ತಮ್ಮ ಕವನಗಳ ಮೂಲಕ ‘ಅವಧಿ’ಯ ಓದುಗರಿಗೆ ಪರಿಚಿತರಾಗಿರುವ ವಿ ಚಲಪತಿ ಈಗ ತಮ್ಮ ಚೊಚ್ಚಲ ಸಂಕಲನ ಹೊರತರುತ್ತಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಸಹಾ ಪಡೆದಿರುವ ಈ ‘ಕಣ್ಣೀರು’ ಕೃತಿಗೆ ಬೇಲೂರು ರಘುನಂದನ್ ಬರೆದಿರುವ ಮುನ್ನುಡಿ ಇಲ್ಲಿದೆ –
ಬೇಲೂರು ರಘುನಂದನ್
‘ಪ್ಯೂಪದಿಂದ ಹೊರ ಇಣುಕಿ ಸಾಗುವ ಪತಂಗದ ಅನ್ವೇಷಣೆ ಬದುಕಿನ ಅನ್ವೇಷಣೆಯೂ ಹೌದು’ ಎನ್ನುವ ಆಶಯ ಕಾವ್ಯ ಜಗತ್ತನ್ನ ಒಳಗೊಳ್ಳುವ ರೀತಿಯೇ ಕವಿ ಚಲಪತಿಯವರದ್ದು ಕೂಡ.
‘ಕಣ್ಣೀರು’ ಕವಿತಾ ಸಂಕಲನ ಸಾಕ್ಷಿಯಾಗುವುದು ಅಭದ್ರತೆಗಳ ದಾರಿಯಲ್ಲಿ ದಕ್ಕುವ ವಿಶ್ವಾಸ ಮತ್ತು ಭರವಸೆಗಳ ಜೊತೆಗೆ. ಕಾದಷ್ಟೂ ಕಾಯುವ, ನೆಂದಷ್ಟೂ ಮೊಳೆಯುವ ಗುಣ ಇಲ್ಲಿನ ಕವಿತೆಗಳಲ್ಲೂ ಕಾಣಬಹುದು.

ಬದುಕಿನ ಹಲವು ಸಂಘರ್ಷಗಳ ಮತ್ತು ಸಂಕಟಗಳನ್ನು ಮಾತನಾಡಿಸುವ ಮಹತ್ ಶಕ್ತಿ ಕಾವ್ಯಕ್ಕಿದೆ. ಕಾವ್ಯದ ಒಟ್ಟು ಧಾರಣಾ ಶಕ್ತಿಯೇ ನುಂಗಿಕೊಂಡ ನೋವು ನಾದವಾಗಿ ಅಭಿವ್ಯಕ್ತಿಯಾಗುವುದು. ವಿಚಾರ, ವಾಸ್ತವ ಮತ್ತು ಕಲ್ಪನೆ ಇವುಗಳ ಜೊತೆ ಹೆಜ್ಜೆ ಹಾಕುತ್ತಾ ಕವಿ ತಾನು ಬಯಸಿದ ಲೋಕದ ಸತ್ಯವನ್ನು ಕವಿತೆಗಳ ಮೂಲಕ ಹುಡುಕುತ್ತಾ ಸಾಗುತ್ತಾನೆ. ಕವಿ ಚಲಪತಿ ಅವರ ದಾರಿ ಕೂಡ ಇದಕ್ಕಿಂತ ಭಿನ್ನವಾಗಿ ಏನಿಲ್ಲ.
‘ಕಣ್ಣೀರು’ ಕವನ ಸಂಕಲನದ ಧಾತು ನೋವು ಸಂಕಟಗಳ ಒಳಗೆ ರೂಪುಗೊಂಡ ಸಂವೇದನೆಯೇ ಆಗಿದೆ. ಅಭಿವ್ಯಕ್ತಿ, ರಾಜಕಾರಣದ ಎದುರು ತಲೆಬಾಗಿ, ನಡೆದು ಬಂದ ಹಾದಿಯನ್ನು ಮಾತನಾಡಿಸುವುದು ಬಿಟ್ಟು ಎಲ್ಲವನ್ನು ಒಪ್ಪಿ ಮೌನಕ್ಕೆ ಶರಣಾಗುವ ದುರಿತ ಕಾಲದಲ್ಲಿ ಬದುಕು ಲೀನವಾಗಿದೆ.

ಹೀಗಿರುವಾಗ ಹೊಸ ತಲೆಮಾರು ಆನ್ಲೈನ್ ಜಗತ್ತಿನಲ್ಲಿ ಕಳೆದು ಹೋಗದೆ ಬದುಕಿನ ಆಫ್ಲೈನ್ ನಲ್ಲಿರುವ ನೋವಿಗೆ ಮಾತು ಕೊಟ್ಟು ಬರೆಯ್ತುತಾರೆ. ಒದ್ದರು, ಬಯ್ದರು ಎಂದು ಕಣ್ಣೀರು ಹಾಕದೆ ಮೂಲೆಗೆ ಕೂರಿಸಿಬಿಡುತ್ತಾರೆ ಎಂಬ ಭಯದಿಂದ ಕಣ್ಣೀರು ಹಾಕುತ್ತಲೇ ಅದನ್ನು ದಾಟಿಕೊಳ್ಳಲು ಬೇಕಾದ ಸಾಧ್ಯತೆಗಳನ್ನು ಕೂಡ ಹುಡುಕಿಕೊಳ್ಳುವುದು ಈ ಕವಿತೆಗಳ ಶಕ್ತಿಯಾಗಿದೆ.
ಕಾವ್ಯ ಎಂದರೆ ಹೀಗಿರಬೇಕು, ಹಾಗಿರಬೇಕು ಎನ್ನುವ ಮಾತುಗಳ ಮೌಲ್ಯಮಾಪನ ಹೊಸ ಕವಿಯ ಕವಿತೆಗಳ ಆಶಯ ಮುಖ್ಯವಾಗಿದ್ದಾಗ ಅಗತ್ಯವಿಲ್ಲ. ನೋವಿಗೆ ಮಾತು ಕೊಡುವ ಅಭಿವ್ಯಕ್ತಿಗೆ ಎಲ್ಲ ಕಾಲದಲ್ಲೂ ಚಲನೆ ಇದ್ದೇ ಇರುತ್ತದೆ ಎಂಬ ನಂಬುಗೆಯಿದ್ದರೆ ಚಲಪತಿ ಎನ್ನುವ ಕವಿ ಕೂಡ ತನ್ನ ಮತ್ತು ಲೋಕದ ಸಂಕಟಕ್ಕೆ ಮಿಡಿಯುತ್ತಲೇ ಕವಿತೆಗಳ ಜೊತೆಗೆ ಯಾನ ಮಾಡುತ್ತಾರೆ.





0 Comments