ಪೈಥಾನ್‌ಗಳ ಪ್ರಣಯ ಪ್ರಸಂಗ..

ಏಶಿಯಾದ ಅತಿದೊಡ್ಡ ಸ್ಲಮ್ ಎಂದು ಕುಖ್ಯಾತಿ ಪಡೆದ ಮುಂಬೈನ ಧಾರಾವಿಯಲ್ಲಿ ಮೊನ್ನೆ  ಮೂರು ಹೆಬ್ಬಾವುಗಳು ಕಾಣಿಸಿಕೊಂಡು ಹಲ್ಲಾಗುಲ್ಲಾ ಮಾಡಿದವು. ಭೂಗತ ದೊರೆಗಳಂತೆ ಎಲ್ಲೋ ಇದ್ದ ಈ ಹೆಬ್ಬಾವುಗಳು ಜನದಟ್ಟಣೆಯ ಪ್ರದೇಶದಲ್ಲಿ ಒಟ್ಟಿಗೆ ಪ್ರಕಟಗೊಂಡಾಗ ಜನರಲ್ಲಿ ಆಶ್ಚರ್ಯವೂ ಆತಂಕವೂ ಉಂಟಾಯಿತು. ಸಾವಿರಾರು ಮುಂಬೈಕರರ ಕಣ್ಣುಗಳೆದುರೇ ಈ ಮೂರೂ ಹೆಬ್ಬಾವುಗಳು ಬಿಂದಾಸಾಗಿ ಪ್ರಣಯದಲ್ಲಿ ತಲ್ಲೀನವಾಗಿದ್ದವು!

ಇದು ಕ್ಷಣಮಾತ್ರದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಉರಗತಜ್ನರೂ, ಸರ್ಪಮಿತ್ರರೂ, ಪೋಲೀಸರೂ ಅಲ್ಲಿಗೆ ಧಾವಿಸುವಂತಾಯಿತು. ಹತ್ತು ಅಡಿ ಉದ್ದದ ಈ ಹೆಬ್ಬಾವುಗಳಲ್ಲಿ ಒಂದು ಹೆಣ್ಣು ಉಳಿದೆರಡು ಗಂಡು ಎಂಬುದನ್ನು ಉರಗ ತಜ್ಞರು ಕಂಡು ಹಿಡಿದರು. ಹೇಗೋ ಅವುಗಳನ್ನು ಹಿಡಿದು  ಸುರಕ್ಷಿತ ತಾಣಕ್ಕೆ ಮುಟ್ಟಿಸಿದ್ದೂ ಆಯಿತು.

ಉತ್ತರ ಕನ್ನಡ ಜಿಲ್ಲೆಯ ಕಾಡಿನ ಅಂಚಿನಲ್ಲಿಯ ಊರಲ್ಲಿ ಹುಟ್ಟಿದ ನನಗೆ ಹೆಬ್ಬಾವುಗಳೇನೂ ಹೊಸತಲ್ಲ. ಚಿಕ್ಕವರಾಗಿದ್ದಾಗ ಹಳ್ಳದ ತಡಿಯಲ್ಲಿ, ಕೇದಗೆ ಹಿಂಡಿನಲ್ಲಿ, ಕಾಡಿನಲ್ಲಿ ಉದ್ದುದ್ದ ಹೆಬ್ಬಾವುಗಳನ್ನು ನೋಡಿದ್ದೇವೆ. ಒಮ್ಮೆ ನಮ್ಮ ಸಾತಜ್ಜಿ ನಸುಕಿನಲ್ಲಿ ಕೋಳಿ ಗೂಡು ತೆಗೆದಾಗ ಕೇವಲ ಮೂರು ಕೋಳಿಗಳು ಮಾತ್ರ ಹೊರಬಿದ್ದವು.

ಸಂಜೆ ಗೂಡಿಗೆ ಸೇರುವಾಗ ಇದ್ದ ಉಳಿದ ಆರು ಕೋಳಿಗಳು ಕಾಣದೇ ಯಾರೋ ಕೋಳಿಪಾರ್ಟಿ ಮಾಡುವ ಜನರೇ ಕದ್ದುಕೊಂಡು ಹೋದರು ಎಂದು ಅವರಿಗೆಲ್ಲ ಶಾಪ ಹಾಕಲು ಶುರು ಮಾಡಿದಳು. ಕೇರಿಗೆ ಕೇರಿಯೇ ಅವಳ ರಂಪಾಟದಿಂದ ಅಲುಗಾಡತೊಡಗಿತು.

ಬಾಲಕನಾಗಿದ್ದ ನಾನು ಮುಂಜಾನೆಯ ಸಿಹಿನಿದ್ದೆಯನ್ನು ಭಂಗಗೊಳಿಸಿದ ಅಜ್ಜಿಗೆ ಮನಸ್ಸಲ್ಲೆ ಬೈದು ಮೈಮುರಿಯುತ್ತಾ ಹೊರಬಂದು “ಏನಾಯ್ತಜ್ಜಿ?” ಎಂದೆ, ಅಷ್ಟೇ! ಆರು ಕೋಳಿಗಳನ್ನು ಕಳೆದುಕೊಂಡದ್ದು ರಾಷ್ಟ್ರೀಯ ದುರಂತವೆಂಬಂತೆ ನಾವೆಲ್ಲ ಸಂತಾಪ ಸೂಚಿಸಬೇಕೆಂದು ಬಯಸಿದ್ದ ಅಜ್ಜಿಗೆ ನನ್ನ ಪ್ರಶ್ನೆಯಿಂದ ಪಿತ್ತ ಕೆರಳಿ ನನಗೆ ಮಂಗಳಾರತಿ ಎತ್ತಿದಳು. “ಹೋಗ್ ಹೋಗ್ ಬೆಳಗಾದ್ರೂ ಹೆಬ್ಬಾವಿನಂಗೆ ಮೈಮುರೀತಿಯಲ್ಲೋ, ನೀನು ಶಾಲಿ ಕಲ್ತು…..”

“ಉದ್ದಾರ ಆದ ಹಾಗೇ” ಎಂದು ಪೂರ್ತಿಗೊಳ್ಳಬೇಕಾದ ಅವಳ ಮಾತು ತಟ್ಟನೇ ತುಂಡಾಯ್ತು. ನನ್ನನ್ನು ದರದರ ಎಳೆದುಕೊಂಡು ಕೋಳಿಗೂಡಿನತ್ತ ದೂಡಿ ” ನೋಡ್..ಏನ್ ಕಾಣ್ತಿದ ಹೇಳ್” ಎಂದಳು. ನಾನು ಬಗ್ಗಿ ಅರೆಗತ್ತಲಲ್ಲಿ ಕಣ್ಣಾಡಿಸಿದೆ. “ನಿನ್ನ ಅಷ್ಟೂ ಕೋಳಿಗಳು ಕಾವಿಗೆ ಕೂತಿವೆ ಅಜ್ಜಿ”  ಎಂದೆ. “ಗುಲಾಮ, ಹುಂಜ ಕಾವಿಗೆ ಕುಳ್ತವೇನೋ, ಸಮ ನೋಡೋ’ ಎಂದು ಕೋಲಿಂದ ನನ್ನ ಬೆನ್ನಿಗೆ ಬಡಿದ ಹೊಡೆತಕ್ಕೆ ನಾನು ಕೋಳಿ ಗೂಡಿನೆದುರು ಪೂರ್ತಿ ಕಂವುಚಿ ಬಿದ್ದೆ.  ಬಿದ್ದ ರಭಸಕ್ಕೆ ತಲೆ ಅರ್ಧ ಗೂಡಿನೊಳಗೆ ಸೇರಿಕೊಂಡಿತ್ತು. ಆಗಲೆ ನನಗೆ ಮಹಾಉರಗದ ಸಮೀಪ  ದರ್ಶನವಾದದ್ದು!

ರಾತ್ರಿಯಲ್ಲಿ ಕೋಳಿಗೂಡು ಸೇರಿಕೊಂಡ ಹೆಬ್ಬಾವು ಭರ್ಜರಿ ಭೋಜನದಿಂದ ಜಡಗೊಂಡ ಸ್ಥಿಯಲ್ಲಿತ್ತು. ಆ ವರೆಗೂ ಕೇರಿಗಷ್ಟೇ ಸೀಮಿತವಾಗಿದ್ದ ಸಾತಜ್ಜಿಯ ಬೊಬ್ಬೆ ಇಡೀ ಊರಿಗೇ ವಿಸ್ತರಿಸಿ ಜನರೆಲ್ಲ ಒಟ್ಟಾಗಿ ಹೇಗೋ ಹೆಬ್ಬಾವನ್ನು ಹೊರತೆಗೆದಾಗ ಅದರ ಉದರದಲ್ಲಿ  ಆರೂ ಕೋಳಿಗಳು ಸ್ವಾಹಾ ಆಗಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಹೆಬ್ಬಾವಿನ ಮೈ ಕೋಳಿಗಳ ಆಕಾರದಲ್ಲೇ ಉಬ್ಬಿಕೊಂಡಿದ್ದರಿಂದ ನನಗೆ ಅವು ಸಾಲಾಗಿ ಕಾವಿಗೆ ಕೂತಂತೆ ಕಂಡಿದ್ದವು!

ಇಂಥ ಹೆಬ್ಬಾವುಗಳು ಸಾತಜ್ಜಿಯ ಆತಿಥ್ಯ ಸ್ವೀಕರಿಸಲು ಮತ್ತೆ ಮತ್ತೆ ಬರುತ್ತಿದ್ದವಾದ್ದರಿಂದ ನಮಗೆ ಇವುಗಳ ಬಗ್ಗೆ ಭಯ ಹೋಗಿ ಸಲಿಗೆಯಾಗಿಬಿಟ್ಟಿತ್ತು. ಆದರೂ  ಏಕಕಾಲದಲ್ಲಿ ಮೂರುಮೂರು ಹೆಬ್ಬಾವುಗಳನ್ನು ಕಾಣುವ ಅದೃಷ್ಟ ಎಂದೂ ಬಂದಿರಲಿಲ್ಲ. ಹೀಗಾಗಿ ಧಾರಾವಿಯಲ್ಲಿ ಮೂರು ಹೆಬ್ಬಾವುಗಳ ದರ್ಶನದ ಸುದ್ದಿ ತಿಳಿದಾಗಿನಿಂದ ಕೊಂಚ ಕೀಳರಿಮೆ ಕಾಡುತ್ತಿರುವುದು ಸುಳ್ಳಲ್ಲ.

ಮುಂಬೈ ಎಂದೊಡನೆ ಬರೀ ಜನಸಂದಣಿಯ ಕಾಂಕ್ರೀಟ್ ಕಾಡು ಎನ್ನುವ ಚಿತ್ರವೇ ನಮ್ಮ ಕಣ್ಣಮುಂದೆ ಬರುತ್ತದೆ. ಅದು ಬಹುಮಟ್ಟಿಗೆ ನಿಜವಾದರೂ ಕೆಲವು ಪ್ರದೇಶಗಳಲ್ಲಿ ಓಡಾಡಿದಾಗ ಈ ಸಾಮಾನ್ಯ ಗ್ರಹಿಕೆಗೆ  ಭಂಗವುಂಟಾಗುತ್ತದೆ. ಇಲ್ಲಿಯ ಇಕ್ಕಟ್ಟು ಜಾಗದಲ್ಲಿ ಸಾಕಷ್ಟು ಎತ್ತರಕ್ಕೆ ಏರಿರುವ ಲಕ್ಷಾಂತರ ಗಿಡಮರಗಳಿವೆ. ಎಂಥ ಹೆಮ್ಮರಗಳೂ ಬಹುಮಹಡಿ ಕಟ್ಟಡಗಳ ಸಾಲಿನಲ್ಲಿ ಕುಬ್ಜವಾದಂತೆ ಕಂಡರೂ ನೆರಳಾಗುತ್ತ, ಕಣ್ಣಿಗೆ ತಂಪೆನಿಸುತ್ತ, ಹೂ ಹೇರಿಕೊಳ್ಳುತ್ತ,  ಪಕ್ಷಿಗಳಿಗೆ ಆಶ್ರಯವಾಗುತ್ತ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಹೇರಳ ಸಂಖ್ಯೆಯಲ್ಲಿರುವ  ಗಿಳಿಗಳೂ ಗುಬ್ಬಿಗಳೂ ಕಿಟಕಿಗಳಲ್ಲಿ ಬಂದು ಚಿಲಿಪಿಲಿ ಮಾಡುವುದಿದೆ.

ಉಪಗ್ರಹದ ಮೂಲಕ ಕೈಗೊಂಡ ಅಂದಾಜಿನ ಪ್ರಕಾರ ಈ ಮಹಾನಗರದಲ್ಲಿ ಸುಮಾರು 20 ಲಕ್ಷದಷ್ಟು ಗಿಡಮರಗಳಿವೆಯಂತೆ. ಅಂದರೆ ಸುಮಾರು ಹತ್ತು ಮಂದಿಗೆ ಒಂದು ಮರ. ಹಲವು ರೀತಿಯಲ್ಲಿ ಮುಂಬೈಯಂತಿರುವ ನ್ಯೂಯಾರ್ಕ್ ನಗರಕ್ಕೆ ಹೋಲಿಸಿದರೆ ಅದು ತುಂಬಾ ಕಡಿಮೆ.( ಅಲ್ಲಿ ಒಬ್ಬರಿಗೆ ಐದು ಮರಗಳಿವೆಯಂತೆ!) ಆದರೂ ಜನದಟ್ಟಣೆ  ಮತ್ತು ವಾಹನಗಳಿಂದಾಗುವ ಪ್ರದೂಷಣೆಯನ್ನು ಹೀರಿಕೊಳ್ಳುವಲ್ಲಿ ತಕ್ಕ ಮಟ್ಟಿಗೆ ತಮ್ಮ ಯೋಗದಾನ ನೀಡುತ್ತಿವೆ.

ಮರಗಳ ಬುಡಕ್ಕೆ ಕಾಂಕ್ರೀಟ್ ಸುರಿದು ಬೇರುಗಳಿಗೆ ಪೋಷಕಾಂಶ ಲಭ್ಯವಾಗದಿರುವುದು, ಇಲ್ಲಿಯ ಮಣ್ಣಿನಲ್ಲಿ ಸರಿಯಾಗಿ ಬೇರಿಳಿಸಲಾಗದ ಬೇರೆ ದೇಶಗಳ ಸಸ್ಯಗಳನ್ನು ನೆಟ್ಟಿರುವುದು ಮತ್ತು ಮಹಾನಗರಪಾಲಿಕೆಯವರು ಅಸಮತೋಲನ ಉಂಟಾಗುವ ರೀತಿಯಲ್ಲಿ ಮರದ ಟೊಂಗೆಗಳನ್ನು ಕಡಿಯುವುದು- ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಮರಗಳು ಉರುಳಿ ಅವಘಡಗಳಾಗುತ್ತಿವೆ.

ಮುಂಬೈನಲ್ಲಿ ಅರಬ್ಬಿ ಸಮುದ್ರವು ಸಾಕಷ್ಟು ಒಳನುಗ್ಗಿರುವುದರಿಂದ ಖಾಡಿಯ ಕಿನಾರೆಗಳಲ್ಲಿ ಕಾಂಡ್ಲಾ ವನ ಚೆನ್ನಾಗಿ ಬೆಳೆದಿದೆ. ಇದು ನೂರಾರು ಬಗೆಯ ಸ್ಥಳೀಯ ಮತ್ತು ಹೊರಗಿನ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ವಲಸೆ ಹಕ್ಕಿಗಳಲ್ಲಿ ಅಪರೂಪದ ಫ್ಲೆಮಿಂಗೋಗಳು ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಮುಂಬೈ ದರ್ಶನಕ್ಕೆ ಬರುತ್ತವೆ.

ಸುಮಾರು ಒಂದೂವರೆ ಮೀಟರ್ ಎತ್ತರದ ಮೂರ್ನಾಲ್ಕು ಕಿಲೋ ಭಾರದ ಈ ಪಕ್ಷಿಗಳನ್ನು ನೋಡುವುದೇ ಚಂದ. ಗಾಢ ಗುಲಾಬಿ ಬಣ್ಣದ ನೀಳ ಕಾಲುಗಳು ಮತ್ತು ಬಳಕುವ ಉದ್ದ ಕುತ್ತಿಗೆ, ಬಲಿಷ್ಟ ಮತ್ತು ತುದಿಯಲ್ಲಿ ಬಾಗಿರುವ ಕೊಕ್ಕು- ಎಲ್ಲಕ್ಕಿಂತ ಮುಖ್ಯವಾಗಿ ಹೋಳಿಹಬ್ಬದಲ್ಲಿ ಗುಲಾಲ್ ಎರಚಿದಂತೆ ಕಾಣುವ ಗರಿಬಣ್ಣ ಈ ಪಕ್ಷಿಗಳಿಗೆ ವಿಶಿಷ್ಟ ಸೌಂದರ್ಯವನ್ನು ನೀಡಿವೆ.  ಸಾವಿರಾರು ಸಂಖ್ಯೆಯ ಗುಂಪಿನಲ್ಲಿ ಜೀವಿಸುವ ಇವು ಗುಜರಾತಿನ ಕಛ್ ಭಾಗದಿಂದ ಜನವರಿ- ಏಪ್ರಿಲ್ ತಿಂಗಳಲ್ಲಿ ಮುಂಬೈಗೆ ವಲಸೆ ಬರುತ್ತವೆ.

ಸಮುದ್ರದಲ್ಲಿ ಇಳಿತ ಇದ್ದಾಗ ಮುಂಬೈನ ಹಳೆಯ ಬಂದರು ಶಿವ್ಡಿ-ಮಾಹುಲ್ ಭಾಗದಲ್ಲಿ ಮೈಲುಗಳಷ್ಟು ಉದ್ದದ ಸಮತಟ್ಟಾದ  ಕೆಸರು ನೆಲ ಗೋಚರಿಸುತ್ತದೆ.  ಫ್ಲೆಮಿಂಗೋ ಪಕ್ಷಿಗಳು ತಮ್ಮ ಉದ್ದ ಕೊಕ್ಕಿನಿಂದ ಕೆಸರನ್ನು ಜಾಲಾಡಿ ಅಲ್ಲಿರುವ ಸಣ್ಣಸಣ್ಣ ಶೆಟ್ಲಿ, ಹುಳಹುಪ್ಪಡಿ ಮತ್ತು ಅಲ್ಗೀ ಸಸ್ಯಗಳನ್ನು ತಿನ್ನುತ್ತವೆ. ಇವುಗಳ ಕೊಕ್ಕುಗಳಲ್ಲಿ  ಈ ಜೀವಿಗಳನ್ನು ಕೆಸರಿನಿಂದ ಪ್ರತ್ಯೇಕಗೊಳಿಸುವ ಜಾಳಿಗೆಯಂಥ ವ್ಯವಸ್ಥೆಯಿದೆಯಂತೆ. ಮುಸ್ಸಂಜೆಯ ಬೆಳಕಲ್ಲಿ ಇವು ಜೊತೆಯಲ್ಲಿ ಆಗಸಕ್ಕೆ ನೆಗೆದು ಸಾಲಿನಲ್ಲಿ ಹಾರುವ ದೃಶ್ಯ ಮೋಹಕವಾಗಿರುತ್ತದೆ. ಇವು ಮುಂಬೈಗೆ ಆಗಮಿಸಿದ ಸೀಸನ್ನಿನಲ್ಲಿ ಪಕ್ಷಿಪ್ರಿಯರು ಫ್ಲೆಮಿಂಗೋ ಫೆಸ್ಟಿವಲ್ ಕೂಡಾ ಆಚರಿಸುತ್ತಾರೆ. ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆ ಕಾಂಡ್ಲಾವನದೊಳಗೆ ಬೋಟ್ ಮೂಲಕ ಫ್ಲೆಮಿಂಗೋ ಸಫಾರಿ ಮಾಡಿಸುವ ಯೋಜನೆಯನ್ನೂ ಕೈಗೆತ್ತಿಕೊಂಡಿದೆ.

ಮುಂಬೈನ ಹೊರವಲಯದಲ್ಲಿ ನೂರು ಚದರ ಕಿಲೋಮೀಟರ್ ವಿಸ್ತೀರ್ಣದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ, ಡೇರಿ ಉದ್ಯಮಕ್ಕೆಂದು ಮೀಸಲಾಗಿಟ್ಟ ಆರೇ ಮಿಲ್ಕ್ ಕಾಲನಿಯ ಭೂಪ್ರದೇಶಗಳಲ್ಲಿ ಕಾಡುಪ್ರಾಣಿಗಳೂ ಸಾಕಷ್ಟಿವೆ. ಚಿರತೆಗಳ ಸಂಖ್ಯೆಯೂ ಸಾಕಷ್ಟಿವೆ. ಅವು ಅಪರೂಪಕ್ಕೆ ಸಿಟಿ ದರ್ಶನಕ್ಕೆಂದು ಕಾಡಿನಿಂದ ಹೊರಬರುತ್ತವೆ. ಇತ್ತೀಚೆಗೆ ಚಿರತೆಯೊಂದು ಹತ್ತಿರದ ಉಪನಗರ ಮುಲುಂಡ್‌ನಲ್ಲಿ ಗೃಹಪ್ರವೇಶ ಕಾರ್ಯಕ್ರಮ ಜರುಗಿಸಿ ಹೋಯಿತು. ಕಳೆದ ಬಾರಿ ಚಿರತೆಯೊಂದು ಪೊವೈಯಲ್ಲಿರುವ ಐಐಟಿ ಕ್ಯಾಂಪಸ್ಸಿನೊಳಗೆ  ರೌಂಡು ಹಾಕಿ ಹೋಗಿತ್ತು!

ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ ಗೋರೆಗಾಂವ್, ಕಾಂದಿವಲಿ, ಬೋರಿವಲಿ, ದಹಿಸರ್, ಭಾಂಡುಪ್,ಪೊವಯಿ ಉಪನಗರಗಳು ಕಂಡಾಪಟ್ಟೆ ಬೆಳೆದು ಅವು ಪಾರ್ಕಿಗೆ ಒತ್ತುತ್ತಾ ಬೆಳೆಯುತ್ತಿರುವುದರಿಂದ ತಮ್ಮ ಸ್ವಕ್ಷೇತ್ರವನ್ನು ಅತಿಕ್ರಮಿಸುತ್ತಿರುವುದು ಈ ಪ್ರಾಣಿಗಳಿಗೆ ಇಷ್ಟವಿಲ್ಲ. ಮುಂಬೈನಂಥ ಮುಂಬೈನಲ್ಲಿ ಸ್ವಲ್ಪ ಓಪನ್ ಪ್ಲೇಸು ಸಿಕ್ಕರೂ ಸಾಕು, ಅಲ್ಲಿ ಸ್ಲಮ್ ಬೆಳೆದು ಬಿಡುತ್ತದೆ. ನಂತರ ಅವುಗಳ ರೀಡೆವೆಲಪ್‌ಮೆಂಟ್ ಹೆಸರಲ್ಲಿ ಅಪಾರ್ಟುಮೆಂಟುಗಳು ತಲೆಯೆತ್ತುವುದು ಸಾಮಾನ್ಯವಾಗಿದೆ. ಅಲ್ಲೆಲ್ಲ ಚೆಲ್ಲಿದ ಕಚರಾಗಳಲ್ಲಿ ಅಲೆದಾಡುವ ಬೀಡಾಡಿ ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಬೆಟ್ಟದಿಂದ ಇಳಿದು ಬರುತ್ತವೆ. ಈ ಚಿರತೆಗಳ ದಾಳಿಗೆ ಹಲವರು ಬಲಿಯಾಗಿದ್ದಾರೆ ಕೂಡ.

ನಾವು ಗ್ರೀನ್ ಸಿಟಿಗಳ ಉದ್ಯಾನ ನಗರಿಗಳ ಬಗ್ಗೆ ಕೇಳಿರಬಹುದು. ಆದರೆ ಸನಿಹದಲ್ಲೇ ಇಂಥ ನಗರಾರಣ್ಯ ಹೊಂದಿರುವ ವಿಶ್ವದ ಮಹಾನಗರಗಳು ಅಪರೂಪವೆ!  ವಿಶಿಷ್ಟ ಸಸ್ಯಗಳು, ಪಕ್ಷಿಗಳು, ಚಿಟ್ಟೆಗಳು,ಕಾಡುಪ್ರಾಣಿಗಳೂ ಇರುವಂಥ ಪ್ರದೇಶವನ್ನು ತನ್ನ ಪಕ್ಕದಲ್ಲೆ ಹೊಂದಿರುವುದು ಅಮ್ಚಿ ಮುಂಬೈನ ಹೆಗ್ಗಳಿಕೆ! ಆದರೆ ಇಂಥ ಆರಕ್ಷಿತ ಪ್ರದೇಶಗಳ ಅಕ್ರಮ ಒತ್ತುವರಿ, ಮೆಗಾ ಕಾಮರ್ಸ್ ಸೆಂಟರಗಳ ಹೆಸರಲ್ಲಿ ಗ್ರೀನ್ ಝೋನ್ ಅನ್ನೂ ಕೂಡ ಡೆವೆಲಪಮೆಂಟ್ ಝೋನ್ ಆಗಿ ಪರಿವರ್ತಿಸುವ ರಿಯಲ್ ಎಸ್ಟೇಟ್ ಕುಳಗಳು, ಭ್ರಷ್ಟ ಅಧಿಕಾರಿಗಳ ದುಷ್ಟ ಹುನ್ನಾರಗಳಿಂದಾಗಿ ಇದೆಷ್ಟು ದಿನಗಳ ಭಾಗ್ಯವೋ ಗೊತ್ತಿಲ್ಲ.

ಕಳೆದ ಜನವರಿ ತಿಂಗಳಲ್ಲೂ ಹೆಬ್ಬಾವೊಂದು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಸರಕಾರಿ ಕಾರ್ಯಾಲಯಗಳೂ ಪ್ರಸಿದ್ಧ ಕಾರ್ಪೊರೇಟ್ ಆಫೀಸುಗಳೂ ಇರುವ, ಸದಾ ಚಟುವಟಿಕೆಗಳಿಂದ ಕೂಡಿರುವ ಜಾಗವಾದ ಬಿಕೆಸಿಗೆ ಆ ಹೆಬ್ಬಾವು ಬಂದಿರುವುದು ನಿಗೂಢವಾಗಿದೆ. ಆರ್ಭಟದದಿಂದ ನಡೆಯುತ್ತಿರುವ  ಕೊಲಾಬಾ-ಬಾಂದ್ರಾ-ಸೀಪ್ಜ್ ಮೆಟ್ರೊ ಕೆಲಸದಿಂದ ದಿಕ್ಕುತಪ್ಪಿ ಮಿಥಿನದಿ ದಾಟಿ ತೆವಳುತ್ತಾ ಇಂಟರ್ನೆಟ್ ಕೇಬಲ್ಲುಗಳನ್ನು ಸಾಗಿಸುವ ಪೈಪ್ ಮೂಲಕ ಬಂತಂತೆ! ಸೀರಿಯಲ್ಲು ಮತ್ತು ಸಿನಿಮಾಗಳಲ್ಲಿ ನಾಗಿನ್‌ಗಳನ್ನು ಆಟ ಆಡಿಸುತ್ತಿರುವ ಇಂದಿನ ಡಿಜಿಟಲ್ ಜಮಾನಾದಲ್ಲಿ, ಉರಗವೊಂದು ಹೈ ಸ್ಪೀಡ್ ಡಾಟಾ ಒಯ್ಯುವ ಕೇಬಲ್ಲುಗಳ ಮೂಲಕ ತೆವಳುತ್ತಾ ಬಾಗಿಲ ವರೆಗೂ ಬಂದಿರುವುದು ಒಂದು ರೂಪಕವಾಗಿ ಕಾಡುತ್ತಿದೆ!

***

 

 

 

 

‍ಲೇಖಕರು Avadhi GK

February 17, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shridhar Nayak

    ಮುಂಬೈನ ಜನಜಂಗುಳಿ ,ವಾಹನ ದಟ್ಟಣೆಯ ಬಗ್ಗೆ ಕೇಳಿದ್ಧೆ. ಆದರೆ ಅಲ್ಲಿನ ಜೀವ ವೈವಿಧ್ಯದ ಕುರಿತು ಈ‌ ಲೇಖನ ಬೆಳಕು ಚೆಲ್ಲಿತು.

    ಪ್ರತಿಕ್ರಿಯೆ
  2. Shyamala Madhav

    ತುಂಬ ಖುಶಿಯಾಯ್ತು ರಾಜೀವ್. ನಿಜ, ಜೀವ ವೈವಿಧ್ಯ ಮತ್ತು ಬಾಹುಳ್ಯದಲ್ಲಿ ನಮ್ಮ ಮುಂಬೈಗೆ ಸಮನಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: