ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಮತ್ತೀಹಳ್ಳಿ ಕತೆ: ಇಬ್ಬನಿ ತೊಯ್ದ ಪಾರಿಜಾತ

-ಪ್ರಜ್ಞಾ ಮತ್ತೀಹಳ್ಳಿ

ಕೂ ಎಂದು ಕರ್ಕಶವಾಗಿ ಊದ್ದನೆಯ ಶಿಳ್ಳೆ ಹಾಕಿದ ರೈಲು ತನ್ನ ಕಂಪನವನ್ನೂ ಹೆಚ್ಚಿಸಿಕೊಂಡು ಯಾಕೊ ಜೋರಾಗಿಯೇ ಅಲುಗಾಡತೊಡಗಿತು. ಸುಮಾರು ಹೊತ್ತಿನಿಂದ ಒಂದೇ ಭಂಗಿಯಲ್ಲಿ ಮಲಗಿದ್ದ ವೇಣಿಗೆ ಕಿಬ್ಬೊಟ್ಟೆಯಾಳದಿಂದ ಸಣ್ಣಗೊಂದು ನೋವಿನಲೆ ಎದ್ದಂತಾಯಿತು. ಓಹೊ ನಾನು ಹಾಸ್ಟೆಲು ಬಿಟ್ಟು ಆಗಲೇ ಮೂರು ತಾಸಾಯಿತು. ಸಿಟಿ ಬಸ್ ಹತ್ತಿ, ಆಮೇಲೆ ಅಳ್ನಾವರದ ಬಸ್ ಹಿಡಿದು ಒಂದು ತಾಸು ಪ್ರಯಾಣ ಮಾಡಿ ಅಲ್ಲಿನ ರೈಲು ನಿಲ್ದಾಣ ತಲುಪಿ ಈ ರೈಲು ಏರಿದ್ದಳು. ತನ್ನ ಸಾಹಸದ ಬಗ್ಗೆ ತಿಳಿದರೆ ಅಪ್ಪ-ಅಮ್ಮ ಹಣೆಹಣೆ ಜಜ್ಜಿಕೊಳ್ಳುತ್ತಾರೆ. ಪ್ರಿಯಕರನ ಬರ್ತಡೇ ವಿಶ್ ಮಾಡಲು ಇಷ್ಟೆಲ್ಲ ಪಾಡು ಪಡುವುದೆಂದರೆ ಹುಚ್ಚೇ ಸರಿ. ಆದರೆ ತನ್ನ ಯೋಜನೆಯ ಬಗ್ಗೆ ಇಂದುಚಿಕ್ಕಿಗೆ ಫೋನು ಮಾಡಿದಾಗ ಆಕೆ ಮಾತ್ರ ಸಕತ್ ಥ್ರಿಲ್ಲಾಗಿದ್ದಳು.

ಸಮಾಜ ಕಲ್ಯಾಣ ಇಲಾಖೆಯವರು ಕರೆದ ಮೀಟಿಂಗ್ ಒಂದಕ್ಕಾಗಿ ತಾನು ಬೆಂಗಳೂರಿಗೆ ಬಂದಿರುವುದಾಗಿಯೂ ಶಾಂತನು ಅವರ ನಾಟಕ ನೋಡಲು ಬರುತ್ತೇನೆ. ಆತನನ್ನು ಭೆಟ್ಟಿ ಮಾಡಿಸು ಅಂತ ಹೇಳಿದ್ದಳು. ಅವನು ಹತ್ತುವ ರೈಲನ್ನು ಅವನಿಗಿಂತ ಮೊದಲನೇ ಸ್ಟೇಶನ್‍ದಲ್ಲಿ ಹತ್ತಿ ಅವನ ಬರ್ತ ಮೇಲಗಡೆ ಅವನಿಗೆ ಕಾಣದಂತೆ ಮಲಗಿದ್ದು ರಾತ್ರಿ ಹನ್ನೆರಡು ಗಂಟೆಗೆ ಅವನಿಗೆ ಇಷ್ಟವಾದ ಬ್ಲ್ಯೂ ಬೆರಿ ಕೇಕ್ ಕೊಟ್ಟು ಆಶ್ಚರ್ಯಪಡಿಸಿ ವಿಶ್ ಮಾಡುವ ವಿಚಾರವೇ ಇಂದೂಚಿಕ್ಕಿಗೆ ಹೊಸದಾಗಿ ಕಂಡಿತ್ತು. ಜಗತ್ತಿನಲ್ಲಿ ಹೀಗೆ ಯಾರೂ ಮಾಡಿರುವುದಿಲ್ಲ ಬಿಡು, ನಿನ್ನದು ಗಿನ್ನಿಸ್ ದಾಖಲೆ ಆಗುತ್ತದೆ ಎಂದು ವೇಣಿಯನ್ನು ಹುರಿದುಂಬಿಸಿದ್ದಳು. ಆದರೆ ಹನ್ನೆರಡು ಗಂಟೆಯವರೆಗೆ ಶಾಂತನುಗೆ ಕಾಣಿಸಿಕೊಳ್ಳದೆ ರಹಸ್ಯವಾಗಿರಬೇಕಿತ್ತು. ಶಾಂತನು ನಾಟಕ ಸ್ಪರ್ಧೆಗೆ ಬೆಂಗಳೂರಿಗೆ ಹೊರಟ ವಿಚಾರ ಗೊತ್ತಾದ ಕೂಡಲೆ ಅವನ ಬರ್ತಡೇ ದಿನ ಅವನಿರುವುದಿಲ್ಲ ಎಂದು ವೇಣಿಗೆ ಪಿಚ್ಚೆನಿಸಿತ್ತು.

ಅವನಿಗೆ ತಿಳಿಸದೆ ತಾನೂ ಅಲ್ಲೇ ಇದ್ದು ಅವನಿಷ್ಟದ ಬ್ಲ್ಯೂಬೆರಿ ಕೇಕ್ ತಿನ್ನಿಸಿ ನಡುರಾತ್ರಿ ವಿಶ್ ಮಾಡಿದರೆ ಹೇಗಿರುತ್ತದೆ ಎಂಬ ವಿಚಾರ ಬಂದಿದ್ದೇ ತಡ ತಾನೂ ರಿಸರ್ವೇಶನ್ ಮಾಡಿಸಿದಳು. ಆಮೇಲೆ ಶಾಂತನು ಕೈಲಿದ್ದ ಟಿಕೆಟ್ ನೋಡಿದಳು. ಅವನದು ಏಳು ಜನರ ತಂಡ. ಆ ಬೋಗಿಯಲ್ಲಿ ಒಂದು ಅಪ್ಪರ್ ಬರ್ತ ಬಿಟ್ಟು ಉಳಿದೆಲ್ಲವನ್ನು ಅವರು ಆಕ್ರಮಿಸಿದ್ದರು. ಆ ಬರ್ತ ಬೇರೆ ಯಾರಿಗೊ ಅಲಾಟ್ ಆಗಿರುತ್ತದೆ. ಅದನ್ನು ತಾನು ಹೇಗಾದರೂ ಪಡೆಯಬೇಕೆಂದು ಲೆಕ್ಕಹಾಕಿಕೊಂಡಿದ್ದಳು. ಅಳ್ನಾವರದಲ್ಲಿ ರೈಲು ಹತ್ತಿದ ಕೂಡಲೆ ಟಿ.ಸಿ.ಯನ್ನು ಹುಡುಕಿ ಅವನನ್ನು ಭಯ್ಯಾ ಮದದ್ ಕರೊ ಎಂದು ಪೂಸಿ ಹೊಡೆದು ತನಗೆ ಇದೇ ಬರ್ತ ಬೇಕೆಂದು ಮತ್ತು ತನ್ನ ಬರ್ತ ಆ ವ್ಯಕ್ತಿಗೆ ಬದಲಿಸಿ ಕೊಡುವಂತೆ ಬೇಡಿಕೊಂಡಳು. ಇವಳ ಸಾಹಸ ಕಾರ್ಯದ ಬಗ್ಗೆ ಕೇಳಿಕೊಂಡು ಥ್ರಿಲ್ಲಾದ ಟಿ.ಸಿ. ಬಾರಾ ಬಜೆ ಕೇಕ್ ಖಾನೆಕೊ ಹಮೆ ಭಿ ಬುಲಾನಾ ಎಂದು ಕಂಡೀಶನ್ ಹಾಕಿ ಬರ್ತ ಏರಲು ಬಿಟ್ಟ.

ಮೂವತ್ತು ಕಿಲೊಮೀಟರ್ ನಂತರ ಶಾಂತನು ತಂಡ ಗಲಗಲ ಮಾತಾಡುತ್ತ ಡಬ್ಬಿಗೆ ಬಂದಾಗ ಹೊದಿಕೆಯ ಸಂದಿಯಿಂದ ನೋಡಿ ಒಳಗೊಳಗೇ ನಕ್ಕಳು. “ಮ್ಯಾಲೆ ಯಾರೊ ಮಲಗ್ಯಾರಲ್ಲೊ ಮುದುಕ ಇರ್ಬೇಕು” ಎಂದ ಅವರ ಮಾತಿಗೆ ಉಕ್ಕಿದ ನಗುವನ್ನು ತಡೆದುಕೊಂಡಳು. ಇವಳಿಗೆ ಅನುಕೂಲವಾಗಲೆಂದು ಟಿ.ಸಿ. ಲೈಟ್ ಆಫ್ ಕರೊ ದೂಸರೊಂಕೊ ತಕಲೀಫ ಹೋತಾ ಹೈ ಎನ್ನುತ್ತ ಲೈಟ್ ಆರಿಸಿದ್ದರಿಂದ ಕತ್ತಲಲ್ಲಿ ಮುಸುಕು ಬೀರಿದ್ದ ಇವಳನ್ನು ಅವರ್ಯಾರೂ ನೋಡಲಿಲ್ಲ.

ಕೆಳಗಡೆ ಲೋವರ್ ಬರ್ತನಲ್ಲಿ ಎದುರಾ ಬದುರಾ ಕೂತ ಗ್ಯಾಂಗು ಜೋರಾಗಿ ಹೋ ಎಂದು ಅಬ್ಬರಿಸಿತು. ಅಮರೇಶನ ಕತೆ ಮುಗಿಯಿತು. ಈಗ ಮುರುಗೇಶನ ಸರದಿ ಎನ್ನುತ್ತ ಗೆಳೆಯರೆಲ್ಲ ಅವನ ಕೈ ಜಗ್ಗತೊಡಗಿದರು. ರೈಲು ಹತ್ತಿದಾಗಿನಿಂದ ಒಬ್ಬೊಬ್ಬರಾಗಿ ತಮ್ಮ ಪ್ರೇಮದ ಕತೆಯನ್ನು ಹೇಳಿಕೊಳ್ಳುವ ಆಟ ಶುರುವಾಗಿತ್ತು. ಶಾಂತನು ಎಲ್ಲರಿಗಿಂತ ಮೊದಲು ಹೇಳಿದ್ದ. ತಾನೇ ಪಾತ್ರವಾಗಿರುವ ತನ್ನದೇ ಕತೆ ಕೇಳುವಾಗ ವೇಣಿಗೆ ಲಜ್ಜೆ, ನಾಚಿಕೆ, ಹೆಮ್ಮೆ ಎಲ್ಲ ಸೇರಿದ ಮಜಾ ಬಂದಿತ್ತು. ಶಾಂತನು ನಾಲ್ಕು ವರ್ಷದಿಂದ ಅವಳ ಇಂಜಿನಿಯರಿಂಗ್ ಸಹಪಾಠಿ. ಇಬ್ಬರದ್ದೂ ಕ್ಯಾಂಪಸ್ ಸೆಲೆಕ್ಶನ್ ಆಗಿದೆ. ಫೈನಲ್ ಪರೀಕ್ಷೆ ಮುಗಿಸಿದ ಕೂಡಲೆ ಹೈದರಾಬಾದಿಗೆ ಕೆಲಸಕ್ಕೆ ಹಾರಲಿದ್ದಾರೆ.

ಅವನಿಗೆ ಮೊದಲಿಂದಲೂ ನಾಟಕದ ಹುಚ್ಚು. ಊರಿನ ಅನೇಕ ರಂಗಾಸಕ್ತರನ್ನು ಸೇರಿಸಿಕೊಂಡು ತಂಡ ಕಟ್ಟಿದ್ದ. ಈ ತಂಡದಲ್ಲಿ ಬೇರೆ ಬೇರೆ ವಯೋಮಾನದವರು, ನೌಕರಸ್ಥರು ಇದ್ದರು. ಒಂದಿಬ್ಬರು ವೃತ್ತಿ ಕಂಪನಿಗಳಲ್ಲಿ ಕೆಲಸ ಮಾಡುವವರೂ ಇದ್ದರು. ಅಲ್ಲಿ ಸೀಸನ್ ಇಲ್ಲದಿದ್ದಾಗ ಇವನ ತಂಡದೊಂದಿಗೆ ಬರುತ್ತಿದ್ದರು. ಮುರುಗೇಶ ಅವರಲ್ಲೊಬ್ಬ. ಗಂಟಲು ಸರಿಪಡಿಸಿಕೊಳ್ಳುತ್ತ ಅವನು ತನ್ನ ಕತೆ ಶುರು ಮಾಡಿದ. “ನಮ್ಮ ಕಂಪನಿ ಕಳೆದ ಬೇಸಿಗೆಯಲ್ಲಿ ಮೂರು ತಿಂಗಳು ಪಾರ್ವತಿಪುರದಲ್ಲಿ ಕ್ಯಾಂಪ ಹಾಕಿತ್ರಿ” ಪಾರ್ವತಿಪುರ ಎಂದೊಡನೆ ವೇಣಿಯ ಕಿವಿ ನಿಮಿರಿತು. ಅದು ತಾಯಿಯ ತೌರುಮನೆ. ಅಪ್ಪ-ಅಮ್ಮ ವರ್ಗವಾಗುವ ನೌಕರಿಯಲ್ಲಿದ್ದರಿಂದ ಪೂರ್ತಿ ವಿದ್ಯಾಭ್ಯಾಸ ಅಜ್ಜಿಯ ಮನೆಯಲ್ಲುಳಿದುಕೊಂಡು ಮಾಡಿದ್ದಳು. ಕಾರಣಾಂತರದಿಂದ ಮದುವೆಯಾಗದೆ ಸಮಾಜ ಸೇವೆ ಮಾಡುತ್ತ ಮಹಿಳಾ ಸಹಾಯ ಕೇಂದ್ರ ತೆರೆದುಕೊಂಡಿದ್ದ ತಾಯಿಯ ತಂಗಿ ಇಂದುಚಿಕ್ಕಿ ಅವಳಿಗೆ ಆಪ್ತ ಗೆಳತಿಯಿದ್ದಂತೆ. “ನಮ್ಮ ನಾಟಕ ನೋಡಾಕ ಹುಡುಗಿಯೊಬ್ಬಾಕಿ ದಿನಾ ಬರಾಕ ಹತ್ತಿದಳ್ರಿ. ನಾಕು ದಿನ ಆದ ಮ್ಯಾಲೆ ಒಂದು ಬೆಳಗ್ಗೆ ಹತ್ತು ಗಂಟೆಕ್ಕ ನಾವು ಉಳಿದುಕೊಂಡಿದ್ದ ಟೆಂಟ್ ಒಳಗ ಬಂದಳು. ಕೈಯಾಗ ಸಾಲಿ ಬ್ಯಾಗ ಇತ್ತು. ಹಿರೊಯಿನ್ ಪಾತ್ರ ಮಾಡೊ ಕಮಲಕ್ಕ ಆಕಿನ್ನ ಮಾತಾಡಸಿದಳು.

“ನನ್ನ ಹೆಸರು ವಲ್ಲರಿ. ನನ್ನ ಟ್ಯೂಶನ್ ಕ್ಲಾಸ್ ಇಲ್ಲೇ ಬಾಜೂಕ್ಕ ಐತಿ. ನಂಗೆ ನಾಟಕ ಅಂದ್ರೆ ಭಾಳ ಸೇರ್ತೈತಿ. ಪಾರ್ಟ ಮಾಡೋರು ಹೆಂಗಿರ್ತಾರೆ ಅಂತ ನೋಡೊ ಕುತೂಹಲಕ್ಕ ಬಂದೆ” ಅಂದಳು. “ಹತ್ತನೆ ಕ್ಲಾಸು ಅಂದ್ರ ಅದು ಎಲ್ಲದರ ಬಗ್ಗೆ ತಿಳಕೊಳಾಕ ಹಚ್ಚೂ ವಯಸ್ಸು. ರಾತ್ರಿ ಝಗಮಗ ಬೆಳಕಿನೊಳಗ ಬಣ್ಣ ಹಚಗೊಂಡವರ ಮಾಯಾ ಲೋಕನೇ ಬ್ಯಾರೆ, ಹಗಲು ಹರಕ ಚಾದರ ಹೊದಕೊಂಡು ಮಲಕೊಳೊ ಕಂಗಾಲು ಸ್ಥಿತಿನೇ ಬ್ಯಾರೆ” ಅಂತ ಹೇಳಿದ ಕಮಲಕ್ಕನ್ನ ಮಾತು ಆಕಿಗೆ ತಿಳಿಲಿಲ್ಲ. ಎಲ್ಲಾ ಕಲಾವಿದರನ್ನ ಅವರವರ ಪಾತ್ರದ ಹೆಸರಿಂದಲೇ ಕರೆದು ಗುರ್ತು ಮಾಡಿಕೊಂಡಳು. “ನಂಗೂ ನಾಟಕ ಅಂದ್ರೆ ಭಾಳ ಇಷ್ಟ. ನಮ್ಮಪ್ಪ ಅಮ್ಮ ಬೆಂಗಳೂರಲ್ಲಿ ಇರ್ತಾರೆ. ನನ್ನ ವೆಕೆಶನ್ ಟ್ಯೂಶನ್ ಅಂತ ಅಜ್ಜಿಮನೆಯಲ್ಲಿ ಇಟ್ಟಿದ್ದಾರೆ. ಟೆನ್ತ್ ಮುಗಿದ ಕೂಡಲೆ ನಾನೂ ಕಂಪನಿ ಸೇರಿಕೊತೀನಿ” ಅಂದಳು. ನನ್ನ ಪಾತ್ರವಂತೂ ಆಕಿಗೆ ಭಾಳ ಸೇರಿತ್ತಂತ. ಇಡೀ ಕಂಪನಿಯಲ್ಲಿ ಸಣ್ಣ ವಯಸ್ಸಿನವನೆಂದರೆ ನಾನೇ. ಹಿಂಗಾಗಿ ನನ್ನ ಜೊತೆ ಹರಟೆ ಶುರು ಹಚ್ಚಿದಳು. ರಾತ್ರಿ ಗೆಳತಿ ಮನಿಗೆ ಓದಾಕ ಹೋಗತೇನಿ ಅಂತ ಸುಳ್ಳು ಹೇಳಿ ನಾಟಕ ನೋಡಾಕ ಬರ್ತಿದ್ದಳು. ಬೆಳಗ್ಗೆ ಟ್ಯೂಶನ್ ಕ್ಲಾಸ್ ಬಂಕ್ ಮಾಡಿ ಹತ್ತಕ್ಕೆ ಹಾಜರಾಗುತ್ತಿದ್ದಳು.

ಮೊದಮೊದಲು ಎಲ್ಲರೆದುರು ಕೂತು ಹರಟಿದ್ವಿ. ಆಮೇಲೆ ಆಟೊ ಮಾಡಿಕೊಂಡು ಅಲ್ಲಿ ಇಲ್ಲಿ ಊರೊಳಗೆ ತಿರುಗಾಡಿದ್ವಿ. ಹತ್ತನೆ ಕ್ಲಾಸು ಪರೀಕ್ಷೆ ಮುಗಿದ ಕೂಡಲೆ ಮನೆ ಬಿಟ್ಟು ಓಡಿ ಬರ್ತಿನಿ ಮದುವೆಯಾಗೋಣ ಅಂದಳು. ನಾನು ಬೇರೆ ಯಾರನ್ನೂ ಇಷ್ಟ ಪಡಬಾರದು ಅಂತ ಆಣೆ ಪ್ರಮಾಣ ಮಾಡಿಸಿಕೊಂಡಳು. ಹೀಂಗ ಎರಡು ತಿಂಗಳ ಕಳಿತು. ಆಕೆ ಊರಿಗಿ ಹೋಗೊ ಎರಡು ದಿನ ಮೊದಲು ಅಂದರೆ ಶುಕ್ರವಾರ ಪಾರ್ವತಿ ಗುಡಿಗೆ ಕರೆದುಕೊಂಡು ಹೋದಳು. ನನ್ನ ಕೈಯಿಂದ ಹಣೆಗೆ ಕುಂಕುಮ ಇರಿಸಿಕೊಂಡಳು. ನಂಗೆ ಒತ್ತಾಯ ಮಾಡಿ ಕಾಲುಂಗರ ತರಿಸಿಕೊಂಡು ನನ್ನ ಕೈಯಿಂದಲೇ ಹಾಕಿಸಿಕೊಂಡು ಆಮೇಲೆ ತೆಗೆದು ಒಳಗಿಟ್ಟುಕೊಳ್ಳುತ್ತೇನೆ ಎಂದಳು. ನನಗೊಂದು ಟಿಶರ್ಟ ತಂದಿದ್ದಳು. ನನ್ನನ್ನು ಬಿಟ್ಟಿರಲಾರದೆ ಅಳುತ್ತಳುತ್ತಲೆ ಬೆಂಗಳೂರಿಗೆ ಹೋಗಿದಾಳೆ. ದಿನಾಲೂ ರಾತ್ರಿ ಫೋನು ಮಾಡ್ತಾಳೆ, ರಾತ್ರಿಯಿಡೀ ಮೆಸೇಜು ಹಾಕ್ತಾಳೆ. ಅವಳು ಓದತಾ ಇದಾಳೆ, ಡಿಸ್ಟರ್ಬ್ ಮಾಡಬಾರದು ಅಂತ ಅವರಪ್ಪ ಅಮ್ಮ ಅವಳ ರೂಮಿಗೆ ಬರಲ್ಲ. ಮೊನ್ನೆ ಎಂ ಅಂತ ಕೈ ಮೇಲೆ ದೊಡ್ಡಕೆ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅವರಪ್ಪನ ಹೆಸರು ಮಾರ್ಕಾಂಡೆಯ. ಅವರು ತನ್ನ ಹೆಸರು ಅನ್ಕೊಂಡು ಸುಮ್ಮನಿದಾರೆ. ಅಪ್ಪ-ಅಮ್ಮ ಇಬ್ರೂ ದೊಡ್ಡ ಜಾಬಲ್ಲಿ ಇದಾರೆ. ತುಂಬಾ ಗಡಿಬಿಡಿಲಿ ಇರ್ತಾರೆ. ವಾರಕ್ಕೊಂದು ಸಲನಾದರೂ ನಿನ್ನ ನೋಡದೆ ಇರೊಕಾಗಲ್ಲ ಬಾ ಅಂತ ಬೆಂಗಳೂರಿಗೆ ಕರೆಸ್ಕೊತಾಳೆ. ಸ್ಕೂಲಿಗೆ ಚಕ್ಕರ್ ಹಾಕಿ ನಂಜೊತೆ ತಿರುಗಾಡ್ತಾಳೆ” ಮುರುಗೇಶನ ಕತೆಗೆ ಎಲ್ಲ ಗೆಳೆಯರೂ ಮರುಳಾಗಿದ್ದರು.
“ಅಬಾಬಾಬಾ ಚೆಲುವಿನ ಚಿತ್ತಾರ ಸಿನಿಮಾನ ಮಾಡಾಕ ಹತ್ತಿಯಲ್ಲೊ, ಭಾರಿ ಸ್ಟೋರಿ ಆತಲ್ಲೊ ಮುರುಗ್ಯಾ, ದೊಡ್ಡ ಶ್ರೀಮಂತರ ಒಂದೇ ಮಗಳು ಅಂದ್ರ ಭಾರೀ ಹಕ್ಕಿನೇ ಹೊಡದಿ ಬಿಡು, ನಾಳೆ ಶೋ ನೋಡಾಕ ಕರ್ದಿಯೇನು? ನಮಗೂ ಭೆಟ್ಟಿ ಮಾಡಸಪಾ ಮತ್ತ, ಮೊಬೈಲದೊಳಗೆ ಫೋಟೊ ಎಷ್ಟು ಇಟ್ಟಿಯೊ ಮಗನ ತೋರ್ಸಲಾ” ಎಂದು ಮುಗಿಬಿದ್ದರು. ಮಲಗಿದಲ್ಲೇ ಮೂರ್ಛೆ ಹೋಗುವಷ್ಟು ಶಾಕ್ ಆಗಿದ್ದಳು ವೇಣಿ. ಹಗೂರಕ್ಕೆ ಎದ್ದು ಕೂತು ಕತ್ತಲಲ್ಲೇ ಬಗ್ಗಿ ಅವನ ಮೊಬೈಲದಲ್ಲಿ ತೋರಿಸುತ್ತಿರುವ ಫೊಟೊ ನೋಡಿದಳು. ಒಹೊ ಇವಳು ಅದೇ ವಲ್ಲರಿ. ಅವನು ಹೇಳುವಾಗ ಅಪ್ಪನ ಹೆಸರು ಮಾರ್ಕಾಂಡೇಯ ಅಂದ ಕೂಡಲೆ ಅವಳಿಗೆ ಸಂಶಯ ಬಂದಿತ್ತು. ವೇಣಿಯ ಅಜ್ಜಿಮನೆ ಇರುವ ಓಣಿಯ ಮುರ್ಕಿ ತಿರುಗುವಲ್ಲೇ ವೈಕುಂಠರಾಯರ ದೊಡ್ಡ ವಖಾರಿಯಿದೆ. ಹುಟ್ಟಿದ ಮಕ್ಕಳೆಲ್ಲ ಸತ್ತು ಸತ್ತು ಉಳಿದ ಒಬ್ಬನೇ ಮಗ ಮಾರ್ಕಾಂಡೇಯ. ಇಂದುಚಿಕ್ಕಿಯ ಕ್ಲಾಸಮೇಟ್. ಈಗ ಬೆಂಗಳೂರಲ್ಲಿ ದೊಡ್ಡ ಕಂಪನಿಯಲ್ಲಿ ಗಂಡ-ಹೆಂಡತಿ ಇಂಜಿನಿಯರ್ಸ್. ಅವರಿಗೊಬ್ಬಳೇ ಮಗಳು ವಲ್ಲರಿ. ಮಗುವಾಗಿದ್ದಾಗಿನಿಂದ ಬೆಣ್ಣೆ ಮುದ್ದೆಯಂತೆ ಮುದ್ದು ಮುದ್ದಾಗಿದ್ದಳು. ಅಯ್ಯಯ್ಯೊ ಈಗ ತಾನು ಕೇಳುತ್ತಾ ಇರುವುದಾದರೂ ಏನು? ದೂರದ ಪರಿಚಯವಿರುವ ತನಗೇ ಈ ವಿಷಯ ಕೇಳಲು ಇಷ್ಟು ಭಯಂಕರವಾಗಿದೆ. ಅಪ್ಪ-ಅಮ್ಮ-ಅಜ್ಜ-ಅಜ್ಜಿ ಅವರೆಲ್ಲ ವಿಷಯ ಗೊತ್ತಾದರೆ ಎಷ್ಟು ಹೆದರುತ್ತಾರೊ. ಪಾಪ ಮುಗ್ಧ ಮಗು, ಮನಸ್ಸಿಗೆ ಖುಷಿಯಾಗುವ ವಿಚಾರವನ್ನೇ ಪ್ರೀತಿ ಎಂದುಕೊಂಡು ಬಿಟ್ಟಿದೆ. ಸಿನಿಮಾ-ಧಾರವಾಹಿಗಳ ಪರಿಣಾಮದಿಂದ ಇಷ್ಟವಾದವನೆ ಗಂಡ ಅಂದುಕೊಂಡು ಭೃಮೆಯಲ್ಲಿದೆ. ತಂದೆ-ತಾಯಿಗಳ ದೊಡ್ಡ ನೌಕರಿಯ ಸಮಯಾವಭಾವದಿಂದ ತನಗೆ ಸಿಗುವ ಸ್ವಾತಂತ್ರ್ಯದಲ್ಲಿ ಏನೇನೊ ಸಾಹಸ ಮಾಡುತ್ತಿದೆ. ಮುರುಗೇಶನಿಗೇನಾಗಬೇಕು? ತಾನಾಗಿಯೇ ಒಲಿದು ಬಂದ ಅದೃಷ್ಟ. ಚೆಂದದ ಹುಡುಗಿ, ಅಪಾರ ಸಂಪತ್ತು, ಸಿಕ್ಕರೆ ಸಿಗಲಿ ಎಂದುಕೊಂಡಿದ್ದಾನೆ.

ಅಬ್ಬಾ ಇವನ ದುರಾಸೆಯೆ, ಅಂತ ಸಿಟ್ಟು ಬಂತು. ಮುರುಗೇಶ ನೆಟ್ಟಗೆ ಶಾಲೆಗೆ ಹೋದವನೇ ಅಲ್ಲ. ಸಣ್ಣ ಪ್ರಾಯದಲ್ಲೇ ಮನೆಯಿಂದ ಓಡಿ ಹೋಗಿ ನಾಟಕ ಕಂಪನಿ ಸೇರಿಕೊಂಡವನು. ಈಗ ಕಂಪನಿ ರಜೆ ಕೊಟ್ಟಾಗ ಹವ್ಯಾಸಿಗರೊಂದಿಗೆ ಸೇರಿಕೊಂಡು ನಾಟಕ ಮಾಡುತ್ತಾನೆ. ಖಾಲಿಯಿದ್ದ ದಿವಸ ಇಂಜಿನಿಯರಿಂಗ್ ಕಾಲೇಜಿನ ಎದುರಿಗಿನ ಗ್ಯಾರೇಜಿನಲ್ಲಿ ಅವನ ಗೆಳೆಯನಿಗೆ ಸಹಾಯ ಮಾಡುತ್ತಾನೆ. ವಿದ್ಯೆ, ಸಂಸ್ಕಾರ, ಜೀವನಶೈಲಿ ಯಾವುದರಲ್ಲೂ ಹೊಂದಾಣಿಕೆಯಿರದಿದ್ದರೂ ಜೊತೆಗೂಡುವ ಧೈರ್ಯವನ್ನು ಹೇಗಪ್ಪ ಮಾಡುತ್ತಾರೆ ಅಂತ ವೇಣಿಯ ಮೈ ಕುದಿಯತೊಡಗಿತು. ಥಟ್ಟನೆ ಗೋಡೆ ಕಡೆ ತಿರುಗಿಕೊಂಡು ಚಿಕ್ಕಿಗೆ ಪೂರ್ತಿ ವಿಷಯ ಮೆಸೇಜು ಮಾಡತೊಡಗಿದಳು. ರಾತ್ರಿ ವೇಣಿಯಿಂದ ವಿಷಯ ತಿಳಿದೊಡನೆ ಇಂದುಮಾಲಾ ತನ್ನ ಮಹಿಳಾ ಸಾಂತ್ವನದ ಆಫೀಸಿನಲ್ಲಿ ಕೆಲಸ ಮಾಡುವ ಹುಡುಗ ಕಿರಣನಿಗೆ ಫೋನು ಮಾಡಿ ವೈಕುಂಠರಾಯರ ಮನೆಗೆ ಹೋಗಿ ಅವರ ಮಗನ ಫೋನು ನಂಬರ್ ಪಡೆದುಕೊಂಡು ಕಳಿಸಲು ಹೇಳಿದ್ದಳು. ಅದು ಸಿಕ್ಕ ಕೂಡಲೆ, ಮಾರ್ಕಾಂಡೇಯನಿಗೆ ಮೆಸೆಜು ಹಾಕಿದಳು.

“ಹಲೊ ಮುರ್ಕುಂಡಿ ಎಂದು ಟೈಪ್ ಮಾಡಿದವಳು ಸರ್ರನೆ ಡಿಲಿಟ್ ಮಾಡಿದಳು. ಶಾಲೆಗೆ ಹೋಗುವಾಗ ಅವನನ್ನು ಎಲ್ಲರೂ ಕರೆಯುತ್ತಿದ್ದುದೇ ಹಾಗೆ. ಗಣಿತ ಕಲಿಸುವ ಈಶಮಾಸ್ತರು ಬೇಕೆಂದೆ “ಏನೋ ಮೂರು ಕುಂಡಿ, ಮಗ್ಗಿ ಹೇಳೂಕೆ ಬರೂದಿಲ್ಲನ ನಿಂಗೆ, ಹದಿನೇಳೆಂಟಲೆ ಎಷ್ಟು ಅಂದ್ರೆ ಮ್ಯಾಲೆ ಹಂಚೆಣಿಸ್ತೆಯನೊ, ಹಶಿ ಮಳ್ಳಾ, ಎಲ್ಲರಿಗೂ ಎರಡು ಕುಂಡಿಯಾದ್ರೆ ಇವಗೆ ಮಾತ್ರ ಮೂರಂತೆ, ಹೌದನ, ನಿನ್ನ ಯಾವ ಕುಂಡಿ ಮ್ಯಾಲೆ ಹೊಡದ್ರೆ ಬುದ್ದಿ ಬರೂದು ಹೇಳಾ” ಎನ್ನುತ್ತಾ ಹೊಡೆಯಲು ಕೈ ಎತ್ತುತ್ತಿದ್ದರು. “ಸರ್ ಸರ್ ಹೊಡಿಬೇಡ್ರಿ, ನಾ ಹೇಳ್ತೆ ತಡಿರಿ” ಎನ್ನುತ್ತ ಓಡೊಡಿ ಹೆಣ್ಣು ಮಕ್ಕಳ ಬೆಂಚಿನ ಕಡೆ ನುಗ್ಗಿ ಗೋಡೆಯ ಕಡೆ ಡೆಸ್ಕು ಹತ್ತಿ ಅಡಗಿಕೊಳ್ಳುತ್ತಿದ್ದ. ಅವನ ಸುತ್ತ ನಿಂತ ಹೆಣ್ಣುಹುಡುಗಿಯರ ನಡುವೆ ನಗ್ಗಲು ಆಗದೆ ಮಾಸ್ತರು ಹಲ್ಲುಕಡಿಯುತ್ತ ಹೂಂಕರಿಸುತ್ತಿದ್ದರು “ಹೆಂಗಸರ ಅಡಿಗೆ ಅಡಕಂತ್ಯನ ಉತ್ತರಕುಮಾರ, ನಾಳಿಂದ ಪರಕಾರ-ಪೊಲಕಾ ಹಾಕ್ಕಂಬಾ” ಎಂದು ಬೈಯುತ್ತಿದ್ದರು. ತನ್ನ ಹೆಸರಿನ ಬಗ್ಗೆ ಬಹುದೊಡ್ಡ ಅವಮಾನದ ಆಕ್ಷೇಪವಿದ್ದ ಮುರ್ಕುಂಡಿ ಹೈಸ್ಕೂಲಿಗೆ ಬಂದೊಡನೆ ಗೆಳೆಯರಿಗೆ ತನ್ನನ್ನು ಎಂ.ವಿ.ರಾವ್ ಎನ್ನಬೇಕೆಂದು ತಾಕೀತು ಮಾಡಿದ. ಅವರೆಲ್ಲ ಶಿರಾ-ಪೂರಿಬಾಜಿಯ ಪಾರ್ಟಿ ಮಾಡಿಸಿಕೊಂಡು ಎಂ.ವಿ. ಎಂದು ಕರೆಯತೊಡಗಿದರು. ಅವನು ಪಿಯುಸಿ ಸೈನ್ಸ ತೆಗೆದುಕೊಂಡ. ತಾನು ಕಾಮರ್ಸ ತೆಗೆದುಕೊಂಡೆ. ಈಗ ತಾನೂ ಕೂಡ ಎಂ.ವಿ ಎಂದೇ ಕರೆದು ಮೆಸೆಜು ಮಾಡಿದಳು.

ಆಗಷ್ಟೇ ಆಸ್ಟ್ರೇಲಿಯಾದಿಂದ ಬಿಸಿನೆಸ್ ಮೀಟಿಂಗ್ ಮುಗಿಸಿ ಬಂದಿಳಿದ ಹೆಂಡತಿಯನ್ನು ಪಿಕ್ ಮಾಡಿ ಮನೆ ಸೇರಿದ್ದ ಮಾರ್ಕಾಂಡೇಯ ತನ್ನ ಮೊಬೈಲಿಗೆ ಬಂದ ಮೆಸೇಜಿನಲ್ಲಿ ಶರಧೇಂದುಮಾಲಾ ಎಂಬ ಹೆಸರನ್ನು ಓದುತ್ತಿದ್ದಂತೆ ಥ್ರಿಲ್ಲಾಗಿದ್ದ. ಅಷ್ಟುದ್ದದ ಅಂಥಾ ಹೆಸರನ್ನು ಇಟ್ಟುಕೊಂಡ ಭೂಮಿ ಮೇಲಿನ ಹುಡುಗಿಯೆಂದರೆ ತನ್ನ ಬಾಲ್ಯದ ಗೆಳತಿಯೇ ಇರಬೇಕೆಂದುಕೊಂಡು ಗಬಕ್ಕನೆ ಕರೆ ಮಾಡಿದ. ಫೋನು ಕರೆ ಸ್ವೀಕರಿಸಿ ಮಾತನಾಡಿದ ಗೆಳತಿ ತಾನೀಗ ಬೆಂಗಳೂರಿಗೆ ಬಂದಿದ್ದೇನೆ ಹಾಗೂ ಅರ್ಜೆಂಟಾಗಿ ಒಂದು ವಿಷಯವನ್ನು ಮಾತನಾಡುವುದಕ್ಕೆ ನೀನು ಹೆಂಡತಿಯ ಸಮೇತ ಮರುದಿನ ಬರಬೇಕೆಂದಾಗ ಅವನಿಗೆ ಆಶ್ಚರ್ಯವಾಗಿತ್ತು. ಮರುದಿನ ಕಾಂಚನಾಗೆ ಆಫ್ ಇತ್ತು. ಹಾಗಾಗಿ ಬೆಳಗ್ಗೆಯೇ ಭೆಟ್ಟಿಯಾಗೋಣವೆಂದ. ಇಂದುಮಾಲಾ ತನ್ನ ಹೊಟೆಲ್ ವಿಳಾಸ ಹೇಳಿದಳು. ಇಷ್ಟೆಲ್ಲ ವರ್ಷದ ನಂತರ ತನ್ನೊಂದಿಗೆ ಅದೂ ಹೆಂಡತಿಯನ್ನು ಎದುರಿಟ್ಟುಕೊಂಡು ಮಾತಾಡುವುದೇನಿರಬಹುದು ಅಂತ ಹೇಗೆ ಯೋಚಿಸಿದರೂ ಆತನಿಗೆ ಎನೂ ಹೊಳೆದಿರಲಿಲ್ಲ. ಶಾಲೆಗೆ ಹೋಗುವಾಗ ಅಭ್ಯಾಸದಲ್ಲಿ ಅಂತಹ ಹುಶಾರಿಯಿರದಿದ್ದ ಈ ಶರಧೇಂದುಮಾಲಾ ಖೋ ಖೋ ಆಟದಲ್ಲಿ ಮಾತ್ರ ಚಾಂಪಿಯನ್ ಆಗಿದ್ದಳು. ಊರಿನ ಏಕಮೇವ ಗ್ರಂಥಾಲಯದ ಪಾಲಕನಾಗಿದ್ದ ಅವಳ ಅಪ್ಪ ಬೆಂಗಾಳಿ ಕಾದಂಬರಿ ಓದಿ ಓದಿ ಅವಳಿಗೆ ಹಾಗೆ ಹೆಸರಿಟ್ಟಿದ್ದ.

ಅವಳು ಉದ್ದ ಎರಡು ಜಡೆಗಳನ್ನು ಒಂದರೊಳಗೊಂದು ಸೇರಿಕೊಳ್ಳುವಂತೆ ಹೆಣೆದುಕೊಂಡು ಮೇಲಕ್ಕೆತ್ತಿ ಕಟ್ಟಿ, ತನ್ನನ್ನು ಹಿಡಿಯಲು ಓಡುವವರ ಕೈಗೆ ಸಿಕ್ಕದಂತೆ ಹಾವಿನಾಕಾರದಲ್ಲಿ ತಿರುಗುತ್ತ ಖೋ ಖೋ ಆಡುವುದನ್ನು ನೋಡಲೆಂದೇ ತಾವೊಂದಿಷ್ಟು ಜನ ಹುಡುಗರು ಗ್ರೌಂಡಿಗೆ ಹೋಗುತ್ತಿದ್ದದ್ದು ನೆನಪಾಯಿತು. ಸುಳ್ಳು ಸುಳ್ಳೆ ಪಿ.ಟಿ.ಮಾಸ್ತರಿಗೆ ಪೂಸಿ ಹೊಡೆದು “ಸರ್ ನೀವು ಭಾಳ ಚೊಲೊ ಆಡಸ್ತ್ರಿ, ಅದಕಾಗೆ ನಮ್ಮ ಶಾಲೆ ಟೀಂ ಗೆಲ್ತದೆ” ಅಂತೆಲ್ಲ ಹೇಳಿ ಖುಷಿಪಡಿಸುತ್ತಿದ್ದೆವು. ತನ್ನ ಗೆಳೆಯ ಜನ್ನನ ತಂಗಿ ಗಿರಿಜೆ ಕೂಡ ಟೀಮಲ್ಲಿದ್ದಳು. ಜನ್ನನ ಮನೆಯವರು ತಂಗಿ ಆಡುವಾಗ ನೋಡಕಳೂಕೆ ಹೇಳಾರೆ ಅಂತ ಎಲ್ಲರೆದುರು ದೊಡ್ಡ ಸುಳ್ಳು ಹೇಳುತ್ತ ಅವನನ್ನು ತಾನೆ ಎಳೆದುಕೊಂಡು ಹೋಗಿ ಇಂದುಮಾಲಾ ಆಟ ನೋಡುತ್ತಿದ್ದೆವು. ಅವಳು ಒಂದು ಕೈಲಿ ಕಂಬ ಹಿಡಿದು ಬಾಗಿ ಇನ್ನೊಂದು ಕೈಯಿಂದ ಓಡುತ್ತಿದ್ದ ಹುಡುಗಿಯನ್ನು ಮುಟ್ಟಿ ಔಟ್ ಎನ್ನುತ್ತ ಕೈಯೆತ್ತಿ ಅಪೀಲು ಮಾಡಿದೊಡನೆ ತಾವೇ ಗೆದ್ದಂತೆ ಹೋ ಎಂದು ಅರಚುತ್ತಿದ್ದೆವು. ಒಂದು ಸಲ ಕರ್ಮಕ್ಕೆ ಔಟಾದ ಹುಡುಗಿ ಗಿರಿಜೆಯೇ ಆಗಿದ್ದು ಒದರಿದ ನಂತರ ಅರಿವಿಗೆ ಬಂದಿತ್ತು. ಸಿಟ್ಟಿಗೆದ್ದ ಅವಳು ಮನೆಯಲ್ಲಿ ಚಾಡಿ ಹೇಳಿ ಜನ್ನನಿಗೆ ಸಮಾ ಹೊಡೆಸಿದ್ದಳು. ತಾನು ಪಿಯುಸಿ ಸೈನ್ಸ ತೆಗೆದುಕೊಂಡ ನಂತರ ತನ್ನ ಪ್ರಪಂಚವೇ ಬೇರೆ ಆಗಿಹೋಯಿತಲ್ಲವೆ? ಕೋಚಿಂಗ್, ಸಿ.ಇ.ಟಿ, ಆಮೇಲೆ ಇಂಜಿನಿಯರಿಂಗ್, ನೌಕರಿ ಅನ್ನುವ ಚಕ್ರದ ಸುಳಿಗೆ ಸಿಕ್ಕ ನಂತರ ಎಲ್ಲವೂ ಮರೆವಿನ ಮಹಾನದಿಯ ಸುಳಿಗೆ ಸಿಕ್ಕ ಹಾಗಾಗಿತ್ತು. ಈಗ ಶರದೇಂದುಮಾಲಾ ಅನ್ನುವ ಹೆಸರು ನೆನಪಿನ ಸಂದೂಕದ ಕೀಲಿಯಂತೆ ಕೆಲಸ ಮಾಡಿತು. ಹಾಗೆಯೇ ಯೋಚಿಸುತ್ತಲೇ ಇದ್ದ ಮಾರ್ಕಂಡೇಯನಿಗೆ ನಿದ್ದೆ ಹತ್ತುವಾಗ ಬಹಳ ಹೊತ್ತಾಗಿತ್ತು.

ಎದುರಿಗಿನ ಗಾಜಿನ ಟೇಬಲ್ ಮೇಲೆಟ್ಟ ನೀರಿನ ಬಾಟಲನ್ನೇ ಎತ್ತಿ ಗಟಗಟ ಕುಡಿದಿಟ್ಟಳು ಕಾಂಚನಾ. ಎ.ಸಿ. ರೂಮಿನಲ್ಲೂ ಬೆವರಿ, ಬೆವರಿ ಅವಳ ಕನಕಾಂಬರ ಬಣ್ಣದ ಕುರ್ತಾ ತೊಯ್ದು ಹೋಗಿತ್ತು. ವಿಷಯದಾಘಾತಕ್ಕೆ ತತ್ತರಿಸಿ ತುಟಿ ಒಣಗಿ ಹೋಗಿತ್ತು. ಪ್ರಚಂಡ ಸುನಾಮಿಯ ಘೋರ ಅಲೆಯೊಂದು ಅನಾಮತ್ತಾಗಿ ಎತ್ತಿ ರಪಲ್ಲನೆ ಬಂಡೆಗಪ್ಪಳಿಸಿ ಹೋದಂತೆ ತತ್ತರಿಸಿ ಹೋಗಿದ್ದಳು. ಥಟ್ಟನೆದ್ದು ವಾಶರೂಮಿಗೆ ಬಂದು ಬಾಗಿಲಿಕ್ಕಿಕೊಂಡಳು. ಜೋರಾಗಿ ನೀರು ಬಿಟ್ಟವಳೇ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದಳು. ಶತಶತಮಾನಗಳಿಂದ ಒಳಗೇ ಮೊಟ್ಟೆ ಮರಿ ಹಾಕಿಕೊಂಡು ವಾಸಿಸುತ್ತಿದ್ದ ನೋವೊಂದು ಸಹಸ್ರಾರು ಹುಳದ ಪಡೆಯೊಂದಿಗೆ ಜೊಂಯ್ಯನೆ ಮುತ್ತಿಗೆ ಹಾಕಿದಂತೆ ಗೋಡೆಗೆ ತಲೆ ಕುಟ್ಟಿಕೊಳ್ಳುತ್ತ ಅಳತೊಡಗಿದಳು. ಏನಿದು ತನ್ನ ಅವಸ್ಥೆ. ಬಾಲ್ಯದಿಂದಲೂ ಕ್ಲಾಸಿಗೆ ಫಸ್ಟ್. ಸರ್ಕಾರಿ ಶಾಲೆಯ ಟೀಚರುಗಳಾಗಿದ್ದ ಅಪ್ಪ-ಅಮ್ಮ ಯಾವಾಗಲೂ ಅಭ್ಯಾಸ ಮಾಡಿಸುತ್ತ ಹೇಗೆ ಪ್ರತಿಯೊಂದು ಮಾರ್ಕಸ್ ಜೀವನದಲ್ಲಿ ಮುಖ್ಯವಾಗುತ್ತದೆ, ಪ್ರತಿಭೆ ಇದ್ದವನೇ ನಿಜವಾದ ಮನುಷ್ಯ, ಅತ್ಯುನ್ನತವಾದ ಪದವಿಯನ್ನು ಪಡೆಯುವುದು, ಅತ್ಯಂತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಗಳಿಸುವುದು ಜೀವನದ ಪರಮ ಧ್ಯೇಯವೆಂದು ಹಗಲಿರುಳು ಬೋಧಿಸಿದ್ದನ್ನೇ ನಂಬಿಕೊಂಡು ಬೆಳೆದವಳು ತಾನು. ಉಳಿದ ಗೆಳತಿಯರು ಟಿ.ವಿ. ನೋಡುತ್ತ ಧಾರಾವಾಹಿಯ ಅಲಂಕಾರಗಳನ್ನು ಅನುಕರಿಸಿಕೊಂಡು ಓಡಾಡುವಾಗ ಪ್ರಮೇಯಗಳನ್ನು ಬಾಯಿಪಾಠ ಹಾಕಿದವಳು ತಾನು. ಹಾಗಾಗಿ ಹತ್ತನೆ ಕ್ಲಾಸನಲ್ಲಿ ರಾಜ್ಯಕ್ಕೆ ನಾಲ್ಕನೆಯವಳಾದರೆ, ಸೆಕೆಂಡ್ ಪಿಯುಸಿಯಲ್ಲಿ ಎರಡನೆಯವಳು.

ಇಂಜಿನಿಯರಿಂಗ್ ಓದುವಾಗ ಹಾಸ್ಟೆಲ್ ನಲ್ಲಿದ್ದರೂ ಅಪ್ಪ-ಅಮ್ಮನ ಉಪದೇಶ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಹಾಗೆ ಓದಿ ಕ್ಯಾಂಪಸ್ ಸೆಲೆಕ್ಶನ್ ಆಗಿ ಬೆಂಗಳೂರಿಗೆ ಬಂದಿದ್ದಳು. ಅಷ್ಟರಲ್ಲಿ ಸಂಬಂಧಿಕರ ಮೂಲಕ ಅಪ್ಪ-ಅಮ್ಮನವರ ಬಳಿ ವೈಕುಂಠರಾಯರ ಮಗನ ಪ್ರಪೊಸಲ್ ಬಂದಿತ್ತು. ಎಲ್ಲ ರೀತಿಯಲ್ಲೂ ಅವರಿಗೆ ಸರಿ ಅನ್ನಿಸಿದ ಕಾರಣದಿಂದ ಮದುವೆ ನಡೆದಿತ್ತು. ಒಂದು ವರ್ಷಕ್ಕೆ ಹುಟ್ಟಿದವಳು ವಲ್ಲರಿ. ತನ್ನನ್ನು ಸಾಕಿದಷ್ಟೆ ಚೆನ್ನಾಗಿ ಅವಳನ್ನೂ ಬೆಳೆಸಿರಿ ಎನ್ನುತ್ತ ಅಪ್ಪ-ಅಮ್ಮನ್ನ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಳು. ಅವರೂ ಕೂಡ ವಲ್ಲರಿಯ ಅಭ್ಯಾಸ, ಟ್ಯೂಶನ್, ಸ್ವಿಮ್ಮಿಂಗ್, ಪೇಟಿಂಗ್, ಡಾನ್ಸ ಕ್ಲಾಸ್ ಎಲ್ಲದರ ಮೇಲ್ವಿಚಾರಣೆ ನಡೆಸುತ್ತ ಜೊತೆಗೇ ಇದ್ದರು. ವಲ್ಲರಿಯ ಒಂಭತ್ತನೆ ಕ್ಲಾಸ್ ರಜೆಯಲ್ಲಿ ಅಜ್ಜ-ಅಜ್ಜಿಗೆ ದೇಶ ಬಿಡುವ ಸಂದರ್ಭ ಬಂದಿತು. ಬಹಳ ವರ್ಷಗಳಿಂದ ಅಮೆರಿಕೆಯಲ್ಲಿದ್ದ ಕಾಂಚನಾಳ ತಮ್ಮನಿಗೆ ಅಪರೂಪಕ್ಕೆ ಗಂಡು ಮಗುವಾಗಿತ್ತು. ಖುಷಿಯಿಂದ ಮಗ ಬಾ ಎಂದು ಕರೆದಾಗ ಮೊಮ್ಮಗನನ್ನು ನೋಡಲು ಅಮೆರಿಕೆಗೆ ಹೋದರು.

ಅವರಿಲ್ಲವೆಂಬ ಕಾರಣಕ್ಕಾಗಿ ವಲ್ಲರಿ ಮನೆಯಲ್ಲಿ ಒಂಟಿಯಾಗಿರುತ್ತಾಳೆಂದು ಹತ್ತನೆ ಕ್ಲಾಸಿನ ವೆಕೆಶನ್ ಟ್ಯೂಷನ್ ಅನ್ನು ಕೊಡಿಸಲು ಪಾರ್ವತಿಪುರದಲ್ಲಿ ಮಾರ್ಕಾಂಡೇಯನ ತಂದೆ-ತಾಯಿಯೊಟ್ಟಿಗೆ ಎರಡು ತಿಂಗಳು ಇಟ್ಟಿದ್ದರು. ಮೆಲ್ಲನೆ ಬಾಗಿಲು ತಟ್ಟಿದ ಶಬ್ದದೊಡನೆ ಮಾರ್ಕಾಂಡೆಯನ ಧ್ವನಿ ಕೇಳಿಸಿತು. “ಆರ್ ಯೂ ಆಲ್ ರೈಟ್ ಹನಿ” ಹಾಂ ಬಂದೆ ಎನ್ನುತ್ತ ಮುಖ ತೊಳೆಯತೊಡಗಿದಳು.
ತನ್ನೆದುರು ಕುರ್ಚಿಯಲ್ಲಿ ಕೂತಲ್ಲೇ ಕುಸಿದು ಬಿದ್ದವನಂತೆ ನಿರ್ವಿಣ್ಣನಾಗಿದ್ದ ಗೆಳೆಯನ ಕಡೆಗೆ ಕರುಣೆಯಿಂದ ನೋಡಿದಳು ಇಂದುಮಾಲಾ. ಹೌದು ಈಗ ಸ್ವಲ್ಪ ಹೊತ್ತಿನ ಮೊದಲು ತನ್ನ ರೂಮಿಗೆ ಬಂದ ದಂಪತಿಗಳಿಗೆ ವಲ್ಲರಿಯ ವಿಚಾರ ಹೇಳಿದ ನಂತರ ಈ ಬಗ್ಗೆ ಕ್ರಮವನ್ನೂ ತಾನು ಈಗಾಗಲೇ ತೆಗೆದುಕೊಂಡಿದ್ದೇನೆ ಎಂದಿದ್ದಳು. ಪಾರ್ವತಿಪುರದಲ್ಲಿ ಎರಡು ವರ್ಷದ ಹಿಂದೆ ಪೊಲಿಸ್ ಇನಸ್ಪೆಕ್ಟರ್ ಆಗಿದ್ದು ಇಂತಹ ಅಪ್ರಾಪ್ತ ಪ್ರೇಮಪ್ರಕರಣಗಳಲ್ಲಿ ಸಹಾಯ ಮಾಡಿದ್ದ ಗೋಪಾಲ ಈಗ ಬೆಂಗಳೂರಲ್ಲಿ ಇದ್ದಾನೆ. ಅವನಿಗೆ ವಿಷಯ ಹೇಳಿದ್ದೇನೆ. ಆತ ಹುಡುಗನನ್ನು ಕರೆದೊಯ್ದು ಹೆದರಿಸಿ, ಬುದ್ಧಿ ಕಲಿಸುತ್ತಾನೆ. ಮೈನರ್ ಹುಡುಗಿಯನ್ನು ಪ್ರೀತಿಸೊದು ದೊಡ್ಡ ಅಫೆನ್ಸ್, ಐದಾರು ವಿಧದಲ್ಲಿ ಕೇಸು ಹಾಕಬಹುದು. ಹಾಗಾಗಿ ಆ ಹುಡುಗನನ್ನ ನಿವಾರಿಸೋದು ಏನೂ ಸಮಸ್ಯೆಯಾಗೊಲ್ಲ. ಇನ್ನು ನಿಮ್ಮ ಮಗಳ ಬಗ್ಗೆ. ಅದಿನ್ನೂ ಪುಟ್ಟ ಮಗು.

ಅಜ್ಜ-ಅಜ್ಜಿಯ ಸರ್ಪಗಾವಲಿನಲ್ಲಿ ಶಿಸ್ತಿನಿಂದ ಬೆಳೆದವಳಿಗೆ ಅವರು ಅಮೆರಿಕೆಗೆ ಹೋದಕೂಡಲೆ ಸಿಕ್ಕ ಸ್ವಾತಂತ್ರ್ಯದಲ್ಲಿ ಖುಷಿಯಾಗಿಬಿಟ್ಟಿದ್ದಾಳೆ. ಪಾರ್ವತಿಪುರದ ಅಜ್ಜಿ ನೋಡುವ ಕನ್ನಡ ಧಾರಾವಾಹಿಗಳು ನಿಜಜೀವನವೆಂದು ತಿಳಿದುಕೊಂಡು ತಾನೂ ಅರ್ಜೆಂಟ್ ಪ್ರೇಮಕ್ಕೆ ಬೀಳಬೇಕು, ಧಾರಾವಾಹಿಯಲ್ಲಿ ನಟಿಸಬೇಕು, ಅದಕ್ಕಾಗಿ ನಾಟಕ ಕಂಪನಿಯೇ ಮೊದಲ ಹೆಜ್ಜೆಯೆಂದೇನೇನೋ ಲೆಕ್ಕ ಹಾಕಿಕೊಂಡಿದ್ದಾಳೆ. ಯಾವಾಗಲೂ ಮೀಟಿಂಗ್, ಟೂರು ಎನ್ನುವ ಅಪ್ಪ-ಅಮ್ಮನ ಬದುಕು ಮಹಾ ಬೋರು. ಆದ್ದರಿಂದ ರೋಚಕವಾದ ಬದುಕು ಬೇಕೆಂದರೆ ತಾನು ಓಡಿ ಹೋಗಬೇಕು, ಅದಕ್ಕೆ ಸೂಕ್ತ ವ್ಯಕ್ತಿಯೆಂದರೆ ನಾಟಕದಲ್ಲಿ ನಾಯಕನಾಗಿ ಹಿರೊಯಿನ್ ಅಪ್ಪನನ್ನು ಸೋಲಿಸಿ ಅವಳನ್ನು ಎಗರಿಸಿಕೊಂಡು ಹೋಗುವ ಮುರುಗೇಶಿ ಅಂತ ಬಲವಾಗಿ ನಂಬಿದ್ದಾಳೆ. ಹರೆಯಕ್ಕೆ ಕಾಲಿಡುವ ಸಂಕ್ರಮಣ ಘಳಿಗೆಯಲ್ಲಿ ಹಾರ್ಮೊನು ಏರಿಳಿತದಿಂದ ಬುದ್ಧಿ ಚಂಚಲಗೊಳ್ಳೊದು ಸಾಮಾನ್ಯ ಸಂಗತಿ, ನೀವು ಹೆದರಬೇಡಿ, ಏನೂ ಆಗೊಲ್ಲ, ಅವಳನ್ನ ಕರ್ಕೊಂಡು ಒಂದಿಷ್ಟು ಟೂರ್ ಮಾಡಿ, ಅವಳಿಗಿಷ್ಟವಾಗುವ ಕಡೆಗೆಲ್ಲ ಹೋಗಿ ಬನ್ನಿ.

ಅವಳ ಶಾಲೆ, ಪರೀಕ್ಷೆ, ಮಾರ್ಕಸ್ ಅಂತ ಯಾವ ಒತ್ತಡವನ್ನೂ ಹಾಕದೆನೆ ಅವಳಿಗೆ ಸ್ನೇಹಿತರ ತರಹ ಕಂಪನಿ ಕೊಟ್ಟರೆ ಅವಳು ಖುಷಿಯಾಗ್ತಾಳೆ. ಹುಡುಗನನ್ನೂ ಮರಿತಾಳೆ. ಇದು ವಯೋಸಹಜ ಕ್ರಶ್, ಮನೆಯ ಒತ್ತಡದಿಂದ ತಪ್ಪಿಸಿಕೊಳ್ಳಲು ಮನಸ್ಸು ಹುಡುಕಿದ ಒಂದು ಔಟ್ ಲೆಟ್ ಅಷ್ಟೆ. ವಿಷಯ ಗೊತ್ತಾದೊಡನೆ ಆಘಾತಕ್ಕೊಳಗಾದ ಕಾಂಚನಾ ಮಾತ್ರ ಒಂದೂ ಮಾತನಾಡಲಿಲ್ಲ. ಎದ್ದು ಬಾತರೂಮಿಗೆ ಹೋಗಿದ್ದಳು. ಇಂದುಮಾಲಾ ಮಾತಾಡುತ್ತಿದ್ದಾಗ ಗರ ಬಡಿದಂತೆ ಕೂತಿದ್ದ ಎಂ.ವಿ ಸಾವರಿಸಿಕೊಂಡು ಹೇಳಿದ ”ನೀನು ಹೇಳೋದು ಸರಿ ಇಂದೂ, ನಾವು ಮೂರು ಜನ ಒಟ್ಟಿಗೆ ಸಮಯ ಕಳೆಯದೆ ಬಹಳ ದಿನ ಆಗೋಯ್ತು. ಇಬ್ರೂ ಬೇರೆ ಬೇರೆ ದೊಡ್ಡ ಕಂಪನಿಯಲ್ಲಿ ಇದೀವಿ. ತುಂಬಾ ಜವಾಬ್ದಾರಿಯ ಹುದ್ದೆ ಬೇರೆ. ವಾರದಲ್ಲಿ ಎರಡು ದಿನ ಬಿಸಿನೆಸ್ ಮೀಟಿಂಗ್ ಅಂತ ವಿದೇಶಗಳಿಗೆ ಹೋಗ್ತೀವಿ. ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿತೀವಿ. ನಮಗೇನೊ ನಮ್ಮ ಕೆಲಸ ಖುಷಿ ಕೊಡ್ತಾ ಇದೆ. ಆದರೆ ಮಗಳು ಒಂಟಿಯಾಗಿದಾಳೆ ಅಂತ ಅರ್ಥ ಆಗಲಿಲ್ಲ ನೋಡು.”

ಬಾತರೂಮಿನ ಬಾಗಿಲ ಚಿಲಕ ತೆಗೆದ ಶಬ್ದವಾಯಿತು. ಹೊರ ಬಂದ ಕಾಂಚನಾಳ ಮುಖ ಕೆಂಪಗಾಗಿ ಕಣ್ಣೆರಡೂ ಬಾತುಕೊಂಡಿದ್ದವು. ಒತ್ತಿ ಒತ್ತಿ ಒರೆಸಿಕೊಂಡರೂ ಕಣ್ಣೀರು ನಿಂತಿರಲಿಲ್ಲ. “ಬನ್ನಿ ಕಾಂಚನಾ ಚಹ ಕುಡಿರಿ, ಈಗ ಏನೂ ಮಹಾ ಆಗಿಲ್ಲ ಅಂತಲೇ ಹೇಳಬೇಕು. ಆರಂಭದಲ್ಲಿಯೇ ನಮಗೆ ವಿಷಯ ಗೊತ್ತಾಗಿರೊದ್ರಿಂದ ಹೆದರೊ ಅವಶ್ಯಕತೆಯಿಲ್ಲ” ರೂಮ್ ಸರ್ವೀಸಿಗೆ ಆರ್ಡರ್ ಮಾಡಿ ಬಿಸಿ ಚಹ ತರಿಸಿದ್ದಳು. ಚಹ ಗುಟುಕರಿಸುತ್ತ ಇಂದು ಮಾತಾಡತೊಡಗಿದಳು “ನಾನೂ, ಕಾಂಚನಾ ಮುಂತಾದವರೆಲ್ಲ ಅಕ್ಷರಕ್ಕೆ ತೆರೆದುಕೊಂಡ ಮಹಿಳೆಯರ ಮೂರನೆ ತಲೆಮಾರಿನವರು. ನಮ್ಮ ಅಜ್ಜಿಯರು ಅಕ್ಷರ ಕಲಿತರು. ಆದರೆ ಮನೆಯಲ್ಲೇ ಉಳಿದರು. ನಮ್ಮ ತಾಯಂದಿರು ಅಕ್ಷರ ಕಲಿತು ನೌಕರಿಗೆ ಹೋದರು. ಆದರೆ ಆ ನೌಕರಿಯ ಸ್ವರೂಪ ಟೀಚರ್, ಬ್ಯಾಂಕು, ಸರ್ಕಾರಿ ಆಫೀಸು ಇತ್ಯಾದಿಯದಾಗಿದ್ದು ಮನೆಯನ್ನು ನೋಡಿಕೊಂಡು ಹೋಗಲು ಬಹಳ ದೊಡ್ಡ ತೊಡಕೇನೂ ಆಗಿರಲಿಲ್ಲ.

ಆದರೆ ಮೂರನೆಯ ತಲೆಮಾರಿನ ಹೆಂಗಸರು ವೃತ್ತಿಪರ ವಿದ್ಯೆ ಕಲಿತು ಗಂಡಸರನ್ನ ಹಿಂದಿಕ್ಕಿ ರ್ಯಾಂಕುಗಳನ್ನು ಬಾಚಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಮಾಡ್ತಾ ಇದೇವೆ. ನಮಗೀಗ ಬೇರೆ ತರಹದ ಕೌಟುಂಬಿಕ, ಸಾಮಾಜಿಕ ನೆರವು ಬೇಕಾಗಿದೆ. ನಮ್ಮ ಮಕ್ಕಳನ್ನು ಬೆಳೆಸೋದು, ಅವರಿಗೆ ವೈಯಕ್ತಿಕ ಗಮನ ಕೊಡೋದು, ಅವರೊಡನೆ ಕಳೆಯುವ ಸಮಯವನ್ನು ಹೊಂದಿಸೋದು ವೃತ್ತಿಯ ಜೊತೆಗೆ ಸಂಘರ್ಷಕ್ಕೆ ನಾಂದಿ ಹಾಡುತ್ತೆ. ಕಂಪನಿಯವರು ಇದಕ್ಕಾಗೇ ಕಾದಿರೋರ ತರಹ ಹೊಸಬರನ್ನು ನೇಮಿಸಿಕೊಂಡು ಬಿಡ್ತಾವೆ. ಹಾಗಂದರೆ ಇಂತಹ ಕಂಪನಿಯಲ್ಲಿ ಕೆಲಸ ಮಾಡೋರು ಮದುವೆಯಾಗಬಾರದಾ? ಮಗು ಹೆರಬಾರದಾ? ಮಕ್ಕಳಿಗೆ ಸಮಯ ಕೊಟ್ಟು ಬೆಳೆಸಬಾರದಾ? ಅಥವಾ ಸಿನಿಮಾ ನಟಿಯರಂತೆ ಕೆಲಸ ಬಿಟ್ಟ ಮೇಲೆ ಕುಟುಂಬದ ಕಡೆಗೆ ಮುಖ ಮಾಡಬೇಕಾ? ಹಾಗಾದಾಗ ಇಷ್ಟೆಲ್ಲ ವಿದ್ಯೆ ಕಲಿತದ್ದು ದಂಡವಾಗೋಯ್ತು ಅಂತ ಪಶ್ಚಾತ್ತಾಪ ಆಗುತ್ತಲ್ಲ, ನಾವು ಹಗಲಿರುಳೂ ನಿದ್ದೆಗೆಟ್ಟು ಓದಿದ್ದು, ಎಲ್ಲರನ್ನೂ ಹಿಂದಿಕ್ಕಿ ಮೆಡೆಲ್ ತಗೊಂಡಿದ್ದು ವ್ಯರ್ಥವಾಯ್ತು ಅಂತ ವಿಲಿವಿಲಿ ಒದ್ದಾಟದ ಭಾವನೆ ಬರುತ್ತೆ. ಸಹೋದ್ಯೋಗಿಗಳ ಸಮಸಮಕ್ಕೆ ಸ್ಪರ್ಧೆ ಹೂಡಿದಂತೆ ದುಡಿಯೋಕೆ ನಿಂತರೆ ಮಕ್ಕಳು ಅಲಕ್ಷಿತರಾಗ್ತಾರೆ. ಎಂಥಾ ತೊಳಲಾಟದಲ್ಲಿದ್ದೀವಿ ಅಂದ್ರೆ ಓಹ್ ಹೇಳೊಕ್ಕಾಗಲ್ಲ” ಮಾರ್ಕಾಂಡೇಯನ ಮೊಬೈಲು ರಿಂಗಣಿಸಿತು.

ಐಯಾಮ್ ಇನ್ ಎ ಮೀಟಿಂಗ್ ವಿಲ್ ಕಾಲ್ ಬ್ಯಾಕ್ ಎಂದು ಪಿಸುಗುಟ್ಟಿ ಫೋನಿಟ್ಟ. “ನಿಮಗೆ ತುಂಬಾ ಥ್ಯಾಂಕ್ಸ ಇಂದುಮಾಲಾ ಅವ್ರೆ, ನನ್ನ ಮಗಳನ್ನ ನಂಗೆ ಉಳಿಸಿಕೊಟ್ರಿ, ನನ್ನ ಪ್ರಾಣ ಉಳಿಸಿದಕಿಂತಲೂ ಹೆಚ್ಚಿನ ಸಹಾಯವಿದು” ಎನ್ನುತ್ತ ಎದ್ದು ನಿಂತಳು ಕಾಂಚನಾ. ಅವಳ ಜೊತೆಗೆ ಎದ್ದು ನಿಲ್ಲುತ್ತ ಎಂ.ವಿ. ಹೇಳಿದ “ಹೌದು ಇಂದೂ, ನೆಕ್ಸ್ಟ ಬೆಂಗಳೂರಿಗೆ ಬರುವಾಗ ನಂಗೊಂದು ಫೋನು ಮಾಡು. ಸೀದಾ ಮನೆಗೆ ಕರ್ಕೊಂಡು ಹೋಗ್ತೇನೆ. ಹೊಟೆಲ್ ಅಂತ ಉಳಿಬೇಡ” ಆಯ್ತಪ್ಪ ಎಂದು ನಗುತ್ತ ಏನೋ ನೆನಪಾದವಳಂತೆ ಇಂದುಮಾಲಾ “ನಿಮ್ಮ ಮಗಳ ಹತ್ರ ಅಪ್ಪಿತಪ್ಪಿ ಈ ಸುದ್ದಿ ತೆಗಿಬೇಡ್ರಿ. ಏನೂ ಆಗದಿರೊ ಹಂಗೆ ನಾರ್ಮಲ್ ಆಗಿ ಬಿಹೇವ್ ಮಾಡ್ರಿ. ಪೋಲಿಸರು ಅವನ ಸಿಮ್ ಸೀಜ್ ಮಾಡ್ತಾರೆ ಹಾಗಾಗಿ ಅವಳು ಪ್ರಯತ್ನ ಪಟ್ಟರೂ ಸಂಪರ್ಕ ಮಾಡಲಿಕ್ಕೆ ಆಗೋದಿಲ್ಲ. ಸ್ವಲ್ಪ ದಿನ ಅವಳಿಗೆ ಗೊತ್ತಾಗದ ಹಂಗೆ ಆಬ್ಸರ್ವ್ ಮಾಡತಾ ಇರಿ” ಎಂದಳು. ತಲೆಯಾಡಿಸಿ ಹೊರನಡೆದ ದಂಪತಿಗಳ ಜೊತೆಗೆ ಅವರ ಕಾರಿನವರೆಗೂ ಬಂದು ಕೈ ಬೀಸಿದಳು. ನಿಂತಲ್ಲೇ ಚಕಚಕ ಟೈಪು ಮಾಡಿ ವೇಣಿಗೆ ಮೆಸೆಜು ಕಳಿಸಿದಳು. ಯು ಸೇವ್ಡ್ ದಿ ಬೇಬಿ, ದಿಸ್ ಕ್ರೆಡಿಟ್ ಗೋಸ್ ಟು ಆಪರೇಶನ್ ಬ್ಲ್ಯೂ ಬೆರಿ ಕೇಕ್.

‍ಲೇಖಕರು nalike

3 August, 2020

5 Comments

  1. Nutana

    ಪ್ರಜ್ಞಾ, ಚೆನ್ನಾಗಿದೆ. ಈ ಹೊಸ ಐಡಿಯಾಕ್ಕೆ
    ನೀನೇ ಹೊಣೆಗಾರಳು.

  2. ನೂತನ

    ಪ್ರಜ್ಞಾ ನಿನ್ನ ಹಾಗೆ ಲವಲವಿಕೆಯ ಕತೆ. ಈ ಹೊಸ ಐಡಿಯಾಕ್ಕೆ ನೀನೇ ಹೊಣೆಗಾರಳು.

  3. KIRAN BHAT

    ಒಳ್ಳೆಯ ಕಥೆ.

  4. Smitha Amrithraj.

    ಚೆನ್ನಾಗಿದೆ ಕತೆ ಪ್ರಜ್ಞಾ ಮೇಡಂ

  5. Prajna Mattihalli

    Thanks to all friends and thanks Avadhi

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading