ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೊಲೀಸರಿಗೇನಾಗಿದೆ..??

ಮಾನ್ಯರೆ,

‘ಶಿವ’ ಎಂಬ ನಾಟಕದ ಪ್ರದರ್ಶನವಾಗದಂತೆ ವಿಶ್ವ ಹಿಂದೂ ಪರಿಷದ್ ಸಂಘಟನೆ ಮಾಡುತ್ತಿರುವ ದುರಾಗ್ರಹದ ಸುದ್ದಿ ಅಕ್ಟೋಬರ್ 15ರ ಪ್ರಜಾವಾಣಿಯಲ್ಲಿ ಓದಿ ಈ ಪತ್ರ. ಆ

ಸಂಘಟನೆಯ ಮೂರು ತಂಡಗಳು ಜಾಗೃತಿ ರಂಗಮಂದಿರಕ್ಕೆ ಹೋಗಿ ಹೀಗೆ ಬೆದರಿಕೆ ಒಡ್ಡಿವೆ ಎಂದು ಕೂಡ ಬೇರೆಡೆ ಓದಿದ್ದೇನೆ. ಎಲ್‍ಜಿಬಿಟಿಖ್ಯೂ ಜನರ ಕಷ್ಟಸುಖಗಳನ್ನು ನಾಟ್ಯವಾಗಿಸುವ ಪ್ರಯೋಗವನ್ನು – ಯಾವುದೇ ವಿಷಯ, ಯಾವುದೇ ಕಥೆಯುಳ್ಳ ಯಾವುದೇ ಪ್ರಯೋಗವನ್ನು – ಹೀಗೆಲ್ಲ ತಡೆಯುವುದು ಸರ್ವಥಾ ಸರಿಯಲ್ಲ.

ಅಚ್ಚರಿಯ ಮಾತೆಂದರೆ, ಪೊಲೀಸಿನವರು ಆ ಸಂಘಟನೆಯವರೊಬ್ಬರನ್ನೂ ದಸ್ತಗಿರಿ ಮಾಡದೆ, ಮರೆವೆಗೆ ಸಂದ ಆದರೆ ಜೀವಂತವಿರುವ ಬ್ರಿಟಿಷರ ಕಾಲದ ಕರಾಳ ಕಾನೂನೊಂದನ್ನು ಆಧರಿಸಿ ಆ ಪ್ರದರ್ಶನದಮೇಲೆಯೆ ನಿರ್ಬಂಧ ಹೇರಿದ್ದಾರೆ; ಮತ್ತು ಆ ನಾಟಕದ ಪ್ರಯೋಗಕ್ಕೆ ಅನುಮತಿ ಬೇಕಾದರೆ, ಅದರ ಸಾಹಿತ್ಯದ ಪಾಠವನ್ನು ತಾವು ಮೊದಲು ಪರಿಶೀಲಿಸಬೇಕೆಂದು ಹೇಳಿದ್ದಾರೆ! ಅಸಂಗತವಾದ ನಡೆವಳಿಕೆ ಮತ್ತು ತೀರ್ಮಾನ ಅದು. ಅಸಲಿಗೆ, ಆ ಕಾನೂನು ಪ್ರಜಾಸತ್ತೆಗೆ ವಿರುದ್ಧವಾದದ್ದು ಎಂದು ಎಲ್ಲ ಬರಹಗಾರರು, ಕಲಾವಿದರು ಮತ್ತು ಪ್ರಜ್ಞಾವಂತರು ಮೊದಲಿನಿಂದ ಹೇಳುತ್ತ ಬಂದಿದ್ದಾರೆ. ಆ ಕಾನೂನು ಹೋಗಬೇಕು. ಬೆದರಿಕೆಯೊಡ್ಡಿದವರ ದಸ್ತಗಿರಿಯಾಗಬೇಕು.

ಈಚೆಗೆ, ಆರೆಸ್ಸೆಸ್ಸಿನ ಮೋಹನ್ ಭಾಗವತ್ ಅವರು ತಮ್ಮ ಸಂಘಟನೆ ಮತ್ತು ಅದರ ಪರಿವಾರಕ್ಕೆ ಉದಾರವಾದದ ಲೇಪವೊಂದನ್ನು ಕೊಡುವ ಪ್ರಯತ್ನಮಾಡಿದ್ದಾರೆ. ಅವರ ಉದ್ದೇಶ ಮತ್ತು ಆ ಮಾತುಗಳು ಪ್ರಾಮಾಣಿಕ ಎಂದಾದರೆ, ಮೊತ್ತಮೊದಲು ಕರ್ನಾಟಕದ ಆರೆಸ್ಸೆಸ್ ಮತ್ತು ವಿಎಚ್‍ಪಿಗಳ ನಾಯಕರು ಸದರಿ ದುರಾಗ್ರಹಿಗಳಿಗೆ ಛೀಮಾರಿ ಹಾಕಿ, ಅವರ ಪರವಾಗಿ ಕ್ಷಮೆ ಕೇಳಬೇಕು, ಮತ್ತು ‘ಶಿವ’ ನಾಟಕಪ್ರದರ್ಶನಕ್ಕೆ ಅನುವುಮಾಡಿಕೊಡಬೇಕು.

ವಿಶ್ವಾಸದಿಂದ,
ರಘುನಂದನ

‍ಲೇಖಕರು avadhi

16 October, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading