ಪ್ರಶಾಂತ್ ಆಡೂರ ಬರೀತಾರೆ ’ಒಂದು ವಾಶಿಂಗ ಮಶೀನಿನ ಹಣೇಬರಹ…’

ಪ್ರಶಾಂತ್ ಆಡೂರ

ಮೊನ್ನೆ ಸಂಡೇ ನಮ್ಮ ಮನ್ಯಾಗ ಅತ್ತಿ ಸೊಸಿ ಕೂಡಿ ಅರಬಿ ಒಗಿಲಿಕತ್ತಿದ್ದರು. ಅದು ವಾಶಿಂಗ ಮಶೀನ ಒಳಗ. ಅಲ್ಲಾ ಇತ್ತಿಚಿಗೆ ಎಲ್ಲಾರ ಮನ್ಯಾಗ ಅರಬಿ ಒಗೆಯೋದು ವಾಶಿಂಗ ಮಶೀನ ಒಳಗ ಬಿಡ್ರಿ, ಇಗ್ಯಾರ ಮನ್ಯಾಗ ಒಗೆಯೋ ಕಲ್ಲ ಇರತಾವ, ಅದು ಫ್ಲ್ಯಾಟನಾಗಿನ ಮನ್ಯಾಗ ಒಗಿಯೋ ಕಲ್ಲ ಸಹಿತ ಇರಂಗಿಲ್ಲಾ, ಏನ ಒಗದರು ಬಚ್ಚಲ ಮನ್ಯಾಗ ಒಕ್ಕೊಬೇಕು. ಇರೋ ಒಂದ ಅಟ್ಯಾಚಡ ಬಚ್ಚಲದಾಗ ಒಮ್ಮೊಮ್ಮೆ ಏನ ಮಾಡ್ಬೇಕು ಏನ ಬಿಡ್ಬೇಕು ತಿಳಿಯಂಗಿಲ್ಲಾ. ಎಲ್ಲಾ ಒಂದರಾಗ. ಒಂದಕ್ಕ ಹೋದಾಗ ಎರಡನೇದೂ ಮಾಡೇ ಬಂದಬಿಡಬೇಕು.

ನನ್ನ ಹೆಂಡತಿ ಹಿತ್ತಲದಾಗ ಅರಬಿ ಒಂದ ಸರತೆ ಸೋಪ ಹಚ್ಚಿ ಹಚ್ಚಿ ತಿಕ್ಕಿ ಒಗೆಯೋ ಕಲ್ಲಿಗೆ ಬಡದ ಕೊಡತಿದ್ಲು ಅದನ್ನ ನಮ್ಮವ್ವ ಮಶೀನಗೆ ಹಾಕಲಿಕತ್ತಿದ್ಲು. ಹಂಗ ಮೊದ್ಲ ನನ್ನ ಹೆಂಡತಿ

“ನಿಮಗೇಲ್ಲೆ ವಾಶಿಂಗ ಮಶೀನ ನಡಸಲಿಕ್ಕೆ ಬರತದ, ಹಳೇ ಮಂದಿ ನೀವು” ಅಂತ ತಾನ ಅರಬಿ ಮಶೀನಗೆ ಹಾಕತಿದ್ಲು ಆದರ ಅಕಿ ಅರಬಿ ಮಶೀನಗೆ ಹಾಕಂದರ ಸಾಕ ಎಲ್ಲಾ ಹೊತಗೊಂಡ ಹೋಗಿ ಹಾಕಿ ಬಿಡೋಕಿ, ಅದರಾಗ ನನ್ನ ಮಗಳ ಸಣ್ಣ ಕೂಸ ಇದ್ದಾಗಂತೂ ಅಕಿ ಉಚ್ಚಿ ಅರಬಿ, ಸಂಡಾಸದ್ದ ಧುಬಟಿ ಎಲ್ಲಾ ಹಂಗ ಹಾಕಿ ಬಿಡೋಕಿ ಮುಂದ ನಮ್ಮ ಅರಬಿ ಸಹಿತ ಹಳದಿ- ಹಳದಿ ಕಲೆ ಆಗಲಿಕತ್ವು. ಮ್ಯಾಲೆ ವಾರಕ್ಕೊಮ್ಮೆ ವಾಶಿಂಗ ಮಶೀನ ಸಹಿತ ಫಿನೈಲ್, ಅಸಿಡ್ ಹಾಕಿ ತೊಳಿಯೋ ಪ್ರಸಂಗ ಬಂದಿತ್ತ. ಆವಾಗಿಂಗ ನಮ್ಮವ್ವ ‘ನೀ ತಿಕ್ಕಿ ಕೊಡವಾ ನಮ್ಮವ್ವಾ ನಾನ ಮಶೀನಗೆ ಹಾಕತೇನಿ’ ಅಂತ ಅದರ ಜವಾಬ್ದಾರಿನೂ ಅಕಿನ ತೊಗಂಡಿದ್ಲು. ಯಾಕೊ ಒಮ್ಮಿಂದೊಮ್ಮೆಲೆ ಸುಮ್ಮನ ತಿರಗಲಿಕತ್ತಿದ್ದ ವಾಶಿಂಗ ಮಶೀನ ಗೊರ್ರ ಅನ್ನಲಿಕತ್ತ. ಅದ ಮುಂದ ಹಂಗ ಗೊರ್ರ ಅನ್ಕೋತ ಒಂದ ಸರತೆ ಜೋರ ಗೊರ್ರ್..ಗೊರ್ರ್ ಅಂದ ಬಂದ ಆತ

“ಏ, ಪ್ರೇರಣಾ ಈ ಸುಡಗಾಡ ಮಶೀನಗೇ ಏನೋ ಆತ ಲಗೂನ ಬಾರವಾ” ಅಂತ ನಮ್ಮವ್ವ ಅಗದಿ ಏನೋ ಬೆಂಕಿ ಹತ್ತಿದವರಗತೆ ಇಲ್ಲಾ ಗ್ಯಾಸ ಮ್ಯಾಲೆ ಹಾಲ ಉಕ್ಕಲಿಕತ್ತವರಗತೆ ಒದರಿದ್ಲು. ನನ್ನ ಹೆಂಡತಿಗೆ ಎದ್ದ ಬರಲಿಕ್ಕೆ ಮುಗ್ಗಲಗೇಡತನಾ, ಅದರಾಗ ಮೈ ಬ್ಯಾರೆ ದೊಡ್ಡದು ಹಗಲಗಲಾ ಏಳಲಿಕ್ಕೆ ಕೂಡಲಿಕ್ಕೆ ಬ್ಯಾರೆ ಆಗಂಗಿಲ್ಲಾ, ಒಮ್ಮೆ ಕೂತಳ ಅಂದರ ಎಲ್ಲಾ ಮುಗಿಸಿಕೊಂಡ ಮ್ಯಾಲೆ ಯಾರರ ಕೈ ಹಿಡದ ಎತ್ತಿದರ ಇಷ್ಟ ಏಳೋ ಗಿರಾಕಿ. ಅಕಿ ಅಲ್ಲೆ ಕೂತಲ್ಲಿಂದ “ಒಂದೇರಡ ಅರಬಿ ತಗಿರಿ, ಕಂಠ ಮಟಾ ಮಶೀನಗೆ ಅರಬಿ ಹಾಕಿ ತುರಕಿ ಎಲ್ಲೇರ ಮೋಟರ ಸುಟ್ಟ-ಗಿಟ್ಟಿರಿ, ನಮ್ಮಪ್ಪ ಕೊಡಸಿದ್ದ ವಾಶಿಂಗ ಮಶೀನ ಅದು” ಅಂತ ಒದರಿದ್ಲು.

ಏನ ಅನ್ರಿ ಈ ಹೆಣ್ಣಮಕ್ಕಳಿಗೆ ತವರಮನಿಯವರ ಕೊಟ್ಟದ್ದ ಸಾಮಾನ ಕಂಡ್ರ ಎಲ್ಲಿಲ್ಲದ ಪ್ರೀತಿ, ಅವಕ್ಕೇನೂ ಆಗಬಾರದ. ಹಂಗ ನಮ್ಮ ಮನ್ಯಾಗ ನಂದ ಮದುವಿ ಆದ ಹೋಸ್ತಾಗಿ ವಾಶಿಂಗ ಮಶೀನ ಇರಲಿಲ್ಲಾ, ಹಿಂಗಾಗಿ ಇಕಿಗೆ ಅರಬಿ ಒಗಿ ಅಂದರ ಸಾಕ ಮೈಮ್ಯಾಲೆ ಬರತಿದ್ಲು. ಅದರಾಗ ನಮ್ಮ ಮನ್ಯಾಗ ಗಂಡಸರು ಅರಬಿ ಒಗೆಯೋ ಪದ್ಧತಿ ಇಲ್ಲಾ, ನಂಬದು ಬನಶಂಕರಿ ಒಕ್ಕಲಾ, ಹಿಂಗಾಗೆ ಮನಿ ಕೆಲಸಾ ಬರೇ ಹೆಣ್ಣ ಮಕ್ಕಳ ಮಾಡಬೇಕ.

ಕಡಿಕೆ ನನ್ನ ಹೆಂಡತಿ ಕಾಟಚಾರಕ್ಕ ಅರಬಿ ಹೆಂಗರ ಒಗಿತಿದ್ಲು ಅದ ನಮ್ಮವ್ವಗ ಸೇರಕಿ ಬರತಿದ್ದಿಲ್ಲಾ, ಆಮ್ಯಾಲೆ ಅತ್ತಿ ಸೊಸಿ ಜಗಳಾಡತಿದ್ದರು. ನಂಗಂತೂ ಅವರಿಬ್ಬರು ಜಗಳಾಡೋದ ಕೇಳಿ-ಕೇಳಿ ಸಾಕಾಗಿತ್ತ, ಇನ್ನ ನಾ ಏನರ ನಡಕ ಮಾತಾಡಿದಾಗ ನಂಗ ವಾಶಿಂಗ್ ಮಶೀನ ಕೊಡಸರಿ ಅಂತ ಅಕಿ ಅನ್ನೋದು, ನಾ ವಾಶಿಂಗ ಮಶೀನ ತೊಗೊಳದ ಇತ್ತಂದ್ರ ನಿನ್ನ್ಯಾಕ ಮದುವಿ ಆಗ್ತಿದ್ದೆ ಅನ್ನೋದು, ಅಕಿ ಹಂಗರ ‘ನಾ ಏನ ನಿಮ್ಮನಿ ಕೆಲಸದೋಕೇನ’ ಅಂತ ಅನ್ನೊದ ದಿವಸಾ ನಡದ ಇರತಿತ್ತ.

ಕಡಿಕೆ ಒಂದ ಸರತೆ ಅವರಪ್ಪನ ತಲಿಕೆಟ್ಟ ದೀಪಾವಳಿಗೆ ಒಂದ ವಾಶಿಂಗ ಮಶೀನ ಕೊಡಸಿ ಬಿಟ್ಟರು. ಅಲ್ಲಾ ನಂಗ ಗೊತ್ತಿತ್ತ ಇವತ್ತಿಲ್ಲಾ ನಾಳೆ ಅವರ ಕೊಟ್ಟ ಕೊಡತಾರ ಅಂತ, ಪಾಪ ಅವರರ ಎಷ್ಟ ದಿವಸಂತ ಮಗಳ ಕಷ್ಟಾ ಪಡೋದನ್ನ ನೋಡ್ತಾರ ಹೇಳ್ರಿ. ಹಿಂಗಾಗಿ ನಮ್ಮ ಮನಿಗೆ ವಾಶಿಂಗ ಮಶೀನ ಬಂದಿದ್ದ. ಇತ್ತಲಾಗ ನಮ್ಮವ್ವ ಅಕಿ ಹಂಗ ಒದರಿ ಒಂದ್ಯಾರಡ ಅರಬಿ ತಗಿ ಅಂದದ್ದ ಕೇಳಿ ಅಕಿ ಹೇಳಿದ್ದ ಖರೆ, ಅಕಿ ಭಾಳ ತಿಳದೋಕಿ, ಖರೇನ ಎಲ್ಲರ ಮಶೀನ ಕೆಟ್ಟ ಗಿಟ್ಟಿಂತ ಹೆದರಿ ಒಂದೆರಡ ಅರಬಿ ತಗದ ಮತ್ತ ಮಶೀನ ಚಲು ಮಾಡಿದರ ಅದು ಮತ್ತ ಗೊರ್ರ್..ಗೊರ್ರ ಅಂದ ಬಂದ ಆತ.

 

“ನಮ್ಮ ಮನೇಯವರದ ಜೀನ್ಸ್ ಪ್ಯಾಂಟ ತಗೀರಿ, ಅದ ಹೆಣಾ ಇದ್ದಂಗ ಅದ. ಅದರದ ವೇಟಿಗೆ ಹಂಗ ಆಗ್ತಿರಬೇಕು” ಅಂತ ಮತ್ತ ನನ್ನ ಹೆಂಡತಿ ಹಿತ್ತಲದಾಗಿಂದ ಒದರಿದ್ಲು.

ನಮ್ಮವ್ವಾ “ಹೌದವಾ, ಈ ಸುಡಗಾಡ ಜೀನ್ಸ್ ಪ್ಯಾಂಟ ತೊಯಿಸಿದರ ರಗ್ಗ ತೊಯಿಸಿದಷ್ಟ ವಜ್ಜಾ ಆಗ್ತಾವ” ಅಂತ ನಂದ ಜೀನ್ಸ್ ತಗದ ಹೊರಗ ಇಟ್ಲು. ಆದರ ಮತ್ತ ಮಶೀನ ಮತ್ತು ಹಂಗ ಒದರಲಿಕತ್ತ. ನಾ ಅಲ್ಲೇ ಟಿ.ವಿ. ನೋಡ್ಕೋತ ಕೂತಿದ್ದೆ, ನಂಗ ನಮ್ಮವ್ವ ಎಲ್ಲೋ ಈ ವಾಶಿಂಗ ಮಶೀನ ಹಾಳ ಮಾಡ್ತಾಳ ಅಂತ ಗ್ಯಾರಂಟೀ ಆತ. ಅದರಾಗ ಅದನ್ನ ನಮ್ಮ ಅತ್ತಿ ಮನಿಯವರು ಕೊಟ್ಟಿದ್ದರು ರಿಪೇರಿ ನಾನ ಮಾಡಸಬೇಕಲಾ ಅಂತ ತಲಿಕೆಟ್ಟ ನಮ್ಮವ್ವಗ

“ಏ, ನೀ ಏನ ಆ ಮಶೀನ ಕೆಡಸಿ ಕೈ ತೊಳ್ಕೋಳೊಕೇನ್ವಾ, ಅದರಾಗಿಂದ ಪ್ರೇರಾಣಂದ ಸೀರಿ ಜಂಪರ ತಗದ ಉಳದದ್ದ ಅರಬಿ ವಾಪಸ ಹಾಕಿ ಶುರು ಮಾಡ” ಅಂದೆ. ಅಕಿ ನನ್ನ ಹೆಂಡತಿದ ಒಂದ ಸೀರಿ ಅದರ ಜೊತಿ ಮ್ಯಾಚಿಂಗ ಜಂಪರ, ಪರಕಾರ ತಗದ ಮತ್ತ ವಾಪಸ ನನ್ನ ಜೀನ್ಸ, ಉಳದ ಅರಬಿ ಹಾಕಿ ಮಶೀನ ಶುರು ಮಾಡಿದ್ಲು. ವಾಶಿಂಗ ಮಶೀನ ಅಗದಿ ಇಷ್ಟ ಸ್ಮೂಥ ಶುರು ಆತಲಾ, ಅದು ಚಾಲು ಅದನೋ ಇಲ್ಲೊ ಅನ್ನಬೇಕ ಹಂಗ ಮೋಟರ ಆವಾಜ ಇಲ್ಲದ ತಿರಗಲಿಕತ್ತ. ಅದನ್ನ ನೋಡಿ ನಮ್ಮವ್ವ ಸುಮ್ಮನ ತನ್ನ ಕೆಲಸಾ ತಾ ಮಾಡ್ಕೋಬೇಕೊ ಇಲ್ಲೊ “ಅಯ್ಯ ಸುಟ್ಟ ಬರಲಿ, ನಾ ಮನಷ್ಯಾರ ಇಷ್ಟ ಬೊಜ್ಜ ಬಂದ ಭಾರ ಇರತಾರ, ಭಾಳ ಅಂದರ ಅವರ ಮಕ್ಕಳಿಗೆ ಮುಂದ ಬೊಜ್ಜ ಬರತದ ಅಂತ ಕೇಳಿದ್ದೆ. ಆದರ ಅವರ ಹಾಕೋಳೊ ಅರಬಿಗೂ ಈ ಪರಿ ಬೊಜ್ಜ ಬಂದ ಭಾರ ಇರತಾವ ಅಂತ ಇವತ್ತ ಗೊತ್ತಾಗಿದ್ದ ಬಿಡ” ಅಂತ ಅಂದ ಬಿಟ್ಟಳು. ಅದು ನನ್ನ ಹೆಂಡತಿಗೆ ಕೇಳಸ್ತ ನೋಡ್ರಿ…..

ಮುಂದ?….

ಮುಂದ ಏನ? ಇಡೀ ಸಂಡೆ ಅತ್ತಿ-ಸೊಸಿ ಜಗಳಾಡಿದ್ದ- ಜಗಳಾಡಿದ್ದ. ಏನ್ಮಾಡ್ತೀರಿ? ಅದಕ್ಕ ನಾ ಸಂಡೇ ಬಂದರ ಮನ್ಯಾಗ ಇರಂಗಿಲ್ಲಾ.

 

 

‍ಲೇಖಕರು avadhi

June 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

6 ಪ್ರತಿಕ್ರಿಯೆಗಳು

  1. Sumangala

    ನಿಮ್ಮವ್ವ ಕೊನಿಗಿ ಹೇಳಿದ್ದು ಮಾತ್ರ ಖರೇ ಅದ!! ಎಷ್ಟು ಹ್ಯೂಮರ್ ಸೆನ್ಸ್ ಇದೆ ನೋಡಿ ಅವರಿಗೆ, ಅವರ ಜಗಳ ಓದಿ ಖರೇ ನಗು ಬಂದಿತು… ಮನಷ್ಯಾ ಅಂದಿಂದ ಝಗಳಾ ಆಡಬ್ಯಾಕ್ರಿ, ಝಗಳ ಗಿಗಳ ಇಲ್ದ ಸಪ್ಪನ್ನ ಬ್ಯಾಳಿ ತಿಂದಂಗ ಬದುಕಿದ್ರೆ ಏನ ಬಂತು ಹೌದಿಲ್ರೀ…
    -ಸುಮಂಗಲಾ

    ಪ್ರತಿಕ್ರಿಯೆ
  2. vaideshi

    ha..ha…yen sir, mast baritiri. idu nija kate anasatte.
    loved every nostalgic words of yours and whole family enjoys your reading, common man language and common man subject..
    great

    ಪ್ರತಿಕ್ರಿಯೆ
  3. nikhil

    “ನಮ್ಮ ಮನೇಯವರದ ಜೀನ್ಸ್ ಪ್ಯಾಂಟ ತಗೀರಿ, ಅದ ಹೆಣಾ ಇದ್ದಂಗ ಅದ. ಅದರದ ವೇಟಿಗೆ ಹಂಗ ಆಗ್ತಿರಬೇಕು” ಅಂತ ಮತ್ತ ನನ್ನ ಹೆಂಡತಿ ಹಿತ್ತಲದಾಗಿಂದ ಒದರಿದ್ಲು.
    I am glad she did not refer you for deadbody 🙂 lol..what a humorous article. your composition words
    is great.
    thank you avadhi for sharing with us
    nikhil-pune

    ಪ್ರತಿಕ್ರಿಯೆ
  4. venktesh

    as usual nice article sir, the punch line of article is “ಅಯ್ಯ ಸುಟ್ಟ ಬರಲಿ, ನಾ ಮನಷ್ಯಾರ ಇಷ್ಟ ಬೊಜ್ಜ ಬಂದ ಭಾರ ಇರತಾರ, ಭಾಳ ಅಂದರ ಅವರ ಮಕ್ಕಳಿಗೆ ಮುಂದ ಬೊಜ್ಜ ಬರತದ ಅಂತ ಕೇಳಿದ್ದೆ. ಆದರ ಅವರ ಹಾಕೋಳೊ ಅರಬಿಗೂ ಈ ಪರಿ ಬೊಜ್ಜ ಬಂದ ಭಾರ ಇರತಾವ ಅಂತ ಇವತ್ತ ಗೊತ್ತಾಗಿದ್ದ ಬಿಡ”
    🙂 hope your mother and wife does not read your writings.

    ಪ್ರತಿಕ್ರಿಯೆ
  5. lakshmishankarjoshi

    . ಅದರಾಗ ನಮ್ಮ ಮನ್ಯಾಗ ಗಂಡಸರು ಅರಬಿ ಒಗೆಯೋ ಪದ್ಧತಿ ಇಲ್ಲಾ, ನಂಬದು ಬನಶಂಕರಿ ಒಕ್ಕಲಾ, ಹಿಂಗಾಗೆ ಮನಿ ಕೆಲಸಾ ಬರೇ ಹೆಣ್ಣ ಮಕ್ಕಳ ಮಾಡಬೇಕ.bhari ada statement.

    ಪ್ರತಿಕ್ರಿಯೆ
  6. DR SHANTANAGODA JAKKANAGOUDAR

    SIR. DAYMADI KSHMA MADRI BALA DINADA NANTRA TMMA KATE NODANI ADKKA AAMALE REPLY MADATENI

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: