ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪೂಜೆಗೆ ಬರಲೊಲ್ಲದ ಪುರೋಹಿತರಿಗೆ ಶಿಕ್ಷೆ ಸಲ್ಲುವುದೇ?' – ನಾ ದಿವಾಕರ್

ನಾ ದಿವಾಕರ್

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ವೈಶಿಷ್ಟ್ಯ ಎಂದರೆ ಇಲ್ಲಿ ಜನ್ಮತಃ ಅಂಟಿಕೊಂಡೇ ಬರುವ ಜಾತಿ ಅಸ್ಮಿತೆ, ಈ ಅಸ್ಮಿತೆಯೊಂದಿಗೆ ಸಮೀಕರಿಸುವ ಕಸುಬು, ಜನ್ಮ ಕುಂಡಲಿಯಿಂದಲೇ ಒದಗುವ ಅಧಿಪತ್ಯ ಮತ್ತು ಈ ವ್ಯವಸ್ಥೆಯನ್ನು ನಿಯಂತ್ರಿಸುವ ಹಿತಾಸಕ್ತಿಗಳ ಪಾರುಪತ್ಯ ಈ ನಾಲ್ಕೂ ವಿದ್ಯಮಾನಗಳು ಸಮಾಜದ ಸುತ್ತ ಒಂದು ಭದ್ರ ಕೋಟೆಯನ್ನು ನಿರ್ಮಿಸುತ್ತದೆ. ಈ ಚಕ್ರವ್ಯೂಹದ ಕೋಟೆಯನ್ನು ಭೇಧಿಸಲು ಇಚ್ಚಿಸುವವರು ಅಭಿಮನ್ಯುವಿನಂತೆ ಜೀವ ತೆರಲು ಸಿದ್ಧರಾಗಿರಬೇಕು. ಮಹಾಭಾರತದ ಅಭಿಮನ್ಯು ಚಕ್ರವ್ಯೂಹದಲ್ಲಿ ಅಂತ್ಯಕಾಣುವುದು ತನ್ನ ನಿಷ್ಕ್ರಿಯತೆಯಿಂದಲ್ಲ ತನ್ನ ಸುತ್ತಲು ನಿರ್ಮಿಸಿದ್ದ ಬೇಲಿಯ ನಿರ್ವಹಣೆಯನ್ನು ಹೊತ್ತಿದ್ದ ಅಧಿಪತಿಗಳ ಪಿತೂರಿಯಿಂದ. ಜಾತಿ ವ್ಯವಸ್ಥೆ ಭಾರತೀಯ ಸಮಾಜದಲ್ಲಿ ನಿರ್ಮಿಸುವ ಇಂತಹ ಚಕ್ರವ್ಯೂಹಗಳು ಅಭಿಮನ್ಯುಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಇದು ವಿಪರ್ಯಾಸವೋ, ದುರಂತವೋ, ವಿಡಂಬನೆಯೋ ಅಲ್ಲ ಇದು ವಾಸ್ತವ. ಹುಣಸೂರು ಬಳಿಯ ದೇವಗಳ್ಳಿಂ ಗ್ರಾಮದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ತಮಟೆ ಬಾರಿಸಲು ಒಪ್ಪದ ಹಲವರ ಮೇಲೆ ನಡೆದಿರುವ ಆಕ್ರಮಣ ಇಂತಹ ಆಧುನಿಕ ಚಕ್ರವ್ಯೂಹದ ವಿನ್ಯಾಸಕ್ಕೆ ಒಂದು ಸ್ಪಷ್ಟ ನಿದರ್ಶನ. ಸಾರ್ವಜನಿಕ ಗಣೇಶ ಚತುರ್ಥಿಯ ವ್ಯಾಪ್ತಿ ಮತ್ತು ಹರವು ಹೆಚ್ಚಾಗುತ್ತಿರುವಂತೆಲ್ಲಾ ಗಣ ಮೂಲೆಗುಂಪಾಗುತ್ತಿದ್ದು ಅಧಿಪತಿಗಳ ಪ್ರಾಬಲ್ಯ ಹೆಚ್ಚಾಗುತ್ತಿರುವುದು ಜಾತಿ ವ್ಯವಸ್ಥೆಯ ನವ ನವೀನ ಅವತಾರದ ಅಂಶಿಕ ಭಾಗವಾಗಿ ಗೋಚರಿಸುತ್ತಿದೆ. ಇಲ್ಲಿ ವಿಸರ್ಜನೆಯಾಗುತ್ತಿರುವುದು ಗಣಪನಲ್ಲ ಗಣ ದ ಮೌಲ್ಯಗಳು.
ಕಲೆ : ಹಾದಿಮನಿ
ಗಣಪತಿಯ ವಿಸರ್ಜನೆಗೆ ತಮಟೆ ಬಾರಿಸುವುದು ಅನಿವಾರ್ಯವೇ ಆದಲ್ಲಿ ತಮಟೆ ಬಾರಿಸುವ ನಿರ್ದಿ ಷ್ಟ ಜನಸಮುದಾಯಗಳಿಗೆ ಗಣೇಶೋತ್ಸವದಲ್ಲಿ ಒದಗುವ ಪ್ರಾತಿನಿಧ್ಯವೇನು ಎಂಬ ಮೂಲಭೂತ ಪ್ರಶ್ನೆ ಇಲ್ಲಿ ಮಹತ್ವ ಪಡೆಯುತ್ತದೆ. ಚರ್ಮವಾದ್ಯಗಳ ಮೇಲಿದ್ದ ಜಾತಿ ಪೀಡಿತ ಸಮಾಜದ ನಿಷೇಧ ಈಗಿಲ್ಲ. ಆದರೂ ತಮಟೆ ಬಾರಿಸುವ ಕಸುಬು ಇನ್ನೂ ದಲಿತರ ಸ್ವತ್ತೇ ಆಗಿದೆ. ಆದರೆ ಎಲ್ಲ ವೃತ್ತಿಪರರಂತೆಯೇ, ಕಸುಬುದಾರರಂತೆಯೇ ತಮಟೆ ಬಾರಿಸುವವರಿಗೂ ನಿರಾಕರಣೆಯ ಅಧಿಕಾರವಿದೆ. ತಮ್ಮದೇ ಆದ ಆಯ್ಕೆ ಸ್ವಾತಂತ್ರ್ಯವಿದೆ. ಈ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವ ಮನೋಭಾವ ನಮ್ಮ ಸಮಾಜದಲ್ಲಿನ್ನೂ ಮೂಡದಿರುವುದು ದುರಂತ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ತಮಟೆಗೆ ದೊರೆಯುವ ಪ್ರಾತಿನಿಧ್ಯ ತಮಟೆ ಬಾರಿಸುವವರಿಗೆ ಎಲ್ಲಿಯವರೆಗೂ ದೊರೆತೀತು ? ಒಂದು ವೇಳೆ ತಮಟೆ ಬಾರಿಸುವವರು ತಾವೇ ಗಣೇಶನ ಮೂರ್ತಿಯನ್ನು ಹೊತ್ತೊಯ್ದು ವಿಸರ್ಜಿಸುತ್ತೇವೆ ಎಂದೇನಾದರೂ ಹೇಳಿದರೆ ಮೇಲ್ಜಾತಿ ಪ್ರಜ್ಞೆ ಒಪ್ಪುವುದೇ ? ಇದು ಕೇವಲ ಒಂದು ಕಸುಬು ನಿರ್ವಹಿಸುವ ವಿಚಾರವಾಗಿ ಉಳಿದಿಲ್ಲ. ಬದಲಾಗಿ ಜನ್ಮತಃ ಅಂಟಿ ಬರುವ ಜಾತಿ ಪ್ರಜ್ಞೆ ಮತ್ತು ಜಾತಿ ಅಸ್ಮಿತೆಗಳ ಪ್ರಾತಿನಿಧ್ಯದ ಪ್ರಶ್ನೆಯಾಗಿ ಕಾಡುತ್ತದೆ.
ಹಿಂದೂ ವಿವಾಹ ಸಂದರ್ಭಗಳಲ್ಲಿ ಅನಿವಾರ್ಯವಾಗಿ ಪರಿಣಮಿಸಿರುವ ನಾದಸ್ವರ ಮೇಳ ನುಡಿಸುವವರೂ ಇದೇ ರೀತಿಯ ಅಸ್ಪೃಶ್ಯತೆಯನ್ನು ಕೊಂಚ ಗೌರವಯುತ ರೀತಿಯಲ್ಲಿ ಎದುರಿಸುತ್ತಾರೆ. ಮೇಲ್ಜಾತಿಯ ವಿವಾಹ ಸಮಾರಂಭಗಳಲ್ಲಿ ನಾದಸ್ವರ ವಾದಕರೊಡನೆ ಸಹಭೋಜನ ನಡೆಸುವುದೇ ಮಹಾಪರಾಧ ಎನಿಸುತ್ತದೆ. ಗಟ್ಟಿ ಮೇಳ ಇಲ್ಲದೆ ಹೋದರೆ ತಾಳಿ ಕೊರಳಿಗೆ ಬೀಳುವುದಿಲ್ಲ. ಗಟ್ಟಿಮೇಳದ ವಾದಕರ ಮನಸ್ಸು ತಮ್ಮ ಸ್ವರಾಸನಗಳ ಮೇಲಿದ್ದರೂ ಅವರ ಕಂಗಳು ಸದಾ ವಿವಾಹ ಮಂಟಪದೆಡೆ ಇರಬೇಕು. ಏಕೆಂದರೆ ಅಲ್ಲಿಂದ ಬರುವ ಸಂಜ್ಞೆಯ ಅನುಸಾರವೇ ತಮ್ಮ ವಾದನ ಅಥವಾ ಮೌನ ನಿರ್ಧರಿತವಾಗುತ್ತದೆ. ಅಂದರೆ ವಾದ್ಯ ನುಡಿಸುವ ಸ್ವಾತಂತ್ರ್ಯ ನಿರ್ಬಂಧಿತವಾಗಿರುತ್ತದೆ. ಒಂದು ವಿವಾಹದ ಸಂದರ್ಭದಲ್ಲಿ ವಧೂವರರ ಕುಟುಂಬದವರೊಡನೆ ಭೋಜನಕ್ಕೆ ಕುಳಿತ ವಾದ್ಯದವರನ್ನು ಎಬ್ಬಿಸಿದ ಘಟನೆ ನನ್ನ ಕಣ್ಣೆದುರಿನಲ್ಲೇ ನಡೆದಿದೆ. ಇರಲಿ, ಇದು ನಿರ್ದಿಷ್ಟ ಘಟನೆಗೆ ಸೀಮಿತವಾದದ್ದಲ್ಲ, ತಮಟೆ ಬಾರಿಸುವವರಿಂದ ನಿರೀಕ್ಷಿಸುವಂತೆಯೇ ನಾದಸ್ವರ ವಾದಕರಿಂದಲೂ ಜಾತಿ ಸಮಾಜದ ಪ್ರಜ್ಞಾಪೂರ್ವಕ ಚೌಕಟ್ಟಿನಲ್ಲಿ ಕೆಲವು ಶಿಷ್ಟಾಚಾರಗಳನ್ನು ಅಪೇಕ್ಷಿಸಲಾಗುತ್ತದೆ. ಉಲ್ಲಂಘನೆ ದುಬಾರಿಯಾಗುತ್ತದೆ.
ನಿರ್ಬಂಧಕ್ಕೊಳಪಡಿಸುವ ಪ್ರವೃತ್ತಿ ಅಧಿಕಾರ ಮತ್ತು ದರ್ಪದ ದ್ಯೋತಕವಾದ ಊಳಿಗಮಾನ್ಯ ಮನೋಭಾವದ ಬಳುವಳಿ. ಹಾಗೆಯೇ ತಮ್ಮ ಭೌತಿಕ, ಬೌದ್ಧಿಕ ಮತ್ತು ದೈಹಿಕ ಪ್ರಾಬಲ್ಯವನ್ನು ಬಳಸಿ ಒಂದು ನಿರ್ದಿಷ್ಟ ಕೆಲಸವನ್ನು ಹೇರುವ ಪ್ರವೃತ್ತಿಯೂ ಊಳಿಗಮಾನ್ಯ ವ್ಯವಸ್ಥೆಯ ಬಳುವಳಿ. ನಾನು ಹೇಳುವಂತೆ ನಡೆ, ನಾನು ಹೇಳುವ ಕೆಲಸ ಮಾಡು ಇಲ್ಲವಾದರೆ !!!! ಎಂಬ ಬೆದರಿಕೆಯ ಮಾತುಗಳು ಈ ಒಂದು ಪ್ರವೃತ್ತಿಯ ಸಂಕೇತವಾಗಿ ಆಗಾಗ್ಗೆ ಮೂಡಿಬರುತ್ತಿರುತ್ತದೆ. ಇದು ನಿರಾಕರಿಸುವ ಸಮುದಾಯಗಳ ಬಹಿಷ್ಕಾರದ ಮೂಲಕವೋ, ಅಮಾಯಕರ ಮೇಲಿನ ಆಕ್ರಮಣದ ಮೂಲಕವೋ, ನಿಮ್ನ ವರ್ಗಗಳು ಆರಾಧಿಸುವ ಅಂಬೇಡ್ಕರ್ ಮುಂತಾದವರ ಪ್ರತಿಮೆಯ ಭಗ್ನದ ಮೂಲಕವೋ ವ್ಯಕ್ತವಾದರೂ , ಅಂತರಂಗದಲ್ಲಿ ಇದು ಜಾತಿ ಪ್ರಜ್ಞೆಯ ಪ್ರಾಬಲ್ಯವನ್ನು ಬಿಂಬಿಸುವ ವಿದ್ಯಮಾನವಾಗಿರುತ್ತದೆ. ದೇವಗಳ್ಳಿಯ ಪ್ರಕರಣದಲ್ಲಿ ಇದು ಕಣ್ಣಿಗೆ ರಾಚುವಂತೆ ಗೋಚರಿಸುತ್ತದೆ. ಆದರೆ ಈ ಒಂದು ಅಧಿಕಾರ ಅಥವಾ ಸ್ವಾತಂತ್ರ್ಯ ತಮಟೆ ಬಾರಿಸುವವರಿಗಾಗಲಿ, ನಾದಸ್ವರ ನುಡಿಸುವವರಿಗಾಗಲೀ ಇರುತ್ತದೆಯೇ ಎಂಬ ಮೂರ್ತ ಪ್ರಶ್ನೆಗೆ ಭಾರತೀಯ ಸಮಾಜ ಉತ್ತರಿಸಬೇಕಿದೆ. ಇದು ಉತ್ತರದಾಯಿತ್ವದ ಪ್ರಶ್ನೆ. ಪೂಜೆಗೆ ಬರಲೊಲ್ಲದ ವಿಪ್ರ ಪುರೋಹಿತರನ್ನು ದಲಿತರು ಇದೇ ರೀತಿ ದಂಡಿಸಿದರೆ ನಮ್ಮ ಸಮಾಜ ಹೇಗೆ ಸ್ಪಂದಿಸಬಹುದು ? ಈ ಪ್ರಶ್ನೆಗೆ ಮೂಡುವ ಉತ್ತರದಲ್ಲೇ ಹಲವು ಪ್ರಶ್ನೆಗಳೂ ಇರುತ್ತವೆ.
 

‍ಲೇಖಕರು G

10 September, 2014

1 Comment

  1. ಹನುಮಂತ ಅನಂತ ಪಾಟೀಲ, ರಿಪ್ಪನ್ ಪೇಟೆ

    Ee jaati asmite hora stharadalli astaagi kaanisi kolladiddaroo ola stharadalli guptagaaminiyaagi idde ide enisutte. krushnamoorthi puraanikar kaadambari ‘sanaadi appanna’ dalli vaalagad appannanannu pankthiyinda ebbisida sanniveshad chitranavide endu odida nenapu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading