ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರಸನ್ನ' ರಾಮಾಯಣ

ಖ್ಯಾತ ರಂಗನಿರ್ದೇಶಕ ಪ್ರಸನ್ನ ಹೊಸ ರಾಮಾಯಣ ಅನ್ವೇಷಣೆಯೊಂದಿಗೆ ಓದುಗರ ಮುಂದೆ ಬರುತ್ತಿದ್ದಾರೆ. ‘ಮೂಲ ರಾಮಾಯಣ’ ಹೆಸರಿನ ಈ ಕೃತಿಯನ್ನು ಅವರದ್ದೇ ‘ಒಂಟಿದನಿ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಗೆ ಪ್ರಸನ್ನ ಬರೆದ ಹಿನ್ನುಡಿ ಇಲ್ಲಿದೆ-

ಪ್ರಸನ್ನ 
ಮೂಲ ರಾಮಾಯಣ ವಾಲ್ಮೀಕಿ ರಾಮಾಯಣದ ಅನುವಾದವಲ್ಲ. ವಾಲ್ಮೀಕಿ ರಾಮಾಯಣದ ಮೂಲ ಆಶಯ ಹಾಗೂ ಸಮಕಾಲೀನ ಸಂದರ್ಭ ಎರಡನ್ನೂ ಗಮನದಲ್ಲಿರಿಸಿಕೊಂಡು ಬರೆದ ಕೃತಿಯಿದು. ನಿಮ್ಮ ಮುಂದಿರುವುದು ಬಾಲಕಾಂಡ ಹಾಗೂ ಅಯೋಧ್ಯಾ ಕಾಂಡಗಳನ್ನು ಒಳಗೊಂಡಿರುವ ಕೃತಿಯ ಮೊದಲಭಾಗ. ರಾಮಾಯಣವನ್ನು ಅರಿಯುವ ಪ್ರಯತ್ನ ಸುಲಭವಲ್ಲ, ಪ್ರಯತ್ನಿಸಿದ್ದೇನೆ ಮಾತ್ರ. ರಾಮಾಯಣದ ವಿಶ್ಲೇಷಣೆಯನ್ನು ಸಮಕಾಲೀನ ಸಂದರ್ಭದಿಂದಲೇ ಆರಂಭಿಸುತ್ತೇನೆ.
ಮಂದಿರ ನಿರ್ಮಾಣ ಚಳುವಳಿ
೧೯೯೧ರ ಸರಿಸುಮಾರಿನಲ್ಲಿ, ಈ ದೇಶದಲ್ಲಿ ರಾಮಮಂದಿರ ನಿರ್ಮಾಣ ಚಳುವಳಿ ನಡೆದಿತ್ತು. ಚಳುವಳಿಯು ಹಿಂದು ಮುಸಲ್ಮಾನ ಸಮುದಾಯಗಳ ನಡುವಿನ ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳಿಂದಾಗಿ ಆರಂಭವಾಗಿತ್ತು, ಹಿಂಸಾತ್ಮಕವಾಗುವ ಸಾಧ್ಯತೆಯಿತ್ತು. ನಾನು ಚಿಂತಿತನಾಗಿದ್ದೆ. ಹಾಗಾಗಿ, ಆವರೆಗೆ ಕೇವಲ ಸಮಾಜವಾದದ ಚಿಂತನೆ ಮಾಡುತ್ತಿದ್ದ ನಾನು ರಾಮನ ಚಿಂತೆ ಮಾಡತೊಡಗಿದೆ. ರಾಮನನ್ನು ಅರಿಯುವ ನನ್ನ ಪ್ರಯತ್ನವು ಹೀಗೆ, ಮಂದಿರ ನಿರ್ಮಾಣ ಚಳುವಳಿಗೆ ಪ್ರತಿಕ್ರಿಯೆಯಾಗಿ ೧೯೯೧ ರಲ್ಲಿ ಆರಂಭವಾಯಿತು.
ಅಗ್ನಿಪ್ರಳಯದ ಅಪಾಯ
ಎರಡನೆಯ ಸಂದರ್ಭವನ್ನು ನಾನು ಅಗ್ನಿಪ್ರಳಯದ ಅಪಾಯ ಎಂದು ಕರೆಯಲು ಬಯಸುತ್ತೇನೆ. ವಿಜ್ಞಾನಿಗಳು ಇದನ್ನು ಪೃಥ್ವಿ ಬಿಸಿಯಾಗುತ್ತಿರುವ ಸಂದರ್ಭ ಎಂದು ವಿವರಿಸುತ್ತಾರೆ. ಇದರ ಲಕ್ಷಣಗಳು ಇಂತಿವೆ. ಮಳೆಬೆಳೆ ಏರುಪೇರಾಗುವುದು, ಅತಿಯಾದ ಬಿಸಿಲು, ಅತಿವೃಷ್ಟಿಅನಾವೃಷ್ಟಿಗಳ ಮೂಲಕ ಬರಗಾಲ ಉಂಟಾಗುವುದು, ಇತ್ಯಾದಿ. ಇದೆಲ್ಲವೂ ನಮಗೀಗಾಗಲೇ ಅನುಭವಕ್ಕೆ ಬರತೊಡಗಿದೆ. ಆದರೆ ನಮ್ಮ ಅರಿವಿಗೆ ಬಾರದಿರುವ ವೈಜ್ಞಾನಿಕ ಸತ್ಯವೆಂದರೆ, ಇದು ಮಾನವ ನಿರ್ಮಿತ ಅನಾಹುತವಾಗಿದೆ. ಈ ಪ್ರಕ್ರಿಯೆಯನ್ನು ತತ್‌ಕ್ಷಣದಲ್ಲಿ ಹಿಮ್ಮೆಟ್ಟಿಸದಿದ್ದರೆ, ಕೇವಲ ಹದಿನೈದು ವರ್ಷಗಳಲ್ಲಿ ಹಿಮ್ಮೆಟ್ಟಿಸದಿದ್ದರೆ, ಹಿಮ್ಮೆಟ್ಟಿಸುವುದೇ ಅಸಾಧ್ಯವಾಗುತ್ತದಂತೆ. ಇದು ಅಗ್ನಿಪ್ರಳಯ.
ಜಲಪ್ರಳಯ
ಈವರೆಗೆ ನಾವು ಜಲಪ್ರಳಯದ ಬಗ್ಗೆ ಮಾತ್ರ ಕೇಳಿದ್ದೆವು. ಪುರಾಣಗಳಲ್ಲೂ ಕೇಳಿದ್ದೆವು, ವೈಜ್ಞಾನಿಕವಾಗಿಯೂ ಕೇಳಿದ್ದೆವು. ವಿಜ್ಞಾನವು ಜಲಪ್ರಳಯವನ್ನು ಪುರಾಣಗಳಿಗಿಂತ ಕೊಂಚ ಭಿನ್ನವಾಗಿ ನೋಡುತ್ತದೆ. ಐಸ್‌ಏಜ್ ಎಂದು ಅದನ್ನು ಕರೆಯುತ್ತದೆ. ಒಂದು ಲಕ್ಷ ವರ್ಷಗಳಿಗೊಮ್ಮೆ ಬರುತ್ತದೆ ಈ ಐಸ್‌ಏಜ್ ಅಥವಾ ಮಂಜಿನ ಯುಗ. ಈವರೆಗೆ ಅಂತಹ ಐದು ಐಸ್‌ಏಜ್‌ಗಳು ಆಗಿ ಹೋಗಿವೆ. ಆರನೆಯದು ಬರಲಿಕ್ಕೆ ಇನ್ನೂ ಎಂಬತ್ತು ಸಾವಿರ ವರ್ಷ ಬಾಕಿಯಿದೆ.
ಭೂಮಿ ಥಣ್ಣಗಾಗಿ ಮಂಜುಗಡ್ಡೆ ಉಂಟಾಗಿ ಬರಲಿರುವ ಈ ಜಲಪ್ರಳಯಕ್ಕೂ ಬಹಳ ಮೊದಲೇ ಮಾನವನಿರ್ಮಿತ ಅಗ್ನಿಪ್ರಳಯ ಬಂದೆರಗಲಿದೆ ನಮ್ಮ ಮೇಲೆ, ಹಾಗೂ ಸಕಲ ಜೀವಗಳನ್ನು ನಾಶಮಾಡಲಿದೆ. ಹಾಗಾದಾಗ ಭೂಮಿಯೂ ಸಹ ಮಿಕ್ಕ ಗ್ರಹಗಳಂತೆ ಜೀವವನ್ನು ಸಲಹುವ ಶಕ್ತಿ ಕಳೆದುಕೊಳ್ಳಲಿದೆ.
ಅತಿಯಾಗಿ ಇಂದನ ಉರಿಸುವುದು, ಅತಿಯಾಗಿ ಉತ್ಪಾದನೆ ಮಾಡುವುದು ಇತ್ಯಾದಿ, ಅತಿಯಾದ ಪುರುಷ ಪ್ರಯತ್ನ ಉಂಟುಮಾಡಲಿರುವ ಅನಾಹುತವಿದು. ಈಗಾಗಲೇ ನಮಗೆ ಅನುಭವಕ್ಕೆ ಬರುತ್ತಿರುವ ಇದರ ಪೂರ್ವಸೂಚನೆ ಕೇವಲ ಕಂತೆಪುರಾಣವಲ್ಲ, ಒಂದು ಭೀಕರ ವಾಸ್ತವ. ಈ ಅಪಾಯಕಾರಿ ವಾಸ್ತವದಿಂದ ಹೊರಬರಬೇಕಿದೆ ನಾವು.
ರೂಪಕ ಪ್ರಜ್ಞೆ
ನಾನೊಬ್ಬ ರಂಗಕರ್ಮಿ, ರೂಪಕಗಳ ನಡುವೆ ಕೆಲಸ ಮಾಡುವವನು ನಾನು. ಮೇಲಿನ ಎರಡೂ ಬೆಳವಣಿಗೆಗಳಿಗೆ ಗಾಢವಾದ ಸಂಬಂಧವಿದೆ ಎಂದು ನನ್ನ ರೂಪಕಪ್ರಜ್ಞೆ ಹೇಳತೊಡಗಿದೆ. ರಾಮನನ್ನು ಅರಿಯುವ ನಮ್ಮ ಪ್ರಯತ್ನವು ಪ್ರಕೃತಿಯನ್ನು ಸಲಹುವ ಪ್ರಯತ್ನವೂ ಆಗಬೇಕು, ಅತಿಯಾದ ಪುರುಷ ಪ್ರಯತ್ನವನ್ನು ಹಿಮ್ಮೆಟ್ಟಿಸುವ ಕೆಲಸವೂ ಆಗಬೇಕು ಎಂದು ಅದು ಹೇಳತೊಡಗಿದೆ.
೧೯೯೧ ರಲ್ಲಿ ನಾನು, ಒಂದು ರಂಗಪ್ರದರ್ಶನದ ಮೂಲಕವೇ ಈ ಕೆಲಸ ಶುರುಮಾಡಿದೆ. ಅತ್ತ, ರಥಯಾತ್ರೆ ಇಟ್ಟಿಗೆ ಸಂಗ್ರಹ ಬಾಬರಿ ಮಸೀದಿ ದ್ವಂಸ ಇತ್ಯಾದಿ ಗದ್ದಲಗಳು ನಡೆದಿದ್ದರೆ, ಇತ್ತ ನಾನು ಭವಭೂತಿಯ ಹೆಸರಾಂತ ಸಂಸ್ಕೃತ ನಾಟಕ ‘ಉತ್ತರರಾಮ ಚರಿತೆ’ ಆಡಿಸಿದೆ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೆಂದು ಹಿಂದಿಯಲ್ಲಿ ಆಡಿಸಿದ ಆ ರಂಗಪ್ರಸ್ತುತಿ ಒಂದು ಅಸಾಧಾರಣ ಅನುಭವವಾಗಿತ್ತು ನನಗೆ. ಹೊರಗೆ ಆಕ್ರೋಶಮಯ ವಾತಾವರಣವಿದ್ದರೆ, ತಾಲೀಮಿನ ಕೊಠಡಿಯೊಳಗೆ ರಾಮಸೀತೆಯರು ಪಡುತ್ತಿದ್ದ ಪಡಬಾರದ ಪಾಡನ್ನು ಕಂಡು ನಾನು ಕಣ್ಣೀರು ಕರೆಯುತ್ತಿದ್ದೆ. ಪುರುಷನ ಕಣ್ಣೀರು ಅದು.
ರಂಗ ನಿರ್ದೇಶಕರು ಕೆಲಸಮಾಡುವಾಗ ಕಣ್ಣೀರು ಕರೆಯಬಾರದಂತೆ, ಭಾವುಕರಾಗಬಾರದಂತೆ, ವೃತ್ತಿಪರರಾಗಿರಬೇಕಂತೆ. ರಂಗ ನಿರ್ದೇಶಕ, ಹೆಚ್ಚೂ ಕಡಿಮೆ ಒಬ್ಬ ಸರ್ವಾಧಿಕಾರಿ ಇದ್ದಂತೆ. ಗದರುತ್ತಾ ಗುಡುಗುತ್ತಾ ಪಾತ್ರಗಳ ಬದುಕನ್ನು ತಿದ್ದುತ್ತ, ಸೃಷ್ಟಿಕರ್ತ ಬ್ರಹ್ಮ ತಾನು ಎಂಬ ಅಹಂಕಾರಕ್ಕೆ ಬಲಿಯಾಗುತ್ತ, ಕೆಲಸ ಮಾಡುತ್ತಿರುತ್ತಾನೆ, ಆತ ಅಥವಾ ಆಕೆ. ಅಂತಹವರಿಗೆ ಕಣ್ಣೀರು ಬಂದರೆ ಹೇಗಿರಬೇಡ ಹೇಳಿ?
ವಿಚಿತ್ರ ಅನ್ನಿಸುತ್ತಿತ್ತು ನನಗೆ! ಇರುವುದು ಒಬ್ಬನೇ ರಾಮ. ಅದು ಹೇಗೆ ಅವನು ಆಕ್ರೋಶಕ್ಕೂ ಕಾರಣನಾಗುತ್ತಾನೆ, ಕಣ್ಣೀರಿನಕಥನಕ್ಕೂ ಕಾರಣನಾಗುತ್ತಾನೆ ಎಂಬ ಪ್ರಶ್ನೆ ಕಾಡುತ್ತಿತ್ತು ನನ್ನನ್ನು. ಯಾವುದು ಸರಿ, ರಾಮಕಥನವೇ ರಾಮಮಂದಿರವೇ ಎಂಬ ಪ್ರಶ್ನೆ ಕಾಡುತ್ತಿತ್ತು. ಉತ್ತರ ತಿಳಿಯಲೆಂದು ರಾಮಾಯಣದ ಆಳಕ್ಕಿಳಿದೆ. ಈಗ, ಹೆಚ್ಚೂಕಡಿಮೆ ಮೂರುದಶಕಗಳ ನಂತರ ಈ ರಾಮಕಥನವನ್ನು ಉತ್ತರ ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.
ಇದೇ ಹುಡುಕಾಟದ ಮತ್ತೊಂದು ಭಾಗವಾಗಿ ನಾನು ನಗರ ತೊರೆದೆ, ಹಳ್ಳಿ ಸೇರಿದೆ, ಹಳ್ಳಿಯ ಹೆಣ್ಣುಮಕ್ಕಳ ಸಂಘಟನೆ ಮಾಡಿದೆ. ಚರಕ, ದೇಸಿ, ಗ್ರಾಮ ಸೇವಾ ಸಂಘ, ಶ್ರಮಜೀವಿ ಆಶ್ರಮ, ಇತ್ಯಾದಿ ಸಂಸ್ಥೆಗಳನ್ನು ಕಟ್ಟಿದೆ. ಗ್ರಾಮಗಳು ಹಾಗೂ ಕೈಉತ್ಪಾದನಾ ಪದ್ಧತಿಯನ್ನು ಗಟ್ಟಿಗೊಳಿಸದೆ ಹೋದರೆ ರಾಮನಾಮಕ್ಕೆ ಯಾವುದೇ ಅರ್ಥವಿಲ್ಲ ಎಂದು ಅಲ್ಲಿ ಅರಿವಾಯಿತು ನನಗೆ
ರಾಮಾಯಣದ ಮೂಲ ರೂಪಕ
ರಾಮಸೀತೆಯರು ವ್ಯಕ್ತಿಗಳೂ ಹೌದು ರೂಪಕಗಳೂ ಹೌದು. ವ್ಯಕ್ತಿಗಳಾಗಿ ನೋಡಿದಾಗ, ರಾಮ ಒಬ್ಬ ಗಂಡಸು ಸೀತೆ ಒಬ್ಬ ಹೆಂಗಸು. ರೂಪಕವಾಗಿ ನೋಡಿ- ದಾಗ, ರಾಮ ಪುರುಷ ಅರ್ಥಾತ್ ಮಾನವ, ಸೀತೆ ಪ್ರಕೃತಿ. ಈ ಎರಡೂ ಸ್ಥಿತಿಯಲ್ಲಿ ಅವರು ಪ್ರೀತಿಪೂರ್ವಕ ಸಹಬಾಳ್ವೆ ನಡೆಸಲು ಹೆಣಗುತ್ತ ಸೋಲುತ್ತ ಗೆಲ್ಲುತ್ತ ಹಟಹಿಡಿದು ಮುಂದುವರೆಯಬೇಕು ಎನ್ನುತ್ತದೆ ರಾಮಾಯಣ. ಪ್ರಣಯಿಗಳಾಗಿ ದಂಪತಿಗಳಾಗಿ ಕಾಡು-ನಾಡು ಜೋಡಿಯಾಗಿ ಗ್ರಾಮ-ನಗರ ಜೋಡಿಯಾಗಿ ಸಹಜತೆ-ಸಭ್ಯತೆ ಜೋಡಿಯಾಗಿ ಎಲ್ಲ ಪ್ರಬೇಧಗಳಲ್ಲೂ, ಅವರು ಮಾಡಬೇಕಾದದ್ದು ಇದೇ ಪ್ರಯತ್ನವನ್ನೆ. ನಾವು ಮಾಡಬೇಕಾದದ್ದೂ ಇದನ್ನೆ.
ಯಾರೇ ಆಗಲಿ, ಜೋಡಿಗಳನ್ನು ಬೇರ್ಪಡಿಸಬಾರದು. ಬೇರ್ಪಡಿಸುವುದು ರಾಕ್ಷಸತನ ಅಥವಾ ರಾವಣತನ. ಇದು, ರಾಮಾಯಣದ ಮೂಲ ಆಶಯ.
ಏನಾಗುತ್ತದೆ ಜೋಡಿಗಳನ್ನು ಬೇರ್ಪಡಿಸಿದಾಗ? ಬೇರ್ಪಡಿಸಿದ್ದು ಇಬ್ಬರು ಪ್ರಣಯಿಗಳನ್ನಾದರೆ, ಬೇಡನ ಬಾಣದಿಂದಾಗಿ ಬೇರ್ಪಟ್ಟ ಕ್ರೌಂಚ ಪಕ್ಷಿಗಳಂತೆ ಅಥವಾ ರಾವಣನಿಂದಾಗಿ ಬೇರ್ಪಟ್ಟ ರಾಮ ಸೀತೆಯರಂತೆ, ನೋವು ಅನುಭವಿಸುತ್ತಾರೆ ಪ್ರಣಯಿಗಳು. ಇದನ್ನು ಅರಿಯಲಿಕ್ಕೆ ಕಷ್ಟವಿಲ್ಲ. ಬೇರ್ಪಡಿಸಿದ್ದು ಪುರುಷ-ಪ್ರಕೃತಿ ತತ್ವಗಳನ್ನಾದರೆ ಅರಿಯುವುದು ಕಷ್ಟ.
ಆಗ ಪ್ರಕೃತಿ ನೋಯುತ್ತದೆ. ಹಾಗೂ ಪುರುಷವು ನೋವನ್ನು ಅರಿಯುವ ಗುಣವನ್ನು ಕಳೆದುಕೊಳ್ಳುತ್ತದೆ. ಆಗ ಪುರುಷ ಅಹಂಕಾರ ಹಿರಿದಾಗುತ್ತದೆ, ಪುರುಷ ಅಧಿಕಾರ ಹಿರಿದಾಗುತ್ತದೆ. ಬುದ್ದಿವಂತಿಕೆ ತಂತ್ರಜ್ಞಾನ ಹಿರಿಯ ಮೌಲ್ಯಗಳಾಗುತ್ತವೆ. ಭಾವನೆ ಅನುಭವ ಹೃದಯವಂತಿಕೆ ಕಿರಿಯಮೌಲ್ಯಗಳಾಗುತ್ತವೆ.
ಕಾಡು ಕ್ಷೀಣಿಸತೊಡಗುತ್ತದೆ. ನಾಡು ವೃದ್ಧಿಸತೊಡಗುತ್ತದೆ. ಗ್ರಾಮಗಳು ಹಾಗೂ ಗ್ರಾಮೀಣ ಉತ್ಪಾದಕತೆ ಕ್ಷೀಣಿಸತೊಡಗುತ್ತದೆ. ಯಂತ್ರೋತ್ಪನ್ನಗಳು ವೃದ್ಧಿಸ ತೊಡಗುತ್ತವೆ. ಅಷ್ಟೇ ಏಕೆ, ಮನುಷ್ಯತ್ವವೇ ಕ್ಷೀಣಿಸತೊಡಗುತ್ತದೆ. ವಚನಕಾರರ ಪರಿಭಾಷೆಯಲ್ಲಿ ಹೇಳುವುದಾದರೆ ದೇವರು ಕ್ಷೀಣಿಸತೊಡಗುತ್ತಾನೆ. ಜಂಗಮ ತತ್ವವು ಕ್ಷೀಣಿಸಿ, ಸ್ಥಾವರತತ್ವವು ತತ್ವಹೀನವಾಗಿ, ಕೇವಲ ಕಟ್ಟಡ ಬೆಳೆಯುತ್ತದೆ.

ಅಂತರಂಗ ಬಹಿರಂಗ
ಪುರುಷ-ಪ್ರಕೃತಿ ತತ್ವಗಳ ಬೇರ್ಪಡಿಕೆ ಅಪಾಯಕಾರಿಯಾದದ್ದು. ಉದಾಹರಣೆಗೆಂದು ಅಂತರಂಗ ಬಹಿರಂಗಗಳನ್ನು ಬೇರ್ಪಡಿಸಿ ನೋಡಿ. ಅಪ್ರಿಯ ಸತ್ಯವೊಂದು ನಿಮ್ಮೆದುರು ನಿಲ್ಲುತ್ತದೆ. ಅಂತರಂಗ ಪ್ರಕೃತಿಯಾದರೆ, ಬಹಿರಂಗ ಪುರುಷ. ರಾಮನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವೆರಡು ಬೇರ್ಪಟ್ಟಾಗ, ರಾಮನಂತಹ ರಾಮನೇ ಸಹಜಪ್ರಕೃತಿ ಮರೆತು, ಸೀತೆಯನ್ನು ಹಿಂಸಿಸತೊಡಗುತ್ತಾನೆ, ಸೀತೆಯನ್ನು ಅಗ್ನಿಪರೀಕ್ಷೆಗೆ ಒಡ್ಡುತ್ತಾನೆ.
ಇದೇ ತಾತ್ವಿಕತೆಯನ್ನು ವೈಯಕ್ತಿಕತೆ ಹಾಗೂ ಸಾರ್ವಜನಿಕತೆಗಳಿಗೆ ಹೊಂದಿಸಿದಾಗ ಮತ್ತೊಂದೇ ಅರ್ಥ ಮೇಲೆದ್ದು ಬರುತ್ತದೆ. ಸಾರ್ವಜನಿಕ ಜವಾಬ್ದಾರಿಯ ಸಲುವಾಗಿ ವೈಯಕ್ತಿಕ ಬದುಕನ್ನು, ವೈಯಕ್ತಿಕ ಬದುಕಿನ ಭಾಗವಾದ ಸೀತೆಯರನ್ನೂ, ಬಲಿಕೊಡುವುದು ಎಲ್ಲ ಸಾರ್ವಜನಿಕ ವ್ಯಕ್ತಿಗಳಿಗೆ ಅನಿವಾರ್ಯವಾಗುತ್ತದೆ. ರಾಮ ಈ ಕೆಲಸ ಮಾಡಿದ, ಬುದ್ಧ ಮಾಡಿದ, ಗಾಂಧೀಜಿ ಕೂಡ ಮಾಡಿದರು.
ಲಿಂಗ ತಾರತಮ್ಯದ ಇಂದಿನ ಚಾರಿತ್ರಿಕ ಸಂದರ್ಭದಲ್ಲಿ ಲೈಂಗಿಕ ಹಿಂಸೆಯು ಹೆಚ್ಚಾಗಿ ಗಂಡಸರಿಂದ ಸಂಭವಿಸುತ್ತದೆ. ಅದರೆ ಹೆಂಗಸರು ಇದಕ್ಕೆ ಹೊರತಲ್ಲ ಎನ್ನುತ್ತದೆ ಈ ತಾತ್ವಿಕತೆ. ಉದಾಹರಣೆಗೆ ಕೈಕೇಯಿ, ಮಾತೃತ್ವವನ್ನೆ ಆಸ್ತಿಪ್ರಜ್ಞೆಯಾಗಿ ಕಂಡದ್ದರಿಂದಾಗಿ, ದಶರಥ ಮಹಾರಾಜನನ್ನು ಹಿಂಸಿಸಿದಳು ಹಾಗೂ ಅವನ ಸಾವಿಗೆ ಕಾರಣಳಾದಳು.
ಹಾಗಿದ್ದರೆ ಯಾರು ರಾವಣ?
ಯಾರು ಬೇಕಾದರೂ ಆಗಬಹುದು ಯಾವ ಮನುಷ್ಯಬೇಕಾದರೂ ರಾವಣನಾಗಬಹುದು ಎನ್ನುತ್ತದೆ ರಾಮಾಯಣದ ಮೂಲರೂಪಕ. ರಾವಣರುಗಳಿಗೆ ತಾನು ರಾವಣನಾಗಿದ್ದೇನೆ ಎಂಬ ಅರಿವಿರುವುದಿಲ್ಲ. ಅರಿವಿರದೆ ಹತ್ತುತಲೆ ಮೂಡಿರುತ್ತದೆ ಅವರಿಗೆ. ಬ್ರಾಹ್ಮಣಿಕೆ ವೇದಾಧ್ಯಯನ ಅಧಿಕಾರ ಕಲಾಪ್ರೌಢಿಮೆ ಹಿರಿಮೆ ಎಲ್ಲದರ ನಂತರವೂ ರಾವಣರಾಗಿರುತ್ತೇವೆ ನಾವು. ಮಠಾಧಿಪತಿಗಳು, ರಾಜಕಾರಣಿಗಳು, ಅಧಿಕಾರಿಗಳು, ಬುದ್ಧಿಜೀವಿಗಳು, ಅಷ್ಟೇ ಏಕೆ, ಒಬ್ಬ ಕ್ಷುಲ್ಲಕ ಅಗಸ ಕೂಡ ರಾವಣನಾಗಬಲ್ಲ ಎನ್ನುತ್ತದೆ ರಾಮಾಯಣದ ಮೂಲರೂಪಕ.
ಜಾತಿ ಪದ್ಧತಿಯೆಂಬುದು ಬೇರ್ಪಡಿಕೆ
ಇದು ಒಂದು ಅಪ್ರಿಯ ಸತ್ಯ. ಈ ಸತ್ಯವನ್ನು ಮುಚ್ಚಿಡಲೆಂದೇ ರಾಮನನ್ನು ದೇವರನ್ನಾಗಿಸಿದ್ದೇವೆ ನಾವು. ರಾಮ ಮನುಷ್ಯಮಿತಿಯಿಂದ ಒಮ್ಮೆ ಬೇರ್ಪಟ್ಟ-ನೆಂದರೆ ಮಿಕ್ಕದ್ದೆಲ್ಲವೂ ಬೇರ್ಪಡುತ್ತದೆ. ಜಾತಿಪದ್ಧತಿ ಸರಿಯೆಂದಾಗುತ್ತದೆ, ಲಿಂಗ ತಾರತಮ್ಯ ಸರಿಯೆಂದಾಗುತ್ತದೆ, ವರ್ಗವ್ಯವಸ್ಥೆ ಸರಿಯೆಂದಾಗುತ್ತದೆ. ಇದನ್ನೆಲ್ಲ ನಡೆಸುತ್ತಿರುವ ನಾವು ಸರಿಯೆಂದಾಗುತ್ತದೆ. ಆದರೆ ನಾವು ಸರಿಯಲ್ಲ.
ರಾಮನ ಮಿತಿ
ರಾಮನ ಮಿತಿ ರಾಮಾಯಣದ ಮಿತಿಯಲ್ಲ. ರಾಮಾಯಣದ ಮಹತ್ವ ವಿರುವುದೇ ರಾಮನ ಮಿತಿಯಲ್ಲಿ. ಏಕೆಂದರೆ ಅದುವೆ ಸಭ್ಯತೆಯ ಮಿತಿ, ಅದುವೆ ಹಿಂಸೆಯ ಮಿತಿ, ಅದುವೆ ವ್ಯವಸ್ಥೆಯ ಮಿತಿ. ವ್ಯವಸ್ಥೆ! ಪುರುಷವೆಂಬುದೇ ವ್ಯವಸ್ಥೆ. ವ್ಯವಸ್ಥೆಗಳು ಮಿತಿಮೀರಿದಾಗ – ಅದು ಕಮ್ಯೂನಿಸ್ಟ್ ವ್ಯವಸ್ಥೆಯಿರಲಿ, ವೈದಿಕ ವ್ಯವಸ್ಥೆಯಿರಲಿ, ಕ್ಯಾಪಿಟಲಿಸ್ಟ್ ವ್ಯವಸ್ಥೆಯಿರಲಿ, ಎಲ್ಲವೂ ರಾಕ್ಷಸ ವ್ಯವಸ್ಥೆಗಳೇ ಆಗುತ್ತವೆ. ಅನುಮಾನವೇ ಬೇಡ.
ಹಾಗಂತ, ರಾಮಾಯಣ ವ್ಯವಸ್ಥೆಯ ವಿರೋಧಿಯಲ್ಲ. ಅನಾರ್ಕಿಸ್ಟ್ ಅಲ್ಲ ರಾಮಾಯಣ. ರಾಮರಾಜ್ಯವೂ ಸಹ ಒಂದು ವ್ಯವಸ್ಥೆಯೇ ತಾನೆ. ಆದರೆ ಅದು ಸಣ್ಣವ್ಯವಸ್ಥೆ. ಪ್ರಕೃತಿಯೊಟ್ಟಿಗೆ ನಿಲ್ಲುವ ವ್ಯವಸ್ಥೆಯದು. ಆಶ್ರಮ ಮಾದರಿಯನ್ನು ಅನುಕರಿಸುವ ವ್ಯವಸ್ಥೆ. ಹಾಗಾಗಿ, ಯಂತ್ರ-ತಂತ್ರ-ಮಂತ್ರಗಳ ಅಬ್ಬರವನ್ನು ಅನುಮಾನದಿಂದ ನೋಡುವ ವ್ಯವಸ್ಥೆಯದು.
ಶೂದ್ರರಿಂದ ಶ್ರಮಸಹಿತ ಸರಳ ಬದುಕನ್ನು ಕಲಿತು, ಆರಿತವರಿಂದ ಅರಿವನ್ನು ಕಲಿತು, ಎರಡನ್ನೂ ಬೆಸೆಯುವ ಮಹಾನ್‌ ವ್ಯವಸ್ಥೆ ರಾಮರಾಜ್ಯ. ನಾವು ಅಗ್ನಿ ಪ್ರಳಯ ಹಾಗೂ ಮಂದಿರ ಮಸೀದಿ ಹಿಂಸೆಯಿಂದ ಬಿಡುಗಡೆ ಹೊಂದಬೇಕೆಂದರೆ ಅತ್ಯಗತ್ಯವಾಗಿರುವ ವ್ಯವಸ್ಥೆ ರಾಮರಾಜ್ಯ. ಸಣ್ಣದೇ ಸರಿಯಾದ ವ್ಯವಸ್ಥೆ.
ಆದರೆ ನಾವು, ರಾಮನನ್ನು ದೊಡ್ಡ ಮಂದಿರಗಳಲ್ಲಿ ಬಂಧಿಸಿಡಲು ಹೊರಟಿದ್ದೇವೆ. ಬಂಧಿಸಿಟ್ಟು, ಬೃಹತ್ತಾದ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಲು ಹೊರಟಿದ್ದೇವೆ. ಅಗ್ನಿಪ್ರಳಯವನ್ನು ಮೈಮೇಲೆ ಎಳೆದುಕೊಳ್ಳಲು ಹೊರಟಿದ್ದೇವೆ.

ಗ್ರಾಮ ಸ್ವರಾಜ್ಯ
ರಾಮರಾಜ್ಯದ ನಿರ್ಮಾಣವೆಂದರೆ ಗ್ರಾಮ ಸ್ವರಾಜ್ಯದ ನಿರ್ಮಾಣ. ಗ್ರಾಮ ಸ್ವರಾಜ್ಯದ ನಿರ್ಮಾಣ ಮಾತ್ರವೇ ಅಗ್ನಿಪ್ರಳಯವನ್ನು ತಪ್ಪಿಸಬಲ್ಲದು. ಅಗ್ನಿಪ್ರಳಯವೆಂಬುದು ಪ್ರಕೃತಿ ನಮಗೊಡ್ಡಿರುವ ಅಗ್ನಿಪರೀಕ್ಷೆಯಾಗಿದೆ. ಪರಿಶುದ್ಧ ಮನಸ್ಸಿನಿಂದ ಪ್ರಕೃತಿಯನ್ನು ಸಲಹಿದರೆ ನಾವೂ ಸಹ, ಸೀತೆಯಂತೆಯೇ ಸುಟ್ಟುಕೊಳ್ಳದೆ ಹೊರಬೀಳಬಹುದು ಅಗ್ನಿಪ್ರಳಯದಿಂದ.
ಇಲ್ಲಿಗೆ ಮುಖ್ಯ ಲೇಖನ ಮುಗಿದಿದೆ. ಆದರೂ ಕೆಲವು ಸಂಗತಿಗಳನ್ನು ಟಿಪ್ಪಣಿಯ ರೂಪದಲ್ಲಿ ಜೊತೆಗಿರಿಸುವುದು ಅಗತ್ಯ ಅನ್ನಿಸಿದೆ. ಹಾಗಾಗಿ ಮತ್ತಷ್ಟು ಮುಂದುವರೆಸುತ್ತೇನೆ.
ಮಾನವ ಚರಿತ್ರೆ
ಪ್ರಕೃತಿಯನ್ನು ಹಿಂಸಾತ್ಮಕವಾಗಿ ಬದಲಿಸುವ ಕೆಲಸವು ಪ್ರಥಮ ಪುರುಷನಾದ ಬೇಟೆಗಾರನಿಂದಲೇ ಆರಂಭವಾಯಿತು. ಕ್ರೌಂಚಪಕ್ಷಿಗಳ ಬೇಟೆಯ ಪ್ರಸಂಗವನ್ನಿಟ್ಟುಕೊಂಡು ರಾಮಾಯಣ ಈ ಸಂಗತಿಯನ್ನು ಸಮರ್ಥವಾಗಿ ವಿವರಿಸುತ್ತದೆ. ನಂತರದಲ್ಲಿ ಬೇಸಾಯವು ಭೂಮಿಯ ಮೇಲೆ ಬಲವಂತ ಹೇರಿತು. ಸಗರನ ಯಜ್ಞಕ್ಕಾಗಿ ಅವನ ಮಕ್ಕಳು ಭೂಮಿ ಅಗೆಯುವ ಪ್ರಸಂಗದ ಮೂಲಕ ರಾಮಾಯಣ ಇದನ್ನು ವಿವರಿಸುತ್ತದೆ.
ವಿಚಿತ್ರ ನೋಡಿ, ನಮಗೆಲ್ಲ ತಿಳಿದಿರುವ ಸರಳ ಸತ್ಯವಿದು! ಕಾಡುಕಡಿಯದೆ ನಾಡು ನಿರ್ಮಿತವಾಗದು, ಬೇಸಾಯಪದ್ಧತಿ ಜಾರಿಗೆ ಬಾರದು. ಎತ್ತಿನ ಬೀಜ ಹನನ ಮಾಡದೆ ಕೃಷಿಯಲ್ಲಿ ಬಳಸಲಾಗದು, ರೇಷಿಮೆಯ ಹುಳುವನ್ನು ಬೇಯಿಸಿ ಸಾಯಿಸದೆ ರೇಷಿಮೆಯ ಸುಂದರ ವಸ್ತ್ರ ಉತ್ಪಾದನೆಯಾಗದು.
ಆದರೆ ಇದೆಲ್ಲವೂ ಹಿಂಸೆಯೇ ಸರಿ, ಶಾಪಯೋಗ್ಯವಾದ ಕೆಲಸವೇ ಸರಿ ಎನ್ನುತ್ತದೆ ರಾಮಾಯಣ. ನೆಲದಡಿಯ ಪ್ರಾಣಿಗಳ ಶಾಪದಿಂದಾಗಿ ಸುಟ್ಟುಬೂದಿಯಾಗುತ್ತಾರೆ ಸಗರನ ಮಕ್ಕಳು. ಹೀಗೆ, ಸಗರನ ಯಜ್ಞವು ಶಾಪದಿಂದ ಆರಂಭವಾದರೆ ಗಂಗಾವತರಣದಲ್ಲಿ ಅದು ಶಾಪಮುಕ್ತಿ ಹೊಂದುತ್ತದೆ. ರಾಮಾಯಣದ ಗಂಗಾವತರಣ ಪ್ರಸಂಗವು ಪುರುಷಪ್ರಯತ್ನಕ್ಕೆ ಒಂದು ಇತ್ಯಾತ್ಮಕ ಉದಾಹರಣೆಯಾಗಿದೆ.
ಯಂತ್ರ ನಾಗರೀಕತೆ, ಸ್ವಯಂಚಾಲಕತೆ, ಇತ್ಯಾದಿ
ಯಂತ್ರ ನಾಗರೀಕತೆ ಯಾವುದೇ ಧರ್ಮಗ್ರಂಥಗಳಲ್ಲಿ ದಾಖಲಾಗಿಲ್ಲ. ಆಗುವುದು ಸಾಧ್ಯವೂ ಇದ್ದಿಲ್ಲ. ಧರ್ಮಗ್ರಂಥಗಳು ರಚನೆಯಾದದ್ದು ಕೈಉತ್ಪನ್ನಗಳ ನಾಗರೀಕತೆಯಲ್ಲಿ. ಆದರೆ ರೂಪಕವಾಗಿ ಅದು ರಾಮಾಯಣದಲ್ಲಿ ದಾಖಲಾಗಿದೆ. ಲಂಕೆಯ ಮಹಾನಗರವೇ ಯಂತ್ರ ನಾಗರೀಕತೆಗೆ ರೂಪಕವಾಗಿದೆ. ಲಂಕೆಯ ಅಧಿಪತಿ ರಾವಣ ಇಂದಿನ ಉದ್ದಿಮೆಪತಿಗಳಂತೆಯೇ ಸರಿ.
ಲಂಕೆಯ ರೂಪಕವನ್ನು ಗಮನಿಸಿ! ವಿಮಾನಗಳಿಲ್ಲದ ಕಾಲದಲ್ಲಿ ವಿಮಾನಗಳಿವೆ ಅಲ್ಲಿ. ವರ್ಚುಯೆಲ್ ಮಾಧ್ಯಮಗಳ ಜಾಲವಿರದಿದ್ದ ಕಾಲದಲ್ಲಿ ಮಾಯಾಜಾಲವಿದೆ ಅಲ್ಲಿ. ನ್ಯೂಯಾರ್ಕು ಲಂಡನ್ನು ಮುಂಬಯಿ ಬೆಂಗಳೂರು-ಗಳಿರದಿದ್ದ ಕಾಲದಲ್ಲಿ, ಇವುಗಳು ಈಗ ಮಾಡುತ್ತಿರುವಂತೆಯೇ, ಅಲ್ಲಿ ಆಗಲೂ ಪ್ರಕೃತಿಯನ್ನು ಬಲವಂತದಿಂದ ಬಂಧಿಸಿಡಲಾಗಿದೆ. ಹಾಗೂ, ತನ್ನ ಲಾಲಸೆಗಾಗಿ ದುರ್ಬಳಕೆ ಮಾಡಲಾಗಿದೆ.
ಅಗ್ನಿಪ್ರಳಯ ತಪ್ಪಿಸುವುದು ಹೇಗೆ?
ರಾಮಾಯಣವು ಸಮಸ್ಯೆಯನ್ನು ಮಾತ್ರವೇ ಮುಂದಿಡುತ್ತಿಲ್ಲ ಉತ್ತರವನ್ನೂ ಸಹ, ರೂಪಕದ ಭಾಷೆಯಲ್ಲಿ, ಸೂಚಿಸುತ್ತಿದೆ. ಅದುವೆ ರಾಮನ ಹಸಿರುಸೇನೆ! ಯಂತ್ರ ತಂತ್ರ ಮಂತ್ರ ಚಾಲಿತನಾದ ರಾವಣನನ್ನು ರಾಮ ಸೋಲಿಸುವುದು ಹಸಿರುಸೇನೆಯೊಟ್ಟಿಗೆ ನಿಂತು ಯುದ್ಧಮಾಡಿ.
ಹಸಿರು ಸೇನೆ! ರಾಮಾಯಣದ ಮಕುಟಮಣಿ ಈ ಹಸಿರು ಸೇನೆ. ಈ ಸೇನೆಯಲ್ಲಿ ಕಪಿಗಳಿದ್ದಾವೆ, ಕರಡಿಯಿದೆ, ಮುದಿಹದ್ದು ಇದೆ, ಇಣಚಿಯಿದೆ. ಇಲ್ಲಿ ಮರಗಿಡಬಂಡೆಗಳು ಆಯುಧಗಳಾಗಿ ಬಳಕೆಯಾಗುತ್ತವೆ. ಗಿಡಮೂಲಿಕೆಗಳು ಔಷದವಾಗಿ ಬಳಕೆಯಾಗುತ್ತದೆ. ನದಿ ಬೆಟ್ಟ ಸಮುದ್ರಗಳು ಸ್ನೇಹಿತರಂತೆ ವರ್ತಿಸುತ್ತವೆ. ಈ ಸೇನೆಯಲ್ಲಿ ಮನುಷ್ಯರು ಏಳುಮಂದಿ ಮಾತ್ರ ಇದ್ದಾರೆ. ರಾಮ ಲಕ್ಷ್ಮಣ ವಿಭೀಷಣ ಹಾಗೂ ಅವನ ನಾಲ್ಕು ಸಹಚರರು ಮಾತ್ರ ಮನುಷ್ಯರು! ಮಿಕ್ಕವರೆಲ್ಲ ಪ್ರಾಕೃತಿಕಜೀವಿಗಳು! ಹಸಿರುಸೇನೆಯು ಆಶ್ರಮ ಜೀವನಪದ್ಧತಿಯನ್ನು ಉಳಿಸಲು ಯುದ್ಧ ಮಾಡುತ್ತದೆ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಧಾರ್ಮಿಕ ಸಂದರ್ಭ
ಇಂದಿನ ನೈತಿಕ ಅದಃಪತನವನ್ನು ಎದುರಿಸಲಿಕ್ಕೆ ಧರ್ಮ ಅಗತ್ಯ ಎಂದು ಜನರು ಮನಗಂಡಿದ್ದಾರೆ. ಅವರ ತೀರ್ಮಾನ ಸರಿಯಾದದ್ದೇ ಇದೆ. ಆದರೆ ಆ ಕೆಲಸ ಮಾಡಲಿಕ್ಕೆ ಮಾನವಧರ್ಮ ಸೂಕ್ತವಾದದ್ದೇ ರಾಮಮಂದಿರ ಸೂಕ್ತವಾದದ್ದೇ ಎಂಬುದು ಪ್ರಶ್ನೆ.
ರಾಮಾಯಣದ ಮೂಲರೂಪಕವು ಅನುಮಾನಾತೀತವಾಗಿ ಮಾನವ ಧರ್ಮವನ್ನು ಎತ್ತಿಹಿಡಿಯುತ್ತಿದೆ. ರೂಪಕಪ್ರಜ್ಞೆ ಮರೆತು ಓದಿದಾಗ ಮಾತ್ರ ರಾಮಾಯಣ ಒಂದು ಕಂತೆ ಪುರಾಣವಾಗಿ ಕಾಣುತ್ತದೆ.

ರಾಮ ಮಾನವ
ರಾಮ ಮಾನವ ಎಂದು ಹೇಳಿದಾಗ, ಅದು ಒಂದು ದೈವವಿರೋಧಿ ಹೇಳಿಕೆ ಎಂದು ನಿಮಗೆ ಅನ್ನಿಸಬಹುದು. ತಾಳ್ಮೆಯಿರಲಿ. ದೇವರು ಇದ್ದಾನೆಯೇ ಎಂಬ ಪ್ರಶ್ನೆ ಅಲ್ಲ ಇದು. ಪ್ರಕೃತಿ-ಪುರುಷ ತಾತ್ವಿಕತೆಯ ಮೂಲಕ ಬದುಕನ್ನು ಅರಿಯುವ ಪ್ರಯತ್ನ ಮಾತ್ರ ಇದು. ಈ ಪ್ರಯತ್ನಕ್ಕೆ ದೇವರ ಅಗತ್ಯವಿಲ್ಲ. ಪ್ರಕೃತಿ ಪರಿಪೂರ್ಣ ಪುರುಷ ಅಪೂರ್ಣ ಎಂದು ರಾಮಾಯಣ ಗ್ರಹಿಸುತ್ತದೆ. ರಾಮ ಮರ್ಯಾದೆ ಹೊತ್ತ ಪುರುಷನಾದ್ದರಿಂದ ದೈವಸಮಾನ ಎಂದು ರಾಮಾಯಣ ಗ್ರಹಿಸುತ್ತದೆ.
ಆದರೆ ಜಗತ್ತಿನ ಹುಟ್ಟಿಗೆ ಒಂದು ಅಲೌಕಿಕ ಕಾರಣವಿದೆ ಎಂದು ನಾನೂ ನಂಬುತ್ತೆÃನೆ. ಅಂತಹ ಅಲೌಕಿಕ ಕಾರಣವನ್ನು ದೇವರೆಂದು ಕರೆಯಲಿಕ್ಕೆ ನನಗೆ ಖಂಡಿತವಾಗಿ ಅಭ್ಯಂತರವಿಲ್ಲ. ವಿಚಾರಕ್ಕೂ ನಂಬಿಕೆಗೂ ಘರ್ಷಣೆ ಬರಬೇಕಿಲ್ಲ.
ಪೌರ್ವಾತ್ಯ ಸಂಸೃತಿಯ ಹಿರಿಮೆ
ನಾವು ಪೌರ್ವಾತ್ಯರು ಬದುಕನ್ನು ಪ್ರಕೃತಿ-ಪುರುಷ ರೂಪಕದ ಮೂಲಕ ಅರಿತುಕೊಳ್ಳುತ್ತೇವೆ. ಚೀನೀಯರು ಇದನ್ನೆ ಯಿನ್-ಯಾಂಗ್ ತತ್ವ ಅನ್ನುತ್ತಾರೆ. ಈ ತಾತ್ವಿಕತೆಯು ಪರ‍್ವಾತ್ಯ ಸಂಸ್ಕೃತಿಯ ಹಿರಿಮೆಯಾಗಿದೆ. ರಾಮ ಪರಂಪರೆ ಬುದ್ಧ ಪರಂಪರೆ ಮಹಾವೀರ ಪರಂಪರೆ ಚೀನದ ತಾವೋ ಪರಂಪರೆ ಕನ್‌ಫ್ಯೂಷಿಯನ್ ಪರಂಪರೆ ಎಲ್ಲವೂ, ಮೂಲತಃ, ಇದೇ ವಿಧಾನದಿಂದ ಬದುಕನ್ನು ಅರಿಯುತ್ತವೆ.
ಅಷ್ಟೇ ಏಕೆ, ನಂತರ ಬಂದ ಭಾರತೀಯ ಸಂತಪರಂಪರೆಗಳು ಕೂಡಾ ಇದನ್ನೆ ಮಾಡುತ್ತದೆ. ಕಬೀರ ಅಕ್ಕ ಅಲ್ಲಮ ಬಸವ ರಾಮದಾಸ ರವಿದಾಸ ಎಲ್ಲರೂ ದೇವ ರನ್ನು ಸ್ನೇಹಿತನನ್ನಾಗಿ ಪರಿಗಣಿಸುತ್ತಾರೆ. ಇಲ್ಲವೇ ಪ್ರೇಮಿಯನ್ನಾಗಿ, ಇಲ್ಲವೇ ಶ್ರಮಜೀವಿಯನ್ನಾಗಿ. ಆ ಮೂಲಕ ದೇವರನ್ನು ಮಾನವನನ್ನಾಗಿಸುತ್ತಾರೆ. ದೇವರನ್ನು ಮಾನವನನ್ನಾಗಿಸುವುದು ಒಳ್ಳೆಯದು.
ಪಾಶ್ಚಾತ್ಯ ಪರಂಪರೆ
ಪಾಶ್ಚಾತ್ಯ ಪರಂಪರೆ ಇದಕ್ಕಿಂತ ಭಿನ್ನವಾದದ್ದು. ದೇವರಿಗೂ ಮನುಷ್ಯನಿಗೂ ವಾಸ್ತವಿಕ ಸಂಬಂಧ ಕಲ್ಪಿಸಲಿಕ್ಕೆ ಕಸರತ್ತು ಮಾಡುತ್ತವೆ ಅವು.
ಉದಾಹರಣೆಗೆ, ಏಸುಕ್ರಿಸ್ತ ದೇವರ ಮಗನಾಗಬೇಕಾಗುತ್ತದೆ. ಆದರೆ ಮನುಷ್ಯನೊಬ್ಬನನ್ನು ದೇವರ ಮಗನನ್ನಾಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ, ಒಬ್ಬ ಲೌಕಿಕ ಇನ್ನೊಬ್ಬ ಅಲೌಕಿಕ, ಒಬ್ಬನಿಗೆ ದೇಹವಿದೆ ಇನ್ನೊಬ್ಬನಿಗೆ ದೇಹವಿಲ್ಲ. ಹಾಗಾಗಿ, ಕ್ರಿಸ್ತ ಮನುಷ್ಯ, ಅವನನ್ನು ಹೆರಬೇಕಾದ ತಾಯಿ ಮನುಷ್ಯಳು, ತಂದೆಮಾತ್ರ ದೇವರು! ಅಥವಾ ಪ್ರವಾದಿಗಳ ಉದಾಹರಣೆ ತೆಗೆದುಕೊಳ್ಳಿ. ಪ್ರವಾದಿಗಳನ್ನು ದೇವರ ಏಕÀಮಾತ್ರ ಪ್ರತಿನಿಧಿಯನ್ನಾಗಿಸುತ್ತದೆ ಆ ಪರಂಪರೆ. ಆದರೆ ನಮ್ಮ ದೇವರು ನಮ್ಮೊಳಗೇ ಇರುವುದರಿಂದ ನಮಗೆ ಸಮಸ್ಯೆಯೇ ಇಲ್ಲ!
ನನಗೆ ದೇವರೊಟ್ಟಿಗೆ ನಿಜಕ್ಕೂ ತಕರಾರಿಲ್ಲ. ತಕರಾರಿರುವುದು ಪೂಜಾರಿ ಗಳೊಟ್ಟಿಗೆ ಮಾತ್ರ. ಹಾಗೆಂದು ಪೂಜಾರಿಗಳು ಕೆಟ್ಟವರೇನಲ್ಲ. ಅತಿಒಳ್ಳೆಯವರು ಅವರು. ಅಥವಾ ಹಾಗೆಂದು ಭ್ರಮಿಸುವವರು ಹೆಚ್ಚಿನವರು. ರಾಮನಿಗೇ ಇಲ್ಲದ ಭ್ರಮೆ ಕೆಲವೊಮ್ಮೆ ರಾಮನ ಪೂಜಾರಿಗಳಿಗಿರುತ್ತದೆ. ಭಕ್ತರು, ‘ಇರಲಿ ಬಿಡಿ ಏನೀಗ! ಆತ ಮನುಷ್ಯನೂ ಹೌದು. ದೇವರಷ್ಟೇ ದೊಡ್ಡವನೂ ಹೌದು!’ ಎಂದರೆ, ಕೂಡದು ಎಂದು ಗುಡುಗುತ್ತಾರೆ ಪೂಜಾರಿಗಳು. ಹೀಗೆ ಶುರುವಾಗುವ ಪ್ರತ್ಯೇಕತೆ ಬೆಳೆಯುತ್ತ ಹೋಗುತ್ತದೆ. ಅವಾಂತರಗಳನ್ನು ಸೃಷ್ಟಿಸುತ್ತದೆ.
ಇನ್ನು ಸ್ವಯಂಚಾಲಿತ ಯಂತ್ರಗಳು!
ಇವು ತಾವೇ ಪರಿಪೂರ್ಣ ಎಂದು ಭ್ರಮಿಸಿವೆಯಾದ್ದರಿಂದ ಪೂಜಾರಿ-ಗಳೊಟ್ಟಿಗೆ ಸುಲಭವಾಗಿ ಕೈಜೋಡಿಸಿವೆ. ಪೂಜಾರಿಗಳೂ ಸಹ ಯಾವುದೇ ಮುಲಾಜಿಲ್ಲದೆ ಯಂತ್ರಗಳೊಟ್ಟಿಗೆ ಕೈಜೋಡಿಸಿದ್ದಾರೆ. ವೇದಗಳಲ್ಲಿ ಸ್ವಯಂಚಾಲಿತ ಯಂತ್ರಗಳ ಅಧಿಕೃತ ಪ್ರಸ್ತಾಪವಿಲ್ಲದಿರುವುದರಿಂದಾಗಿ ಹಾಗೆ ಮಾಡಬಹುದು ಎಂದು ತಿಳಿದಿದ್ದಾರೋ ಏನೋ, ತಿಳಿಯೇ. ಅದೇನೇ ಇರಲಿ ಇಬ್ಬರೂಸೇರಿ ದುಡ್ಡು ಮಾಡುತ್ತಿದ್ದಾರೆ, ಇಬ್ಬರೂ ಸೇರಿ ಭಾರತದ ಜನತೆ ಹಾಗೂ ಭಾರತ ದೇಶಗಳನ್ನು ಪ್ರತ್ಯೇಕಿಸುತ್ತಿದ್ದಾರೆ. ಇದು ಅಪರಾದ.
ಸಾಹಿತ್ಯಕೃತಿ ಹಾಗೂ ಧರ್ಮಗ್ರಂಥ
ರಾಮಾಯಣ ಒಂದು ಸಾಹಿತ್ಯಕೃತಿಯೂ ಹೌದು ಒಂದು ಧರ್ಮಗ್ರಂಥವೂ ಹೌದು. ಇದನ್ನು ಬೇರ್ಪಡಿಸಬಾರದು. ಮಂದಿರ ಚಳುವಳಿಗಾರರ ಜೊತೆಗೆ ನನಗಿ ರುವ ತಕರಾರು ಇವರೆಡರ ಬೇರ್ಪಡಿಕೆಯೇ ಆಗಿದೆ. ಆದರೆ ಅವರು ರಾಮನನ್ನು ಮುನ್ನಲೆಗೆ ತಂದು ಒಳಿತನ್ನೂ ಮಾಡಿದ್ದಾರೆ.
ರಾಮನ ನೈತಿಕತೆ
ರಾಮ ದೊಡ್ಡವನು, ಅವನ ರಾಜಕಾರಣವೂ ದೊಡ್ಡದು. ಸಣ್ಣತನವಿಲ್ಲ ಅಲ್ಲಿ. ಒಂದೊಮ್ಮೆ ಯಾರನ್ನಾದರೂ ಹೊರಹಾಕಬೇಕಾಗಿಬಂದರೆ, ರಾಮ ತನ್ನನ್ನೇ ಹೊರಹಾಕಿಕೊಳ್ಳುತ್ತಿದ್ದ. ಮೊದಲು ಅಯೋಧ್ಯೆಯಿಂದ ಹೊರಹಾಕಿಕೊಂಡ, ನಂತರ ತನ್ನದೇ ಒಂದು ಭಾಗವಾದ ಸೀತೆಯನ್ನು ಕಾಡಿಗೆ ಹಿಂದಿರುಗಿಸಿದ. ನಂತರ ಮಕ್ಕಳನ್ನು ಸಿಂಹಾಸನದ ಮೇಲೆ ಕೂರಿಸುವ ಬದಲಾಗಿ, ಆಶ್ರಮವಾಸಿಗಳನ್ನಾಗಿಸಿದ. ಹೀಗೆ ರಾಜಸತ್ತೆಯನ್ನು ಕೊನೆಗೊಳಿಸಿದ ರಾಮ. ವಂಶಪಾರಂರ‍್ಯ ಆಡಳಿತದ ಪಿಡುಗನ್ನು ಕೊನೆಗೊಳಿಸಿದ.
ರಾಮಾಯಣವನ್ನು ರೂಪಕವಾಗಿ ನೋಡಿದಾಗ ಇದೆಲ್ಲ ಅರಿವಾಗುತ್ತದೆ. ಇನ್ನೂ ಏನೆಲ್ಲ ಅರಿವಾಗುತ್ತದೆ.
ಬನ್ನಿ, ಮುನ್ನಡೆಯುವುದು ಬಾಕಿಯಿದೆ. ಹಸಿರು ಸೇನೆ ನಿರ್ಮಿಸುವುದು ಬಾಕಿಯಿದೆ. ಅಗ್ನಿಪ್ರಳಯವನ್ನು ತಡೆಯುವುದು ಬಾಕಿಯಿದೆ. ಇವೆಲ್ಲವೂ ದೊಡ್ಡಕೆಲಸಗಳು. ಎಲ್ಲರೂ ಕೈಜೋಡಿಸಬೇಕಾದ ಕೆಲಸಗಳು. ಸಾಬರು ಸಿಂಗರು ಕ್ರೈಸ್ತರು ಹಿಂದುಗಳು ಭಾರತೀಯರು ಪಾಕೀಸ್ತಾನೀಯರು ಅಮೇರಿಕನ್ನರು ಚೀನೀಯರು ಎಂಬ ಯಾವುದೇ ಪ್ರತ್ಯೇಕತೆಯಿಲ್ಲದೆ, ಎಲ್ಲರೂ ಕೈಜೋಡಿಸಬೇಕಾದ ಕೆಲಸವಿದು.
ರಾಮರಾಜ್ಯ, ಅರ್ಥಾತ್ ಗ್ರಾಮಸ್ವರಾಜ್ಯ ನಿರ್ಮಿಸೋಣ ಬನ್ನಿ!

‍ಲೇಖಕರು avadhi

22 August, 2019

1 Comment

  1. T Surendra Rao

    ಮನುಷ್ಯನನ್ನು ದೈವತ್ವಕ್ಕೆ ಏರಿಸುವುದೇ ನನ್ನ ಗುರಿ – ಕಾರ್ಲ್ ಮಾರ್ಕ್ಸ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading