ಪ್ರಶಸ್ತಿ ಸಂದ ಖುಷಿ ಹಾಗೇ ಹಿಂಗಿಹೋಗಿದೆ…

BT-Jahnvai

ಬಿ ಟಿ ಜಾಹ್ನವಿ

ನನ್ನ ‘ಕಳ್ಳುಬಳ್ಳಿ’ ಕಥಾಸಂಕಲನವನ್ನು 2015ರ ಸಾಲಿನ ಕಥಾ ವಿಭಾಗದ ಪುಸ್ತಕ ಪ್ರಶಸ್ತಿಗೆ ದಲಿತ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದ್ದಕ್ಕಾಗಿ ಸಂಬಂಧಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ ಈ ಪ್ರಶಸ್ತಿಯನ್ನ ನಾನು  ನಿರಾಕರಿಸುತ್ತೇನೆ ಎಂದು  ತಿಳಿಸಲಿಚ್ಚಿಸುತ್ತೇನೆ.

crush a lifeಇತ್ತೀಚೆಗೆ ದಲಿತ ಸಮುದಾಯದ ಮೇಲೆ, ಮೇಲಿಂದ ಮೇಲೆ ಆಕ್ರಮಣಗಳು ನಡೆಯುತ್ತಲೇ ಇವೆ. ದೇವಸ್ಥಾನ ಪ್ರವೇಶಿಸಿದನೆಂದು ದಲಿತನೊಬ್ಬನ ಜೀವಂತ ದಹನ, ಅಂಬೇಡ್ಕರ್ ಗೀತೆಯನ್ನು ರಿಂಗ್ ಟೋನ್ ಮಾಡಿಕೊಂಡಿದ್ದಕ್ಕೆ ಶಿರಡಿಯಲ್ಲಿ ದಲಿತ ಯುವಕನೊಬ್ಬನನ್ನು ಕ್ರೂರವಾಗಿ ಹಿಂಸಿಸಿ ಕೊಂದು ಹಾಕಿದ್ದು, ಹೊಳೆನರಸಿಪುರ ತಾಲೂಕಿನ ಸಿಗರನಹಳ್ಳಿಯಲ್ಲಿ ದಲಿತರ ಬಹಿಷ್ಕಾರ, ಮಧ್ಯಪ್ರದೇಶದಲ್ಲಿ ದಲಿತ ಹೆಣ್ಣೊಬ್ಬಳನ್ನು ಥಳಿಸಿ, ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಆಕೆಯ ಬಾಯೊಳಗೆ ಬಲಿಷ್ಠನೊಬ್ಬ ಉಚ್ಚೆ ಒಯ್ದ ಘಟನೆ , ಉತ್ತರಪ್ರದೇಶದಲ್ಲಿ ದೂರು ನೀಡಲು ಠಾಣೆಗೆ ಹೋದ ದಲಿತ ಕುಟುಂಬವನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ ಪೋಲಿಸ್ ಇಲಾಖೆಯ ಅಟ್ಟಹಾಸ…

…ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಬ-ನಂದ್ ಗಡ್ ಗ್ರಾಮದ ಸುಮಾರು 40 ದಲಿತ ಕುಟುಂಬಗಳಿಗೆ ಅಲ್ಲಿನ ಮೇಲ್ಜಾತಿ ಜನರು ಸಾಮಾಜಿಕ ಬಹಿಷ್ಕಾರ ಹಾಕಿ,  ಗ್ರಾಮದ ದಲಿತರಿಗೆ ಸ್ಥಳೀಯ ಅಂಗಡಿಗಳಿಂದ ಅವರಿಗೆ ಯಾವುದೇ ವಸ್ತುಗಳನ್ನು ಖರೀದಿಸದಂತೆ, ಗಿರಣಿ ಮಿಲ್ ಗಳಿಗೆ ಪ್ರವೇಶಿಸದಂತೆ, ಧಾರ್ಮಿಕ ಪ್ರದೇಶಗಳಿಗೆ ಪ್ರವೇಶ ಮಾಡದಂತೆ ಮತ್ತು ನೀರು ತೆಗೆಯದಂತೆ ಕಟ್ಟಾಜ್ಞೆ ಮಾಡಿರುವುದು …

ಇಷ್ಟಲ್ಲಾ ನಡೆಯುತ್ತಿದ್ದರೂ ಎಲ್ಲೂ ದಲಿತರು, ದಲಿತ ಸಂಘಟನೆಗಳು, ದಲಿತ ಚಳುವಳಿಗಳು, ದಲಿತ ಪರಿಷತ್ತುಗಳು  ಎಲ್ಲರೂ ಒಗ್ಗೂಡಿ ಬೀದಿಗಿಳಿದು ಒಂದು ವ್ಯಾಪಕವಾದ ಪ್ರತಿಭಟನೆಯನ್ನೂ ಮಾಡಿಲ್ಲ; ವಿರೋಧಿಸಿ ಗಟ್ಟಿಯಾಗಿ ದನಿಯೂ ಎತ್ತಿಲ್ಲ.  ಈ ನಿಷ್ಕ್ರಿಯತೆಯೂ ಸೈತ  ಅತ್ಯಂತ ನೋವಿನ ಮತ್ತು ಆಘಾತಕರ ಸಂಗತಿ.

ಜತೆಗೆ ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಚಾರಗಳು, ರೈತರ ಸರಣಿ ಆತ್ಮಹತ್ಯೆ.. ಅಭಿವ್ಯಕ್ತಿ ಸ್ವಾತಂತ್ಯದ ಮೇಲಿನ ಹಲ್ಲೆ, ಆ ಸಲುವಾಗಿ ಬರಹಗಾರರ, ಚಿಂತಕರ, ಸಂಶೋಧಕರ ಹತ್ಯೆಗೈಯುತ್ತಿರುವುದು.. ನಮ್ಮ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ದೌರ್ಜನ್ಯ..  ದೇಶವಿಡೀ ವ್ಯಾಪಿಸುತ್ತಿರುವ ಮತೀಯ ಅಸಹನೆ…  ಮನಸ್ಸು ಒಪ್ಪುತ್ತಿಲ್ಲ. ಸಡಗರ, ಸಂಭ್ರಮ ಒಲ್ಲೆನುತಿದೆ.  ಪ್ರಶಸ್ತಿ ಸಂದ ಖುಷಿ ಹಾಗೇ ಹಿಂಗಿಹೋಗಿದೆ.  ಅಲ್ಲದೆ  ಪ್ರಶಸ್ತಿಗೆ ಪ್ರಶಸ್ತವೂ ಅಲ್ಲಾ ಈ ಪ್ರಾಣಾಂತಕ ಕಾಲ.

ಮತ್ತು ದೇಶಾದ್ಯಂತ ನಮ್ಮ ನಾಡಿನ ಹಿರಿಯ ಚಿಂತಕರೂ, ಸಂಶೋದಕರೂ ಆಗಿದ್ದ ಎಂ ಎಂ ಕಲ್ಬುರ್ಗಿಯವರ ಕೊಲೆ ಮತ್ತು ಹೆಚ್ಚುತ್ತಿರುವ ಮತೀಯ ಅಸಹನೆಯನ್ನು ಖಂಡಿಸಿ ಅನೇಕ ಸಾಹಿತಿಗಳು, ಚಿಂತಕರು ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿದ ಸಾಹಿತ್ಯ ಪ್ರಶಸ್ತಿಗಳನ್ನು  ಹಿಂದಿರುಗಿಸುವ ಮೂಲಕ ವಿರೋಧದ ಹೊಸ ಚಳುವಳಿಯನ್ನೇ ಹುಟ್ಟು ಹಾಕಿದ್ದಾರೆ. ಇದನ್ನು ಸ್ವಾಗತಿಸುತ್ತ, ಇವರೊಂದಿಗೆ ಕೈಜೋಡಿಸುವುದು ಒಬ್ಬ ಲೇಖಕಿಯಾಗಿ ನನ್ನ ಜವಬ್ದಾರಿ ಎಂದೂ ಭಾವಿಸುತ್ತೇನೆ.

ಈ ಹಿನ್ನಲೆಯಲ್ಲಿ, ಓರ್ವ ಲೇಖಕಿಯಾಗಿ, ದಲಿತಳಾಗಿ ಈ ಅನ್ಯಾಯವನ್ನು, ಕೌರ್ಯವನ್ನು ಮತ್ತು ದಲಿತ ಸಮುದಾಯದ  ನಿಷ್ಕ್ರಿಯತೆಯನ್ನೂ ಈ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ಖಂಡಿಸುತ್ತೇನೆ.
ವಂದನೆಗಳೊಂದಿಗೆ,

ಬಿ ಟಿ ಜಾಹ್ನವಿ
ಕಥೆಗಾರ್ತಿ
ದಾವಣಗೆರೆ

‍ಲೇಖಕರು admin

October 18, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: