ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಸನ್ನ ಹೇಳುವ ’ಮೂಡಲ್ ಕುಣಿಗಲ್ ಕೆರೆ’ ಕಥೆ

ಕೊತ್ತಪ್ಪನ ಕಥೆ

ಪ್ರಸನ್ನ ಸಂತೇಕಡೂರು

ಡಲ್ಲಾಸ್

ನಮ್ಮಲ್ಲಿ ನಾಡು ನುಡಿಗಾಗಿ ಪ್ರಾಣತೆತ್ತಾ ವೀರರ ನೆನಪಿಗೋಸ್ಕರ ವೀರಗಲ್ಲುಗಳನ್ನ ಮತ್ತು ತನ್ನ ಗಂಡನ ಜೊತೆಯಲ್ಲಿಯೇ ಸಹಗಮನಮಾಡಿ ಸಾಯುತ್ತಿದ್ದ ಮಹಾಸತಿಯರ ನೆನಪಿಗೆ ಮಾಸ್ತಿಗಲ್ಲುಗಳನ್ನ ನೆಡುವ ಅಭ್ಯಾಸವಿತ್ತು. ಅದೇ ರೀತಿ ಊರುಗಳಿಗೆ ಮತ್ತು ಸಮಾಜಕ್ಕೆ ಮಹೋತ್ತರವಾದ ಕಾಣಿಕೆಯನ್ನ ಕೊಟ್ಟ ವ್ಯಕ್ತಿಗಳಿಗೆ ದೇವಸ್ಥಾನ ಕಟ್ಟಿಸಿ ಪೂಜಿಸುವ ಅಭ್ಯಾಸವು ಇದೆ. ಆ ರೀತಿ ಕಾಣಿಕೆಯನ್ನ ಕೊಟ್ಟ ವ್ಯಕ್ತಿಯೇ ಕೊತ್ತಪ್ಪ. ಕೊತ್ತಪ್ಪನ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಮೊದಲು ನಾನು ನಿಮಗೆ ಒಂದು ಜಾನಪದ ಗೀತೆಯ ಬಗ್ಗೆ ಹೇಳಬಯಸುತ್ತೇನೆ. ತುಂಬಾ ಜನಪ್ರಿಯವಾಗಿರುವ ” ಮೂಡಲ್ ಕುಣಿಗಲ್ ಕೆರೆ “ಜಾನಪದ ಗೀತೆಯನ್ನು ನೀವೆಲ್ಲರೂ ಪಿ. ಕಾಳಿಂಗರಾಯರ ಅಥವಾ ಬೇರೆ ಹಾಡುಗಾರರ ಧ್ವನಿಯಲ್ಲಿಯೋ ಕೇಳಿರಬಹುದೆಂದು ಭಾವಿಸುತ್ತೇನೆ. ನೀವೂ ನಾಗತಿಹಳ್ಳಿ ಚಂದ್ರಶೇಖರವರ “ನನ್ನ ಪ್ರೀತಿಯ ಹುಡುಗಿ” ಚಲನಚಿತ್ರದಲ್ಲಾದರೂ ಈ ಗೀತೆಯ ಶೀರ್ಷಿಕೆಯ ಹಾಡನ್ನ ನೋಡಿರಬಹುದು. ಎಲ್ಲಿಯೂ ಕೇಳದಿದ್ದರೂ ಮತ್ತು ನೋಡದಿದ್ದರೂ ಪರವಾಗಿಲ್ಲ. ನಿಮಗಾಗಿ ಸಂಪೂರ್ಣ ಜಾನಪದಗೀತೆಯನ್ನು ಇಲ್ಲಿ ಕೊಡಬಯಸುತ್ತೇನೆ.
ಮೂಡಲ್ ಕುಣಿಗಲ್ ಕೆರೆ
ಮೂಡಲ್ ಕುಣಿಗಲ್ ಕೆರೆ ನೋಡೋರ್ಗೋಂದೈಭೋಗ
ಮೂಡಿ ಬರ್ತಾನೆ ಚಂದಿರಾಮ| ತಾನಂದಾನೋ
ಮೂಡಿ ಬರ್ತಾನೆ ಚಂದಿರಾಮ|
ಅತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲುಕಟ್ಟೆ ತಾನಂದಾನೋ
ಸಂತೆ ಹಾದಿಲಿ ಕಲ್ಲುಕಟ್ಟೆ||
 
ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಭಾವ ತಂದಾನು ಬಣ್ಣದ ಸೀರೆ| ತಾನಂದಾನೋ
ಭಾವ ತಂದಾನು ಬಣ್ಣದ ಸೀರೆ||
ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ
ಆಂದಾ ನೋಡಾಲು ಶಿವ ಬಂದ್ರು | ತಾನಂದನೋ
ಅಂದಾ ನೋಡಾಲು ಶಿವ ಬಂದ್ರು ||
 
ಅಂದಾನೆ ನೋಡಲು ಶಿವ ಬಂದ್ರು ಶಿವಮೊಗ್ಗಿ
ಕಬ್ಬಕ್ಕಿ ಬಾಯ ಬಿಡುತಾವೆ | ತಾನಂದನೋ
ಕಬ್ಬಕ್ಕಿ ಬಾಯಿ ಬಿಡುತಾವೆ ||
ಕಬ್ಬಕ್ಕಿ ಬಾಯಿ ಬಿಡುತಾವೆ ಬಿಡದಿ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ|ತಾನಂದಾನೋ
ಗಬ್ಬಾದ್ ಹೊಂಬಾಳೆ ನಡುಗ್ಯಾವೆ||
 
ಹಾಕಕ್ಕೊಂದ್ ಆರೆಗೋಲು ನೂಕಾಕ್ಕೊಂದೂರುಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು | ತಾನಂದನೋ
ಬೊಬ್ಬೆ ಹೊಡೆದಾವೆ ಬಾಳೆಮೀನು ||
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೆ ತಾನಂದನೋ
ಗುಬ್ಬಿ ಸಾರಂಗ ನಗುತಾವೆ||

ಇಷ್ಟೋಂದು ಸುಂದರವಾಗಿ ಜಾನಪದ ಗೀತೆಯಲ್ಲಿ ವರ್ಣಿಸಲ್ಪಟ್ಟಿರುವ ಕೆರೆಯ ಒಂದು ತುದಿಯಲ್ಲಿ ಕುಣಿಗಲ್ ಪಟ್ಟಣ ಮತ್ತೊಂದು ತುದಿಯಲ್ಲಿ ನನ್ನ ಪೂರ್ವಜರ ಊರು ಕೊತ್ತಗೆರೆಯಿದೆ. ಕುಣಿಗಲ್ ಕೆರೆ ಕರ್ನಾಟಕ ರಾಜ್ಯದ ದೊಡ್ಡ ಮತ್ತು ತುಂಬಾ ಹೆಸರುವಾಸಿಯಾದ ಕೆರೆಗಳಲ್ಲಿ ಒಂದು. ಸುಮಾರು ಸಾವಿರ ಎಕರೆಗಿಂತ ಹೆಚ್ಚಾಗಿರುವ ಕೆರೆ ಅಂಗಳ ಮತ್ತು ಎರಡು ಮೈಲುಗಳ ಉದ್ದದ ಏರಿಯನ್ನ ಹೊಂದಿರುವ ವಿಶಾಲವಾದ ಕೆರೆ. ಕೆರೆಯ ಏರಿಯ ಮೇಲೆ ನಡೆಯುವಾಗ ಸಮುದ್ರದಂತೆ ಕಾಣುವ ಕುಣಿಗಲ್ ಕೆರೆಯ ಪೂರ್ವಕ್ಕೆ ಕೊತ್ತಗೆರೆಯ ಸಮೀಪದಲ್ಲಿ ನೀರಿನಲ್ಲಿ ಅಲ್ಲಲ್ಲಿ ಕೆಲವು ಕಲ್ಲಿನ ಬಂಡೆಗಳಿವೆ. ಆ ಬಂಡೆಗಳ ಮೇಲೆ ನೂರಾರು ವರ್ಷದಿಂದ ವಲಸೆ ಬರುವ ಹಕ್ಕಿಗಳು ಕುಳಿತಿರುತ್ತವೆ. ಹಕ್ಕಿಗಳ ಹಿಕ್ಕೆಗಳಿಂದ ಆ ಕಲ್ಲುಗಳು ಬೆಳ್ಳಗೆ ಕಾಣಿಸುವುದರಿಂದ ಅವುಗಳಿಗೆ ಜನ “ಕೊಕ್ಕರೆ ಕಲ್ಲು” ಎಂದು ಕರೆಯುತ್ತಾರೆ. ದೂರದಲ್ಲಿ ಪೂರ್ವಕ್ಕೆ ಶಿವಗಂಗೆ ಬೆಟ್ಟ ಮತ್ತು ಹುತ್ತರಿದುರ್ಗದ ಬೆಟ್ಟಗಳು ಕಾಣುತ್ತವೆ. ಆ ಬೆಟ್ಟಗಳ ಕಡೆಯಿಂದ ಹರಿದು ಬರುತ್ತಿದ್ದ ಚಿಕ್ಕ ಚಿಕ್ಕ ತೊರೆಗಳೇ ಈ ಕೆರೆಗೆ ನೀರನ್ನು ಪೂರೈಸುತ್ತಿದ್ದವು. ಕುಣಿಗಲ್ ಕೆರೆ ತುಂಬಿದ ಮೇಲೆ ಕೊತ್ತಗೆರೆಗೆ ಸಮೀಪವಿರುವ ಕೋಡಿ ತುಂಬಿ ಹರಿದು ಬೃಹತ್ ಕಣಿವೆಯ ಮೂಲಕ ನಾಗಿನಿ ನದಿಯಾಗಿ ಹರಿಯುತ್ತದೆ. ನಾಗಿನಿ ನದಿ ಸಿದ್ದಲಿಂಗ ಶಿವಯೋಗಿಗಳ ತಪೋಭೂಮಿ ಕಗ್ಗೆರೆಯ ಮೂಲಕ ಮಂಗಳ ಕೆರೆಯನ್ನ ಸೇರಿ, ಅಲ್ಲಿಂದ ಶಿಂಷಾ ನದಿಯಲ್ಲಿ ಒಂದಾಗಿ ಕೊನೆಗೆ ಕಾವೇರಿಯಲ್ಲಿ ಲೀನವಾಗುತ್ತದೆ. ಕೆರೆಯ ಕೋಡಿಯಲ್ಲಿರುವ ಕಣಿವೆಯೂ ಕೂಡ ಸದಾ ಕಾಲ ತುಂಬಿರುತ್ತಿದ್ದರಿಂದ ಆನೆಯೊಂದು ಆ ಕಣಿವೆಯಲ್ಲಿ ಹೋಗಿ ವಾಪಸ್ಸು ಬರದೆ ಅಲ್ಲಿಯೇ ಮಡಿದ್ದಿದ್ದರಿಂದ ಅದಕ್ಕೆ “ಆನೆ ಮಡುವು” ಎಂದು ಹೆಸರು ಬಂದಿದೆ. ಕೆರೆಯ ಕೋಡಿ ಮತ್ತು ಆನೆ ಮಡುವಿನ ಮಧ್ಯ ೧೮೪೫ರಲ್ಲಿ ಕಟ್ಟಿದ ಸೇತುವೆ ಇದೆ. ಕೆರೆಯ ಏರಿಯ ಪಕ್ಕದಲ್ಲಿಯೇ ಸಾಗುವ ತುಮಕೂರು-ಕುಣಿಗಲ್ ರಸ್ತೆ ಈ ಸೇತುವೆಯ ಮೂಲಕವೇ ಹಾದುಹೋಗುವುದು. ಸೇತುವೆ ಇತ್ತೀಚಿಗೆ ಶಿತಿಲಗೊಂಡಿರುವದರಿಂದ ೧೯೮೦-೯೦ರ ದಶಕದಲ್ಲಿ ಅದರ ಪಕ್ಕದಲ್ಲಿ ಇನ್ನೊಂದು ಸೇತುವೆಯನ್ನ ನಿರ್ಮಾಣ ಮಾಡಿದ್ದಾರೆ.
ಕೊತ್ತಗೆರೆ ಒಂದು ಹೋಬಳಿ ಕೇಂದ್ರ. ಕೊತ್ತಗೆರೆಯ ಉತ್ತರಕ್ಕೆ ಕುಣಿಗಲ್ ಕೆರೆಯಿಂದ ಸುಮಾರು ಅರ್ಧ ಕಿಮೀ ನಷ್ಟು ದೂರದಲ್ಲಿ ಇನ್ನೊಂದು ಕೆರೆಯಿದೆ. ಅದು ಕುಣಿಗಲ್ ಕೆರೆಯ ಮೂರನೇ ಒಂದು ಭಾಗದಷ್ಟಿರುವ ಕೆರೆ. ಕೊತ್ತಗೆರೆಯಲ್ಲಿ ವೀರಶೈವರೇ ಹೆಚ್ಚಾಗಿದ್ದರೂ ಒಕ್ಕಲಿಗರು, ಬ್ರಾಹಣರು, ಕುರುಬರು, ಬೆಸ್ತರು, ಶೆಟ್ಟರು, ಗಾಣಿಗರು, ದಲಿತರು ಮತ್ತು ಮುಸಲ್ಮಾನರು ಸಹಬಾಳ್ವೆಯಿಂದ ಬದುಕುತ್ತಿರುವ ಹಳ್ಳಿ. ಈ ಕೊತ್ತಗೆರೆಯಲ್ಲಿಯೇ ನನ್ನ ತಾತ ಮತ್ತು ಅವರ ತಾತ ಮುತ್ತಾತರೆಲ್ಲಾ ಹುಟ್ಟಿ ಬೆಳೆದು ಬದುಕಿ ಬಾಳಿದ್ದು ಕೊನೆಗೆ ಇಲ್ಲಿಯೇ ಮಣ್ಣಾಗಿದ್ದು. ನನ್ನ ಪೂರ್ವಜರಿಂದ ಹಿಡಿದು ನನ್ನ ಅಜ್ಜಿ ಮತ್ತು ಸೋದರ ಮಾವನವರೆಗೂ ಪ್ರತಿಯೊಬ್ಬರಿಗೂ ಕುಣಿಗಲ್ ಕೆರೆ ಮತ್ತು ಕೊತ್ತಗೆರೆ ಕೆರೆಗಳು ತಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು. ನನ್ನ ವಂಶದವರಿಗೆ ಮಾತ್ರವಲ್ಲ ಕುಣಿಗಲ್ ತಾಲ್ಲೂಕಿನ ಹಲವಾರು ಗ್ರಾಮಗಳ ಜನರಿಗೆ ನೂರಾರುವರ್ಷಗಳಿಂದ ಈ ಕೆರೆಗಳು ಜೀವಸೆಲೆಯಾಗಿದ್ದವು. ಈ ಎರಡು ಕೆರೆಗಳನ್ನ ಕಟ್ಟಿಸಿದ ಆ ದೊಡ್ಡ ವ್ಯಕ್ತಿಯೇ ಕೊತ್ತಪ್ಪ. ಕೊತ್ತಪ್ಪ ಕಟ್ಟಿಸಿದ ಎರಡು ಕೆರೆಗಳಿರುವುದರಿಂದ ಆ ಊರಿಗೆ ಕೊತ್ತಗೆರೆ ಎಂಬ ಹೆಸರು ಬಂದಿದೆ.
ಕೊತ್ತಪ್ಪ ಯಾರು? ಅವನು ಬದುಕಿ ಬಾಳಿದ್ದು ಹೇಗೆ? ಎಂದೂ ತಿಳಿಯುವ ಮುನ್ನ ನನಗೆ ಕೊತ್ತಪ್ಪನ ಕಥೆ ಹೇಳಿ ಅವನನ್ನ ಒಬ್ಬ ಆದರ್ಶ ಪುರುಷನೆಂದು ತಿಳಿದು ಪೂಜಿಸುತ್ತಿದ್ದ ನನ್ನನ್ನೂ ಸಾಕಿ ಸಲುಹಿದ ನನ್ನ ಅಜ್ಜಿಯ ಬಗ್ಗೆ ನೀವೂ ತಿಳಿಯಲೇಬೇಕು. ನನ್ನ ಅಜ್ಜಿ ಹುಟ್ಟಿದ್ದು ಸಿದ್ದರ ಬೆಟ್ಟದ ತಪ್ಪಲಿನಲ್ಲಿರುವ ಕುರಂಕೋಟೆಯಲ್ಲಿ. ನನ್ನ ಅಜ್ಜಿಯು ಪ್ರೌಢವಸ್ಥೆಗೆ ಬರುವ ವೇಳೆಗೆ ಪ್ಲೇಗಿನಿಂದ ನನ್ನ ಅಜ್ಜಿಯ ತಂದೆ ಮತ್ತು ಇಬ್ಬರೂ ಅಣ್ಣಂದಿರು ತೀರಿಕೊಂಡಿದ್ದರು. ಉಳಿದ ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳ ಜೊತೆ ನನ್ನ ಅಜ್ಜಿಯ ತಾಯಿ ಕೊತ್ತಗೆರೆಗೆ ಬಂದು ನೆಲೆಯೂರಿದ್ದರು.
ಆ ಹೊತ್ತಿಗೆ ಕುಣಿಗಲ್ ಕೆರೆ ಮತ್ತು ಕೊತ್ತಗೆರೆಯ ಕೆರೆಗಳೆರಡೂ ಯಾವಾಗಲೂ ನೀರಿನಿಂದ ತುಂಬಿರುತ್ತಿದ್ದವು. ಕುಣಿಗಲ್ ಸೀಮೆಯ ಸುತ್ತಾ ಸಾವಿರಾರು ಎಕರೆ ಭೂಮಿಗೆ ವರ್ಷ ಪೂರ್ತಿ ನೀರು ಹರಿಯುತ್ತಿತ್ತು. ವರ್ಷಕ್ಕೆರಡು ಭತ್ತದ ಹಾಗೂ ಒಂದು ಕಬ್ಬಿನ ಬೆಳೆ ಬೆಳೆಯುತ್ತ ರೈತರು ಭತ್ತದ ಕಣಜಗಳನ್ನು ಮತ್ತು ಆಲೆಮನೆಗಳನ್ನು ತೆರೆದು ನೆಮ್ಮದಿಯಾಗಿದ್ದರು. ಆಲೆಮನೆಗಳಿಗೆ ಎತ್ತುಗಳನ್ನ ಬಳಸಿ ಗಾಣದ ಮೂಲಕ ಕಬ್ಬನ್ನ ಅರೆಯುತ್ತಿದ್ದರು. ಆ ಕಬ್ಬಿನ ಹಾಲನ್ನ ಬಳಸಿ ಕರೀಬೆಲ್ಲಾ ತಯಾರು ಮಾಡುತ್ತಿದ್ದರು. ಕುಣಿಗಲ್ ತಾಲ್ಲೂಕಿಗೆ ಭತ್ತದ ಕಣಜ ಎಂಬ ಹೆಸರು ಕೂಡ ಇತ್ತೆಂದು ಜನ ಇಂದಿಗೂ ಹೇಳುತ್ತಾರೆ. ಎರಡು ಕೆರೆಯ ಏರಿಯ ಕೆಳಭಾಗದಲ್ಲಿ ಅಡಿಕೆ ತೆಂಗಿನ ತೋಟಗಳು ಸದಾ ಹಸಿರಿನಿಂದ ಕೂಡಿರುತ್ತಿದ್ದವು. ಆ ಕಾಲದಲ್ಲಿ ಕುಣಿಗಲ್ ಸುತ್ತಮುತ್ತಲ ಹಳ್ಳಿಗಳ ರೈತರು ಕೃಷಿ ಮತ್ತು ವ್ಯಾಪಾರ ಮಾಡುತ್ತ ನೆಮ್ಮದಿಯಿಂದ ಬಾಳುತ್ತಿದ್ದರು. ನನ್ನ ಮುತ್ತಾತ ಮತ್ತು ಅವರ ಐದು ಜನ ಮಕ್ಕಳು ಅಲೆಮನೆಯನ್ನ ನಡೆಸುತ್ತಾ ಅಕ್ಕಿ ವ್ಯಾಪಾರ ಮಾಡುತ್ತಿದ್ದರು. ಆಗ ನನ್ನ ಅಜ್ಜಿಯ ಹಿರಿಯ ಸಹೋದರಿಯನ್ನ ನನ್ನ ತಾತನ ಹಿರಿಯ ಸಹೋದರನಿಗೆ ಕೊಟ್ಟು ಮದುವೆ ಮಾಡಿದರು. ನಂತರ ನನ್ನ ಅಜ್ಜಿಗೆ ನನ್ನ ತಾತನ ಜೊತೆ ಮದುವೆಯಾಯಿತು. ನನ್ನ ಸೋದರ ಮಾವಂದಿರು ಮತ್ತು ನನ್ನ ತಾಯಿಯು ಹುಟ್ಟಿದ್ದು ಇದೆ ಕೊತ್ತಗೆರೆಯಲ್ಲಿ. ಆ ಕಾಲದಲ್ಲಿ ಜನರು ಸಾಕಷ್ಟು ಸ್ಥಿತಿವಂತರಾಗಿದ್ದರಿಂದ ಮತ್ತು ಅವರ ಆದಾಯಕ್ಕೆ ಈ ಎರಡು ಕೆರೆಗಳೇ ಕಾರಣವಾಗಿದ್ದವು.

ಜನರು ನೆಮ್ಮದಿಯಿಂದ ಬದುಕುತ್ತಿದ್ದಾಗ ೧೯೫೦-೬೦ ನಡುವಿನಲ್ಲಿ ಭಾರೀ ಮಳೆಯಿಂದಾಗಿ ಕುಣಿಗಲ್ ಕೆರೆ ತುಂಬಿ ತುಳುಕುವಂತಾಯಿತು. ಆಗ ಕುಣಿಗಲ್ ಕೆರೆಯ ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ದೇವಾಲಯವಿದ್ದ ಜಾಗದಲ್ಲೇ ಕೆರೆಯ ಏರಿ ಒಡೆದು ಹೋಗುವ ಸಂಭವವಿತ್ತು. ಅಲ್ಲಿ ಏನಾದರೂ ಕೆರೆ ಒಡೆದರೆ ಕುಣಿಗಲ್ ಪಟ್ಟಣ ಉಳಿಯುವುದಿಲ್ಲವೆಂದು ಅರಿತ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಗಳು ಆನೆಮಡುವಿನ ಹತ್ತಿರ ಕೆರೆಯನ್ನು ಒಡೆಯಲು ಹೇಳಿದರು. ಆಗ ಅಧಿಕಾರಿಗಳು ಜನರೊಡನೆ ಸೇರಿ ಆನೆಮಡುವಿನ ಬಳಿ ಏರಿಯನ್ನು ಒಡೆದು ಹಾಕಿದರು. ನಂತರ ಆ ದಾರಿಯಲ್ಲಿಯೇ ಸಾಗುತ್ತಿದ್ದ ಹತ್ತಿಯನ್ನು ಕೊಂಡೊಯ್ಯುತ್ತಿದ್ದ ಲಾರಿಯನ್ನ ನಿಲ್ಲಿಸಿದರು. ಲಾರಿಯಿಂದ ತೆಗೆದ ಹತ್ತಿಯ ಮೂಟೆಗಳನ್ನ ಏರಿಗೆ ಹಾಕಿ ಮಣ್ಣನ್ನ ಮುಚ್ಚಿ ಮತ್ತೇ ಏರಿಯನ್ನ ಮೊದಲಿನಂತೆ ಕಟ್ಟಿದರು. ಅದರಿಂದಾಗಿ ಕುಣಿಗಲ್ ಪಟ್ಟಣ ಉಳಿಯಿತು ಎಂದು ನನ್ನ ಅಜ್ಜಿ ಯಾವಾಗಲೂ ಹೇಳುತ್ತಿದ್ದಳು. ಆಗ ಕುಣಿಗಲ್ ಪಟ್ಟಣದ ಕೆಲವು ಭಾಗಗಳಿಗೆ ನೀರು ಸಾಗರೋಪಾದಿಯಲ್ಲಿ ಹರಿಯಿತು. ದೂರದ ಸಿದ್ದಲಿಂಗ ಶಿವಯೋಗಿಗಳ ಕಗ್ಗೆರೆ ದೇವಸ್ಥಾನದಲ್ಲಿ ಪ್ರವಾಹದ ನೀರು ಹರಿದಿತ್ತು. ರೈತರು ಬೆಳೆದ ಭತ್ತ, ಕಬ್ಬು ಅಡಿಕೆ ಬೆಳೆಗಳು ನೀರಿನ ಪ್ರವಾಹಕ್ಕೆ ಸಿಕ್ಕಿ ನಷ್ಟವಾದವು. ಸುಮಾರು ಆರೇಳು ವರ್ಷಗಳು ಮಳೆಯಿಲ್ಲದೆ ಎರಡು ಕೆರೆಗಳಲ್ಲಿ ನೀರಿಲ್ಲದೆ ಎಂದೂ ಕೇಳರಿಯದ ಬರಗಾಲ ಬಂದು ಜನ ಬೆಂಗಳೂರಿಗೋ, ಮೈಸೂರಿಗೋ ಅಥವಾ ತುಮಕೂರಿಗೋ ಗುಳೆ ಹೊರಟರು. ನನ್ನ ತಾತನ ಆಸ್ತಿಯೆಲ್ಲಾ ಕರಗಲಾರಂಭಿಸಿತು. ತಾತನ ಆಲೆಮನೆಗಳು ನಿಂತು ಹೋದವು. ಕಣಜ ಬರಿದಾಯಿತು. ಅಡಿಕೆ ತೋಟಗಳು ಒಣಗಿ ನಿಂತವು.
ನನ್ನ ತಾತನ ಸ್ನೇಹಿತನಾದ ಪಕ್ಕದ ಹೊನ್ನೆನಹಳ್ಳಿಯ ಬೋರೇಗೌಡನು ಬರಗಾಲದಿಂದ ತತ್ತರಿಸಿ ಶಿವಮೊಗ್ಗದ ಹತ್ತಿರ ಹೋಗಿ ಕಾಡನ್ನ ಕಡಿದು ಜಮೀನು ಮಾಡುತ್ತಿದ್ದನು. ತನ್ನ ಸ್ನೇಹಿತನಿಗೂ ಅವರ ಜೊತೆ ಕರದುಕೊಂಡು ಹೋದರು. ಬರಗಾಲದ ಕಾರಣದಿಂದ ನನ್ನ ತಾತ ಮತ್ತು ಅಜ್ಜಿ ಸಂತೇಕಡೂರಿಗೆ ಬಂದು ನೆಲೆಸಿದರು. ನನ್ನ ತಾತ ಸತ್ತ ಮೇಲೆ ಅವನ ಇಚ್ಚೆಯ ಪ್ರಕಾರ ದೇಹವನ್ನು ಮಣ್ಣು ಮಾಡಿದ್ದು ಇದೆ ಕೊತ್ತಗೆರೆಯ ಕೆರೆಯ ಏರಿ ಕೆಳಗಿರುವ ರುದ್ರಭೂಮಿಯಲ್ಲಿ. ನನ್ನ ತಾತ ಸತ್ತಮೇಲೂ ಬಹಳ ವರ್ಷ ಬದುಕ್ಕಿದ್ದ ನನ್ನ ಅಜ್ಜಿ ರಜಾದಿನಗಳಲ್ಲಿ ನನ್ನನ್ನ ಕೊತ್ತಗೆರೆಗೆ ಕರೆದುಕೊಂಡು ಬಂದಾಗಲೆಲ್ಲಾ ಅಲ್ಲಿನ ಕಥೆಗಳನ್ನೆಲ್ಲಾ ಹೇಳುತ್ತಿದ್ದಳು.
ಒಂದು ದಿನ ನಾವು ಕಗ್ಗೆರೆಯ ಜಾತ್ರೆಗೆ ಬಂದಾಗ ಅಲ್ಲಿ ನಾಗಿನಿ ನದಿ ಹರಿಯುತ್ತಿತ್ತು. ಆ ನದಿಯ ಬಗ್ಗೆ ನಾನು ಕೇಳಿದಾಗ ಇದು ಕುಣಿಗಲ್ ಕೆರೆಯಿಂದ ಆನೆ ಮಡುವಿನ ಮೂಲಕ ಬರುವ ನೀರು ಎಂದು ಹೇಳಿದ್ದರು. ಜಾತ್ರೆ ಮುಗಿದ ನಂತರ ಕೊತ್ತಗೆರೆಗೆ ಸೋದರ ಮಾವನ ಮನೆಗೆ ಹಿಂತಿರುಗಿದ ಮೇಲೆ ಅಜ್ಜಿಯು ನನ್ನನ್ನ ಕೊತ್ತಗೆರೆಯ ಕೆರೆಯ ಏರಿ ಕೆಳಗಿರುವ ರುದ್ರಭೂಮಿಗೆ ಕರೆದುಕೊಂಡು ಹೋಗಿ ನನ್ನ ತಾತ ಮತ್ತು ಪೂರ್ವಜರ ಸಮಾಧಿಗಳನ್ನೆಲ್ಲಾ ತೋರಿಸಿದಳು. ನಂತರ ಕೆರೆಯ ಏರಿ ಮೇಲೆ ಕರೆದುಕೊಂಡು ಹೋಗಿ ಏರಿಯ ಪಕ್ಕದಲ್ಲಿರುವ ಅಡಿಕೆ ತೋಟಗಳ ಪಕ್ಕದಲ್ಲಿ ಒಂದು ಚಿಕ್ಕ ಕಲ್ಲಿನ ಗುಹೆಯ ರೀತಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ದೇವಸ್ಥಾನದ ಒಳಗಡೆ ಒಂದು ಶಿವಲಿಂಗವಿತ್ತು. ಅದು ಕೊತ್ತಪ್ಪನ ದೇವಸ್ಥಾನವಾಗಿತ್ತು. ನನ್ನ ಅಜ್ಜಿ ಭಕ್ತಿಯಿಂದ ಕೊತ್ತಪ್ಪನಿಗೆ ಪೂಜೆ ಮಾಡುತ್ತಿದ್ದಳು. ಅವರು ಕೊತ್ತಪ್ಪನಿಗೆ ಪೂಜೆ ಮಾಡುತ್ತಿರುವುದನ್ನ ನೋಡಿ ಕೊತ್ತಪ್ಪ ಯಾರೆಂದು ಕೇಳಿದಾಗ ಅವರು ಕೊತ್ತಪ್ಪನ ಈ ಕಥೆ ಹೇಳಿದಳು.
ಚೋಳರ ಕಾಲದಲ್ಲಿ ಕೊತ್ತಪ್ಪ ಆನೆ ಮಡುವಿನ ಬಲಕ್ಕಿರುವ ಗಂಗೇನಹಳ್ಳಿಯಲ್ಲಿ ಹುಟ್ಟಿದವನು. ಮಕ್ಕಳಿಲ್ಲದ ಬಡವರಾಗಿದ್ದ ಅವನ ತಂದೆ ತಾಯಿಗಳಿಗೆ ಬಹಳ ವರ್ಷಗಳ ನಂತರ ಹುಟ್ಟಿದವನು ಕೊತ್ತಪ್ಪ. ಅವನು ಮಗುವಾಗಿದ್ದಾಗ ಒಂದು ಮರದ ಕೆಳಗೆ ಮಲಗಿಸಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅವನ ತಂದೆ ತಾಯಿಗಳು ಬಂದು ನೋಡುವಾಗ ಒಂದು ನಾಗರಹಾವು ಹೆಡೆತೆರೆದು ಅವನಿಗೆ ನೆರಳನ್ನ ಕೊಡುತ್ತಿತ್ತು. ಆ ಸಮಯಕ್ಕೆ ಅಲ್ಲಿಗೆ ಬಂದ ಜಂಗಮರೊಬ್ಬರು ಇದು ಸಾಮಾನ್ಯ ಮಗುವಲ್ಲ ತುಂಬಾ ಕೀರ್ತಿತರುವ ಮಗು ಎಂದು ಅವರ ತಂದೆ ತಾಯಿಗೆ ಹೇಳಿದರು. ಅಲ್ಲಿಯೇ ಒಂದು ಶಿವಾಲಯವನ್ನ ಕಟ್ಟಿಸಲು ಹೇಳಿದರು. ಸ್ವಲ್ಪ ಕಪ್ಪಾಗಿದ್ದ ಕೊತ್ತಪ್ಪ ಗಾತ್ರದಲ್ಲಿ ಮತ್ತು ಎತ್ತರದಲ್ಲಿ ಅಜಾನುಬಾಹುವಾಗಿ ಬೆಳೆದ. ಅವನ ಮುಖದಲ್ಲಿ ಭಾರಿಗಾತ್ರದ ಮೀಸೆ ಇತ್ತು, ಸದಾ ಕೆಂಪಾಗಿರುತ್ತಿದ್ದ ಕಣ್ಣುಗಳು ಮತ್ತು ಕಟ್ಟು ಮಸ್ತಾದ ದೇಹದಿಂದ ನೋಡುವವರಲ್ಲಿ ಭಯ ಹುಟ್ಟಿಸುತ್ತಿದ್ದ. ಆದರೇ ಅಂತರಂಗದಲ್ಲಿ ದೊಡ್ಡ ಶಿವಭಕ್ತನಾಗಿದ್ದ. ಅವನು ಹುಟ್ಟುವಾಗ ಜಂಗಮರ ಕೊಟ್ಟ ಅಣತಿಯ ಮೇರೆಗೆ ಅದೇ ಜಾಗದಲ್ಲಿ ಶಿವಾಲಯವನ್ನ ಕಟ್ಟಿಸಲು ಕೊತ್ತಪ್ಪ ಗುಂಡಿ ತೋಡುತ್ತಿರುವಾಗ ಚಿನ್ನ ತುಂಬಿದ ದೊಡ್ಡ ಕೊಳಗವೊಂದು ಸಿಕ್ಕಿತು. ಆಗ ಅಲ್ಲಿ ಒಂದು ಬೃಹತ್ ಶಿವಲಿಂಗ ಮತ್ತು ನಂದಿಯ ಸ್ಥಾಪನೆ ಮಾಡಿ ದೇವಸ್ಥಾನವನ್ನ ಕಟ್ಟಿಸಿದ. ಆ ದೇವಸ್ಥಾನವನ್ನು ಗಂಗೇನಹಳ್ಳಿಯ ಬಯಲಿನಲ್ಲಿ ತಾವು ಇಂದಿಗೂ ನೋಡಬಹುದು.
ನಂತರ ಚೋಳರ ಆಡಳಿತದಲ್ಲಿ ಆ ಭಾಗದ ಪಾಳೇಯಗಾರನಾಗಿ ಕೊತ್ತಪ್ಪನನ್ನ ನೇಮಿಸಿಸದರು. ಬೇಸಿಗೆಯಲ್ಲಿ ಚಿಕ್ಕ ಚಿಕ್ಕ ತೊರೆಗಳ ನೀರೆಲ್ಲಾ ಹರಿದು ಹೋಗಿ ಕಾವೇರಿಯ ಮೂಲಕ ಸಮುದ್ರ ಸೇರುತ್ತಿದ್ದರಿಂದ ಅಲ್ಲಿನ ಜನರಿಗೆ ನೀರಿಲ್ಲದೆ ತುಂಬಾ ತೊಂದರೆಯಾಗುತ್ತಿತ್ತು. ಆಗ ಜನರೆಲ್ಲಾ ಸೇರಿ ಕೊತ್ತಪ್ಪನ ಹತ್ತಿರ ತಮ್ಮ ಅಳಲನ್ನ ತೋಡಿಕೊಂಡರು. ಜನರ ಸಮಸ್ಯೆಗೆ ಸ್ಪಂದಿಸಿದ ಕೊತ್ತಪ್ಪ ಎರಡು ಕೆರೆಗಳನ್ನ ಕಟ್ಟಿಸಲು ಮುಂದಾದ. ಅದಕ್ಕಾಗಿ ಬೇಕಾದ ಕಲ್ಲುಗಳನ್ನ ಕೊತ್ತಗೆರೆ ಪಕ್ಕದಲ್ಲಿರುವ ಕರಿಕಲ್ಲಿನ ಗುಡ್ಡದಿಂದ ಆನೆ, ಕಾಡುಕೋಣ ಮತ್ತು ಎತ್ತುಗಳ ಸಹಾಯದಿಂದ ಅವುಗಳನ್ನ ಎರಡು ಕೆರೆಯ ಏರಿ ನಿರ್ಮಾಣ ಮಾಡಲು ಬಳಸಿಕೊಂಡ. ಆಂಧ್ರಭಾಗದಿಂದ ಕಲ್ಲು ವಡ್ಡರುಗಳನ್ನ ಕರೆಸಿ ಆ ಕರಿಕಲ್ಲುಗಳಿಗೆ ದೊಡ್ಡ ದೊಡ್ಡ ಗುಂಡಿನ ಆಕಾರವನ್ನು ಕೊಡಿಸಿ, ಅವುಗಳಿಂದ ಎರಡು ಕೆರೆಯ ಏರಿಗಳನ್ನ ನಿರ್ಮಾಣ ಮಾಡಿಸಿದ. ಎರಡು ಕೆರೆಗಳ ಏರಿ ನಿರ್ಮಾಣವಾದ ಮೇಲೆ ಒಂದು ಸುಂದರವಾದ ಸೋಮೇಶ್ವರ ದೇವಸ್ಥಾನವನ್ನ ಕುಣಿಗಲ್ ಕೆರೆಯ ದಕ್ಷಿಣ ಭಾಗಕ್ಕೆ ಕಟ್ಟಿಸಿದ. ಕುಣಿಗಲ್ ಕೆರೆಗೆ ಕೊತ್ತಗೆರೆಯ ಹತ್ತಿರ ಒಂದು ಕುಣಿಗಲ್ ಸಮೀಪ ಮತ್ತೋಂದು ಎರಡು ದೊಡ್ಡ ತೂಬುಗಳು ನಿರ್ಮಾಣ ಮಾಡಿಸಿದ.
ಎರಡು ಕೆರೆಯ ನಿರ್ಮಾಣ ಮಾಡಲು ಸುಮಾರು ಐದಾರು ವರ್ಷಗಳು ಬೇಕಾಯಿತು. ಆ ವೇಳೆಗಾಗಲೇ ಕುಣಿಗಲ್ ಕೆರೆ ಸಂಪೂರ್ಣ ನಿರ್ಮಾಣವಾಗಿತ್ತು. ಕೊತ್ತಗೆರೆ ಕೆರೆ ಮುಕ್ಕಾಲು ಭಾಗ ಪೂರ್ಣಗೊಂಡಿತ್ತು. ಒಂದು ದಿನ ಕೊತ್ತಪ್ಪನಿಗೆ ತಾನು ಕಟ್ಟಿಸಿದ ಕೆರೆಗಳನ್ನು ಸುಮಾರು ಆರು ಕಿಮೀ ದೂರದಲ್ಲಿ ಕೆರೆಗಳ ಪಶ್ಚಿಮಕ್ಕಿರುವ ರಂಗನಾಥಸ್ವಾಮಿ ಬೆಟ್ಟದ ಮೇಲೆ ನಿಂತು ನೋಡುವ ಆಸೆಯಾಯಿತು. ಅದರಂತೆ ಬೆಟ್ಟದ ಮೇಲೆ ನಿಂತು ನೋಡಿದ ಕೊತ್ತಪ್ಪನಿಗೆ ಶಿವಗಂಗೆ ಮತ್ತು ಹುತ್ತರಿ ದುರ್ಗದ ಬೆಟ್ಟಗಳು ಎರಡು ಕೆರೆಗಳ ನಡುವೆ ಸುಂದರವಾಗಿ ಕಾಣುತ್ತಿದ್ದವು. ಆದರೆ ಕೊತ್ತಪ್ಪನ ಮನಸ್ಸಿಗೆ ಕೆರೆಯ ಕೆಲಸ ತೃಪ್ತಿ ತಂದು ಕೊಟ್ಟಿರಲಿಲ್ಲ. ಆ ದಿನ ರಾತ್ರಿ ಮಲಗಿದಾಗ ಕನಸಿನಲ್ಲಿ ಮತ್ತೇ ಜಂಗಮರು ಬಂದು ಆ ಎರಡು ಕೆರೆಗಳನ್ನ ಕೂಡಿಸಿದರೆ ಆ ಸೀಮೆಯಲ್ಲಿಯೇ ಅತಿ ದೊಡ್ಡ ಕೆರೆಯೆಂದು ಖ್ಯಾತಿ ಪಡೆಯುತ್ತದೆ ಎಂದು ಹೇಳಿದರು. ಅವರ ಆಜ್ಞೆಯಂತೆಯೇ ಕೊತ್ತಪ್ಪ ಆ ಎರಡು ಕೆರೆಗಳನ್ನ ಕೂಡಿಸಲು ಸಿದ್ದನಾದ. ಅಷ್ಟೋಂದು ಭಾರೀ ಪ್ರಮಾಣದ ನೀರನ್ನ ಉಳಿಸಿದರೆ ಸಾವಿರಾರು ಎಕರೆ ಭೂಮಿಗೆ ವರ್ಷಪೂರ್ತಿ ನೀರು ಹರಿಸಬಹುದೆಂದು ಚಿಂತಿಸಿದ.
ಆದರೆ ಬಹಳ ವರ್ಷಗಳಿಂದ ಕೆರೆಯ ನಿರ್ಮಾಣಕ್ಕೆ ಬಂದು ಇಲ್ಲಿಯೇ ಉಳಿದಿದ್ದ ವಡ್ದರುಗಳು ತಮ್ಮ ತಮ್ಮ ಊರುಗಳಿಗೆ ಹೋಗಲು ತವಕಿಸುತ್ತಿದ್ದರು. ದೈಹಿಕವಾಗಿಯೂ ಬಹಳ ದಣಿದಿದ್ದರು. ಒಂದೇ ರೀತಿಯ ಕೆಲಸವನ್ನೂ ಮಾಡುತ್ತಾ ಬೇಸತ್ತಿದ್ದ ಅವರುಗಳಿಗೆ ಕೆರೆಯ ಕೆಲಸವನ್ನ ಮುಂದುವರೆಸಲು ಇಷ್ಟವಿರಲಿಲ್ಲ. ಅದು ಒಂದು ರೀತಿ ಆ ಕೆಲಸ ಅವರಿಗೆ ಬಂಧನವಾಗಿತ್ತು. ಕೊತ್ತಪ್ಪನ ಮಹತ್ವಾಕಾಂಕ್ಷೆಯನ್ನ ಕಾರ್ಯರೂಪಕ್ಕೆ ತರಲು ಆಗುವುದಿಲ್ಲವೆಂದು ಅವನಿಗೆ ನೇರವಾಗಿ ಹೇಳಿದರು. ಎರಡು ಕೆರೆಗಳನ್ನ ಒಂದಾಗಿಸುವ ಕೆಲಸ ಬೇಡವೆಂದು ಅವನಲ್ಲಿ ನಮ್ರತೆಯಿಂದ ಬೇಡಿಕೊಂಡರು. ಪಾಳೆಯಗಾರನಾಗಿದ್ದ ಕೊತ್ತಪ್ಪ ಅವರ ಮಾತಿಗೆ ಎಳ್ಳಷ್ಟು ಬೆಲೆಕೊಡಲಿಲ್ಲ. ದಣಿದು ಬಸವಳಿದ ವಡ್ಡರುಗಳು ಕೊತ್ತಪ್ಪನನ್ನ ಕೊಲ್ಲುವ ಸಂಚು ಮಾಡಿದರು. ಕೊತ್ತಗೆರೆ ಕೆರೆಯ ಏರಿಯ ಪಕ್ಕದಲ್ಲಿ ಒಂದು ಜಾಗ ನೋಡಿದರು. ಆ ಜಾಗದಲ್ಲಿ ಆನೆಗಳಿಗೆ ಬುದ್ದಿಕಲಿಸುವ “ಖೆಡ್ದಾ” ದ ರೀತಿಯಲ್ಲಿ ಒಂದು ಕೋಣೆಯಷ್ಟು ದೊಡ್ಡ ಗುಂಡಿಯೊಂದನ್ನ ತೋಡಿ ಅದರಮೇಲೆ ಮರದ ಕೋಲುಗಳನ್ನ ಜೋಡಿಸಿ, ಮುತ್ತುಗದ ಮರದ ಎಲೆಗಳನ್ನ ಚಾಪೆಯ ರೀತಿ ಹರಡಿ, ಎಲೆಗಳ ಮೇಲೆ ಮಣ್ಣನ್ನು ಹಾಕಿದರು. ಆ ಮಣ್ಣಿನ ಮೇಲೆ ಒಂದು ಕುರ್ಚಿಯನ್ನಿಟ್ಟು ಕೊತ್ತಪ್ಪ ಬಂದಾಗ ಕೂರಲು ಹೇಳಿದರು. ಸಂತೋಷದಿಂದಲೇ ಬಂದ ಕೊತ್ತಪ್ಪ ಆ ಕುರ್ಚಿಯ ಮೇಲೆ ಕುಳಿತಾಗ ಸುಮಾರು ಇಪ್ಪತ್ತು ಅಡಿಯ ಆಳಕ್ಕೆ ಬಿದ್ದ. ಆ ತಕ್ಷಣವೇ ಕೊತ್ತಪ್ಪನ ಮೇಲೆ ಕಲ್ಲು ಮತ್ತು ಮಣ್ಣುಗಳನ್ನ ಸುರಿದು ಅಲ್ಲಿಯೇ ಜೀವಂತ ಸಮಾಧಿಯನ್ನ ಮಾಡಿದರು. ಈ ರೀತಿ ಎರಡು ಕೆರೆಗಳನ್ನ ಕೂಡಿಸುವ ಕೊತ್ತಪ್ಪನ ಆಸೆ ಅವನ ಜೊತೆಯೇ ಮಣ್ಣಾಗಿ ಹೋಯಿತು.
ಈ ತರಹ ಅವನ ಮಹತ್ವಾಕಾಂಕ್ಷೆಯೇ ಕೊತ್ತಪ್ಪನಿಗೆ ಮುಳ್ಳಾಯಿತು. ಕೊತ್ತಪ್ಪ ಮಡಿದ ಜಾಗದಲ್ಲಿ ಒಂದು ವಾರದ ನಂತರ ಕೊತ್ತಗೆರೆ ಮತ್ತು ಗಂಗೇನಹಳ್ಳಿಯ ಜನ ಅವನ ಜ್ಞಾಪಕಾರ್ಥವಾಗಿ ಒಂದು ಚಿಕ್ಕ ಕಲ್ಲಿನ ದೇವಾಲಯವನ್ನ ಕಟ್ಟಿದರು. ಆ ದೇವಾಲಯದಲ್ಲಿ ಪ್ರತೀವರ್ಷ ಸಂಕ್ರಾತಿಯ ದಿನ ಕೊತ್ತಪ್ಪನಿಗೆ ಪೂಜೆಮಾಡಿ ಅನ್ನ ಸಂತರ್ಪಣೆ ಮಾಡುತ್ತಿದ್ದರು. ಇದನ್ನ ತಲೆತಲಾಂತರದಿಂದ ಜನರು ನಡೆಸಿಕೊಂಡು ಬರುತ್ತಿದ್ದರು. ಕೊತ್ತಗೆರೆಯ ಪಟೇಲರು, ಶಾನುಭೋಗರಾದ ವೀರಭದ್ರಪ್ಪನವರು ಮತ್ತು ನನ್ನ ತಾತ ಬದುಕಿರುವವರೆಗೂ ತಪ್ಪದೇ ಅನ್ನ ಸಂತರ್ಪಣೆ ನೆಡೆಸುತ್ತಿದ್ದರು. ನನ್ನ ತಾತ ಸತ್ತ ಮೇಲೆ ಜನ ಕೊತ್ತಪ್ಪನನ್ನ ಮರೆತರೂ ನನ್ನ ಇಬ್ಬರೂ ಅಜ್ಜಿಗಳು ಮಾತ್ರ ವರ್ಷಕ್ಕೊಮ್ಮೆ ಆ ದೇವಾಲಯದಲ್ಲಿ ಕೊತ್ತಪ್ಪನಿಗೆ ವಿಶೇಷ ಪೂಜೆಮಾಡುತ್ತಿದ್ದರು. ಆದರೆ ಈಗ ಪ್ರತಿ ಶಿವರಾತ್ರಿಯ ದಿನ ಕೊತ್ತಪ್ಪ ಕಟ್ಟಿಸಿದ ಗಂಗೇನಹಳ್ಳಿಯ ಶಿವಾಲಯದಲ್ಲಿ ಸಾವಿರಾರು ಜನ ಸೇರಿ ಪೂಜೆಮಾಡುತ್ತಾರೆ. ಸೋಮೇಶ್ವರ ದೇವಾಲಯದಲ್ಲಿ ಪ್ರತಿದಿನವೂ ಪೂಜೆನೆಡೆಯುತ್ತದೆ.
ಕೊತ್ತಪ್ಪನ ಕಥೆ ಹೇಳುತ್ತಿದ್ದ ನನ್ನ ಅಜ್ಜಿಯೂ ಕೂಡ ಈಗ ಬದುಕಿಲ್ಲ. ನನ್ನ ಅಜ್ಜಿ ಸಾಯುವಾಗ ಕುಣಿಗಲ್ ಮತ್ತು ಕೊತ್ತಗೆರೆ ಕೆರೆಯ ನೀರನ್ನ ಅವರ ಬಾಯಿಗೆ ಬಿಟ್ಟಾಗಲೇ ಅವರ ಪ್ರಾಣ ಹೋಗಿದ್ದು. ಅಜ್ಜಿ ಸಾಯುವ ಮುನ್ನ ತನ್ನ ದೇಹವನ್ನ ಕೊತ್ತಗೆರೆ ಕೆರೆಯ ಪಕ್ಕದಲ್ಲಿರುವ ಕೊತ್ತಪ್ಪನ ದೇವಾಲಯಕ್ಕೆ ಹತ್ತಿರವಿರುವ ರುದ್ರಭೂಮಿಯಲ್ಲಿ ಮಣ್ಣು ಮಾಡಲು ಹೇಳಿದ್ದಳು. ಅಲ್ಲಿಯೇ ಮಣ್ಣು ಮಾಡಿದ್ದು ಕೂಡ. ಈಗ ಕೊತ್ತಪ್ಪನ ದೇವಸ್ಥಾನ ಸರಿಯಾಗಿ ನೋಡಿಕೊಳ್ಳುವವರಿಲ್ಲದೆ ಹಾಳುಬಿದ್ದು ಲಂಟಾನ ಗಿಡಗಳಿಂದ ಮುಚ್ಚಿಕೊಂಡಿದೆ. ಇತ್ತೀಚೆಗೆ ಹೇಮಾವತಿ ನದಿಯ ನೀರನ್ನು ಗೋರೂರು ಜಲಾಶಯದಿಂದ ಬಿಟ್ಟಿರುವುದರಿಂದ ಕುಣಿಗಲ್ ಕೆರೆ ಮತ್ತು ಕೊತ್ತಗೆರೆ ಕೆರೆಗಳು ಮತ್ತೇ ತುಂಬಿಕೊಂಡಿವೆ. ಆದರೆ ಕೊತ್ತಪ್ಪ ಈಗ ಬರೀ ಕಥೆ ಮಾತ್ರ.
 

‍ಲೇಖಕರು G

15 May, 2015

24 Comments

  1. prathibha nandakumar

    tumbaa chennaagide

  2. Paramesha Mahadevapa

    Good story

  3. jyothi

    Nice one.really great. You collected all the things needed. And also presented well good luck

  4. Vishwaprakash mahadimane

    Good story well narrated sir you have collected minute details and reveals the history.

  5. Manjunath

    ತುಂಬಾ ಚೆನ್ನಾಗಿ ಬರೆದಿದ್ದಿಯಾ ಪ್ರಸನ್ನ !!

  6. Prasanna Santhekadur

    Thank you Prathibha madam.

  7. Prasanna Santhekadur

    Thank you Paramesha and Vishwaprakash.

  8. Prasanna Santhekadur

    Thank you Jyothi.

  9. Anonymous

    Nice one prasanna thumba chennagide narration. Even i red urs previous one Gandhiji park

  10. Eswara Prasad

    Dear Prasanna:well articulated story.you have great flair for writing. Thanks for sharing this story. I really enjoyed reading.

  11. Prasanna Santhekadur

    Thank you so much Eshwara Prasad for your kind words and support.

  12. Pushpalatha Mudalamane

    Very Touching Story Prasanna…….

  13. ಲಲಿತಾ ಸಿದ್ಧಬಸವಯ್ಯ

    ಪ್ರಸನ್ನರೆ, ಲೇಖನ ಓದುತ್ತ ನಾನು ಇಹ ಮರೆತೆ. ಈ ಊರುಗಳು ಕುರಂಕೋಟೆ, ಕೊತ್ತಗೆರೆ, ಕಾಗ್ಗೆರೆ ಇವೆಲ್ಲ ಒಂದುಕಾಲದಲ್ಲಿ ನಮ್ಮ ನೆಂಟರಿದ್ದ ಊರುಗಳು. ಈಗ ಅವರೂ ಚೆದುರಿ ಹೋಗಿದ್ದಾರೆ,ನಾನಾಕಡೆ ಜೀವನೋಪಾಯಕ್ಕೆ. ಆದರೆ ಈ ವಿವರಗಳು ಗೊತ್ತಿರಲಿಲ್ಲ. ಬಹಳ ಖುಷಿಯಾಯಿತು. ಇಂಥವೆಲ್ಲ ಕ್ರಮೇಣ ಮರೆತೆಹೋಗುತ್ತವೆ. ಹೀಗೆ ನೆನಪುಳಿಸಿಕೊಂಡವರು ದಾಖಲಿಸುವುದು ಒಳ್ಳೆ ಕೆಲಸ. ಧನ್ಯವಾದಗಳು.

  14. Gn Nagaraj

    ಈ ಇತಿಹಾಸ ಚೇನ್ನಾಗಿ ಮೂಡಿ ಬಂದಿದೆ. ಯಾರಾದರೂ ಇಬಗ್ಗೆ ಸಂಶೋಧನೆ ಮಾಡಿದ್ದಾರೆಯೇ , ಇಲ್ಲವಾದರೆ ಮಾಡಿ ಅದನ್ನು ತುಮಕೂರು ಜಿಲ್ಲೆಯ ಪ್ರಾದೇಶಿಕ ಿತಿಹಾಸದ ಭಾಗವಾಗಿಸಬೇಕು. ಇಂತಹ ೈತಿಹ್ಯಗಳನ್ನು ಸರಿಯಾದ ಆಧಾರಗಳ ಪರಿಶೀಲನೆಗೊಳಪಪಡಿಸಿ ಮೇಲೆ ಿತಿಹಾಸ ಕಟ್ಟಬೇಕು.

  15. Prasanna Santhekadur

    Thank you Pushpalatha madam for your support and kind words.

  16. Prasanna Santhekadur

    Thank you Lalitha madam for your support and kind words.

  17. Anonymous

    I am speech less. Story survey is excellent. Very nice narration

  18. Prasanna Santhekadur

    Thank you very much Nagaraj Sir.

  19. Chhaya

    Thumba chennagide Prasanna,heege bareetha iru

  20. Prasanna Santhekadur

    Thank you so much Chaya.

  21. Anonymous

    ಇತಿಹಾಸ ಇಲ್ಲದವನಿಗೆ ಭವಿಷ್ಯವೂ ಇರುವುದಿಲ್ಲವಂತೆ. ನಮ್ಮ ಪೂರ್ವಜರು ಇಟ್ಟ ಪ್ರತಿ ಹೆಜ್ಜೆಯೂ ನಮಗೆ ದಾರಿ ದೀಪ. ಅವರ ಶ್ರಮದ ಫಲದಿಂದಾಗಿ ನಾವು ಅನ್ನ ಉಣ್ಣುತ್ತಿದ್ದೇವೆ ಅಷ್ಟೆ. ಅವರು ಭವಿಷ್ಯತ್ತಿಗಾಗಿ ತಮ್ಮ ಮುಂದಿನ ಪೀಳಿಗೆಗಾಗಿ ಕಷ್ಟಪಟ್ಟು ಬೆವರು ಸುರಿಸಿ ಕೆರೆ ಕಟ್ಟೆಗಳನ್ನು ಕಟ್ಟಿಸಿದರು. ಆದರೆ, ನಾವು ಮುಂದಿನ ಪೀಳಿಗೆ ಬಗ್ಗೆ ಆಲೋಚನೆಯನ್ನೇ ಮಾಡುತ್ತಿಲ್ಲ. ಹಿರಿಯರು ಸ್ವ ಸಾಮರ್ಥ್ಯದಿಂದ ಕಟ್ಟಿಸಿದ ಕರೆಗಳನ್ನು ಮುಚ್ಚುತ್ತಿದ್ದೇವೆ, ಒತ್ತುವರಿ ಮಾಡುತ್ತಿದ್ದೇವೆ, ಕಲುಷಿತಗೊಳಿಸುತ್ತಿದ್ದೇವೆ. ಕನಿಷ್ಟ ಅವುಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲೂ ನಮ್ಮ ಕೈಲಾಗುತ್ತಿಲ್ಲ. ಅಷ್ಟೊಂದು ಸೋಮಾರಿಗಳಾಗಿದ್ದೇವೆ. ಪ್ರಸನ್ನ ನೀವು ದಾಖಲಿಸಿರುವ ಇತಿಹಾಸ ಓದಿ ನನಗೆ ನಮ್ಮ ಅಪ್ಪ ಹೇಳುವ ಅವರ ಪೂರ್ವಜರ ಇತಿಹಾಸ ನೆನಪಿಗೆ ಬಂದಿತು. ನಮ್ಮ ಪೂರ್ವಜರೂ ತುಮಕೂರು ಜಿಲ್ಲೆ ತುರುವೆಕೆರೆಯವರು. ತುರುವೆಕೆರೆ ಎಂದರೆ ನನಗೆ ಪಂಚಪ್ರಾಣ. ನಮ್ಮೂರು, ನಮ್ಮ ಪೂರ್ವಜರ ಇತಿಹಾಸ ನೆನಪಿಸಿಕೊಳ್ಳುದಷ್ಟೇ ಅಲ್ಲ ದಾಖಲಿಸುವ ಪ್ರಯತ್ನವಾಗಬೇಕು. ನಿಮ್ಮ ಬರವಣಿಗೆ ಅತ್ಯುತ್ತಮವಾಗಿದೆ. ನಿಮ್ಮಿಂದ ಮತ್ತಷ್ಟು ಉತ್ತಮ ಬರಹಗಳನ್ನು ನಿರೀಕ್ಷಿಸುತ್ತೇನೆ.

  22. Prasanna Santhekadur

    ಸಂತೋಷ್ ಅವ್ರೇ, ನಿಮ್ಮ ಅನಿಸಿಕೆ ಮತ್ತು ಹಾರೈಕೆಗಳಿಗೆ ವಂದನೆಗಳು.

  23. Anonymous

    really very nice ha dinada sumadura kshanagalu meluku akuvudu mudina balige nandi

  24. Prasanna Santhekadur

    Thank you Prakasha.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading