ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಮನೆಯಲ್ಲೊಂದು ಸುತ್ತು…

ಪ್ರಿಯದರ್ಶಿನಿ ಶೆಟ್ಟರ್

ಮಲೆನಾಡಿನ ಪ್ರಮುಖ ಆಕರ್ಷಣೆಯೆಂದರೆ ಮುಂಜಾನೆಯ ಮಂಜು. ಮಂಜಿನ ಪರದೆಯ ಹಿಂದೆ ಗುಡ್ಡ-ಬೆಟ್ಟ, ಗಿಡ-ಮರಗಳು, ಕವಿಶೈಲದಲ್ಲಿನ ಸಮಾಧಿ ಹತ್ತಿರದ ಕಲ್ಲುಕಂಬಗಳು – ಇವೆಲ್ಲ ಬಹಳ ಮೋಹಕವಾಗಿ ಕಂಡು ಮನಸ್ಸಿಗೆ ಮುದ ನೀಡುತ್ತವೆ. ನಮ್ಮ ಮನಸ್ಥಿತಿ ಹೇಗಿತ್ತೆಂದರೆ ‘ಕುಪ್ಪಳ್ಳಿಯಲ್ಲಿ ಇರುವಷ್ಟು ದಿನ ಕವಿಮನೆ, ಕವಿಶೈಲ, ತೇಜಸ್ವಿಯವರ ಸ್ಮಾರಕ, ಮಲೆನಾಡ ಸೊಬಗು, ಮಳೆ, ಮೋಡ, ಸಸ್ಯಸಂಪತ್ತು ಇವುಗಳನ್ನೆಲ್ಲ ಇನ್ನಿಲ್ಲದಷ್ಟು ಅನುಭವಿಸಿಬಿಡಬೇಕು.’

ಹಾಗೂ ಮುಂದಿನ ಸಲ ಇಲ್ಲಿಗೆ ಕುಟುಂಬದೊಂದಿಗೆ ಬರುವಾಗ ಹೇಗೆ ಪ್ಲ್ಯಾನ್ ಮಾಡಬಹುದೆಂಬ ಯೋಚನೆಗಳೇ ಬರುತ್ತಿದ್ದವು. ಎಷ್ಟು ಫೋಟೋಗಳನ್ನು ತೆಗೆದರೂ ಸಾಲದು, ಮಲೆನಾಡ ನೆನಪನ್ನು ಹಚ್ಚಹಸಿರಾಗಿರಿಸಿಕೊಳ್ಳಲು… ಅತ್ತ ಬಯಲುಸೀಮೆಯೂ ಅಲ್ಲದ, ಇತ್ತ ಮಲೆನಾಡ ಸೆರಗೂ ಅಲ್ಲದ ಊರಿನವಳಾದ ನನ್ನಂತವಳಿಗೆ ಇಂಥದ್ದೊಂದು ಅವಕಾಶ ದೊರೆತದ್ದು ಸಹಜವಾಗಿಯೇ ರೋಮಾಂಚನಕಾರಿಯಾಗಿತ್ತು.

ಕಮ್ಮಟದಲ್ಲಿನ ಊಟೋಪಚಾರದ ಬಗ್ಗೆಯಂತೂ ಹೇಳಲೇಬೇಕು. ಪ್ರತಿದಿನ ಬಗೆಬಗೆಯ ರುಚಿ-ಶುಚಿಯಾದ ಖಾದ್ಯಗಳು ಸಿದ್ಧವಾಗಿರುತ್ತಿದ್ದವು. ಕೆಲವು ಹೊಸ ರುಚಿಗಳನ್ನು ಸವಿದೆವು. ಪ್ರತಿಯೊಂದು ವಿಷಯದಲ್ಲೂ ಎಲ್ಲರೂ ಸಮಯಕ್ಕೆ ಮಹತ್ವ ಕೊಡುತ್ತಿದ್ದರು. ಇಬ್ಬರು ಅತಿಥಿಗಳು ಅನಿವಾರ್ಯವಾಗಿ ಬಾರದೇ ಇದ್ದಾಗಲೂ ಸಹ ಅಧ್ಯಕ್ಷರು, ನಿರ್ದೇಶಕರು, ಸಂಪನ್ಮೂಲ ವ್ಯಕ್ತಿಗಳು ಸಮಯ ವ್ಯರ್ಥವಾಗದಂತೆ ಉಪನ್ಯಾಸಗಳಲ್ಲಿ ಕೆಲ ಬದಲಾವಣೆ ತರುತ್ತಿದ್ದರು. ಇಲ್ಲಿ ಕೆಲವು ಅನನುಕೂಲಗಳಿದ್ದರೂ ಸಹ ಇತರ ಅತಿಥಿಗಳು ಹಾಗೂ ಇಲ್ಲಿನ ಸಿಬ್ಬಂದಿ ಅದನ್ನೆಲ್ಲ ಸಮರ್ಥವಾಗಿ ನಿಭಾಯಿಸಿದರು. ಒಂದಿಬ್ಬರು ಶಿಬಿರಾರ್ಥಿಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ವಾಹನ ವ್ಯವಸ್ಥೆ ಮಾಡಿ ಹತ್ತಿರದಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಮುತುವರ್ಜಿ ವಹಿಸಿದರು.

ಬೆಳಿಗ್ಗೆ ಯೋಗಾಭ್ಯಾಸದ ನಂತರ ಪ್ರತಿಷ್ಠಾನದ ಪಕ್ಕದಲ್ಲಿರುವ ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕಕ್ಕೆ ಹೋದೆವು. ನನಗೆ ‘ತೇಜಸ್ವಿ ಸಿಕ್ಕರು’ (ಲೇಖಕರು- ಕೆ. ಎಸ್. ಪರಮೇಶ್ವರ್) ಕೃತಿಯಲ್ಲಿನ ತೇಜಸ್ವಿಯವರ ಜೀವನದ ಕಡೆಯ ದಿನಗಳ ಕೆಲ ಸನ್ನಿವೇಶಗಳು ಹಾಗೇ ಕಣ್ಣಮುಂದೆ ಹಾದುಹೋದಂತಾಗಿ ಕೊಂಚ ಬೇಸರವಾಯಿತು. ಆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದ ಕಲ್ಲುಕಂಬಗಳು, ಅವುಗಳ ಮೇಲಿನ ಪಾಚಿ… ಇವೆಲ್ಲ ಈ ಜಾಗ ನೋಡಿ ಮತ್ತೊಮ್ಮೆ ನೆನಪಾದವು. ಮಧ್ಯಾಹ್ನ ಕವಿಮನೆಯ ಮ್ಯೂಸಿಯಂಗೆ ಹೋಗುವುದಾಗಿ ತೀರ್ಮಾನವಾಗಿದ್ದರೂ ಸಹ ಬೆಳಿಗ್ಗೆಯೂ ಅಲ್ಲಿಗೆ ಹೋಗಿ ಬಂದೆವು.

ಮುಂಜಾನೆಯ ಗೋಷ್ಠಿಯಲ್ಲಿ ‘ಎಷ್ಟೇ ತಪ್ಪುಗಳಿದ್ದರೂ ತಿದ್ದಿಕೊಡಬೇಕು’ ಎಂಬ ವಿಷಯವನ್ನೆತ್ತಿಕೊಂಡ ಡಾ. ಬಿ. ಎಂ. ಪುಟ್ಟಯ್ಯರವರು ಸಂಸ್ಕೃತಿ ವಿಮರ್ಶೆಯ ಕುರಿತು ವಿವರವಾದ ಉಪನ್ಯಾಸ ನೀಡಿದರು. ಸಂಸ್ಕೃತಿ ಅಧ್ಯಯನದ ಹರವು, ಸಂಸ್ಕೃತಿ ಮತ್ತು ಭಾಷೆಯ ನಡುವಿನ ಸಂಬಂಧ, ಸಂಸ್ಕೃತಿ ವಿಮರ್ಶೆಗೆ ಸಂಬಂಧಿಸಿದಂತೆ ವಿವಿಧ ಬರಹಗಾರರ ಕೊಡುಗೆ, ಹಲವು ಪ್ರಮುಖವಾದ ಪುಸ್ತಕಗಳನ್ನು ಪ್ರಸ್ತಾಪಿಸುವುದರೊಂದಿಗೆ ಕೆಲ ಕಥೆಗಳಲ್ಲಿನ ಪಾತ್ರಗಳ ಉದಾಹರಣೆಯೊಂದಿಗೆ ಸಂವಾದವನ್ನು ಕುತೂಹಲಕಾರಿಯಾಗಿಸಿದರು. ಮಾಧ್ಯಮಗಳಲ್ಲಿ ಬಿತ್ತರಿಸಲಾಗುವ ಅನವಶ್ಯಕ ಹಾಗೂ ಅತಿರಂಜಿತ ವಿಷಯಗಳನ್ನು ಮತ್ತು ಸಮಕಾಲೀನ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಗುರುತಿಸಿ, ಪ್ರಶ್ನಿಸುವುದರ ಅವಶ್ಯಕತೆಯನ್ನು ವಿವರಿಸಿದರು.

‘ಭಾರತೀಯ ಪುನರುಜ್ಜೀವನ ಸಂದರ್ಭದಲ್ಲಿ ಮೂಡಿದ ವೈಚಾರಿಕ ಚಿಂತನೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಭಾರತಕ್ಕೆ ಡಚ್ಚರು, ಫ್ರೆಂಚರು ಹಾಗೂ ಬ್ರಿಟಿಷರ ಆಗಮನದಿಂದ ಸಾಹಿತ್ಯಿಕ ವಲಯದಲ್ಲಾದ ಸ್ಥಿತ್ಯಂತರ, ಮೊದಲನೆಯ ಮುದ್ರಣ ಯಂತ್ರ ಹಾಗೂ ಅದರ ಬಳಕೆಯಿಂದ ಅಚ್ಚಾದ ಕೃತಿಗಳು, ಪುನರುಜ್ಜೀವನ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳ ಹುಡುಕಾಟ, ಸಂಗೀತ ಹಾಗೂ ಸಾಹಿತ್ಯದ ನಡುವಿನ ಸಂಬಂಧ, ಆಯುರ್ವೇದದ ಮಹತ್ವ ಇಂತಹ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ಬೃಹತ್ ಪ್ರಮಾಣದ ಅಭಿವೃದ್ಧಿ ಕೆಲಸಗಳಿಂದಾಗುವ ಪರಿಸರ ಮಾಲಿನ್ಯ, ತತ್ಪರಿಣಾಮದಿಂದುಂಟಾಗುವ ಅಸಂಖ್ಯಾತ ಸಮಸ್ಯೆಗಳು, ಮುಂತಾದ ವಿಚಾರಗಳನ್ನು ಪ್ರಸ್ತಾಪಿಸುತ್ತ ನಿಸರ್ಗದೆಡೆಗಿನ ನಮ್ಮ ಅಸಡ್ಡೆಯ ಬಗ್ಗೆ ತಮ್ಮ ಸಾತ್ವಿಕ ಸಿಟ್ಟನ್ನು ಹೊರಹಾಕಿದರು. ಈ ಸಂವಾದ ನಮ್ಮೊಳಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು.

ಡಾ. ಜಿ. ವಿ. ಹರೀಶ್ ಅವರು ‘ಸಾಹಿತ್ಯ, ವಿಮರ್ಶೆ ಮತ್ತು ದೇಸಿ ಚಿಂತನೆ’ ಎಂಬ ವಿಷಯದ ಕುರಿತು ಮಾತನಾಡುತ್ತಾ ದೇಸಿ ಚಿಂತನೆಯ ವ್ಯಾಖ್ಯಾನ ಹಾಗೂ ಪ್ರಸ್ತುತತೆ ಜೊತೆಗೆ ಸಂಸ್ಕೃತಿ ಚಿಂತನೆಯ ಮೇಲೆ ಬೆಳಕು ಚೆಲ್ಲಿದರು. ಈ ನಿಟ್ಟಿನಲ್ಲಿ ರಚಿಸಲ್ಪಟ್ಟ ಕೃತಿಗಳು ಹಾಗೂ ಲೇಖಕರಾದ ಗಾಂಧೀವಾದಿ ಅರ್ಥಶಾಸ್ತ್ರಜ್ಞ ಜೆ. ಸಿ. ಕುಮಾರಪ್ಪ, ಭರತನ್ ಕುಮಾರಪ್ಪ, ಎಸ್. ಗುರುಮೂರ್ತಿ, ಎಸ್. ಕೆ. ರಾಮಚಂದ್ರಯ್ಯ, ಶಂಕರ್ ಮೊಕಾಶಿ ಪುಣೇಕರ್, ಹಾಸನದ ರಾಜಾರಾಯರು, ಬಿ. ಪುಟ್ಟಸ್ವಾಮಿ, ತಿ. ತಾ. ಶರ್ಮ, ಎ. ಕೆ. ರಾಮಾನುಜನ್, ಮುಂತಾದವರ ದೇಸಿ ಚಿಂತನೆಯ ಕುರಿತು ವಿವರಿಸಿದರು. ನೆಹರು, ಲೋಹಿಯಾ, ಗಾಂಧಿ, ಅಂಬೇಡ್ಕರ್, ಮುಂತಾದವರ ಚಿಂತನೆಗಳು ಹಾಗೂ ಅವುಗಳ ಪ್ರಸ್ತುತತೆಯನ್ನು ಪ್ರಸ್ತಾಪಿಸಿದರು. ಒಂದು ಹಂತದಲ್ಲಿ ಕಾವೇರಿದ ಚರ್ಚೆಯೂ ಆಯಿತು.

ಊಟದ ನಂತರ ನಮ್ಮ ಬಹುದಿನದ ಕನಸಾಗಿದ್ದ ಕವಿಮನೆಯಲ್ಲಿನ ವಸ್ತುಸಂಗ್ರಹಾಲಯಕ್ಕೆ ಹೋದೆವು. ಅಲ್ಲಿ ಹಳೆಯ ಕಾಲದ ಸಂದೂಕ, ಕುವೆಂಪುರವರು ಮದುವೆಯಾದ ಮಂಟಪ, ಕಲಬಿ, ಕಟ್ಟಿಗೆಯ ತೊಟ್ಟಿಲು, ಚಿನ್ನೇಮಣೆ, ಬೆತ್ತದ ಬುಟ್ಟಿಗಳು, ಹೋಳಿಗೆ ಕಾವಲಿ, ಕೊಚ್ಚು ಕೊರಟಿ, ಕಲ್ಲು ಗಾರಿಗೆ, ಕಡೆಗೋಲು, ಸರಗೋಲು, ಸಾಂಬಾರ ಮರಿಗೆ, ಶ್ಯಾವಿಗೆ ಮರಿಗೆ, ಮರದ ಪಿಠಾರಿ, ಅನ್ನ ಬಸಿಯುವ ಬಾಗುಮರಿಗೆ, ಕದ್ದನಿ, ಮರದ ದೋಣಿ, ದೋಣಿ ಹುಟ್ಟು, ಕೃಷಿಸಂಬಂಧಿ ಪರಿಕರಗಳು- ಹೀಗೆ ಅನೇಕ ಹಳೆಯ ಕಾಲದ ಗೃಹೋಪಯೋಗಿ ಸಾಮಗ್ರಿಗಳೆಲ್ಲ ನೋಡಲು ಸಿಗುತ್ತವೆ. ಕೆಲವು ನಾವೆಂದೂ ನೋಡಿರದ ವಸ್ತುಗಳು ಸಹಜವಾಗಿ ನಮ್ಮಲ್ಲಿ ಕುತೂಹಲ ಮೂಡಿಸಿದವು.

ಕುವೆಂಪುರವರು ಬಳಸುತ್ತಿದ್ದ ಲೇಖನಿಗಳು, ಮುದ್ರೆ, ಕೋಲು, ಛತ್ರಿ, ರೇಡಿಯೋ, ಹಣಿಗೆ, ಬಟ್ಟೆಗಳು, ಕೋವಿ, ಕುರ್ಚಿಗಳನ್ನೆಲ್ಲ ಒಪ್ಪವಾಗಿ ಜೋಡಿಸಿಡಲಾಗಿದೆ. ಅವರ ಕೆಲ ತಲೆಕೂದಲನ್ನೂ ಸಂಗ್ರಹಿಸಿಡಲಾಗಿದೆ. ಅವರು ಬರೆದ ಪುಸ್ತಕಗಳು, ಹಸ್ತಪ್ರತಿಗಳು, ಕೆಲವು ಸಿ.ಡಿ.ಗಳೂ ಇವೆ. ಕುವೆಂಪುರವರಿಗೆ ಸಂದ ಅನೇಕ ಪ್ರಶಸ್ತಿ-ಪುರಸ್ಕಾರಗಳು, ಫಲಕಗಳು, ನಾಡೋಜ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಡಿ. ಲಿಟ್., ಡಾಕ್ಟರ್ ಆಫ್ ಲೆಟರ್ಸ್, ಮುಂತಾದ ಪ್ರಶಸ್ತಿ ಪತ್ರಗಳು ಹಾಗೂ ನೆನಪಿನ ಕಾಣಿಕೆಗಳನ್ನು ನೋಡಿ ರೋಮಾಂಚನವಾಯಿತು.

ಮ್ಯೂಸಿಯಂ ವೀಕ್ಷಿಸುವಾಗ ಮನೆಯಲ್ಲಿ ಎಲ್ಲಿ ಹೋದರೂ ಸಣ್ಣನೆಯ ದನಿಯಲ್ಲಿ ಕುವೆಂಪುರವರ ಗೀತೆಗಳು ಒಂದಾದ ಮೇಲೊಂದರಂತೆ ಕೇಳಿಬರುತ್ತವೆ. ಕುವೆಂಪು ಹಾಗೂ ಅವರ ಕುಟುಂಬದವರ ಭಾವಚಿತ್ರಗಳು, ವಂಶವೃಕ್ಷ, ಅವರ ಸಂಗ್ರಹದಲ್ಲಿದ್ದ ಪೇಂಟಿಂಗ್‌ಗಳು – ಇವುಗಳನ್ನೆಲ್ಲ ಶಿಸ್ತುಬದ್ಧವಾಗಿ ಪ್ರದರ್ಶಿಸಲಾಗಿದೆ. ಒಟ್ಟಾರೆಯಾಗಿ ಇಡೀ ಮನೆ, ಕಲಾತ್ಮಕವಾದ ಕಟ್ಟಿಗೆಯ ಬಾಗಿಲು, ಕಂಬಗಳು, ಅಟ್ಟ – ಇವೆಲ್ಲ ಮಲೆನಾಡಿನ ತೊಟ್ಟಿಮನೆಯ ಅನುಭವದ ಜೊತೆಗೆ ಈಗ ಬಳಸದೇ ಇರುವ ಹಾಗೂ ಆಧುನಿಕ ಕಾಲದಲ್ಲಿ ಕಾಣಸಿಗದ ಅದೆಷ್ಟೋ ಸಾಮಗ್ರಿಗಳು ಬರುವ ಪ್ರವಾಸಿಗರಿಗೆ ವಿಶೇಷ ಅನುಭವವನ್ನು ಕಟ್ಟಿಕೊಡುತ್ತವೆ.

ಸಂಜೆ ಕಮ್ಮಟದ ಕೊನೆಯ ಗುಂಪು ಚರ್ಚೆಯಲ್ಲಿ ಡಾ. ಸಿದ್ಧಲಿಂಗಯ್ಯನವರ ‘ಸಾವಿರಾರು ನದಿಗಳು’ ಹಾಗೂ ಲಲಿತಾ ಸಿದ್ಧಬಸವಯ್ಯ ಅವರ ‘ದೇವಿ ಮಹಾತ್ಮೆ’ ಕವಿತೆಗಳನ್ನು ವಿಶ್ಲೇಷಿಸಿದೆವು. ‘ಸಾವಿರಾರು ನದಿಗಳು’ ಕುರಿತು ನಮ್ಮಲ್ಲಿ ಅಭಿವ್ಯಕ್ತಿಯಾದ ಅಂಶಗಳನ್ನು ಹಂಚಿಕೊಳ್ಳಲು ನನಗೂ ಅವಕಾಶ ಸಿಕ್ಕಿದ್ದು ಖುಷಿಯಾಯಿತು. ಮೊದಲಿನಿಂದಲೂ ಕಾವ್ಯದಲ್ಲಿ ಹೆಚ್ಚಿನ ಆಸಕ್ತಿಯಿರದ ನನಗೆ ಕಮ್ಮಟದಲ್ಲಿ ಕಾವ್ಯವನ್ನು ಓದುವ, ಕೇಳುವ, ಚರ್ಚಿಸುವ ಮುಖಾಂತರ ಅದರ ಪ್ರತಿಯಾಗಿ ಆಸಕ್ತಿ ಹಾಗೂ ಕುತೂಹಲ ಉಂಟಾದದ್ದು ಈ ಕಮ್ಮಟದ ಫಲಶ್ರುತಿಯೆಂದೇ ಹೇಳಬೇಕು.

ರಾತ್ರಿ ಶಿವರಾಮ ಕಾರಂತ ವಿರಚಿತ ‘ಚೋಮನ ದುಡಿ’ ಚಲನಚಿತ್ರ ವೀಕ್ಷಿಸಿದೆವು. ಬಿ. ವಿ. ಕಾರಂತ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿಬಂದ ಸಿನಿಮಾ ಪ್ರದರ್ಶನದ ನಂತರ ಡಾ. ವಿಕ್ರಮ ವಿಸಾಜಿಯವರು ಈ ಕಥೆಯ ಬಗ್ಗೆ ಹೇಳಿದ ಕೆಲ ಸಂಗತಿಗಳು ಆ ಕಾಲದಲ್ಲಿದ್ದ ಮತಾಂತರದ ಪ್ರಲೋಭನೆ, ಚೋಮನ ಬಡತನ, ಸ್ವಂತ ಭೂಮಿಗಾಗಿ ಪರಿತಪಿಸುತ್ತಿದ್ದ ಆತನ ಅವಸ್ಥೆ, ಆತನ ಕುಟುಂಬದ ಕಷ್ಟ-ಸುಖ ಎರಡರಲ್ಲೂ ಜೊತೆಯಾಗುತ್ತಿದ್ದ ‘ದುಡಿ’ಯ ನಾದ, ಇಲ್ಲಿನ ಕಲಾವಿದರೆಲ್ಲರ ಅಮೋಘ ಅಭಿನಯ – ಇಂತಹ ಹಲವು ವಿವರಗಳು ಕಥೆಯ ಜೊತೆಗೆ ಅದರ ಹಿನ್ನೆಲೆಯನ್ನೂ ನಮ್ಮ ಮುಂದೆ ತೆರೆದಿಟ್ಟವು.

ಪ್ರಸ್ತುತ ಕಥೆಯನ್ನು ಕಾರಂತರು ಕೇವಲ ಐದು ದಿನಗಳಲ್ಲಿ ಬರೆದರೆಂದು ಕೇಳಿ ನಮಗೆಲ್ಲ ಆಶ್ಚರ್ಯವಾಯಿತು. ಸಂವಾದ ಮುಗಿದ ಮೇಲೆ ಡಾ. ಮಾರ್ಷಲ್ ಶರಾಂ ಅವರು ಮರುದಿನ ಎಲ್ಲರಿಗೂ ಬೆಳಿಗ್ಗೆ ನಾಲ್ಕು ಗಂಟೆಗೆ ತಯಾರಿರಲು ಹೇಳಿದರು. ನಮ್ಮ ಪಯಣ ನವಿಲುಕಲ್ಲು ಗುಡ್ಡ ಹಾಗೂ ಸಿಬ್ಬಲ ಗುಡ್ಡದ ಕಡೆಗೆಂದು ತೀರ್ಮಾನಿಸಲಾಗಿತ್ತು. ರಾತ್ರಿ ಭೋಜನದ ನಂತರ ಕೆಲ ಪುಸ್ತಕಗಳನ್ನು ಖರೀದಿಸಿದೆವು. ಬೆಳಗಿನ ಜಾವ ಮೂರು ಗಂಟೆಗೆ ಏಳುವುದನ್ನೇ ಯೋಚಿಸುತ್ತ ನಿದ್ದೆಗೆ ಜಾರಿದೆವು.

। ಇನ್ನು ನಾಳೆಗೆ ।

‍ಲೇಖಕರು Admin

November 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: