‘ಪೆಪ್ಸಿ’ ಬಾಟಲ್ ನೊಳಗೆ..

ಈ ಪದ್ಯ ನೀರಿನ ಪವಿತ್ರ ರೂಪದಿಂದ ಇಲ್ಲಿಯವರಗಿನ ಅದರ Transition ನ್ನು ಕುರಿತು ಸೊಗಸಾಗಿ ಹೇಳುತ್ತದೆ :

ನೀರೆಂಬ ಸರ್ವಜ್ಞ

ತೆಲುಗು  ಮೂಲ : ಚೆಲ್ಲಪಳ್ಳಿ ಸ್ವರೂಪ ರಾಣಿ

ಕನ್ನಡಕ್ಕೆ : ಶಿವಕುಮಾರ್ ಮಾವಲಿ
—————————— —————
ನೀರಿಗೆ ಭೂಮಿಯ ಇಳಿಜಾರುಗಳ ಪರಿಚಯವಿದ್ದಂತೆಯೇ,
ಹಟ್ಟಿ ಮತ್ತು ಹಳ್ಳಿಗರ ನಡುವಿನ ‘ತಲೆಮಾರುಗಳ ತಿಕ್ಕಾಟ’ದ
ಪರಿಚಯವೂ ಇದೆ.
ಬಾವಿಯಂಚಿನ ಎಂದೂ ಬತ್ತದ ತೇವದಂತೆ
ಅಸ್ಪ್ರಶ್ಯತೆಯು ಎಂದೆಂದೂ ಮರೆಯಾಗಲಾರದೆಂದು ನೀರಿಗೆ ಅರಿವಿದೆ.

ನೀರಿಗೆ ಎಲ್ಲವೂ ತಿಳಿದಿದೆ ;
ಸಮಾರಿಯಾ ಹೆಂಗಸು ಮತ್ತು ಯಹೂದಿ ಕ್ರೈಸ್ತ ನ ವಂಶಗಳ ನಡುವಿನ ಅಂತರ,
ಚಕ್ಕಳ ಮತ್ತು ಗಾಲಿ ಯ ನಡುವಿನ ಉಪಜಾತಿಗಳ ಅಂತರ,

ನೀರಿಗೆ ಎಲ್ಲವೂ ಅರಿವಿದೆ ;
ಒಂದು ಬಿಂದಿಗೆ ನೀರು ಪಡೆಯಲು ಹಕ್ಕಿಲ್ಲದೆ ಪರದಾಡಿದ ಪಂಚಮನ ಯಾತನೆ,
ಆತ ಹೇಗೆ ಒಂದಿಡೀ ದಿನ
ಬಾವಿಕಟ್ಟೆಯ ಬಳಿ ಖಾಲಿ ಕೊಡ ಹಿಡಿದು
ಶೂದ್ರನೋರ್ವ ಆ ದಾರಿಯಲ್ಲಿ ಬರುವವರೆಗೂ ಹೇಗೆ ಕಾದಿರುತ್ತಿದ್ದನೆಂದು.

ಹಟ್ಟಿಯ ಹುಡುಗಿಯೋರ್ವಳ ಬೊಗಸೆಗೆ ಶೂದ್ರನೋರ್ವ ಅಂತರದಿಂದ ನೀರು ಸುರಿಯುವಾಗ,
ಆ ನೀರೆಲ್ಲ ಅವಳ ಮೈಮೇಲೆ ಚೆಲ್ಲಿ ಅವಳಿಗಾದ ಅವಮಾನವೂ ನೀರಿಗೆ ನೆನಪಿದೆ.

ನೀರಿಗೆ ಅರಿವಿದೆ ;
ಕೊಳದ ನೀರು ಮುಟ್ಟಿ ಅಪವಿತ್ರಗೊಳಿಸದಂತೆ
ಜಮೀನ್ದಾರರು ಆದೇಶಿಸಿದಾಗ ಅದರ ಸಿಡಿದೆದ್ದ
ಕರಮಛೇದು ಸುವಾರ್ತಮ್ಮಳ ಕೋಪ ಎಷ್ಟು ನ್ಯಾಯಸಮ್ಮತವಾದುದೆಂದು .

ಶತಶತಮಾನಗಳ ಸಾಮಾಜಿಕ ಅನ್ಯಾಯಗಳಿಗೆಲ್ಲ
ನೀರೇ ಮೂಕ ಸಾಕ್ಷಿಗಾರ.

ಈಗಲೂ ನೀರು ನೋಡಿದಾಗ ನೆನಪಾಗುತ್ತದೆ ;
ಒಂದು ಲೋಟ ನೀರಿಗಾಗಿ ಹೇಗೆ ನನ್ನ
ಹಟ್ಟಿ ಮಂದಿಯೆಲ್ಲ   ಒಂದಿಡೀ ದಿನ ಕಾದಿರುತ್ತಿದ್ದೆವೆಂದು.

ನೀರೆಂಬುದು ನಮ್ಮ ಪಾಲಿಗೆ ಕೇವಲ H2O ಅಲ್ಲ
ಅದೊಂದು ದೊಡ್ಡ ಕ್ರಾಂತಿಯೇ ಸರಿ .
ಅದು ಚಾದರ್ ಟ್ಯಾಂಕ್ ಬಳಿಯ ‘ಮಹದ್ ನ ಹೋರಾಟ’ವೇ ಆಗಿರಬಹುದು.
ನಮಗೆ ಸಿಕ್ಕ ಒಂದು ಹನಿ ನೀರು ಕೂಡ
ತಲೆಮಾರುಗಳಲ್ಲಿ ಹರಿದ ಕಣ್ಣೀರಿನಿಂದ ರೂಪಿತವಾಗಿದೆ.
ಒಂದೊಂದು ಹನಿ ನೀರಿಗಾಗಿ ನಾವು ನಡೆಸಿದ ಎಷ್ಟೋ ಹೋರಾಟಗಳಲ್ಲಿ ನಮ್ಮ ರಕ್ತ
ಪ್ರವಾಹದಂತೆ ಹರಿದು ಹೋಗಿದೆಯೇ ಹೊರತು
ಸಣ್ಣದೊಂದು ಹೊಂಡದಷ್ಟೂ ನೀರು
ಕೂಡ ನಮಗೆ ದಕ್ಕಲಿಲ್ಲ.

ನೀರು ನೋಡಿದೊಡನೆ ನನಗೆ ನೆನಪಾಗುತ್ತದೆ ;
ಊರೊಳಗಿನ ಮರ್ಯಾದಸ್ಥರು ದಿನಕ್ಕೆರಡು ಬಾರಿ
ಐಷಾರಾಮಿ ಸ್ನಾನ ಮಾಡುತ್ತಿದ್ದರೆ ,
ಹಟ್ಟಿಯೊಳಗಿನ ನಾವು, ನಮ್ಮ ‘ ವಾರದ ಸ್ನಾನ’ ವನ್ನು
ಒಂದು ದೊಡ್ಡ ಸಂಭ್ರಮದ ಹಬ್ಬದಂತೆ ಸ್ವಾಗತಿಸುತ್ತಿದ್ದುದು.

ನೀರು ನೋಡಿದಾಗಲೆಲ್ಲ ನನಗೆ ನನ್ನ ಬಾಲ್ಯ ನೆನಪಾಗುತ್ತೆ,
ಆಗೆಲ್ಲ ಮೈಲಿಗಟ್ಟಲೆ ದೂರ ನಡೆದು,
ದೊಡ್ಡ ಕಾಲುವೆಗಳನ್ನು ತಲುಪಿ,
ಅಲ್ಲಿಂದ ದೊಡ್ಡ ಕೊಡಗಳಲ್ಲಿ ನೀರು ಹೊತ್ತು ಬರುವಾಗ,
ನಮ್ಮ ಕತ್ತಿನ ಸ್ನಾಯು ಮತ್ತು ರಕ್ತನಾಳಗಳು
ಪ್ರಯಾಸಗೊಂಡು ಆಸ್ಪೋಟಿಸುತ್ತಿದ್ದವು.

ನನಗೆ ನೆನಪಾಗುತ್ತೆ ;
ಒಂದು ಬಿಂದಿಗೆ ನೀರು ಬೇಕೆಂದದ್ದಕ್ಕೆ
ಮಲಪಲ್ಲೆ ಎಂಬ ಹಳ್ಳಿಯ ಗುಡಿಸಲಿನ
ಮಾಡುಗಳು ಸುಟ್ಟು ಭಸ್ಮವಾದುದು.

ನೀರೆಂಬುದೇನು ಸಾಮಾನ್ಯ ಸಂಗತಿಯಲ್ಲ !
ಅದು ಜೀವದಾನ ಮಾಡುವ ಅಮೃತವೂ ಹೌದು. ಜೀವಿಗಳನ್ನು ತಿಂದುಹಾಕಿಬಿಡುವ ತಿಮಿಂಗಲವೂ ಹೌದು.
ಯಾವ ನೀರು ದಮನಿತರ ದಾಹ ನೀಗಲು ನಿರಾಕರಿಸಿತ್ತೋ
ಅದೇ ನೀರು ಸುನಾಮಿ ಅಲೆಗಳ ರೂಪದಲ್ಲಿ ಕೊಲೆಗಾರನಾಗಿ ಒಂದಾದ ಮೇಲೊಂದು ಹಳ್ಳಿಗಳನ್ನು ನುಂಗಿ ಹಾಕಿತು.

ಬಡವರ ಇದರ ದುಷ್ಟ ಕೈಗಳಲ್ಲಿ ಆಟಿಕೆಗಳಾಗಿರುವುದು ಕಟು ಸತ್ಯ.
ಒಮ್ಮೊಮ್ಮೆ ಇದು ಹಕ್ಕುಗಳನ್ನು ಒಣ ಮರುಭೂಮಿಯಾಗಿಸುತ್ತೆ
ಮತ್ತೆ ಕೆಲವೊಮ್ಮೆ ಪ್ರವಾಹದಲ್ಲಿ ಮುಳುಗಿಸಿ ಕೊಲ್ಲುತ್ತದೆ.

ಹಳ್ಳಿ ಮತ್ತು ಹಟ್ಟಿಯ ನಡುವೆ
ರಾಜ್ಯ -ರಾಜ್ಯಗಳ ನಡುವೆ
ಈ ನೀರು ಹೋರಾಟ,ಸೆಣಸಾಟ ಗಳ ಕಿಡಿ ಹೊತ್ತಿಸಿ
ರಕ್ತದ ಪ್ರವಾಹವನ್ನೇ ಹರಿಸಬಲ್ಲದು.
ಅಲ್ಲದೆ ಮೌನಿಯಂತೆ ಸುಮ್ಮನೆ
‘ಬಿಸಲೇರಿ ಬಾಟಲ್’ ನಲ್ಲಿಯೂ ಕೂರಬಲ್ಲದು.

ನಮ್ಮ ಹಳ್ಳಿ ಬಾವಿಯ ಈ ನೀರು
ನಮ್ಮಿಂದ ಎಂಥೆಂಥವೋ ಸರ್ಕಸ್ ಗಳನ್ನು ಮಾಡಿಸಿ,
ಈಗ ನಿಧಾನಕ್ಕೆ ನಮಗೆ ವಂಚಿಸಿ
‘ಪೆಪ್ಸಿ ‘ ಬಾಟಲ್ ನೊಳಗೆ ನಿತ್ಯ ನರ್ತಿಸತೊಡಗಿದೆ.
ತನ್ನ ನವನಾಮ ‘ಮಿನರಲ್ ವಾಟರ್ ‘ ನಿಂದಾಗಿ ಇದು ಆಕಾಶದೆತ್ತರಕ್ಕೆ ಏರಿ, ಬಿರುಗಾಳಿಯನ್ನೇ ಎಬ್ಬಿಸಿದೆ.

ನೀರು, ಈಗ ಕೇವಲ ನೀರಾಗಿ
ಒಂದು ಕ್ಷುದ್ರ ವಿಷಯವಾಗಿ ಉಳಿದಿಲ್ಲ.
ಅದೊಂದು ಬಹುರಾಷ್ಟ್ರೀಯ ಕಂಪನಿಗಳ ಮಾರುಕಟ್ಟೆ ಸರಕು.

ಇದು ಬಲ್ಲವರ ಭಿನ್ನಹ
ನೀರೆಂಬುದು ಸರ್ವಜ್ಞ.
ಇಡೀ ಜಗತ್ತನ್ನೇ ಅದು ಅರಿತಿದೆ ಮತ್ತು ಒಳಗೊಂಡಿದೆ.

‍ಲೇಖಕರು admin

January 16, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: