
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.
ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.
ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.
ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಮೊನ್ನೆ ವಿಜಯಮ್ಮ ನನ್ನ ಈ ಹೈದರ್ ಕಾಲಂನ ಓದಿ ಒಂದು ಪ್ರಶ್ನೆ ಕೇಳಿ ನನ್ನ ತಲೆಯಲ್ಲಿ ಹುಳ ಬಿಟ್ಟರು. ಈ ಸಲ ಅದರ ಬಗ್ಗೆಯೇ ಬರೆಯುತ್ತೇನೆ. ಅವರು ಕೇಳಿದ ಪ್ರಶ್ನೆ ‘ವೀರಕೇಸರಿ ಸೀತಾರಾಮ ಶಾಸ್ತ್ರಿಗಳು ಬರೆದ ‘ದೌಲತ್’ ಕಾದಂಬರಿಯಲ್ಲಿ ಹೈದರಾಲಿಯ ಮಗ ಇನಾಯತ್ ಖಾನ್ ಅಂತ ಒಂದು ಪಾತ್ರ ಬರುತ್ತಲ್ಲಾ, ಅವನು ಮತ್ತು ಟೀಪು ನಡುವೆ ಪೈಪೋಟಿ ಇತ್ತು, ಅವನೇ ನವಾಬ ಆಗಬೇಕಿತ್ತು, ಟೀಪು ಅದನ್ನು ತಪ್ಪಿಸಿ ತಾನೇ ಸುಲ್ತಾನ್ ಆದ. ಅದರ ಬಗ್ಗೆ ಹೇಳುʼ
ಹೈದರ್ ತುಂಬಾ ಮೊದಲಿನಿಂದಲೂ ಟೀಪೂವನ್ನೇ ತನ್ನ ಅಧಿಕೃತ ಉತ್ತರಾಧಿಕಾರಿ ಅಂತ ಬೆಳೆಸಿಕೊಂಡು ಘೋಷಿಸಿಕೊಂಡು ಬಂದಿದ್ದ. ಪ್ರತಿ ಯುದ್ಧಕ್ಕೆ ಟೀಪುವನ್ನು ಕಳಿಸುವಾಗಲು ಹೈದರ್ ಹೇಗೆ ಅವನನ್ನು ಕರೆಸಿ ಅವನ ಮುಖವನ್ನು ತನ್ನ ಎರಡು ಕೈಗಳಲ್ಲಿ ಹಿಡಿದು ದಿಟ್ಟಿಸಿ ನೋಡಿ, ತಲೆ ಸವರಿ, ನಂತರ ಯುದ್ಧ ತಂತ್ರಗಳ ಬಗ್ಗೆ ನೆನಪಿಸಿ ಎಚ್ಚರಿಕೆಯಲ್ಲಿರು ಅಂತ ಹೇಳಿ ಕಳಿಸುತ್ತಿದ್ದ. ತನ್ನ ಅತ್ಯಂತ ನಂಬಿಕಸ್ಥ ಆರೇಳು ಯೋಧರನ್ನು ಟೀಪುವಿನ ಸುತ್ತ ಇರುವಂತೆ ಏರ್ಪಾಡು ಮಾಡಿದ್ದ.
ಯಾವ ಸಂದರ್ಭದಲ್ಲೂ ಅವರು ಟೀಪುವಿಗೆ ಅಪಾಯವಾಗದಂತೆ ರಕ್ಷಿಸಬೇಕಿತ್ತು. ಅದನ್ನು ಅವರು ನಿಷ್ಠೆಯಿಂದ ಮಾಡುತ್ತಿದ್ದರು. ಕೊನೆಯಲ್ಲಿ ಶ್ರೀರಂಗಪಟ್ಟಣ ಪತನವಾದಾಗ ಅವರಲ್ಲಿ ಒಬ್ಬನಿಗೆ ಗುಂಡೇಟು ಬಿದ್ದು ಅವನು ಕೆಳಕ್ಕುರುಳಿದ್ದನ್ನು ನೋಡಿ ಟೀಪು, ಹಿಂದಿನಿಂದ ಒಬ್ಬ ‘ಹೋಗಬೇಡಿ ಹೋಗಬೇಡಿ’ ಎಂದು ಕೂಗುತ್ತಿದ್ದರೂ ಅಲಕ್ಷಿಸಿ ಆ ಕಡೆಗೆ ಧಾವಿಸಿದಾಗ ಬ್ರಿಟಿಷರು ಅಷ್ಟರಲ್ಲಿ ಕೋಟೆಯೊಳಗೆ ನುಗ್ಗಲು ಪ್ರಾರಂಭಿಸಿದ್ದರು, ಅವರು ಟೀಪುವಿನ ಮೇಲೆ ಬಿದ್ದು ಇರಿದರು. ಇರಲಿ, ಅಂತಹ ಹೈದರ್ ಬೇರೊಬ್ಬನಿಗೆ ನವಾಬನ ಸ್ಥಾನ ಕೊಡುತ್ತಾನೆಯೇ ಎಂದು ಕೇಳಿದರೆ ಹೈದರನ ದೃಷ್ಟಿಯಲ್ಲಿ ಇಲ್ಲ. ಟೀಪುವಿಗೆ ಮತ್ತೊಬ್ಬ ಸ್ಪರ್ಧಿ ನಿಜಕ್ಕೂ ಇರಲಿಲ್ಲ. ಆದರೆ ಟೀಪುವಿನಲ್ಲಿದ್ದ ಅಹಂ, ಮತ್ಸರ ಮತ್ತು ಇಯಾಜ್ ಖಾನನ (ಅಥವಾ ಅಯಾಜ್ ಖಾನ್) ಬಗ್ಗೆ ಇದ್ದ ದ್ವೇಷ ಮಾತ್ರ ನಿಜ.

ತಂದೆಯ ಸಾಕುಮಗ ಇರಲಿ, ಹೈದರನ ಸ್ವಂತ ಮಗ ಸಫ್ದರ್ ಶಿಕೋ ಬಹಾದೂರ್ ಅಲಿಯಾಸ್ ಕರೀಂ ಷಾನನ್ನು ಕಂಡರೂ ಟೀಪುವಿಗೆ ಸಹ್ಯವಾಗುತ್ತಿರಲಿಲ್ಲ. ಹೈದರ್ ಬಹಳ ಇಷ್ಟಪಟ್ಟು ಮದುವೆಯಾದ ಕೆನ್ನಿ ಸಾಹಿಬಾಳಲ್ಲಿ ಹುಟ್ಟಿದ ಸಫ್ದರ್ ಬಗ್ಗೆ ಹೈದರ್ ಗೆ ತುಂಬಾ ಪ್ರೀತಿ ಇತ್ತು. (12 ಆಗಸ್ಟ್ 1760 ರಲ್ಲಿ ದಿಂಡಿಗಲ್ ಯುದ್ಧ ಸಮಯದಲ್ಲಿ ಕೆನ್ನಿ ಸಾಹಿಬಾ ಮೇನೆಯಲ್ಲಿ ಹೋಗುತ್ತಿದ್ದಾಗ ಮೇನೆಯಲ್ಲೇ ಹುಟ್ಟಿದ!)
ವಯಸ್ಸಿಗೆ ಬಂದ ಮೇಲೆ ಅವನು ತಂದೆಯ ಜೊತೆಜೊತೆಯಲ್ಲೇ ಯುದ್ಧಕ್ಕೆ ಹೋಗುತ್ತಿದ್ದ. ಅವನನ್ನು 4000 ಕುದುರೆ ಮತ್ತು 2000 ಕಾಲಾಳುಗಳಿಗೆ ಮುಖ್ಯಸ್ಥನನ್ನಾಗಿ ನೇಮಿಸಿದ್ದ ಹೈದರ್. ಇವನಿಗೇ ಸವಣೂರಿನ ನವಾಬ ಹಕೀಮ್ ಖಾನನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು. ಹೈದರ್ ಸಾಯುವ ಮೊದಲು, 7 ಡಿಸೆಂಬರ್ 1782 ರಂದು ಕರೀಂ ಷಾನನ್ನು ದಿವಾನನ್ನಾಗಿ ನೇಮಿಸಿದ. ಆದರೆ ಟೀಪುವಿಗೆ ಅದೂ ಇಷ್ಟವಾಗದೇ ಕೇವಲ 24 ದಿನಗಳಲ್ಲಿ ಅಂದರೆ 2, ಜನವರಿ 1783 ರಂದು ಅವನನ್ನು ಪದಚ್ಯುತಿಗೊಳಿಸಿದ. ಇರಲಿ, ಇಯಾಜ್ ಖಾನನಿಗೆ ಮರಳೋಣಾ.
ಹೈದರಾಲಿ, ಕೇರಳದ ಚಿರಕ್ಕಲ್ ರಾಜನ ಹತ್ಯೆಯ ನಂತರ ಅವನ ಮಗ ವೆಲ್ಲುವಾಕ್ಕಮರಂ ಅಲಿಯಾಸ್ ಕಮ್ಮರನ್ ಪ್ರೀತಿಯಿಂದ ಕಮ್ಮು ಎಂದು ಕರೆಯುತ್ತಿದ್ದವನನ್ನು ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಬಂದು ಅವನಿಗೆ ಮತಾಂತರ ಮಾಡಿ ಅವನಿಗೆ ಮಹಮ್ಮದ್ ಇಯಾಜ್ ಖಾನ್ (ಇನ್ನೊಂದು ಹೆಸರು ಹಯಾತ್ ಸಾಬ್) ಅಂತ ಹೆಸರಿಟ್ಟು ಅವನ ಬಗ್ಗೆ ತುಂಬಾ ಕಾಳಜಿ ವಹಿಸಿದ. ಹೈದರನಿಗೆ ವೀರ ಯೋಧರು ಅಂದರೆ ಅತ್ಯಂತ ಪ್ರೀತಿ. ಅವರು ಯಾರೇ ಆಗಿರಲಿ. ಇಯಾಜ್ ಅಪ್ರತಿಮ ವೀರನಾದುದರಿಂದ ಹೈದರ್ ಅವನನ್ನು ತನ್ನ ಸಾಕುಮಗನೆಂದೇ ಕರೆದುಕೊಳ್ಳುತ್ತಿದ್ದ.
ಕಮ್ಮು ಶ್ರೀರಂಗಪಟ್ಟಣಕ್ಕೆ ಬಂದ ದಿನ ಒಂದು ಘಟನೆ ನಡೆಯಿತು ಎಂದು ಬಹಳ ರೋಮಾಂಚನಕಾರಿಯಾಗಿಸಿ ಕುಂಜಿರಾಮ ಮೆನನ್ ಕಳೆದ ಶತಮಾನದ ಪ್ರಾರಂಭದ ತಮ್ಮ ಮಲಯಾಳದ ಕಾದಂಬರಿ ‘ವೆಲ್ಲುವಾಕ್ಕಮರಂ’ನಲ್ಲಿ ಬರೆದಿದ್ದಾರೆ. ಇದು ಕಾಲ್ಪನಿಕ ಎಂದು ಎಲ್ಲರು ಒಪ್ಪಿಕೊಂಡಿದ್ದಾರೆ. ಏಕೆಂದರೆ ಇದಕ್ಕೆ ಚಾರಿತ್ರಿಕ ದಾಖಲೆ ಇಲ್ಲ. ಅದೇನೆಂದರೆ – ಕಮ್ಮು ಶ್ರೀರಂಗಪಟ್ಟಣಕ್ಕೆ ಬಂದ ದಿನ ಟೀಪು ಸುಲ್ತಾನ್ ತನ್ನ ಕುದುರೆ ಏರಿ ಒಂದು ಗೂಳಿಯನ್ನು ಅಟ್ಟಿಸಿಕೊಂಡು ಆಟವಾಡುತ್ತಾ ಭರ್ಜಿಯಲ್ಲಿ ತಿವಿದು ಸಾಯಿಸುವವನಿದ್ದ. ಅವನು ಯಾರೆಂದು ತಿಳಿಯದೇ ಕಮ್ಮು ವೇಗವಾಗಿ ತನ್ನ ಕುದುರೆಯನ್ನು ಓಡಿಸಿಕೊಂಡು ಬಂದು ಟೀಪು ಮತ್ತು ಗೂಳಿಯ ನಡುವೆ ನಿಂತು ‘ಅಮಾಯಕ ಪ್ರಾಣಿಯನ್ನು ಯಾಕೆ ಕೊಲ್ಲುತ್ತಿದ್ದೀಯಾ?’ ಎಂದು ಕೇಳಿ ತಡೆದ. ಟೀಪುವಿಗೆ ವಿಪರೀತ ಕೋಪ ಬಂತು. ಕಮ್ಮುವಿನ ಮೇಲೆ ಎಗರಿ ಹೋಗುವಾಗ ಕಮ್ಮುವನ್ನು ಕರೆಸಿದ್ದು ಹೈದರ್ ಎಂದು ಹೇಳಿ ಅವನನ್ನು ತಡೆಯಲಾಯಿತು. ಅಂದಿನಿಂದ ಟೀಪು ಮತ್ತು ಕಮ್ಮು ನಡುವೆ ತೀವ್ರ ಪೈಪೋಟಿ, ದ್ವೇಷ ಹುಟ್ಟಿಕೊಂಡಿತು.

ಹೈದರ್ ಕಮ್ಮುವನ್ನು ಮತಾಂತರಗೊಳಿಸಿ ಇಯಾಜ್ ಖಾನ್ ಉರುಫ್ ಹಯಾತ್ ಸಾಹಿಬ್ ಹೆಸರಿಟ್ಟು ಅವನಿಗೆ ಫ್ರೆಂಚ್ ಹಡಗಿನ ಕಮಾಂಡರ್ Bertrand Francois Mahe de La Bourdonnais ಹತ್ತಿರ ತರಬೇತಿಗೆ ಏರ್ಪಾಟು ಮಾಡಿದ. ಅವನನ್ನು ಪರೀಕ್ಷೆ ಮಾಡಲು ಕಷ್ಟಕರವಾದ ಕೆಲಸಗಳನ್ನು ಅವನಿಂದ ಮಾಡಿಸುತ್ತಿದ್ದ. ಇಯಾಜ್ ಖಾನ್ ನನ್ನು ‘ಅಸಾದಿ ಇಲಾಹಿ’ ಎನ್ನುವ ಹೊಸ ಮತಾಂತರಗೊಂಡ ಯೋಧರ ಪಡೆಯ ನಾಯಕನನ್ನಾಗಿ ನೇಮಿಸಿದ.
ಮೊದಲು ಅವನಿಗೆ ದಕ್ಷಿಣದ ಗಡಿಯಲ್ಲಿ ಮರಾಠರನ್ನು ಹಿಮ್ಮೆಟ್ಟಿಸುವ ಕೆಲಸ ಕೊಟ್ಟ. ಅದನ್ನು ಇಯಾಜ್ ಚೆನ್ನಾಗಿ ನಿರ್ವಹಿಸಿದ. ಮರಾಠರ ಸೇನಾಧಿಪತಿ ದಾವೆ ಹಿಮ್ಮೆಟ್ಟತೊಡಗಿದಾಗ ಹೈದರ್ ದಾವೆಗೆ ಒಂದು ಲಕ್ಷ ವರಹಗಳನ್ನು ಕೊಟ್ಟು, ಅವನು ಬ್ರಿಟಿಷರು ಮತ್ತು ಹೈದರಾಬಾದಿನ ನಿಜಾಮರ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ವಚನ ತೆಗೆದುಕೊಳ್ಳಲು ಹೇಳಿದ. ಇಯಾಜನಿಗೆ ಕೊಡಲು ಹೈದರ್ ಒಂದು ಲಕ್ಷ ವರಹಗಳನ್ನು ಟೀಪುವಿನ ಕೈಯಲ್ಲಿ ಕಳಿಸಿದ. ಟೀಪು ಬೇಕೆಂದೇ ಮೂರು ನಾಲ್ಕು ದಿನ ತಡ ಮಾಡಿದ. ಸಮಯ ಮೀರಿಹೋಗುತ್ತಿದ್ದುದನ್ನು ನೋಡಿ ಇಯಾಜ್ ಸ್ಥಳೀಯರಿಂದ ಹಣ ಕಡ ತೆಗೆದುಕೊಂಡು ದಾವೆಗೆ ಕೊಟ್ಟು ಒಪ್ಪಂದ ಮಾಡಿಕೊಂಡು ಬಿಟ್ಟ. ಟೀಪುವಿಗೆ ಮುಖಭಂಗವಾಯಿತು.
ಇನ್ನೊಂದು ಸಲ ಹೈದರ್ ಇಯಾಜನನ್ನು ಹೈದರಾಬಾದಿನ ನಿಜಾಮನ ಜೊತೆ ಸಂಧಾನಕ್ಕೆ ಕಳಿಸಿದ. ಹೈದರ್ ಗೆ ನಿಜಾಮನ ಜೊತೆ ನಿಜಕ್ಕೂ ವೈರತ್ವ ಬೇಕಿರಲಿಲ್ಲ ಏಕೆಂದರೆ ದಖನ್ನಿನಲ್ಲಿ ಹೈದರ್ ಮತ್ತು ನಿಜಾಮ್ ಇಬ್ಬರೇ ಮುಸಲ್ಮಾನ ನಾಯಕರುಗಳಿದ್ದಿದ್ದು. ನಿಜಾಮನಿಗೆ ಹೈದರಾಲಿಯ ಬಗ್ಗೆ ಅಷ್ಟೇನೂ ಅಕ್ಕರೆ ಇರಲಿಲ್ಲ ಆದರೆ ಭಯವಿತ್ತು.
ಹಿಂದೆ ಬ್ರಿಟಿಷರ ಕರ್ನಲ್ ಸ್ಮಿತ್ ನಿಜಾಮನ ಜೊತೆ ಹೈದರಾಲಿಗೆ ವಿರುದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದ. ಅಂತಹ ನಿಜಾಮನನ್ನು ಇಯಾಜ್ ಸುಲಭವಾಗಿ ಮನವೊಲಿಸಿ ಒಪ್ಪಂದ ಮುರಿಯುವಂತೆ ಮಾಡಿದ. ಯುದ್ಧದ ಧಾಳಿಯ ಸಮಯದಲ್ಲಿ ನಿಜಾಮ್ ಒಪ್ಪಂದವನ್ನು ಮುರಿದು ಹೈದರನ ಪರವಾಗಿ ಬಿಟ್ಟಾಗ ಕರ್ನಲ್ ಸ್ಮಿತ್ ಕಕ್ಕಾಬಿಕ್ಕಿಯಾಗಿಬಿಟ್ಟಿದ್ದ! ಈ ಪ್ರಸಂಗದ ಬಗ್ಗೆ ಬ್ರಿಟಿಷ್ ಯುದ್ಧ ದಾಖಲೆಗಳಲ್ಲಿ ಬಹಳ ವಿವರವಾಗಿ ವಿಶ್ಲೇಷಣೆ ಮಾಡಲಾಗಿದೆ.

ಇಯಾಜ್ ಹೋದರೆ ಸುಲಭವಾಗಿ ಸಂಧಾನ ಮಾಡಿಕೊಂಡು ಬರುತ್ತಾನೆ ಎಂದು ಹೈದರ್ ತನ್ನ ಮೆಚ್ಚುಗೆಯಾಗಿ ಚಿತ್ರದುರ್ಗದ ನಾಯಕತ್ವ ವಹಿಸಿಕೊಳ್ಳಲು ಹೇಳಿದ. ಅದನ್ನು ಇಯಾಜ್ ನಿರಾಕರಿಸಿದ. ಹೈದರ್ ಆಶ್ಚರ್ಯದಲ್ಲಿ ಕಾರಣ ಕೇಳಿದಾಗ ತನಗೆ ‘ಕನ್ನಡ ಮತ್ತು ಉರ್ದು ಭಾಷೆ ಓದಲು ಬರೆಯಲು ಬರುವುದಿಲ್ಲ, ಹೇಗೆ ಆಡಳಿತ ಮಾಡಲಿ’ ಎಂದು ಕೇಳಿದ.
ಅದಕ್ಕೆ ಹೈದರ್ ನೀಡಿದ ಉಪದೇಶ ‘ನಿನ್ನ ಬಲಗೈಯಲ್ಲಿ ಸದಾ ಒಂದು ಕೊರಡೆ ಇಟ್ಟುಕೊಂಡು ಬೀಸುತ್ತಿರು. ಅದು ನಿನಗೆ ಕಾಗದ ಮತ್ತು ಮಸಿಗಿಂತ ಹೆಚ್ಚು ಉಪಯೋಗಕ್ಕೆ ಬರುತ್ತದೆ’!
ಇಯಾಜ್ ಖಾನ್ 1779 ರಿಂದ ಮೂರು ವರ್ಷಗಳ ಕಾಲ ಚಿತ್ರದುರ್ಗದ ಆಡಳಿತ ನಡೆಸಿ ಚಿತ್ರದುರ್ಗವನ್ನು ಇಡೀ ಮೈಸೂರು ಸಂಸ್ಥಾನದಲ್ಲಿ ಅತ್ಯಂತ ಶ್ರೀಮಂತ ಜಿಲ್ಲೆಯಾಗಿಸಿದ್ದ ಮತ್ತು ಶ್ರೀರಂಗಪಟ್ಟಣ ಬಿಟ್ಟರೆ ಚಿತ್ರದುರ್ಗದ ಕೋಟೆ ಯನ್ನು ಎರಡನೇ ಅತ್ಯಂತ ಭದ್ರ ಕೋಟೆಯನ್ನಾಗಿ ಮಾಡಿದ್ದ. ಮರಾಠರು ಮತ್ತು ನಿಜಾಮರನ್ನು ಸಮಾಳಿಸಲು ಇದು ಬಹಳ ಮಹತ್ವದ ಅಂಶವಾಗಿತ್ತು.
1778ರಲ್ಲಿ ಬ್ರಿಟಿಷರು ಹೈದರನ ವಿರುದ್ಧ ಯುದ್ಧ ಘೋಷಿಸಿ ಬೇಡನೂರನ್ನು ವಶಪಡಿಸಿಕೊಳ್ಳಲು ಬಾಂಬೆಯಿಂದ ಜನರಲ್ ಮ್ಯಾಥ್ಯು ನೇತೃತ್ವದಲ್ಲಿ ಸೈನ್ಯ ಕಳಿಸಿದರು. ಆಗ ಹೈದರ್ ಇಯಾಜನನ್ನು ಚಿತ್ರದುರ್ಗದಿಂದ ಬೇಡನೂರಿಗೆ ಕರೆಸಿಕೊಂಡ. ತನ್ನ ಕಷ್ಟದ ಸಮಯದಲ್ಲಿ ಇಯಾಜ್ ತನಗೆ ಬಲಗೈ ಇದ್ದ ಹಾಗೆ ಎಂದು ಹೊಗಳುತ್ತಿದ್ದ. ಬೇಡನೂರನ್ನು ತಲುಪುವ ಮೊದಲು ಇಯಾಜ್ ಕೊಡಗಿನಲ್ಲಿ ಎದ್ದ ದಂಗೆಯನ್ನು ಅಡಗಿಸಿದ. ಅವನು ಬೇಡನೂರನ್ನು ತಲುಪಿದಾಗ ಕೋಟೆಯ ಪೂರ್ವ ಭಾಗದಲ್ಲಿ ಕೊಡಗಿನ ರಾಜ ದೊಡ್ಡಪ್ಪ ಖೈದಿಯಾಗಿದ್ದ. ಇಯಾಜ್ ಅವನನ್ನು ಕರೆಸಿ ಚೆನ್ನಾಗಿ ಬೈದು, ಶ್ರೀರಂಗಪಟ್ಟಣದಲ್ಲಿ ಸೆರೆಯಲ್ಲಿಡಲು ಕಳಿಸಿದ. ನಂತರ ಹೈದರನ ಅನುಮತಿ ಪಡೆದು ಬೇಡನೂರಿಗೆ ‘ಹೈದರ್ ನಗರ’ ಎಂದು ಹೆಸರಿಟ್ಟ!
1782 ಡಿಸೆಂಬರ್ 12 ನೇ ತಾರೀಕು ಟೀಪು ಪೊನ್ನಾಣಿಯಲ್ಲಿ ಕರ್ನಲ್ ಥಾಮಸ್ ಮೆಕೆಂಜಿ ಹಂಬರ್ಸ್ಟೋನ್ ಜೊತೆ ಯುದ್ಧ ನಿರತನಾಗಿದ್ದಾಗ ಅವನಿಗೆ ಹೈದರನ ಸಾವಿನ ಸುದ್ದಿ ತಲುಪಿತು. ಎಲ್ಲಿ ಇಯಾಜ್ ಖಾನ್ ಗದ್ದುಗೆಯನ್ನು ಆಕ್ರಮಿಸಿಕೊಂಡು ಬಿಡುತ್ತಾನೋ ಎಂದು ಟೀಪು ಅವಸರದಲ್ಲಿ ಶ್ರೀರಂಗಪಟ್ಟಣಕ್ಕೆ ಧಾವಿಸಿದ. ಆದರೆ ಇಯಾಜ್ ಗೆ ಇನ್ನೂ ಸುದ್ದಿ ಗೊತ್ತೇ ಇರಲಿಲ್ಲ.

ತಾನು ರಾಜನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಟೀಪು ಸುಲ್ತಾನ್ ಮಾಡಿದ ಮೊಟ್ಟಮೊದಲ ಕೆಲಸವೆಂದರೆ ಬೇಡನೂರಿನ ಎರಡನೇ ಸ್ಥಾನದಲ್ಲಿದ್ದ ದಳಪತಿ ಶೇಕ್ ಇಬ್ರಾಹಿಂ ಖಾನನಿಗೆ ಒಂದು ಪತ್ರ ಬರೆದು ಅದನ್ನು ತಕ್ಷಣ ಕೊಡಲು ಹರಿಕಾರನನ್ನು ಕಳಿಸಿದ್ದು. ಹರಿಕಾರ ಬೇಡನೂರಿಗೆ ಬಂದಾಗ ಇಯಾಜ ಮತ್ತು ಇಬ್ರಾಹಿಂ ಒಟ್ಟಿಗಿದ್ದರು. ಹರಿಕಾರ ಪತ್ರವನ್ನು ಇಯಾಜನ ಕೈಯಲ್ಲಿ ಕೊಟ್ಟ. ಅದರಲ್ಲಿ ಟೀಪು ಇಬ್ರಾಹಿಂ ಗೆ ತಕ್ಷಣ ಇಯಾಜನನ್ನು ಕೊಂದು ಅವನೇ ಬೇಡನೂರಿನ ಆಡಳಿತ ಕೈಗೆ ತೆಗೆದುಕೊಳ್ಳಲು ತಿಳಿಸಿದ್ದ!
ಇಯಾಜ್, ತಾನೇ ಇಬ್ರಾಹಿಂನನ್ನು ಕೊಂದ! ನಂತರ ಉಪದಳಪತಿ ರಘುನಾಥ ಪಂಥನನ್ನು ಕರೆದು ತನ್ನ ನಿರ್ಧಾರವನ್ನು ತಿಳಿಸಿದ. ಅದೇನೆಂದರೆ ಇಯಾಜ್ ತನ್ನ ನೆಚ್ಚಿನ ಕುದುರೆ ಫಿರೋಜನ್ನು ಏರಿ, 50 ಬ್ರಿಟಿಷ್ ಅಶ್ವಾರೋಹಿಗಳ ಜೊತೆ ಬ್ರಿಟಿಷರ ಕ್ಯಾಂಪಿಗೆ ಹೋಗಿ, ಜನರಲ್ ಮ್ಯಾಥ್ಯು ಗೆ ಬೇಡನೂರಿನ ಕೋಟೆಯನ್ನು ವಹಿಸಿ ತನ್ನನ್ನು ಕುದುರೆ ಸಹಿತ ತಲಸೇರಿಗೆ ಹಡಗಿನಲ್ಲಿ ಕರೆದುಕೊಂಡು ಹೋಗಲು ಕೇಳಿಕೊಳ್ಳುವುದು.
ಇಯಾಜ್ ಮಾರನೆಯ ಬೆಳಿಗ್ಗೆ ಬೇಡನೂರಿನ ಕೋಟೆಯಲ್ಲಿ ಖಜಾನೆಯನ್ನು ತೆರೆದು ಅಲ್ಲಿದ್ದ ಮೂರು ಲಕ್ಷ ವರಹಗಳಲ್ಲಿ ಅರ್ಧದಷ್ಟು ತಾನು ತೆಗೆದುಕೊಂಡು ಉಳಿದದ್ದನ್ನು ರಘುನಾಥ್ ಪಂಥ್ ಹಾಗು ಸೈನಿಕರಿಗೆ ಹಂಚಿದ. ಮೂರು ದಿನಗಳಲ್ಲಿ ಹಡಗು ತಲಸೇರಿ ತಲುಪಿತು. ಹಿಂದೆ ತನ್ನ ತಾಯಿ ಕಲ್ಯಾಣಿಯ ಅಣ್ಣ ರೈರು ನಂಬಿಯಾರ್ ಗೆ ಕೊಟ್ಟ ಮಾತಿನಂತೆ (ಈ ಕಥೆ ಇನ್ನೂ ಹೆಚ್ಚು ರೋಚಕವಾಗಿದೆ!) ಅಲ್ಲೊಂದು ಶಿವನ ದೇವಸ್ಥಾನವನ್ನು ಕಟ್ಟಿಸಿ ನಂಬೂದರಿ ಬ್ರಾಹ್ಮಣರಿಗೆ ಅದನ್ನು ಮತ್ತು ಸಾಕಷ್ಟು ನೆಲವನ್ನು ದಾನ ಮಾಡಿದ. ಮಾವಿಲನ್ ಕುನ್ನು ಎನ್ನುವಲ್ಲಿ ತನ್ನ ಪ್ರೀತಿಯ ಮಡದಿ ಅಮಿನಾಳೊಡನೆ ನೆಲೆಸಿದ.
ಆದರೆ ಅಲ್ಲಿ ಬಹಳ ಕಾಲ ಇರಲಾಗಲಿಲ್ಲ. 1784ರಲ್ಲಿ ಒಂದು ದಿನ ಕೊಳದಲ್ಲಿ ಸ್ನಾನ ಮಾಡಿ ಬಂದ ಅಮೀನಾ ಜ್ವರ ಬಂದು ಹನ್ನೊಂದು ದಿನಗಳ ನಂತರ ತೀರಿಕೊಂಡಳು.

ಅದೇ ವರ್ಷ ಟೀಪು ಮತ್ತು ಬ್ರಿಟಿಷರ ನಡುವೆ ಮಂಗಳೂರು ಶಾಂತಿ ಒಪ್ಪಂದಕ್ಕೆ ಸಹಿ ಆಯಿತು. ಒಪ್ಪಂದದ ಅಂಗವಾಗಿ ಯುದ್ಧ ಖೈದಿಯಾಗಿ ಇಯಾಜನನ್ನು ತನಗೆ ಒಪ್ಪಿಸಬೇಕೆಂದು ಟೀಪು ಬ್ರಿಟಿಷರಿಗೆ ಷರತ್ತು ಹಾಕಿದ. ಆದರೆ ಬ್ರಿಟಿಷರು ಅದನ್ನು ನಿರಾಕರಿಸಿದರು.
ಟೀಪು ತನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ತಿಳಿದ ಇಯಾಜ್ ಬಾಂಬೆಗೆ ಹೋಗಿ ಅಜ್ಞಾತವಾಗಿ ವಾಸಿಸಿದ. ಇಯಾಜನನ್ನು ಕೊಲ್ಲಲಾಗದ ಸಿಟ್ಟಿಗೆ ಟೀಪು 1788ರಲ್ಲಿ ತನ್ನ ಸೈನ್ಯದ ಕಮಾಂಡರ್ ಲ್ಯಾಲಿ ಮತ್ತು ಮೀರ್ ಅಸ್ರಾಲಿ ಖಾನ್ ಗೆ ಕೊಟ್ಟಾಯಂ ನಿಂದ ಪಾಲಘಾಟ್ ವರೆಗೆ ಎಲ್ಲಾ ನಾಯರ್ ಗಳನ್ನೂ ಕೊಲ್ಲಿ ಎಂದು ಅಪ್ಪಣೆ ಮಾಡಿದ. ಇದನ್ನು Order of Extermination of Nairs ಎಂದು ಕರೆಯಲಾಯಿತು.
ಬ್ರಿಟಿಷರು ಬಾಂಬೆಯಲ್ಲಿ ಇಯಾಜನಿಗೆ 20 ಎಕರೆ ಜಮೀನನ್ನು ಒಂದು ಬಂಗಲೆಯನ್ನೂ ಕೊಟ್ಟರಂತೆ, ಆದರೆ ಇಯಾಜ್ ತಡಿಕೆಯ ಮೂರು ಕೋಣೆಗಳ ಮನೆಯಲ್ಲಿ ಇದ್ದುಕೊಂಡು ಬಂಗಲೆಯನ್ನು ಅನಾಥಾಶ್ರಮ ಮಾಡಿದನಂತೆ. ಆದರೆ ನಂತರ ಸಿಕ್ಕ ದಾಖಲೆಯ ಪ್ರಕಾರ ಅವನು ತಾನೇ ಒಂದು ಅನಾಥಾಶ್ರಮದಲ್ಲಿ ಇದ್ದ ಅಷ್ಟೇ. ಬ್ರಿಟಿಷರು ಅವನಿಗೆ ರೂ 4000 ಪೆನ್ಶನ್ ದಯಪಾಲಿಸಿದರು. ಅವನ ಮಗ ಫಯಾಜ್ ಅಲಿ ಖಾನ್ ತನ್ನ ತಂದೆಯ ಪೆನ್ಶನ್ ತನಗೆ ಬರಬೇಕೆಂದು ಬಹಳ ಹೋರಾಡಿದ. ಆದರೆ ಅದು ಫಲಪ್ರದವಾಗಲಿಲ್ಲ. ಕೊನೆಗೆ ಅವನ ಪ್ರತಿನಿಧಿ ಮುಹಿಯಾಲುದ್ದೀನ್ ಇಂಗ್ಲೆಂಡಿಗೇ ಹೋಗಿ ಅಲ್ಲಿಯ ಕೋರ್ಟಿನಲ್ಲಿ ಹೋರಾಡಿದ. ಕೊನೆಯಲ್ಲಿ ಲಂಡನ್ ಕೋರ್ಟು ಫಯಾಜ್ ಗೆ ಪೆನ್ಶನ್ ಕೊಡಬೇಕು ಎಂದು ತೀರ್ಮಾನ ಕೊಟ್ಟಿತು. ಆ ಕಾಗದ ಪತ್ರಗಳನ್ನು ತೆಗೆದುಕೊಂಡು ಅವನು ಭಾರತಕ್ಕೆ ಹಿಂದಿರುಗುತ್ತಿದ್ದಾಗ ಹಡಗು ಮುಳುಗಿ ಎಲ್ಲವೂ ಕಡಲ ಪಾಲಾಯಿತು.
ಮೊಟ್ಟಮೊದಲನೆಯದಾಗಿ, ಮಲಯಾಳಿ ಕಾದಂಬರಿಯಲ್ಲಿ ಚರಿತ್ರೆಗೆ ಬೇಕಾದಷ್ಟು ಕಾಲ್ಪನಿಕ ಚಿತ್ರಣಗಳನ್ನು ಸೇರಿಸಿ ಬರೆಯಲಾಗಿದೆ. ಕನ್ನಡದಲ್ಲಿ ವೀರಕೇಸರಿ ಸೀತಾರಾಮ ಶಾಸ್ತ್ರಿಗಳು 1937 ರಲ್ಲಿ ಬರೆದ ‘ದೌಲತ್’ ಕಾದಂಬರಿಯೂ ಸಹಾ ಹೈದರಾಲಿ, ಇಯಾಜ್ ಖಾನ್ ಮತ್ತು ಟೀಪು ನಡುವಿನ ಘಟನೆಗಳ ಸುತ್ತ ಹೆಣೆಯಲಾದ ಕಥೆಯಾಗಿದ್ದು, ಅಂದಿನ ಕಾಲದ, ಅದರಲ್ಲೂ ಅವರ ವಿಶಿಷ್ಟ ಶೈಲಿಯ, ಆಡಂಬರದ ನಿರೂಪಣೆಯಲ್ಲಿದೆ. ಇದು ಮೂರು ಸಂಪುಟಗಳಲ್ಲಿ ಪ್ರಕಟವಾಯಿತು.

ದೌಲತ್ ಹೈದರನ ಸಾಕುಮಗಳಾಗಿದ್ದಳೆಂದೂ ಅವಳನ್ನು ಇಯಾಜ್ ಖಾನ್ ಮತ್ತು ಟೀಪು ಇಬ್ಬರೂ ಪ್ರೀತಿಸಿದರೆಂದೂ ಅದರಿಂದಾಗಿ ಅವರ ನಡುವೆ ದ್ವೇಷ, ಪೈಪೋಟಿ ಇತ್ತೆಂದೂ ಚಿತ್ರಿಸಿದ್ದಾರೆ. ಹಾಗಾದರೆ ನಾವು ಇದನ್ನು ಕನ್ನಡದ ಮೊದಲ ‘ಇನ್ಸೆಸ್ಟ್’ (ಸೋದರಿಯ ಜೊತೆ ಪ್ರಣಯ) ಕಾದಂಬರಿ ಅನ್ನಬಹುದೇ? (ನಂತರವೂ ಈ ಥರದ ವಸ್ತುವಿನ ಕನ್ನಡದ ಕಾದಂಬರಿ ನನ್ನ ಗಮನಕ್ಕೆ ಬಂದಿಲ್ಲ)
ನಿಜವಾಗಿಯೂ ದೌಲತ್ ಎನ್ನುವವಳು ಹೈದರ ಸಾಕುಮಗಳೇ, ಟೀಪು ಮತ್ತು ಇಯಾಜ್ ಅವಳನ್ನು ಪ್ರೀತಿಸಿದರೇ ಎಂದು ಕೇಳಿದರೆ ಅದಕ್ಕೆ ದಾಖಲೆ ಇಲ್ಲ. ಇದು ಕಲ್ಪನೆ. ಅಥವಾ ದೌಲತ್ ಪಾತ್ರಕ್ಕೆ ಸ್ಫೂರ್ತಿ ಯಾರು ಎನ್ನುವುದನ್ನು ಸೀತಾರಾಮ ಶಾಸ್ತ್ರಿಗಳು ಹೇಳಿಲ್ಲ. ಹೈದರನ ಜನಾನಾದಲ್ಲಿ ಬೇಕಾದಷ್ಟು ಹೆಂಗಸರಿದ್ದರು. ಅವರೆಲ್ಲರೂ ಅವನ ಹೆಂಡತಿಯರಲ್ಲ. ಅನೇಕ ಸಾಕುಮಕ್ಕಳೂ ಅವರಲ್ಲಿ ಇದ್ದಿರಬಹುದು.
ಈ ಅಂಕಣಕ್ಕೆ ಸ್ಪಂದಿಸಿ ಸುಬ್ರಾಯ ಚೊಕ್ಕಾಡಿಯವರು ‘ಒಂದು ಕಾದಂಬರಿ ಬರೆಯಿರಿ’ ಎಂದು ಹೇಳಿದರು. (ಮಾಲಿನಿ ಗುರುಪ್ರಸನ್ನ ಅವರ ಮೂಲಕ!) ವಂದನೆಗಳು ಸರ್. ಆದರೆ ನನಗಿರುವ ಭಯ ಅಂದರೆ ಮೊದಲೇ ನಮ್ಮಲ್ಲಿ ಕನ್ನಡ, ಬ್ರಿಟಿಷ್, ಫ್ರೆಂಚ್, ಡಚ್, ಪರ್ಷಿಯನ್ ಪೋರ್ಚುಗೀಸ್ ಮತ್ತಿತರ ಚಾರಿತ್ರಿಕ ದಾಖಲೆಗಳಲ್ಲಿ ಬೇಕಾದಷ್ಟು ಪ್ರಕ್ಷಿಪ್ತಗಳು ಸೇರಿಹೋಗಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅವುಗಳನ್ನು ಕೂಲಂಕಷವಾಗಿ ಎಚ್ಚರಿಕೆಯಿಂದ ಪರಿಶೀಲಿಸಿ ಸುಳ್ಳುಗಳನ್ನು ತೆಗೆದುಹಾಕಿ ಆದಷ್ಟೂ ಚರಿತ್ರೆಗೆ ಹತ್ತಿರವಾದ ಒಂದು ಗ್ರಂಥ ಬರೆಯುವ ಅಗತ್ಯವಿದೆ. ಅದನ್ನು ಬರೆದರೇನೇ ಕಾದಂಬರಿಯಷ್ಟು ರೋಚಕವಾಗಿರುತ್ತದೆ! ಪ್ರಯತ್ನಿಸುತ್ತೇನೆ.









ನಿಮ್ಮದೊಂದು ಕವನ ಓದಿದ ಹಾಗೇ ಆಯ್ತು ಪ್ರತಿಭಾ. ಚಣ ಅಲುಗದಂತೆ ಹಿಡಿದಿಟ್ಟುಕೊಳ್ಳುತ್ತದೆ ಬರಹ. ಗೊತ್ತಿರದ ಎಷ್ಟು ಮಾಹಿತಿಗಳು ,!!!!!
ಥ್ಯಾಂಕ್ಯೂ ಲಲಿತಾ… ತುಂಬಾ ಅಡಕವಾಗಿ ಬರೆಯುತ್ತಿದ್ದೇನೆ. ಒಂದೊಂದು ಸಂಗತಿಯೂ ಒಂದೊಂದು ಅಧ್ಯಾಯ ಮಾಡಬಹುದು ವಿಷಯ ಅಷ್ಟು ವಿಸ್ತಾರ ಇದೆ! ಮುಂದಿನ ವರ್ಷ ಹೈದರಾಲಿ ಕುರಿತ ನನ್ನ ದೊಡ್ಡ ಪುಸ್ತಕ ಬರಲಿದೆ.