ಪಿ ಸಾಯಿನಾಥ್ ಬಿಚ್ಚಿಟ್ಟ ನೋಟಿಲ್ಲದ ಲೋಕ

ಕನ್ನಡಕ್ಕೆ : ರಾಜಾರಾಂ ತಲ್ಲೂರು 

ಭಾರತದ ‘ಕಪ್ಪು’ ಹಣದಲ್ಲಿ ಬಹುದೊಡ್ಡ ಪಾಲಿರುವುದು ಚಿನ್ನ, ಬೇನಾಮಿ ಭೂ ವ್ಯವಹಾರಗಳು ಮತ್ತು ವಿದೇಶಿ ಕರೆನ್ಸಿಯಲ್ಲಿಯೇ ಹೊರತು ಅಜ್ಜಮ್ಮನ ಹಳೆಯ ಪೆಟ್ಟಿಗೆಯಲ್ಲಿ ಅಟ್ಟಿಗಳ ರೂಪದಲ್ಲಲ್ಲ.

‘ಮೋದಿಯವರ ಮಾಸ್ಟರ್ ಸ್ಟ್ರೋಕ್’ ಎಂದು ಆಯ್ದ ಕೆಲವು ಟೆಲಿವಿಷನ್ ಆಂಕರ್ ಗಳು ಮತ್ತಿತರ ವಿದೂಷಕರಿಂದ ಕರೆಸಿಕೊಂಡ ಈ ಎಣಿಕೆಗೂ ಮೀರಿದ ಮೂರ್ಖತನ, ಈಗ ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕಳವಳ ಮತ್ತು ಸಂಕಷ್ಟಗಳಿಗೆ ಹಾದಿ ಮಾಡಿಕೊಟ್ಟಿದೆ. ಈ ಕ್ರಮದಿಂದ ಏನಾದರೂ ‘ಸ್ಟ್ರೋಕ್’ ಆದದ್ದಿದ್ದರೆ, ಅದು ಈ ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ.

ಒಂದು ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ದೇಶದಾದ್ಯಂತ ಒಟ್ಟು 975 ATM  ಗಳನ್ನು ಹೊಂದಿದೆ. ಇವುಗಳಲ್ಲಿ, 549 ರಲ್ಲಿ ಸಿಗುತ್ತಿರುವುದು ನಗದಲ್ಲ; ಬರಿಯ ನಿರಾಶೆ, ಹತಾಶೆ

 

ಚಿಕಾಲ್ತಾನಾದಲ್ಲೊಂದು ನಗದುರಹಿತ ಆರ್ಥಿಕತೆ

ಸರ್ಕಾರದ ನೋಟು ಮಾನ್ಯತೆ ರದ್ದತಿ ತೀರ್ಮಾನದಿಂದಾಗಿ ಮಹಾರಾಷ್ಟ್ರದಾದ್ಯಂತ ರೈತರು, ಭೂಮಿರಹಿತ ಕಾರ್ಮಿಕರು, ಪಿಂಚಿಣಿದಾರರು, ಪುಟ್ಟ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಗದುರಹಿತ ಆರ್ಥಿಕತೆಯ ಕನಸು ಔರಂಗಾಬಾದ್ ಒತ್ತಿನಲ್ಲೇ ಇರುವ ಚಿಕಾಲ್ತಾನಾ ಎಂಬ ಹಳ್ಳಿಯಲ್ಲಿ ಚಿಗುರೊಡೆದಿದೆ. ಅಲ್ಲಿ ಯಾರಲ್ಲೂ ನಗದು ಇಲ್ಲ. ಬ್ಯಾಂಕಿನಲ್ಲಾಗಲೀ, ATM ಗಳಲ್ಲಾಗಲೀ ಅಥವಾ ಅವುಗಳ ಸುತ್ತ ದುಗುಡದಿಂದ ಸರತಿ ಸಾಲು ನಿಂತಿರುವ ಜನಗಳಲ್ಲಾಗಲೀ ನಗದು ಇಲ್ಲವೇ ಇಲ್ಲ. ಬ್ಯಾಂಕು ಶಾಖೆಯ ಹೊರಗೆ ವ್ಯಾನಿನಲ್ಲಿ ಕಾವಲು ಕುಳಿತಿರುವ ಪೊಲೀಸಪ್ಪನ ಕಿಸೆಯೂ ಖಾಲಿ.

ಬೇಸರ ಬೇಡ. ಶೀಘ್ರವೇ ಅವರ ಬೆರಳುಗಳ ಮೇಲೆ ಅಳಿಸಲಾಗದ ಶಾಯಿಯ ಗುರುತು ಮೂಡಲಿದೆ.

ಮೂರೇ ವಾರಗಳೊಳಗೆ ಇರುವ ಮಗಳ ಮದುವೆಗಾಗಿ ಜಾವೇದ್ ಹಯಾತ್ ಖಾನ್ ಗೆ ತುರ್ತಾಗಿ ಹಣದ ಆವಶ್ಯಕತೆ ಇದೆ.

ಮೂರೇ ವಾರಗಳೊಳಗೆ ಇರುವ ಮಗಳ ಮದುವೆಗಾಗಿ ಜಾವೇದ್ ಹಯಾತ್ ಖಾನ್ ಗೆ ತುರ್ತಾಗಿ ಹಣದ ಆವಶ್ಯಕತೆ ಇದೆ.

ಔರಂಗಾಬಾದ್ ಕೋಟೆ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (SBH) ನ ಶಾಹ್ ಗಂಜ್ ಶಾಖೆಯಲ್ಲಿ ಬ್ಯಾಂಕಿನ ಸಿಬ್ಬಂದಿ ತಮ್ಮ ಹೈರಾಣಾಗಿರುವ ಗ್ರಾಹಕರಿಗೆ ಸಹಾಯ ಮಾಡಲು ಹೆಣಗಾಡುತ್ತಿದ್ದಾರೆ. ಅಲ್ಲಿ ಮಾತ್ರವಲ್ಲದೇ ನಗರದ ಪ್ರತಿಯೊಂದೂ ಬ್ಯಾಂಕಿನ ಶಾಖೆಗಳಲ್ಲಿ, ನಾಶಪಡಿಸುವುದಕ್ಕಾಗಿ ರಿಸರ್ವ್ ಬ್ಯಾಂಕಿಗೆ ಕಳುಹಿಸಲು ಸಂಗ್ರಹಗೊಂಡು ಅಟ್ಟಿಬಿದ್ದಿರುವ ಹಳೆಯ ಮಣ್ಣಾದ 500, 1000 ರೂಪಾಯಿಗಳ ನೋಟುಗಳನ್ನು ಮತ್ತೆ ಚಲಾವಣೆಗೆ ಬಿಡಲಾಗುತ್ತಿದೆ. RBI ಈ ಬಗ್ಗೆ ತಿಳಿದಿದ್ದರೂ, ಅದಕ್ಕೆ ಮೌನ ಸಮ್ಮತಿ ಕೊಟ್ಟಿದೆ.

‘ನಾವು ಬೇರೇನು ಮಾಡಲು ಸಾಧ್ಯ?’ ಎನ್ನುತ್ತಾರೆ ಬ್ಯಾಂಕ್ ನೌಕರರು. ‘ಜನರಿಗೀಗ ಸಣ್ಣ ಮುಖಬೆಲೆಯ ನೋಟುಗಳು ತುರ್ತಾಗಿ ಬೇಕಿವೆ. ಅವರ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ.’ ನಾವು ಹೀಗೆ ಬ್ಯಾಂಕ್ ಸಿಬ್ಬಂದಿ ಜೊತೆ ಆ ಭಾನುವಾರ ಮಾತನಾಡುತ್ತಿರುವಾಗಲೇ ಬ್ಯಾಂಕಿನ ಹೊರಗೆ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದ ಸಣ್ಣ ವ್ಯಾಪಾರಿ ಜಾವೀದ್ ಹಯಾತ್ ಖಾನ್ ತನ್ನ ಸರದಿ ಬಂದಾಗ ತನ್ನ ಮಗಳ ಮದುವೆ ಆಹ್ವಾನ ಪತ್ರಿಕೆಯನ್ನು ಬ್ಯಾಂಕ್ ಸಿಬ್ಬಂದಿಗೆ ನೀಡಿದರು.

‘ನನ್ನ ಖಾತೆಯಲ್ಲಿರುವುದೇ 27,000 ರೂಪಾಯಿ’ ಎಂದ ಆತ, ‘ಇನ್ನು ಮೂರು ವಾರಗಳಲ್ಲಿ ನನ್ನ ಮಗಳ ಮದುವೆಗೆ 10,000  ಹೊರತೆಗೆಯಬೇಕಿತ್ತು. ಆದರೆ, ನನಗೆ ತೆಗೆಯಲು ಬಿಡುತ್ತಿಲ್ಲ’ ಎಂದರು. ಆತ ನಿನ್ನೆಯಷ್ಟೇ 10,000 ತೆಗೆದದ್ದರಿಂದ ಈವತ್ತು ಮತ್ತೆ ಹಣ ತೆಗೆಯಲು ಅವಕಾಶವಿದ್ದರೂ ಬ್ಯಾಂಕ್ ಅದಕ್ಕೆ ಅವಕಾಶ ನಿರಾಕರಿಸಿತು, ಯಾಕೆಂದರೆ ಹೆಬ್ಬಾವಿನಂತೆ ಮೈಲುದ್ದ ಬೆಳೆದು ನಿಂತಿದ್ದ ಸರತಿ ಸಾಲಿನ ಎಲ್ಲರಿಗೂ ಪೂರೈಸುವಷ್ಟು ನಗದು ಬ್ಯಾಂಕ್ ಶಾಖೆಯ ಕೈನಲ್ಲೇ ಇರಲಿಲ್ಲ. ಸರತಿ ಸಾಲಿನಲ್ಲಿ ಕಾಯುತ್ತಿದ್ದ ಪ್ರತಿಯೊಬ್ಬರಿಗೂ ಸ್ವಲ್ಪವಾದರೂ ಹಣ ಸಿಗಲಿ ಎಂಬ ಕಳಕಳಿ ಅವರದು. ಅವರಲ್ಲಿ ಒಂದಿಬ್ಬರು ಆ ನಡುವೆ ಖಾನ್ ಅವರಿಗೆ ಸಹಾಯ ಮಾಡಲು ಮನ ಮಾಡಿದರು. ಅವರ ಖಾತೆಯಲ್ಲಿರುವ ಹಣ, ಅವರು ಮಗಳ ಮದುವೆಗಾಗಿ ಇರಿಸಿದ್ದ ಠೇವಣಿಯನ್ನು ಮಧ್ಯದಲ್ಲೇ ಮುರಿದುಕೊಂಡು ಹಾಕಲಾದ ಹಣ ಎಂಬುದನ್ನು ಅವರು ಬೊಟ್ಟುಮಾಡಿದರು.

ಈಗಾಗಲೇ ಹಲವಾರು ಮಂದಿ ಲೇಖಕರು, ವಿಶ್ಲೇಷಕರು ಮತ್ತು ಅಧಿಕೃತ ವರದಿಗಳು ಗುರುತಿಸಿರುವಂತೆ, ಭಾರತದ ‘ಕಪ್ಪು’ ಹಣದಲ್ಲಿ ಬಹುದೊಡ್ಡ ಪಾಲಿರುವುದು ಚಿನ್ನ, ಬೇನಾಮಿ ಭೂ ವ್ಯವಹಾರಗಳು ಮತ್ತು ವಿದೇಶಿ ಕರೆನ್ಸಿಯಲ್ಲಿಯೇ ಹೊರತು ಅಜ್ಜಮ್ಮನ ಹಳೆಯ ಪೆಟ್ಟಿಗೆಯಲ್ಲಿ ಅಟ್ಟಿಗಳ ರೂಪದಲ್ಲಲ್ಲ.

2012ರಲ್ಲೇ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಅಧ್ಯಕ್ಷರು ‘ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಪೇರಿಸಿಡಲಾಗಿರುವ ಕಪ್ಪುಹಣ ನಿಭಾಯಿಸಲು ಕ್ರಮಗಳು’ ಕುರಿತಾದ ತನ್ನ ವರದಿಯಲ್ಲಿ ಈ ಬಗ್ಗೆ ಹೇಳಿದ್ದಾರೆ. ವರದಿಯಲ್ಲಿ ಅವರು (ಪುಟ 14, ಭಾಗ 11, 9,1) ನೋಟು ಮಾನ್ಯತೆ ರದ್ಧತಿ ಕ್ರಮ ಈ ಹಿಂದೆ ಎರಡು ಬಾರಿ 1946  ಮತ್ತು 1978ರಲ್ಲಿ ‘ದಯನೀಯ ವೈಫಲ್ಯ’ ಕಂಡಿದೆ. ಹಾಗಿದ್ದೂ ಭಾರತೀಯ ಜನತಾ ಪಕ್ಷ ಇದನ್ನು ಪುನರಾವರ್ತಿಸಿದೆ. ‘ಮೋದಿಯವರ ಮಾಸ್ಟರ್ ಸ್ಟ್ರೋಕ್’ ಎಂದು ಆಯ್ದ ಕೆಲವು ಟೆಲಿವಿಷನ್ ಆಂಕರ್ ಗಳು ಮತ್ತಿತರ ವಿದೂಷಕರಿಂದ ಕರೆಸಿಕೊಂಡ ಈ ಎಣಿಕೆಗೂ ಮೀರಿದ ಮೂರ್ಖತನ, ಈಗ ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕಳವಳ ಮತ್ತು ಸಂಕಷ್ಟಗಳಿಗೆ ಹಾದಿ ಮಾಡಿಕೊಟ್ಟಿದೆ. ಈ ಕ್ರಮದಿಂದ ಏನಾದರೂ ‘ಸ್ಟ್ರೋಕ್’ ಆದದ್ದಿದ್ದರೆ, ಅದು ಈ ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ.

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಶಾಹ್ ಗಂಜ್ ಶಾಖೆಯಲ್ಲಿ ಗಿಜಿಗುಡುತ್ತಿರುವ ಹತಾಶ ಜನಸಮೂಹ. ಹೊರಗೆ ಸರದಿಸಾಲು ಮೈಲುದ್ದ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ನ ಶಾಹ್ ಗಂಜ್ ಶಾಖೆಯಲ್ಲಿ ಗಿಜಿಗುಡುತ್ತಿರುವ ಹತಾಶ ಜನಸಮೂಹ. ಹೊರಗೆ ಸರದಿಸಾಲು ಮೈಲುದ್ದ ಇದೆ.

ಚೇತರಿಕೆಯ ಬಗ್ಗೆ  ಚಿಂತೆಯೇ ಬೇಡ, ಏನೋ 2-3 ದಿನಗಳ ಮಟ್ಟಿಗೆ ಸ್ವಲ್ಪ ಕಿರಿಕಿರಿ ಅನ್ನಿಸಬಹುದು ಎಂದು ಹಣಕಾಸು ಸಚಿವರು ಮತ್ತವರ ಪಕ್ಷೀಯರು ಆರಂಭದಲ್ಲಿ ನೀಡಿದ ಹೇಳಿಕೆಯನ್ನು ಡಾ ಜೇಟ್ಲಿ ಅವರು 2-3 ವಾರಗಳೆಂದು ಪರಿಷ್ಕರಿಸಿದರೆ, ಅದರ ಬೆನ್ನಿಗೇ ಮುಖ್ಯ ಸರ್ಜನ್ ನರೇಂದ್ರ ಮೋದಿಯವರು, ರೋಗಿ ಚೇತರಿಸಿಕೊಳ್ಳಲು 50  ದಿನಗಳಾದರೂ ಬೇಕಾದೀತು ಎಂದು ಸ್ಪಷ್ಟಪಡಿಸಿದರು. ಹಾಗಾಗಿ, ಈ ಚಿಕಿತ್ಸೆ 2017 ರ ತನಕವೂ ಮುಂದುವರಿಯಲಿದೆ.  ಈ ನಡುವೆ ದೇಶದ ಉದ್ದಗಲಕ್ಕೂ ಬ್ಯಾಂಕುಗಳೆದುರು ಸರತಿ ಸಾಲಿನಲ್ಲಿ ನಿಂತಿದ್ದ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದು ನಮಗಿನ್ನೂ ತಿಳಿದಿಲ್ಲ, ಆದರೆ ಅವರ ಸಂಖ್ಯೆ ಮಾತ್ರ ಪ್ರತಿದಿನ ವೃದ್ಧಿ ಆಗುತ್ತಿದೆ.

‘ನಾಸಿಕ್ ಜಿಲ್ಲೆಯ ಲಾಸಲ್ ಗಾಂವ್ ನಲ್ಲಿ ನಗದಿನ ಕೊರತೆಯ ಕಾರಣದಿಂದಾಗಿ ರೈತರು ಈರುಳ್ಳಿ ಮಾರುಕಟ್ಟೆಯನ್ನು ಮುಚ್ಚಬೇಕಾಯಿತು’ ಎನ್ನುತ್ತಾರೆ, ‘ಆಧುನಿಕ್ ಕಿಸಾನ್’ ವಾರ ಪತ್ರಿಕೆಯ ಸಂಪಾದಕ ನಿಷಿಕಾಂತ್ ಭಾಲೇರಾವ್. ‘ವಿದರ್ಭ ಮತ್ತು ಮರಾಠಾವಾಡಗಳಲ್ಲಿ, ಹತ್ತಿಯ ಬೆಲೆ ಕ್ವಿಂಟಾಲ್ ಮೇಲೆ 40%  ಕುಸಿದಿದೆ.’ ಎಲ್ಲೋ ಕೆಲವು ವ್ಯವಹಾರಗಳು ನಡೆಯುತ್ತಿವೆಯೆಂಬುದನ್ನು ಬಿಟ್ಟರೆ, ಉಳಿದಂತೆ ಮಾರಾಟ ಸಂಪೂರ್ಣ ಸ್ಥಗಿತಗೊಂಡಿದೆ. ‘ಯಾರ ಬಳಿಯೂ ನಗದು ಇಲ್ಲ. ದಳ್ಳಾಲಿಗಳು, ಉತ್ಪಾದಕರು ಮತ್ತು ಖರೀದಿದಾರರು – ಎಲ್ಲರೂ ಗಂಭೀರ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ,’ ಎನ್ನುತ್ತಾರೆ ನಾಗಪುರದ ‘ದಿ ಟೆಲಿಗ್ರಾಫ್ ‘ವರದಿಗಾರ ಜೈದೀಪ್ ಹರ್ಡೀಕರ್. ‘ಹಿಂದೆಲ್ಲ ಗ್ರಾಮೀಣ ಶಾಖೆಗಳಲ್ಲಿ ಚೆಕ್ಕುಗಳನ್ನು ಡೆಪಾಸಿಟ್ ಮಾಡುವುದು ಜಿಡುಕಿನ ಕೆಲಸವಾಗಿತ್ತು, ಆದರೆ ಈಗ ಹಣ ಹೊರತೆಗೆಯುವುದೇ ಕಡುಕಷ್ಟ.’

ಹಾಗಾಗಿ, ಚೆಕ್ ಸ್ವೀಕರಿಸುವ ರೈತರು ಎಲ್ಲೋ ಕೆಲವರು ಮಾತ್ರ. ಪಡೆದ ಚೆಕ್ ವಟಾವಣೆಗೊಂಡು ನಗದು ರೂಪದಲ್ಲಿ ಖಾತೆಗೆ ಬಂದು ಅವರ ಕೈಗೆ ಸಿಗುವ ತನಕ ಅವರ ಮನೆಗಳಲ್ಲಿ ಒಲೆ ಉರಿಯುವುದು ಹೇಗೆ? ಬಹಳಷ್ಟು ಮಂದಿಗೆ ಬ್ಯಾಂಕ್ ಖಾತೆಗಳೇ ಇಲ್ಲ.

04-thumb_img_1538_1024-2-ps-the_cashless-e-max-1400x1120ರಾಜ್ಯದ ಒಂದು ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ದೇಶದಾದ್ಯಂತ ಒಟ್ಟು 975 ATM  ಗಳನ್ನು ಹೊಂದಿದೆ. ಇವುಗಳಲ್ಲಿ, 549 ರಲ್ಲಿ ಸಿಗುತ್ತಿರುವುದು ನಗದಲ್ಲ; ಬರಿಯ ನಿರಾಶೆ, ಹತಾಶೆ. ಇಂತಹ ಕೆಲಸ ಮಾಡದ ATM ಗಳಲ್ಲಿ ಹೆಚ್ಚಿನವು ಗ್ರಾಮೀಣ ಪ್ರದೇಶಗಳಲ್ಲೇ ಇವೆ. ಇದಕ್ಕೆ ಸಿಗುತ್ತಿರುವ ತೀರಾ ಸಿನಿಕಲ್ ಸಮರ್ಥನೆ ಎಂದರೆ,  ‘ಗ್ರಾಮೀಣ ಪ್ರದೇಶಗಳ ವ್ಯವಹಾರ ನಡೆಯುವುದೇ ಉದ್ರಿ (ಸಾಲದ) ಮೇಲೆ. ಅಲ್ಲಿ ನಗದು ಅಗತ್ಯ ಇಲ್ಲ.’  ಹೌದೆ? ನಿಜಕ್ಕೆಂದರೆ ಅಲ್ಲಿ ನಗದು ಇಲ್ಲದೆ ಬದುಕೇ ಇಲ್ಲ.

ಕೆಳಮಟ್ಟದ ಎಲ್ಲ ಲೇವಾದೇವಿಗಳು ಅಲ್ಲಿ ಬಹುತೇಕ ನಗದಿನಲ್ಲೇ ನಡೆಯುತ್ತವೆ. ಇನ್ನೊಂದು ವಾರದಲ್ಲಿ ಸಣ್ಣ ಮುಖಬೆಲೆಯ ನಗದು ಬರದೇ ಇದ್ದರೆ, ಶಾಂತಿ ಪಾಲನೆ ಕಷ್ಟವಾದೀತೆಂಬ ಭಯ, ಚಡಪಡಿಕೆ ಬ್ಯಾಂಕ್ ಸಿಬ್ಬಂದಿಗಳದು. ಇನ್ನು ಕೆಲವರ ಪ್ರಕಾರ, ಅಂತಹ ಸ್ಥಿತಿ ಈಗಲೇ ಎದುರಾಗಿದ್ದು, ಅರೆಕಾಸಿನ ಮಜ್ಜಿಗೆಯಂತೆ ಎಲ್ಲೋ ಸ್ವಲ್ಪ ನಗದು ವಾರದೊಳಗೆ ಬಂದರೂ ಅದು ಎಲ್ಲಿಗೂ ಸಾಲದು.

ಔರಂಗಾಬಾದಿನ ಇನ್ನೊಂದು ಸರದಿ ಸಾಲಿನಲ್ಲಿ ನಿಂತಿರುವ ಕಟ್ಟಡ ನಿರ್ಮಾಣ ಮೇಲ್ವಿಚಾರಕ ಪರ್ವೇಜ್ ಪೈತಾನ್ ಗೆ, ಹೀಗೇ ಪರಿಸ್ಥಿತಿ ಮುಂದುವರಿದರೆ ತನ್ನ ಕಾರ್ಮಿಕರು ಹಿಂಸೆಗಿಳಿಯಬಹುದು ಎಂಬ ಭಯವಿದೆ. ‘ಈಗಾಗಲೇ ಮಾಡಿರುವ ಕೆಲಸಕ್ಕೆ ಅವರಿಗೆ ಪಾವತಿ ಬಾಕಿ ಇದೆ’ ಎಂದ ಅವರು ‘ನನ್ನ ಕೈಗೆ ನಗದೇ ಸಿಗುತ್ತಿಲ್ಲ’ ಎಂದು ಚಿಂತಿತರಾಗಿದ್ದಾರೆ. ಚಿಕಾಲ್ತಾನಾ ಹಳ್ಳಿಯ ರಯೀಸಾ ಅಖ್ತರ್ ಖಾನ್ ತನಗೆ ಮತ್ತು ತನ್ನಂತಹ ಹಲವು ತಾಯಂದಿರಿಗೆ ತಮ್ಮ ತಮ್ಮ ಮಕ್ಕಳಿಗೆ ಆಹಾರ ಒದಗಿಸುವುದೇ ಕಷ್ಟ ಆಗುತ್ತಿದೆ ಎನ್ನುತ್ತಿದ್ದಾರೆ. ‘ಸರತಿ ಸಾಲಿನಲ್ಲಿ ದಿನಗಟ್ಟಲೆ ನಿಂತು ಹಣ ಪಡೆದು ಬಂದು ಮಕ್ಕಳಿಗೆ ಆಹಾರ ನೀಡುವ ವೇಳೆಗೆ ಗಂಟೆಗಟ್ಟಲೆ ವಿಳಂಬ ಆಗಿ, ಮಕ್ಕಳು ಹಸಿದಿರುತ್ತಾರೆ’ ಎಂಬ ಅಳಲು ಆಕೆಯದು.

ಸರದಿ ಸಾಲಿನಲ್ಲಿ ನಿಂತಿರುವ ಹೆಚ್ಚಿನ ಮಹಿಳೆಯರ ಮನೆಯಲ್ಲಿ ಇನ್ನು 2-4 ದಿನಗಳಿಗಾಗುವಷ್ಟು ಪಡಿತರ ಮಾತ್ರ ಬಾಕಿ ಇದೆ. ಅಷ್ಟರ ಒಳಗೆ ಈ ನಗದು ಕೊರತೆಯ ಭೀಕರ ತೊಂದರೆ ಮುಗಿದರೆ ಸಾಕು ಎಂದು ನಿಡುಸುಯ್ಯುತ್ತಿದ್ದಾರೆ ಅವರು.

ರೈತರು, ಭೂಮಿ ರಹಿತ ಕಾರ್ಮಿಕರು, ಮನೆಕೆಲಸದವರು, ಪಿಂಚಿಣಿದಾರರು, ಸಣ್ಣ ವ್ಯಾಪಾರಿಗಳಿಗೆಲ್ಲ ಇದರಿಂದ ಬಹಳ ತೊಂದರೆ ಆಗಿದೆ. ಕೆಲಸಕ್ಕೆ ಜನ ಇರಿಸಿಕೊಂಡಿರುವವರು ಸಾಲಗಾರರಾಗಲಿದ್ದು, ಹಣ ಸಾಲ ಪಡೆದು ಸಂಬಳ ನೀಡಬೇಕಾಗಿದೆ. ಇನ್ನು ಕೆಲವರಿಗಂತೂ ಆಹಾರ ಖರೀದಿಸುವುದಕ್ಕೂ ಸಾಲದ ಅಗತ್ಯ ಇದೆ. ‘ನಮ್ಮಲ್ಲಿ ಸರತಿ ಸಾಲು ದಿನ ಕಳೆದಂತೆ ಉದ್ದ ಆಗುತ್ತಿದೆಯೇ ಹೊರತು ತಗ್ಗುತ್ತಿಲ್ಲ’ ಎನ್ನುತ್ತಾರೆ, ಔರಂಗಾಬಾದ್ ನ SBH  ಸ್ಟೇಷನ್ ರಸ್ತೆ ಶಾಖೆಯ ಒಬ್ಬರು ಸಿಬ್ಬಂದಿ. ಇಲ್ಲಿ ಕೆಲವು ಸಿಬ್ಬಂದಿಗಳು ಉದ್ದ ಸರತಿ ಸಾಲಿನಲ್ಲಿ ನಿಂತಿರುವ ಜನರ ಕೋಪ ಶಮನ ಮಾಡಲು ಹರಸಾಹಸ ಮಾಡುತ್ತಿದ್ದಾರೆ. ಗುರುತು ದಾಖಲೆ ಮತ್ತಿತರ ಮಾಹಿತಿಗಳನ್ನು ಖಚಿತಪಡಿಸಿಕೊಳ್ಳುವದಕ್ಕಾಗಿ ಕಳುಹಿಸಲಾಗಿರುವ ಸಾಫ್ಟ್ ವೇರ್ ನಲ್ಲಿರುವ ದೋಷವೊಂದರತ್ತ ಒಬ್ಬರು ಸಿಬ್ಬಂದಿ ಬೊಟ್ಟುಮಾಡುತ್ತಾರೆ.

ಕೋಟೆ ಪಟ್ಟಣ ಔರಂಗಾಬಾದ್ ನಲ್ಲಿ ಉದ್ದದ ಸರತಿ ಸಾಲು, ಸಿಡುಕುತ್ತಿದೆ.

ಕೋಟೆ ಪಟ್ಟಣ ಔರಂಗಾಬಾದ್ ನಲ್ಲಿ ಉದ್ದದ ಸರತಿ ಸಾಲು, ಸಿಡುಕುತ್ತಿದೆ.

ಜನರಿಗೆ 2000ದ ಎರಡು ನೋಟುಗಳಿಗಾಗಿ 500 ಮುಖಬೆಲೆಯ ಗರಿಷ್ಟ 8 ನೋಟುಗಳನ್ನು ಅಥವಾ 1000ದ ನಾಲ್ಕು ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗುತ್ತಿದೆ. ಇದು ಒಮ್ಮೆಗೆ ಮಾತ್ರ. ‘ಹೌದು, ಮರುದಿನ ಹಾಗೆಯೇ ಮತ್ತೆ ಬಂದು ಸರದಿ ಸಾಲಿನಲ್ಲಿ ನಿಂತರೆ ಹಣ ಸಿಗುವುದಿಲ್ಲ. ಆದರೆ, ಇದರಿಂದ ತಪ್ಪಿಸಿಕೊಳ್ಳಲು ಉಪಾಯವಿದೆ. ಇನ್ನೊಂದು ಗುರುತು ದಾಖಲೆಯನ್ನು ಬಳಸಬೇಕು. ಈವತ್ತು ಆಧಾರ್ ಕಾರ್ಡ್ ಉಪಯೋಗಿಸಿದರೆ, ನಾಳೆ ಪಾಸ್ ಪೋರ್ಟ್ ತನ್ನಿ  ಮತ್ತು ನಾಡಿದ್ದು PAN ಕಾರ್ಡ್ ತನ್ನಿ, ಹೀಗೆ ಮಾಡಿದರೆ ನೀವು ಪುನಃ ಬಂದದ್ದು ಪತ್ತೆ ಆಗುವುದಿಲ್ಲ.’

ಹೆಚ್ಚಿನವರು ಇದನ್ನೆಲ್ಲ ಮಾಡಿಲ್ಲ, ಏಕೆಂದರೆ ಅವರಿಗದು ಗೊತ್ತೂ ಇಲ್ಲ. ಆದರೆ ಸರ್ಕಾರ ಮಾತ್ರ ಇದಕ್ಕೆ ಹುಚ್ಚುಹುಚ್ಚಾಗಿ ಪ್ರತಿಕ್ರಿಯಿಸಿದೆ. ಅವರು ಹಳೆಯ ನೋಟು ವಿನಿಮಯ ಮಾಡಿಕೊಂಡ ಜನರ ಕೈಗೆ ಚುನಾವಣೆಯಲ್ಲಿ ಮತದಾನದ ವೇಳೆ ಬಳಸಲಾಗುವಂತಹ ಅಳಿಸಲಾಗದ ಶಾಯಿಯ ಗುರುತನ್ನು ಹಾಕಲು ತೀರ್ಮಾನಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ ಶೀಘ್ರವೇ ನಡೆಯಲಿರುವ ಚುನಾವಣೆಗಳನ್ನು ಗಮನದಲ್ಲಿ ಇರಿಸಿಕೊಂಡು, ಗೊಂದಲಕ್ಕೆ ಕಾರಣ ಆಗದಂತೆ ಇದನ್ನು ಬಲಗೈ ಬೆರಳಿಗೆ ಹಾಕಲಾಗುತ್ತಿದೆ.

‘ಸರ್ಕಾರ ಎಂತಹದೇ ಆದೇಶ ಕೊಟ್ಟಿದ್ದರೂ, ಯಾವುದೇ ಆಸ್ಪತ್ರೆ ಅಥವಾ ಮದ್ದಿನಂಗಡಿ 500  ಅಥವಾ  1000 ದ ನೋಟುಗಳನ್ನು ಸ್ವೀಕರಿಸುತ್ತಿಲ್ಲ.’ ಎಂದು ದೂರುತ್ತಾರೆ, ಸ್ಟೇಷನ್ ರಸ್ತೆಯ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಸಣ್ಣ ಗುತ್ತಿಗೆದಾರ ಆರ್. ಪಾಟೀಲ್. ಸಾಲಿನಲ್ಲಿ ಅವರ ಹಿಂದೆ ಇರುವ ಬಡಗಿ ಸಯ್ಯದ್ ಮೋದಕ್, ತೀವ್ರ ಅನಾರೋಗ್ಯದಲ್ಲಿರುವ ತಮ್ಮ ಸಂಬಂಧಿಯೊಬ್ಬರ ಜೀವ ಉಳಿಸಿಕೊಳ್ಳಲು, ಕ್ಲಿನಿಕ್ಕಿನಿಂದ ಕ್ಲಿನಿಕ್ಕಿಗೆ ಓಡಾಡುತ್ತಿದ್ದಾರೆ. ‘ಎಲ್ಲೂ ನಮಗೆ ಚಿಕಿತ್ಸೆ ನೀಡಲಿಲ್ಲ. ಅವರು ಒಂದೋ 2000ದ ನೋಟು ಸ್ವೀಕರಿಸುವುದಿಲ್ಲ ಅಥವಾ ಹಿಂದಿರುಗಿಸಲು ಅವರ ಬಳಿ ಚಿಲ್ಲರೆ ಇಲ್ಲ.’ ಎನ್ನುತ್ತಾರೆ ಅವರು.

ಇದೇ ವೇಳೆ ಎಲ್ಲರ ಕಣ್ಣೂ ನಾಸಿಕ್ ನಿಂದ ದೇಶದಾದ್ಯಂತಕ್ಕೆ ಹೊರಬೀಳುವ ಹೊಸದಾಗಿ ಮುದ್ರಿತ ಕರೆನ್ಸಿಯತ್ತ ನೆಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅದು ಯಾರಿಗೂ ಇನ್ನೂ ಸಿಕ್ಕಿಲ್ಲ, ಆದರೆ ಸಿಕ್ಕೀತೆಂಬ ಭರವಸೆ. ಕಾದು ನೋಡಿ.

‍ಲೇಖಕರು Admin

November 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. raju

    ‘ಮೋದಿಯವರ ಮಾಸ್ಟರ್ ಸ್ಟ್ರೋಕ್’ ಎಂದು ಆಯ್ದ ಕೆಲವು ಟೆಲಿವಿಷನ್ ಆಂಕರ್ ಗಳು ಮತ್ತಿತರ ವಿದೂಷಕರಿಂದ ಕರೆಸಿಕೊಂಡ ಈ ಎಣಿಕೆಗೂ ಮೀರಿದ ಮೂರ್ಖತನ, ಈಗ ದೇಶದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಕಳವಳ ಮತ್ತು ಸಂಕಷ್ಟಗಳಿಗೆ ಹಾದಿ ಮಾಡಿಕೊಟ್ಟಿದೆ. ಈ ಕ್ರಮದಿಂದ ಏನಾದರೂ ‘ಸ್ಟ್ರೋಕ್’ ಆದದ್ದಿದ್ದರೆ, ಅದು ಈ ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ.

    ಪ್ರತಿಕ್ರಿಯೆ
  2. Prasad

    Eminent author P. Sainath opens up a new India everytime and it is no different even in this time of crisis… Thank you for this translation Rajaram sir and Avadhi…
    – Prasad, Republic of Angola

    ಪ್ರತಿಕ್ರಿಯೆ
  3. damodara shetty n

    ಇಂಥ ಬರಹಗಳಿಂದ ಜನರನ್ನು ಮತ್ತಷ್ಟು ಪ್ಯಾನಿಕ್ ಮಾಡುವ ಯತ್ನ ನಡೆಯುತ್ತದೆಯೇ ಹೊರತು ದೇಶದ ನಾಳೆಗಳ ಬಗ್ಗೆ ಒಳಿತನ್ನು ಹಾರೈಸುವ ಯಾವ ಚಿಂತನೆಯೂ ನಡೆಯುವುದಿಲ್ಲ.

    ಪ್ರತಿಕ್ರಿಯೆ
  4. M A Sriranga

    ಪಿ ಸಾಯಿನಾಥ್ ಅವರ ಬಗ್ಗೆ ಅವರ ಕೆಲಸ,ಬರಹ (‘ಬರ ಎಂದರೆ ಎಲ್ಲರಿಗೂ ಇಷ್ಟ’ ಕೃತಿ) ನನಗೆ ಅಪಾರವಾದ ಗೌರವವಿದೆ. ಆದರೆ ಇಲ್ಲಿ ಅವರು ಕೊಟ್ಟಿರುವ ಉದಾಹರಣೆಗೆ ಕಾರಣ ಸಂಬಂಧ ಪಟ್ಟ ಆ ಬ್ಯಾಂಕಿನ ಸಿಬ್ಬಂದಿ, ಅವರ ಮೇಲಿನ ಆಡಳಿತ ವರ್ಗ ಇತ್ಯಾದಿಯವರು ಕಾರಣ ಅಷ್ಟೇ. ಹುಳುಕುಗಳನ್ನೇ ಹುಡುಕಲು ಹೊರಟರೆ ಪ್ರತಿ ರಾಜ್ಯದಲ್ಲೂ ಇಂತಹ ಮೂರ್ನಾಲಕ್ಕು ಉದಾಹರಣೆಗಳನ್ನು ಹೆಕ್ಕಿ ತೋರಿಸುವುದು ಕಷ್ಟವೇನಲ್ಲ. ಯಾವ ಬದಲಾವಣೆಯನ್ನು ತಂದಾಗಲೂ ಕೆಲವು ಅನಾನುಕೂಲತೆಗಳು ಕೆಲವು ದಿನಗಳ ಮಟ್ಟಿಗೆ ಅನಿವಾರ್ಯ. ದೋಷರಹಿತ ,ಪರಿಪೂರ್ಣವಾದ ಮಾರ್ಗ ಎಂಬುದು ಯಾವುದೇ ರಂಗದಲ್ಲೂ ಇಲ್ಲ. ಹಕ್ಕುಗಳು ಮಾತ್ರ ನಮಗಿರಲಿ;ಕರ್ತವ್ಯಗಳು ಸರ್ಕಾರದ ಪಾಲಿಗಿರಲಿ ಎನ್ನುವುದು ಸರಿಯಲ್ಲ. ಇಂತಹ ಬರಹಗಳು ಜನಗಳಲ್ಲಿ ಭೀತಿಯನ್ನು ಹುಟ್ಟುಹಾಕುತ್ತದೆ.

    ಪ್ರತಿಕ್ರಿಯೆ
  5. C. N. Ramachandran

    ಸಾಯಿನಾಥ್ ಅವರ ಲೇಖನಕ್ಕೆ ಬಂದ ಪ್ರತಿಕ್ರಿಯೆಯನ್ನು ಓದುತ್ತಿದ್ದಾಗ ನಾನು ಹಿಂದೆ ಓದಿದ್ದ ಒಂದು ಕಥೆ ನೆನಪಿಗೆ ಬಂದಿತು. ರಾಜನೊಬ್ಬ ತಾನು ಏಳುವಾಗ ಶುಭ ವಾರ್ತೆಯನ್ನು ಕೇಳಬೇಕೆಂದು ಆ ಕೆಲಸಕ್ಕಾಗಿಯೇ ಒಬ್ಬನನ್ನು ನೇಮಿಸಿಕೊಂಡಿದ್ದನಂತೆ. ಒಮ್ಮೆ, ರಾತ್ರಿ ಪ್ರಸವಸಮಯದಲ್ಲಿ ಏನೋ ಹೆಚ್ಚುಕಮ್ಮಿಯಾಗಿ ಮಗು ಸತ್ತಿತು. ಇದನ್ನು ಬೆಳಿಗ್ಗೆ ರಾಜನಿಗೆ ಹೇಗೆ ಹೇಳುವುದು? ಆ ಕೆಲಸಗಾರನು ಬೆಳಿಗ್ಗೆ ’ರಾತ್ರಿ ಮಹಾರಾಣಿಯವರಿಗೆ ಶುಭ ಪ್ರಸವವಾಯಿತು; ಮಹಾರಾಣಿಯವರು ದೇವರ ಕೃಪೆಯಿಂದ ಕ್ಷೇಮವಾಗಿದ್ದಾರೆ.’ ತುಂಬಾ ಸಮಯದನಂತರ ರಾಜನಿಗೆ ಮಗು ಸತ್ತುದು ಗೊತ್ತಾಯಿತಂತೆ.
    ಇಂದು ಗಾಂಧೀಜಿಯವರ ಮೂರು ಮಂಗಗಳ ರೂಪಕಕ್ಕೆ ಹೊಸ ಅರ್ಥ ಬಂದಿದೆ: ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಆಡಬೇಡ. ಯಾಕೆ? ರಾಷ್ಟ್ರದ ಒಳಿತಿಗಾಗಿ. ಕೃಷಿಕರಿಗೆ ಕಡು ಕಷ್ಟವಲ್ಲಾ? ಅದಕ್ಕೇನು ಮಾಡುವುದು? ನೋಟುಗಳ ಅಪಮೌಲ್ಯವಾಗುವುದಕ್ಕೆ ಮೊದಲೂ ನೂರಾರು ರೈತರು ಎಲ್ಲೆಡೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೆ? ಒಂದು ಸುಂದರ ಮಗು ಹುಟ್ಟಬೇಕಾದರೆ ತಾಯಿ ಒಂಬತ್ತು ತಿಂಗಳ ಕಾಲ ಕಷ್ಟಪಡಬೇಕಿಲ್ಲವೆ? ಸೈನಿಕರು ಸಾಯುತ್ತಿಲ್ಲವೆ? . . . . .
    ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? ದೇವರಿಗೆ ಮೊರೆ ಹೋಗುವುದು ಮಾತ್ರ ನಮಗೆ ಸಾಧ್ಯ. ಏಕೆಂದರೆ ದೇವರಿಗೆ ರಾಷ್ಟ್ರಗಳ, ಧರ್ಮಗಳ, ವರ್ಗಗಳ ಗಡಿಗಳಿಲ್ಲ.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  6. K.Satyanarayana

    Facts highlighted by Sainath are selective but correct. The article lacks perspective.How common people behave and appreciate issues like this is brilliantly analysed by E.P.Thompson in his essay.The Moral Economy Of English crowd in Eighteenth century.It is time to have a look at the article now.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: