ಪುನೀತರ ಬದುಕಿನ ಅದ್ಭುತ ಪ್ರಯತ್ನ ‘ಗಂಧದ ಗುಡಿ’

ಮಮತಾ ಅರಸೀಕೆರೆ

ಪುನೀತರ ಬದುಕಿನ ಅದ್ಭುತ ಪ್ರಯತ್ನವೆಂದರೆ ಈ ಗಂಧದ ಗುಡಿ ಸಿನೆಮಾ. ಅವರ ಬದುಕು ಸಾರ್ಥಕವಾಯಿತು ಅನಿಸುವ ಡಾಕ್ಯುಮೆಂಟರಿ.
ನಿಜಕ್ಕೂ ರೋಚಕ ಹಾಗೂ ರೋಮಾಂಚಕ. ಕಾಡಿನ ಕುರಿತು ಸಾಕಷ್ಟು ಅದ್ಭುತ ಡಾಕ್ಯುಮೆಂಟರಿಗಳಿರುವುದು ಗೊತ್ತಿದೆ. ಪುನೀತ್, ಅಮೋಘವರ್ಷ ಹಾಗೂ ಈ ಗಂಧದ ನಾಡಿನ ಚಿತ್ರವೆಂಬ ಕಾರಣಕ್ಕೆ ತುಂಬಾ ಇಷ್ಟವಾದ ಚಿತ್ರವಿದು. ಇದನ್ನು ಮೂವಿ ಎನ್ನುವಿರೊ, ಡಾಕ್ಯುಮೆಂಟರಿ ಅನ್ನುವಿರೊ ನೋಡುಗರ ಅಭಿಪ್ರಾಯಕ್ಕೆ ಬಿಟ್ಟ ಸಂಗತಿ.

ಪ್ಲಾಸ್ಟಿಕ್ ಕುರಿತ ಅಭಿಪ್ರಾಯ, ಅದನ್ನು ನಿರ್ಮೂಲನೆ ಮಾಡುವ ಕುರಿತು ಅಮೋಘ ಸಂದೇಶವಿರುವುದು ಬಹಳ ಇಷ್ಟವಾದ ಸಂಗತಿ. ಚಿತ್ರದುದ್ದಕ್ಕೂ ಅನೇಕ ವಾವ್ ಎನಿಸುವ , ಮನಸು ಕಣ್ಗಳು ತುಂಬಿಕೊಳ್ಳುವ ದೃಶ್ಯಗಳಿವೆ. ಇದೊಂದು ದೃಶ್ಯಕಾವ್ಯವಂತೂ ಹೌದು.
ಜಗತ್ತನ್ನು ಸುತ್ತಲು ಹವಣಿಸುವವರಿಗೆ ಕರ್ನಾಟಕವೊಂದನ್ನು ಪೂರ್ತಿ ತಿರುಗಿದರೆ ಸಾಕು, ಕೆಲವು ವಿಷಯಗಳು ಹೊರತುಪಡಿಸಿ ಜಗತ್ತಿನ ತಾಣಗಳಿಗೆ ಹೋಲಿಕೆ ಮಾಡುವ ಅನೇಕ ಸಂಗತಿಗಳು ದಕ್ಕುತ್ತವೆ. ಅಂತಹ ಅನೇಕ ಅದ್ಭುತ ತಾಣಗಳ ಸೊಬಗು ಈ ಮೂವಿಯಲ್ಲಿ ದಾಖಲಾಗಿದೆ.

ಮೂವಿಯ ಪ್ರತೀ ದೃಶ್ಯಗಳು, ಫ್ರೇಮ್, ಆ ಪಯಣ , ಪಯಣದ ವಿಧಾನ, ಒಡನಾಟ , ಕುತೂಹಲದ ಕಣ್ಣುಗಳು, ನಮ್ಮೊಳಗೆ ಹುಟ್ಟಿಸುವ ಅನುಭೂತಿ ಅನನ್ಯ. ಪರಿಸರ ಮತ್ತು ಅದರ ಜೊತೆಗಿನ ಬಾಂಧವ್ಯದ ಕೊಂಡಿ ಮನುಷ್ಯನನ್ನು ಮನುಷ್ಯನನ್ನಾಗಿಯೇ ಇರಿಸಬೇಕಿತ್ತು . ಆದರೆ ಅದರ ಮೇಲೆ ಕ್ರೂರವಾಗಿ ಪ್ರಹಾರ ಮಾಡುವ ಮನಸ್ಯಾಕೆ ಆವಾಹನೆಯಾಗುತ್ತದೊ ತಿಳಿಯದು. ಅದ್ಭುತ ಸಂದೇಶವಿರುವ ಈ ಮೂವಿ ಮಾನವನ ಎಲ್ಲಾ ಬಗೆಯ ದೌರ್ಜನ್ಯವನ್ನು ನಯವಾಗಿ ಖಂಡಿಸುತ್ತದೆ.

ಮತ್ತು ಕೆಲವೊಮ್ಮೆ ಅನಿಸುತ್ತದೆ “ಈ ಭೂಮಿ ಮೇಲೆ ಮನುಷ್ಯನ ಅವಶ್ಯಕತೆಯೇ ಇಲ್ಲ. ಪ್ರಾಕೃತಿಕ ಸಂಗತಿಗಳ ಮೇಲೆ ಸತತ ದೌರ್ಜನ್ಯವೆಸಗುತ್ತ ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಾ ಸ್ವಾರ್ಥ ಪ್ರದರ್ಶಿಸುವ ಮಾನವನೇ ಅನಾವಶ್ಯಕ ಪ್ರಾಣಿ” ತಮ್ಮಷ್ಟಕ್ಕೆ ನೈಜವಾಗಿ ಬದುಕುವ ಪ್ರಾಣಿ ಪಕ್ಷಿ ಜೀವವೈವಿಧ್ಯ ಪ್ರಕೃತಿಕೆ ಕೊಟ್ಟಿರುವ ಕೊಡುಗೆ ಅಪಾರ.

ಚಾರಣ ಮಾಡುತ್ತಾ, ವಿವರಗಳನ್ನು ನೀಡುತ್ತಾ, ವೀಕ್ಷಕರನ್ನೆಲ್ಲ ನೇರವಾಗಿ ತೊಡಗಿಸುವಂತೆಯೇ ಅನಿಸುವ, ನಾವೇ ಪಯಣಿಸಿದಂತೆ ಅನುಭವಕ್ಕೆ ದಕ್ಕಿಸುವ ಮೂವಿಯ ಕ್ಯಾಮೆರಾ ಕೆಲಸ ಅತಿ ಸೂಕ್ಷ್ಮವಾಗಿದೆ. ಅದ್ಭುತವಾಗಿದೆ. ಸಂಗೀತವೂ ಹಿತ ಹಾಗೂ ಥಿಯೇಟರ್ ಬಿಟ್ಟು ಹೊರ ಬಂದರೆ ಕಡೇ ಗಳಿಗೆಯ ಆ ಸಂಗೀತದ ಗುಂಗು ಕಿವಿಯಲ್ಲಿ ಅನುರಣಿಸುತ್ತಲೇ ಇತ್ತು. ಒಟ್ಟಾರೆ ಸಂದೇಶ ಅಮೋಘವಾಗಿದೆ. ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗಾಗಿ ಈ ಮೂವಿ ಪ್ರದರ್ಶಿಸುವ ಅಗತ್ಯವಿದೆ.

ನಾನು ನನ್ನ ಮಗಳ ಜೊತೆ ಸಿನಿಮಾಗೆ ಹೋಗಿದ್ದು ತುಂಬಾ ಸಾರ್ಥಕವೆನಿಸಿತು. ಆಕೆ ಪ್ರಕೃತಿಪ್ರಿಯೆ. ಪ್ರತೀ ದೃಶ್ಯವನ್ನು ಅನುಭವಕ್ಕೆ ತಂದುಕೊಳ್ಳುತ್ತಿದ್ದ ರೀತಿ ಖುಷಿ ನೀಡಿತು. ಇಲ್ಲಿನ ಪ್ರತಿ ಸ್ಥಳಕ್ಕೂ ಹೋಗಿ ಬರೋಣ ದೊಡ್ಡು, ಸಾಧ್ಯವಾ ಅಂತ ಕೇಳುತ್ತಿದ್ದಳು. ಈಗಾಗಲೇ ಬಹಳಷ್ಟು ನಿಯಮಗಳನ್ನು ಅನುಸರಿಸುವ ಆಕೆ ಮುಂದೆಯೂ ಪ್ರಾಕೃತಿಕವಾಗಿ ಸಂರಕ್ಷಿಸುವ ಹಾನಿ ಮಾಡದ ಮನೋಭಾವ ಪ್ರದರ್ಶಿಸಬಲ್ಲಳು. ಮತ್ತು ಬೇರೆಯವರಿಗೂ ಹೇಳಬಲ್ಲಳು. ನಾನು ಸ್ವಾಮಿ ಮೇಷ್ಟ್ರಿಂದ ಕಲಿತ ಪ್ರಕೃತಿಯ ಪಾಠವನ್ನು ಅವಳಿಗೂ ದಾಟಿಸಿದೆನೆಂಬ ತೃಪ್ತಿಯಿದೆ.

ಸ್ವಾಮಿ ಸರ್ ಕೂಡಾ ತೀವ್ರ ಪ್ರಕೃತಿ ಪ್ರಿಯರು. ಪಾರಿಸಾರಿಕವಾಗಿ ನಿಯಮಗಳನ್ನು ತಪ್ಪದೇ ಅನುಸರಿಸುವವರು‌. ಅವರು ಅದೆಷ್ಟು ಟ್ರೆಕಿಂಗ್ ಮಾಡಿದ್ದಾರೆಂದರೆ ಕರ್ನಾಟಕದ ಬಹಳಷ್ಟು ಪ್ರದೇಶಗಳು ಅವರಿಗೆ ಗೊತ್ತು. ನಾನು ಕೆಲವೇ ಟ್ರೆಕಿಂಗ್ ಗಳಲ್ಲಿ ಅವರ ತಂಡದ ಜೊತೆಗೂಡಿದ್ದೆನಷ್ಟೆ. ಬಹಳಷ್ಟು ಮಿಸ್ ಮಾಡಿಕೊಂಡೆನಲ್ಲ ಅನಿಸುತ್ತದೆ.

ಪ್ರಕೃತಿ ಮೇಲಿನ ಈ ತೀವ್ರ ಮೋಹ ಅವರೂ ನಮಗೆ ಕೊಟ್ಟ ಕೊಡುಗೆ. ಅದಕ್ಕಾಗಿ ಕೃತಜ್ಞತೆಗಳು. ಹೌದು ಪ್ರಕೃತಿ ಮೇಲೆ ಯಾರಿಗೆ ತಾನೆ ಮೋಹವಿಲ್ಲ . ಆದರದು ಪರಿಸರಕ್ಕೆ ಧಕ್ಕೆಯಾಗದಂತಿರಬೇಕು. ಪ್ರತೀ ಬಾರಿ ಕಾಡು, ನೀರು, ಗುಡ್ಡ, ಬೆಟ್ಟ, ಸಮುದ್ರ, ನದಿ , ನದಿಯ ಜುಳುಜುಳು, ಝರಿಯ ಕಲರವ, ಪಕ್ಷಿ ಪ್ರಾಣಿಗಳ ಹಿತವಾದ ಸದ್ದು, ಪರಿಸರದ ಪ್ರತೀ ಪಲುಕು ಎಲ್ಲವೂ ಈ ಎಲ್ಲವೂ ಹುಚ್ಚು ಹಿಡಿಸುವಷ್ಟು ಇಷ್ಟವಾಗುತ್ತವೆ.

ಆ ಎಲ್ಲಾ ಅಂಶಗಳನ್ನು ಬಹಳಷ್ಟು ಪೂರೈಸಿರುವ ಗಂಧದ ಗುಡಿ ಪ್ರತಿಯೊಬ್ಬರೂ ನೋಡಲೇಬೇಕಾದ ಮೂವಿ/ ಡಾಕ್ಯುಮೆಂಟರಿ.

‍ಲೇಖಕರು Admin

November 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: