ಪ್ಯೂನ್ ಕೆಲಸಕ್ಕೆ ಹೋಗಬೇಡ..

ನೆನಪು 21

“ರೋಹಿದಾಸ ಹೇಳಿದ ಎಂದರೆ ಅದಕ್ಕೊಂದು ಅರ್ಥ ಇರುತ್ತದೆ.”

ನಾಲ್ಕಾರು ತಿಂಗಳ ಹಿಂದೆ ಊರಿಗೆ ಹೋಗಿದ್ದೆ. ಅಲ್ಲಿ ಅತ್ತೆ ಮನೆ ಭಾವ ಸಿಕ್ಕಿದ್ದ. ನಿಜಕ್ಕೂ ಆತ ಸಂಬಂಧದಲ್ಲಿ ಮಾವ ಆಗಬೇಕು. ಅಣ್ಣನ ತಂಗಿಯ ಗಂಡ ಆತ. ಯಾಕೋ ಮಾವ ಅನ್ನುವ ಬದಲು ಮೊದಲಿಂದ ನಾವು ಭಾವ ಅನ್ನುವುದೇ ರೂಢಿ. ಹೇಗೆ ಕರೆದರೆ ಏನು? ಮುಖ್ಯವಾಗಿರಬೇಕಾದದ್ದು ಭಾವವೇ ಅಲ್ಲವೆ?

ಅಣ್ಣ ಅವನಿಗೆ ನಾರಾಯಣ ಅನ್ನುತ್ತಿದ್ದ. ಅಣ್ಣನಿಗೆ ಆತ ರೋಹಿದಾಸ ಎನ್ನುತ್ತಿದ್ದ. ತಂಗಿಯನ್ನು ಅವನಿಗೆ ಕೊಡುವುದಕ್ಕಿಂತ ಮೊದಲೇ ಅವರಿಬ್ಬರು ಏಕವಚನದ ಗೆಳೆಯರು. ನಿನ್ನ ಅಣ್ಣನ ಬಗ್ಗೆ ನಂಗೊಂದಿಷ್ಟು ಹೇಳು ಎಂದು ಅತ್ತೆಯನ್ನು ಕೇಳುತ್ತಿದ್ದಾಗ ಆತನೂ ಮಧ್ಯೆ ಮಧ್ಯೆ ತನ್ನ ಅನುಭವ ಹೇಳಿಕೊಳ್ಳುತ್ತಿದ್ದ.

ನಮಗೆಲ್ಲಾ ಬೆರಗು ಹುಟ್ಟಿಸುವಷ್ಟು ಈ ಭಾವನಲ್ಲಿ ಸಾಹಿತ್ಯದ ವಾಸನೆ ಇತ್ತು. ಮಾತಿಗೊಂದೊಂದು ಸರ್ವಜ್ಞನ ತ್ರಿಪದಿ, ವಚನ, ಮಂಕುತಿಮ್ಮನ ಕಗ್ಗವನ್ನು ಉದಾಹರಿಸಿಯೇ ಮಾತನಾಡುತ್ತಿದ್ದ. ಕೆಲವು ಸಂದರ್ಭದಲ್ಲಿ ತನಗೆ ಬೇಕಾದಂತೆ ಅಥವಾ ಸಂದರ್ಭಕ್ಕೆ ಅನುಗುಣವಾಗಿ ತಿದ್ದಿಕೊಂಡು ಹೇಳುತ್ತಿದ್ದ. ಕೆಲವು ಬಾರಿ ‘ಸರ್ವಜ್ಞ’ ‘ಕೂಡಲಸಂಗಮ ದೇವ’ ‘ಹರಹರ ಶ್ರೀಚೆನ್ನ ಸೋಮೇಶ್ವರ’ ಎನ್ನುವ ಅಂಕಿತವೊಂದನ್ನು ಬಿಟ್ಟು ಉಳಿದವೆಲ್ಲಾ ಈತನದೇ ಆಗಿರುತ್ತಿತ್ತು.

ಶಾಲೆಗೆ ಹೋಗುವ ಮಕ್ಕಳು ಎದುರಾದರೆ ಆತ ಇಂಗ್ಲೀಷ್‍ನಲ್ಲಿಯೇ ಪ್ರಶ್ನೆ ಕೇಳುತ್ತಿದ್ದ. ಹಾಗಾಗಿ ಕೆಲವು ಮಕ್ಕಳು ಅವನೆದುರು ನಿಲ್ಲುತ್ತಲೇ ಇರಲಿಲ್ಲ. ನಮ್ಮನ್ನೂ ಹಲವು ಬಾರಿ ಹಿಂದೆ ಮುಂದೆ ಮಾಡುತ್ತಿದ್ದ. ಆತನ ಜ್ಞಾನ ಬಹುಶಃ ಈಗಿನ ಬಿ.ಎ ಓದಿದವರನ್ನೂ ಹಿಂದಿಕ್ಕುವಂತಹುದು. ‘ಭಾವ, ನೀನು ಓದಿದ್ದೆಷ್ಟು?’ ಅಂದರೆ ‘ಓದಿದ್ದು ಒಕ್ಕಾಲು ಬುದ್ಧಿ ಮುಕ್ಕಾಲು’ ನಮ್ಮದೆಲ್ಲ ಹೀಗೆ ಆಗಿದೆ ಅನ್ನೋನು….

‘ಮತ್ತೆ ಇಷ್ಟೆಲ್ಲಾ ಬುದ್ಧಿ ಅನುಭವ ಎಲ್ಲಿಂದ ಬಂತು?’ ಅಂದ್ರೆ, ‘ಸರ್ವರಲಿ ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ’ ಎಂದು ಒಂದು ತ್ರಿಪದಿಯನ್ನು ಉದ್ಧರಿಸಿ “ಆದ್ರೆ ನಾನು ಹಾಂಗೆ ಆಗ್ಲಿಲ್ವೊ” ಅಂತಿದ್ದ. ಕೀಟ್ಸ್, ಶೆಲ್ಲಿಯ ಕವಿತೆಯ ಕೆಲವು ಸಾಲುಗಳನ್ನು ಲೀಲಾಜಾಲವಾಗಿ ಹೇಳ್ತಿದ್ದ. ಹಾಗಾಗಿ ನಮ್ಮ ಬಾಲ್ಯದ ವಿಸ್ಮಯವಾಗಿದ್ದ ಈತ ಕಲಿತದ್ದೆಷ್ಟು ಎನ್ನುವುದು ನಮ್ಮ ನಡುವಿನ ಮುಖ್ಯ ಚರ್ಚೆಯೇ ಆಗಿತ್ತು. ನಮ್ಮ ಮಾಸ್ತರರಿಗಿಂತ ಹೆಚ್ಚು ಬುದ್ಧಿವಂತನಂತೆ ಕಾಣುವ ಈತ ಓದಿದ್ದು ಕೇವಲ 4ನೇ ಇಯತ್ತೆ ಎನ್ನುವ ವಾಸ್ತವವನ್ನು ಇನ್ನೂ ನಂಬಲು ಆಗುತ್ತಿಲ್ಲ.

 

ಅಣ್ಣನಿಗೆ ಬಾಲ್ಯದಲ್ಲಿ ಎಷ್ಟು ಬಡತನ ಇತ್ತೆಂದರೆ ರಾತ್ರಿ ಓದಲು ಚಿಮಣಿ ಬುರುಡೆಗೆ ಕೂಡ ಸೀಮೆಎಣ್ಣೆ ಇರುತ್ತಿರಲಿಲ್ಲ. ಹಾಗಾಗಿ ಆತ ರಾತ್ರಿ ಓದಲು ಬರುತ್ತಿರುವುದು ಬಾವನ ಮನೆಗೆ. ಅಣ್ಣ ದೊಡ್ಡದಾಗಿ ಓದುವುದು. ಬಾವನನ್ನೂ ಒಳಗೊಂಡಂತೆ ಇತರರು ಅದನ್ನು ಕೇಳುವುದು. ಹಾಗಂತ ಇವನೇನು ಶ್ರೀಮಂತನಾಗಿರಲಿಲ್ಲ. ಬಡತನದ ಕಾರಣದಿಂದ ಭಾವ 4ನೇ ಇಯತ್ತೆಗೆ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು. ಸಪ್ಪು ಸೌದೆ ತರಲು ಆತ ಹೋದಾಗ ಸ್ವಲ್ಪ ಬಿಡುವು ಮಾಡಿಕೊಂಡು ಶಾಲೆಯ ಹಿಂದೆ ಕುಳಿತು ಒಳಗೆ ನಡೆಯುವ ಪಾಠವನ್ನು ಕೇಳುತ್ತಿದ್ದನಂತೆ. ಒಳಗೆ ಶಿಕ್ಷಕರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರ ಹೇಳಲು ಒದ್ದಾಡುತ್ತಿದ್ದಾಗ ಉತ್ತರ ಗೊತ್ತಿದ್ದ ಈತನೂ ಹೇಳಲಾಗದೇ ಚಡಪಡಿಸುತ್ತಿದ್ದನಂತೆ.

ಆತ ಅನಕೃ ಬಗ್ಗೆ, ತರಾಸು ಬಗ್ಗೆ, ಬೀಚಿಯವರ ಬಗ್ಗೆ ಹೇಳುತ್ತಿದ್ದಾಗ ಆತನನ್ನು ಕೇಳಿದೆ: “ಇದೆಲ್ಲಾ ನಿನಗೆ ಹೇಗೆ ಗೊತ್ತು” “ಇದೆಲ್ಲಾ ಹೇಳಿಕೊಟ್ಟಿದ್ದು ರೋಹಿದಾಸ. ನಾವೆಲ್ಲಾ ಗುಂಪಾಗಿ ಓದುತ್ತಿದ್ದೆವು. ನಾವೆಲ್ಲಾ ಅಂದ್ರೆ ನಮ್ಮನೆ ಬಾಬು, ನಾಗತ್ತೆ ಮನೆ ಗೋಪಾಲ, ಸೀಗೇಹಳ್ಳಿ ಗಜಾನನ.. ಆದರೆ ರೋಹಿದಾಸ ಎಲ್ಲರಿಗೂ ಇಂಗ್ಲೀಷಿನಲ್ಲಿಯೇ ಮಾತನಾಡಲು ಆಗ್ರಹಿಸುತ್ತಿದ್ದ. ಒಂದು ವೇಳೆ ತಪ್ಪಿದರೂ ತೊಂದರೆ ಇಲ್ಲ. ಎಲ್ಲರೂ ಇಂಗ್ಲೀಷ್‍ನಲ್ಲಿಯೇ ಮಾತನಾಡಬೇಕೆಂದು ಅಪ್ಪಣೆ ಮಾಡುತ್ತಿದ್ದ.

ನನ್ನ ಆಯಿ ಹೊನ್ನಮ್ಮನಿಗೂ ರೋಹಿದಾಸ ಎಂದರೆ ತುಂಬಾ ಪ್ರೀತಿ. ಅವನಿಗೆ ಊಟ ಹಾಕಿ ನಮ್ಮನೆಯಲ್ಲಿಯೇ ಇಟ್ಟುಕೊಂಡಿದ್ದಳು.” “ಬರೇ ಓದಿನಲ್ಲಿ ಮಾತ್ರ ನೀವು ಒಟ್ಟಿಗೆ ಇದ್ದದ್ದಾ?”

“ಇಲ್ಲಪ್ಪ..ಕೆಲಸದಲ್ಲೂ ಒಟ್ಟಿಗೆ ಇರ್ತಿದ್ದ. ಅವನಿಗೆ ಕೆಲಸ ಸರಿ ಬರ್ತಿರ್ಲಿಲ್ಲ. ಮನಸ್ಸೂ ಇರಲಿಲ್ಲ. ನಾವಿಬ್ಬರೂ ಬೆಳೆಗ್ಗೆ ಎಲೆ (ವೀಳ್ಯದೆಲೆ) ಕೊಯ್ಯಲು ತೋಟಕ್ಕೆ ಹೋಗ್ತ್ತಿದ್ದೆವು. ನಾನು ಮರ ಹತ್ತಿ ಎಲೆ ಕೊಯ್ಯುವಾಗ ರೋಹಿದಾಸ ಕೆಳಗೆ ಕುಳಿತು ಕವಿತೆ, ಕತೆ, ಕಾದಂಬರಿಯನ್ನು ದೊಡ್ಡದಾಗಿ ಓದಿ ಹೇಳ್ತಿದ್ದ. ನಾನು ಮರದ ಮೇಲಿಂದಲೇ ಕೇಳಿಸಿಕೊಳ್ತಿದ್ದೆ. ಇಬ್ಬರೂ ಅದರ ಬಗ್ಗೆ ಚರ್ಚೆ ಮಾಡ್ತಿದ್ದೆವು. ಹಾಗಾಗಿ ನನಗೆ ಸಾಹಿತ್ಯದ ಕುರಿತು ಒಂದಿಷ್ಟು ಜ್ಞಾನ ಬಂದಿತು. ನಿನ್ನ ಅಣ್ಣ ಇಲ್ಲದಿದ್ದರೆ ನನಗೆ ಇವೆಲ್ಲಾ ತಿಳಿಯುತ್ತಿರಲಿಲ್ಲ.”

ಎಂದು ಹೇಳಿ ತನ್ನ ಜ್ಞಾನದ ಹಿಂದಿನ ಗುಟ್ಟನ್ನು ಹೇಳಿದ. “ಆಗ ನಮ್ಮಲ್ಲಿ ಜಾತಿಪದ್ಧತಿ ಜೋರು ಇತ್ತು. ನಮ್ಮನೆಲೂ ಕೆಳ ಜಾತಿಯವರನ್ನು ಒಳ್ಗೆ ತಕೋತಿರಲಿಲ್ಲ. ಇದು ಯಾಕೆ ತಪ್ಪು ಅನ್ನೋದ್ರ ಬಗ್ಗೆ ವಿವರಿಸುತ್ತಿದ್ದ. ಬೇರೆ ಮನೆಯಲ್ಲಿ ತಿಂಡಿ ತಿಂದ, ಚಾ ಕುಡಿದ ತಟ್ಟೆ, ಲೋಟ ತೊಳೆಯುವುದು ತಪ್ಪು ಎಂದು ಹೇಳುತ್ತಿದ್ದ. ನಮ್ಮ ಮನೆಯ ಬಡತನದಲ್ಲಿ ನಾವು ಬ್ರಾಹ್ಮಣರ ಮನೆಗೆ ಕೆಲಸಕ್ಕೆ ಹೋಗುವುದು, ಚಾ ಕುಡಿಯುವುದು ಅನಿವಾರ್ಯ ಆಗಿತ್ತು.” ಎಂದು ತನ್ನ ಆಳಲನ್ನು ತೋಡಿಕೊಂಡನು.

ಈ ಬಾವನಿಗೆ ಸಗಣಿ ಅಂದ್ರೆ ಆಗ್ತಿರಲಿಲ್ಲ. ಯಾವಾಗಲೂ ಆತ ಬ್ರಾಹ್ಮಣರ ಮನೆಗೆ ಕೆಲಸಕ್ಕೆ ಹೋದಾಗ ಹೊರಗೆ ಊಟ ಹಾಕುತ್ತಿದ್ದರಂತೆ. ಅದೂ ಸೆಗಣಿ ಇರುವ ಸ್ಥಳದಲ್ಲಿ, ಮೊದ್ಲೇ ಹೇಳಿದ್ನಲ್ಲ – ಆತನಿಗೆ ಸೆಗಣಿ ಎಂದರೆ ಆಗುತ್ತಿರಲಿಲ್ಲ. ಸಗಣಿಯ ಹಾಗೆ ಕಾಣುತ್ತದೆ ಎಂದು ಕೆಸುವಿನ ಕರಕಲಿಯನ್ನೂ ಆತ ತಿನ್ನುತ್ತಿರಲಿಲ್ಲ.

ಆದರೂ ಅನಿವಾರ್ಯ. ಹೇಸುತ್ತಾ ಊಟ ಮಾಡುತ್ತಿದ್ದನಂತೆ. ಮನೆಯವರ ಊಟ ಆದ ಮೇಲೆ ಸಾರಿಗೆ ನೀರು ಬೆರಸಿ ಇವನಿಗೆ ಹಾಕುವುದು ರೂಢಿ. ಪ್ರತಿದಿನ ಊಟ ಬಡಿಸುವಾಕೆ “ನಾರಾಯಣ ಊಟ ಹೇಗಿದೆ?” ಎಂದು ಕೇಳುತ್ತಿದ್ದಳಂತೆ. “ಚೆನ್ನಾಗಿದೆ” ಎನ್ನುತ್ತಿದ್ದ ಈತ ಭಿಡೆಯಿಂದ. ಹೀಗೆ ಹಲವು ದಿನ ಕೇಳಿದಾಗ ಅವನಿಗೆ ಸಹಿಸುವುದು ಸಾಧ್ಯ ಆಗದೆ ಇನ್ನೊಂದು ದಿನ “ಭಂಡಾರಿ ಊಟ ಹೇಗೇದೆ?” ಎಂದು ಕೇಳಿದಾಗ “ಸಾರಿಗೆ ಉಪ್ಪು, ಹುಳಿ, ಕಾರವನ್ನು ಹಾಕಿಕೊಂಡರೆ ಚನ್ನಾಗಿದೆ” ಎಂದನಂತೆ.

ಅಲ್ಲಿಂದ ಮುಂದೆ ಮನೆಯೊಡತಿ ಊಟ ಹೇಗಿದೆ ಎಂದು ಕೇಳಲೇ ಇಲ್ಲ ಎಂದು ಹೇಳುತ್ತಿದ್ದ. ಈ ಮಾತನ್ನು ಕೇಳಿದಾಗ ಮೊದಲೆಲ್ಲಾ ನಾವು ನಕ್ಕಿದ್ದೆವು. ಆ ನಂತರ ಗೊತ್ತಾಗಿದ್ದು ವ್ಯಂಗ್ಯದ ಒಳಗೆ ಎಂಥಾ ನೋವಿದೆ ಎನ್ನುವುದು. ಈತನಿಗೆ ಅರೆ ಅಂಗಡಿ ಎಸ್.ಕೆ.ಪಿ ಹೈಸ್ಕೂಲಿನಲ್ಲಿ ಪರಿಚಾರಕ (ಫ್ಯೂನ್) ಹುದ್ದೆಗೆ ಬರಲು ಕೇಳಿದ್ದರಂತೆ.

ಆಗೆಲ್ಲಾ ಇಂಟ್ರವ್ಯೂ ಎಲ್ಲಾ ಇರ್ತಿರಲಿಲ್ಲ. ಆತ ನೇರವಾಗಿ ಬಂದು ಅಣ್ಣನಲ್ಲಿ “ರೋಹಿದಾಸ, ನನಗೆ ಅರೇಅಂಗಡಿ ಶಾಲೆಯಲ್ಲಿ ಫ್ಯೂನ್ ಕೆಲಸಕ್ಕೆ ಬರಲು ಹೇಳಿದ್ದಾರೆ. ಏನು ಮಾಡಲಿ” ಎಂದು ಕೇಳಿದನಂತೆ. ಅಣ್ಣ ಅದಕ್ಕೆ “ನೀನು ಫ್ಯೂನ್ ಹುದ್ದೆಗೆ ಹೋಗುವುದು ಬೇಡ. ಇನ್ನೊಬ್ಬರ ಚಾಕರಿ ಮಾಡಬೇಕಾಗುತ್ತದೆ. ಅದು ನಿನ್ನ ಜ್ಞಾನಕ್ಕೆ ಸರಿ ಹೊಂದುವುದಿಲ್ಲ. ಮೇಲಾಗಿ ನಾವು ಬ್ರಾಹ್ಮಣರ ಚಾಕರಿ ಮಾಡಿದ್ದು ಸಾಕು. ಸ್ವತಂತ್ರವಾಗಿ ಬದುಕಬೇಕು” ಎಂದಿದ್ದನಂತೆ.

ಹಾಗಾಗಿ ಭಾವ ಈ ನೌಕರಿಯನ್ನೇ ತಿರಸ್ಕರಿಸಿದ. “ಈ ಬಗ್ಗೆ ನಿನಗೆ ಅಣ್ಣನ ಮೇಲೆ ಬೇಸರ ಇಲ್ಲವೇ?” ಎಂದೆ. “ಖಂಡಿತಾ ಇಲ್ಲ. ರೋಹಿದಾಸ ಹೇಳಿದ ಎಂದರೆ ಅದಕ್ಕೊಂದು ಅರ್ಥ ಇರುತ್ತದೆ. ಹಾಗಾಗಿ ನಾನು ಅಲ್ಲಿ ಹೋಗಲಿಲ್ಲ. ನನಗೆ ಈ ಬಗ್ಗೆ ಏನೂ ನೋವಿಲ್ಲ. ಅಲ್ಲಿ ಹೋಗಿದ್ದರೆ ಸ್ವಲ್ಪ ಬಡತನ ಕಡಿಮೆ ಆಗ್ತಿತ್ತು.

 

ಆದರೆ ಅನಂತರ ತೋಟ, ಪಂಚವಾದ್ಯ ಮಾಡಲು ತೊಡಗಿದೆ. ಅವನ ತಂಗಿಯನ್ನು ಮದುವೆಯಾದೆ. ನನಗೆ ಅವನು ನೂರಾರು ಕಾದಂಬರಿ ಓದಿಸಿದ್ದಾನೆ. ಕತೆ ಓದಿಸಿದ್ದಾನೆ. ನಾಲ್ಕು ವಾಕ್ಯ ಇಂಗ್ಲೀಷ್ ಕಲಿಸಿದ್ದಾನೆ. ಇಷ್ಟಾದರೂ ನಾನು ಓದಿದ್ದರೆ ಅದಕ್ಕೆ ರೋಹಿದಾಸನೇ ಕಾರಣ ಎಂದು ಒಂದು ರೀತಿಯ ನಮ್ರತೆಯನ್ನು ವ್ಯಕ್ತಪಡಿಸಿದ.

ಅಣ್ಣ ಯಾವಾಗಲೂ ಹಾಗೆ, ಯಾರೊಬ್ಬರ ಚಾಕರಿಯನ್ನು ಮಾಡಲು ಒಪ್ಪುತ್ತಿರಲಿಲ್ಲ. ಮಾತ್ರವಲ್ಲ ತನ್ನ ಸಂಪರ್ಕದಲ್ಲಿದ್ದವರನ್ನೂ ಅಂತಹ ಕೆಲಸದಿಂದ ದೂರವಿರುವಂತೆ ಪ್ರೇರೇಪಿಸುತ್ತಿದ್ದ. ಅಂತಹ ಸ್ವಾಭಿಮಾನಿ ಆತ.

‍ಲೇಖಕರು avadhi

August 11, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಶ್ರೀರಂಗ ಯಲಹಂಕ

    ಯಾವ ಕೆಲಸವೂ ಮೇಲೂ ಅಲ್ಲ; ಕೀಳೂ ಅಲ್ಲ. ಕಾಯಕವೇ ಕೈಲಾಸ ಎನ್ನುವುದು ಬರೀ ಮಾತಿನಲ್ಲೇ ಉಳಿದರೆ ಅದು ಬೂಟಾಟಿಕೆಯ ವಿಷಯವಾಗುತ್ತದೆ. ಹಾಗೇ ನೋಡಿದರೆ ಎಷ್ಟೇ ದೊಡ್ಡ ನೌಕರಿಯಾಗಲಿ ಅದು ಇನ್ನೊಬ್ಬರ ಚಾಕರಿಯೇ ಅಲ್ಲವೆ? ಜತೆಗೆ ಈ ಲೇಖನದಲ್ಲಿ ‘ನಾವು ಬ್ರಾಹ್ಮಣರ ಚಾಕರಿ ಮಾಡಿದ್ದು ಸಾಕು’ ಎಂಬ ಇನ್ನೊಂದು ಜಾತಿಯನ್ನು ಹೀಯಾಳಿಸುವ ವಾಕ್ಯವಿದೆ. ಇದು ವಾಸ್ತವದ ನಿರಾಕರಣೆ. ಬ್ರಾಹ್ಮಣರು ಇತರರನ್ನು ಬಲವಂತವಾಗಿ ಚಾಕರಿಗೆ ಬನ್ನಿ ಎಂದು ಕರೆಯುತ್ತಿದ್ದರು ಎಂಬ ಭಾವನೆಯನ್ನು ಮೂಡಿಸುತ್ತದೆ. ಇದು ಸರಿಯಲ್ಲ. ಜೀವನದ ಅನಿವಾರ್ಯತೆ ಅಷ್ಟೇ. ‌ಇಂದು ಬ್ರಾಹ್ಮಣರೇ ತಮ್ಮ ಹೊಟ್ಟೆಪಾಡಿಗಾಗಿ ಕಸಗುಡಿಸುವ ಕೆಲಸ ಸಿಕ್ಕರೂ ಸಾಕು ಎಂದು ಕಾಯುತ್ತಿಲ್ಲವೆ? ಅದರ ಬಗ್ಗೆ
    ಬ್ರಾಹ್ಮಣರಿಗೇನೂ ಬೇಸರವಿಲ್ಲ. ಜೀವನ ನಿರ್ವಹಣೆಯಾದರೆ ಸಾಕು ಎಂದು ಕಾಯುತ್ತಿದ್ದಾರೆ.

    ಪ್ರತಿಕ್ರಿಯೆ
  2. shivakumarkampli

    ಬದುಕು ದೊಡ್ಡದಲ್ಲ ಬೆಳಕು ನೀಡುವ ಬದುಕು ದೊಡ್ಡದು ಎಂಬ ಸತ್ಯ ಇಲ್ಲಿದೆ .ಹಣಕ್ಕೆ ಸಡ್ಡು ಹೊಡೆದು ಬೆಳಕು ಆರಿಸಿಕೊಳ್ಳುವ ಮಾವ ತನ್ನ ಬದುಕಿನ ನೋವನ್ನೂ ದೀಪದಂತೆ ಕಳೆದ ಅಪ್ಪ .ಹಣದ ಶಕ್ತಿ ಎದುರು ಮಾನವರ ಅಂತಃಶಕ್ತಿ ರೂಪಿಸಿ ಕೊಳ್ಳುವ ಮಾದರಿ ಬದುಕುಗಳ ಅನಾವರಣ ಸೊಗಸಾಗಿ ಮೂಡಿಬಂದಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: