ರಿಚಿ 

ಡಿ ನಳಿನ 

ರಿಚಿ, ರಚನಾಳಿಗೆ ಫ್ರೆಂಡ್ಸ್ ಕರೆಯುವ ಹೆಸರು, ಮೊನ್ನೆಯಷ್ಟೇ ಪಿಯು ಮುಗಿಸಿ ಡಿಗ್ರಿ ಸೇರಿದ ಮೇಲೆ ಅಪ್ಪ ಅಮ್ಮನಿಗೆ ಹೇಳದ ಹಾಗೆ ಅವಳದೂ ಒಂದು ಪ್ರೇಮಕತೆ ಶುರುವಾಯಿತು.  ಅದೇನೆಂದರೆ, ಸಮದ್ ಜೊತೆಗೆ ಅಚಾನಕ್ ಆಗಿ ತನ್ನೊಳಗೇ ತಾನೇ ಪ್ರೇಮಿಸುತ್ತಿದ್ದೇನೆಂದು ಗುರುತಿಸಿಕೊಂಡುಬಿಟ್ಟಳು, ಹಾಗೆಯೇ ತರ್ಕ ಓದಿಕೊಂಡಿದ್ದ ಉದ್ದನೆಯ ನಿಲುವಿನ ಫ್ರೆಂಚ್ ಬಿಯರ್ಡ್ ಹೊಂದಿದ್ದ ಮಾಡ್ರನ್ ಹುಡುಗ ಸಮದ್, ಬಿಡುವಿನ ವೇಳೆಯಲ್ಲಿ ದೇವರ ಬಗ್ಗೆ ಪಾಪಕರ್ಮದ ಬಗ್ಗೆ ಚರ್ಚೆ ಮಾಡುವ ಹವ್ಯಾಸ ಇಟ್ಟುಕೊಂಡ ಹುಡುಗ ಹೇಗೋ ಇವಳಿಗೂ ಅಂತದ್ದೊಂದು ಚರ್ಚೆಯಲ್ಲಿ ತೊಡಗಿದ ಹಂತದಲ್ಲಿದ್ದಾಗ ಮೆಚ್ಚಿಸಿಕೊಂಡ, ಸರಿ, ಪ್ರೇಮವಾಯಿತು, ಪ್ರೇಮಕತೆ ಅಲ್ಲಿಗೆ ಪ್ರಾರಂಭವೇನೋ ಆಯಿತು, ಆದರೆ ಜಾತಿ-ಧರ್ಮ ಇತ್ಯಾಧಿ ಗೋಡೆಗಳ ಭಯವೂ ಒಳಗೊಳಗೆ ಇದ್ದೇ ಇದ್ದರೂ ಸಹ, ಒಬ್ಬರನ್ನೊಬ್ಬರು ಹೀಗೇ ಪ್ರೀತಿಸುತ್ತೀವಾ, ಒಟ್ಟಿಗೆ ಬಾಳಲು ತಾಕತ್ತಿರುವವರಾ? ಮಧುವೆಯಾಗಬಲ್ಲೆವಾ? ಇಂತಿಪ್ಪ ಪ್ರಶ್ನೆಗಳನ್ನೆಲ್ಲಾ ತಮ್ಮೊಳಗೆ ಹಾಕಿಕೊಂಡು ಉತ್ತರಗಳಿಲ್ಲದೆ ಉಸಿರುಬಿಡುತ್ತಿದ್ದರು.”ಅದಕ್ಕೆಲ್ಲಾ ಇನ್ನೂ ಟೈಮ್ ಇದೆಯಲ್ಲಾ, ಮೊದಲು ನಿನ್ನ ಓದು ಮುಗಿಯಲಿ, ನಾನೂ ಸೆಟಲ್ ಆಗಿಬಿಡುತ್ತೇನೆ’’ ಎಂದು ಸಮದ್ ಸಮರ್ಥವಾಗಿ ರಿಚಿಗೆ ಸಮಾಧಾನ ಮಾಡುತ್ತಿದ್ದ.  ಇಂಥ ಒಳಮನ್ನಸಿನ ಹತೋಟಿ ಮೀರಿದ ಪ್ರಶ್ನೆಗಳ ನಡುವೆ ಕರ್ಮಫಲಗಳ ಕುರಿತಾದ ಚರ್ಚೆಯೊಂದರಲ್ಲಿ ರಿಚಿಗೆ ಸಮದ್ ಹೇಳಿದ್ದೆಲ್ಲಾ ಅಸಲಿ ಪ್ರಭಾವ ಭೀರಲು ಶುರುವಿಟ್ಟಿತು, ನಿಜ! ಪ್ರತಿಯೊಬ್ಬರೂ ತಂದೆ-ತಾಯಿಯ ವಶ, ಏಕೆಂದರೆ ದೇಹದಲ್ಲಿನ ಪ್ರತಿಯೊಂದು ಅಂಗಾಂಗಗಳೂ ಅಪ್ಪ-ಅಮ್ಮನ ಋಣ ಹೊತ್ತು ನಿಂತಿರುತ್ತದೆ, ಅಷ್ಟೇ ಅಲ್ಲ, ಭೂಮಿಗೆ ಬಂದಂದಿನಿಂದ ಎದೆಹಾಲು ಹೀರಿ, ಅಮ್ಮನ ಬೆಚ್ಚನೆಯ ಅಪ್ಪುಗೆಯಲ್ಲಿ ಪವಡಿಸಿ, ಅಪ್ಪನ ಹೆಗಲೇರಿ ಆಡುವರೆಗೂ ಮನೆಯವರು ಎರೆದ ಪ್ರೀತಿ, ಮುಂದುವರೆದು ಇಷ್ಟುದೊಡ್ಡ ಆಕಾರಕ್ಕೆ ಬೆಳೆದು ನಿಂತ ಪೈರಿನಂತೆ, ಯೌವನ ತುಂಬಿ ನಗುವವರೆಗೂ ಕಲಿಸಿದ ನೀತಿ, ಸಂಸ್ಕೃತಿ, ಬೆಳೆಸಿದ ವ್ಯಕ್ತಿತ್ವ, ನೀರಿನಂತೆ ಧಾರೆ ಧಾರೆಯಾಗಿ ಸುರಿದ ಸಮಯ ಮತ್ತು ದುಡ್ಡು, ಅದೂ ಸಹ ಅಪ್ಪ ಅಮ್ಮ ಇಬ್ಬರದ್ದು.  ಹೀಗೇ ಆ ಹುಡುಗಿ ಕನ್ ಫ್ಯೂಸ್ ಮಾಡಿಬಿಟ್ಟು ತನ್ನ ಫಿಲಾಸಮಿಯೊಂದಿಗೆ ಮೆರೆಯುತ್ತಿದ್ದ ಸಮದ್ ಇಚೀಚೆಗೆ ತಾನೂ ಖುದ್ದು ಕನ್ಫೂಸ್ ಆಗಿಬಿಟ್ಟಿದ್ದ, ಏಕೆಂದರೆ ಹಿನ್ನೇಲೆಯಲ್ಲಿ ಆತ ತರ್ಕಶಾಸ್ತ್ರದ ಡಿಗ್ರಿ ಹೊಂದಿದ್ದರಿಂದ ಇನ್ನೇನೂ ಮಾಡಲು ಹಣದ ಅಡಚಣೆ ಇಲ್ಲದಿದ್ದರೂ, ಓದು ಇಷ್ಟೇ ಸಾಕು ಎಂದು ಕೆಲಸ ಹುಡುಕಿಕೊಂಡಿದ್ದರಿಂದ ಅಲ್ಲಿ ತಥಾಯಗಥಾಯ ಶ್ರಮಪಡಬೇಕಾದ ಸೀನ್ ಇತ್ತು. ಅದಕ್ಕೆ ತಕ್ಕ ಹಾಗೆ ನೈಟ್ ಶಿಫ್ಟ್, ಡೇ ಶಿಫ್ಟ್ ಅಂತೆಲ್ಲಾ ಬದಲಾವಣೆ ಮಾಡಿಕೋತಾ, ರಿಚಿಗೂ ಭೇಟಿ ಮಾಡಲು ತ್ರಾಸು ಕೊಡುತ್ತಿದ್ದ.

ರಿಚಿ ತನ್ನನ್ನು ತಾನು ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂದಾಗಲೆಲ್ಲಾ ಸಮದ್, ’ನೋ ವೇ, ವಿ ಆರ್ ರೈಸಿಂಗ್ ಇನ್ ಲವ್’ ಅಂತ ಪಾಠ ಹೇಳುತ್ತಿದ್ದ.  ಕಾಲೇಜಿನಲ್ಲಿ ಪಾಠ ಮಾಡುವ ವೇಳೆ ಮಾಸ್ಟರೊಬ್ಬರು ಇತ್ತೀಚಿನ ಯುವಕರ ವರ್ತನೆಯ ಕುರಿತು ತರಗತಿಯಲ್ಲಿ ಬಹಿರಂಗವಾಗಿ ಹೀಗೆ ಹೇಳಿದ್ದರು ’ಪ್ರೀತಿಗೊಂದು ಅರ್ಥವಿದೆ, ಸೌಂಧರ್ಯವಿದೆ, ಅದು ಬಾಹ್ಯಸೌಂದರ್ಯವಲ್ಲ, ಆತ್ಮಸೌಂಧರ್ಯ. ಪ್ರೀತಿಸುವವರು ಎಂದಿಗೂ ದೈಹಿಕ ಸಂಬಂಧಕ್ಕೆ ಬೆಸಗೊಳ್ಳುವುದಿಲ್ಲ, ಅದೇನಿದ್ದರೂ ಲಸ್ಟ್ ಹೆಸರಿನ ಲವ್ ಅಷ್ಟೇನೇ, ನಾನಿನ್ನ ಮರೆಯಲಾರೆ ಎಂದು ಪಾರ್ಕಿನ ಪೊದೆಗಳ ನಡುವೆ ಹೇಳ್ತಾರೆ, ಅದೇ ಪಬ್ಲಿಕ್ ನಲ್ಲಿ ನಾನ್ಯಾರೋ ನಿನ್ಯಾರೋ ಅಂತ ಓಡಿಹೋಗ್ತಾರೆ ಇದೆಲ್ಲಾ ಲವ್ವಾ?’ ಹೀಗಾಗಿ ಕಾಲೇಜು ಹುಡುಗಿಯರಿಗೆ ತೀರಾ ಗೊಂದಲಗಳು ಶುರುವಾಗಿದ್ದವು, ಅದರಲ್ಲೊಬ್ಬಳು ರಿಚಿಯೂ ಆಗಿದ್ದಳು. ಇದೇ ಸಮಯದಲ್ಲಿ ರಿಚಿಗೆ ಕಣ್ಣಿಗೆ ಬಿದ್ದ ಪತ್ರಿಕೆಯಲ್ಲಿ ಸಂದರ್ಶನ ನೀಡಿದ ಸ್ವಾಮೀಜಿಯೊಬ್ಬರು ’ಹರಯದಲ್ಲಿ ದೇಹಗಳ ಮೂಲಕ ಪ್ರೀತಿ ಹುಟ್ಟುತ್ತದೆ, ಆದರೆ ಮುಪ್ಪಿನಲ್ಲಿ ನಿಜವಾದ ಪ್ರೀತಿ ಹುಟ್ಟಲು ಸಾಧ್ಯ, ಏನೇ ಆದರೂ ನಿರ್ಮಲ ಪ್ರೀತಿಯನ್ನು ಕಡೆಗಣಿಸುವಂತಿಲ್ಲ’ ಎಂಬ ಹೇಳಿಕೆ ಕೊಟ್ಟಿದ್ದರು.

ಇದೇ ಕುರಿತು ಮತ್ತೆ ಯೋಚಿಸಿದಾಗ, ನಾನಂತೂ ಆ ಕ್ಯಾಟಗಿರಿ ಅಲ್ಲವೇ ಅಲ್ಲ ಅನ್ನುವ ಧೈರ್ಯವೂ ಹುಟ್ಟಿಕೊಳ್ಳುತ್ತಿತ್ತು. ಆದರೂ ಸಮದ್ ನನ್ನು ನೋಡಲು ಮನಸು ಹಾತೊರೆಯುತ್ತಿತ್ತು.  ಭೇಟಿಗಂತಲೇ ಕಾಫಿ ಪೇಯ ಸಿದ್ದ ಪಡಿಸಿ ಮಾರುವ ದೊಡ್ಡ ಅಂಗಡಿಗಳಲ್ಲಿ ಕೂತು, ತಿನ್ನಲಾಗದನ್ನೆಲ್ಲಾ ತಿಂದು, ಕುಡಿಯಲಾಗದ್ದೆಲ್ಲಾ ಕುಡಿದು ಮುಖಾ-ಮುಖ ನೋಡುತ್ತಾ ನಿಜವಾದ ಸಂಜ್ನೆಗಳನ್ನು ಮುಚ್ಚಿಟ್ಟು ಮುಗುಳ್ನಗುತ್ತಾ ಬಿಲ್ ಕೊಟ್ಟು ಎದ್ದು ಬರುತ್ತಿದ್ದರು ಇಬ್ಬರೂ ಒಮ್ಮೊಮ್ಮೆ ಜಾಣಪೆದ್ದರಂತೆಯೇ ಒಬ್ಬರಿಗೊಬ್ಬರು ಕಾಣಿಸಿಕೊಳ್ಳುತ್ತಿದ್ದರು. ರಿಚಿ ಹಿಂದೂ ಧರ್ಮದವಳಾದರು ಸಮದ್ ಮುಸ್ಲಿಂ ಧರ್ಮದವನಾದರೂ ಇಬ್ಬರಲ್ಲಿ ಧಾರ್ಮಿಕ ಹಿತಾಸಕ್ತಿಯ ವಿವಾದಗಳುಟ್ಟಲಿಲ್ಲ.

ರಿಚಿಗೆ ಮಲೇರಿಯಾ ಬಂತೆಂದಾಗ ಸಮದ್ ತನಗೆ ಗೊತ್ತಿದ್ದ ದರ್ಗಾಗೂ ಭೇಟಿ ಮಾಡಿ ತಾಯತ ತಂದಿದ್ದ, ಜೊತೆಗೆ ಕಾಳಿ ಆಲಯಗಳಿಂದ ತಾಯತ ತರುವುದನ್ನು ಮರೆತಿರಲಿಲ್ಲ, ಎಲ್ಲಾ ಸರಿಹೋದ ಮೇಲೆ ಅವಳನ್ನೂ ಕರೆದುಕೊಂಡು ಹೋಗಿ ದರ್ಗಾ ಮತ್ತು ಕಾಳಿ ದೇವಾಲಯದ ದರ್ಶನ ಮಾಡಿಸಿಕೊಂಡು ಬಂದಿದ್ದ.  ಇದೇ ಕೃತಜ್ನತಾಭಾವದಿಂದ ರಿಚಿ ರಂಜಾನ್ ನಲ್ಲೊಂದು ದಿನ ಡಯಟ್ ಹೆಸರಿನಲ್ಲಿ ಉಪವಾಸ ಮಾಡಿ ಸೈ ಎನಿಸಿಕೊಂಡಳು.  ತಾನೂ ಬಾಲ್ಯದಲ್ಲಿ ಆಗಾಗ ದರ್ಗಾಗೆ ಹೋಗಿದ್ದು, ಒಮ್ಮೆ ಬಾಯಾರಿದಾಗ ಅಲ್ಲಿಯೇ ನೀರು ಕುಡಿದ ಹಳೆಯ ನೆನಪನ್ನು ಹೇಳಿಕೊಂಡಿದ್ದಳು. ಇಬ್ಬರೂ ಒಟ್ಟಿಗೆ ಸೇರಿದಾಗ ಹಂಚಿಕೊಳ್ಳದ ವಿಷಯಗಳಿಲ್ಲ, ಹೇಳಿಕೊಳ್ಳದ ಸತ್ಯಸಂಗತಿಗಳಿಲ್ಲ.  ಪ್ರತಿ ಭೇಟಿಯಲ್ಲಿಯೂ ಕಣ್ಣೋಟಗಳನ್ನು ಬೆಸೆದಾಗ, ರಿಚಿ ನಾಚಿ ನೀರಾಗಿ ನೋಟ ಬೇರೆಡೆಗೆ ತಿರುಗಿಸುತ್ತಿದ್ದಳು.  ಸಮದ್ ಗೆದ್ದವನಂತೆ ಕೆನೆದು ನಗುತ್ತಿದ್ದ.

ಮೊಟ್ಟಮೊದಲಬಾರಿಗೆ ರಿಚಿಗೆ ಸಮದ್ ಒಂದು ಕಡೆ ಡೇಟಿಂಗ್ ಗಾಗಿ ಕರೆದೊಯ್ದ.  ಬೆಕೆಂತಲೇ ಬೈಕಿನಲ್ಲಿ ಬ್ರೇಕ್ ಹಾಕಿ ಮೈಗೆ ಮೈ ತಾಕಿಸಿಕೊಳ್ಳುವ ಪೋಲಿ ಹುಡುಗರ ಹಾಗೆ ರೈಡ್ ಮಾಡದಿರುವುದನ್ನು ಕಂಡು ಅಚ್ಚರಿಪಟ್ಟಳು.  ಬಾಳ ಹಾದಿ ಹೀಗೆ ಸಂಭಾಳಿಸುತ್ತಾನೆ ಎನ್ನುವ ಭರವಸೆಯನ್ನ ತಂಗಾಳಿ ಅವಳೆದೆಗೆ ತೀಡುತ್ತಿತ್ತು. ಕರೆದುಕೊಂಡೋಗೋದು ಇನ್ನೆಲ್ಲಿಗೂ ಅಲ್ಲ, ಹೊಸದಾಗಿ ಅವನ ಕಸಿನ್ ಬ್ರದರ್ ಖರೀದಿಸಿದ್ದ ಫ್ಲಾಟಿಗೆ ಅಂತ ದಾರಿಯಲ್ಲಿ ಹೇಳಿದ್ದನ್ನು ತನ್ನ ಗೆಳತಿಗೆ ಟೆಕ್ಸ್ಟ್ ಮಾಡಿ ಉತ್ತರ ನೋಡಿ ಬೆಚ್ಚಿಬಿದ್ದಳು.  ’’ಲೇ, ಅವನ್ಯಾರೋ ಸರಿಯಾದವಾ, ನಿನ್ನ ಫ್ರೆಂಡ್ ಕರೆದುಕೊಂಡು ಹನಿಮೂನ್ ಮಾಡಿ ಫ್ಲಾಟ್ ಇನಾಗರೇಟ್ ಮಾಡ್ತಾನೆನೋ, ಯಾಕೆ ಹೋಗ್ತೀದ್ದಾಳೆ ನಿನ್ನ ಫ್ರೆಂಡ್, ಹೋಗಬೇಡಾ ಅಂತೇಳು” ಎಂಬ ಸಂದೇಶ ರವಾನಿಸಲಾಗಿತ್ತು.  ಹಾಗೆ ಕಳಿಸಿದ್ದು ಅವಳ ಕತರ್ನಾಕ್ ಗೆಳತಿ ಕೋಕಿಲಾ, ಅವಳಿಗೆ ಶಾರ್ಟ್ ಫಾರ್ಮ್ ಕೊಕ್ಕೆ.  ಎಲ್ಲಾದಕ್ಕೂ ಕೊಕ್ಕೆ ಹಾಕುವುದು ಸ್ವಭಾವತಃ ಬೆಳೆಸಿಕೊಂಡಿದ್ದರು.  ಅದೇ ಸ್ವಭಾವಕ್ಕೆ ಕಾಲೇಜಿನಲ್ಲಿ ಫೇಮಸ್ ಕೂಡಾ ಆಗಿದ್ದಳು.  ರಿಚಿ ತನ್ನ ಬದಲು ” ತನ್ನ ಯಾವುದೋ ಸ್ಕೂಲ್ ಡೆ ಗೆಳತಿ   ಹೊಸ ಫ್ಲಾಟ್ ನೋಡೋಕೆ ಬಾಯ್ ಫ್ರೆಂಡ್ ಜೊತೆ ಅವನ ಕಸಿನ್ ಖರೀದಿಸಿದ ಫ್ಲಾಟ್ ನೋಡಲು ಹೋಗ್ತಿದ್ದಾಳೆ’ ಅಂತ ಹೇಳಿ ಟೆಕ್ಸ್ಟ್ ಕಳಿಸಿದ್ದಳು.  ಉತ್ತರ ಕಂಡು ಸ್ಟನ್ ಆದಳು.  ಮೈಯೆಲ್ಲಾ ಒಮ್ಮೇಲೆ ಬೆವೆತು ಹೋಯುತು.  ಸಡನ್ನಾಗಿ ಅವಳ ದನಿಯಲ್ಲಿ ಬದಲಾವಣೆಯೂ ಆಯಿತು.  ಹೊಟ್ಟೆನೋವು ಅಂತ ಸುಳ್ಳು ಹೇಳಿ ಅರ್ಧ ದಾರಿಗೇ ವಾಪಸ್ಸು ಬಂದುಬಿಟ್ಟಳು.

ಇಬ್ಬರ ನಡುವೆ ಮತ್ತೆ ಸಂದೇಶಗಳು ಓಡಾಡಿ, ’ಆರಾಮಾಗಿದ್ರೆ ಬನ್ನಿ, ಸಣ್ಣ   ಮಾಲ್ ಗಾದ್ರು ಪರವಾಗಿಲ್ಲ’ ಅಂತ ಕರೆದವು. ”ಬಾಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಏಕೆಂದರೆ ನಾನೇನಿದ್ದರೂ ಅಪ್ಪ-ಅಮ್ಮನ ಸ್ವತ್ತು’, ಎಂಬುದು ಬಲವಾಗಿ ಅಚ್ಚೊತ್ತಿತ್ತು ಅವಳಲ್ಲಿ.  ರಿಚಿ ಮಾಲ್ ನ ಮೇಲುಗಡೆ ಫ್ಲೋರ್ ನಲ್ಲಿ ನಿಂತು ಕಾಯುತ್ತಿದ್ದಳು, ಸಮದ್ ಬಂದ, ಅವನ ಪ್ರತಿಯೊಂದು ಹೆಜ್ಜೆಯಲ್ಲೂ ಏನೋ ಪಡೆಯಲು ಬರುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ತೋರುತ್ತಿತ್ತು.  ಅವನ ಇಡಿ ದೇಹ ಯಾವುದೋ ಖುಷಿಗಾಗಿ ಹವಣಿಸುತ್ತಾ ಬರುತ್ತಿರುವುದು ಸೂಚ್ಯವಾಗುವಂತೆ ಗ್ರಹಿಸಬಲ್ಲಳು ರಿಚಿ, ಪ್ರತಿಯೊಂದು ಹೆಣ್ಣಿಗೂ ಒಂದು ಸೂಕ್ಷ್ಮಗ್ರಾಹಿ ಕಣ್ಣಿದ್ದಂತೆ ರಿಚಿಗೂ ಇತ್ತು.  ಮೋಜು ಯಾವುದು, ಮೋಹ ಯಾವುದೆಂಬ ಬೇಧವನ್ನು ಹೆಣ್ಣು ಎದುರಿಗಿರುವ ನಲ್ಲನ ಕಣ್ಣಿನಲ್ಲೇ ಹೊಕ್ಕಿ ನೋಡಬಲ್ಲಳಂತೆ, ಹಾಗೆಯೇ ರಿಚಿ ಸಹ ಕಂಡುಕೊಂಡಳು ನಲ್ಲನ ಇಚ್ಛೆ.

ಬೆಂಗಳೂರಿನಲ್ಲಿ ಮೊಟ್ಟಮೊದಲಿಗೆ ದೊಡ್ಡ ಮಾಲ್ ಆಂತ ಆಗಿದ್ದು ಇದೇ, ಆದ್ದರಿಂದ ಹೈಸ್ಕೂಲ್ ನಲ್ಲಿ ಆಗಾಗ್ಗೆ ಇಲ್ಲಿ ಭೇಟಿ ಮಾಡಿದ್ದು ಇನ್ನೂ ಹಸಿರು.  ಎಲ್ಲರೊ ಇಲ್ಲಿ ಖರೀದಿಯ ಹೆಸರಿನಲ್ಲಿ ಭೇಟಿಗೆ  ಅಂತಾನೆ ಬರೋದು.  ಹೆಚ್ಚುಕಡಿಮೆ ಅಲ್ಲಿ ಓಡಾಡುತ್ತಿದ್ದವರಲ್ಲಿ ಹೆಚ್ಚಿನವರು ಹರಯದವರು, ಅದೂ ಜೋಡಿಯಲ್ಲೇ ಹೆಣ್ಣಿನ ಕೈ ಗಂಡು ಹಿಡಿದುಕೊಂಡೇ ಅತಿಪ್ರೀತಿಯಿಂದ ನಡೆದುಹೋಗುವವರ ಕಂಡು ಮನಸ್ಸಿನಲ್ಲಿ ಹೀಗೆ ಅಂದುಕೊಂಡಳು.  ನಾನು ಹೈಸ್ಕೂಲ್ ನಲ್ಲಿದ್ದಾಗ ಗೆಳೆಯ ಗೆಳತಿಯರೊಂದಿಗೆ ಒಟ್ಟಾಗಿ ಸೇರಿ ಫಾಸ್ಟ್ ಫುಡ್, ಐಸ್ ಕ್ರೀಮ್, ಚಾಕೋಲೇಟ್ಸ್ ತಿಂದು ಖುಷಿಪಡಲಿಕ್ಕಾಗಿ ಬರುತ್ತಿದ್ದೆವು, ಪಿಯು ಕಲಿಯುವಾಗ ಹೊಸತೇನೋ ಟೇಸ್ಟ್ ಟ್ರೇ ಮಾಡಲೇಬೇಕು, ಚಿತ್ರ ವಿಚಿತ್ರವಾದ ಡ್ರೆಸ್ ಮೊದಲು ನಾನೇ ಖರೀದಿ ಮಾಡಿ ಧರಿಸಿ ಓರಗೆಯವರ ಹೊಟ್ಟೆ ಉರಿಸಬೇಕು ಎನ್ನುತ್ತಾ ದಂಡು ದಂಡೇ ಬಂದು ಜಾಲಿಯಾಗಿ ಖರೀದಿಸಿ ಮೋಜು ಮಾಡುತ್ತಿದ್ದೆವು, ಆದರೆ. . . . ಈಗೇನೋ ಫೀಲ್ ಆಗಿರೋ ತರಹ ಕಾಣಿಸುತ್ತಿತ್ತು ಮಾಲ್, ಪಕ್ಕದ ರೆಸ್ಟೋರೆಂಟ್ ನಲ್ಲಿ ಫ್ರೆಂಡ್ಸ್ ಸರ್ಕಲ್ ಜೊತೆ ಬಂದು ಬರ್ತ್ ಡೇ ಗೆ ಸಂಭ್ರಮಿಸಿದ ನೆನಪು ತಲೆಯೊಳಗೆ ಸುಳಿದವು.

ಇನ್ನೆಲ್ಲಿ ಹೋಗೋದು, ರಿಚಿಗೆ ಬೇಕಾದಷ್ಟು ಪಾಕೆಟ್ ಮನಿ ಇರುತ್ತಿತ್ತು, ಸಮದ್ ಈಗಷ್ಟೇ ದುಡಿಯಲು ಆರಂಭಿಸಿದವ, ಅವಳ ಶಾಫಿಂಗ್ ಬಿಲ್ ಕೊಡುವ ಮನಸ್ಸು ಇರಲಿಲ್ಲ ಅಂತಲ್ಲಾ, ಇವಳು ಅದಕ್ಕೆಲ್ಲಾ ಅವಕಾಶ ಕೊಡುವಂತೆಯೂ ಇರಲಿಲ್ಲ.  ಸರಿ ಲೈಟ್ ಆಗಿ ಜ್ಯೂಸ್ ಕುಡಿಯಲು ಅಲ್ಲೇ ಇದ್ದ ರೆಸ್ಟೋರೆಂಟ್ ಒಳ ಹೊಕ್ಕರು.  ಅದ್ಯಾಕೋ ಎದುರುಗಡೆ ಕೂತಿದ್ದ ಸಮದ್ ಅವಳ ಪಕ್ಕಕ್ಕೇ ಬಂದುಬಿಟ್ಟ, ಸಂಕೋಚದ ಮುದ್ದೆಯಾದ ಅವಳ ಮಾತು ನಿಂತುಹೋಯಿತು, ಸಮದ್ ಮೌನವಾಗಿಯೇ ಅವಳ ಕೈ ಹಿಡಿದುಕೊಂಡ, ರೆಸ್ಟೋರೆಂಟ್ ನಲ್ಲಿ ಅಷ್ಟು ಜನ ಇರಲಿಲ್ಲ, ಅಲ್ಲಲ್ಲಿ ಮಬ್ಬಾದ ಲೈಟ್ ಗಳು ಟೇಬಲ್ ನಡುವೆ ಮಬ್ಬಾಗಿ ತೂಕಡಿಸುತ್ತಿದ್ದಂತಿತ್ತು.  ಇಬ್ಬರನ್ನು ಯಾರೂ ಡಿಸ್ಟ್ರರ್ಬ್ ಮಾಡುವ ಪ್ರಮೇಯವೂ ಇರಲಿಲ್ಲ, ಏಕೆಂದರೆ ಆರ್ಡರ್ ಮಾಡಿದ್ದ ಜ್ಯೂಸ್ ಖಾಲಿ ಆಗಿರಲಿಲ್ಲ.

ಮೊದಲು ಕೆನ್ನೆಗೆ ಮುದ್ದಿಸಿದ, ನಂತರ ಮೆಲ್ಲಮೆಲ್ಲನೆ ಸಾವಕಾಶದಿಂದ ಅವಳ ಅದರದ ಮೇಲೊಂದು ಮುತ್ತುಕೊಟ್ಟ, ತಪ್ಪುಮಾಡಿಬಿಡುತ್ತೇನೆಂಬ ಭಾವನೆ ಅವಳಲ್ಲಿ ಮುಗ್ಗರಿಸಿ ಬಂದು ತಕ್ಷಣ ’ಎಕ್ಸ್ ಕ್ಯೂಸ್ ಮಿ’ ಅಂತ ಎದ್ದು ಹೋದಳು, ರೆಸ್ಟ್ ರೂಂ ಕಡೆಗೆ ಹೋದವಳನ್ನೇ ಕಾಯುತ್ತಾ ಕೂತ ಸಮದ್.  ಅದರ- ಪಾನವೇ ಲಭಿಸದಿದ್ದ ಮೇಲೆ ಇದೆಂಥಾ ಜ್ಯೂಸ್, ಕುಡಿಯದಿದ್ದರೂ ಬಿಲ್ ತೆತ್ತು ಕಾಯತೊಡಗಿದ. ದೂರದಲ್ಲಿ ಕಂಡ ರಿಚಿ ಕಣ್ಣು ಕೆಂಪಾಗಿದ್ದವು, ಅವಳಲ್ಲಿ ಕ್ಷಮೆ ಕೇಳದಿದ್ದರೆ ಮತ್ತೊಂದು ಭೇಟಿ ಸಾಧ್ಯವಿಲ್ಲ ಎಂದು ಎಣಿಸಿಕೊಂಡ.  ರಿಚಿಯ ಹೈಹೀಲ್ಡ್ ಚಪ್ಪಲಿಯ ಸದ್ದಿಗೆ ಬೆರರ್ ಓಡಿ ಬಂದು ಬಿಲ್ ಎತ್ತಿಕೊಂಡು ಹೋದ. ರಿಚಿ ನಿಲ್ಲಲಿಲ್ಲ. . ನಿಜವಾದ ಪ್ರೀತಿಯ ಫೀಲ್ ಸಮದ್ ನೊಳಗೆ ಸಂಚಲನವಾಗತೊಡಬಿತು.   ಒಬ್ಬಂಟಿಯಾಗಿ ತನ್ನ ತಪ್ಪನ್ನು ಅವಲೋಕಿಸತೊಡಗಿದ, ಭವಿಷ್ಯ-ಜೀವನ-ಸಂಗಾತಿ ಇತ್ಯಾಧಿ ಮನಸ್ಸಿನಲ್ಲಿ ಹುಯಿಲೆಬ್ಬಿಸಿದಾಗ ಅಲ್ಲೆಲ್ಲಾ ರಿಚಿ ದಿಗ್ಗನೆ ಎದ್ದುನಿಲ್ಲುತ್ತಿದ್ದಳು. ತನ್ನನ್ನು ಸಾಕಿ ಸಲಹಿದ ಚಿಕ್ಕಪ್ಪ ಅಬುದಾಬಿಯಲ್ಲಿದ್ದಾರೆ, ಅವರೊಬ್ಬರೆ ತನಗೆಲ್ಲಾ, ಅವರು ಒಪ್ಪಿದರೆ. . ದೇವರು ಇಚ್ಛೆಯಿದ್ದಂತಾಗಲಿ.. ಎಂದು ಅವನ ಮನಸ್ಸು ಸಾರಿ ಹೇಳುತ್ತಿತ್ತು.

’ತಪ್ಪು ಮಾಡಿದ್ದೇನೆ, ರಿಚಿ ಫ್ಲೀಸ್ ನನಗೆ  ಕ್ಷಮೆ ಬೇಕು. . . ,

ಒಂದು ವಾರದಿಂದ ಒಂದೇ ಮೆಸೇಜ್ ನ ನೂರಕ್ಕೂ ಮೀರಿ ಕಳಿಸಿದ್ದ.  ಕಡೆಗೊಂದು ಮೆಸೇಜ್ ಕಳಿಸಿದಳು ರಿಚಿ ’ಕ್ಷಮಿಸಿದ್ದೇನೆ, ಇಟ್ಸ್ ಓಕೆ, ಬಟ್ ಮತ್ತಿನ್ಯಾವತ್ತು ಹೀಗೆ ಮಾಡಬಾರದು. . ’ ಇತ್ಯಾಧಿ ಸಂದೇಶಗಳ ರವಾನೆ ನಂತರ ಮರುಭೇಟಿಯಾಯಿತು.  ದೂರವೇ ಕೂತು ಮಾತು-ಕತೆ ಮಾಡಿಕೊಂಡು ಹೊರಡುತ್ತಿದ್ದರು ಜಾಣ ಪ್ರೇಮಿಗಳಿಬ್ಬರೂ.  ಫೇಸ್ ಭುಕ್ ನಲ್ಲಿ ಜಸ್ಟ್ ಫ್ರೆಂಡ್ಸ್ ಆಗಿರುತ್ತಿದ್ದವರು ವಾಟ್ಸ್ ಅಪ್ ನಲ್ಲಿ ಬೇಕಿಲ್ಲದ ಮೆಸೇಜುಗಳಲ್ಲಿ ಇನ್ನಷ್ಟು ಬಧ್ರ ಪ್ರೇಮಿಗಳಾಗಿಹೋಗಿದ್ದರು, ಇಷ್ಟೇಲ್ಲಾ ಮಾತನಾಡುತ್ತೀಯಾ, ಒಂದೇ ಒಂದು ಕಿಸ್ ಕೊಟ್ಟರೆ ತಪ್ಪಾ? ಎಂದು ಸಮದ್ ಛೇಡಿಸಿದರೆ ನಿರುತ್ತರವಾಗಿ ಸೈಲೆಂಟ್ ಮೂಡ್ ಗೆ ಬದಲಾಗುತ್ತಿದ್ದಳು.  ಬೇರೆಲ್ಲಾ ಹುಡುಗರು ಎಷ್ಟ್ಟೇಷ್ಟೋ ಮುಂದುವರೆದಿರುವಾಗ, ನನ್ನ ಹಣೆಬರಕ್ಕೆ ಧಕ್ಕಿದ್ದು ಇಷ್ಟೇ ಅಂತ ಬೇಸರ ಪಟ್ಟುಕೊಳ್ಳುತ್ತಿದ್ದ ಸಮದ್.

ಪ್ರೀತಿಯಲ್ಲಿ ಯಾವುದು ಸರಿ ಮತ್ತು ಯಾವುದು ತಪ್ಪಲ್ಲ ಎಂಬುದರ ಬಗ್ಗೆ ಸುದೀರ್ಘ ಉದಾಹರಣೆಗಳನ್ನು ತೋರಿಸುವಂತೆ, ಒಂದು ಪಾರ್ಟಿಗೆ ಕರೆದುಕೊಂಡು ಹೋಗಿ ಕೆಲವು ಸ್ನೇಹಿತರನ್ನು ಪರಿಚಯಿಸಿಕೊಟ್ಟ, ನಂತರದಲ್ಲಿ ಅವರು ಮತ್ತಿನ್ಯಾರಿಗೋ ಅಪ್ಪಿಕೊಂಡು ಮುದ್ದಾಡುವುದನ್ನು ತೋರಿಸಿ, ನಾವು ಪ್ರೇಮಿಗಳು, ನಮಗಿದು ಕ್ವೆಟ್ ಕಾಮನ್ ಆಗಿರಬಾರದಾ ಅಂತ, ಅವಳ ಮನವೊಲಿಸಿ ದುಬಾರಿಯಾದ ಲಿಪ್ ಸ್ಟಿಕ್ ಹೊಂದಿದ್ದ ರಿಚಾಳ ಅದರಗಳನ್ನು ಚುಂಭಿಸಿ ಮಧುಪಾನ ಸವಿದ, ಅವನಲ್ಲಿ ತಲ್ಲೀನಳಾಗಿ ತಾನೂ ಲೀನಳಾದಾಗ ಸಮಯ ನಿಮಿಶಗಳನ್ನು ಮೀರಿತ್ತು.  ತಲೆಯಲ್ಲಿ ತಕಧಿಮಿತ, ಒಬ್ಬರಿಗೂಬ್ಬರ ಸ್ಪರ್ಶ, ಸನಿಹ   ಇವೆಲ್ಲಾ ಪ್ರೇಮದ ಸನ್ನಿ ಹಿಡಿಸುತ್ತಿದ್ದವು ಅವಳಿಗೂ ಅವನಂತೆಯೇ.  ಇದರಲ್ಲೇನೋ ಹೊಸ ಖುಷಿಯೂ ಇದೆ ಎಂದು ಮನಸ್ಸಿನ ಮುಖಭಾವಗಳು ಹೇಳುತ್ತಿದ್ದವು.

ಅಪ್ಪನಿಗೆ ದುಬೈಗೆ ವರ್ಗಾವಣೆಯಾಗಿದೆ ಎಂದು ಹೇಳಲು ರಿಚಿ ಸಮದ್ ನನ್ನು ಭೇಟಿಗೆ ಕರೆದಳು, ಸಮದ್ ಮೊಬೈಲ್ ಕಳೆದುಕೊಂಡು ಚಿಂತಾಕ್ರಾಂತನಾಗಿದ್ದ, ’ಅದೊಂದು ಮಾಮೂಲಿ ಟಚ್ ಸ್ಕ್ರೀನ್ ಮೊಬೈಲ್ ಅಷ್ಟೇ, ಅದಕ್ಯಾಕೆ ಇಷ್ಟು ತಲೆಕೆಡಿಸಿಕೊಳ್ಳುವೆ, ಕೂಲ್ ಮ್ಯಾನ” ಅಂದಾಗ ಸಮದ್ ಹೇಳಿದ್ದ, ’ಹಾಗಲ್ಲಾ ರಿಚಿ, ಅದರಲ್ಲಿರೋ ಕಾಂಟ್ಯಾಕ್ಟ್ಸ್ ನನ್ನ ಉದ್ಯೋಗಕ್ಕೆ ತುಂಬಾ ಮುಖ್ಯ, ಜಸ್ಟ್ ಹತ್ತೇ ನಿಮಿಷದಲ್ಲಿ ಟೀ ಕುಡಿದು ಮೊಬೈಕ್ ತೆಗೆದು ಎಕ್ಸಲೇಟರ್ ಕೊಟ್ಟು ಮತ್ತೆ ಗಾಡಿ ತಿರುಗಿಸಿ ಹೋಗಿ ನೋಡಿದ್ರೆ ಇಲ್ಲಾ ಕಣೆ.  ಆದರೆ ನನಗೊಬ್ಬ ಫ್ರೆಂಡ್ ಇದ್ದಾರೆ, ಇನ್ಸ್ ಪೆಕ್ಟರ್ ಆಗಿರೋರು, ಅವನಿಗೆ ಮೊಬೈಲ್ ದಾಖಲೆ ಮತ್ತು ನಂಬರ್ ಕೊಟ್ಟಿದ್ದೀನಿ, ಸ್ವಲ್ಪದಿನದಲ್ಲಿ ಟ್ರಾಪ್ ಮಾಡ್ತಾರೆ.  ಆಗ ನಾನೇನ್ ಮಾಡ್ತೀನಿ ಗೊತ್ತಾ?

ಪ್ರಶ್ನಾರ್ಥಕವಾಗಿ ರಿಚಿ ಅವನನ್ನೇ ನಿರೀಕ್ಷಿಸುತ್ತಿದ್ದಳು.

’ಕದ್ದವನ ಎರಡು ಕೈಬೆರಳುಗಳಿಗೂ ಸರಿಯಾಗಿ ನಾನೇ ಹೇಳಿ ಪೆಟ್ಟುಕೊಡಿಸ್ತೀನಿ, ಇನ್ನೊಂದು ಸಲ ಇನ್ನೊಬ್ಬರಿಗೆ ಸೇರಿದ್ದನ್ನು ಖದಿಯಬಾರದು ಅಂತ ಜೀವನದಲ್ಲಿ ಮರೆಯದಂತ ಪಾಠ ಕಲಿಸುತ್ತೀನಿ.  ಎಷ್ಟೋಂದು ಕಾಂಟ್ಯಾಕ್ಟ್ಸ್ ಗೊತ್ತಾ?  ನನ್ನ ಕರಿಯರ್ ಗೆ ತುಂಬಾ ಲಾಸ್ ಆಗಿದೆ, ಸುಮ್ನೆ ಬಿಡಲ್ಲಾ ಇರು, ಟ್ರ್ಯಾಪ್ ಆದ ಕೂಡಲೇ ನನ್ನನ್ನೂ ಸ್ಟೇಷನ್ ಗೆ ಕರೀತಾರೆ, ನೋಡ್ತಾ ಇರು, ಅವನ ಕೈಗೆ ಹೇಗೆ ಹೊಡಿಸ್ತೀನಿ ಅಂತ’.

ರಿಚಿಗೆ ತೀರಾ ಅಸಮಾದಾನವಾಯಿತು.  ಸ್ವಂತ ಹಣದಲ್ಲಿ ಖರೀದಿಸಿದ  ಐದಾರು ಸಾವಿರ ಬೆಲೆಬಾಳುವ ಒಂದು ಮೊಬೈಲ್ ಕದ್ದವನಿಗೆ ಇಂಥಾ ಶಿಕ್ಷೆ ಕೊಡೋ ಜಾಣ,  ನನ್ನನ್ನು ಕದ್ದು ಅನುಭವಿಸಲು ನೋಡುವಾಗ ಈ ಆಲೋಚನ ಬಾರದೇ ಹೋಯಿತೇ?  ತಮ್ಮದ್ದನ್ನ ಯಾರೂ ಗ್ರಾಂಟೆಡ್ ಆಗಿ ತಗೋಬಾರದು, ಆದರೆ ಇನ್ನೊಬ್ಬರ ಹೆಣ್ಣುಮಗಳನ್ನು ಇವನು ಗ್ರಾಂಟೆಡ್ ಆಗಿ ತಗೋಬಹುದಾ?  ಅದೂ ಕಿಂಚಿತ್ ಪಾಪಪ್ರಜ್ನೆ ಇಲ್ಲದ ನಿರ್ಲಜ್ಜ ಗಂಡಸಿಗೆ ಪ್ರೇಮ ಎನ್ನುವ ಸುಂದರ ವಿಷಯದಲ್ಲಿ ಕಾಮವನ್ನ ಲೇಪಿಸುವಾಗ ಹೆಣ್ಣೊಬ್ಬಳು ಇನ್ನೊಬ್ಬರ ಸ್ವತ್ತೆಂಬ ಕಾಮನ್ ಸೆನ್ಸ್ ಇಲ್ಲದೇ ಹೋಗುತ್ತದಲ್ಲ.  ನನ್ನಪ್ಪ ಅಪ್ಪ ನನ್ನನ್ನು ಬೆಲೆ ಕಟ್ಟಲಾಗದಷ್ಟು ಕಷ್ಟಪಟ್ಟು ಶ್ರಮಪಟ್ಟು ಸಾಕಿ ಬೆಳೆಸಿದ್ದಾರೆ, ಒಳ್ಳೇ ಬುದ್ದಿ ಕಲಿಸಿದ್ದಾರೆ, ಇಲ್ಲಿಯವರೆಗೂ ಯಾರಿಗೂ ಕೇಡು ಮಾಡಿದವಳಲ್ಲಾ ನಾನು, ಆದರೆ ನಾನೇಕೆ ನನ್ನನ್ನು ಇಂಥಾ ವ್ಯಕ್ತಿಯ ಕೈಗೆ ಪ್ರೀತಿ ಹೆಸರಿನಲ್ಲಿ ಒಪ್ಪಿಸುತ್ತಿದ್ದೇನೆ?  ನನ್ನ ಬುದ್ದಿ  ಮುಂದಾದರೂ ಮಣ್ಣುತಿನ್ನಬಾರದು.  ಪವಿತ್ರವಾದ ಪ್ರೀತಿ ನೀಡಿ ಅಪ್ಪ ಅಮ್ಮ ನನ್ನನ್ನು ಇಂದಿನವರೆಗೂ ಯಾವಕಷ್ಟಗಳನ್ನೂ ನೀಡದೆ ಕಾಪಾಡಿದ್ದಾರೆ, ಆದರೆ ನಾನಿವತ್ತು.. ?  ಛೇ. .  ನಿಜವಾದ ತಪ್ಪು ಮಾಡಿದವಳು ನಾನು.  ಇಂಥಾ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅಪ್ಪ ಅಮ್ಮನಿಗೆ ಮೋಸ ಮಾಡದೆ, ಆತ್ಮಸಾಕ್ಷಿಯಿಂದ ಬದುಕಿ ತೋರಿಸುತ್ತೇನೆ. ಎಲ್ಲಕ್ಕಿಂತ ಮೊದಲು ನನ್ನನ್ನು ನಾನು ಕ್ಷಮಿಸುತ್ತಿದ್ದೇನೆ’.  ತುಸು ಗಡಿಬಿಡಿಯಿಂದಲೇ ರಿಚಿ ಮರೆಯಾದಳು.

ರಿಚಿ ಮೊಬೈಲ್ ಸಂಖ್ಯೆ ಬಂದ್ ಆಯಿತು, ಅವಳ ವಾಸವಿದ್ದ ಬಂಗಲೆಯೂ ಖಾಲಿಯಾಗಿತ್ತು.  ಅವಳೆಲ್ಲಿ ಹೋದಳು, ಏಕೆ ಹೋದಳು ಎಂದು ಸಮದ್ ಗೆ ಎಂದಿಗೂ ತಿಳಿಯಲೂ ಇಲ್ಲ.

 

‍ಲೇಖಕರು avadhi

December 3, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: