ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಜ್ಞಾ ಮತ್ತಿಹಳ್ಳಿಯವರ ‘ಕಾಲಂದುಗೆ’

ಪ್ರಜ್ಞಾ ಮತ್ತಿಹಳ್ಳಿ ಕನ್ನಡದ ಭರವಸೆಯ ಕವಯತ್ರಿ.

ಅವರ ಹೊಸ ಸಂಕಲನ ‘ಕಾಲನ ಕಾಲಂದುಗೆ’ ಸಧ್ಯದಲ್ಲೇ ಬಿಡುಗಡೆಯಾಗುತ್ತಿದೆ

ಈ ಬಗ್ಗೆ ನಾಡಿನ ಇಬ್ಬರು ಪ್ರಮುಖರ ನೋಟ ಇಲ್ಲಿದೆ 

ಬಾಲ್ಯ, ನೋವು, ನೆನಪು, ಕಾವ್ಯಬರೆಯುವಂಥ ಸೃಜನಶೀಲತೆ

rajendra chenni

ರಾಜೇಂದ್ರ ಚೆನ್ನಿ

 

ಈ ಸಂಕಲನದ ಕವಿತೆಗಳು ಮಹಾತ್ವಾಕಾಂಕ್ಷೆಯ ಕವಿತೆಗಳಲ್ಲ. ಪ್ರಾಯಶಃ ಆ ಕಾರಣದಿಂದ ವಾಚಾಳಿಗಳೂ ಅಲ್ಲ; ಅಥವಾ ಓದುಗನಿಗೆ ಗೊತ್ತಿಲ್ಲದ ಪ್ರವಾದಿ ಸತ್ಯವನ್ನು ಹೇಳಲೇಬೇಕೆಂಬ ಹಟಮಾರಿಗಳೂ ಅಲ್ಲ. ತಮ್ಮ ಬರಹದಿಂದ ಕನ್ನಡ ಸಂವೇದನೆಯು ಬದಲಾಗಬಹುದು ಎನ್ನುವ ಹುಸಿ ನಿರೀಕ್ಷೆಯಲ್ಲಿ ಅವು ನಿಂತಿಲ್ಲ. ಇಲ್ಲಿಯ ಬಹುಪಾಲು ಪದ್ಯಗಳು ಬಾಲ್ಯ, ನೋವು, ನೆನಪು, ಕಾವ್ಯಬರೆಯುವಂಥ ಸೃಜನಶೀಲತೆಗಳ ಕುರಿತಿವೆ.

ladai book8ಸರಳ ಹಾಗೂ ನಿಧಾನ ಗತಿಯ ಪದ್ಯಗಳಾಗಿದ್ದರಿಂದ ಅವುಗಳಿಗೆ ನನಗೆ ಇಷ್ಟವಾಗುವ ಒಂದು ಹಗುರವಾದ Meditative Quality ಇದೆ. ಅಂದರೆ ಗಂಭೀರವಾಗಿ ಚಿಂತಿಸಬಲ್ಲ ಆದರೆ ಚಿಂತನೆಯೇ ಭಾರವಾಗದ ಮನಸ್ಸು ಈ ಕವಿತೆಗಳ ಹಿಂದೆ ಇದೆ. ಹೀಗಾಗಿ ಆಲೆಮನೆ ನಡೆಸುತ್ತಿದ್ದ ಅಪ್ಪ ಇಲ್ಲವಾದ ಮೇಲೂ ಈ ಮನಸ್ಸು ಗಿಜಿಗಿಜಿ ಗಿರಾಕಿಗಳಂತೆ ತುಂಬಿದ ನೊಣಗಳನ್ನು ಗಮನಿಸಬಲ್ಲದು. ಅಲ್ಲದೇ ಕುದಿ ಹೆಚ್ಚಾಗಿ ಕೊಪ್ಪರಿಗೆಯಾಗಿದೆ ಜೀವ ಎಂದು ಹೇಳುತ್ತಲೇ

ಕೂರುವಂತಿಲ್ಲ ಕಾಯುತ್ತ
ತೂಗಬೇಕು ತಕ್ಕಡಿ
ಕುದಿದು ಕುದಿಸಿ ತಿಳಿವ ಹದ
ಗಲ್ಲೆ ಏರಿದ ಮೇಲೆ

ಎನ್ನುವ ಜವಾಬ್ದಾರಿಯನ್ನು ಅದು ಹೊತ್ತುಕೊಳ್ಳಬಲ್ಲದು. ಹೀಗಾಗಿ ವೈಯಕ್ತಿಕವಾಗಿ ಸಾವು ತಂದ ನೋವು ಹದವನ್ನು ಹುಡುಕುವ ಕಡೆಗೆ ಈ ಮನಸ್ಸನ್ನು ಎಳೆಯುತ್ತದೆ. ಇದಕ್ಕೆ ಸಹಭಾವ ಹೊಂದಿರುವ ‘ಅಪ್ಪ’ ಪದ್ಯದಲ್ಲಿ ಅಪ್ಪ ದಿನನಿತ್ಯದ ವಸ್ತುಗಳ ಜೊತೆಗೆ, ಅಂತೆಯೇ ನಿಸರ್ಗದ ಸ್ಥಾಯೀ ಸ್ಥಿತಿಗಳಿಗೆ ಜೊತೆಗೆ ಒಂದಾಗಿ ಗ್ರಹಿಕೆಗೆ ಬರುತ್ತಾನೆ. ಅಪ್ಪನ ಬಗೆಗಿನ ನೆನಪಿನ ಪದ್ಯದಲ್ಲಿ ಕೂಡ ಕುಟುಂಬವು ಸಾತತ್ಯತೆಯ ರೂಪಕವಾಗಿ ಬರುತ್ತದೆ.

anklet2ಈ ಕವಿಗೆ ಹೀಗೆ ನಿರಂತರತೆಯು ಸಾತತ್ಯತೆಯ ಅವಶ್ಯಕತೆ ಕಂಡಿದೆ. ಇವುಗಳು ಭಗ್ನಗೊಂಡಿರುವ ಉದ್ವಿಗ್ನ ಜಗತ್ತಿಗೆ ಕವಿಯ ಪ್ರಜ್ಞೆ ಪ್ರವೇಶ ಮಾಡಿದಂತೆ ತೋರುವುದಿಲ್ಲ. ಹಾಗೆಂದ ಮಾತ್ರಕ್ಕೆ ಇಂದಿನ ಬದುಕಿನ ಅಪಸವ್ಯಗಳ ಬಗ್ಗೆ ಕವಿಗೆ ಗೊತ್ತಿಲ್ಲವೆಂದಲ್ಲ. ಕಿರುಗುಣಿಯ ಮಲ್ಲಿಗೆ ಪುಟ್ಟಿಯರ ಕಚ್ಚಿ ತಿನ್ನುವ ಪುರುಷರ ರಕ್ತಸಿಕ್ತ ಹಲ್ಲುಗಳನ್ನು ಉಜ್ಜುವ ಬ್ರಷ್ಗಳಲ್ಲಿವೆ ಎಂದು ನವೆಯಬಲ್ಲ ಮನಸ್ಸು ಇಲ್ಲಿದೆ. ಆದರೆ ಅಂಥ ಸಮಕಾಲೀನ ವಸ್ತುಗಳೇ ಕಾವ್ಯದ ವಸ್ತುವಾಗಿರಲೇಬೇಕು ಎನ್ನುವ ಗೀಳು ಈ ಪದ್ಯಗಳಲ್ಲಿ ಕಂಡುಬರುವುದಿಲ್ಲ.

ಇತ್ತೀಚಿನ ಕವಿಗಳು (ಅಂದರೆ ಬಂಡಾಯದಿಂದೀಚೆಗೆ) ಸದ್ಯದ ತಲ್ಲಣಗಳ ಬಗ್ಗೆ ಹಟತೊಟ್ಟು ಬರೆಯದಿದ್ದರೆ ಅದು Politically Correct ಆಗಲಾರದು ಎನ್ನುವ ಒತ್ತಡದಲ್ಲಿ ಬರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸ್ವಲ್ಪ ಅಂತರ್ಮುಖಿಯಾಗಿ ಸಾರ್ವಜನಿಕವಾಗಿ ಮುಖ್ಯವಾಗಿರದ ಸಂಗತಿಗಳ ಬಗ್ಗೆ ಧ್ಯಾನ ಮಾಡುವ ಕಾವ್ಯ ಬೇಕೆನಿಸುತ್ತದೆ. ಆ ಬಗೆಯ ಅನೇಕ ಪದ್ಯಗಳು ಇಲ್ಲಿವೆ.

ಪದ್ಯಗಳು ವ್ಯವಧಾನದಲ್ಲಿ ಬರೆದಂತೆ, ಎಷ್ಟೆಲ್ಲವನ್ನು ಹೇಳಬೇಕು ಎನ್ನುವ ಗಲಿಬಿಲಿಯಲ್ಲದೆ ಮೂರ್ತವಾದ ಪ್ರತಿಮೆಗಳು ಹಾಗೂ ಭಾಷೆಯ ಧ್ವನಿಪೂರ್ಣತೆಯನ್ನು ಬಳಸಿಕೊಂಡು ಬರೆದಂತೆ ಇದ್ದರೆ ಖುಷಿ ಕೊಡುತ್ತವೆ.

ನಿಜದ ನೆಲ ಮುಚ್ಚಿರುವ ನಿರ್ಲಜ್ಜ ಪಾಚಿ
ಕಡ್ಡಿಯಾಗುವುದೇ ಕಷ್ಟ ರಸಭರಿತ ಕಾಲದಲಿ
ಕೊಡಲಾಗದಿದ್ದರೂ ಜೀವ ಸಾವು ಮುಂದೂಡುವುದು
ಮರೆವೆಯ ಊರುಗೋಲು ನನ್ನ ಕೈಯಲ್ಲಿ

ಹೀಗೆ ಹತ್ತು ಹಲವಾರು ಸಾಲುಗಳು ನೆನಪಿನಲ್ಲಿ ಉಳಿಯುವಂತಿವೆ.

ಇಷ್ಟೆಲ್ಲ ಹೇಳಿದರೂ ಇಲ್ಲಿಯ ಪದ್ಯಗಳು ಮುಂದೆ ಬರೆಯಬೇಕಾದ ವಿಸ್ತಾರ ಹಾಗೂ ಆಳಗಳುಳ್ಳ ಕಾವ್ಯದ ತೈಯಾರಿಯಂತಿವೆಯೆಂದರೆ ವಿರೋಧಾಭಾಸವಲ್ಲ. ಭಾಷಾಡಂಬರ, ಭಾವಾಡಂಬರ ಎರಡು ಇಲ್ಲದೇ ಸೂಕ್ಷ್ಮವಾಗಿ ಚಿಂತಿಸಬಲ್ಲ ಮನಸ್ಸು ಬದುಕಿನ ಅನುಭವಗಳೊಂದಿಗೆ ವಿಸ್ತಾರ ಮತ್ತು ಆಳಗಳನ್ನು ಪಡೆದುಕೊಳ್ಳಬಹುದು. ಹಾಗೆ ಆಗುತ್ತದೆ ಎಂದು ನಂಬಿಕೆ ಬರಲು ಕಾರಣವೆಂದರೆ ಹೇಳಬೇಕಾದದ್ದನ್ನು ಬಿಡದೇ ಹೇಳುವ ಹದವು ಈಗಾಗಲೇ ಸಾಧ್ಯವಾಗಿದೆ. ಇನ್ನೇನಿದ್ದರೂ ಜೀವನದ ಅನುಭವಗಳೇ ತರಬಹುದಾದ ಬೀಜಗಳಿಗಾಗಿ ಕಾಯಬಹುದಾಗಿದೆ.

ಹೃದಯದ ಹುಡುಕಾಟದ ವಿಷಾದದಲ್ಲಿ.. 

tarini shubhadayini

ಆರ್ ತಾರಿಣಿ ಶುಭದಾಯಿನಿ

‘ಕಾಲನ ಕಾಲಂದುಗೆ’ ಸಂಕಲನದಲ್ಲಿ ಇರುವ ಅನೇಕ ಕವಿತೆಗಳಲ್ಲಿ ಇರುವ ಅನುಭವಗಳನ್ನು ಹೊಸದಾಗಿ ಕಟ್ಟಿಕೊಳ್ಳುವ ಪ್ರಯತ್ನ ಕಾಣುತ್ತದೆ. ಹಾಗೆ ನೋಡಿದರೆ ಇಲ್ಲಿರುವ ಕವಿತೆಗಳು ಹೆಣ್ಣುನೋಟದ ಕವಿತೆಗಳೆಂದು ಮೇಲ್ನೋಟಕ್ಕೆ ತಿಳಿಯುವಂತಿವೆ. ‘ಹೆಣ್ಣುನೋಟ’, ‘ಹೆಣ್ತನದ ಸ್ಪರ್ಶ’ ಇತ್ಯಾದಿ ಪದಗಳ ಪರಿಭಾಷೆಯ ಪರಿಧಿಯಾಚೆಗೆ ಒಂದು ಅನುಭವ ಗೋಚರವಾದ ಸ್ಪರ್ಷ ಇರುತ್ತದೆ. ಅದು ಪ್ರಜ್ಞಾ ಅವರ ಇಲ್ಲಿನ ಕವಿತೆಗಳಲ್ಲಿ ಕಾಣುತ್ತದೆ.

ಕುಟುಂಬದ ಮೂಲಕ ಜಗತ್ತನ್ನು ನೋಡುವ, ಆ ಕನ್ನಡಿಯಲ್ಲಿ ತನ್ನತನವೇನೆಂದು ಹುಡುಕಿಕೊಳ್ಳುವ ಹೆಣ್ಣು ಬರಹವಣಿಗೆಯ ವಿನ್ಯಾಸವಿಲ್ಲಿದೆ. ಕುಟುಂಬದ ಮೂಲಕ ಕಾಲದ ಚಲನೆಯನ್ನು ಗುರುತಿಸುವ ಕ್ರಮ ಹಾಗು ತಲೆಮಾರುಗಳಲ್ಲಿ ಸರಿಯುವ ಕಾಲದ ಕುರುಹುಗಳನ್ನು ಹುಡುಕುವುದು ಇತ್ಯಾದಿ ಕ್ರಿಯೆಗಳು ಸಹಜವಾಗಿ ಎನ್ನುವಂತೆ ಇಲ್ಲಿ ಎತ್ತಿಕೊಳ್ಳಲಾಗಿದೆ. ಈ ಬಗೆಯ ಕವಿತೆಗಳು ಸಾಮಾನ್ಯವಾಗಿ rational ಆಗುತ್ತವೆ; ಇಲ್ಲವೇ ಭಾವತೀವ್ರತೆಯನ್ನು ಮುಂದು ಮಾಡುತ್ತವೆ. ಆದರೆ ಪ್ರಜ್ಞಾ ಈ ಎರಡು ಅಂಚುಗಳನ್ನು ಬ್ಯಾಲೆನ್ಸ್ ಮಾಡುತ್ತಾರೆ ಎನ್ನಿಸುತ್ತದೆ. ಹಾಗಾಗಿ ಕ್ಲೀಷೆಗಳ ಸುಳಿಯಿಂದ ಪಾರಾಗಿದ್ದಾರೆ.

anklet1ಉದಾಹರಣೆಗೆ ‘ಕಾಲನ ಕಾಲಂದುಗೆ’ ತರದ ಕವಿತೆಯಲ್ಲಿ ತಾಯಿ-ಮಗಳ ನಡುವಿನ ವ್ಯತ್ಯಯಗಳು ಕಾಲದ ತೆರೆಯನ್ನು ಹೇಳುವಂತದ್ದು. ಇಂತಹ ಕವಿತೆಗಳನ್ನು ಕನ್ನಡದ ಅನೇಕ ಕವಯಿತ್ರಿಯರು ಸ್ತ್ರೀವಾದದ ಉತ್ತುಂಗದ ಕಾಲದಲ್ಲಿ ಬರೆದಾಗಿದೆ. ಇದನ್ನು ಹೊಸ ರೀತಿಯಲ್ಲಿ ಅಭಿವ್ಯಕ್ತಿ ಮಾಡಬೇಕಾದ ಸವಾಲನ್ನು ಇಂದಿನ ಕವಯಿತ್ರಿಯರು ಎದುರಿಸುತ್ತಿದ್ದಾರೆ. ಪ್ರಜ್ಞಾ ಅವರು ತಲೆಮಾರುಗಳ ತುಲನೆಯನ್ನು ಜೆಂಡರ್ ದೃಷ್ಟಿಯಿಂದ ಭಿನ್ನವಾಗಿ ಕಾಲದ ಚಲನೆಗೆ ಒತ್ತುಕೊಡುವ ಮೂಲಕ ಫೋಕಸ್ ಅನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ.

ಇದೇ ರೀತಿ ‘ಅಪ್ಪ’, ‘ತಲೆಮಾರು’, ‘ಅಂಗೈವಾಸನೆ ಮತ್ತು ನೆನಪು’ ಇತ್ಯಾದಿ ಕವಿತೆಗಳು ಒಂದು ತಲೆಮಾರು ತನ್ನ ಕಣ್ಣಿಂದ ಇನ್ನೊಂದು ತಲೆಮಾರನ್ನು ನೋಡುವ ವಿನ್ಯಾಸವನ್ನೇ ಅನುಸರಿಸುತ್ತವೆ. ಇಲ್ಲೆಲ್ಲಾ ಒತ್ತು ಸಿಗುವುದು ಕಾಲನ ಚಲನೆಯ ಬಗ್ಗೆ. ಬದಲಾವಣೆಯ ಬಗ್ಗೆ ಇಲ್ಲಿ ಪಿಸುದನಿಯ, ಆತ್ಮಸಂಗಾತದ ವಿಷಾದದ ದನಿಗಳಿವೆಯೇ ಹೊರತಾಗಿ ಅಬ್ಬರದ ಮಾತುಗಳ ಮಹಾಪೂರ ಇಲ್ಲ ಎನ್ನುವುದೇ ಸಮಾಧಾನದ ಸಂಗತಿ.

‘ಕಾಲನ ಕಾಲಂದುಗೆ’ ಕವಿತೆಗಳಲ್ಲಿ ಬದುಕಿನ ಬಗೆಗೆ ತಾಳುವ ಎಚ್ಚರಿಕೆಯ ನಡವಳಿಕೆಯ ಬಗ್ಗೆ ವಿಷಾದವಿದೆ. ಅಂತೆಯೇ ಶಹಜಾದೆಯ ಕಥೆ ಹೇಳಿ ಬದುಕಿಗೆ ಮರಳುವ ತೀವ್ರತೆಯನ್ನು ಹೇಳುತ್ತಲೇ ಅಲ್ಲಿ ಹೃದಯದ ಗೈರುಹಾಜರಿ ಇರುವುದನ್ನು ಇಲ್ಲಿನ ಕವಿತೆ-‘ಕಲ್ಲಿನಾಟ’ ಗುರುತಿಸುತ್ತದೆ. ಆದರೆ ಇಲ್ಲಿ ಚಲನೆಯನ್ನು ಗುರುತಿಸುವುದು ಮತ್ತೆ ಪ್ರಜ್ಞಾ ಅವರಿಗೆ ಪ್ರೀತಿಯ ಸಂಗತಿ. ಆದುದರಿಂದಲೇ ಈ ಸಾಲುಗಳು;

ನಿರ್ದಯಿ ಸುಲ್ತಾನನ/ಖಡ್ಗಕ್ಕೆ ಕತೆಗಳ ಆಫೀಮು ಬಳಿದ ಶಹಜಾದೆ
ಹಗುರಕೆ ಕರಗುತ್ತದೆ ಕಲ್ಲು/ಒಳಹರಿವಿನ ಸಳಸಳ ನಾದಕ್ಕೆ (ಕಲ್ಲಿನಾಟ)

ನಮ್ಮ ಕಾಲದ ಕವಿತೆಗಳಲ್ಲಿ ಕವಿತೆ ಕಟ್ಟುವ ಸರಕು ಪ್ಯಾಶನೇಟ್ ಆಗಿರುವುದಕ್ಕಿಂತ rational ಆಗಿ ಬರುತ್ತದೆ. ಪ್ರಜ್ಞಾ ಅವರ ಅನೇಕ ಕವಿತೆಗಳಲ್ಲಿ ಇದನ್ನು ನೀಗಿಕೊಳ್ಳುವ ಬಗೆಯಾಗಿ ರೂಪಕಗಳನ್ನು ಯಥೇಚ್ಛವಾಗಿ ಬಳಸಲಾಗಿದೆ. ಆದರೆ ಇದು ಎಲ್ಲ ಸಂದರ್ಭದಲ್ಲೂ ಕ್ಲಿಕ್ಕಾಗುತ್ತದೆ ಎನ್ನಲಾಗದು. ಕೆಲವೊಮ್ಮೆ ಅತಿಬಳಕೆ ಅವರ ಕವಿತೆಗಳ ಅರಳುವಿಕೆಯನ್ನು ತಡೆದು ಬಿಡುತ್ತದೆ. ಕವಿತೆಯ ಮಿಂಚುಗಳು ಇಲ್ಲಿನ ಅನೇಕ ಕವಿತೆಗಳಲ್ಲಿವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡೇ ಈ ಮಾತನ್ನು ಹೇಳುತ್ತಿರುವೆ. ಇಥಣಡಿಚಿತಚಿರಚಿಟಿಛಿಜ ಕೊಂಚ ಮರೆಯಾದರೆ ಎಂಬ ಭಾವನೆ ಇಲ್ಲಿನ ಕವಿತೆಗಳನ್ನು ಓದುವಾಗ ಹುಟ್ಟಿತು.

ಬಹುನಿರೀಕ್ಷೆಯ ವಿಭಾ ಪ್ರಶಸ್ತಿಗೆ ಭಾಜನವಾಗಿರುವ ಈ ಕೃತಿಗೆ ಅನೇಕ ಕೃತಿಗಳು ಪೈಪೋಟಿ ನೀಡಿವೆ. ‘ಒಡೆದ ಬಣ್ಣದ ಚಿತ್ರಗಳು’, ‘ಸಾವೊಂದನು ಬಿಟ್ಟು’,’ಹುಲ್ಲಿಗೆ ಹುಟ್ಟಿದ ಬೀದಿ’, ‘ಕಣ್ಣಿಂದ ಇಳಿದ ಮಳೆಹನಿ’ ಇತ್ಯಾದಿ ಸಂಕಲನಗಳು ಪ್ರಸ್ತುತ ಆಯ್ಕೆಗೊಂಡ ಸಂಕಲನದ ಜೊತೆಗೇ ಇಷ್ಟವಾದವು. ಇನ್ನುಳಿದ ಹಲವು ಸಂಕಲನಗಳಲ್ಲಿ ಅನೇಕವು ತಮ್ಮ ಸಂವೇದನೆಗಳನ್ನೇ ಬಲವಾಗಿ ನಂಬಿಕೊಂಡಿರುವಂತವಾಗಿದ್ದವು. ಮುಸ್ಲಿಂ, ಹೆಣ್ಣು ಸಂವೇದನೆಗಳನ್ನು ಪ್ರಧಾನವಾಗಿ ಆಧರಿಸಿದ ಇವುಗಳ ವಾಚ್ಯತೆ ಕವಿತೆಯ ಅನೂಹ್ಯ ಆಯಾಮವನ್ನು ಮರೆಸಿಬಿಡುತ್ತವೆ ಎನಿಸಿತು.

ಕೊಂಚಮಟ್ಟಿಗೆ ಸೂಚ್ಯತೆಯನ್ನು ಕಾಪಾಡಿಕೊಂಡ ‘ಕಾಲನ ಕಾಲಂದುಗೆ’ ಕವಿತೆಗಳು ಇವುಗಳ ಸಾಲಿನಿಂದ ದೂರ ನಿಲ್ಲುತ್ತದೆ ಎನ್ನುವುದು ನನ್ನ ಗ್ರಹಿಕೆ. ಕವಿತೆಯ ಆಕಾರ, ಪ್ರಕಾರ ಎಲ್ಲವೂ ಬದಲಾವಣೆಗೀಡಾಗುತ್ತಿರುವ ಈ ಸಂದರ್ಭದಲ್ಲಿ ಮನಸ್ಸಿಗೆ ಮುದನೀಡುವ ಕವಿತೆಗಳನ್ನು ಕಟ್ಟುವುದು ಹೇಗೆಂಬ ಹುಡುಕಾಟದಲ್ಲಿ ಪ್ರತಿ ಹೊಸ ಕವಿಯೂ ತೊಡಗಿದ್ದಾನೆ/ಳೆ. ಈ ಕ್ರೈಸಿಸ್ನಲ್ಲಿ ಕವಿತೆ ಬರೆದು ಗೆದ್ದ ಈ ಕವಿಗೆ ಅಭಿನಂದನೆಗಳು.

 

‍ಲೇಖಕರು Admin

27 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading