ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ.. ನನಗದು ಓದಿ ಶಾಕ್ ಆಗಿತ್ತು

ನನ್ನನ್ನು ನನಗೆ ತೋರಿಸಿಕೊಟ್ಟವರು

vaidehi on chair

ವೈದೇಹಿ

lankesh in capಪ್ರಿಯ ಲಂಕೇಶ್, ಇದು ಮಾತ್ರ ಖಂಡಿತ. ನೀವು ಅಂದು ಹೇಳಿ ಕಾಲಂ ಬರೆಸದಿದ್ದಲ್ಲಿ, ನೀವು ಶ್ರೀ ಸುಬ್ಬಣ್ಣ ಒತ್ತಾಸೆ ನೀಡದಿದ್ದಲ್ಲಿ ಈಗ ಬರೆದಿರುವಷ್ಟನ್ನೂ ನಾನು ಬರೆಯುತ್ತಿರಲಿಲ್ಲ. ನೀವು ನನ್ನ ಬರವಣಿಗೆ ಕುರಿತೇ ಬರೆದಿರಿ. ಅದುವರೆಗೆ ಲೇಖಕರ ಕುರಿತೇ ಪುಟಗಟ್ಟಲೆ ಓದಿ ನಾವೆಲ್ಲ “ಚರ್ಚಿಸಲ್ಪಡತಕ್ಕವರಲ್ಲ” – ಎಂಬ ಭಾವನೆ ಸುಪ್ತಮನದಲ್ಲಿ ಅಡಗಿದ್ದಕ್ಕೋ ಏನೋ, ನನಗದು ಓದಿ ಶಾಕ್ ಆಗಿತ್ತು. ಫೋನಿನಲ್ಲಿಯೂ, ನನ್ನ ಬರಹ ಓದಿದ ತಕ್ಷಣ, ಪ್ರತಿಕ್ರಿಯಿಸುತ್ತಿದ್ದೀರಿ. ಎಲ್ಲ ನೆನಪಾಗುತ್ತಿದೆ.

ಇದೆಲ್ಲ ಕಷ್ಟವೇ. ಕರಿಯರು, ದಲಿತರು, ಮಹಿಳೆಯರು – ಬೇರೆಯವರನ್ನೇ ನೋಡುತ್ತ ಕೇಳುತ್ತ “ಅವರೆಲ್ಲ ಹೌದು-ನಾವು ಅಲ್ಲ” ಎಂಬ ಮಾಯೆಗೊಳಗಾಗಿ ಬೆಳೆವವರು. ತಮ್ಮನ್ನು ಮರೆತುಕೊಳ್ಳುವವರು. ನಮ್ಮಂಥವರಿಗೆ ಮೆಚ್ಚುಗೆಯನ್ನು ನಿರ್ವ್ಯಾಜವಾಗಿ ನೇರವಾಗಿ ತಿಳಿಸಲು ಮನಸ್ಸು ಬರುವುದು ಎಂಥಾ ಅಪರೂಪದ ಸಂಗತಿ.

ಇದು ಒಂದಾದರೆ, ಹೇಳಿದರೆ ಹಿಗ್ಗಿಯಾರು ಅಂತ, ಅಹಂಕಾರ ಬಂದೀತು ಅಂತ, ಬರವಣಿಗೆ ಅಲ್ಲಿಯೇ ನಿಂತೀತು ಅಂತ, ಮತ್ತಷ್ಟು ಬರೆದಾರು ಎಂಬ ಅಸೂಯೆ, ದೋಷವೇ ಕಾಣುವುದು ಒಂದು, ಈಕೆ ಮಹಿಳೆ ಎಂದಾಗ ತಂತಾನೇ ಏಳುವ ಅವಜ್ಞೆಯೊಂದು, ಸಮಕಾಲೀನರ ಸಾಹಿತ್ಯವನ್ನು ಓದುವ ವ್ಯವಧಾನವೇ ಇಲ್ಲದಿರುವುದು ಒಂದು, ಮೆಚ್ಚಿದರೆ ಸ್ವಂತಕ್ಕೆ ಏನೂ ಉಪಯೋಗವಿಲ್ಲದೇ ಇರುವುದೊಂದು – ಹೀಗೆ ಕಾರಣಗಳು ಅನೇಕ.

ಆದರೆ ಈ ಕಾರಣಗಳಾವುದೂ ನಿಮ್ಮನ್ನು ನನ್ನ ಮಟ್ಟಿಗೆ ಬಾಧಿಸಲೇ ಇಲ್ಲ.  ನನ್ನಲ್ಲಿರುವ ಲೇಖಕಿಯಲ್ಲಿ ಅಕೃತ್ರಿಮ ಅಚಲ ವಿಶ್ವಾಸ ಇಟ್ಟಿರಿ. ಒಂದಕ್ಷರವನ್ನೂ ತೆಗೆಯದೆ ಪೂರ್ಣಸಂಪೂರ್ಣ ಪ್ರಕಟಿಸಿದಿರಿ. ಇದು ನನ್ನ ಆತ್ಮವಿಶ್ವಾಸಕ್ಕೆ ಹೆಚ್ಚಿನ ಬಲ ಕೊಟ್ಟಿತೆಂದು ನೀವು ಬಲ್ಲಿರಿ.

ತನ್ನಲ್ಲಿ ತನಗೇ ಗುರುತು ಸಿಗದ ತನ್ನನ್ನು ತೋರಿಸಿಕೊಟ್ಟಲ್ಲಿ ಅದು ಯಾವುದೇ ಕಲಾವಿದನ ಪುಣ್ಯ ತಾನೆ? ನೀವು ಅನೇಕರಿಗೆ ಅದನ್ನು ಮಾಡಿದಿರಿ.

‍ಲೇಖಕರು admin

3 November, 2015

4 Comments

  1. suvarna.c

    ವೈದೇಹಿ ಮೇಡಂ ಅವರ ಬರವಣಿಗೆಗೆ ಪ್ರೋತ್ಸಾಹಿಸಿದ ಲಂಕೇಶ್ ಮಾಸ್ಟರ್ ಅವರನ್ನ ನೆನಪಿಸಿ ಕೋಂಡಿರುವುದು ನಿಜಕ್ಕೂ ಒಬ್ಬ ಸಾಧಕನಲ್ಲಿ ಇರಬೇಕಾದ ಒಂದು ಒಳ್ಳೆಯ ಗುಣ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಗುಣಕ್ಕಿಂತ ಮನುಷ್ಯನಲ್ಲಿ ತಾಳ್ಮೆ, ಸಹನೆ, ಉಪಕಾರಸ್ಮರಣೆ ಇದ್ದು ಅಹಃ ನಿಂದ ದೂರವಿದ್ದು ಸೌಜನ್ಯವಾಗಿದ್ದರೆ ಸಮಾಜದಲ್ಲಿ ಒಬ್ಬ ಉತ್ತಮ ಮನುಷ್ಯನಾಗುತ್ತಾನೆ ಅನ್ನೋದಿಕ್ಕೆ ವೈದೇಹಿ ಮೇಡಂ ಸಾಕ್ಷಿ

  2. C. N. Ramachandran

    ಪ್ರಿಯ ವೈದೇಹಿ: ಲಂಕೇಶರು ನಿಮ್ಮಂತಹ, ಸಾರಾ ಅವರಂತಹ ಅನೇಕರನ್ನು ಲೇಖಕರನ್ನಾಗಿ ರೂಪಿಸಿದುದು ಮತ್ತು ನೀವು (ಇಂದು ತುಂಬಾ ಎತ್ತರಕ್ಕೇರಿದ್ದರೂ) ಅತ್ಯಂತ ವಿನಯದಿಂದ ಅವರ ಸಹಾಯವನ್ನು ನೆನೆಸಿಕೊಳ್ಳುವುದು ಇವೆರಡೂ ಅನುಕರಣೀಯ. ಸಿ. ಎನ್. ರಾಮಚಂದ್ರನ್

  3. ಪ್ರೇಮಿ

    ಲಂಕೇಶರಿಗೆ ಲಂಕೇಶರೇ ಸಾಟಿ, ಅವರನ್ನು ನೆನಪಿಸಿಕೊಂಡಿರುವುದು ಶ್ಲಾಘನೀಯ,,,,,

  4. ನಾಗರಾಜ್ ಹರಪನಹಳ್ಳಿ .

    ಮೇಷ್ಟ್ರು , ಕರ್ನಾಟಕದ ಪ್ರಜ್ಞಾವಂತ ಲೇಖಕರನ್ನು ಬೆಳೆಸಿದ್ದೇ ಹಾಗೆ. ಹಿಂದುಳಿದ ವರ್ಗದಿಂದ ಬಂದವರನ್ನು, ಮಹಿಳೆಯರನ್ನು , ಪ್ರಾಮಾಣಿಕರನ್ನು ಹುಡುಕಿ ಹುಡುಕಿ ಬರೆಸಿದರು. ಮನುಷ್ಯರನ್ನು , ಸ್ಪಷ್ಟ ಮನಸ್ಥಿತಿಯವರನ್ನು ಗುಣಮುಖದ ಲಂಕೇಶರು ಬಹುಬೇಗ ಗುರುತಿಸುತ್ತಿದ್ದರು. ಅಂಥವರಲ್ಲಿ ವೈದೇಹಿ ಅಕ್ಕ ಸಹ ಒಬ್ಬರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading