ಪ್ಯಾರಿಸ್ ಮೇಲೆ ದಾಳಿ ನಡೆದಾಗ

ಸಂವರ್ತಾ ಸಾಹಿಲ್

ಪ್ಯಾರಿಸ್ ಮೇಲೆ ದಾಳಿ ನಡೆದಾಗ, ದಾಳಿಯ ಸದ್ದು ಜಗತ್ತಿನೆಲ್ಲೆಡೆ ಪ್ರತಿಧ್ವನಿಸಿದರೆ ಪ್ಯಾರಿಸ್ ದಾಳಿಯ ಸಮಯದ  ಸುತ್ತಮುತ್ತಲೇ ಲೆಬನಾನ್, ಬಗ್ದಾದ್ ಮೇಲೆ ದಾಳಿ ನಡೆದಾಗ ಅವುಗಳು ಜಗತ್ತಿನೆಲ್ಲೆಡೆ  ಅಷ್ಟೇ  ಅಬ್ಬರದೊಂದಿಗೆ ಪ್ರತಿಧ್ವನಿಸಲಿಲ್ಲ.ಸಾಮಾಜಿಕ ಜಾಲತಾಣದಲ್ಲ ಮತ್ತು ಮಾಧ್ಯಮಗಳಲ್ಲಿ ಪ್ಯಾರಿಸ್ ಮೇಲಾದ ದಾಳಿಗೆ ಸಿಕ್ಕಷ್ಟು ಪ್ರಚಾರ ಮತ್ತು ಅನುಕಂಪ ಲೆಬನಾನ್ ಮತ್ತು ಬಗ್ದಾದ್ ಪಡೆಯಲಿಲ್ಲ.

ಪಾರಿಸ್ ಮೇಲೆ ದಾಳಿ ನಡೆದಾಗ ಬ್ರೂಕ್ಲೀ ಮೂಲದ ಬರಹಗಾರ ಜಾರ್ಜ್ ಅರ್ನೆಟ್ಟೆ ತನ್ನ ಬ್ಲಾಗಿನಲ್ಲಿ ಹೀಗೆ ಬರೆದುಕೊಂಡ:

3“ಪ್ಯಾರಿಸಿನಲ್ಲಿ ನಡೆದದ್ದು ಖಂಡನಾರ್ಹ. ನನ್ನಮನಸ್ಸು ಅಲ್ಲಿನ ಜನರಿಗೆ ಮಿಡಿಯುತ್ತದೆ. ಅಲ್ಲಿನ ಜನರ ಸ್ಥಿತಿಗೆ ವಿಷಾದ ವ್ಯಕ್ತಪಡಿಸುವ ಹೊತ್ತಿಗೆ ಲೋಕದೆಲ್ಲೆಡೆಯಿಂದ ಹರಿದು ಬರುತ್ತಿರುವ ಅನುಕಂಪದ ಹಿಂದೆ ಬಿಳಿತನದ ಬಗೆಗಿನ ವ್ಯಾಮೋಹ ಕಾರ್ಯ ನಿರ್ವಹಿಸುತ್ತಿದೆ  ಎಂಬುದನ್ನು ಮನಗಾಣಬೇಕಿದೆ. ಪ್ಯಾರಿಸಿನಲ್ಲಿ ‘ಬಣ್ಣದ’ ಮಂದಿಯೂ ಇದ್ದಾರೆ. ಆದರೆ ಲೋಕದ ಕಣ್ಣಿಗೆ ಅದು ಬಿಳಿಯರ ನೆಲ, ಬಿಳಿಯರ ಊರು.

ಪ್ಯಾರಿಸ್ ಒಂದು ಸಂಕೇತವಾಗಿ ಪಶ್ಚಿಮ ಬಿಳಿತನದಪ್ರತಿನಿಧಿಯಾಗಿದೆ. ದಾಳಿ ಮಾಡಿದವರು ಬಣ್ಣದ ಮಂದಿ ಎಂಬುದು ಸಹ ಇಲ್ಲಿ ಮುಖ್ಯ. ಯಾಕೆಂದರೆ ಅದರಿಂದ ದಾಳಿಯ ಗುರಿ ಆಗಿರುವ  ಬಿಳಿ ಮಂದಿ ಮತ್ತಷ್ಟು ಎದ್ದು ಕಾಣಿಸುತ್ತಾರೆ. ಪ್ಯಾರಿಸಿಗಾಗಿ ಕಣ್ಣೀರಿಡುವುದು ತಪ್ಪಲ್ಲ. ಆದರೆ ಕೆಲವರನ್ನು- ಅಂದರೆ ಬಿಳಿಯರನ್ನು ಮಾತ್ರ  ಬಲಿಪಶು ಎಂದು  ನಿರ್ಧರಿಸುವ ನಮ್ಮ  ಆಲೋಚನೆಯನ್ನು  ರೂಪಿಸಿದ  ಸಾಮಾಜಿಕ ಸಂರಚನೆಯನ್ನು ನಿರ್ಲಕ್ಷಿಸುವುದು ದುಃಖಕರ.”

ಜಾರ್ಜ್ ಅರ್ನೆಟ್ಟೆ ಹೇಳುತ್ತಿರುವುದು ಜನಾಂಗೀಯತೆ ಹೇಗೆ ನಮ್ಮ ಭಾವನೆ ಮತ್ತು ನಮ್ಮ ಪ್ರತಿಕ್ರಿಯೆಗಳನ್ನು ಸಹ ಆವರಿಸಿಕೊಂಡಿದೆ ಎಂಬುದನ್ನು. ಅದರೊಂದಿಗೆ ಅವರು’ಬಿಳಿತನ’ ಎಂಬ ಪದ ಉಪಯೋಗಿಸುವ ಕಾರಣ ಅವರ ಮಾತಿಗೆ  ಹೆಚ್ಚಿನ ರಾಜಕೀಯ ಮತ್ತು ಅಕಾಡೆಮಿಕ್ ತೂಕ ಒದಗುತ್ತದೆ.

ಇಪ್ಪತನೆಯ ಶತಮಾನದ ಕೊನೆಯ ದಶಕದಲ್ಲಿ ಪಶ್ಚಿಮದಲ್ಲಿ ಜನಾಂಗೀಯತೆಯ ಕುರಿತ ಅಧ್ಯಯನದಲ್ಲಿ ಒಂದು ಪಲ್ಲಟ ಆಯಿತು. ಅದೇನೆಂದರೆ ‘ವೈಟ್ನೆಸ್ಸ್’ನ ಅಧ್ಯಯನ. ‘ವೈಟ್ನೆಸ್ಸ್’ ಅನ್ನು  ನಾವು ‘ಬಿಳಿತನ’  ಎಂದು ಅರ್ಥೈಸಿಕೊಳ್ಳಬಹುದು.

ಬಿಳಿತನದ ಅಧ್ಯಯನ ಮುಖ್ಯವಾಗಿ ಮಾಡಹೊರಟದ್ದು ಕಪ್ಪು ಅಲ್ಲದ ಕಂದು ಅಲ್ಲದ ಜನರು ಅಂದರೆ ಬಿಳಿಯರನ್ನು ಸಹ ಒಂದು ಜನಾಂಗದಂತೆ ಅಧ್ಯಯನ 2 ಮಾಡುವುದು. ನಾವು ಜನಾಂಗ ಎಂದು ಕರೆಯುವ  ‘ರೇಸ್’ ಒಂದು ಸಾಮಾಜಿಕ ರಚನೆ. ಹೀಗಿರುವಾಗ ಕಪ್ಪು ಮತ್ತು ಕಂಡು ಬಣ್ಣದ ಮಂದಿಯನ್ನು ಮಾತ್ರ  ‘ಜನಾಂಗೀಯ’  ಅಧ್ಯಯನಕ್ಕೆ ಒಳಪಡಿಸುವುದು ಜನಾಂಗೀಯ ಅಧ್ಯಯನದ ಮಿತಿ ಎಂದು ಮತ್ತು ಅದುವೇ ಒಂದು ಜ್ಞಾನ ರಾಜಕೀಯ  ಮತ್ತು ಸಾಮಾಜಿಕ ನೋಟದ ರಾಜಕೀಯ ಎಂದು ಬಣ್ಣದ ವಿದ್ವಾಂಸರು ಕಂಡುಕೊಂಡರು.

ವರ್ಣದ ಮಂದಿಯನ್ನು ಮಾತ್ರ ‘ಜನಾಂಗ’ ಎಂದು ನೋಡುವಾಗ ಬಿಳಿಯರು ವರ್ಣಾತೀತರು ಮತ್ತು ‘ನಾಗರೀಕರು’ ಎಂದು ಮತ್ತು ಬಿಳಿತನವೇ ಸಹಜ ಎಂದು ಸಾಮೂಹಿಕ ಸುಪ್ತ ಮನಸ್ಸು ಅರ್ಥೈಸಿಕೊಳ್ಳುತ್ತದೆ. ಬಿಳಿಯರು ಸಹ ಒಂದು ಜನಾಂಗ, ಒಂದು ಸಾಮಾಜಿಕ ರಚನೆ, ಎಂದು ಹೇಳುವುದು ಮತ್ತು ಆ ಮುಖಾಂತರ ಬಿಳಿತನವನ್ನು ನಿರ್ವಚಿಸಿ ಅದು ಕಾರ್ಯ ನಿರ್ವಹಿಸುವ ರೀತಿಯನ್ನು ಗಮನಿಸುವುದು ವೈಟ್ನೆಸ್ಸ್ ಅಧ್ಯಯನದ ಉದ್ದೇಶವಾಗಿದೆ.

ಬಿಳಿತನ ತನ್ನ ಯಾಜಮಾನ್ಯವನ್ನು ಸೃಷ್ಟಿಸಿರುವುದು ಸಾಂಸ್ಕೃತಿಕ, ಸಾಂಸ್ಥಿಕ ಬಂಡವಾಳವನ್ನು ತನ್ನ ಬಳಿ ಇರಿಸಿಕೊಂಡು. ಆರ್ಥಿಕ ಬಂಡವಾಳವೂ ಬಿಳಿತನದಅಂಗೈಯಲ್ಲೇ ಹೆಚ್ಚು ಇದ್ದರೂ ಸಾಮಾಜಿಕ ರಾಜಕೀಯ ನೆಲಯಲ್ಲಿ ಯಾಜಮಾನ್ಯ ಹೊಂದಲು ಸಾಧ್ಯ ಆಗಿರುವುದು ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಬಂಡವಾಳದಿಂದಾಗಿ. ಈ ಸಾಂಸ್ಕೃತಿಕ ಮತ್ತು ಸಾಂಸ್ಥಿಕ ಬಂಡವಾಳ ಸದಾ ಕಣ್ಣಿಗೆ ಕಾಣಿಸದಂತೆ ಅಮೂರ್ತವಾಗಿ ಇರುತ್ತದೆ. ಉದಾಹರಣೆಗೆ ‘ಶಿಷ್ಟ’ ಮತ್ತು ‘ಶ್ರೇಷ್ಠ’ ಎಂದು ತಿಲಿಯಲ್ಪಡುವ ಸ್ವಭಾವಗುಣಲಕ್ಷಣ ಇವು ಬಿಳಿಯರ ಬದುಕಿನ ಕ್ರಮಕ್ಕೆ ಅನುಗುಣವಾಗಿ ಇರುತ್ತವೆ. ಹೆಚ್ಚಿನ ಸಂಸ್ಥೆಯ ನಿಯಮಗಳು ಬಿಳಿತನಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯ ಆಗುವಂತೆ ಇರುತ್ತವೆ. ಹೆಚ್ಚಿನ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಬಿಳಿಯರೇ ಇರುತ್ತಾರೆ ಮತ್ತು ಆ ಹುದ್ದೆ ಅಲಂಕರಿಸಲು ಸಂಸ್ಥೆ ನಿರೀಕ್ಷಿಸುವ ವೈಶಿಷ್ಟ್ಯ ಬಿಳಿಯರು ತಮ್ಮ ಆರೈಕೆಯಿಂದಲೇ ಮೈಗೂಡಿಸಿಕೊಂಡಿರುವ ಗುಣಲಕ್ಷಣಗಳಾಗಿರುತ್ತವೆ.

ಇವುಗಳನ್ನು ಬಿಳಿತನ ಹೇಗೆ ಸಾಧಿಸಿತು ಮತ್ತು ಆ ಮುಖಾಂತರ ಸಮಾಜವನ್ನು ಹೇಗೆ ತನ್ನ ಹಿಡಿತದಲ್ಲಿ ಇಟ್ಟುಕೊಂಡಿತು ಎಂದು ವೈಟ್ನೆಸ್ಸ್ ಸ್ಟಡೀಸ್ ತಿಳಿಸುತ್ತದೆ.

ಅದೇ ಸಮಯಕ್ಕೆ ಬಿಳಿಯ ವಿದ್ಯಾರ್ಥಿಗಳ ತಮ್ಮ ಬಿಳಿತನವನ್ನು ಅರಿವಿಗೆ ತಂದು ಅವರನ್ನು ಈ ಶೋಷಣೆಯ ಚಕ್ರದಿಂದ ಬಿಡುಗಡೆಗೊಳಿಸಿ ಅವರನ್ನು ಮತ್ತೆ ಮನುಷ್ಯರನ್ನಾಗಿಸುವ ಉದ್ದೇಶ ವೈಟ್ನೆಸ್ಸ್ ಸ್ಟಡೀಸ್ ಹೊಂದಿದೆ. ಇಲ್ಲಿ ಬಿಳಿಯ ಮಂದಿಗೆ ತಮ್ಮ ಜನಾಂಗದ ಅಸ್ಮಿತೆಯನ್ನು ಕೈ ಬಿಟ್ಟಾಗ ಅನುಭವಕ್ಕೆ ಬರುವ ಒಂದು ನಿರ್ವಾತವನ್ನು ಹೇಗೆ ತುಂಬುವುದು ಎಂದು ಸಹ ಚರ್ಚಿಸಲಾಗುತ್ತದೆ.

ಇಸವಿ ೨೦೧೪ರಲ್ಲಿ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಇಲ್ಲಿ ಸಂಶೋಧನಾ ಸಹಸದಸ್ಯನಾಗಿ ಸೇರಿದ ನಥೆನಿಯಲ್ ಆಡಮ್ ಟೋಬಿಯಸ್ ಕೋಲ್ಮ್ಯಾನ್”ಕಪ್ಪುಅಧ್ಯಾಪಕ ಯಾಕೆ ನಮ್ಮಲ್ಲಿ ಇಲ್ಲ?” ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಿದರು. ಅಲ್ಲಿ ಅವರು ಮಾಡಿದ  ಭಾಷಣ ‘ಫಿಲಾಸಫಿ ಬಿಳಿತನದಿಂದ- ಶುದ್ಧ ಬಿಳಿತನದಿಂದ- ಕೂಡಿದೆ’  ಬಹಳ ಜನಪ್ರಿಯವಾಗಿ ಕೋಲ್ಮ್ಯಾನ್ ಅವರಿಗೆ ಬಹಳ  ಖ್ಯಾತಿ ತಂದಿತು.  ಆ  ಭಾಷಣವನ್ನೇ ಕೇಂದ್ರವಾಗಿರಿಸಿಕೊಂಡು ಅವರು ಎಂ.ಎ. ಇನ್ ಕ್ರಿಟಿಕಲ್ ವೈಟ್ ಸ್ಟಡೀಸ್ ಎಂಬ ಒಂದುಹೊಸ  ಕೋರ್ಸ್ ನಡೆಸಲು ಅಭ್ಯಾಸಕ್ರಮ  ತಯಾರಿಸಿದರು.

ಕೋಲ್ಮ್ಯಾನ್ ಬಳಿ ಅವರ ಸಂಸ್ಥೆ ‘ಎಂ.ಎ. ಇನ್ಕ್ರಿಟಿಕಲ್ ವೈಟ್ ಸ್ಟಡೀಸ್’ ಅನ್ನು ‘ಎಂ.ಎ. ಇನ್ ರೇಸ್’ ಎಂದು ಪುನರ್ನಾಮ ಮಾಡಲು ಹೇಳಿದ್ದರು. ಕೋಲ್ಮ್ಯಾನ್ ಇದಕ್ಕೆ ಒಪ್ಪಿಕೊಂಡರು. ಆದರೆ ಅವರ ಸಂಶೋಧನಾ ಅವಧಿ ಮುಗಿಯುವ ಹೊತ್ತಿಗೆ ಸಹಜವಾಗಿ ಸಂಶೋಧನಾ ಸದಸ್ಯರನ್ನು ಅಧ್ಯಾಪಕರಾಗಿ ಸ್ವೀಕರಿಸುವ ಸಂಸ್ಥೆ ಅವರನ್ನು ಪ್ರಾಧ್ಯಾಪಕರಾಗಿ ತೆಗೆದುಕೊಳ್ಳದೆ ಹೋಯಿತು.ಮಾತ್ರವಲ್ಲ ಅವರು ರಚಿಸಿದ ಎಂ.ಎ. ಪ್ರೊಗ್ರಾಮ್ ಅನ್ನು ಸಹ ಪರಿಚಯಿಸಲಿಲ್ಲ. ಸಂಸ್ಥೆ ಅದಕ್ಕೆ ನೀಡಿದ ಕಾರಣ, “ನಮ್ಮ ಸಂಸ್ಥೆ  ಇಂಥಾ ಆಳವಾದ ಅಧ್ಯಯನಕ್ಕೆ ಇನ್ನೂ ತಯಾರಾಗಿಲ್ಲ ಮತ್ತು ಇದನ್ನು  ಪಾಠ ಮಾಡಲು ನಮ್ಮಲ್ಲಿ ಜನರಿಲ್ಲ.”

ಇಲ್ಲಿ ನಮಗೆ ಕಣ್ಣಿಗೆ ಕಾಣಿಸುವುದು ಬಿಳಿತನ ಅದೃಶ್ಯವಾಗಿ ಇರುವುದರಲ್ಲೆ ಬಿಳಿತನಕ್ಕೆ ಲಾಭ ಇದೆ. ಅದಕ್ಕಾಗಿ ಅದರ ಅಗೋಚರತೆಯನ್ನು ಅದು ಕಾಪಾಡಿಕೊಳ್ಳಲು ಸದಾ ಇಚ್ಚಿಸುತ್ತದೆ. ಅದು ಅಗೊಚರವಾಗಿದ್ದಾಗಲೇ ಬಿಳಿಯರಿಗೆ ತಾವು ವರ್ಣಾತೀತರು ವರ್ಣಭೇದ ಮೀರಿದವರು ಎಂದು ನಿರ್ಲಜ್ಜೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೆಶೋಷಣೆಗೆ ಒಳಗಾದ ಕರಿಯರು ಮತ್ತು ಕಂದು ಮೈ ಬಣ್ಣದವರು ಜನಾಂಗೀಯತೆಯ ಪ್ರಸ್ತಾಪ ಮಾಡಿದಾಗ ಜನಾಂಗೀಯತೆಯನ್ನು ಮತ್ತೆ ಬಡಿದೆಬ್ಬಿಸುತ್ತಿರುವವರು ಬಣ್ಣದ ಮಂದಿ ಎಂದು ಅವರ ಮೇಲೆಯೇ ಆರೋಪಿಸಲು ಸುಲಭವಾಗುವುದು.

ಕನ್ನಡದಲ್ಲಿ ‘ರೇಸ್’ ಎಂಬ ಪರಿಕಲ್ಪನೆಗೆ ಸೂಕ್ತ ಪದ ಇಲ್ಲ. ಸಾಮಾನ್ಯವಾಗಿ ಜನಾಂಗ ಎಂಬ ಪದಬಳಕೆ ಇದ್ದರೂ ಅದು ಸಂಪೂರ್ಣವಾಗಿ ‘ರೇಸ್’ ಅನ್ನು ಹಿಡಿದಿಡುವುದಿಲ್ಲ. ಆದರೆ ಸಮಸ್ಯೆ ಅಂದರೆ ಜನಾಂಗ ಅನ್ನುವ ಪದವನ್ನು ನಾವು ತಲೆಮಾರು ಮಾತ್ರವಲ್ಲ ಸಮುದಾಯ ಅನ್ನುವ ಪದಕ್ಕೆ ಪರ್ಯಾಯವಾಗಿ ಬಳಸುತ್ತಿರುವುದು. ಇದರಿಂದಾಗಿಜನಾಂಗ ಅನ್ನುವ ಪದ ‘ರೇಸ್’ ಪದಕ್ಕೆ ಇರುವ ಐತಿಹಾಸಿಕ ಭಾರ ಇಲ್ಲದಾಗಿದೆ.ಕೆಲವರು ‘ನಮ್ಮಲ್ಲಿ ಜನಾಂಗೀಯತೆ ಇರಲೇ ಇಲ್ಲ ಹಾಗಾಗಿ ನಮ್ಮ ಭಾಷೆಯಲ್ಲಿ ಅದಕ್ಕೆಸೂಕ್ತವಾದ ಪದ ಇಲ್ಲ’ ಎಂದು ಘಂಟಾಘೋಷವಾಗಿ ಹೇಳುವ ಸಾಧ್ಯತೆ ಇದೆ. ಆದರೆ ಇಲ್ಲಿ ಜನಾಂಗ ಅನ್ನುವ ಪದವನ್ನೇ ನಾವು ಬಳಸಿರುವ ರೀತಿಯಲ್ಲಿ ‘ರೇಸ್’ ತರಹದ ಶೋಷಣಾತ್ಮಕ ರಚನೆಗಳು ಭಾರತೀಯ ಸಮಾಜದಲ್ಲಿಯೂ ಇದೆ ಎಂದು ಹೇಳಲು ಸಾಧ್ಯವಾಗುತ್ತದೆ.

ನಮ್ಮಲ್ಲಿ ‘ಜನಾಂಗ’ ಎಂಬ ಪದವನ್ನು ಬಳಸುವುದು “ಬುಡಕಟ್ಟು ಜನಾಂಗ” “ಕುರುಬ ಜನಾಂಗ” “ಕೊರಗ ಜನಾಂಗ” ಎಂದು ಮತ್ತು ಅಲ್ಲಲ್ಲಿ “ಮುಸ್ಲಿಂ ಜನಾಂಗ” ಎಂದು. ಆದರೆ ‘ಜನಾಂಗ’ ಎಂಬ ಪದ ಬಳಸುವುದು ಕೆಳಜಾತಿಗಳಿಗೆ ಮಾತ್ರ. ಕನ್ನಡದಲ್ಲಿ “ಬ್ರಾಹ್ಮಣ ಜನಾಂಗ” ಎಂಬ ಪದಬಳಕೆ ನನ್ನ ಗಮನಕ್ಕೆ ಬಂದಿಲ್ಲ.

ಹೇಗೆ ಬಣ್ಣದ ಮಂದಿಯನ್ನು ಜನಾಂಗೀಯ ಪದದ ಚೌಕಟ್ಟಿನ ಒಳಕ್ಕೆ ತಂದು ಬಿಳಿತನವನ್ನು ‘ಸಹಜ’ ಮಾಡಲಾಯಿತೋ ಹಾಗೆ ಇಲ್ಲಿ ಕೆಳಜಾತಿಯವರನ್ನು ‘ಜನಾಂಗ’ ಎಂದು ಕರೆಯುವಾಗ ಮೇಲ್ಜಾತಿಯವರು ‘ಸಾಮಾನ್ಯರು’ ‘ನಾಗರೀಕರು’ ಎಂದು ಪರೋಕ್ಷವಾಗಿ ಸಾಮೂಹಿಕ ಸುಪ್ತ ಮನಸಿನೊಳಕ್ಕೆ ವಿಷ ಬೀಜ ಬಿತ್ತಲಾಗುತ್ತದೆ.

ಇದನ್ನೆಲ್ಲಾ ಮಾತನಾಡುತ್ತಾ ನಮ್ಮಲ್ಲಿ ಮೇಲ್ಜಾತಿಯವರನ್ನು ಸಹ ಅಭ್ಯಾಸ ಮಾಡುವ ‘ಕ್ರಿಟಿಕಲ್ ಬ್ರಾಹ್ಮಣ ಸ್ಟಡೀಸ್’ ಇರಬೇಕು ಎಂದು ಸ್ನೇಹಿತರ ಗುಂಪಿನಲ್ಲಿ ಹೇಳಿದಾಗ ಅಲ್ಲೊಬ್ಬರು, “ಈ ಜಾತಿ ಈ ಜನಾಂಗ ವರ್ಣ ಈ ಅಸ್ಮಿತೆಗಳನ್ನು ಬಿಟ್ಟು ನೀವು ಲೋಕದ ಬಗ್ಗೆ ಮಾತನಾಡಲು ಸಾಧ್ಯ ಇಲ್ಲವೇ?” ಎಂದು ಪ್ರಶ್ನಿಸಿದರು. ತಾನು ಜಾತಿಯನ್ನು ಆಚರಿಸುವುದಿಲ್ಲ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಈ ಸ್ನೇಹಿತೆಗೆ ಉತ್ತರಿಸುವಾಗ ಕೇಳಿದ್ದು ಪ್ರಶ್ನೆಯನ್ನೇ: “ಈ ಲೋಕ ನಡೆಯುವುದು ಯಾರು ತೀರ್ಮಾನಿಸಿದ ರಚನೆಯಮೇಲೆ? ಲೋಕ ಯಾರ ಮೂಗಿನ ನೇರಕ್ಕೆ, ಯಾರ ಜೀವನ ಶೈಲಿಗೆ ಸಮನಾಗಿ ನಡೆಯುತ್ತಿದೆ?”

“ನಾನು ರೇಸಿಸ್ಟ್ ಎಂದು ಹೇಳುತ್ತಿರುವುದು ನೀವು?” ಎಂಬ ಪ್ರಶ್ನೆ ಬಹಳ ಸಹಜವಾಗಿಯೇ ಬಂತು. ರೇಸಿಸ್ಟ್ ಎಂದು ಕರೆಯಲ್ಪಡುವುದಕ್ಕಿಂತ ಹೆಚ್ಚಿನ ವಿಷಾದಕರ ಸಂಗತಿ ರೇಸಿಸಮ್ ನ ಶೋಷಣೆಗೆ ಒಳಗಾಗುವುದು ಮತ್ತು ರೇಸಿಸಮ್ ಇನ್ನೂ ಬದುಕಿರುವುದು ಎಂದು ತಿಳಿಹೇಳುವುದು ಸುಲಭವಾಗಿರಲಿಲ್ಲ. ವೈಟ್ನೆಸ್ಸ್ ಪಾಠ ಹೇಳುವ ಹಲವು ಅಧ್ಯಾಪಕರು ಕಂಡುಕೊಂಡ ವಿಷಯ ಬಿಳಿಯ ವಿದ್ಯಾರ್ಥಿಗಳು ತಮ್ಮ ಬಿಳಿತನದ ವಿಶೇಷಾಧಿಕಾರ ಸವಲತ್ತುಗಳನ್ನು ಗುರುತಿಸಲು ನಿರಾಕರಿಸುವುದು ಮತ್ತು ಸಾಮಾಜಿಕ ನ್ಯಾಯಕ್ಕೆ ಕರಿಯರಿಗೆ ಸೌಲಭ್ಯ ನೀಡಿದಾಗ ಅದು ತಮಗೆ ಆದ ಶೋಷಣೆ ಎಂದು ಇತಿಹಾಸದ ಪರಿಜ್ಞಾನ ಇಲ್ಲದ ಮಾತುಗಳನ್ನಾಡುವುದು.

ಬಿಳಿತನ ಮತ್ತು ಬ್ರಾಹ್ಮಣ್ಯ ನಡೆಸುವ ಆಟದಲ್ಲಿ ಉಳಿದವರು ‘ಜನಾಂಗ’ ಮತ್ತು ‘ಜಾತಿ’ ಆಗಿ ಬ್ರಾಹ್ಮಣ್ಯ ಮತ್ತು ಬಿಳಿತನದ ಚೌಕಟ್ಟಿನ ಒಳಗೆ ಬರುವವರು ‘ನಾಗರೀಕರು’ ‘ಸಾಮಾನ್ಯರು’ ಆಗಿ ಅವುಗಳದ್ದೇ ಯಾಜಮಾನ್ಯ ನಡೆಯುತ್ತ ಹೋಗುತ್ತದೆ. ಹಾಗಾಗಿ ಕಪ್ಪು ಜನರ ಮೇಲೆ ಕಂದು ಬಣ್ಣದ ಮಂದಿಯ ಮೇಲೆ ಹಿಂಸೆ ನಡೆದಾಗ ಅದು ಒಂದು’ಘಟನೆ’ ಆಗಿ ಬಿಳಿಯರ ಮೇಲೆ ಮೇಲ್ಜಾತಿ ಮೇಲ್ವರ್ಗದ ಮೇಲೆ ದಾಳಿ ನಡೆದಾಗ ಅದು ಒಂದು ದೇಶ ಇಲ್ಲ ಮಾನವ ಕುಲದ ಮೇಲೆಯೇ ನಡೆದ ದಾಳಿ ಎಂಬಂತೆ ಸುದ್ದಿಯಾಗುವುದು ಮತ್ತು ನಮ್ಮಲಿ ಅನುಕಂಪ ಹುಟ್ಟಿಸುವುದು.

ಇದನ್ನು ಬುಡ ಮೇಲು ಮಾಡಲು ಬಿಳಿತನ ಮತ್ತು ಬ್ರಾಹ್ಮಣ್ಯ ಸಹಜ ಮತ್ತು ಆದರ್ಶ ಅಲ್ಲ, ಅವುಗಳು ಸಹ ಒಂದು ಸಾಮಾಜಿಕ ರಚನೆಗಳು ಎಂದು ನೋಡಿ ಅವುಗಳು ತಮ್ಮಯಾಜಮಾನ್ಯ ಹೇಗೆ ಕಾಪಾಡಿಕೊಂಡು ಬಂದಿದೆ ಎಂದು ಅಭ್ಯಾಸ ಮಾಡಿ ಆ ಯಾಜಮಾನ್ಯವನ್ನು ಬಗ್ಗು ಬಡೆಯುವುದು ಆಗಿದೆ.

 

‍ಲೇಖಕರು admin

December 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: