ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಬಿಡುಗಡೆಗಳು ಮತ್ತು ಲೋಕಾರ್ಪಣೆಗಳು – ಎಸ್ ದಿವಾಕರ್

ಲೋಕಾರ್ಪಣೆ – ಹಾಗೆಂದರೇನು?

ಎಸ್ ದಿವಾಕರ್

ಕನ್ನಡದಲ್ಲಿ ವರ್ಷಕ್ಕೆ ಇನ್ನೂರೋ ಮುನ್ನೂರೋ ಪುಸ್ತಕ ಪ್ರಕಟವಾದರೆ ಹೆಚ್ಚೆಂಬ ಕಾಲವೊಂದಿತ್ತು. ಈಗ ವರ್ಷಕ್ಕೆ ಎಷ್ಟು ಪುಸ್ತಕಗಳು ಹೊರಬರುತ್ತಿವೆಯೆಂದರೆ ಪಟ್ಟಿಮಾಡಲಾಗದಷ್ಟು, ಲೆಕ್ಕಕ್ಕೆ ಸಿಕ್ಕದಷ್ಟು. ಪ್ರಕಟವಾಗುವ ಎಲ್ಲ ಪುಸ್ತಕಗಳನ್ನೂ ದಾಖಲಿಸಿಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಮೊನ್ನೆ ಮೊನ್ನೆಯವರೆಗೂ ನಮ್ಮ ದಿನಪತ್ರಿಕೆಗಳು ತಮಗೆ ಪ್ರಕಾಶಕರೋ ಲೇಖಕರೋ ಕಳಿಸಿಕೊಟ್ಟ ಪುಸ್ತಕಗಳನ್ನು ಪಟ್ಟಿಮಾಡಿ ವಾರಕ್ಕೊಮ್ಮೆ ಪ್ರಕಟಿಸುತ್ತಿದ್ದವು. ಜೊತೆಗೆ ಮುಖ್ಯವೆಂದು ಕಂಡುಬಂದ ಕೆಲವು ಪುಸ್ತಕಗಳ ವಿಮಶರ್ೆಯೂ ಇರುತ್ತಿತ್ತು. ಆದರೆ ಈಗ ಅವುಗಳಿಗೆ ಕೆಲವು ಪತ್ರಿಕೆಗಳಲ್ಲಿ ಸ್ಥಳಾವಕಾಶ ಕಡಮೆಯಾಗುತ್ತಿದೆ. ಇನ್ನು ಕೆಲವು ಪತ್ರಿಕೆಗಳು ಆ ಪರಿಪಾಠವನ್ನು ಸಂಪೂರ್ಣವಾಗಿ ಕೈಬಿಟ್ಟಿವೆ. ಬೇರೆ ಮಾಧ್ಯಮಗಳಿಗಂತೂ ಪುಸ್ತಕಗಳ ಗೊಡವೆಯೇ ಬೇಡ. ಪರಿಸ್ಥಿತಿ ಹೀಗಿರುವಾಗ ನಿರಂತರವಾಗಿ ಪ್ರಕಟವಾಗುತ್ತಿರುವ ಪುಸ್ತಕಗಳ ಪರಿಚಯ ಹೇಗೆ? ಅದಕ್ಕಾಗಿ ನಮ್ಮ ಪುಸ್ತಕ ಪ್ರಕಾಶನ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಒಟ್ಟಿಗೆ ಸಮಾಲೋಚಿಸಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ.
ಈಗಂತೂ ಬೆಂಗಳೂರಿನಲ್ಲಿ ವಾರವಾರವೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುವುದು ಹೆಚ್ಚುಕಡಮೆ ಕಡ್ಡಾಯವಾಗಿಬಿಟ್ಟಂತಿದೆ. ಇದಕ್ಕೆ ಬಹುಮುಖ್ಯ ಕಾರಣ ಪುಸ್ತಕಗಳಿಗಿರುವ ಪ್ರಚಾರ ಸೌಲಭ್ಯದ ಕೊರತೆ. ಪ್ರಕಾಶಕರು ತಮ್ಮ ಕಾರ್ಯಕ್ರಮಗಳಿಗೆ ಹೆಚ್ಚು ಜನರನ್ನು ನಿರೀಕ್ಷಿಸುವುದು ಸಹಜ. ಅದಕ್ಕೆಂದೇ ಜನರನ್ನು ಆಕರ್ಷಿಸುವಂಥ ಪ್ರಸಿದ್ಧ ಲೇಖಕರನ್ನೋ ಸಿನಿಮಾ ನಟ ನಟಿಯರನ್ನೋ ಆಹ್ವಾನಿಸುವುದು ಕೂಡ ಸಹಜವೇ. ಪ್ರಖ್ಯಾತರಾದವರು ಪುಸ್ತಕ ಬಿಡುಗಡೆ ಮಾಡಿದರೆ ಆ ಸುದ್ದಿ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾದರೂ ಆದೀತು. ಹಾಗೇನಾದರೂ ಪ್ರಕಟವಾದರೆ ಮಾತ್ರ ಬಿಡುಗಡೆಯಾದ ಪುಸ್ತಕಗಳಿಗೆ ಕಿಂಚಿತ್ ಪ್ರಚಾರ! ಎಂಥ ವಿಪರ್ಯಾಸ ಅಲ್ಲವೆ?
ಕಳೆದ ಕೆಲವು ವರ್ಷಗಳಿಂದ ಪುಸ್ತಕ ಬಿಡುಗಡೆಗೆ ‘ಲೋಕಾರ್ಪಣೆ’ ಎಂಬ ಇನ್ನೊಂದು ಹೆಸರು ಚಾಲ್ತಿಯಲ್ಲಿದೆಯಷ್ಟೆ. ಯಾರು, ಯಾವಾಗ, ಯಾಕೆ ಈ ಪುನರ್ನಾಮಕರಣವನ್ನು ಮಾಡಿದರೋ ನನಗಂತೂ ಸರಿಯಾಗಿ ಗೊತ್ತಿಲ್ಲ. ಆದರೆ ‘ಬಿಡುಗಡೆ’ ಎಂಬ ಕನ್ನಡ ಶಬ್ದಕ್ಕಿಂತ ‘ಲೋಕಾರ್ಪಣೆ’ ಹೆಚ್ಚು ತೂಕವುಳ್ಳ ಸಂಸ್ಕೃತ ಶಬ್ದವೆಂದು ಧಾರಾಳವಾಗಿ ಹೇಳಬಲ್ಲೆ.

ಹಾಗೆ ನೋಡಿದರೆ ಈ ಲೋಕಾರ್ಪಣೆ ಎನ್ನುವುದು ನಮ್ಮ ಸರಕಾರದ ಪಬ್ಲಿಕ್ ವರ್ಕ್ಸ್  ಡಿಪಾರ್ಟ್ ಮೆಂಟಿಗೆ ಅಥವಾ ಲೋಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ಪದ. ಸರಕಾರ ಹಣ ಖರ್ಚುಮಾಡಿ ಕೈಗೊಳ್ಳುವ ಸಾರ್ವಜನಿಕ ಕಾಮಗಾರಿಯಲ್ಲಿ ಅನೇಕ ಮೂಲಭೂತ ಸೌಲಭ್ಯ ಯೋಜನೆಗಳು ಸೇರಿರುತ್ತವೆ. ಉದಾಹರಣೆಗೆ ಸಾರ್ವಜನಿಕ ಕಟ್ಟಡಗಳು (ಶಾಲೆ, ಕಾಲೇಜು, ಆಸ್ಪತ್ರೆ), ಸಾರಿಗೆ (ರಸ್ತೆ, ರೈಲು, ಸೇತುವೆ, ಕೊಳವೆ ವ್ಯವಸ್ಥೆ, ಕಾಲುವೆ, ಹಡಗುಕಟ್ಟೆ, ವಿಮಾನ ನಿಲ್ದಾಣ), ನ್ಯಾಯಾಂಗ ವ್ಯವಸ್ಥೆ (ಪೋಲಿಸ್ ಮತ್ತು ಕೋರ್ಟ್ ), ಪಾರ್ಕ್, ಬೀಚು, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ, ಸಾಲು ಮರಗಳನ್ನು ನೆಡುವಿಕೆ, ಇತ್ಯಾದಿ. ಸರಕಾರ ಇವುಗಳನ್ನು ನಿಮರ್ಿಸುವುದು ಸಾರ್ವಜನಿಕ ಉಪಯೋಗಕ್ಕಾಗಿ. ಆದ್ದರಿಂದ ಇವು ಇಡೀ ಲೋಕಕ್ಕೆ (ಅಂದರೆ ಸಮಸ್ತ ಜನರ ಉಪಯೋಗಕ್ಕೆ) ಅರ್ಪಣಗೊಳ್ಳಬೇಕಾದ್ದು ನ್ಯಾಯವೇ.
ಲೋಕೋಪಯೋಗಿ ಇಲಾಖೆ ನಮಗೆ ಬ್ರಿಟಿಷರಿಂದ ಬಂದ ಬಳುವಳಿ.
ಲಾರ್ಡ್  ಡಾಲ್ಹೌಸೀ 1848ರಿಂದ 1856ರ ವರೆಗೆ ಭಾರತದ ಗವರ್ನರ್ ಜನರಲ್ ಆಗಿದ್ದನಷ್ಟೆ. ಅವನ ಆಡಳಿತಕ್ಕೂ ಮುಂಚೆ ಭಾರತದಲ್ಲಿ ಲೋಕೋಪಯೋಗಿ ಕೆಲಸಕಾರ್ಯಗಳು ನಡೆಯುತ್ತಿದ್ದದ್ದು ಮಿಲಿಟರಿ ಮಂಡಲಿಗಳ ನೇತೃತ್ವದಲ್ಲಿ. ಆ ಮಂಡಲಿಗಳಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಕೆಲಸಗಳೆಂದರೆ ಅಸಡ್ಡೆ. ಅದನ್ನು ಗಮನಿಸಿದ ಡಾಲ್ಹೌಸೀ ಒಂದು ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿದ. ಅದೇ ಲೋಕೋಪಯೋಗಿ ಇಲಾಖೆ. ರಸ್ತೆಗಳನ್ನು, ಸೇತುವೆಗಳನ್ನು, ಸರಕಾರಿ ಕಟ್ಟಡಗಳನ್ನು ನಿಮರ್ಿಸುವುದೇ ಈ ಇಲಾಖೆಯ ಮುಖ್ಯ ಕಾರ್ಯವಾಯಿತು. ಅದಕ್ಕಾಗಿ ಇಂಗ್ಲೆಂಡಿನಿಂದ ಮುಖ್ಯ ಇಂಜಿನಿಯರರೂ, ಅತ್ಯುನ್ನತ ತರಬೇತಿ ಪಡೆದ ಇತರ ಅಧಿಕಾರಿಗಳೂ ಬಂದರು. ಡಾಲ್ಹೌಸೀಯ ಕಾಲದಲ್ಲೇ ಗಂಗಾ ಕಾಲುವೆ, ಅನೇಕ ಸೇತುವೆಗಳು, ಗ್ರ್ಯಾಂಡ್ ಟ್ರಂಕ್ ರೋಡು, ಇವೆಲ್ಲ ನಿರ್ಮಾಣಗೊಂಡವು. ಅವನು ರೂರ್ಕಿಯಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಬುನಾದಿ ಹಾಕಿದ್ದೂ ಉಂಟು.
ಲೋಕೋಪಯೋಗಿ ಕೆಲಸಕಾರ್ಯಗಳು ಅದಕ್ಕೆ ಸಂಬಂಧಪಟ್ಟ ಇಲಾಖೆಯಿಂದಲೇ ನಡೆಯಬೇಕಿಲ್ಲ. ಸಾರ್ವಜನಿಕ ಸಂಘಸಂಸ್ಥೆಗಳು ದೇವಸ್ಥಾನಗಳನ್ನೋ ಚರ್ಚು, ಮಸೀದಿಗಳನ್ನೋ ಕಟ್ಟಿಸುವುದು, ರಾಮನವಮಿ, ಗಣೇಶೋತ್ಸವಗಳನ್ನು ನಡೆಸುವುದು, ಸನ್ಮಾನ, ಪ್ರಶಸ್ತಿಗಳನ್ನು ನೀಡುವುದು ಲೋಕಕಲ್ಯಾಣಕ್ಕಾಗಿಯೇ ಅಲ್ಲವೆ? ಡಿ.ವಿ.ಜಿ.ಯವರ ‘ರಾಜಕೀಯ ಪ್ರಸಂಗಗಳು’ ಎಂಬ ಗ್ರಂಥದಲ್ಲಿರುವ ಒಂದು ಪ್ರಸಂಗ ಹೀಗಿದೆ: “ಕಾಂಗ್ರೆಸ್ಸು ಹುಟ್ಟಿದ್ದು 1885ರಲ್ಲಿ. ಅಲ್ಲಿಂದ ಒಂದೆರಡು ವರ್ಷಗಳೊಳಗಾಗಿ ಮೈಸೂರಿನ ಮಹಾರಾಜರು ಶ್ರೀ ಚಾಮರಾಜೇಂದ್ರ ಒಡೆಯರವರು ಕಾಂಗ್ರೆಸ್ಸಿನ ದ್ರವ್ಯನಿಧಿಗೆ ಒಂದು ಚಂದಾ ಕೊಟ್ಟರು – ಸುಮಾರು ಮೂರು ಸಾವಿರ ರೂಪಾಯಿ ಎಂದು ನನ್ನ ಜ್ಞಾಪಕ. ಆಗ ದಿವಾನಾಗಿದ್ದವರು ಸರ್ ಶೇಷಾದ್ರಿಅಯ್ಯರವರು. ಅವರು ಕಾಂಗ್ರೆಸ್ ಸಮಾರಂಭದ ಮಹತ್ವವನ್ನು ಅರಿತುಕೊಂಡಿದ್ದರು. ಮಹಾರಾಜರಿಗೆ ಮಿತ್ರರಾದ ಬೊಂಬಾಯಿ ಪಟ್ಟಣದ ಮಾಂಡಲಿಕ್ ಮಹಾಶಯರೂ ಮೈಸೂರಿನ ಉಪಕಾರಿಗಳಾಗಿದ್ದ ದಾದಾಭಾಯಿ ನವರೋಜಿಯವರೂ ದೇಶನಿಷ್ಠರೆಂದು ಸರ್ವತ್ರ ಅಂಗೀಕೃತರಾಗಿದ್ದ ಮಹಾದೇವ ಗೋವಿಂದ ರಾನಡೆಯವರೂ ಕಾಂಗ್ರೆಸ್ಸಿನ ಸ್ಥಾಪನೆಯಲ್ಲಿ ಮುಖ್ಯರು. ಇಂಥವರ ಬೇಡಿಕೆಯನ್ನು ನಮ್ಮ ಮಹಾರಾಜರು ಮನ್ನಿಸಿದ್ದು ಉಭಯತ್ರರಿಗೂ ಕೀರ್ತಿಪ್ರದವಾಗಿದೆ.” ಮೈಸೂರು ಮಹಾರಾಜರು ಮುಂದೆ ತಮ್ಮ ಆಳ್ವಿಕೆಗಿಂತ ಭಿನ್ನವಾದ ಇನ್ನೊಂದು ರಾಜಕೀಯ ವ್ಯವಸ್ಥೆಯನ್ನೇ ತರಲಿದ್ದ ಕಾಂಗ್ರೆಸ್ಸಿಗೆ ಹೀಗೆ ಸ್ಪಂದಿಸಿದ್ದು ಕೂಡ ಒಂದು ಬಗೆಯ ಲೋಕಾರ್ಪಣ ಮನೋಭಾವದಿಂದಲೇ ಅಲ್ಲವೆ?
ಈಗ ಮತ್ತೆ ಪುಸ್ತಕ ಲೋಕಾರ್ಪಣೆಯ ವಿಷಯಕ್ಕೆ ಬರೋಣ. ಪುಸ್ತಕ ಮೇಳಗಳಲ್ಲಿ ಬೈಬಲ್ ಸೊಸೈಟಿ ಆಫ್ ಇಂಡಿಯಾದವರು ಬೈಬಲ್ಲುಗಳನ್ನೂ ಮಂಗಳೂರಿನ ಹಿದಾಯತ್ ಸೆಂಟರಿನವರು ಕನ್ನಡಕ್ಕೆ ಭಾಷಾಂತರವಾಗಿರುವ ಖುರಾನ್ ಹಾಗೂ ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟ ಇತರ ಗ್ರಂಥಗಳನ್ನೂ ಎಲ್ಲರಿಗೂ ಉಚಿತವಾಗಿ ನೀಡುವುದುಂಟು. ಈ ಪುಸ್ತಕಗಳು ಕಣ್ಮನ ಸೆಳೆಯುವಷ್ಟು ಸುಂದರವಾಗಿರುತ್ತವೆ. ಓದುಗರ ಮೇಲೆ ಯಾವ ಕ್ರಯವನ್ನೂ ಹೇರದೆ ಹೀಗೆ ಉಚಿತವಾಗಿ ಪುಸ್ತಕಗಳನ್ನು ಹಂಚುವುದಕ್ಕೂ ಲೋಕಾರ್ಪಣ ಮನೋಧರ್ಮ ಅಗತ್ಯ.
ಸೋವಿಯೆತ್ ಯೂನಿಯನ್ ಇನ್ನೂ ಜೀವಂತವಾಗಿದ್ದಾಗ ಮಾಸ್ಕೋದಲ್ಲಿ ಪ್ರಕಟವಾದ ಕಾರ್ಲ್ ಮಾರ್ಕ್ಸ್ , ಲೆನಿನ್ ಬರಹಗಳ ಹಾಗೂ ರಷ್ಯನ್ ಸಾಹಿತ್ಯದ ಕೆಲವು ಕೃತಿಗಳ ಇಂಗ್ಲಿಷ್ ಅನುವಾದಗಳು ಸುಲಭ, ಅಂದರೆ ಅಗದೀ ಸುಲಭ ಬೆಲೆಗೆ (ಹತ್ತಿಪ್ಪತ್ತು ರೂಪಾಯಿಗೆ) ದೊರೆಯುತ್ತಿದ್ದವು. ಆಗ ಕೆಲವು ಕನ್ನಡ ಅನುವಾದಗಳೂ ಪ್ರಕಟವಾದದ್ದುಂಟು. ಅಂಥ ಅನುವಾದಗಳಲ್ಲಿ ಒಂದು ‘ಲೆವ್ ತೋಲ್ಸ್ತೋಯ್ ನೀಳ್ಗತೆಗಳು’. 1981ರಲ್ಲಿ ಪ್ರಕಟವಾದ, (ಓದಿಸಿಕೊಳ್ಳದ ಪುಸ್ತಕಗಳಲ್ಲಿ ಅಗ್ರಪಂಕ್ತಿಗೆ ಸೇರುವ), 442 ಪುಟಗಳ, ಅತ್ಯುತ್ತಮ ಕಾಗದದಲ್ಲಿ ಅಚ್ಚಾಗಿರುವ, ದಪ್ಪ ರಟ್ಟಿನ ಕವಚವುಳ್ಳ ಈ ಪುಸ್ತಕದ ಬೆಲೆ ಕೇವಲ ರೂ. 10. ಈ ಬೆಲೆಯನ್ನು ನಿರ್ಧರಿಸುತ್ತಿದ್ದವರು ಮೂಲ ಪ್ರಕಾಶಕರಲ್ಲ; ಭಾರತದಲ್ಲಿ ಈ ಪುಸ್ತಕಗಳನ್ನು ವಿತರಿಸುವ ಪರವಾನಗಿಯಿದ್ದ ಕಮ್ಯೂನಿಸ್ಟ್ ಪಕ್ಷದ ಪುಸ್ತಕ ಪ್ರಕಾಶನ ವಿಭಾಗದವರು. ಅತ್ಯಲ್ಪ ಬೆಲೆಗೆ ಮಾರಾಟ ಮಾಡುತ್ತಿದ್ದ ಇಂಥ ಪುಸ್ತಕಗಳು ಅರೆ ಲೋಕಾರ್ಪಣೆಗಾದರೂ ಅರ್ಹವಾಗಿದ್ದವೆನ್ನಬೇಕು.
ಪ್ರಕಾಶಕರು ಪ್ರಕಟಿಸುವ ಒಂದು ಪುಸ್ತಕದ ಲೇಖಕನಿಗೆ ಅಥವಾ ಲೇಖಕಿಗೆ ಅದರ ಕಾಪಿರೈಟ್ ಅಥವಾ ಗ್ರಂಥಸ್ವಾಮ್ಯವಿರುತ್ತದೆ. ಆದ್ದರಿಂದ ಯಾರೇ ಆಗಲಿ ಆ ಪುಸ್ತಕವನ್ನು ಪುನಮರ್ುದ್ರಿಸುವುದಕ್ಕೆ, ಬೇರೊಂದು ಭಾಷೆಗೆ ಅನುವಾದಿಸುವುದಕ್ಕೆ, ನಾಟಕವಾಗಿ, ಚಲನಚಿತ್ರವಾಗಿ ರೂಪಾಂತರಿಸುವುದಕ್ಕೆ ಆ ಲೇಖಕನ / ಲೇಖಕಿಯ ಅನುಮತಿ ಪಡೆಯಬೇಕು. ಜೊತೆಗೆ ಗೌರವಧನ ಎಂಬುದೊಂದೂ ಉಂಟಷ್ಟೆ.
ಲೇಖಕ ನಿಧನನಾದ ಅರವತ್ತು ವರ್ಷಗಳ ನಂತರ ಅವನ ಕೃತಿಗಳು ಸಾರ್ವಜನಿಕ ವಲಯಕ್ಕೆ ಸೇರುತ್ತವೆಯಂತೆ. ಆಗ ಅವನ ಕೃತಿಗಳನ್ನು ಯಾರದೇ ಅನುಮತಿಯಿಲ್ಲದೆ ಯಾರು ಬೇಕಾದರೂ ಪ್ರಕಟಿಸಬಹುದು. ಆದರೆ ಡಬ್ಲ್ಯು.ಬಿ. ಯೇಟ್ಸ್, ಡಿ.ಎಚ್. ಲಾರೆನ್ಸ್ರಂಥ ಬ್ರಿಟಿಷ್ ಮತ್ತು ಅಮೆರಿಕನ್ ಲೇಖಕರ ಕುಟುಂಬಗಳವರು ‘ಎಸ್ಟೇಟ್’ ಎಂಬ ಹೆಸರಿನಲ್ಲಿ ಟ್ರಸ್ಟುಗಳನ್ನು ಸ್ಥಾಪಿಸಿಕೊಂಡಿರುತ್ತಾರೆ. ಹಾಗಿದ್ದಾಗ ಅರವತ್ತು ವರ್ಷವಾದ ನಂತರವೂ ಅನುಮತಿ ಪಡೆಯಲೇಬೇಕು. ನಮ್ಮಲ್ಲಿ ಕೂಡ ಈಗ ಆ ಬಗೆಯ ಟ್ರಸ್ಟುಗಳು ತಲೆಯೆತ್ತುತ್ತಿವೆ.
ಒಟ್ಟಿನಲ್ಲಿ ಪುಸ್ತಕವೂ ಒಂದು ಉದ್ಯಮ. ಪ್ರಕಾಶಕರಾದವರು ಕಾಗದಕ್ಕೆ, ಮುದ್ರಣಕ್ಕೆ, ಅಂದಚಂದಕ್ಕೆ ಹಣ ಖಚರ್ುಮಾಡಿ, ಬರೆದವರಿಗೆ ಗೌರವ ಧನ ಕೊಟ್ಟು ಪ್ರಕಟಿಸುವ ಪುಸ್ತಕ ಒಂದು ನಿರ್ದಿಷ್ಟ ಬೆಲೆಗೆ ಮಾರಾಟವಾಗಲೇಬೇಕು. ಇದರಲ್ಲಿ ‘ಲೋಕಾರ್ಪಣೆ’ಯೇನು ಬಂತು?
ಹತ್ತಾರು ವರ್ಷಗಳ ಹಿಂದೆ ತಮಿಳುನಾಡಿನ ಸರಕಾರ – ಬಹುಶಃ ಜಯಲಲಿತಾ ಎರಡನೇ ಬಾರಿ ಮುಖ್ಯ ಮಂತ್ರಿಯಾಗಿದ್ದಾಗ – ತಮಿಳಿನ ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ಸಮಗ್ರ ಕೃತಿಗಳನ್ನು ಅವುಗಳ ಸರ್ವಸ್ವಾಮ್ಯ ಹೊಂದಿದವರಿಂದ ಕೆಲವು ಲಕ್ಷ ರೂಪಾಯಿಗಳಿಗೆ ಕೊಂಡುಕೊಂಡು, ನಂತರ ಅವುಗಳು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿತು. ಈಗ ಆ ಕೃತಿಗಳನ್ನು ಯಾರು ಬೇಕಾದರೂ ಯಾವ ರೂಪದಲ್ಲಾದರೂ ಮುದ್ರಿಸಬಹುದು, ಪ್ರಕಟಿಸಬಹುದು, ಸಿಡಿ, ಕೇಳು ಪುಸ್ತಕ ಮೊದಲಾದವುಗಳ ಮೂಲಕ ಪ್ರಸಾರಮಾಡಬಹುದು, ನಾಟಕ, ಸಿನಿಮಾಗಳಿಗೆ ರೂಪಾಂತರಿಸಬಹುದು. ಅದಕ್ಕಾಗಿ ಯಾರ ಅನುಮತಿಯನ್ನೂ ಪಡೆದುಕೊಳ್ಳಬೇಕಿಲ್ಲ, ಯಾರಿಗೂ ಗೌರವ ಧನ ನೀಡಬೇಕಿಲ್ಲ. ನನ್ನ ದೃಷ್ಟಿಯಲ್ಲಿ ಪುಸ್ತಕ ಲೋಕಾರ್ಪಣೆಯೆಂದರೆ ಬಹುಶಃ ಇದೇ.
 

‍ಲೇಖಕರು G

10 July, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading