'ಪಿ ಸಾಯಿನಾಥ್ ಕಂಗಳಲ್ಲಿ ಹೊಸ ಕನಸಿಗೆ ಕಣ್ಣು ಮೂಡುತ್ತಿದೆ' – ಸಂಧ್ಯಾರಾಣಿ

ಸಾಯಿನಾಥ್ ಕಂಗಳಲ್ಲಿ ಹೊಸ ಕನಸಿಗೆ ಕಣ್ಣು ಮೂಡುತ್ತಿದೆ

ಎನ್ ಸಂಧ್ಯಾರಾಣಿ

’This is the project I am working on…’, ಹೊಳೆಯುವ ಕಣ್ಣು, ಅವರಿಗೇ ವಿಶಿಷ್ಟವಾದ ಹಾವಭಾವ ಭರಿತ ಮಾತು, ವಿವರಿಸುತ್ತಿದ್ದ ಅವರ ಕೈ ಬೆರಳುಗಳಲ್ಲಿ, ದನಿಯಲ್ಲಿ ದಣಿವು ಕಾಣದ ಉತ್ಸಾಹ, ಹೌದು ಪಿ ಸಾಯಿನಾಥ್ ಬೆಂಗಳೂರಿಗೆ ಬಂದಿದ್ದರು. ಕಳೆದ ಜುಲೈನಲ್ಲಿ ದೇವನೂರು ಮಹಾದೇವ ಅವರೊಡನೆ ಸಿಕ್ಕಿದ್ದ ಅದೇ ಗಾಂಧಿ ಭವನದಲ್ಲಿ, ಅದೇ ಕಾಳಜಿ, ಕಳಕಳಿಯ ಪಿ ಸಾಯಿನಾಥ್. ತಮ್ಮ ಮುಂದಿನ ಒಂದು ಯೋಜನೆ ಬಗ್ಗೆ ಮಾತನಾಡ್ತಾ ಇದ್ದರು, ’ಒಂದು ಮಹತ್ವಾಕಾಂಕ್ಷಿ ಯೋಜನೆ’ ಎಂದರೆ ಏನನ್ನೂ ಹೇಳಿದಂತಾಗುವುದಿಲ್ಲ, ಆ ಪದ ಸವೆದು ಹೋಗಿದೆ, ಈ ಯೋಜನೆ ಹೊಸತು. ಹೌದು ಸಾಯಿನಾಥ್ ಕಂಗಳಲ್ಲಿ ಹೊಸ ಕನಸ್ಸಿಗೆ ಕಣ್ಣು ಮೂಡುತ್ತಿದೆ, ಯಾವುದೇ ಸರ್ಕಾರ ಅಥವಾ ಕಾರ್ಪೋರೇಟ್ ನ ಅನುದಾನ, ಆರ್ಥಿಕ ಸಂಪನ್ಮೂಲದ ಸಹಾಯದಿಂದ ಮಾತ್ರ ನಡೆಯಬಹುದು ಅನ್ನಿಸುವ ಯೋಜನೆ, ಇವ್ಯಾವುದೂ ಇಲ್ಲದೆ, ಕೇವಲ ತಮ್ಮ ಅಪರಿಮಿತ ಉತ್ಸಾಹ ಮತ್ತು ಅದೇ ಉತ್ಸಾಹದಿಂದ ಪಾಲ್ಗೊಳ್ಳುವ ಜನರ ಬಗೆಗಿನ ನಂಬಿಕೆಯೇ ಇದರ ಬಂಡವಾಳ.

ಇಲ್ಲಿದೆ ಆ ಕನಸು : ’ಪೀಪಲ್ಸ್ ಆರ್ಕೈವ್ ಆಫ಼್ ರೂರಲ್ ಇಂಡಿಯ’. ಪಿ ಸಾಯಿನಾಥ್ ತಮ್ಮ ಸುಮಾರು ೩೭ ವರ್ಷಗಳ ಪತ್ರಕರ್ತನ ಬದುಕಿನಲ್ಲಿ, ಅದರಲ್ಲೂ ಸುಮಾರು ೨೦ ವರ್ಷಗಳ ಗ್ರಾಮೀಣ ಪ್ರದೇಶಗಳ ಅಧ್ಯಯನದಲ್ಲಿ ನೋಡಿದ ಬದುಕು, ಬವಣೆ, ಆಶ್ಚರ್ಯ, ನೋವು, ಕಾರ್ಪಣ್ಯದ ಮಧ್ಯೆಯೂ ಇರುವ ಬದುಕಿನ ಘನತೆ … ಎಲ್ಲವನ್ನೂ ರಕ್ಷಿಸಿಡುವ, ಅದನ್ನು ಅಧ್ಯಯನ ಮಾಡುವವರ ಬಳಕೆಗೆ ಒದಗುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಾಗೆ ಮಾಡಿ ಅವನ್ನು ಭೌತಿಕವಾಗಿ ಸಂರಕ್ಷಿಸಿಡಬೇಕು ಅಂದರೆ ಅದಕ್ಕೆ ಎರಡು ಸಮಸ್ಯೆಗಳು, ಒಂದು ಅದಕ್ಕೆ ಬೇಕಾಗುವ ಸ್ಥಳವನ್ನು ಇರುವ ಸೀಮಿತ ಸಂಪನ್ಮೂಲಗಳಲ್ಲಿ ಹೇಗೆ ಪಡೆಯುವುದು? ಇನ್ನೊಂದು ಅದರ ಭೌತಿಕ ಮಿತಿ ಅಂದರೆ ಅದನ್ನು ಎಲ್ಲರಿಗೂ ತಲುಪುವಂತೆ ಇಡುವುದು ಹೇಗೆ? ಆಗ ಅವರಿಗೆ ಹೊಳೆದ ಪರಿಹಾರ ಅದನ್ನೆಲ್ಲಾ ಅಂತರ್ಜಾಲದಲ್ಲಿ ಸಂರಕ್ಷಿಸಿಡುವುದು! ಹೌದು ಅಂತರ್ಜಾಲದಲ್ಲಿ!! ಕಾಕತಾಳೀಯವಾಗಿ ಇಂದಿನ ದಿನಪತ್ರಿಕೆಯಲ್ಲಿ ಒಂದು ವರದಿ ಓದಿದ್ದೆ, ಭಾರತದಲ್ಲಿನ ಅಂತರ್ಜಾಲ ಬಳಕೆಯಲ್ಲಿ ಭಾಷೆಗಳ ಬಳಕೆ ಬಗೆಗಿನ ಅಧ್ಯಯನದ ವರದಿ ಅದು. ಅದರ ಪ್ರಕಾರ ಅಂತರ್ಜಾಲವನ್ನು ಇಂಗ್ಲಿಷ್ ಗಿಂತಾ ಹೆಚ್ಚಾಗಿ ಭಾರತದ ಭಾಷೆಗಳಲ್ಲಿ ಬಳಸಲಾಗಿದೆ! ಅಂದರೆ ಅರ್ಥ ಇಂದು ಇಂಟರ್ನೆಟ್ ಇಂಗ್ಲಿಶ್ ಭಾಷೆಯ ಬೇಲಿಯನ್ನು ದಾಟಿ ಭಾರತವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಸಾಯಿನಾಥ್ ಅವರ ಈ ಯೋಜನೆಗೆ ಹೆಚ್ಚಿನ ಮಹತ್ವ ಬರುತ್ತದೆ.
ಸಾಯಿನಾಥ್ ಅವರ ಇಷ್ಟು ವರ್ಷಗಳ ಶ್ರಮ, ಈ ವಿವರಗಳು. ಈ ಅಧ್ಯಯನ ಕೇವಲ ಅಕೆಡಮಿಕ್ ಓದಿಗಾಗಿ ಮೀಸಲಾಗಿರುವುದಿಲ್ಲ, ಅದು ಭಾರತದ ಎಲ್ಲರಿಗೂ ಎಲ್ಲಾ ಕ್ಷೇತ್ರಗಳಲ್ಲಿನವರಿಗೂ ಲಭ್ಯ. ಹೌದು, ಇದು ಭಾರತದ ಭಾಷೆಗಳಲ್ಲಿರುತ್ತದೆ, ಭಾರತದ ಯಾವುದೇ ಭಾಗದ ಜನರು ಇದಕ್ಕೆ ತಮ್ಮ ಭಾಷೆಯ ಅಂಗಿ ತೊಡಿಸಬಹುದು, ತಮ್ಮದಾಗಿಸಿಕೊಳ್ಳಬಹುದು. ಇದು ಸ್ತಬ್ಧ ಚಿತ್ರ, ಚಲನಚಿತ್ರ, ದೃಶ್ಯ – ಶ್ರಾವ್ಯ ಮಾಧ್ಯಮದಲ್ಲಿರುತ್ತದೆ. ಇಲ್ಲಿ ಭಾರತದ ಎಲ್ಲಾ ಪ್ರಾಂತ್ಯಗಳಿಗೆ ಸೇರಿದ ಜನರ ಕೆಲಸ, ಕಸುಬು, ಕಸುಬುಗಾರಿಕೆ, ಅದರ ವೈಶಿಷ್ಟ್ಯತೆ, ಅವರ ಕಷ್ಟ, ಅವರ ಕಲೆಗಳು, ಸಾಹಿತ್ಯ, ಸಂಗೀತ … ಹೀಗೆ ಅವರ ಬದುಕಿನ ಎಲ್ಲಾ ಮಗ್ಗುಲುಗಳ ಒಂದು ದಾಖಲಾತಿ ಇರುತ್ತದೆ. ಹಾಗೆ ಇರುವ ದಾಖಲಾತಿ ಗೂಗಲ್ ನಲ್ಲಿ ಸಿಗುತ್ತದೆಯಲ್ಲಾ ಅಂತ ನಿಮಗನ್ನಿಸಬಹುದು. ಆದರೆ ಇದುವರೆವಿಗೂ ನಮಗೆ ಸಿಗುವ ಎಲ್ಲಾ ಮಾಹಿತಿಗಳೂ ಹಲವಾರು ಫಿಲ್ಟರ್ ಗಳನ್ನು ದಾಟಿ ಬಂದಿರುತ್ತದೆ, ಆ ಕಾರ್ಯಕ್ರಮಕ್ಕೆ ಅನುದಾನ ಕೊಡುವವರಿಂದ ಹಿಡಿದು, ಅವರ ಮೌಲ್ಯಗಳು, ಕಾರ್ಯಕ್ರಮದ ನಿರ್ದೇಶಕ, ಸ್ಕ್ರಿಪ್ಟ್ ರೈಟರ್, ಛಾಯಾಗ್ರಾಹಕ, ಸಂಗೀತ ನಿರ್ದೇಶಕ…ಹೀಗೆ ಎಲ್ಲರ ದೃಷ್ಟಿಕೋನಕ್ಕೆ ತಕ್ಕಂತೆ ಕಥೆ ನಿರೂಪಿತವಾಗುತ್ತಾ ಹೋಗುತ್ತದೆ, ಆದರೆ ಇಲ್ಲಿ ಹಾಗಲ್ಲ. ಅದು ನೇರವಾಗಿ ಅವರ ಮತ್ತು ನೋಡುಗರ ನಡುವಿನ ಸಂವಾದ. ಇದೊಂದು ರಟ್ಟು ಹಾಕದ ಪುಸ್ತಕ, ಇದಕ್ಕೆ ಹಾಳೆಗಳನ್ನು ಸೇರಿಸುತ್ತಾ ಹೋಗಬಹುದು … ಪ್ರತಿ ಮನೆಯ ಕಿಟಕಿಂದಲೂ ಕಾಣುವ ಆಕಾಶ ಇದು..

ಹೀಗೆ ತಮ್ಮ ಕನಸಿನ ಕೂಸಿನ ಬಗ್ಗೆ ಸಾಯಿನಾಥ್ ಹೇಳುತ್ತಾ ಹೋದರು …. ಅದಕ್ಕೆ ಉದಾಹರಣೆಯಾಗಿ ತಮ್ಮ ತಂಡದವರು ಚಿತ್ರೀಕರಿಸಿದ ಕೆಲವು ಸಾಕ್ಷ್ಯಚಿತ್ರದ ತುಣುಕುಗಳನ್ನು ತೋರಿಸಿದರು :
 
ಮೊದಲನೆಯದು ಬುಧದೇವ್ ಕುಂಬಾರ್ ಅನ್ನುವ ಕುಂಬಾರನ ಕೆಲಸದ ಬಗ್ಗೆ, ಆತನ ಕೆಲಸದ ಕೌಶಲ್ಯ, ಆತನಿಗೆ ಆ ಕೆಲಸಕ್ಕೆ ಸಿಗುವ ಪ್ರತಿಫಲ (ತಿಂಗಳಿಗೆ ಸುಮಾರು ೩೦೦೦ ರೂ), ಅವನ ಕೆಲಸದಲ್ಲಿರುವ ಸವಾಲುಗಳು, ಖಾಲಿಯಾಗುತ್ತಿರುವ ಮಣ್ಣು, ಮಧ್ಯವರ್ತಿಗಳ ಕೈವಾಡ, ಅವನ ಕೈಲಿ ತಯಾರಾದ ಮೂರ್ತಿಗಳು ಕಡೆಯಲ್ಲಿ ಮಾರಾಟವಾಗುವಾಗ ಸಿಗುವ ಹಣದ ಅಪಾರ ಮೊತ್ತ ಗೊತ್ತಿದ್ದರೂ ಆ ಮಾರುಕಟ್ಟೆಯನ್ನು ಪ್ರವೇಶಿಸಲಾಗದ ಅಸಹಾಯಕತೆ… ಎಲ್ಲವನ್ನೂ ಆತ ತನ್ನ ತಣ್ಣಗಿನ ದನಿಯಲ್ಲಿ ವಿವರಿಸುತ್ತಾ ಹೋದ … ನಿಜ ಹೇಳುತ್ತೇನೆ, ಅವನ ಆ ತಣ್ಣಗಿನ ದನಿ ಹೇಳಿದ ಸತ್ಯವನ್ನು ಯಾವ ಸ್ಕ್ರಿಪ್ಟ್ ರೈಟರ್ ನ ಸ್ಕ್ರಿಪ್ಟ್ ಸಹ ಹೇಳುವುದಿಲ್ಲಾ…. ಅದಕ್ಕೆ ಸಂವಾದಿಯಾಗಿ ಬಂದ ಕಥೆ ಮುಂಬೈನ ಧಾರಾವಿಯಲ್ಲಿ ನೆಲಸಿರುವ ಕಚ್ ನ ಮುಸ್ಲಿಂ ಸಮುದಾಯದ ಕುಂಬಾರರ ಕಥೆ. ಇಲ್ಲಿ ಅವರು ಹಳೆಯ ಕಾಲದ ಕೈಗಳಿಂದ ತಿರುಗಿಸುವ ಚಕ್ರ ಬಳಸುವ ಬದಲು ವಿದ್ಯುಚ್ಛಾಲಿತ ಚಕ್ರ ಬಳಸುತ್ತಾರೆ. ಇದೊಂದು ಅನ್ವೇಷಣೆ ಅವರ ಕೆಲಸದ ರೀತಿಯನ್ನೇ ಬದಲಿಸಿ ಹಾಕಿದೆ, ಅವರ ಕೆಲಸಕ್ಕೊಂದು ವೇಗ ಕೊಟ್ಟಿದೆ, ಆ ಮೂಲಕ ಅವರ ವರಮಾನವನ್ನು ಹೆಚ್ಚಿಸಿದೆ. ಈ ತುಲನಾತ್ಮಕ ಅಧ್ಯಯನ ಕೇವಲ ಅಧ್ಯಯನವಾಗಿಯೇ ಅಲ್ಲ, ಕಸುಬಿನ ಕಸುಬುದಾರಿಕೆಯನ್ನು ತಿಳಿಸಿಕೊಡುವುದರಲ್ಲಿ ಸಹ ನೆರವಾಗುತ್ತದೆ ಅನ್ನಿಸಿತು.
ಹಾಗೆ ಕೇರಳದ ಕಲರಿಪಟ್ಟು ಕಲೆಯ ಬಗ್ಗೆ ಒಂದು ಚಿತ್ರ…. ನೋಡುತ್ತಾ ನೋಡುತ್ತಾ ನಾವೂ ತನ್ಮಯರಾಗುತ್ತಾ ಹೋದೆವು… ಈ ಚಿತ್ರಗಳನ್ನು ಮುಖ್ಯವಾಗಿ ಹವ್ಯಾಸಿ, ಆಸಕ್ತ ಮನಸ್ಸುಗಳು ಚಿತ್ರೀಕರಿಸಿವೆ. ತೆಲುಗಿನ ಶ್ರೀ ಶ್ರೀ ಹೇಳುವ ಹಾಗೆ ’ನಾನು ಕೂಡ, ಪ್ರಪಂಚಾಗ್ನಿಗೆ ಸಮಿಧೆಯೊಂದನು ಧಾರೆ ಎರೆದೆನು’ ಅನ್ನುವ ಕೆಲಸ. ’ಇದಕ್ಕೆ ಯಾರೂ ಸಹ ಕೈಜೋಡಿಸಬಹುದು, ನಿಮ್ಮಲ್ಲಿರುವ ಮೊಬೈಲ್ ಫೋನ್ ಗಳ ಚಿತ್ರ, ರಿಕಾರ್ಡಿಂಗ್ ಸಹ ಆದೀತು’. ಸಾಯಿನಾಥ್ ಹೇಳುತ್ತಾ ಹೋದರು. ’ಹಾ ಕರ್ನಾಟಕದಿಂದ ಇದುವರೆಗೂ ನಮಗೆ ಒಂದು ಚಿತ್ರವೂ ಸಿಕ್ಕಿಲ್ಲ, ಇಲ್ಲಿನ ಸಮಸ್ಯೆಗಳ, ಕಲೆಗಳ, ದೇಸಿತನದ ಪರಿಚಯ ನಮ್ಮಲ್ಲಿನ್ನು ದಾಖಲೆ ಆಗಿಲ್ಲ’ ಸಾಯಿನಾಥ್ ಒಂದು ಛಾಲೆಂಜ್ ಸಹ ಎಸೆದರು! ಈಗ ಚಂಡು ನಮ್ಮ ಅಂಗಳದಲ್ಲಿ!
ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ನನ್ನ ಕಣ್ಣಲ್ಲಿ ಬುಧದೇವ್ ಕುಂಬಾರ್ ನ ಮೂರು – ನಾಲ್ಕು ವರ್ಷದ ಮಗುವಿನದೇ ಚಿತ್ರ. ಆ ಮಗು ತನ್ನಷ್ಟೇ ಉದ್ದದ, ತನ್ನ ಗಾತ್ರದ ಪೊರಕೆ ಹಿಡಿದು, ಮಣ್ಣನ್ನು ಗುಡಿಸಿ ಒಟ್ಟು ಮಾಡುತ್ತಾ, ಅದು ವ್ಯರ್ಥವಾಗದಂತೆ ಒಂದು ಮಡಿಕೆಯಲ್ಲಿ ಸೇರಿಸುತ್ತಾ ಇರುತ್ತದೆ. ಹೌದು ಮಣ್ಣು ಅವರಿಗೆ ಜೀವನಾಧಾರ, ಅವರಿಗಿರುವ ಜಮೀನಿನಲ್ಲಿ ಜೇಡಿ ಮಣ್ಣು ಮುಗಿಯುತ್ತಾ ಬಂದಿದೆ, ಮಣ್ಣು ಮುಗಿದರೆ ಅವರಿಗೆ ಬದುಕಿಲ್ಲ, ಆ ಮಗು ತನ್ನ ಪುಟ್ಟ ಪುಟ್ಟ ಕೈಗಳಲ್ಲಿ ಮಣ್ಣನ್ನು ಎತ್ತಿಕೊಂಡು ಕಾಪಿಡುತ್ತಾ ಹೋಗುತ್ತದೆ ….. ಅರೆ ಹೌದಲ್ಲಾ ನಾವೂ ಆ ಕೆಲಸ ಮಾಡಬೇಕಲ್ಲ … ನಮ್ಮ ನಮ್ಮ ಕೈಗಳಲ್ಲಿ ಸಂರಕ್ಷಿಸಿಡಬಹುದಾದ, ಮಾಹಿತಿ ಎನ್ನುವ ಜೀವದಾಯಿನಿಯನ್ನು ಸಂರಕ್ಷಿಸಿಡುತ್ತಾಹೋಗಬೇಕು, ಅಲ್ಲವಾ?

‍ಲೇಖಕರು G

January 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. ಆಸು ಹೆಗ್ಡೆ

    ಸಂಧ್ಯಾರಾಣಿಯವರೇ,
    ಸಾಯಿನಾಥರ ಧ್ಯೇಯವನ್ನು ಓದುಗರ ಮನಕ್ಕೆ ತಲುಪಿಸುವ ತಮ್ಮ ಈ ಯತ್ನ ಸಾರ್ಥಕವಾಗಿದೆ.
    ತಮ್ಮ ಕೊನೆಯ “ಪ್ಯಾರಾ” ಇಷ್ಟವಾಯ್ತು.
    ನಿನ್ನೆ ಆ ಮಗುವನ್ನು ನನ್ನ ಕಣ್ಣುಗಳೂ ಕಂಡಿವೆ.
    ಆದರೆ, ಅದು ಮಾಡಿರದ ಪ್ರಭಾವ ಇಂದು ತಮ್ಮ ಈ ಮಾತುಗಳು ಮಾಡಿವೆ.

    ಪ್ರತಿಕ್ರಿಯೆ
  2. ಉಷಾಕಟ್ಟೆಮನೆ

    ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ನಿಮ್ಮ ಬರಹದಲ್ಲಿ ಅದನ್ನು ತುಂಬಿಸಿಕೊಂಡೆ.

    ಪ್ರತಿಕ್ರಿಯೆ
  3. M.S.Prasad

    ಬಹಳ ಸೊಗಸಾದ ಲೇಖನ, ಬಂದಷ್ಟೇ ಖುಶಿ ಆಯ್ತು

    ಪ್ರತಿಕ್ರಿಯೆ
  4. D.Ravivarma

    ತೆಲುಗಿನ ಶ್ರೀ ಶ್ರೀ ಹೇಳುವ ಹಾಗೆ ’ನಾನು ಕೂಡ, ಪ್ರಪಂಚಾಗ್ನಿಗೆ ಸಮಿಧೆಯೊಂದನು ಧಾರೆ ಎರೆದೆನು’ ಅನ್ನುವ ಕೆಲಸ. ’ಇದಕ್ಕೆ ಯಾರೂ ಸಹ ಕೈಜೋಡಿಸಬಹುದು, ನಿಮ್ಮಲ್ಲಿರುವ ಮೊಬೈಲ್ ಫೋನ್ ಗಳ ಚಿತ್ರ, ರಿಕಾರ್ಡಿಂಗ್ ಸಹ ಆದೀತು’. ಸಾಯಿನಾಥ್ ಹೇಳುತ್ತಾ ಹೋದರು. ’ಹಾ ಕರ್ನಾಟಕದಿಂದ ಇದುವರೆಗೂ ನಮಗೆ ಒಂದು ಚಿತ್ರವೂ ಸಿಕ್ಕಿಲ್ಲ, ಇಲ್ಲಿನ ಸಮಸ್ಯೆಗಳ, ಕಲೆಗಳ, ದೇಸಿತನದ ಪರಿಚಯ ನಮ್ಮಲ್ಲಿನ್ನು ದಾಖಲೆ ಆಗಿಲ್ಲ’ ಸಾಯಿನಾಥ್ ಒಂದು ಛಾಲೆಂಜ್ ಸಹ ಎಸೆದರು! ಈಗ ಚಂಡು ನಮ್ಮ ಅಂಗಳದಲ್ಲಿ!
    excellent…sayinaath avara baddhate,samaajika chintane,jeevanapriiti,avara olamanassina hudukaatakke saavira saavira namaskaara…alilu raamayanadaalli alilugalu,usugu ettikottu setuve kattuvallitodaguvante..naavu illi namma karnaatakada kale,badukinabagge ondistu vivara niididare adu aa mahachintakarige anukulavaagutte….
    Ravivarma hospet.

    ಪ್ರತಿಕ್ರಿಯೆ
  5. Dr.Kashyap

    ಮಣ್ಣುಗೂಡಿತು ಎನ್ನುವುದರ ನುಡಿಗಟ್ಟು ಅರ್ಥ ಕಳೆದುಕೊಂಡಂತಾಯ್ತು. . . hats off

    ಪ್ರತಿಕ್ರಿಯೆ
  6. ಇಶ್ತಿಯಾಖ್ ಹಸನ್

    ನಿನ್ನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗಂತೂ ಈ ಲೇಖನವನ್ನೋದಿ ಬೋನಸ್ ಸಿಕ್ಕಿರುವಂತಹ ಅನುಭವ ಹಾಗೂ ಖುಶಿ. ಲೇಖಕರಿಗೆ ಬಹಳ ಧನ್ಯವಾದಗಳು.

    ಪ್ರತಿಕ್ರಿಯೆ
  7. chalam

    ಪತ್ರಿಕೋದ್ಯಮದಲ್ಲಿ ನಡೆಯುತ್ತಿರುವ ನಾವು ಖಂಡಿತವಾಗಿ ಸಾಯಿನಾಥ್ ಅವರನ್ನು ಅನುಸರಿಸಬೇಕು.ಅವರ ಚಿಂತನೆ ರೋಮಾಂಚನವನ್ನುಂಟು ಮಾಡಿದೆಯಲ್ಲದೇ ಈವರಗೆ ಮಾಡಿದ ಪತ್ರೊಕೋದ್ಯಮದ ಬಗ್ಗೆ ಸಂಶಯದಿಂದ ನೋಡುವಂತೆ ಮಾಡಿದೆ.ಧನ್ಯವಾದಗಳು ಸಂದ್ಯಾರಾಣಿಯವರೇ…

    ಪ್ರತಿಕ್ರಿಯೆ
  8. Pushparaj Chauta

    ಮತ್ತೊಮ್ಮೆ ಕಾರ್ಯಕ್ರಮ ನೋಡಿದಂತಾಯ್ತು.
    ನಮ್ಮ ಕನ್ನಡ ಮಣ್ಣಿನಿಂದಲೂ ಸಾಯಿನಾಥರ ‘ಆರ್ಕೈವ್’ಗೆ ಕೊಡುಗೆಗಳು ದೊರೆಯಲಿ. ಈ ಕಾಪಿಡುವ ಕಾರ್ಯ ಯಶಸ್ವಿಯಾಗಲಿ.
    ಲೇಖನಾವರದಿಗೆ ವಂದನೆಗಳು ಸಂಧ್ಯಾರವರೇ…

    ಪ್ರತಿಕ್ರಿಯೆ
  9. Sandhya

    ಲೇಖನ ಓದಿದ, ಪ್ರತಿಕ್ರಯಿಸಿದ, ಹಂಚಿಕೊಂಡ ಎಲ್ಲರಿಗೂ ನನ್ನ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: