ಪೆದ್ದುರಾಮನ ಹುಚ್ಚಿನ ಕಥೆ

ರವಿಶಂಕರ ಪಾಟೀಲ

ರಾಮನಿಗೆ ಅರ್ಥಾತ್ ಪೆದ್ದುರಾಮನಿಗೆ ಹುಚ್ಚು ಹಿಡಿದಿರಬೇಕೆಂದು ಊರವರ ಸಂಶಯ ಕಳೆದ ವಾರದಿಂದ. ಒಬ್ಬೊಬ್ಬನೇ ತಿರುಗುತ್ತಾನೆ. ರಸ್ತೆ ಬದಿಯ ಕಲ್ಲುಗಳನ್ನು ಜೋಡಿಸುತ್ತಿರುತ್ತಾನೆ. ಒಂದು ಸುತ್ತಿಗೆಯಿಂದ ಕಲ್ಲುಗಳನ್ನೆಲ್ಲಾ ಒಡೆಯುತ್ತಿರುತ್ತಾನೆ. ಯಾಕೆಂದರೆ ಯಾಕೋ ಒಬ್ಬನೇ ಅಲೆಯುತ್ತಿರುತ್ತಾನೆ.

ಮಿಲಿಟರಿ ಕೆಲಸದಿಂದ ನಿವೃತ್ತನಾಗಿ ಊರಿಗೆ ಬಂದು ಆರು ತಿಂಗಳಾಗಿರಲಿಲ್ಲ ರಾಮ ಹೀಗೆಲ್ಲಾ ಆಡಹತ್ತಿದ್ದನು. ‘ಅದು ಹೇಗೆ ಮಿಲಿಟರಿಯಲ್ಲಿ ಲೆಕ್ಕ ಬರೆವ ಎಸ್ ಡಿ ಎ ಕೆಲಸ ನಿರ್ವಹಿಸಿದನೋ ಈ ವಯ್ಯ?’ ಎನ್ನುವುದು ಊರವರ ಪ್ರಶ್ನೆ. ಹೀಗಿರುವಾಗ ಗಾಢಾಂಧಕಾರದ ರಾತ್ರಿ ರಾಮನಿಗೆ ಚಳಿಜ್ವರ, ನೆಗಡಿ, ಕೈಕಾಲು ನೋವು, ಸೊಂಟನೋವು ಎಲ್ಲವೂ ಬಂದುಬಿಟ್ಟವು. ಪೆದ್ದುರಾಮ ರಾತ್ರಿಯೆಲ್ಲಾ ಚಳಿಜ್ವರದಲ್ಲಿ ನಡುಗಲು ಶುರುಮಾಡಿದ.

ಹೆಂಡತಿ ಕೇಳಿದರೆ ಸಿಟ್ಟಿಗೇಳುವುದು; ಮನೆಯವರು ಕೇಳಿದರೆ ಹಾ ಹೂ ಎನ್ನುವುದು ಮಾಡತೊಡಗಿದ. ತನಗೆ ಬಂದಿರುವುದು ಅಂತಿಂಥಾ ಖಾಯಿಲೆಯಲ್ಲ ಎನ್ನುವ ಭಯ ಅವನಿಗೆ. ಅದೇ ಕಾಲಕ್ಕೆ ಸರಿಯಾಗಿ ಇಡೀ ಜಗತ್ತನ್ನೇ ಕಾಡುವ ಖಾಯಿಲೆ ವಿಶ್ವದಾದ್ಯಂತ ಹಬ್ಬಿಕೊಂಡಿತ್ತು; ಕೊರೊನಾ.

ಕೊರೊನಾ ಖಾಯಿಲೆಗೆ ಇಡೀ ಜಗತ್ತೇ ತಲ್ಲಣಗೊಂಡಿತ್ತು ಆಗ. ಊರೆಂದರೆ ಊರಲ್ಲೆಲ್ಲಾ ಏನು? ಇಡೀ ದೇಶವೇ ಲಾಕ್ ಡೌನ್‍. ದೇಶವೇ ಏಕೆ ಇಡೀ ಜಗತ್ತೇ ಲಾಕ್ ಡೌನ್‍ ಆಗಿತ್ತು! ಎಲ್ಲೆಂದರಲ್ಲಿ ಕರ್ಫ್ಯೂ ರೆಡ್ ಝೋನ್‍, ಬಂದ್‍ ಎಂಬಂತಹ ಸನ್ನಿವೇಶವಿತ್ತು. ಅಲ್ಲದೇ ಕೊರೊನಾ ವೈರಸ್ಸಿಗೆ ಇಡೀ ಜಗತ್ತಿನಲ್ಲಿ ಯಾವ ದೇಶದವರೂ ಔಷಧಿ ಕಂಡುಹಿಡಿದಿರಲಿಲ್ಲ. ಹೀಗಾಗಿ ರಾತ್ರಿ ಬಂದಿದ್ದ ಚಳಿಜ್ವರಕ್ಕೆ ಪೆದ್ದುರಾಮ ಹೆದರಿದನೆಂದರೆ ವಿಪರೀತ ಹೆದರಿಬಿಟ್ಟಿದ್ದ. ಕೊರೋನಾ ಖಾಯಿಲೆಯಿದ್ದವರಿಗೆ ಕಂಡುಬರುವ ಚಳಿಜ್ವರ, ಕೆಮ್ಮು, ನೆಗಡಿ ಎಲ್ಲವೂ ಅವನಿಗೂ ಬಂದಿದ್ದವು.

ಯಾರಿಗೂ ಗೊತ್ತಾಗದ ಹಾಗೆ ಬೆಳಗ್ಗೆ ಹತ್ತರ ಸುಮಾರಿಗೆ ಬಿಎಚ್‍ಎಂಎಸ್ ಡಾಕ್ಟರ್ ಸದಾಶಿವ ರ ಹತ್ತಿರ ಹೋಗಿ ಸೂಜಿ ಚುಚ್ಚಿಸಿಕೊಂಡು ಬಂದಿದ್ದ. ಚೂರೆಂದರೆ ಚೂರೂ ಇಳಿದಿರಲಿಲ್ಲ ಅವನ ಜ್ವರ; ಭಯಭೀತನಾದ ರಾಮ ಮರುದಿನ ಬಿಟ್ಟು ಮತ್ತೆ ಸದಾಶಿವ ಡಾಕ್ಟರರ ಹತ್ತಿರ ಹೋಗಿ ದೂರದಿಂದಲೇ ಜ್ವರವನ್ನು ತೋರಿಸಿ ಮತ್ತೆರಡು ಇಂಜಕ್ಷನ್‍ಗಳನ್ನು ಹಾಕಿಸಿಕೊಂಡು ಬಂದ.

ನಾಲ್ಕಾರು ದಿನಗಳಾದರೂ ಜ್ವರ ಬಿಡುವ ಲಕ್ಷಣಗಳು ತೋರಲಿಲ್ಲ. ರಾತ್ರಿಯೆಲ್ಲಾ ಭಯಭೀತನಾಗಿ ಎದ್ದು ಕೂರತೊಡಗಿದ. ಯಾರಾದರೂ ಹತ್ತಿರ ಬಂದರೆ ದೂರ ಸರಿದು ಕೂಡಲಾರಂಭಿಸಿದ. ಯಾರಾದರೂ ಏಕೆ? ತನ್ನ ಹೆಂಡತಿಯೇ ಎದುರು ಬಂದರೂ ಆ ಕಡೆ ತಿರುಗಿ ಕೂಡಲಾರಂಭಿಸಿದ. ಆಕೆ ಕೋಪ ಮಾಡಿಕೊಂಡು ಅಲ್ಲಿಂದ ಹೋಗುವಳು. ಒಂದು ದಿನ ರೇಗಿ ಮನೆಯವರ ಮೇಲೂ ಯುದ್ಧ ಹೂಡಿಬಿಟ್ಟ ರಾಮ. ಏನು ಸಿಕ್ಕುವುದೋ ಅದರಿಂದ ಎಸೆಯತೊಡಗಿದ. ಉರುಳಾಡತೊಡಗಿದ; ಹೊರಳಾಡತೊಡಗಿದ. ಈಗ ಊರ ಜನರಿಗೆ ಪೂರ್ತಿ ಖಾತರಿಯಾಗತೊಡಗಿತ್ತು…

ಸರಿ; ಪೆದ್ದುರಾಮನಿಗೆ ತಲೆಕೆಟ್ಟಿರುವುದು ಈಗ ಅವರಿಗೆ ಇನ್ನೂ ಖಚಿತವಾಗತೊಡಗಿತ್ತು. ಆತ ತನ್ನನ್ನು ಹುಚ್ಚೆಂದು ಅಂದುಕೊಂಡರೂ ಪರವಾಗಿಲ್ಲ; ಆದರೆ ತನಗೆ ಬಂದಿರುವ ಖಾಯಿಲೆಯ ವಿಷಯ ಮಾತ್ರ ಯಾರಿಗೂ ಗೊತ್ತಾಗ ಕೂಡದೆಂಬಂತೆ ಹುಚ್ಚುಚ್ಚರಾಗಿ ಆಡಲು ಶುರುಮಾಡಿದ.

‘ಏಯ್… ನಿನ್ನ ಮಾರಿ ಮಣ್ಣಾಗಡಗಲಿ ಹಿಂಗ್ಯಾಕಾಡಾಕತ್ತೇದಿ ಹುಚನಿಂಗ್ಯಾಗೋಳ್ ಗತೆ… ಕಲ್ಲ ವಡ್ಯೂದು, ನಿಕ್ಕರಮ್ಯಾಗ ಹಾದಿಮ್ಯಾಗ ನಿಲ್ಲೂದು ಹಾ ಹೂ ಅಂತ ಸುಕದ್ದ ಚೀರೂದೂ ಮಾಡಾಕತ್ತಿ… ನಮ್ಮ ಮಾನಾನೂ ತಗ್ಯಾಕತ್ತೀ; ನಿನ್ನ ಮಾನಾನೂ ಹಾಳ ಮಾಡಕೋಳಾತದಿ; ನಿನ್ನ ಮಾರಿ ಮಣ್ಣಾಗಡಗಲಿ; ನಿನ್ನ ಹೆಣಾ ಎತ್ತಲಿ’ ಎಂದು ಅವನವ್ವ ಅವನಿಗೆ ಛೀಮಾರಿ ಹಾಕಿದ್ದಳು.

ಅವನಿಗೆ ಒಂದೆರಡು ತದುಕಲು ಕೈಯೆತ್ತಿ ಅವನಿಗೆ ಗುದ್ದಲಣಿಯಾದರೆ ಪ್ರತಿಯಾಗಿ ರಾಮ ಧಡಾರನೇ ಝಾಡಿಸಿ ಒದ್ದುಬಿಟ್ಟ ತನ್ನ ತಾಯಿಯ ಬೆನ್ನಿಗೇ! ತಾಯಿ ನೀಲವ್ವ ಬೀಸೂಕಲ್ಲು ಟೀವಿ ಟೇಬಲ್ಲು ಮಧ್ಯಕ್ಕೆ ಹೋಗಿ ದಪ್ಪನೆಂದು ಬಿದ್ದು ಬಿಟ್ಟಳು. ಇದನ್ನೆಲ್ಲಾ ನೋಡುತ್ತ ನಿಂತಿದ್ದ ತಮ್ಮ ಲಕ್ಷ್ಮಣ ಕೈಗೆ ಸಿಕ್ಕ ಕಟ್ಟಿಗೆಯಿಂದ ಇವನ ಬೆನ್ನಿಗೊಂದು ಇಕ್ಕಿದ. ‘ಯಪ್ಪಾ ಸತ್ನ್ಯೋ… ಇವರೆಲ್ಲಾ ಸೇರಿ ನನ್ಕೊಂದ್ರೋ… ನನಗ ಹುಷಾರಿಲ್ಲಂದ್ರೂ ತನ್ನ ದಾದ ಮಾಡವಲ್ರೋ…’ ಎಂದು ಹಾಡ್ಯಾಡಿಕೊಂಡು ಅಳಹತ್ತಿದ.

‘ಈ ಬೋಳೀಮಗ ನಮ್ಮ ಕಿಮ್ಮತ್ತ ತಗ್ಯಾಕ ಬಂದಾನಿಲ್ಲಿ ಹಾದರಗಿತ್ತೀ ಮಗ… ಅತ್ತ ಮಿಲ್ಟ್ರೀ ಬಾಡರ್ ದಾಗ ಬಿದ್ದ ಸತ್ತಿದ್ರ ಭಾಳ್ ಚಲೂಯಿತ್ಲಾ ಇವನೌನ್’ ಎಂದು ಬೈದರು ಅವರು.

ಈ ಬೆಟ್ಟಗುಡ್ಡ ಕಾಡುಮೇಡು ನದಿ ಸಮುದ್ರಗಳ ಮಧ್ಯದಲ್ಲಿ ಲೆಕ್ಕ ಬರೆವ ಕೆಲಸಕ್ಕಿಂತ ತನ್ನ ಊರಲ್ಲಿದ್ದ ಹೊಲದಲ್ಲಿ ದುಡಿಮೆ ಮಾಡಿ ಜೀವನ ನಡೆಸುತ್ತಿದ್ದ ಕೆಲಸ ಎಷ್ಟೋ ವಾಸಿ ಎನ್ನಿಸಿತ್ತು. ಮಿಲಿಟರಿ ಕೆಲಸಕ್ಕೆ ಸೇರಿದ್ದ ಆರಂಭದ ದಿನಗಳಲ್ಲಿ ರಾಮನಿಗೆ; ಮದ್ದುಗುಂಡು, ತುಪಾಕಿ ಸದ್ದು, ರಕ್ತಸಿಕ್ತ ದೇಹಗಳು ಇವನ್ನೆಲ್ಲಾ ನೋಡಿ ಊರಲ್ಲಿ ಭದ್ರವಾಗಿ ಇರುತ್ತಿದ್ದ ತನ್ನ ಜನರ ಮೇಲೆ ಕೋಪವುಕ್ಕಿ ಬರುತ್ತಿತ್ತು ಅವನಿಗೆ. ಹೇಗೋ ಹದಿನೈದು ವರ್ಷಗಳ ಸೇವೆ ಮುಗಿಸಿದರೆ ಸರ್ಕಾರವೇ ನಿವೃತ್ತಿ ನೀಡಿ ಕಳುಹಿಸಿ ಬಿಡುತ್ತದೆ. ಊರಲ್ಲಿ ತಾನು ನೆಮ್ಮದಿಯಿಂದ ಕಾಲ ಕಳೆಯಬಹುದೆಂಬಂತೆ ಲೆಕ್ಕ ಹಾಕಿಕೊಂಡಿದ್ದ ಅವನು. ನಿವೃತ್ತಿಯೇನೋ ಆಯಿತು; ಊರಿಗೆ ಬಂದಿದ್ದೂ ಆಯಿತು. ಆದರೆ ಊರಲ್ಲಿ ಅವನನ್ನು ಮಾತನಾಡಿಸುವ ನರಪಿಳ್ಳೆಯೂ ಇಲ್ಲ.

ಯಾರೆಂದರೆ ಯಾರೂ ಅವನ ಸನಿಹ ಬರಲೊಲ್ಲರು. ಎಲ್ಲರೂ ಇವನಿಂದ ಹರದಾರಿ ದೂರ ಹಾದು ಹೋಗುತ್ತಿದ್ದರು. ಇವನ ಮಾತು ಮೌನಗಳಿಗೆ ಕ್ಯಾರೇ ಎನ್ನದೇ ಮಗ್ಗಲು ಹಾದು ಹೋಗ ತೊಡಗಿದ್ದರು ಊರ ಜನ. ಹೀಗಿರುವಾಗ ರಾಮನಿಗೆ ಇನ್ನಷ್ಟು ತಬ್ಬಲಿತನ ಕಾಡತೊಡಗಿತ್ತು. ಪಿಡಿಎಫ್ ಫಂಡು, ಅದೂ ಇದೂ ಅಂತಾ ಬಂದಿದ್ದ ಲಕ್ಷಾಂತರ ರೂಪಾಯಿಗಳಲ್ಲಿ ಚಂದದೊಂದು ಮನೆಯನ್ನು ಕಟ್ಟಿಸಿಕೊಂಡ. ಆದರೇನುಮಾಡುವುದು? ಯಾರೂ ಅವನ ಹತ್ತಿರ ಬರಲೊಲ್ಲರು; ದೂರದಿಂದಲೇ ನಕ್ಕಂತೆ ಮಾಡಿ ಹೋಗಿಬಿಡುತ್ತಿದ್ದರು.

ಬದುಕಿಗೆ ತಾನೆಷ್ಟು ನಿಷ್ಠನೋ ಅಷ್ಟು ಬದುಕು ತನಗೆ ನಿಷ್ಠವಿಲ್ಲವೆಂಬ ಸಂಶಯ ಮೂಡಲಾರಂಭಿಸಿತ್ತು ಅವಗೆ. ಮಿಲಿಟರಿಯಲ್ಲೇ ಚೆನ್ನಾಗಿತ್ತು ಎಂದು ಬೇರೆ ಅನ್ನಿಸತೊಡಗಿತ್ತು ಒಮ್ಮೊಮ್ಮೆ. ಇದ್ದೂ ಇಲ್ಲದಂತಾಗತೊಡಗಿತ್ತು ನಿವೃತ್ತಿಯ ಬದುಕು ಪೆದ್ದುರಾಮನಿಗೆ. ಹದಿನೈದು ವರ್ಷಗಳ ಅನಂತರ ಅಷ್ಟು ಸುಲಭಕ್ಕೆ ಯಾರೂ ಅವನನ್ನು ನಂಬುವ ಹಾಗೆಯೂ ಇರಲಿಲ್ಲ.

ನಿಧಾನಕ್ಕೆ ವಿಶ್ವಾಸ ಪಡೆದು ಬಾಲ್ಯದ ಆ ಹಳಹಳಿಕೆ ಹಾಸ್ಯ ವಿನೋದ ಮೂಡಿ ಬರಬೇಕೆಂದರೆ ಮತ್ತೆ ಹದಿನೈದು ವರ್ಷಗಳಷ್ಟು ಕಾಯಬೇಕೇನೋ? ಅಲ್ಲಿಗೆ ತಾನು ಮುದಿಯನಾಗಿ ಬಿಟ್ಟಿರುತ್ತೇನೆ. ಆಮೇಲೆ ಯಾರು ಹೊಂದಿಕೊಂಡರೇನು? ಬಿಟ್ಟರೇನು? ಎಂದೊಮ್ಮೆ ಅನ್ನಿಸುವುದು.

ಒಟ್ಟಿನಲ್ಲಿ ಅವನು ಮನೆಯಲ್ಲಿದ್ದೂ ಊರಲ್ಲಿದ್ದೂ ಒಂಟಿಯಂತಾಗಿದ್ದ. ಚಿಕ್ಕವನಿದ್ದಾಗ ಮನೆ ಮನೆ ಸುತ್ತಿ ಹಾಲು ಹಾಕುವ ನೆಪದಲ್ಲಿ ಎಲ್ಲರ ಜೊತೆ ತಾನೆಷ್ಟು ಚೆನ್ನಾಗಿ ನಗುನಗುತ್ತಾ ಮಾತನಾಡುತ್ತಿದ್ದೆ ಎನ್ನಿಸತೊಡಗಿ ಆ ಕೆಲಸವನ್ನಾದರೂ ಮಾಡೋಣವೆಂದರೆ ಯಾರಾದರೂ ಏನಾದರೂ ಅಂದುಕೊಂಡಾರೆಂಬ ಅಳುಕು ಬೇರೆ ಅವನಿಗೆ.

ಆಗಲಾದರೋ ಒಂದು ಕಾರಣವಿತ್ತು; ದುಡಿದರೆ ಹೊಟ್ಟೆ ತುಂಬ ಊಟ ಸೇರುತ್ತಿತ್ತು, ಈಗ ಎಲ್ಲ ಇದೆ. ಮನೆ, ಬ್ಯಾಂಕ್ ಬ್ಯಾಲನ್ಸ್ ದುಡ್ಡು ಎಲ್ಲಾ ಇದೆ. ಆದರೂ ಸೊಗಸಿಲ್ಲ ಸುಖವಿಲ್ಲ. ಒಂಟಿತನ ಆವರಿಸಿದೆ. ಯಾರೂ ತನಗೆ ಸರಿಯಾಗಿ ಸ್ಪಂದಿಸುತ್ತಿಲ್ಲ; ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಕೊರಗು ಅವನಿಗೆ! ಇವನನ್ನು ಹೀಗೇ ಬಿಟ್ಟರೆ ಈತ ಇನ್ನೂ ಹುಚ್ಚುಚ್ಚಾರ ಆಡುವುದಲ್ಲದೇ ತಮ್ಮ ಮಾನ ಮರ್ಯಾದೆಯನ್ನೆಲ್ಲಾ ಹರಾಜಿಗೆ ಹಾಕಿಬಿಡುತ್ತಾನೆನ್ನಿಸಿ ಮನೆಯವರು ಇವನ ತಲೆಯನ್ನು ಪರೀಕ್ಷಿಸಿ ನೋಡಬೇಕೆಂಬ ತಾತ್ಕಾಲಿಕ ತೀರ್ಮಾನಕ್ಕೆ ಬಂದರು.

ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇವನ ತಲೆಯನ್ನು ಸ್ಕ್ಯಾನ್ ಮಾಡಿಸಿ ಏನಾದರೂ ದೋಷವಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಕೆಲವೊಂದು ನರದೋಷಗಳು, ಮೆದುಳು ದೋಷಗಳು ಏನಾದರೂ ಇದೆಯ ನೋಡಬೇಕು ಎಂದು ಯೋಚಿಸಿದರು. ‘ಪಾಪ ಅದಾದರೂ ಏನು ಮಾಡೀತು; ಮೆದುಳಿನಲ್ಲಿ ಏನಾದರೂ ದೋಷವಿದ್ದರೆ’ ಎಂದು ಅವನ ಮೇಲೂ ಮರುಕ ತೋರಲಾರಂಭಿಸಿದರು ಅವನ ಮನೆಯವರು. ಇದಕ್ಕೂ ಮೊದಲು ಹತ್ತಿರದ ನರ್ಸಿಂಗ್ ಹೋಮಿನಲ್ಲಿ ತೋರಿಸಿದಾಗ ಅವನಿಗೆ ಟೈಫಾಯಿಡ್ ಜ್ವರವಿರುವುದು ಖಚಿತವಾಯಿತು.

ಅದಕ್ಕೆ ಸಂಬಂಧಿಸಿದ ಚಿಕಿತ್ಸೆಯೂ ನಡೆಯಿತು. ಅವನೀಗ ವಾರ ಕಳೆದ ಮೇಲೆ ಗೆಲುವಾದಂತೆ ಕಂಡ. ಆಮೇಲಿಂದ ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮೆದುಳಿನ ಸ್ಕ್ಯಾನಿಂಗ್ ಮಾಡಿಸಿದಾಗ ಅಲ್ಲಿ ಯಾವ ದೋಷವೂ ಇಲ್ಲವೆಂಬ ವರದಿ ಬಂತು. ಎಲ್ಲರೂ ಬೆರಗಾದರು; ಮತ್ತು ಗೆಲುವೂ ಆದರು. ಆದರೆ ರಾಮ ಮಾತ್ರ ಊಂ ಇಲ್ಲಾ ಹೂಹೂಂ ಇಲ್ಲಾ ಎಂಬಂತೆ ಕೂತುಬಿಟ್ಟ; ಮಾತಿಲ್ಲ; ಕತೆಯಿಲ್ಲ… ಒಂಟಿತನ! ಒಂದು ಒಂಟಿ ರೇಡಿಯೋ ಕೈಯಲ್ಲಿ ಹಿಡಿದುಕೊಂಡು ಹೊಳೆ ದಂಡೆಯ ಮೇಲೆ ಕುಳಿತುಕೊಳ್ಳುವ ಚಟ ಆವರಿಸಿತು ಅವನಿಗೆ.

ಕೆಲವು ದಿನಗಳಷ್ಟು ಕಳೆದಿರಲಿಲ್ಲ ಇದಾಗಿ ಮತ್ತೆ ಯಥಾವತ್ತಾಗಿ ಬೆಳಗಾದರೆ ಕೈಯಲ್ಲಿ ಸುತ್ತಿಗೆಯೊಂದನ್ನು ಹಿಡಿದುಕೊಂಡು ರಸ್ತೆಗೆ ಹೋಗಲಾರಂಭಿಸಿದ; ಸಿಕ್ಕ ಸಿಕ್ಕ ಕಲ್ಲುಗಳನ್ನೆಲ್ಲಾ ಜೋಡಿಸಿಡತೊಡಗಿದ. ಸುತ್ತಿಗೆಯಿಂದ ಅವುಗಳನ್ನೆಲ್ಲಾ ಒಡೆಯತೊಡಗಿದ. ಒಡೆದವುಗಳನ್ನೆಲ್ಲಾ ಒಂದತ್ತಟ್ಟಿಗೆ ಸೇರಿಸತೊಡಗಿದ. ಓಣಿಯ ಮತ್ತು ಮನೆಯ ಜನರೆಲ್ಲಾ ಇದನ್ನು ನೋಡಿ ಸುಮ್ಮಗಾದರು.

‘ಏನ್ ರಾಮಣ್ಣ ಏನ್ ಮಾಡ್ತಿದ್ದಿ’ ಎಂದು ನಕ್ಕು ಕೇಳುವರು ಅವನನ್ನು ಅಷ್ಟೇ! ಅದರ ಮೇಲೆ ಮಾತಾಡುತ್ತಿರಲಿಲ್ಲ. ಇಂವ ನಕ್ಕು ಸುಮ್ಮನಾಗುತ್ತಿದ್ದ. ಮರುಕ್ಷಣ ಏನೋ ಹೇಳಿದಂತಾಗಿ ‘ಈ ಕಲ್ಲುಗಳನ್ನೆಲ್ಲಾ ಒಡೆದು ಪುಡಿ ಪುಡಿ ಮಾಡಿ ಮನೆಯ ಮುಂದೆ ಒಂದು ಕಟ್ಟೆ ಕಟ್ಟುವವನಿದ್ದೇನೆ; ಕುಳಿತುಕೊಳ್ಳಲು’ ಎಂದುತ್ತರಿಸಿದ.

ಹಾಗೇ ಮಾಡಿದ ಕೂಡ; ಕಲ್ಲುಗಳನ್ನೆಲ್ಲಾ ನೀಟಾಗಿ ಜೋಡಿಸಿ ಪುಡಿಗಲ್ಲುಗಳನ್ನು ಸಂದಿಗೊಂದಿಗಳಿಗೆ ಹಾಕಿ ಸಿಮೆಂಟ್ ಚೀಲವೊಂದನ್ನು ತಂದು ನೀರು ಹಾಕಿ ಮರಳು ಕಲಸಿ ಚಂದದೊಂದು ಕಟ್ಟೆಯನ್ನೂ ಕಟ್ಟಿಬಿಟ್ಟ. ವಾರವೊಪ್ಪತ್ತಿನಲ್ಲಿ ಹತ್ತು-ಹದಿನೈದು ಅಡಿ ಉದ್ದದ ಜಗಲೀಕಟ್ಟೆಯೊಂದನ್ನು ತಯಾರು ಮಾಡಿಯೇ ಬಿಟ್ಟ ರಾಮ; ಪೆದ್ದುರಾಮ.

ತೆಂಗಿನ ಕಾಯಿಗಳನ್ನು ಒಡೆದು ಅದನ್ನು ಉದ್ಘಾಟಣೆ ಕೂಡಾ ಮಾಡಿಬಿಟ್ಟ. ಈಗೀಗ ಊರಜನ ಮನೆಯ ಮುಂದಿನ ಜಗಲೀಕಟ್ಟೆಯನ್ನು ನೋಡಿ ರಾಮನನ್ನು ಸಂಕೋಚ ಬಿಟ್ಟು ಪ್ರೀತಿಯಿಂದ ಮಾತನಾಡಿಸತೊಡಗಿದರು. ರಾಮ ಈಗ ಇನ್ನೂ ಹರ್ಷಗೊಂಡಂತಾಗಿದ್ದ.

ಇದಾದ ಕೆಲ ದಿನಗಳಿಗೆ ಮನೆಯಲ್ಲೊಂದು ಹಸುವನ್ನು ತಂದು ಸಾಕಿದ. ಅದರ ದೇಖರೇಕಿ ನೋಡಿಕೊಳ್ಳತೊಡಗಿದ. ಓಣಿಯ ಜನರ ಹಾಲನ್ನೆಲ್ಲಾ ಸಂಗ್ರಹಿಸಿ ಪಟ್ಟಣಕ್ಕೆ ಹೋಗಿ ಹಾಕಿಬರಲಾರಂಭಿಸಿದ. ಮತ್ತೆ ತನ್ನ ಬಾಲ್ಯದ ಗೌಳಿಗ ವೃತ್ತಿಯನ್ನು ಶುರುಮಾಡಿದ. ಎಲ್ಲರೂ ಈಗ ಅವನನ್ನು ಅಕ್ಕರೆಯಿಂದ ಮಾತನಾಡಲಾರಂಭಿಸಿದರು. ಅವನೂ ಎಲ್ಲರೊಂದಿಗೆ ಗೆಲುವಾಗಿ ಮಾತನಾಡಲಾರಂಭಿಸಿದ.

ದಿನಗಳುರುಳಿದಂತೆಲ್ಲಾ ಆತನ ಮಾತು ಹಾವಭಾವ, ಸಿಟ್ಟು, ಹುಸಿಮುನಿಸು ಎಲ್ಲರಲ್ಲಿ ಮೆಚ್ಚುಗೆ ಪಡೆದುಕೊಂಡವು. ರಾಮ ಈಗ ನಿಜಕ್ಕೂ ಪೆದ್ದುರಾಮ ಎನಿಸತೊಡಗಿದ ಊರವರಿಗೆ. ಅವನ ಪೆದ್ದು ಒಂದು ಭಾಗವಾದರೆ ಅವನ ಸಂಭಾವಿತತೆ ಇನ್ನೊಂದು ಭಾಗವಾಗಿ ಎಲ್ಲರಿಗೂ ಅವನ ಬಗ್ಗೆ ಒಂದು ಅಕ್ಕರೆ ಮೂಡತೊಡಗಿತು!

ಕಾಲಕಳೆದಂತೆಲ್ಲ ಊರ ಜನರ ಮನೆಮುಂದೆ ಜಗಲೀಕಟ್ಟೆ, ತುಳಸಿಕಟ್ಟೆ ಇತ್ಯಾದಿ ಕಟ್ಟುವ ಕೆಲಸಗಳೇನಿದ್ದರೂ ಪೆದ್ದುರಾಮನದೇ! ಆಯಿತು; ಊರೂರು ಅಲೆದು ಕಟ್ಟೆಗಳನ್ನು ಕಟ್ಟ ತೊಡಗಿದ. ಈಗೀಗ ಗೌಂಡೀ ಕೆಲಸಗಳೇನಿದ್ದರೂ ಊರವರು ಇವನನ್ನೇ ಕರೆಯಲಾರಂಭಿಸಿದರು.

ಬರುಬರುತ್ತ ಆ ಕಟ್ಟೆಗಳಿಗೆ ಸುಣ್ಣ ಬಣ್ಣ ಬಡಿಯಲೂ ಶುರುಮಾಡಿದ. ಅತ್ತ ಹಾಲು ತುಂಬುವ ಗೌಳಿಗ ಕೆಲಸದಿಂದಾಗಿ ತನ್ನದೇ ಒಂದು ಸ್ವಂತ ಹಾಲಿನ ಡೇರಿ ತೆಗೆದು ಅದರ ದೇಖರೇಕಿಗೆಂದು ಒಂದು ಆಳನ್ನು ಇಟ್ಟ. ಅದನ್ನು ಸ್ವಂತವಾಗಿಯೇ ನಡೆಸತೊಡಗಿದ.

ದಿನಗಳೆದಂತೆಲ್ಲಾ ರಾಮನಿಗೆ ಹುಚ್ಚು ಹಿಡಿದಿದೆಯೆನ್ನುವ ಹುಚ್ಚನ್ನು ಈಗ ಸ್ವತಃ ರಾಮನೇ ಬಿಡಿಸತೊಡಗಿದ್ದ. ಬದುಕೀಗ ಅವನಿಗಿನ್ನೂ ನಿಷ್ಠವಾಗಹತ್ತಿತ್ತು! ಊರ ಜನರು ಇದನ್ನೆಲ್ಲಾ ಅವಾಕ್ಕಾಗಿ ನೋಡತೊಡಗಿದರು ಮತ್ತು ಅವನ ಬಗ್ಗೆ ಇನ್ನೂ ಹೆಚ್ಚೇ ಅಭಿಮಾನವನ್ನು ಬೆಳೆಸಿಕೊಂಡರು.

ಪೆದ್ದುರಾಮನಿಗೆ ಹುಚ್ಚು ಹಿಡಿದಿದೆಯೆನ್ನುವ ಮಾತೊಂದು ಇನ್ನು ಹುಚ್ಚು ಮಾತಷ್ಟೇ ಅನ್ನಿಸತೊಡಗಿ ಊರ ಜನ ದಿನೇದಿನೇ ಅವನ ಹರ್ಷ ಕಂಡು ಅವರೂ ಇಮ್ಮಡಿ ಹರ್ಷಗೊಂಡರು.

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: