ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೊಲಿಟಿಕಲಿ ಕರೆಕ್ಟ್ v/s  ಸ್ಟಾಟಿಸ್ಟಿಕಲಿ ಕರೆಕ್ಟ್

ಕಾಂಗ್ರೆಸ್ ಪಕ್ಷ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ?

ಸೋನಿಯಾ ಗಾಂಧಿಯವರ ಯುಗ ಆರಂಭ ಆದ ಬಳಿಕ ಕಾಂಗ್ರೆಸ್ಸಿನಲ್ಲಿ ಆಗಿರುವ ಬದಲಾವಣೆಗಳನ್ನು ಎಸ್ ಎಂ ಕ್ರಷ್ಣ ಅವರು ಭಾನುವಾರ, ಬಹಳ ಚೆನ್ನಾಗಿ “ಅವರಿಗೀಗ ಬೇರುಮಟ್ಟದ ಜನ ನಾಯಕರು-ಕಾರ್ಯಕರ್ತರು ಬೇಡ; ಮ್ಯಾನೇಜರ್ ಗಳು ಸಾಕು”ಎಂದು ವಿವರಿಸಿದ್ದಾರೆ. 1998ರಿಂದ ಕಾಂಗ್ರೆಸ್ ರಾಜಕೀಯವನ್ನು ಹತ್ತಿರದಿಂದ ಗಮನಿಸಿದವರಿಗೆಲ್ಲ ಇದು ಹೀಗೇ ನಡೆದುಕೊಂಡು ಬಂದಿರುವುದು ಚೆನ್ನಾಗಿ ಗೊತ್ತಿದೆ ಕೂಡ. ಕ್ರಷ್ಣ ಅವರಿಗೆ ಈ ಬಗ್ಗೆ ಈಗ ಹೊಸದಾಗಿ ಜ್ನಾನೋದಯ ಆಯಿತೆಂಬುದೇ ಸದ್ಯಕ್ಕೆ ಅಚ್ಚರಿಯ ಸಂಗತಿ.

ಸೋನಿಯಾ ಗಾಂಧಿ ಅವರು ಹೊಸದಾಗಿ ದೇಶದ ರಾಜಕೀಯವನ್ನು ಅರ್ಥಮಾಡಿಕೊಳ್ಳತೊಡಗಿದಾಗ, ಅವರು ಹತ್ತಿರ ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕರನ್ನು ದೇಶ ‘ಕಿಚನ್ ಕ್ಯಾಬಿನೆಟ್’ ಎಂದು ಗುರುತಿಸುತ್ತಿತ್ತು ಮತ್ತು ಈ ತಂಡ ಅತ್ಯಂತ ಪ್ರಭಾವೀ ಎಂದು ನಂಬಲಾಗುತ್ತಿತ್ತು.

ವಾಸ್ತವದಲ್ಲಿ, ಅದು ಹಾಗಿರಲಿಲ್ಲ. ಕಾಂಗ್ರೆಸ್ ಹೈಕಮಾಂಡು ಈ ಕಿಚನ್ ಕ್ಯಾಬಿನೆಟ್ಟನ್ನೂ ನಂಬುತ್ತಿರಲಿಲ್ಲ. ನಿರ್ಧಾರ ತೆಗೆದುಕೊಳ್ಳಬೇಕಾದ ಪ್ರತಿಯೊಂದು ಸಂದರ್ಭದಲ್ಲೂ, ಈ ಕಿಚನ್ ಕ್ಯಾಬಿನೆಟ್ಟಿನ ಸದಸ್ಯರಿಂದ ಪ್ರತ್ಯೇಕವಾಗಿ ವಿವರಣೆ-ವರದಿಗಳನ್ನು ಪಡೆದು, ಅದರ ಆಧಾರದಲ್ಲಿ “ಸ್ವತಂತ್ರ”ನಿರ್ಣಯವೊಂದು ಹೊರಬರುತ್ತಿತ್ತು.

ಹಾಗಾಗಿ, ಈ ಕಿಚನ್ ಕ್ಯಾಬಿನೆಟ್ಟಿನ ಪರಿಸ್ಥಿತಿ ಎಷ್ಟೊಂದು ನಾಜೂಕಾಗಿರುತ್ತಿತ್ತೆಂದರೆ, ಒಂದೆಡೆ, ತಾನು ಕೊಟ್ಟ ವರದಿ ತಪ್ಪಾಗಿದ್ದು, ರಾಜಕೀಯವಾಗಿ ನಷ್ಟಕ್ಕೆ ಕಾರಣವಾಗುತ್ತದೆ ಎಂದಾದರೆ ಆ ವರದಿ ನೀಡಿದ ವ್ಯಕ್ತಿಯ ಸ್ಥಾನಚ್ಯುತಿಯ ತನಕವೂ ಅದು ತಲುಪಬಹುದಿತ್ತು; (ಅಂತಹ ತಲೆದಂಡದ ಹಲವಾರು ಉದಾಹರಣೆಗಳೂ ಸಿಗುತ್ತವೆ.) ಇನ್ನೊಂದೆಡೆ, ತಮ್ಮನ್ನು ನಂಬಿದ್ದ ತಳಮಟ್ಟದ ಕಾರ್ಯಕರ್ತರಿಗೆ, ತಮ್ಮ ಅಭಿಪ್ರಾಯಗಳಿಗೆ ಹೈಕಮಾಂಡ್ ಖಂಡಿತಾ ಬೆಲೆ ಕೊಡಲಿದೆ ಎಂದು ಹೇಳುವ ಧೈರ್ಯ ಕೂಡ ಈ ಕಿಚನ್ ಕ್ಯಾಬಿನೆಟ್ಟಿನ ಸದಸ್ಯರಲ್ಲಿ ಉಳಿಯಲಿಲ್ಲ.

ಇಂತಹದೊಂದು “ವಯಾ” ವ್ಯವಸ್ಥೆ ಕಾಂಗ್ರೆಸ್ಸಿನ ಬೆನ್ನೆಲುಬನ್ನು ದುರ್ಬಲಗೊಳಿಸುತ್ತಾ ಬಂತೆಂಬುದೂ ಸುಳ್ಳಲ್ಲ. ಕಿಚನ್ ಕ್ಯಾಬಿನೆಟ್ಟಿನ ಯಾವನೇ ಸದಸ್ಯ “ಗುಡ್ ಬುಕ್ಕಿನಿಂದ” ಹೊರಬರಲು ಸಿದ್ಧನಿಲ್ಲದ ಕಾರಣ “ಪೊಲಿಟಿಕಲಿ ಕರೆಕ್ಟ್” ನಿರ್ಣಯಗಳು ಮಾತ್ರ ಕಾಂಗ್ರೆಸ್ಸಿನ ಹೈಕಮಾಂಡನ್ನು ತಲುಪತೊಡಗಿದವು. ಕ್ರಾಸ್ ವೆರಿಫಿಕೇಷನ್ನಿನ ಪರೀಕ್ಷೆಯಲ್ಲಿ ಅವು ತೇರ್ಗಡೆ ಆಗತೊಡಗಿದವು ಮತ್ತು ತಳಮಟ್ಟದಲ್ಲಿ ಅದರ ಪರಿಣಾಮಗಳು ಕಾಣಿಸತೊಡಗಿದವು. ಕಿಚನ್ ಕ್ಯಾಬಿನೆಟ್ಟಿನಲ್ಲಿ ಟೈಮ್ ಟೆಸ್ಟೆಡ್ ನಾಯಕರು ಕಾಣಿಸಿಕೊಳ್ಳಲಾರಂಭಿಸಿದರು.

ಕಾಂಗ್ರೆಸ್ ನಿಧಾನಕ್ಕೆ ತನ್ನ ಬೇರಿನಿಂದ ಕಳಚಿಕೊಳ್ಳಲಾರಂಭಿಸಿದ್ದು ಆಗಲೇ.

ಮುಂದೆ 2013ರ ವೇಳೆಗೆ ರಾಹುಲ್ ಗಾಂಧಿ ಮುನ್ನೆಲೆಗೆ ಬರುವ ಹೊತ್ತಿಗೆ, ಈ ಕಿಚನ್ ಕ್ಯಾಬಿನೆಟ್ ರಾಜಕೀಯ ಹೊಸದೇ ತಿರುವು ತೆಗೆದುಕೊಂಡಿತು. ಬಾಯಿಮಾತಿನ ರಾಜಕೀಯ ಸ್ಟಾಟಿಸ್ಟಿಕ್ಸ್ ಗಳ ರಾಜಕೀಯವಾಗಿ ಬದಲಾಯಿತು. “ ಪೊಲಿಟಿಕಲಿ ಕರೆಕ್ಟ್” ಮತ್ತು “ಸ್ಟಾಸ್ಟಿಸ್ಟಿಕಲಿ ಕರೆಕ್ಟ್” ನಿರ್ಣಯಗಳೆರಡೂ ಏಕಕಾಲದಲ್ಲಿ ಸಾಧ್ಯ ಆಗದಿರುವ ಕಾರಣ ಕಾಂಗ್ರೆಸ್ಸಿನೊಳಗೆ ಹೊಸ ತಲೆಮಾರು ಮತ್ತು ಹಳೆ ತಲೆಮಾರುಗಳ ನಡುವೆ ಒಂದು ಬಿರುಕು ಆರಂಭವಾಯಿತು.

ಇಂತಹದೊಂದು ಬಿರುಕೇ ನಿನ್ನೆ ಕ್ರಷ್ಣ ಅವರ ಬಾಯಲ್ಲಿ ತಮ್ಮ ಪಕ್ಷವೀಗ “ ಮ್ಯಾನೇಜರ್ ಗಳ ಪಕ್ಷ” ಎಂಬ ಮಾತು ಹೊರಡಿಸಿರುವುದು.

ಹಾಗಾಗಿ, ಕಾಂಗ್ರೆಸ್ಸಿಗಿದು ಇಂಪ್ಲೋಸಿವ್ ಕಾಲಘಟ್ಟ. ‘ಬೇರುಗಳಿಂದ ಕಳಚಿಕೊಂಡಿರುವ’ ಕಾಂಗ್ರೆಸ್ಸಿನ ಹೊಸ ತಲೆಮಾರು ಮತ್ತು ‘ಬೇರುಗಳು ಉಳಿದಿರದ’ ಹಳೆಯ ತಲೆಮಾರಿನ ನಡುವೆ ಉಂಟಾಗಿರುವ ಬಿರುಕು ಈಗ ಪಕ್ಷದಲ್ಲಿ ಅನುಭವಕ್ಕೆ ಬರಲಾರಂಭಿಸಿರುವ ಇಂಪ್ಲೋಷನ್ ಗಳಿಗೆ ಕಾರಣ. ಹೆಚ್ಚಿನಂಶ ಉತ್ತರಪ್ರದೇಶದ ಚುನಾವಣೆಗಳ ಬಳಿಕ ಈ ಇಂಪ್ಲೋಷನ್ ಇನ್ನಷ್ಟು ತೀವ್ರಗೊಳ್ಳಲಿದೆ.

ಅದೇ ವೇಳೆಗೆ, ಕ್ರಷ್ಣ ಅವರಂತಹ ನಾಯಕರು, ಪಕ್ಷದ ಎಲ್ಲ ಅಧಿಕಾರಗಳನ್ನೂ ಅನುಭವಿಸಿ, ಹಿಂದಿರುಗಿ ಪಕ್ಷಕ್ಕೇನನ್ನೂ ನೀಡಲು ಸಾಧ್ಯವಾಗದ ಸ್ವಾರ್ಥಿ ನಾಯಕರಂತೆ ಕಾಣಿಸತೊಡಗಿದ್ದಾರೆ. ಕಾಂಗ್ರೆಸ್ಸು ನಡುಸಮುದ್ರದಲ್ಲಿ ಚಾಲಕನಿಲ್ಲದ ನೌಕೆಯಂತಾಡಲಾರಂಭಿಸಿದೆ.

ಇಲ್ಲವೆಂದಾದಲ್ಲಿ, ನೋಟುರದ್ಧತಿಯಂತಹ ರಾಷ್ಟ್ರವ್ಯಾಪಿ ಪರಿಣಾಮಗಳಿರುವ ಸಂಗತಿಯೊಂದು ದೇಶದ ಪ್ರಮುಖ ಪ್ರತಿಪಕ್ಷಕ್ಕೆ ಇನ್ನೂ ರಾಲಿಯಿಂಗ್ ಪಾಯಿಂಟ್ ಆಗಬಹುದೆಂದು ಅನ್ನಿಸದಿರುವುದು ಜೀರ್ಣಿಸಿಕೊಳ್ಳುವುದಕ್ಕೆ ಕಷ್ಟದ ಸಂಗತಿ.

‍ಲೇಖಕರು admin

30 January, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading