ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರಜೆಗಳ ಆಯ್ಕೆ ಪ್ರಧಾನಿಯೋ ಪ್ರಭುತ್ವವೋ' ನಾ ದಿವಾಕರ್ ಕೇಳ್ತಾರೆ

ನಾ ದಿವಾಕರ

ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಆಯ್ಕೆಗೆ ಒಳಗಾಗುವುದು ಸಂವಿಧಾನದ ಪರಿಧಿಯಲ್ಲಿ ದೇಶವನ್ನು ಆಳುವ ಒಂದು ಶಾಸನ ಬದ್ಧ ಸರ್ಕಾರ ಮತ್ತು ಸರ್ಕಾರ ಪ್ರತಿನಿಧಿಸುವ ಪ್ರಭುತ್ವ.  ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಸಾರ್ವಭೌಮ ಪ್ರಜೆಗಳ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವುದರ ಮೂಲಕ , ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ,  ಭಾರತೀಯ ಸಮಾಜದ ಜನಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಸಂರಕ್ಷಿಸುವ ಮೂಲಕ, ದೇಶದ ಜನತೆಗೆ ನೆಮ್ಮದಿಯ ಬದುಕು ಕಲ್ಪಿಸುವ ನಿಟ್ಟಿನಲ್ಲಿ ನೀತಿ ನಿಯಮಗಳನ್ನು, ಕಾಯ್ದೆ ಕಾನೂನುಗಳನ್ನು ರೂಪಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಸ್ಥಾಪಿಸುವ ಮೂಲಕ ಒಂದು ಜವಾಬ್ದಾರಿಯುತ, ಪ್ರಾಮಾಣಿಕ ಸರ್ಕಾರವನ್ನು ನಿರ್ವಹಿಸುವುದು ಅಧಿಕಾರರೂಢ ಸರ್ಕಾರಗಳ ಆದ್ಯತೆ ಮತ್ತು ಕರ್ತವ್ಯವಾಗಬೇಕು.  ಇದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಮಹಾನ್ ವ್ಯಕ್ತಿಗಳ ಕನಸೂ ಹೌದು, ಈ ದೇಶದ ಪ್ರಜೆಗಳ ಕನಸೂ ಹೌದು. ಆದರೆ 2014ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ನೋಡಿದಾಗ ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳು ಈ ಆದ್ಯತೆಗಳನ್ನು ಗಮನಿಸದೆ ಇರುವುದು ಸ್ಪಷ್ಟವಾಗುತ್ತದೆ.

ಭಾರತದಂತಹ ವೈವಿಧ್ಯಮಯ ಬಹುಸಂಸ್ಕೃತಿಯ ರಾಷ್ಟ್ರದ ನಾಯಕತ್ವ ವಹಿಸಲು ಇಲ್ಲಿನ ಮೂಲಭೂತ ಲಕ್ಷಣಗಳನ್ನು ಗ್ರಹಿಸಿದವರಾಗಿರುವುದು ಅತ್ಯಗತ್ಯ. ಭಾವನಾತ್ಮಕ ನೆಲೆಯಲ್ಲಿ ವ್ಯಕ್ತವಾಗುವ ಸೆಕ್ಯುಲರಿಸಂ, ಕೋಮುವಾದ ಮತ್ತು ಜಾತಿವಾದ ಎಂಬ ಸಮಸ್ಯೆಗಳನ್ನು ವಾಸ್ತವದ ನೆಲೆಯಲ್ಲಿ ಗ್ರಹಿಸಿದಾಗ ಈ ದೇಶದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ತಾವು ಪ್ರತಿನಿಧಿಸುವ ಸಂವಿಧಾನದ ಮೌಲ್ಯಗಳನ್ನು ಕಿಂಚಿತ್ತೂ ಗೌರವಿಸದಿರುವುದು ಸ್ಪಷ್ಟವಾಗುತ್ತದೆ. ವ್ಯವಸ್ಥೆಯೊಳಗಿನ ಲೋಪಗಳನ್ನು ಸರಿಪಡಿಸುವುದು ತಾತ್ಕಾಲಿಕ ಶಮನ ನೀಡುವಂತಹ ಒಂದು ನಿವಾರಕ ಧೋರಣೆ. ಆದರೆ ವ್ಯವಸ್ಥೆಯ ಗರ್ಭದಲ್ಲೇ ಅಡಗಿರುವ ಮೂಲ ಲೋಪಗಳನ್ನು ಅರಿತು, ಸ್ಥಾಪಿತ ವ್ಯವಸ್ಥೆಯನ್ನೇ ಬದಲಿಸಲು ಯತ್ನಿಸುವುದು ಶಾಶ್ವತ ಶಮನ ನೀಡುವಂತಹ ಒಂದು ವಿದ್ಯಮಾನ. ರಾಜಕೀಯ ಪಕ್ಷಗಳು ಈ ಗಂಭೀರ ಸಮಸ್ಯೆಯನ್ನು ಗಮನಿಸದೆ ಇದ್ದರೂ ಭಾರತದ ಪ್ರಬುದ್ಧ ಮತದಾರರು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸುವ ಮುನ್ನ ಇದನ್ನು ಗಮನಿಸುವುದು ಅತ್ಯಗತ್ಯ. ಪ್ರತಿಯೊಂದು ಚುನಾವಣೆಯಲ್ಲೂ ಸಾರ್ವಜನಿಕ ವಲಯದಲ್ಲಿ ಮುಖ್ಯವಾಗಿ ಚರ್ಚಿತವಾಗುವ ಒಂದು ವಿಷಯವೆಂದರೆ ಮುಂದಿನ ಪ್ರಧಾನಿ ಯಾರು ಎಂಬ ಪ್ರಶ್ನೆ .

ನೆಹರೂ ಕಾಲದಿಂದ ಸಂಭಾವ್ಯ ಮೋದಿ ಕಾಲದವರೆಗೆ ಈ ವಿದ್ಯಮಾನವನ್ನು ಕಾಣುತ್ತಲೇ ಬಂದಿದ್ದೇವೆ. ಇದು ಅನಿವಾರ್ಯವೂ ಹೌದು. ಏಕೆಂದರೆ ಈ ಮೊದಲೇ ಹೇಳಿದಂತೆ ಈ ದೇಶದ ಆಡಳಿತ ನಿರ್ವಹಣೆಯ ಹೊಣೆಗಾರಿಕೆ ಹೊತ್ತಿರುವ ಜನಪ್ರತಿನಿಧಿಗಳು ಒಬ್ಬ ಸಮರ್ಥ, ದಕ್ಷ, ಪ್ರಾಮಾಣಿಕ ನಾಯಕನನ್ನು ಆಯ್ಕೆ ಮಾಡಬೇಕಾದ್ದು ಅನಿವಾರ್ಯ. ಆದರೆ ಸರ್ಕಾರದ ದಕ್ಷತೆ, ಪ್ರಾಮಾಣಿಕತೆ ಕೇವಲ ನಾಯಕತ್ವವನ್ನೇ ಅವಲಂಬಿಸಿರುವುದಿಲ್ಲ. ಒಬ್ಬ ಪ್ರಾಮಾಣಿಕ ನಾಯಕನ ಆಳ್ವಿಕೆಯಲ್ಲಿ ದೇಶ ಅತ್ಯಂತ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿರುವುದನ್ನು ವಾಜಪೇಯಿ, ವಿ.ಪಿ. ಸಿಂಗ್, ಮನಮೋಹನ್ ಸಿಂಗ್ ಸರ್ಕಾರಗಳಲ್ಲಿ ಕಂಡಿದ್ದೇವೆ.  ದೇಶದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಾಗಿರುವುದು ಆಡಳಿತಾರೂಢ ಪಕ್ಷದ ಸಂವಿಧಾನ ಬದ್ಧತೆ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆ. ಸಾರ್ವಜನಿಕ ಚರ್ಚೆಯಾಗಿರಬೇಕಿರುವುದು ಈ ವಿಷಯಗಳ ಸುತ್ತ.ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಮಹತ್ವ ಪಡೆಯುತ್ತದೆ. ವಿಪರ್ಯಾಸವೆಂದರೆ 2014ರ ಚುನಾವಣೆಗಳ ಸಂದರ್ಭದಲ್ಲಿ ಮಾಧ್ಯಮಗಳು ತಮ್ಮ ಈ ಹೊಣೆಗಾರಿಕೆಯನ್ನು ಮರೆತಂತಿದೆ. ಭಾರತೀಯ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು ಸಾರ್ವಜನಿಕ ಚರ್ಚೆಗಳಲ್ಲಿ ಬಿಂಬಿತವಾಗುತ್ತಿಲ್ಲ. ಬದಲಾಗಿ ವ್ಯಕ್ತಿ ವೈಭವೀಕರಣದ ಮೂಲಕ ಸಿದ್ಧ ಸೂತ್ರಗಳನ್ನು ಅರಸಲಾಗುತ್ತಿದೆ. ರಾಹುಲ್ ಗಾಂಧಿ, ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್ ಅಥವಾ ಜಯಲಲಿತಾ ತಮ್ಮ ಚರಿಸ್ಮಾದಿಂದಲೇ ದೇಶದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ ಮುನ್ನಡೆಸಬಲ್ಲರು ಎಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ.

ತತ್ವ, ಸಿದ್ಧಾಂತ ಮತ್ತು ಮೌಲ್ಯಗಳಿಗೆ ಎಂದೋ ತಿಲಾಂಜಲಿ ನೀಡಿರುವ ಭಾರತದ ರಾಜಕೀಯ ಪಕ್ಷಗಳಿಂದ ಈ ಅಮೂಲ್ಯ ಚಿಂತನೆಗಳನ್ನು ಅಪೇಕ್ಷಿಸಲಾಗುವುದಿಲ್ಲ. ಆದರೆ ಭಾರತದ ವಿವಿಧ ಜನಸಮುದಾಯಗಳು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮುದಾಯಿಕ ನೆಲೆಯಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಯಾವ ಪಕ್ಷ ಸಮರ್ಥವಾಗಿ ಪರಿಹರಿಸಬಹುದು ಎಂಬುದರ ಬಗ್ಗೆ ಚರ್ಚೆ ಉದ್ಭವಿಸಿಲ್ಲ. ಇದು ಸ್ವಾಭಾವಿಕವೂ ಹೌದು. ಸಿನಿಕತನ ಆವರಿಸಿರುವ ಭಾರತೀಯ ಸಮಾಜದಲ್ಲಿ ರಾಜಕೀಯ ಪಕ್ಷಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದಕ್ಕೆ ಇದು ಸಾಕ್ಷಿ. ಭಾರತೀಯ ಜನತೆಯ ಮುಂದಿರುವ ಗಂಭೀರ ಸಮಸ್ಯೆಗಳಾದ ಮತೀಯವಾದ, ಕೋಮುವಾದ, ಜಾತಿವಾದ, ಜಾತಿ ರಾಜಕಾರಣ, ಅಸ್ಪೃಶ್ಯತೆ, ನವ ಉದಾರವಾದ, ಕಾರ್ಪೊರೇಟ್ ನಿಯಂತ್ರಿತ ಆರ್ಥಿಕತೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆ, ಜನಾಂಗೀಯ ಸಮಸ್ಯೆ, ಪ್ರತ್ಯೇಕತಾವಾದ, ಭ್ರಷ್ಟಾಚಾರ, ಆಡಳಿತ ವ್ಯವಸ್ಥೆಯೊಳಗಿನ ಸ್ವಜನ ಪಕ್ಷಪಾತ ಇವೆಲ್ಲವನ್ನೂ ಸಾರ್ವಜನಿಕ ಚರ್ಚೆಗೆ ಒಳಪಡಿಸುವ ಮೂಲಕ ಮಾಧ್ಯಮಗಳು ಜನಸಾಮಾನ್ಯರಲ್ಲಿ ರಾಜಕೀಯ ಜಾಗೃತಿ ಮೂಡಿಸಬೇಕಾದ್ದು ಇಂದಿನ ಆದ್ಯತೆಯಾಗಿರಬೇಕು. ನಮ್ಮ ದೇಶದ ಪ್ರಭುತ್ವದ ಲಕ್ಷಣಗಳು ಹೇಗಿರಬೇಕು ಎಂದು ಪ್ರಜೆಗಳೇ ನಿರ್ಧರಿಸಬೇಕಾದರೆ ಇದು ಅತ್ಯಗತ್ಯ. ಇದನ್ನೇ ನೈಜ ಪ್ರಜಾತಂತ್ರವೆಂದು ಕರೆಯಲಾಗುತ್ತದೆ.

ದುರಂತ ಎಂದರೆ ಈ ನಿಟ್ಟಿನಲ್ಲಿ ಚರ್ಚೆಯೇ ನಡೆಯುತ್ತಿಲ್ಲ. ಪ್ರಸ್ತುತ ವ್ಯವಸ್ಥೆಯನ್ನು ಯಥಾವತ್ತಾಗಿ ಮುನ್ನಡೆಸುವ, ಪ್ರಸ್ತುತ ಪ್ರಭುತ್ವದೊಳಗಿನ ಲೋಪಗಳ ಕಡೆಗೆ ಕಣ್ಣೆತ್ತಿಯೂ ನೋಡದೆ ಸರ್ವವೇದ್ಯವೆಂದು ಪರಿಗಣಿಸುವ ಪಕ್ಷಗಳನ್ನು, ನಾಯಕರನ್ನು ದಕ್ಷತೆಯ ಚೌಕಟ್ಟಿನಲ್ಲಿ, ಪ್ರಾಮಾಣಿಕತೆಯ ಪ್ರಭಾವಳಿಯಲ್ಲಿ, ಅಧಿಕಾರದ ಗುಂಗಿನಲ್ಲಿ ಪರಿಭಾವಿಸಲಾಗುತ್ತಿದೆ.ಈ ಆಯ್ಕೆಗಳು ಪ್ರಭುತ್ವವನ್ನು ರಕ್ಷಿಸುವಂತೆಯೇ ವ್ಯವಸ್ಥೆಯನ್ನೂ ಸಂರಕ್ಷಿಸುತ್ತವೆ. ಪ್ರಧಾನಿಯ ಹುದ್ದೆಗೆ ಯಾರು ಅರ್ಹರು ಎಂಬ ಪ್ರಶ್ನೆಗಿಂತಲೂ ಪ್ರಭುತ್ವದೊಳಗಿನ ಲೋಪಗಳನ್ನು ತಿದ್ದಿ ಸಾರ್ವಭೌಮ ಪ್ರಜೆಗಳ ಹಿತಾಸಕ್ತಿಗಳನ್ನು ಸಂರಕ್ಷಿಸಲು ಯಾರು ಅರ್ಹರು ಎಂಬ ಪ್ರಶ್ನೆ ಎದುರಾದಾಗ ಶೂನ್ಯ ಆವರಿಸುತ್ತದೆ. ಇದು ಆರೋಗ್ಯಕರ ಲಕ್ಷಣವಲ್ಲ.

‍ಲೇಖಕರು avadhi

10 April, 2014

6 Comments

  1. Radhika

    True . . .

  2. Kiran

    Irrespective of right or wrong, voting for a person has been the unwritten policy. The system has collapsed when the leader was elected in the last minute or post-polls. There was no choice as long as Nehru’s blood was in the field for congress – and this continues. Janata party got decimated for the greed of PM post in 1977-1979. So much so, that people brought Indira Gandhi back despite the memories of Emergency still being raw. History got repeated in 1989. Vajpeyee was uncontested for the post irrespective of prior announcement or not. Nehru family was the surrogate PM with a puppet called MMS in the last 10 years. A country which sells its votes for liquor, which votes its caste rather than casting its vote is very immature for democracy. In such a scenario, voting for leader is the de-facto option. Whatever the so called intellectuals within their ivory house may deem it. No prejudices against author. Just expressing the reality from the perspective of a common man.

    • Anonymous

      What you say is true. For common man this perception is absolutely true. But the bane of indian society is not acting positively for a revolutionary change in the system or governance or the character of the state. in the present scenario as you say it may be inevitable to opt a person to rule the nation but this is not good for a matured democracy. Revolutionary change will detest reality and move ahead, castigating cynicism that is pervading the indian psyche.

  3. M.A.Sriranga

    ಈ ಲೇಖನದ ಪ್ರಕಾರ ಯೋಚಿಸಿಸಿದರೆ ಭಾರತಕ್ಕೆ ಒಂದು ಅವಧಿಗೆ ಒಬ್ಬರು ಪ್ರಧಾನಿ ಸಾಕಾಗುವುದಿಲ್ಲ. ಎಷ್ಟೇ ಕಮ್ಮಿ ಎಂದರೂ ಹತ್ತು ಜನ ಪ್ರಧಾನಿಗಳು ಬೇಕಾದೀತು!! ಏಕೆಂದರೆ ಪ್ರಧಾನಿಯೂ ಒಬ್ಬ ಮನುಷ್ಯ. ಎಲ್ಲರನ್ನೂ ಮೆಚ್ಚಿಸಲು ಹೇಗೆ ಸಾಧ್ಯ? ಇನ್ನು ಪಕ್ಷಾಧಾರಿತ ಪ್ರಜಾಪ್ರಭುತ್ವದಲ್ಲಿ ಕೆಲವೊಂದು ಅನಿವಾರ್ಯ ಹೊಂದಾಣಿಕೆಗಳು ಇರುತ್ತವೆ. ಅದನ್ನು ನಿರಾಕರಿಸಲು ಮತ್ತು ನಿವಾರಿಸಲು ಸಾಧ್ಯವಿಲ್ಲ . ಏಕ ವ್ಯಕ್ತಿಯ ಸರ್ವಾಧಿಕಾರಕ್ಕಿಂತ ,ಕೆಲವು ಕುಂದು ಕೊರತೆಗಳಿದ್ದರೂ ಪ್ರಜಾಪ್ರಭುತ್ವವೇ ಮೇಲು –ಎಂ ಎ ಶ್ರೀರಂಗ ಬೆಂಗಳೂರು

    • na divakar

      ಈ ಲೇಖನದ ಆಶಯ ಸರಳ. ದೇಶದಲ್ಲಿ ಆಡಳಿತ ನಡೆಸುವುದು ಸರ್ಕಾರವಲ್ಲ. ಪ್ರಭುತ್ವ. ಆಡಳಿತಾರೂಢ ಸರ್ಕಾರಕ್ಕೂ ಪ್ರಭುತ್ವಕ್ಕೂ ಇರುವ ವ್ಯತ್ಯಾಸವನ್ನು ಗ್ರಹಿಸುವುದು ಅಗತ್ಯ. Government and the state are two different establishments.ನಾವು ಚುನಾವಣೆಗಳ ಮೂಲಕ ಸರ್ಕಾರವನ್ನು ಆಯ್ಕೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಬಲಿಯಾಗಿ ಒಬ್ಬ ವ್ಯಕ್ತಿಯನ್ನೇ ಪ್ರವಾದಿಯಂತೆ ಪರಿಗಣಿಸಿ ಆಯ್ಕೆ ಮಾಡುತ್ತೇವೆ. ಆದರೆ ದೇಶದ ಸಂವಿಧಾನ ಮತ್ತು ಸಾಮಾಜಿಕ ಚೌಕಟ್ಟನ್ನು ನಿರ್ವಹಿಸುವುದು ಪ್ರಭುತ್ವವೇ ಹೊರತು ಸರ್ಕಾರವಲ್ಲ. ಹಾಗಾಗಿ ಜನರ ಆಯ್ಕೆ ಪ್ರಭುತ್ವವೋ, ಪ್ರಧಾನಿಯೋ ಎಂಬ ಪ್ರಶ್ನೆ.

      • M.A.Sriranga

        ದಿವಾಕರ್ ಅವರಿಗೆ– ಪ್ರಭುತ್ವ ಮತ್ತು ಸರ್ಕಾರಕ್ಕೆ ಅವುಗಳಿಗೆ ಇರುವ ಅರ್ಥದಲ್ಲಿ ಇರಬಹುದಾದ ವ್ಯತ್ಯಾಸ ಬಿಟ್ಟರೆ ಅಷ್ಟೇನೂ ವ್ಯತ್ಯಾಸವಿಲ್ಲ ಮತ್ತು ಅಂತರವೂ ಇಲ್ಲ. ಅವೆರೆಡೂ ಒಂದೇ ನಾಣ್ಯದ ಎರಡು ಮುಖಗಳು ಅಷ್ಟೇ. ತಾವು ಇತ್ತೀಚಿಗೆ ರಾಜಕೀಯ ಪಕ್ಷವೊಂದರ ಜಾಹೀರಾತು ನೋಡಿ ಪ್ರಭುತ್ವ ಮತ್ತು ಸರ್ಕಾರಗಳಲ್ಲಿ ಅಂತರವಿದೆ ಎಂಬ ತೀರ್ಮಾನಕ್ಕೆ ಬಂದಿರಬಹುದು. ನಮಗೆ ಸ್ವಾತಂತ್ರ್ಯ ಬಂದು ಅರವತ್ತೇಳು ವರ್ಷಗಳಾದ ನಂತರವೂ ಸಹ ಪ್ರಧಾನಿ ಅಭ್ಯರ್ಥಿಯನ್ನು ಚುನಾವಣೆಗೆ ಮುಂಚೆ ಘೋಷಿಸಿರಲಿ ಅಥವಾ ಆಮೇಲೆ ಆರಿಸಲಿ ಸುಮಾರು ಆರು ದಶಕಗಳ ಕಾಲ ನಡೆದಿರುವುದು ಯಾವ ರೀತಿಯ ಪ್ರಭುತ್ವ/ಸರ್ಕಾರ ಎಂಬುದು ತಮಗೆ ತಿಳಿದಿದೆ. ಅದನ್ನು ವಿವರಿಸುವ ಅಗತ್ಯವಿಲ್ಲ. –ಎಂ ಎ ಶ್ರೀರಂಗ ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading