ಪ್ರೀತಿಗೆ ಹೃದಯ ಮೇಣವಾಗುವುದೇಕೆ?

ರಶ್ಮಿ ಎಸ್

ಅದೆಷ್ಟು ಸಲ ಈ ಹೃದಯಕ್ಕ ಸುಮ್ನಿರು. ಸುಮ್ನ ಅಭಿಧಮನಿಗಳಿಗೆ ರಕ್ತ ಪೂರೈಸು, ಅಪಧಮನಿಗಳಿಂದ ಕಲುಶಿತ ರಕ್ತ ತೊಗೊ. ಪಂಪ್‌ ಮಾಡ್ಕೊಂತ ಇರು ಸುಮ್ನ ಅಂತೇನಿ. ಕೇಳೂದಿಲ್ಲ… ನನ್ಹಂಗ.. ದಿಲ್‌ ಯೆ ಜಿದ್ದಿ ಹೈ! ಥೇಟ್‌ ನನ್ಹಂಗ. ಒಮ್ಮೆಮ್ಮೆ ಕಲ್ಲಾಗ್ತದ. ಒಮ್ಮೆಮ್ಮೆ ಹೂ ಆಗ್ತದ. ಒಮ್ಮೆಮ್ಮೆ ನೀರ್ಗಲ್ಲು ಕರಗಿ ನದಿಯಾಗತದ. ಖೋಡಿ ವೈದು.. ಇರೂದು ತಟಕ್ಕದ… ಅದೆಷ್ಟರೆ ರೂಪಾಂತರ ಆಗ್ತದ… ಅಗಾ.. ಮತ್ತ ರೂಪಾ ಅನ್ನೂತ್ಲೆ ನಗಿ ತುಟಿ ಮ್ಯಾಲೆ ಮೂಡ್ತದ. ಇರಲಿ, ಹಿಂಗ ಹಟ ಮಾಡುವ ಹೃದಯ ಐತೆಲ್ಲ… ಒಂದಷ್ಟು ಮಂದಿಯ ಮಾತು ಮಾತ್ರ ಒಟ್ಟಾ ತಗದು ಹಾಕೂದಿಲ್ಲ. ಯಾಕ ಹೇಳಾತೇನಿ ಈ ಮಾತಂದ್ರ, ಎಲ್ಲಾರೂ ಒಂದು ಪುಸ್ತಕ ಮಾಡ್ರಿ ಅನ್ನೋರು. ನಾನು ಇಲ್ಲ ಬಿಡ್ರಿ, ನನಗ ಆ ಶಿಸ್ತಿಲ್ಲ, ಸಂಯಮ ಇಲ್ಲ… ಪುಸ್ತಕ ಆಗುವಂಥದ್ದು ನಾ ಏನೂ ಬರದೇ ಇಲ್ಲ ಬಿಡ್ರಿ ಅಂತಿದ್ದೆ.

ನಮ್ಮ ರವೀಂದ್ರ ಸಿರವರ ಅವರು ಐದು ವರ್ಷದಿಂದ ಮಿದುಮಾತು ಸಂಕಲನ ತರೂನಂತಾರ. ಪ್ರೂಫ್‌ ನೋಡಿ ಕೊಡವಲ್ಲೆ ನಾ ಅವರಿಗೆ. ಹಿಂಗಾಗಿ ಅದು ನನೆಗುದಿಗೆ ಬಿತ್ತು. ಅಗ್ದಿ ನಮ್ಮ ಸರ್ಕಾರಿ ಯೋಜನೆಯ ಹಂಗ. ಆಲೂರು ಸರ್‌ ಚಂದನೆಯ ಮುನ್ನುಡಿ ಬರದು ಕೊಟ್ರು ಅದಕ್ಕ. ಆದ್ರ ನನಗ ಒಂದು ನಮೂನಿ ಆತಂಕ, ಒಂದು ನಮೂನಿ ಸಂಕೋಚ… ಬರವಣಿಗಿ ಅಗ್ದಿ ಒಲವಿನ ಕೆಲಸ. ಒಲವಿನಂತೆಯೇ ಕೆಲವೊಮ್ಮೆ ಬಂಧಿಸಿಡ್ತದ. ಕೆಲವೊಮ್ಮೆ ಅಹಂಕಾರವನ್ನು ಬಗ್ಗುಬಡೀತದ.

ಇನ್ನೂ ಕೆಲವೊಮ್ಮೆ ಕೈ ಹಿಡದು ನಡಸ್ತದ. ಮತ್ತ ಭಾಳಷ್ಟು ಸಲ ನನ್ನ ಕಣ್ಣೀರಿನ ಉಪ್ಪನ್ನು ಸಹನೀಯಗೊಳಸ್ತದ. ಅಗ್ದಿ ಪೇರಲು ಹಣ್ಣು ಹಣ್ಣಲ್ಲ, ಅಗ್ದಿ ಕೊಬ್ಬರಿಕಾಯಿ ಇದ್ದಂಗಿರ್ತದಲ್ಲ ಅಂಥ ಪೇರು ಜೊತಿಗೆ, ನೆಲ್ಲಿಕಾಯಿ ಜೊತಿಗೆ, ಗೋವೆ ಮಾವಿನ ಕಾಯಿಜೊತಿಗೆ ಉಪ್ಪು ತಿಂತೇವಲ್ಲ.. ಹಂಗ ರುಚಿಸಿಕೊಡುವಹಂಗ ದುಃಖವನ್ನು ಆನಂದಿಸುವ ಹಂಗ ಮಾಡ್ತದ.ಕೆಲವೊಂದು ನನ್ನ ಮೇಲ್‌ ಬಾಕ್ಸಿನ ಡ್ರಾಫ್ಟ್‌ನಾಗ ಬೆಚ್ಚಗಿರ್ತಾವ. (ಮೇಲ್‌ ಬಾಕ್ಸ್‌ ಹೆಸರಿನಾಗ ಮೇಲ್‌ ಇರೂದ್ರಿಂದ, ಏನೂ ತಿಳಿಯೂದಿಲ್ಲ ಅನ್ನೂದೊಂದು ಖಾತ್ರಿ ಇರ್ತದ). ಇನ್ನಷ್ಟು ಎಫ್‌.ಬಿ ಗೋಡೆ ಮೇಲೆ ಬರ್ತಾವ. ಒಂದಷ್ಟು ಅಗ್ದಿ ಆಪ್ತರ ಇನ್‌ಬಾಕ್ಸಿಗಷ್ಟೆ ಹೋಗ್ತಾವ.ಹಿಂಗ ಬರದಿದ್ದು ನಮ್ಮ ಹಿರೇಮಠ ಕಾಕಾರು.. ರಕ್ತಸಂಬಂಧಿ ಅಲ್ಲ. ಆದ್ರ ಕಳುಬಳ್ಳಿಗೆ ಯಾವುದೋ ಜನ್ಮದ ಋಣಾನುಬಂಧ ಅದ. ಅವರು ಮಗಳಂತ ಒಪ್ಕೊಂಡಾರ.

ನಾನು ಕಾಕಾ, ಕಾಕಿ ಅಂತ ಅವರಿಗೆ ಅಪ್ಗೊಂಡೇನಿ. ಅವರ ಮಾತೊಂದು ತೆಗದು ಹಾಕೂದಿಲ್ಲ. ಅದೆಷ್ಟೋ ಸಲ, ಉಣ್ಣಾಕ ಆಗಿರೂದಿಲ್ಲ. ಅವೊತ್ತು ಅದೆಂಥ ಒಲುಮೆ ಅಂತ ಗೊತ್ತಿಲ್ಲ.. ಕೆಲಸದ ನಡು ಕೂಸಿನ್ಹಂಗ ಒಂದೆರಡೆ ತುತ್ತು ಅವಾಗವಾಗ ಹೊಟ್ಟಿಗೆ ಹಾಕ್ಕೊ ಅಂತ ಕಾಕಾರು ಮೆಸೇಜು ಮಾಡ್ತಾರ. ಅವರ ಮಾತು ತಗದು ಹಾಕೂದಿಲ್ಲ ನಾ.ಇದೇ ಪ್ರೀತಿಗೆ ಕಟ್ಟುಬಿದ್ದು, ಈ ಕೋವಿಡ್‌ ಕಾಲದಾಗ ಬರದಿದ್ದೆಲ್ಲ ನನಗ ಕಳಸು ರಶ್ಮಿ ಅಂದ್ರು. ಯಥಾ ಪ್ರಕಾರ ಇದು ಹೂಂರಿ ಕಾಕಾರಿ ಅಂತ್ಹೇಳಿ, ಡ್ರಾಫ್ಟ್‌ನಾಗ ಇದ್ದದ್ದೆಲ್ಲ ಒಂದು ಮೇಲಿಗೆ ಕಾಪಿ ಪೇಸ್ಟ್‌ ಮಾಡಿ ಕಳಿಸಿಕೊಟ್ಟೆ.

ನಮ್ಮ ಕಾಕಾರು ಅಗ್ದಿ ಮಿಂಚು.. ಮಿಂಚಿದ್ದಂಗ ಅವರ ಕೆಲಸ. ಒಂದು ನಿನ್ನ ಮಾತು ಬರದು ಕಳಸವಾ ಅಂದ್ರು. ಈಗ ಬಂತಲ್ಲ ತ್ರಾಸು… ಏನು ಬರೀಬೇಕು ಗೊತ್ತಾಗಲಿಲ್ಲ. ಕೈ ಓಡವಲ್ದು. ಮನಸಿನ ತುಂಬಾ ಹೆಸರು. ಆದ್ರೂ ಭಾಳಷ್ಟು ಹೆಸರು ಬಿಟ್ಹೋದ್ವು. ಏನೇನೂ ಗೊತ್ತಿಲ್ದೆ, ಕಾಕಾರ ಮಾತಿಗೆ ಇಲ್ಲ ಅನ್ನದೆ ಅವರಿಗೆಲ್ಲ ಒಟ್ಟುಗೂಡಿಸಿ ಕೊಟ್ಟೆ. ಅವರು ಪುಸ್ತಕ ಮಾಡಿ ಕೊಟ್ರು. ಅಗ್ದಿ ಶಿಸ್ತು, ಸಂಯಮ, ನನ್ನ ಪಾಲಿಂದೂ ಅವರಿಗೆ ಕೊಟ್ಟು ಮೈಮರತೆ ನಾನು.

ಈ ಸಲದ ಹುಟ್ಟುಹಬ್ಬಕ್ಕ ನನ್ನ ಕಡೆಯಿಂದ ಇದೇ ನಿನಗ ಗಿಫ್ಟು ಅಂತಂದ್ರು. ನಾ ಇಲ್ಲದಾಗಲೂ ನೀ ಇರೂತನಾನೂ… ಇದು ನಿನ್ನೊಟ್ಟಿಗಿರ್ತದ ಅಂದ್ರು. ಕಣ್ತುಂಬಿದ್ವು… ಹಿಂಗ ಈ ಬಿಡಿ ಬರವಣಿಗೆಗಳೀಗ ಒಂದು ಗುಚ್ಛದೊಳಗ ಬರಾಕ್ಹತ್ತದ. ಮತ್ತ ಹಿರೇಮಠ ಕಾಕಾರಿಗೆ, ಮಹಾನಂದಾ ಕಾಕಿಗೆ ಈ ಥ್ಯಾಂಕ್ಯು ಹೇಳೂದಿಲ್ಲ. ನಾ ಏನೂ ಹೇಳೂದಿಲ್ಲ. ಅವರಿಗೆ ಗೊತ್ತದ, ಅವರಂದ್ರ ನನಗೇನಂತ… ಮತ್ತ ನನ್ನ ಖುಷಿ, ಆರೋಗ್ಯ ಬಿಟ್ರ ಅವರಿಗೇನು ಬ್ಯಾಡಂತನೂ ಗೊತ್ತದ. ಶುಕ್ರವಾರ ಕಲಬುರ್ಗಿ ಅಂಗಳದಾಗದೇನಿ. ನಾಲ್ಕು ಅಲ್ಲೇ ಇರ್ತೀನಿ. ಐದಕ್ಕ ವಾಪಸ್‌.. ವಾಪಸ್‌ ಬಂದ್ಮೇಲೆ ಸಿಗ್ತೀನಿ.

‍ಲೇಖಕರು Admin

September 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: