ ಸಂಗತಿ ಅಲ್ಲ. ಇದ್ದಾರೊ ಇಲ್ಲವೊ ಕೈಮುಗಿದುಬಿಡೋಣ, ರಿಸ್ಕ್ ಯಾಕೆ ಅನ್ನುವ ಮಂದಿಯಿಂದ ಹಿಡಿದು ಇದ್ದಾನೊ ಇಲ್ಲವೊ ಚರ್ಚೆ ಯಾಕೆ, ಅದು ಅವರವರಿಗೆ ಬಿಟ್ಟಿದ್ದು ಅನ್ನುವ ನಿರಾಸಕ್ತಿಯತನಕ ದೇವರ ಮಹಿಮೆ ಹಬ್ಬಿದೆ. ಆದರೆ ದೇವರಿಗಿಂತ ಹೆಚ್ಚು ಅಪನಂಬಿಕೆಗೆ ತುತ್ತಾಗಿರುವುದು ಒಲವು.
ನೀನರಿಯದಿರಬಹುದು; ನಿ ನಂಬದಿರಬಹುದು
ನೀನೊಲ್ಲದಿರಬಹುದು ನನ್ನೊಲವನು
ಕೋಟಿ ತಾರಗೆ ಮಿನುಗಿ ತುಂಬು ಚಂದಿರ ಹೊಳೆದು
ಆದರೂ ತುಂಬದಿದೆ ಬಾನಿನೊಡಲು
ಹೀಗೆ ಪ್ರೀತಿ ಅರಿಯದೆಯೊ ಒಲ್ಲದೆಯೊ ಅಪನಂಬುಗೆಯ ಸುಳಿಗೆ ಸಿಲುಕಿದೆ. ಅದು ದಾಂಪತ್ಯದ ತನಕವೂ ಹಬ್ಬಿದೆ. ಗೆಳೆಯ ಗೆಳೆಯರ ನಡುವೆ ಮೊಳಕೆಯೊಡೆದಿದೆ. ಅಣ್ಣ ತಮ್ಮಂದಿರ ನಡುವೆ ತಲೆಯೆತ್ತಿದೆ. ಬಹುಶಃ ಅನುಮಾನ ಇಲ್ಲದ ಸಂಬಂಧಗಳೇ ಇಲ್ಲವೇನೊ?
ನಿರೀಕ್ಷೆಗಳನ್ನೇ ನಾವು ನಂಬಿಕೆ ಅನ್ನುತ್ತೇವೆ. ನಿರೀಕ್ಷೆಗಳಿದ್ದಾಗಲೇ ಅನುಮಾನವೂ ಇರುತ್ತದೆ ಅನ್ನುತ್ತಾರೆ.
*
ಆದರೆ ಈ ಸಲದ ವಸ್ತು ಪ್ರೀತಿಯೂ ಅಲ್ಲ, ಅನುಮಾನವೂ ಅಲ್ಲ. ನಮ್ಮ ನಂಬಿಕೆಗಳು. ಕೆಲವೇ ಕೆಲವು ವಿಚಾರವಾದಿಗಳು ಅವುಗಳನ್ನು ಮೂಢನಂಬಿಕೆಗಳು ಅನ್ನುತ್ತಾರೆ. ಅವುಗಳಲ್ಲಿ ಹುರುಳಿಲ್ಲ ಅಂತ ಓಡಾಡುವ ಸಂದೇಹವಾದಿಗಳೂ ಅವನ್ನು ಗುಟ್ಟಾಗಿ ನಂಬುತ್ತಾರೆ. ಯಾಕೆ ನಂಬುತ್ತಾರೆ ಅನ್ನುವುದಕ್ಕೆ ವೈಜ್ಞಾನಿಕವಾದ ಕಾರಣಗಳೇನೂ ಇಲ್ಲ; ಇರಬೇಕಾಗಿಯೂ ಇಲ್ಲ.
ಉದಾಹರಣೆಗೆ ಒಂದೇ ಬೆಂಕಿಕಡ್ಡಿಯಿಂದ ಮೂವರು ಸಿಗರೇಟು ಹಚ್ಚಿಕೊಳ್ಳಬಾರದು ಎಂಬ ನಂಬಿಕೆ. ಈ ನಂಬಿಕೆಗೆ ಕಾರಣಗಳೇ ಇಲ್ಲವೆಂದಲ್ಲ. ನಮಗೇ ಗೊತ್ತಿಲ್ಲದ ಒಂದು ಕಾರಣ ಇದರ ಹಿಂದಿದೆ. ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ಮೊದಲನೇ ಕಿಡಿಯಿಂದ ಶತ್ರುಗಳ ಜಾಡು ಹಿಡಿದು, ಎರಡನೇ ಕಿಡಿಯಿಂದ ಗುರಿ ಹಿಡಿದು, ಮೂರನೇ ಕಿಡಿಯ ನೆರವಿನಿಂದ ಶತ್ರುಗಳನ್ನು ಶೂಟ್ ಮಾಡುತ್ತಿದ್ದರು ಅಂತ ಸೈನಿಕರಿಗೆ ಎಚ್ಚರಿಕೆ ನೀಡಲಾಗುತ್ತಿತ್ತು. ಹೀಗಾಗಿ ಮೂರನೇ ಸಿಗರೇಟು ಅಂಟಿಸಿಕೊಂಡವ ಸಾಯುತ್ತಾನೆ ಅನ್ನುವ ನಂಬಿಕೆ ಚಾಲ್ತಿಗೆ ಬಂತು.
ಇನ್ನೊಂದು ನಂಬಿಕೆ ನೋಡಿ. ಎಲ್ಲರೂ ಬಲಗಾಲು ಮುಂದಿಟ್ಟು ಬನ್ನಿ ಅನ್ನುತ್ತಾರೆ. ಆದರೆ ಸೈನಿಕರು ಮಾತ್ರ ಸದಾ ಎಡಗಾಲು ಮುಂದಿಡುತ್ತಾರೆ. ಅವರ ಮಂತ್ರ ಶುರುವಾಗುವುದೇ ಲೆಫ್ಟ್ ರೈಟ್ ಎಂದು!
ತುಂಬ ಚಾಲ್ತಿಯಲ್ಲಿರುವ ನಮ್ಮ ನಡುವಿನ ನಂಬಿಕೆಗಳು ಹಲವಾರಿವೆ. ಒಂಟಿ ಸೀನು ಅಶುಭ, ಕರಿಬೆಕ್ಕು ಎಡದಿಂದ ಬಲಕ್ಕೆ ದಾಟಿದರೆ ಅಪಾಯ, ಹಲ್ಲಿ ಲೊಚಗುಟ್ಟಿದರೆ ಅಪಶಕುನ, ಕಾಗೆ ಕೂಗಿದರೆ ನೆಂಟರು ಬರುತ್ತಾರೆ… ಇಂಥ ದೈನಂದಿನ ನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇಂಥ ನಂಬಿಕೆಗಳನ್ನು ಅತಿಯಾಗಿ ನಂಬುವವರ ಪೈಕಿ ಮೊದಲನೇ ಸ್ಥಾನ ರಾಜಕಾರಣಿಗಳಿಗೆ, ಎರಡನೆಯದು ಸಿನೆಮಾ ನಟರಿಗೆ. ವೈಎನ್ಕೆ ಕೂಡ ರಾಹುಕಾಲದಲ್ಲಿ ಹೊರಟರೆ ಕಾರು ಕೆಡುತ್ತದೆ ಅಂತ ನಂಬಿದ್ದರು. ಹೀಗಾಗಿ ಅವರೆಂದೂ ರಾಹುಕಾಲದಲ್ಲಿ ಹೊರಡುತ್ತಿರಲಿಲ್ಲ. ಮನೆಯೊಳಗೆ ವಿಸ್ಕಿ ಚೆಲ್ಲಿದರೆ ಲಕ್ಷ್ಮಿಕಟಾಕ್ಷ ಅಂತಲೂ, ವಿಸ್ಕಿ ಕುಡಿಯುವ ಹೊತ್ತಿಗೆ ಅಪರಿಚಿತರು ಬಂದರೆ ದುರ್ದೆಸೆ ಎಂದೂ ಅವರು ಭಾವಿಸಿದ್ದರು. ಕೊನೆಯದು ಎಷ್ಟೇ ಆದರೂ ಸಕಾರಣ ಬಿಡಿ!
ಗೊಂಬೆಗೆ ಕೈಮುಗಿದರೂ ನಂಬಿಕೆ ಇರಬೇಕು ಅನ್ನುವುದು ಕಿಟೆಲ್ ಹುಡುಕಿದ ನಂಬಿಕೆಯ ಮೇಲಿನ ಗಾದೆ. ಆ ನಂಬಿಕೆಯಿಂದ ದೇವರ ಸಾಕ್ಷಾತ್ಕಾರ ಆಗುತ್ತದೆ ಅಂತೇನಲ್ಲ. ಕನಿಷ್ಠ ನಮ್ಮ ಕ್ರಿಯೆಗೊಂದು ಅರ್ಥಪೂರ್ಣತೆಯಾದರೂ ದಕ್ಕುತ್ತದೆ ಅಂತಿರಬೇಕು. ಆದರೆ ಎಲ್ಲೆಲ್ಲಿ ಭಯವಿರುತ್ತದೋ ಅಲ್ಲೆಲ್ಲ ಹೆಚ್ಚು ಹೆಚ್ಚು ನಂಬಿಕೆಗಳೂ ಇರುತ್ತವೆ. ಹಡಗಿನಲ್ಲಿ ಪ್ರಯಾಣ ಮಾಡುವ ಹೊತ್ತಿಗೆ ಡಾಲ್ಫಿನ್ ಕಂಡರೆ ಶುಭ ಅನ್ನುವುದೊಂದು ನಂಬುಗೆ. ಅದಕ್ಕೆ ಕಾರಣ ಇಷ್ಟೆ: ಡಾಲ್ಫಿನ್ ಗಳಿದ್ದಲ್ಲಿ ಶಾರ್ಕುಗಳಿರುವುದಿಲ್ಲ. ಹೀಗಾಗಿ ಪ್ರಯಾಣ ನಿರಪಾಯಕರ.
ಹೆಚ್ಚಿನ ನಂಬಿಕೆಗಳು ಪ್ರಾಣಿ ಪಕ್ಷಿಗಳಿಗೆ ಸಂಬಂಧಿಸಿದವು. ಅವಕ್ಕೆ ಕಾರಣವೂ ಇದೆ. ಪ್ರಾಣಿ ಪಕ್ಷಿಗಳ ಇಂದ್ರಿಯಗಳು ಮನುಷ್ಯನದಕ್ಕಿಂತ ಸೂಕ್ಷ್ಮ. ಹೀಗಾಗಿ ಅಪಾಯದ ಸುಳಿವನ್ನು ಪ್ರಾಣಿಗಳೇ ಮೊದಲು ಕಂಡುಹಿಡಿಯುತ್ತವೆ. ಅವುಗಳ ವರ್ತನೆಯಲ್ಲಿ ಬದಲಾದಾಗ ಅಪಾಯ ಖಂಡಿತ.
ಅದಕ್ಕೇ ಇಂಥ ವರ್ತನೆಗಳನ್ನು ಅಪಶಕುನ ಅನ್ನುತ್ತಾರೆ. ಶಕುನ ಅನ್ನುವುದೂ ಶಕುನಪಕ್ಷಿ ಅನ್ನುವುದೂ ಹಿಂದಿಯ ಶಗೂನ್ ನಿಂದ ಬಂದದ್ದು. ಶಗೂನ್ ಅಂದರೂ ಪಾರಸೀ ಭಾಷೆಯಲ್ಲಿ ಹಕ್ಕಿಯೇ. ಹಾಗೆಯೇ ಭವಿಷ್ಯವನ್ನು ಹಕ್ಕಿಶಾಸ್ತ್ರವೆಂದೂ ಭವಿಷ್ಯ ಹೇಳುವವನನ್ನು ಹಕ್ಕಿಶಾಸ್ತ್ರ ಹೇಳುವವನೆಂದೂ ಕರೆಯಲಾಯಿತು. ಪ್ರಕೃತಿಗೂ ಭವಿಷ್ಯಕ್ಕೂ ಎಂಥ ಹತ್ತಿರದ ಸಂಬಂಧ ನೋಡಿ!
ಹಲ್ಲಿ ಲೊಚಗುಟ್ಟಿದರೆ ಅದು ಸತ್ಯ ಅನ್ನುವ ನಂಬಿಕೆ ರಾಮಾಯಣದ ಕಾಲದಿಂದಲೂ ಬಂದಿದೆ. ಯಾರಾದರೂ ಏನಾದರೂ ಹೇಳಿದಾಗ ಹಲ್ಲಿ ಲೊಚಗುಟ್ಟಿದರೆ “ನೋಡಿ, ಸತ್ಯ ಅಂತೆ” ಅನ್ನುತ್ತಾರೆ. ಸೀತೆಯ ಚಾರಿತ್ರ್ಯವನ್ನು ರಾಮ ಶಂಕಿಸಿದಾಗ ಅಗಸನೊಬ್ಬ ಹೇಳಿದನಂತೆ: ಸೀತಾಮಾತೆ ತಾನು ಪರಿಶುದ್ಧಳು ಅಂತ ಹೇಳಿಕೊಳ್ಳಲಿ. ಅದು ನಿಜವಾದರೆ ಹಲ್ಲಿ ಲೊಚಗುಟ್ಟುತ್ತದೆ. ಸೀತೆ ಹಾಗೆ ಹೇಳಿಕೊಂಡಾಗ ಹಲ್ಲಿ ಲೊಚಗುಟ್ಟಿತಂತೆ. ಹನುಮಂತನೇ ಹಲ್ಲಿಯಾಗಿ ಲೊಚಗುಟ್ಟಿ ಸೀತೆಯನ್ನು ಆ ಅಸಹ್ಯಕರ ವಿಚಾರಣೆಯಿಂದ ಪಾರು ಮಾಡಿದ ಅನ್ನುವುದು ಮತ್ತೊಂದು ಕತೆ. ಈಗ ಹಲ್ಲಿ ಲೊಚಗುಟ್ಟುವುದಿರಲಿ, ಮೊಬೈಲ್ ರಿಂಗಣಿಸಿದರೂ ಸಾಕು, ನೋಡಿ ನಾನು ಹೇಳಿದ್ದು ನಿಜ ಅನ್ನುತ್ತಾರೆ!
ಕೆ ಎಸ್ ನರಸಿಂಹಸ್ವಾಮಿ ಕವಿತೆಯಲ್ಲಿ ಮತ್ತೊಂದು ಅಪಶಕುನದ ಪ್ರಸ್ತಾಪ ಬರುತ್ತದೆ. ಶಾನುಭೋಗರ ಮಗಳನ್ನು ನೋಡಲು ತಾವರೆಗೆರೆಯ ಜೋಯಿಸರ ಮೊಮ್ಮಗ ಬಂದಾಗ ಹೀಗಾಗುತ್ತದೆ:
ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ
ಒಳಗೆ ನಂದಾದೀಪ ನಂದಿಹೋಗಿ
ಫಲವ ನುಡಿದುದು ಹಲ್ಲಿ, ಹೇಳಲೇನಿದೆ ಮುಂದೆ?
ತೆರಳಿದನು ಜೋಯಿಸನು ತಣ್ಣಗಾಗಿ.
ತೇಜಸ್ವಿಯವರ ಪರಿಸರದ ಕತೆಗಳಲ್ಲಿ ಒಂದು ಪ್ರಸ್ತಾಪವಿದೆ. ಅವರ ಚಪ್ಪಲಿಯನ್ನು ದೆವ್ವವೊಂದು ಸದಾ ಬದಲಿಸಿ ಇಡುತ್ತದೆ ಎಂದು ನಂಬಿದ ಕೆಲಸದ ಹುಡುಗ ಆ ಮನೆಯಲ್ಲೊಂದು ದೆವ್ವವಿದೆ ಎಂದು ನಂಬತೊಡಗುತ್ತಾನೆ. ಅದೇ ರೀತಿ ಚಪ್ಪಲಿಗೆ ಸಂಬಂಧಿಸಿದಂತೆ ಹತ್ತೆಂಟು ನಂಬಿಕೆಗಳಿವೆ.
ಮೊದಲು ಬಲಗಾಲಿನ ಚಪ್ಪಲಿ ಹಾಕಬೇಕು, ಒಂದು ಚಪ್ಪಲಿಯನ್ನು ಮೇಲ್ಮುಖವಾಗಿಯೂ ಇನ್ನೊಂದನ್ನು ಕೆಳಮುಖವಾಗಿಯೂ ಇಡಕೂಡದು, ಮನೆಯೊಳಗೆ ಚಪ್ಪಲಿ ಹಾಕಬಾರದು, ದೇವಸ್ಥಾನದ ಒಳಗೆ ಚಪ್ಪಲಿ ತೊಡಬಾರದು, ಯಾರದೋ ಚಪ್ಪಲಿ ಹಾಕಿಕೊಂಡರೆ ಅವರ ದುರದೃಷ್ಟ ನಮಗೂ ಬರುತ್ತದೆ, ಚಪ್ಪಲಿ ಕಚ್ಚಿದರೆ ಶುಭ.
ಎಷ್ಟೋ ನಂಬಿಕಗಳು ನಮಗೆ ಹೊರಗಿನಿಂದ ಬಂದಿವೆ. ಖಾಲಿ ತೊಟ್ಟಿಲು ತೂಗಬಾರದು ಅನ್ನುವ ನಂಬಿಕೆ ಭಾರತದ್ದಲ್ಲ, ಸ್ಕಾಟ್ಲೆಂಡಿನದು. ಖಾಲಿ ತೊಟ್ಟಿಲು ತೂಗಿದರೆ ಮಗುವಿಗೆ ಹೊಟ್ಟೆನೋವು ಬರುತ್ತದೆ ಅನ್ನುವುದರಿಂದ ಹಿಡಿದು ಅದರಲ್ಲಿ ಮಲಗೋ ಮಗು ಸತ್ತೇ ಹೋಗುತ್ತೆ ಅನ್ನುವ ತನಕ ಈ ನಂಬಿಕೆ ಹಬ್ಬಿದೆ. ಇದು ಹುಟ್ಟಿಕೊಳ್ಳುವುದಕ್ಕೆ ಕಾರಣವಾದ ಅಂಶ ಏನೆಂಬುದು ನಿಗೂಢ.
ಕೈ ಕಣ್ಣು ಕಿವಿಗೆ ಸಂಬಂಧಿಸಿದ ನೂರೆಂಟು ನಂಬಿಕೆಗಳು ನಮ್ಮಲ್ಲಿವೆ. ಬಲಗಣ್ಣು ಅದುರಿದರೆ ಗಂಡಸರಿಗೆ ಅದೃಷ್ಟ. ಎಡಗಣ್ಣು ಅದುರಿದರೆ ಹೆಂಗಸರಿಗೆ ಶುಭ. ಕೈ ಕೆರೆದರೆ ಹಣ ಬರುತ್ತೆ. ಬಲಗಿವಿಯ ಹತ್ತಿರ ಗಂಟೆ ಸದ್ದು ಕೇಳಿದರೆ ಯಾರೋ ಹೊಗಳುತ್ತಿದ್ದಾರೆ… ಹೀಗೆ ಏನೇನೋ ನಂಬಿಕೆಗಳು.
ವಿದ್ಯೆಯೊಂದಿಗೆ ಮೂಢನಂಬಿಕೆಗಳು ಕಡಿಮೆಯಾಗುತ್ತಾ ಹೋಗುತ್ತವೆ ಅನ್ನುವ ಮೂಢನಂಬಿಕೆ ಇತ್ತು. ಅದೀಗ ಸುಳ್ಳಾಗಿದೆ. ವಿದ್ಯಾವಂತರಲ್ಲಿ ಹೊಸ ಹೊಸ ಮೂಢನಂಬಿಕೆಗಳು ಹುಟ್ಟಿಕೊಳ್ಳುತ್ತಿವೆ. ವಾಸ್ತು, ಪೆಂಗ್ ಶೂ ಹೆಸರಲ್ಲೊ, ಯೋಗ, ಧ್ಯಾನದ ಹೆಸರಲ್ಲೊ, ಪ್ರಕೃತಿ ಚಿಕಿತ್ಸೆಯ ಹೆಸರಲ್ಲೊ ಈ ವೈಜ್ಞಾನಿಕ ಮೂಢನಂಬಿಕೆಗಳು ಹಾಜರಾಗುತ್ತವೆ. ಅವನ್ನೆಲ್ಲ ವೈಜ್ಞಾನಿಕ ಅಂತ ವಾದಿಸುವವರಿದ್ದಾರೆ.
ಕಾರಿಗೆ ಒಳ್ಳೆಯ ನಂಬರು ಕೊಡಿ, ಫೋನ್ ನಂಬರನ್ನು ಕೂಡಿದಾಗ ಒಂಬತ್ತು ಬರಬೇಕು, ಹೆಸರಲ್ಲಿ ಇಷ್ಟೇ ಅಕ್ಷರ ಇರಬೇಕು… ಒಂದಾ, ಎರಡಾ?
ನಂಬಿ ಕೆಟ್ಟವರಿಲ್ಲ! ಕೆಟ್ಟವರು ನಂಬುವುದಿಲ್ಲ. ನಂಬದವರೆಲ್ಲ ಕೆಟ್ಟವರಲ್ಲ!






0 Comments