ಪುಸ್ತಕದ ಪುಟಗಳಲ್ಲಿ ಅಜ್ಜನ ಹೆಸರಿದೆ, ದಯವಿಟ್ಟು ನನ್ನ ಹೆಸರನ್ನು ಸೇರಿಸಿ..

NRC ( National Register of Citizens)

ಆಕರ್ಷ ರಮೇಶ್ ಕಮಲ

ಹಸಿದ ಬೆಟ್ಟ ಗುಡ್ಡಗಳಾಚೆ
ಗಾಯಗೊಂಡ ಮಣ್ಣು ರಸ್ತೆ
ಕನಸ ಸುಡುಬಿಸಿಲ ಹಗಲು
ದಿಗಿಲು ಕಣ್ಣುಗಳಲ್ಲಿ
ನಿದ್ರಿಸದ ಇರುಳು
ಭೂಮಿ ಹೊತ್ತ ಪುಟ್ಟ ಬೆರಳುಗಳಲ್ಲಿ
ಬೇಲಿಗಳಾಚೆಗಿನ ನಗು
ಬರಿಗಾಲ ನಕ್ಷತ್ರಕ್ಕೆ
ಹೊಸದೊಂದು ಶವಪೆಟ್ಟಿಗೆ

ಶತಮಾನಗಳ ನೂಲು ನೇಯ್ದ
ಅಲ್ಲಲ್ಲೇ ಹರಿದ ಬಟ್ಟೆ,ಕಳಚಿ ಬೆತ್ತಲಾಗಿ
ನೀವೇ ಹಾಕಿಸಿದ ಡಾಂಬರಿನ
ರಸ್ತೆಗೆ ಬಂದಿಳಿದಿದ್ದೇನೆ
ದೂರದ ನನ್ನೂರಲ್ಲಿ ಸಿಗದ
ಒಂದು ಹಿಡಿ ಪ್ರೀತಿ, ಮುಷ್ಟಿಯಷ್ಟು ಊಟ
ಸೂರು ಅಷ್ಟೇ !
ಡಾಂಬರಿನ ರಸ್ತೆಯ ಬಿಸಿ
ಅಸ್ಮಿತೆಯನ್ನು ಆವಿಯಾಗಿಸಿದೆ.
ವಾಸನೆ, ಚರ್ಮ, ಕಣ್ಣಿನ ಹೊಳಪು
ಎಲ್ಲವೂ ಇಲ್ಲಿ ಕ್ಷುಲ್ಲಕ
ಉಸಿರಲ್ಲಿ ಬೆರೆತು ಹೋದ ಕಥೆಗಳಿಗೆ
ಈ ಮಣ್ಣಿನಲ್ಲಿ ಜಾಗವಿಲ್ಲ

ನನ್ನ ಸುತ್ತಲೂ ಚಿಟ್ಟೆಗಳಿವೆ
ಎಂದು ಕನಸು ಕಾಣುತ್ತೇನೆ
ನಾ ಮೆತ್ತಿಕೊಂಡ ಬಣ್ಣಗಳ ಬಗ್ಗೆ ಅವಕ್ಕೆ ತಿಳಿದಿದೆ
ಸಿಮೆಂಟಿನ ಗೋಡೆಯೂ ಇಲ್ಲಿ ಕಾನೂನು !
ನಿಮ್ಮ NRC ಬುಕ್ಕುಗಳಲ್ಲಿ ನಾ ಬರೆದ
ಮೊದಲ ಕವಿತೆ, ನಾ ಪ್ರೇಮಿಸಿದ ಹುಡುಗಿ,
ಇಷ್ಟದ ಆಟ , ಅಪ್ಪನ ಸ್ಕೂಟರ್, ಅಮ್ಮನ ಕಣ್ಣೀರು,
ತಮ್ಮನ ಹರಿದ ಚಡ್ಡಿ ಇವ್ಯಾವು ಇರುವುದಿಲ್ಲ

ನಿಮ್ಮದೇ ಕಾರುಗಳಲ್ಲಿ
ಯುನಿಫಾರ್ಮ್ ಧರಿಸಿದ ಅವರ ಬಗ್ಗೆಯೇ ಚಿಂತೆ !
ಮರದ ತುಂಡೊಂದು ನದಿಗಳಲ್ಲಿ ತೇಲುತ್ತ
ಕಣ್ಣೀರು ಹಾಕುವುದನ್ನು
ಬೆಟ್ಟವೊಂದು ಗುಟ್ಟುಗಳನ್ನು
ಮಣ್ಣಲ್ಲಿ ಬಚ್ಚಿಡುವುದನ್ನು
ಹೂವಿನ ದಳಗಳು ಪುಟ್ಟ ಹುಡುಗಿಯ
ಲಂಗದ ಮೇಲೆ ಮೆತ್ತಿಕೊಳ್ಳುವುದನ್ನು
ಈ ನೆಲ, ನನ್ನ ಆ ನೆಲದ ಬಿರುಕನ್ನು ಮುಚ್ಚುವುದನ್ನು
ನೋಡಲು ಬಿಡುವರೇ !

ಬದುಕು ಅರಸುತ್ತ ನಿದ್ದೆ ಮಾಡದ ನಗರಕ್ಕೆ ಕಾಲಿಟ್ಟ
ನನ್ನ ಹೆಸರಿನೊಂದಿಗೆ ಇಲ್ಲಿ ಕ್ಯಾನ್ಸರ್ ಅಂಟಿಕೊಂಡಿದೆ
ಎಷ್ಟಾದರೂ ನಾನೊಬ್ಬ ನಿರಾಶ್ರಿತ
ನಿಮ್ಮ ಕೆಲಸಗಳನ್ನು ಕಿತ್ತುಕೊಳ್ಳುವ ರಕ್ಕಸ

ನೆನಪುಗಳ ಹೊರತು ನನ್ನ ಬಳಿ ಮತ್ತೇನಿಲ್ಲ
ನನ್ನನ್ನೇ ಮರೆತು ಬದುಕುತ್ತಿದ್ದೇನೆ
ಆ ಗಡಿಯ ದಾಟಿ ಈ ಗಡಿಗೆ ಬಂದದ್ದು
ನೆತ್ತರಿಲ್ಲದ ಹೂಗಳ, ಯುದ್ಧವಿಲ್ಲದ ಪಾರ್ಕುಗಳನ್ನು ಹುಡುಕುವುದಕ್ಕೆ

ಪುಸ್ತಕದ ಪುಟಗಳಲ್ಲಿ ಅಜ್ಜನ ಹೆಸರಿದೆ,
ದಯವಿಟ್ಟು ನನ್ನ ಹೆಸರನ್ನು ಸೇರಿಸಿ

‍ಲೇಖಕರು avadhi

December 3, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಒಳ್ಳೆಯ ಕವಿತೆ, ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: