ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿ ಮಳೆಗೂ ನೀನು ಚಿಗುರುವೆ…


ಚಿತ್ರ: ಆಶುತೋಷ್
‘ಅಲೆಮಾರಿ’ಯ ಕಾಡುವ ಮಳೆ ಹನಿಗಳು ಇಲ್ಲಿವೆ..
 1
ಏನೋ ಹೇಳಬೇಕೆಂಬ ತುಟಿಗಳಿಗೆ
ನೂರು, ಹಂಗುಗಳು ರಂಗು..
ನಕ್ಕಾಗಿದೆ.. ಬಿಕ್ಕಾಗಿದೆ.. ಮತ್ತೇನು?
ಮಳೆ.. ನಾನು ಮತ್ತು ನೀನು..
***
ಎಷ್ಟು ಚೆನ್ನಾಗಿವೆ ಪುಟ್ಟ ಪುಟ್ಟ ಹನಿಗಳು
ಕಣ್ಣೊಳಗೆ ಕಟ್ಟಿಟ್ಟಂತೆ ಕನಸುಗಳು.
ಕನಸಿಗೂ ಮಾತಿಲ್ಲ, ಹನಿ ತುಟಿ ಬಿಚ್ಚುವುದಿಲ್ಲ,
ನಾನೇನು ಹೇಳಿಲ್ಲ, ನಾನೇನೂ ಹೇಳೀಲ್ಲ..
***
ಹೂಂ, ರಾತ್ರಿ ತಾರೆಗಳನ್ನು ಎಣಿಸಿದ್ದೇನೆ,
ಬೊಗಸೆ ಬೊಗಸೆ ತುಂಬಿದ್ದೇನೆ.
ನೀನೆಂದು ಬರುವೆಯೋ ತಿಳಿಯದು,
ನಾನು ಎಷ್ಟು ಎಣಿಸಿದರೂ ಮುಗಿಯದು..
***
ಮುಟ್ಟಿದರೆ, ತಟ್ಟಿದರೇನೆ ಅರ್ಥವಾಗುವುದು!?
ಹನಿಹನಿಗಳು ಅದನೇ ಅಲ್ಲವೇ ಮಾಡುವುದು.
ಪೋಲಿತನವೆನಬೇಡ, ನಾಚಿದರೆ ನೀರಾಗುವುದು
ಬೊಗಸೆ ಚಾಚು, ಬಿದ್ದ ಹನಿ ಮುತ್ತಾಗುವುದು.
***
2
ಮಳೆಯಂತೆಬಿದ್ದು ನೆನೆಸೆ,
ನೆನಪುಗಳ ಬೀಜ ಬಿತ್ತಿ
ಹಸಿ ಹಸಿ ಇದ್ದಾಗಲೇಮರೆಯಾಗುವೆ..
ದಕ್ಕಿಸಿಕೊಳ್ಳುವ ಹಟವಿದ್ದವನಿಗೂ..
‘ಲೊಟ್ಟೆ’ ಎಂದು ಮಟ ಮಾಯಾವಾಗುವೆ.
ಕಣ್ಣ ತುಂಬ ಕರಗುವ
ಮುತ್ತುಗಳ ತುಂಬಿಕೊಂಡು
ತೆರೆದ ಬಾಹುಗಳಲ್ಲಿ ನಿನ್ನನಪ್ಪಿಕೊಳ್ಳಲು ನಿಂತರೆ
ನೀನೇ ನೀನಾಗಿ ಆವರಿಸುವೆ..
ಯಾವತ್ತೋ ಒಂದು ದಿನ
ಮತ್ತೆ ಹಾಗೇ..ಧುತ್ತನೆ ಎದುರಾದಾಗಲೇ
ನೀನಿರಲಿಲ್ಲವೆಂಬ ನೆನಪು..
ಕಳೆದಸಾರಿ ಅಂಗಿಗೆ ಮೆತ್ತಿದ
ನಿನ್ನ ಕೈಯ ಮದರಂಗಿ ಬಣ್ಣ,
ನನಗಾಗಿ ತುಂಬಿಕೊಂಡ ಕಣ್ಣ,
ಊರನ್ನೇ ಕರಗಿಸಿದ ಮಳೆ ಹನಿಗಳ ಬಣ್ಣ…
ಯಾಕೋ ಪ್ರತಿ ಮಳೆಗೂ
ನೀನು ಚಿಗುರುವೆ…
ನಾನು ಭಾರವಾಗುವೆ…

‍ಲೇಖಕರು avadhi

5 June, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading